ಅವರ್ಣನೀಯ ದಿವ್ಯ ಸತ್ಸಂಗ: ಯುವ ಸಾಧಕ ಸಂಗಮ ಸೆಪ್ಟೆಂಬರ್ 2025

22 ನವೆಂಬರ್‌, 2025

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್ಎಸ್) ಸೆಪ್ಟೆಂಬರ್ 10–14, 2025 ರವರೆಗೆ ವೈಎಸ್ಎಸ್ ರಾಂಚಿ ಆಶ್ರಮದಲ್ಲಿ ತನ್ನ ಮೊದಲನೇ ಯುವ ಸಾಧಕ ಸಂಗಮವನ್ನು ಆಯೋಜಿಸಿತ್ತು. 23–35 ವಯಸ್ಸಿನ 200 ಕ್ಕೂ ಹೆಚ್ಚು ಯುವ ಸಾಧಕರು ಐದು ದಿನಗಳ ಧ್ಯಾನ, ಕಾರ್ಯಾಗಾರಗಳು, ಸೇವೆ ಮತ್ತು ಸತ್ಸಂಗದಲ್ಲಿ ಪಾಲ್ಗೊಂಡು, ಭಗವಂತ ಮತ್ತು ಗುರುಗಳೊಂದಿಗೆ ತಮ್ಮ ಅನುಸಂಧಾನವನ್ನು ಗಾಢವಾಗಿಸಿಕೊಂಡರು.

ಈ ಸಂಗಮವು ಅತ್ಯಂತ ತೃಪ್ತಿದಾಯಕ ಮತ್ತು ಸಮೃದ್ಧಿದಾಯಕ ಕಾರ್ಯಕ್ರಮವಾಗಿತ್ತು. ಭಗವಂತ ಮತ್ತು ಗುರುಗಳ ಅಮೂಲ್ಯ ಸತ್ಸಂಗದಲ್ಲಿ ಇರಲು ನಾವು ಭಾಗ್ಯಶಾಲಿಗಳಾಗಿದ್ದೆವು. ಗುರುದೇವರ ದೈವಿಕ ಕುಟುಂಬದ ಭಾಗವಾಗಿರುವುದು ನಮ್ಮೆಲ್ಲರನ್ನೂ ಒಟ್ಟುಗೂಡಿಸಿ, ತತ್‌ಕ್ಷಣದ ಮತ್ತು ಶಾಶ್ವತ ಸಂಪರ್ಕದೆಡೆಗೆ ನಮ್ಮನ್ನು ತಂದಿತು.

— ಎಸ್‌.ಎಮ್‌., ಪಶ್ಚಿಮ ಬಂಗಾಳ

ತರುಣ ಸಾಧಕರು ಯೋಗದಾ ಸತ್ಸಂಗ ಸೊಸೈಟಿಯ ರಾಂಚಿ ಆಶ್ರಮದಲ್ಲಿ ಗುರುಗಳ ಪ್ರೀತಿಯಲ್ಲಿ ಒಂದೇ ದಿವ್ಯ ಕುಟುಂಬವಾಗಿ ಒಟ್ಟುಗೂಡಿದರು.

ಸಂಗಮದ ವಾತಾವರಣ ನಿರ್ಮಾಣ

ಯುವ ಸಾಧಕರು ಆಶ್ರಮಕ್ಕೆ ಆಗಮಿಸಿದ ನಂತರ, ಸಂಗಮವು ವೈಯಕ್ತಿಕ ಪರಿಚಯ ಕಾರ್ಯಕ್ರಮ ಮತ್ತು ಸತ್ಸಂಗದೊಂದಿಗೆ ಪ್ರಾರಂಭವಾಯಿತು, ಇದು ಅವರ ಹೃದಯಗಳನ್ನು ತೆರೆಯಲು ಮತ್ತು ಮನಸ್ಸುಗಳನ್ನು ಕೇಂದ್ರೀಕರಿಸಲು ಪ್ರೇರೇಪಿಸಿತು. ಪರಮಹಂಸ ಯೋಗಾನಂದರ ಉಪಸ್ಥಿತಿಯ ನೆನಪುಗಳು ಮತ್ತು ಸ್ಪಂದನಗಳಿಂದ ತುಂಬಿದ್ದ ರಾಂಚಿ ಆಶ್ರಮದ ಮಾರ್ಗದರ್ಶಿ ಪ್ರವಾಸವು, ಭಕ್ತಿ ಮತ್ತು ಸಹೋದರತ್ವದ ವಾತಾವರಣವನ್ನು ಸೃಷ್ಟಿಸಿ, ತರುಣ ಸಾಧಕರನ್ನು ತಕ್ಷಣವೇ ಗುರುಗಳ ದಿವ್ಯ ಕುಟುಂಬಕ್ಕೆ ಸೆಳೆಯಿತು.

ರಾಂಚಿಯ ಯುವ ಸಾಧಕರ ಸಂಗಮವು ಅನಿರ್ವಚನೀಯ ಅನುಭವವನ್ನು ನೀಡಿದುದರ ಜೊತೆಗೆ — ನನ್ನ ಜೀವನದ ಅತ್ಯಂತ ಧನ್ಯತೆಯ ಕ್ಷಣಗಳಲ್ಲಿ ಒಂದಾಗಿತ್ತು. ಇತರ ಸಂಗಮಗಳಲ್ಲಿ ನಾವು ಗುರೂಜಿಗಳ ಬೋಧನೆಗಳನ್ನು ಅಭ್ಯಾಸ ಮಾಡಲು ಪ್ರೇರೇಪಿತರಾಗುತ್ತೇವೆ, ಆದರೆ ಈ ಬಾರಿ ನಾವು ಅವುಗಳನ್ನು ನಿಜವಾಗಿಯೂ ಅನುಸರಿಸಿದೆವು. ನಾನು ಗುರೂಜಿಗಳ ಉಪಸ್ಥಿತಿಯನ್ನು ಅತ್ಯಂತ ಪ್ರಬಲವಾಗಿ ಅನುಭವಿಸಿದೆ, ಮತ್ತು ಕೊನೆಯಲ್ಲಿ, ಪ್ರತಿಯೊಬ್ಬರ ಅಂತರಾಳದಲ್ಲಿ ಆಳವಾದ ಬದಲಾವಣೆ ಉಂಟಾಗಿತ್ತು…

— ಎ. ಎ., ಉತ್ತರ ಪ್ರದೇಶ

ಆರಂಭಿಕ ಸತ್ಸಂಗವು ಭಾಗವಹಿಸುವವರನ್ನು ಗೊಂದಲಗಳನ್ನು ಬದಿಗಿಟ್ಟು, ಮುಕ್ತ ಹೃದಯದಿಂದ ಸಂಗಮವನ್ನು ಪ್ರವೇಶಿಸಲು ಆಹ್ವಾನಿಸಿತು.
ಸಂಗಮವು ಪ್ರಾರಂಭವಾದಾಗ, ಸಭಾಂಗಣದಲ್ಲಿ ಭಕ್ತಿಪೂರ್ವಕ ವಾತಾವರಣ ತುಂಬಿತ್ತು.

ಸಮತೋಲಿತ ದೈನಂದಿನ ದಿನಚರಿ

ಎಚ್ಚರಿಕೆಯಿಂದ ಸಿದ್ಧಪಡಿಸಿದ ಸಮತೋಲಿತ ವೇಳಾಪಟ್ಟಿಯು ಸಂಗಮದ ಬೆನ್ನೆಲುಬಾಗಿತ್ತು. ಸಂಗಮವು ಆಂತರಿಕ ನಿಶ್ಚಲತೆಯನ್ನು ಬಾಹ್ಯ ಚಟುವಟಿಕೆಯೊಂದಿಗೆ ಮೇಳೈಸುವ ಒಂದು ಲಯದಲ್ಲಿ ಸಾಗಿತು. ಪ್ರತಿ ದಿನವೂ ಚೈತನ್ಯದಾಯಕ, ಧ್ಯಾನ, ಅಧ್ಯಯನ, ಸತ್ಸಂಗ, ಮತ್ತು ವಿರಾಮದ ಚಿಂತನಶೀಲ ಸಮತೋಲನವನ್ನು ನೀಡಿತು. ರಾತ್ರಿ 10 ಗಂಟೆಯಿಂದ ಬೆಳಗಿನ 8 ಗಂಟೆಯವರೆಗಿನ ಮೌನವು ಎಲ್ಲರನ್ನೂ ಮತ್ತೊಮ್ಮೆ ಅಂತರ್ಮುಖಿಯಾಗಿಸಿತು.

ಕಾರ್ಯಕ್ರಮವನ್ನು ಆಧ್ಯಾತ್ಮಿಕ ಗಹನತೆಯನ್ನು ಪ್ರಾಯೋಗಿಕ ಜ್ಞಾನ ಮತ್ತು ಆನಂದಮಯ ಸತ್ಸಂಗದೊಂದಿಗೆ ಮೇಳೈಸುವಂತೆ ಸುಂದರವಾಗಿ ವಿನ್ಯಾಸಗೊಳಿಸಲಾಗಿತ್ತು. ಪ್ರತಿ ಅಧಿವೇಶನದಲ್ಲಿ ನಡೆದ ಧ್ಯಾನ ಮತ್ತು ಸಂವಾದವು ಆಂತರಿಕ ಸ್ಪಷ್ಟತೆ ಮತ್ತು ಶಾಂತಿಯೆಡೆಗಿನ ಒಂದು ಹೆಜ್ಜೆಯಂತೆ ಭಾಸವಾಯಿತು. ಅದು ಪರಿವರ್ತಕವೂ ಮತ್ತು ಉನ್ನತಿಗೇರಿಸುವಂತಹದ್ದೂ ಆಗಿತ್ತು…

— ಡಿ. ಆರ್., ಉತ್ತರ ಪ್ರದೇಶ

ಧ್ಯಾನಕ್ಕೆ ದೇಹ ಮತ್ತು ಮನಸ್ಸನ್ನು ಜಾಗೃತಗೊಳಿಸುವ ಶಕ್ತಿ ಸಂಚಲನ ವ್ಯಾಯಾಮಗಳೊಂದಿಗೆ ಸಾಧಕರು ತಮ್ಮ ಪ್ರತಿದಿನವನ್ನು ಪ್ರಾರಂಭಿಸಿದರು.
ಸಾಮೂಹಿಕ ಧ್ಯಾನಗಳು ಆಂತರಿಕ ಸ್ತಬ್ಧತೆಯ ಸಾಮೂಹಿಕ ಲಯವನ್ನು ಮೂಡಿಸಿದವು.
ಮೌನ ಮತ್ತು ಸ್ತಬ್ಧತೆಯಲ್ಲಿ, ಯುವ ಅನ್ವೇಷಕರು ದೇವರು ಮತ್ತು ಗುರುಗಳೊಂದಿಗೆ ತಮ್ಮನ್ನು ತಾವು ಒಂದಾಗಿಸಿಕೊಂಡರು.
ಸಣ್ಣ ಸಣ್ಣ ಅಧ್ಯಯನ ಗುಂಪುಗಳು ವೈಎಸ್ಎಸ್ ಪಾಠಗಳ ಕುರಿತು ಮನನ ಮತ್ತು ಅವುಗಳ ದೈನಂದಿನ ಅನ್ವಯವನ್ನು ಪ್ರೋತ್ಸಾಹಿಸಿದವು.
ಒಟ್ಟಾದ ಮೌನದಲ್ಲಿ, ಯುವ ಅನ್ವೇಷಕರು ಅಧ್ಯಯನದ ನಂತರ ಮನನ ಮಾಡುತ್ತಾ, ಗುರೂಜಿಯವರ ಮಾತುಗಳು ಮನಸ್ಸಿನಲ್ಲಿ ಆಳವಾಗಿ ಇಳಿಯಲು ಬಿಟ್ಟರು.

ದೇಶದ ಮೂಲೆ ಮೂಲೆಯಿಂದ ಬಂದ ಸಮಾನ ಮನಸ್ಕ ಅನ್ವೇಷಕರು ಅದೇ ದಿವ್ಯ ಉದ್ದೇಶದಿಂದ ಒಂದಾದರು. ಈ ಒಡನಾಟವು ಹೃದಯಸ್ಪರ್ಶಿ ಹಾಗೂ ಸ್ಫೂರ್ತಿದಾಯಕವಾಗಿತ್ತು. ಸಂಜೆಯ ಕ್ರೀಡೆಗಳು ನಮ್ಮೆಲ್ಲರನ್ನು ತ್ವರಿತವಾಗಿ ಸ್ನೇಹಿತರನ್ನಾಗಿಸಿ, ಸಾಮಾನ್ಯವಾಗಿ ಸ್ನೇಹವು ರೂಪುಗೊಳ್ಳಲು ಹೆಚ್ಚು ಸಮಯ ಬೇಕಾಗಬಹುದಾಗಿದ್ದ ಬಾಂಧವ್ಯಗಳನ್ನು ಬೆಸೆಯಿತು. ಗುಂಪುಗಳ ಹಾಗೂ ಗುಂಪಿನ ನಾಯಕರ ಪರಿಕಲ್ಪನೆಯು ವಿಶೇಷವಾಗಿ ಅರ್ಥಪೂರ್ಣವಾಗಿತ್ತು, ಏಕೆಂದರೆ ಇದು ಈ ಪವಿತ್ರ ಪಥದಲ್ಲಿ ಒಬ್ಬರಿಗೊಬ್ಬರು ಆಲಿಸಲು, ಹಂಚಿಕೊಳ್ಳಲು ಮತ್ತು ಪರಸ್ಪರ ಕಲಿಯಲು ನಮಗೆ ಅವಕಾಶವನ್ನು ನೀಡಿತು.

— ಎಸ್. ಆರ್., ಆಂಧ್ರಪ್ರದೇಶ

ಸಂಜೆ ಮನರಂಜನೆಯು ಆತ್ಮೀಯತೆ ಮತ್ತು ಒಗ್ಗಟ್ಟಿನ ಭಾವವನ್ನು ಮೂಡಿಸಿತು.
ಕೆಲವರು ಆಟವಾಡಿದರೆ, ಮತ್ತೆ ಕೆಲವರು ಯೋಗದ ಮೂಲಕ ಅಂತರ್ಮುಖರಾಗಿ, ದೇಹ ಮತ್ತು ಮನಸ್ಸನ್ನು ಸಮರಸಗೊಳಿಸಿಕೊಂಡರು.

ಬದುಕುವುದು-ಹೇಗೆ ಕಾರ್ಯಾಗಾರಗಳು

ಸಂವಾದಾತ್ಮಕ ಕಾರ್ಯಾಗಾರಗಳು ಆಧುನಿಕ ಜೀವನದ ನಿಜವಾದ ಸವಾಲುಗಳನ್ನು ಸಂಭೋದಿಸಿ, ಯುವ ಅನ್ವೇಷಕರಿಗೆ ಗುರುದೇವರ ಜ್ಞಾನವನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲು ಮಾರ್ಗದರ್ಶನ ನೀಡಿದವು. ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಸಮತೋಲಿತ ಜೀವನವನ್ನು ನಡೆಸುವುದು ಕುರಿತ ಕಾರ್ಯಾಗಾರ ಅಧಿವೇಶನಗಳು, ದೇವರಲ್ಲಿ ನೆಲೆಗೊಂಡಿರುವಾಗ ಜೀವನದ ಆದ್ಯತೆಗಳು, ಸವಾಲುಗಳು ಮತ್ತು ತಿರುವುಗಳನ್ನು ನಿಭಾಯಿಸಲು ಸ್ಪಷ್ಟತೆ ಮತ್ತು ಆತ್ಮವಿಶ್ವಾಸವನ್ನು ನೀಡಿದವು.

ಆ ಸಂಗಮವು ನಿಜವಾಗಿಯೂ ಮಂತ್ರಮುಗ್ಧಗೊಳಿಸುವಂತಿತ್ತು. ಕಾರ್ಯಾಗಾರವು ವಯೋಮಾನವನ್ನು ಯೋಚನಾಬದ್ಧವಾಗಿ ಪರಿಗಣಿಸಿತ್ತು. ಸಮೃದ್ಧ ಉಪಮೆಗಳು ಹಾಗೂ ಪ್ರಾಯೋಗಿಕ ಸಲಹೆಗಳ ಮೂಲಕ ಬೋಧಿಸಿದ ತಂತ್ರಗಳು ಮತ್ತು ಒಳಗೊಂಡ ವಿಷಯಗಳು ಸಂಪೂರ್ಣ ಅನುಭವವನ್ನು ಅತ್ಯಂತ ಆಕರ್ಷಕವಾಗಿಯೂ ಮತ್ತು ಪ್ರತಿಯೊಬ್ಬರಿಗೂ ಅನ್ವಯವಾಗುವಂತೆಯೂ ಇತ್ತು.

— ಎಸ್. ಎಂ., ಮಹಾರಾಷ್ಟ್ರ

ಕಾರ್ಯಾಗಾರಗಳು ಗುರುಗಳ ವಿವೇಕವನ್ನು ಅನ್ವಯಿಸುವಲ್ಲಿ ಮುಕ್ತ ಸಂವಾದ ಮತ್ತು ಸಮಾನಸ್ಕರ ಕಲಿಕೆಯನ್ನು ಪ್ರೋತ್ಸಾಹಿಸಿದವು.

ಉಪಗುಂಪುಗಳು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಗುರುಗಳ ಬೋಧನೆಗಳನ್ನು ಪ್ರಾಯೋಗಿಕವಾಗಿ ಅನ್ವಯಿಸಲು ಅವಕಾಶ ಕಲ್ಪಿಸಿದವು.

ವೈಎಸ್‌ಎಸ್‌ ಸಂನ್ಯಾಸಿಯೊಬ್ಬರು ನಡೆಸಿದ ʼಬದುಕುವುದು ಹೇಗೆʼ ಎಂಬ ಕಾರ್ಯಾಗಾರವು ಸಮತೋಲಿತ ಜೀವನವನ್ನು ನಡೆಸುವ ಕುರಿತು ಸ್ಪಷ್ಟತೆಯನ್ನು ನೀಡಿತು.
ಪ್ರಾಯೋಗಿಕ ಅಭ್ಯಾಸಗಳು ಮತ್ತು ಅಭ್ಯಾಸ ಪತ್ರಿಕೆಗಳು ಭಾಗವಹಿಸುವವರಿಗೆ ತಮ್ಮ ಆಯ್ಕೆಗಳ ಬಗ್ಗೆ ಮತ್ತು ಸಮತೋಲಿತ ಜೀವನದ ಕುರಿತು ಚಿಂತಿಸಲು ನೆರವಾಯಿತು.

ಸಾಧನೆಯ ಗಾಢವಾಗಿಸುವಿಕೆ

ಸಂಗಮವು ಚೈತನ್ಯದಾಯಕ ವ್ಯಾಯಾಮಗಳು, ಹಾಂಗ್-ಸಾ ಮತ್ತು ಓಂ ತಂತ್ರಗಳ ಕುರಿತು ವಿಶೇಷ ಪುನರ್ಮನನ ತರಗತಿಗಳ ಮೂಲಕ ಆಧ್ಯಾತ್ಮಿಕ ಸಾಧನೆಯ ಮೂಲಭೂತ ಅಂಶಗಳನ್ನು ಪುನರ್‌ಪರಿಶೀಲಿಸಲು ಅವಕಾಶವನ್ನು ಒದಗಿಸಿತು. ಕ್ರಿಯಾಬಾನ್‌ಗಳಿಗಾಗಿ ಕ್ರಿಯಾ ಯೋಗ ತಂತ್ರದ ಕುರಿತು ಪುನರ್ಮನನ ತರಗತಿಯನ್ನು ಸಹ ನೀಡಲಾಯಿತು, ಜೊತೆಗೆ ಕ್ರಿಯಾಬಾನ್‌ಗಳಲ್ಲದವರಿಗಾಗಿ ವಿಶೇಷ ಸತ್ಸಂಗವನ್ನೂ ಏರ್ಪಡಿಸಲಾಗಿತ್ತು. ಈ ಅವಧಿಗಳು ಯುವ ಅನ್ವೇಷಕರಿಗೆ ತಮ್ಮ ಅಭ್ಯಾಸವನ್ನು ಉತ್ತಮಪಡಿಸಲು, ಏಕಾಗ್ರತೆಯನ್ನು ಬಲಪಡಿಸಲು ಮತ್ತು ತಮ್ಮ ಧ್ಯಾನಾನುಭವವನ್ನು ಗಾಢವಾಗಿಸಲು ಸಹಾಯ ಮಾಡಿದವು. ಇದಲ್ಲದೆ, ವೈಎಸ್‌ಎಸ್‌ ಸಂನ್ಯಾಸಿಗಳೊಂದಿಗೆ ನಡೆಸಿದ ವೈಯಕ್ತಿಕ ಸಮಾಲೋಚನೆಯು ಸಾಧನಾ ಮಾರ್ಗದಲ್ಲಿ ಬೇಕಾದ ವೈಯಕ್ತಿಕ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಆಶ್ವಾಸನೆಯನ್ನು ಒದಗಿಸಿತು.

ನಾನು ಪ್ರತಿಯೊಂದು ಅಧಿವೇಶನವನ್ನೂ ನಿಜವಾಗಿಯೂ ಆನಂದಿಸಿದೆ. ನನಗೆ, ಸ್ವಾಮೀಜಿಗಳು ಮತ್ತು ಬ್ರಹ್ಮಚಾರಿಗಳನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದೇ ಪ್ರಮುಖಾಂಶವಾಗಿತ್ತು. ಅವರು ಅತ್ಯಂತ ಪ್ರೀತಿ ಮತ್ತು ಕರುಣೆಯಿಂದ ಆಲಿಸಿ, ಬೇರೆಲ್ಲಿಯೂ ಕಾಣಲಾಗದ ಜ್ಞಾನದ ಮುತ್ತುಗಳನ್ನು ನೀಡುತ್ತಾರೆ. ಅವರ ಸನ್ನಿಧಿಯಲ್ಲಿರುವುದರಷ್ಟರಿಂದಲೇ ನನ್ನಲ್ಲಿ ದೈವಿಕ ಪ್ರೇಮವನ್ನು ತುಂಬಿಸಿತು…

— ಪಿ.ಕೆ., ಮಹಾರಾಷ್ಟ್ರ

ಮಾರ್ಗದರ್ಶಿತ ಪುನರವಲೋಕನ ತರಗತಿಗಳು, ಅಭ್ಯರ್ಥಿಗಳಿಗೆ ಚೈತನ್ಯದಾಯಕ ವ್ಯಾಯಾಮಗಳನ್ನು ಸರಿಯಾದ ತಂತ್ರದೊಂದಿಗೆ ಪರಿಷ್ಕರಿಸಲು ಸಹಾಯಕವಾದವು.
ವೈಎಸ್‌ಎಸ್‌ ಸನ್ಯಾಸಿಗಳೊಂದಿಗಿನ ವೈಯಕ್ತಿಕ ಸಮಾಲೋಚನೆಯು ವೈಯಕ್ತಿಕ ಪ್ರೋತ್ಸಾಹ ಮತ್ತು ಸ್ಪಷ್ಟತೆಯನ್ನು ದೊರಕಿಸಿಕೊಟ್ಟಿತು.

ತಂತ್ರ ಪರಿಶೀಲನಾ ತರಗತಿಗಳು ದೈನಂದಿನ ಅಭ್ಯಾಸದಲ್ಲಿ ಪ್ರಾಮಾಣಿಕತೆ ಮತ್ತು ಸ್ಥಿರತೆಯನ್ನು ಪ್ರೋತ್ಸಾಹಿಸಿದವು.

ಸತ್ಸಂಗ ಮತ್ತು ಸೇವೆ

ಸಂಗಮವು ಸತ್ಸಂಗ ಮತ್ತು ಸೇವೆಗೆ ಸಮತೋಲಿತ ಪ್ರಾಮುಖ್ಯತೆಯನ್ನು ನೀಡಿತು, ಯುವ ಸಾಧಕರು ಗುರುಗಳ ಹೆಸರಿನಲ್ಲಿ ಆಶ್ರಮಕ್ಕೆ ಸೇವೆ ಸಲ್ಲಿಸಲು ಪರಸ್ಪರ ಒಟ್ಟಾಗಿ ಕಾರ್ಯನಿರ್ವಹಿಸುವ ಆನಂದವನ್ನು ಕಂಡುಕೊಂಡರು. ಸಹ ಸಾಧಕರನ್ನು ಸ್ವಾಗತಿಸುವುದರಿಂದ ಹಿಡಿದು ವಸತಿ ನಿರ್ವಹಣೆ, ಅಡುಗೆಮನೆಯಲ್ಲಿ ಸಹಾಯ, ಪುಸ್ತಕ ವಿಭಾಗಕ್ಕೆ ನೆರವು, ಹಾಗೂ ಆಶ್ರಮದ ಆವರಣಗಳನ್ನು ನಿರ್ವಹಿಸುವವರೆಗೆ ನಡೆಸಿದ ಸೇವಾಕಾರ್ಯವು ಕೃತಜ್ಞತೆಯ ಸಹಜ ಅಭಿವ್ಯಕ್ತಿಯಾಯಿತು. ಅನೌಪಚಾರಿಕ ಸಂಜೆ ಕೂಟಗಳು ಆತ್ಮೀಯ ಗೆಳೆತನಗಳನ್ನು ಬೆಳೆಸಿದವು. ವಿಶೇಷ ಅಧಿವೇಶನಗಳು ಯುವಕರಿಗೆ ವೈಎಸ್‌ಎಸ್‌ ನಲ್ಲಿ ಸ್ವಯಂಸೇವೆ ಮಾಡಲು ಮತ್ತು ಸಂನ್ಯಾಸ ಜೀವನ ಶೈಲಿಯೊಂದಿಗೆ ಪರಿಚಿತರಾಗಲು ಸಹ ಮಾರ್ಗದರ್ಶನ ನೀಡಿದವು. ಪೂರ್ಣಾವಧಿ ಸೇವೆಗೆ ಮತ್ತು ಸಂನ್ಯಾಸ ಜೀವನವನ್ನು ಸೇರಲು ಇರುವ ಅವಕಾಶಗಳನ್ನು, ಸೇವೆಗೆ ಹಾಗೂ ಆಧ್ಯಾತ್ಮಿಕ ಜೀವನಕ್ಕೆ ತಮ್ಮನ್ನು ಹೆಚ್ಚು ಆಳವಾಗಿ ಸಮರ್ಪಿಸಿಕೊಳ್ಳಲು ಬಯಸುವವರಿಗಾಗಿ ತಿಳಿಸಲಾಯಿತು.

ಈ ಸಂಗಮವನ್ನು ಸೇರಿಕೊಂಡಿರುವುದು ನನಗೆ ಅತೀವ ಧನ್ಯತೆಯನ್ನು ತಂದಿದೆ. ಆಶ್ರಮದಲ್ಲಿ ವಾಸಿಸುವುದು, ಮೌನವಾಗಿ ಊಟಗಳನ್ನು ಮಾಡುವುದು ಮತ್ತು ಆಧ್ಯಾತ್ಮಿಕ ಮಿತ್ರರೊಂದಿಗೆ ಸಂಪರ್ಕ ಬೆಳೆಸುವುದು ನಿಜಕ್ಕೂ ಒಂದು ಪರಿವರ್ತನಕಾರಿ ಅನುಭವವಾಗಿದೆ. ಪ್ರತಿ ಕ್ಷಣವೂ—ಅದು ಮೌನದಲ್ಲಿರಲಿ, ಸತ್ಸಂಗದಲ್ಲಿರಲಿ ಅಥವಾ ಸೇವೆಯಲ್ಲಿರಲಿ—ನನ್ನೊಳಗಿನ ಆಳವಾದ ಯಾವುದನ್ನೋ ಸ್ಪರ್ಶಿಸಿತು. ಈ ಸಂಗಮ ಕೇವಲ ಒಂದು ಕೂಟವಾಗಿರಲಿಲ್ಲ; ಅದು ನನ್ನೊಳಗಿನ ಅತಿ ಅವಶ್ಯಕ ಮತ್ತು ಕಾಲಾತೀತವಾದುದಕ್ಕೆ ಮರಳುವಿಕೆಯಾಗಿತ್ತು.

— ಎ. ಡಿ., ಜಾರ್ಖಂಡ್

ಕಿರಿಯ ಸಾಧಕರು ಸಹ ಸಂಗಮದಲ್ಲಿ ನಿಗದಿತ ಸಮಯದ ಅವಧಿಯಲ್ಲಿ ಗುರು ಸೇವೆ ಮಾಡುವ ಅವಕಾಶವನ್ನು ಸದುಪಯೋಗಪಡಿಸಿಕೊಂಡರು

ಆಶ್ರಮದ ಆವರಣದಲ್ಲಿನ ಸೇವೆ ಕೃತಜ್ಞತೆಯ ಸಂತೋಷಭರಿತ ಅಭಿವ್ಯಕ್ತಿಯಾಯಿತು.

ಒಟ್ಟಾಗಿ ಸೇವೆ ಸಲ್ಲಿಸುತ್ತಾ, ಅಭ್ಯರ್ಥಿಗಳು ಸರಳ ಸೇವಾ ಕಾರ್ಯಗಳಲ್ಲಿ ಸಂತೃಪ್ತಿ ಕಂಡುಕೊಂಡರು.
ವೈಎಸ್‌ಎಸ್‌ ಸ್ವಯಂಸೇವಕರ ಅವಕಾಶಗಳ ಕುರಿತಾದ ಒಂದು ಅಧಿವೇಶನವು ಹೆಚ್ಚು ಆಳವಾಗಿ ಸೇವೆ ಸಲ್ಲಿಸುವ ಆಸಕ್ತಿಯನ್ನು ಹುಟ್ಟು ಹಾಕಿತು.

ಪತ್ರಾಟು ಸರೋವರಕ್ಕೆ ವಿಹಾರ

ಸಂಗಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಪತ್ರಾಟು ಸರೋವರಕ್ಕೆ ಮಾಡಿದ ವಿಹಾರವಾಗಿತ್ತು. ದಾರಿಯುದ್ದಕ್ಕೂ ಒಟ್ಟಾಗಿ ನಾಮಜಪ ಮಾಡಿದ್ದು ಭಕ್ತಿಮಯ ವಾತಾವರಣವನ್ನು ಸೃಷ್ಟಿಸಿತು. ಸರೋವರದಲ್ಲಿ ಯುವ ಸಾಧಕರು ಪ್ರಕೃತಿ ನಡಿಗೆಗಳು, ದೋಣಿ ವಿಹಾರ ಮತ್ತು ಭಾವಪೂರ್ಣ ಸಾಮೂಹಿಕ ಕೀರ್ತನೆ ಹಾಗೂ ಧ್ಯಾನವನ್ನು ಆನಂದಿಸಿದರು.

ಈ ಸಂಗಮದ ಭಾಗವಾಗಿದ್ದಕ್ಕೆ ನಾನು ಧನ್ಯನಾಗಿದ್ದೇನೆ. ಈ ಆಶ್ರಮವನ್ನೂ, ಸಹಭಕ್ತರ ಸಹವಾಸವನ್ನೂ ಬಿಟ್ಟು ಹೋಗಲು ನನಗೆ ಮನಸ್ಸಾಗುತ್ತಿಲ್ಲ. ವ್ಯವಸ್ಥೆಗಳು ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟಿದ್ದವು. ಗುರೂಜಿ ಅವರಿಗೆ, ಸ್ವಾಮೀಜಿಗಳಿಗೆ ಮತ್ತು ಎಲ್ಲಾ ಸ್ವಯಂಸೇವಕರಿಗೆ ನನ್ನ ಪ್ರೀತಿಯ ಆಳವಾದ ಪ್ರಣಾಮಗಳು.

— ಎಸ್. ಎಸ್., ಕರ್ನಾಟಕ

ಭಾಗವಹಿಸಿದವರು ಸರೋವರದ ದಂಡೆಯುದ್ದಕ್ಕೂ ಪ್ರಕೃತಿ ವಿಹಾರವನ್ನು ಆನಂದಿಸಿದರು.
ಗುರುಗಳ ಚೈತನ್ಯದಲ್ಲಿ ಸಾಧಕರು ವಿಹಾರದಲ್ಲಿ ಭಾಗವಹಿಸಿದಾಗ, ನಗೆ ಮತ್ತು ಆನಂದ ದೋಣಿಗಳಲ್ಲಿ ತುಂಬಿಕೊಂಡವು.
ಪತ್ರಾಟು ಸರೋವರದ ನಿಶ್ಚಲವಾದ ಜಲವು ಸಂಗಮದ ಶಾಂತಿಯನ್ನು ಪ್ರತಿಬಿಂಬಿಸಿತು.
ಸರೋವರದ ಬಳಿ ಆತ್ಮವನ್ನು ಕಲಕುವ ಕೀರ್ತನೆಯು ಹೃದಯಗಳನ್ನು ಪುಲಕಿತಗೊಳಿಸಿತು. ಒಟ್ಟಾಗಿ ಜಪಿಸಿದಾಗ, ಸಾಧಕರು ಪ್ರಕೃತಿ ಮತ್ತು ಗುರುಗಳೊಂದಿಗೆ ಒಂದು ಶಾಂತ ಏಕತ್ವವನ್ನು ಅನುಭವಿಸಿದರು.
ಊಟದ ಮೊದಲು ದೇವರ ಆಶೀರ್ವಾದಗಳನ್ನು ಕೋರಲಾಯಿತು, ದೇವರಿಗೆ ಅರ್ಪಿಸಿದಾಗ ಆಹಾರವು ಪವಿತ್ರವಾಗುತ್ತದೆ ಎಂದು ಎಲ್ಲರಿಗೂ ನೆನಪಿಸಲಾಯಿತು.
ಸೇವಾ ತಂಡಗಳು ಶ್ರದ್ಧೆ ಮತ್ತು ಭಕ್ತಿಯೊಂದಿಗೆ ಊಟವನ್ನು ಬಡಿಸಿದರು.

ಸ್ಮರಣೀಯ ಸತ್ಸಂಗ ಸಂಜೆ

ಕೊನೆಯ ಹಿಂದಿನ ಸಂಜೆ, ಸಂಗಮದ ಪ್ರಮುಖ ಆಕರ್ಷಣೆಯಾಗಿ ಒಂದು ವಿಶೇಷ ಕೀರ್ತನೆ ಧ್ಯಾನವನ್ನು ಏರ್ಪಡಿಸಲಾಗಿತ್ತು. ಯುವ ಸಾಧಕರು ಧ್ಯಾನ ಮಂದಿರದಿಂದ ಹೊರಬಂದಾಗ, ಆಶ್ರಮದ ಆವರಣವು ಸಾವಿರಾರು ದೀಪಗಳಿಂದ ಬೆಳಗುತ್ತಿತ್ತು. ನಂತರ ನಡೆದ ತೆರೆದ ಮನೆ ಕಾರ್ಯಕ್ರಮವು, ಪ್ರಕಾಶಿತ ಆಶ್ರಮದ ದೈವಿಕ ವಾತಾವರಣದಲ್ಲಿ ಯುವ ಸಾಧಕರು ಸನ್ಯಾಸಿಗಳೊಂದಿಗೆ ಸಂವಾದಿಸಲು ಮತ್ತು ಬೆರೆಯಲು ಅವಕಾಶ ನೀಡಿತು.

ಈ ಅನುಭವ ಅನನ್ಯವಾಗಿತ್ತು... ಕೀರ್ತನೆ ಗೋಷ್ಠಿಗಳು ನನಗೆ ಪ್ರಮುಖ ಆಕರ್ಷಣೆಯಾಗಿದ್ದವು... ಅವು ನನ್ನನ್ನು ಭಗವಂತ ಮತ್ತು ಗುರುಗಳೆಡೆಗೆ ನವೀಕೃತ ಭಕ್ತಿಯಿಂದ ತುಂಬಿದವು. ಕಾಲವನ್ನು ನಿಲ್ಲಿಸಿ, ಇಂತಹ ಸಂಗಮಗಳಲ್ಲಿ ಸದಾ ಭಾಗವಹಿಸಲು ಸಾಧ್ಯವಾಗಬೇಕೆಂದು ನಾನು ಹಾರೈಸುತ್ತೇನೆ.

— ಎಸ್. ಎಸ್., ಉತ್ತರ ಪ್ರದೇಶ

ವೈಎಸ್‌ಎಸ್‌ ಸಂನ್ಯಾಸಿಗಳು ನಡೆಸಿಕೊಟ್ಟ ವಿಶೇಷ ಕೀರ್ತನೆಯು ಸಂಜೆಯನ್ನು ಶಾಂತಿ ಮತ್ತು ದಿವ್ಯ ಆತ್ಮೀಯ ಭಾವದಿಂದ ತುಂಬಿಸಿತು.
ಈ ಕೀರ್ತನೆಯು ಯುವ ಸಾಧಕರನ್ನು ಪ್ರೇಮ ಮತ್ತು ಭಕ್ತಿಯ ಭಾವೈಕ್ಯತೆಯಲ್ಲಿ ಒಂದಾಗಿಸಿತು.

ಕೃತಜ್ಞತಾಭಾವದಿಂದ ತುಂಬಿದ ಹೃದಯದಿಂದ, ಈ ಕಾರ್ಯಕ್ರಮವು ಸಾಧ್ಯವಾಗಲು ಕಾರಣರಾದ ಪ್ರತಿಯೊಂದು ಕೈಗಳಿಗೂ—ಸನ್ಯಾಸಿಗಳು, ಸ್ವಯಂಸೇವಕರು, ಆಶ್ರಮದ ಸಿಬ್ಬಂದಿ, ಆಶ್ರಮದ ಆವರಣದ ಮರಗಳಿಗೂ ಸಹ—ಎಷ್ಟು ಧನ್ಯವಾದ ಹೇಳಿದರೂ ಸಾಲದು. …ಈ ಸಂಗಮವು ಆನಂದಮಯವಾಗಿತ್ತು, ಶಾಂತಿಯಿಂದ ಕೂಡಿತ್ತು, ಮತ್ತು ಆತ್ಮೋಲ್ಲಾಸಕರವಾಗಿತ್ತು.

— ಜೆ. ಜೆ., ಹರಿಯಾಣ

ಬೆಳಕು ಮತ್ತು ಆನಂದದ ರಾತ್ರಿ — ಸಂಗಮದ ತೆರೆದ ಮನೆ ಕಾರ್ಯಕ್ರಮದ ಸಮಯದಲ್ಲಿ ಆಶ್ರಮವು ಭಕ್ತಿಯಿಂದ ಕಂಗೊಳಿಸಿತು.

ಬೆಳಕಿನಿಂದ ಅಲಂಕೃತವಾಗಿದ್ದ ಸ್ಮೃತಿ ಮಂದಿರವು, ಭಕ್ತಿ ಮತ್ತು ಬಾಂಧವ್ಯದ ದೀಪಸ್ತಂಭವಾಯಿತು.
ದೀಪಗಳ ಪ್ರಭೆಯಲ್ಲಿ ಮಿಂದೆದ್ದ ಪವಿತ್ರ ಲಿಚಿ ವೇದಿಯು, ಗುರುಜಿಯವರ ನಿತ್ಯ-ಜೀವಂತ ಅಸ್ತಿತ್ವದ ಪ್ರತೀಕವಾಗಿತ್ತು.

ದೀಪಗಳ ಪ್ರಕಾಶಮಾನವಾದ ಪ್ರಭೆಯ ನಡುವೆ, ತೆರೆದ ಮನೆ ಕಾರ್ಯಕ್ರಮವು ಯುವ ಸಾಧಕರಿಗೆ ಸ್ವಾಮೀಜಿಗಳೊಂದಿಗೆ ಅನೌಪಚಾರಿಕವಾಗಿ ಸಂವಾದ ನಡೆಸಲು ಅವಕಾಶ ಕಲ್ಪಿಸಿತು. ವೈಯಕ್ತಿಕ ಕ್ಷಣಗಳು ಮಾರ್ಗದರ್ಶನ ಮತ್ತು ಸಹಭಾಗಿತ್ವದ ಬಾಂಧವ್ಯಗಳನ್ನು ಗಾಢವಾಗಿಸಿದವು.

ಅಂತಿಮ ಮನನಗಳು — ಅಭ್ಯಾಸದ ಶಕ್ತಿ

ಅಂತಿಮ ದಿನದಂದು, ಯುವ ಸಾಧಕರು ತಮ್ಮ ಕಲಿಕೆಗಳನ್ನು, ಸಂಕಲ್ಪಗಳನ್ನು ಮತ್ತು ಕೃತಜ್ಞತೆಯನ್ನು ಹಂಚಿಕೊಂಡರು. ಸಂಗಮವು ‘ಅಭ್ಯಾಸದ ಶಕ್ತಿ’ ಕುರಿತ ಮುಕ್ತಾಯದ ಸತ್ಸಂಗದೊಂದಿಗೆ ಮುಕ್ತಾಯಗೊಂಡಿತು.

ಒಟ್ಟಾರೆ ವಿಷಯಗಳು ಮತ್ತು ಅದರ ಅಂಶಗಳು ನನಗೆ ನೇರವಾಗಿ ಸಂಭೋದಿಸಿದಂತಿತ್ತು. ಕೇವಲ ಗುರುದೇವರು, ಸ್ವಾಮೀಜಿ ಮತ್ತು ನಾನು ಮಾತ್ರ ಸಂಭಾಷಣೆ ನಡೆಸುತ್ತಿದ್ದಂತೆ ನನಗೆ ಭಾಸವಾಯಿತು. ನನ್ನ ಅನೇಕ ಪ್ರಶ್ನೆಗಳಿಗೆ ಕೇಳದೆಯೇ ಉತ್ತರ ದೊರೆಯಿತು. ವಾರಗಳು ಕಳೆದಂತೆ ನಾನು ಹೆಚ್ಚು ವಿನಯಶೀಲನಾದೆ, ನನ್ನ ನ್ಯೂನತೆಗಳ ಬಗ್ಗೆ ಹೆಚ್ಚು ಜಾಗೃತನಾದೆ ಮತ್ತು ನನ್ನ ಬಗ್ಗೆ ಹೆಚ್ಚು ಕರುಣಾಮಯಿಯಾದೆ.

— ಎಂ. ಡಿ., ಮಹಾರಾಷ್ಟ್ರ

‘ಅಭ್ಯಾಸದ ಶಕ್ತಿ’ ಕುರಿತ ಅಂತಿಮ ಸತ್ಸಂಗವು, ಗುರೂಜಿ ಅವರ ಬೋಧನೆಗಳನ್ನು ಪ್ರತಿದಿನ ಅಭ್ಯಾಸ ಮಾಡುವ ಹೊಸ ಸಂಕಲ್ಪವನ್ನು ಪ್ರೇರೇಪಿಸಿತು.
ಸಾಧಕರು ಅಂತಿಮ ದಿನದಂದು ತಮ್ಮ ಕಲಿಕೆಗಳನ್ನು ಮತ್ತು ಕೃತಜ್ಞತೆಯನ್ನು ಹಂಚಿಕೊಂಡರು.
ಸಂಗಮವು ಗುರೂಜಿ ಅವರ ಪಾದಗಳಿಗೆ ಪುಷ್ಪಾಂಜಲಿಯನ್ನು ಅರ್ಪಿಸುವುದರೊಂದಿಗೆ ಮುಕ್ತಾಯಗೊಂಡಿತು — ಅದು ಆಳವಾದ ಆಶೀರ್ವಾದದ ಕ್ಷಣವಾಗಿತ್ತು.
ವೈಎಸ್ಎಸ್ ಸಂನ್ಯಾಸಿಗಳಿಂದ ಪ್ರಸಾದವನ್ನು ಸ್ವೀಕರಿಸಿದ್ದು, ಆನಂದ ಮತ್ತು ಆಶೀರ್ವಾದದೊಂದಿಗೆ ಮುಕ್ತಾಯ ಹಾಡಿತು.
ಪ್ರತಿ ಸಾಧಕರೂ ಪ್ರಸಾದದೊಂದಿಗೆ ಮತ್ತು ಮನೆಯಲ್ಲಿ ಅಭ್ಯಾಸವನ್ನು ಮುಂದುವರಿಸಲು ನವೀಕೃತ ಪ್ರೇರಣೆಯೊಂದಿಗೆ ನಿರ್ಗಮಿಸಿದರು.

ಲೀಚಿ ಮರದ ಕೆಳಗೆ: ಗುರುಗಳ ದಿವ್ಯ ದೂರಗಾಮಿತ್ವ

ಪರಮಹಂಸ ಯೋಗಾನಂದರು ಹೀಗೆ ಬರೆದಿದ್ದಾರೆ: “ಯುವಕರಿಗೆ ಸರಿಯಾದ ಶಿಕ್ಷಣವನ್ನು ಕೊಡಬೇಕೆಂಬ ಆದರ್ಶ ಯಾವಾಗಲೂ ನನಗೆ ವೈಯಕ್ತಿಕವಾಗಿ ಹಾಗೂ ಭಾವನಾತ್ಮಕವಾಗಿ ಮುಖ್ಯವಾದುದಾಗಿತ್ತು. ದೇಹದ ಬೆಳವಣಿಗೆ ಮತ್ತು ಬುದ್ಧಿಯ ಬೆಳವಣಿಗೆಯನ್ನು ಮಾತ್ರವೇ ಧ್ಯೇಯವಾಗಿ ಉಳ್ಳ ಸಾಧಾರಣ ಶಿಕ್ಷಣದ ಶುಷ್ಕ ಫಲಿತಾಂಶಗಳನ್ನು ನೋಡಿದ್ದೆ. ನೈತಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಅರಿತಲ್ಲದೆ ಮಾನವನು ಸುಖವನ್ನು ಪಡೆಯಲಾರ; ಆ ಮೌಲ್ಯಗಳ ಅಭಾವವು ಸಾಂಪ್ರದಾಯಿಕ ಪಾಠಕ್ರಮದಲ್ಲಿ ಹಾಗೆಯೇ ಉಳಿದು ಬಂದಿದೆ. ಹರೆಯದ ಹುಡುಗರು ಪ್ರೌಡತೆಯ ಪೂರ್ಣ ಎತ್ತರಕ್ಕೆ ಬೆಳೆಯಲು ಅನುವಾಗುವಂತಹ ಶಾಲೆಯೊಂದನ್ನು ಸ್ಥಾಪಿಸಲು ನಿರ್ಧರಿಸಿದೆ.” (ಯೋಗಿಯ ಆತ್ಮಕಥೆ, ಅಧ್ಯಾಯ 27)

ರಾಂಚಿ ಆಶ್ರಮದಲ್ಲಿನ ಈ ಪವಿತ್ರ ಲೀಚಿ ಮರದ ಕೆಳಗೆಯೇ ಗುರುದೇವ ಪರಮಹಂಸ ಯೋಗಾನಂದಜಿಯವರು, ಯುವಕರಿಗಾಗಿ ಆಧ್ಯಾತ್ಮಿಕ ಶಿಸ್ತನ್ನು ಪ್ರಾಯೋಗಿಕ ಶಿಕ್ಷಣದೊಂದಿಗೆ ಬೆಸೆಯುವಂತಹ ಆಧುನಿಕ ಗುರುಕುಲದ ತಮ್ಮ ದಿವ್ಯ ದೂರಗಾಮಿತ್ವದ ಬೀಜಗಳನ್ನು ಬಿತ್ತಿದರು.

ಒಂದು ನವೀಕೃತ ಸಂಕಲ್ಪ

... ನನ್ನ ಆತ್ಮಸಾಕ್ಷಾತ್ಕಾರಕ್ಕಾಗಿ ಬೇಕಾದ ಎಲ್ಲವೂ ಯೋಗದಾ ಸತ್ಸಂಗ ಸೊಸೈಟಿಯಲ್ಲಿ ಇದೆ ಎಂದು ಈಗ ನನಗೆ ಸಂಪೂರ್ಣ ಮನವರಿಕೆಯಾಗಿದೆ. ನಾನು ಬೋಧನೆಗಳಲ್ಲಿ ದೋಷವನ್ನು ಕಾಣುವುದಿಲ್ಲ, ಬದಲಾಗಿ ನನ್ನ ಪ್ರಯತ್ನಗಳಲ್ಲಿಯೇ ಕಾಣುತ್ತೇನೆ.

— ಪಿ. ಕೆ., ಮಹಾರಾಷ್ಟ್ರ

ಸಮತೋಲಿತ ಆಧ್ಯಾತ್ಮಿಕ ಜೀವನವನ್ನು ಅನುಸರಿಸಲು ಮತ್ತು ಅಭ್ಯಾಸ ಮಾಡಲು ಇಚ್ಛಿಸುವ 18 ರಿಂದ 39 ವರ್ಷ ವಯಸ್ಸಿನ ಯುವ ವಯಸ್ಕರಾದ ಯುವ ಸಾಧಕರು, ಹಾಗೂ ಮುಂದಿನ ಸತ್ಸಂಗಗಳು, ಧ್ಯಾನ ವಿಹಾರಗಳು ಮತ್ತು ಆನ್‌ಲೈನ್ ಸಹಭಾಗಿತ್ವದ ಬಗ್ಗೆ ಮಾಹಿತಿ ಪಡೆಯಲು ಯುವ ಸಾಧಕರ ವಾಟ್ಸಾಪ್ ಸಮುದಾಯದಲ್ಲಿ ಸೇರಿಕೊಳ್ಳಲು ಬಯಸುವವರು, ಈ ಆಸಕ್ತಿ ನಮೂನೆಯನ್ನು ಭರ್ತಿ ಮಾಡಲು ವಿನಂತಿಸಲಾಗಿದೆ. ಯುವ ಸಾಧಕರಿಗಾಗಿ ಯೋಜಿಸಲಾದ ಮುಂದಿನ ಕಾರ್ಯಕ್ರಮಗಳು ಅಥವಾ ಅವಕಾಶಗಳಿಗೆ ನಾವು ಯೋಜಿಸುತ್ತಿದ್ದಂತೆ, ಯುವ ಸಾಧಕ ಫೆಲೋಶಿಪ್ ತಂಡವು ನಿಮ್ಮನ್ನು ಸಂಪರ್ಕಿಸುತ್ತದೆ.

ಇದನ್ನು ಹಂಚಿಕೊಳ್ಳಿ