ಪರಮಹಂಸ ಯೋಗಾನಂದರ ಆಶ್ರಮಗಳಿಂದ ಜನ್ಮಾಷ್ಟಮಿಯ ಸಂದೇಶ-2022

8 ಆಗಸ್ಟ್‌, 2022

ಆತ್ಮೀಯರೆ,

ಪ್ರತಿ ವರ್ಷ ಜನ್ಮಾಷ್ಟಮಿಯಂದು ನಾವು ಭಗವಾನ್ ಶ್ರೀ ಕೃಷ್ಣನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಈ ಪವಿತ್ರ ಸಮಯದಲ್ಲಿ ನಮ್ಮ ಧ್ಯಾನಗಳು ಮತ್ತು ಭಕ್ತಿಯ ಸ್ಮರಣೆಗಳಲ್ಲಿ, ನಾವು ಅವನ ನಿತ್ಯ-ಜೀವಂತ ಉಪಸ್ಥಿತಿ ಮತ್ತು ಅನಂತ ಪ್ರೀತಿಗೆ ವಿಶೇಷವಾಗಿ ಗ್ರಹಣಶೀಲರಾಗಿರೋಣ. ಯುಗ, ಯುಗಗಳಿಂದಲೂ ಪರಮಾತ್ಮನ ಪೂರ್ಣ ಅವತಾರವಾಗಿ ಅಮೂರ್ತಚೇತನದ ಸರ್ವವ್ಯಾಪಿತ್ವದೊಂದಿಗೆ ಒಂದಾಗಿರುವ, ಅವನು ನಮಗೆ ಮತ್ತು ಜಗತ್ತಿಗೆ ಶಾಶ್ವತವಾಗಿ ಲಭ್ಯವಿದ್ದಾನೆ — ಇಂದು ಅತ್ಯಗತ್ಯವಾಗಿರುವ ಎಣೆಯಿಲ್ಲದ ಅನುಗ್ರಹ ಮತ್ತು ಉಪಶಮನಕಾರಕ ಆಶೀರ್ವಾದಗಳನ್ನು ನಮ್ಮ ಮೇಲೆ ಸಂತೋಷದಿಂದ ವರ್ಷಿಸಲು ಸಿದ್ಧನಿದ್ದಾನೆ.

ಭಗವಾನ್ ಕೃಷ್ಣನು ಜೀವಂತವಾಗಿರುವ ಹಲವಾರು ವಿಧಗಳಲ್ಲಿ ಒಂದೆಂದರೆ ಪವಿತ್ರ ಭಗವದ್ಗೀತೆಯ ಮೂಲಕ — ಹಾಗೂ ಆತ್ಮವನ್ನು ಜಾಗೃತಗೊಳಿಸುವಂತಹ ಅದರ ಜ್ಞಾನದ ಪ್ರಕಾಶನವು ನಮ್ಮವರೇ ಆದ ಪರಮಹಂಸ ಯೋಗಾನಂದಜಿಯವರಿಂದ ಆದಂತೆ ಬೇರೆಲ್ಲಿಯೂ ಹೆಚ್ಚು ಸ್ಪಷ್ಟವಾಗಿಲ್ಲ. ನಾವು ಕೃಷ್ಣ ಮತ್ತು ಅವನ ಶಿಷ್ಯ ಅರ್ಜುನನ ನಡುವೆ ನಡೆದ ಈ ಪವಿತ್ರ ಪ್ರವಚನದ ಪುಟಗಳನ್ನು ತೆರೆದರೆ ಮತ್ತು ಧ್ಯಾನದ ನಂತರ ಸ್ವಲ್ಪ ಮಾತ್ರವಾದರೂ ಓದಿದರೆ ಹಾಗೂ ಭಕ್ತಿಪೂರ್ವಕವಾಗಿ ಕೇಂದ್ರೀಕೃತರಾದರೆ, ಪ್ರಜ್ಞೆಯನ್ನು ಮೇಲ್‌ಸ್ತರಕ್ಕೇರಿಸುವ ಸತ್ಯದ ಕಂಪನದ ಹರಿವನ್ನು ಅನುಭವಿಸುತ್ತೇವೆ ಮತ್ತು ಆ ಸತ್ಯವು ಪರಮಾತ್ಮನೆಡೆಗಿನ ನಮ್ಮ ಪಯಣವನ್ನು ಆಶೀರ್ವದಿಸುತ್ತದೆ ಮತ್ತು ಉತ್ಕೃಷ್ಟಗೊಳಿಸುತ್ತದೆ. ಈ ರೀತಿಯಲ್ಲಿ, ಸದ್ಗ್ರಂಥದಲ್ಲಿರುವ ಅವನ ಉಪಸ್ಥಿತಿಯೊಂದಿಗೆ ಧ್ಯಾನದಲ್ಲಿ ತೊಡಗಿಕೊಂಡರೆ, ಶ್ರೀ ಕೃಷ್ಣನಲ್ಲಿ ಮೂರ್ತೀಭವಿಸಿದ್ದ ದಿವ್ಯ ಶಕ್ತಿಯು ನಮ್ಮ ದೈನಂದಿನ ಬದುಕಿನ ನಮ್ಮದೇ ಕುರುಕ್ಷೇತ್ರದಲ್ಲಿ ನಮ್ಮನ್ನು ಉದ್ಧರಿಸಿ ಬೆಂಬಲಿಸುವುದನ್ನು ನಾವು ವಾಸ್ತವದಲ್ಲಿ ಅನುಭವಿಸಬಹುದು — ಅವನು ಅರ್ಜುನನನ್ನು ಉದ್ಧರಿಸಿ ಬೆಂಬಲಿಸಿದಂತೆಯೇ — ನಾವು ಆತ್ಮ ವಿಮೋಚನೆಯ ಭವ್ಯ ಗುರಿಯನ್ನು ತಲುಪುವವರೆಗೆ.

ಈ ಜಗತ್ತನ್ನು ಕಾಪಾಡುವ ಮತ್ತು ಮಾರ್ಗದರ್ಶನ ಮಾಡುವ ಭಗವಂತ ಮತ್ತು ಗುರುಗಳೆಲ್ಲರ ಜೀವಂತ ಸಂಪರ್ಕವನ್ನು ಕಾಪಾಡಿಕೊಳ್ಳಲು, ಅತ್ಯಂತ ಮುಖ್ಯವಾದುದೆಂದರೆ, ಪ್ರಾಮಾಣಿಕವಾಗಿ ಮತ್ತು ನಿಯತವಾಗಿ ಧ್ಯಾನದಲ್ಲಿ ಆಳವಾಗಿ ಧುಮುಕುವುದು, ಸಂಪೂರ್ಣ ಪ್ರಜ್ಞೆಯನ್ನು ಅವರ ಪ್ರೀತಿಯ ಉಪಸ್ಥಿತಿಯಲ್ಲಿ ಮುಳುಗಿಸುವುದು. ನಂತರ, ಆ ಪವಿತ್ರ ಆಳಗಳಲ್ಲಿ, ಯಾವುದೇ ಚಿತ್ತಕ್ಷೋಭೆಯಿಂದ ಮುಕ್ತವಾಗಿ, ನಾವು ನಮ್ಮ ಇಷ್ಟ ದೇವತೆಗೆ ನಮ್ಮ ಅಸ್ತಿತ್ವದ ಪರಮ ಪ್ರೀತಿ, ಶರಣಾಗತಿ ಮತ್ತು ಭಕ್ತಿಯನ್ನು ಅರ್ಪಿಸಬಹುದು. ಅಂತಹ ಪ್ರಾಮಾಣಿಕ ಆತ್ಮದ ಕರೆಗೆ, ಅನಂತ ಪ್ರಭುವು ತಪ್ಪಿಲ್ಲದೆ ಮತ್ತು ವೈಯಕ್ತಿಕವಾಗಿ ಪ್ರತಿಕ್ರಿಯಿಸುತ್ತಾನೆ.

ಅಚಲವಾದ ಸಂಕಲ್ಪ ಮತ್ತು ಪ್ರೀತಿಯಿಂದ, ನಿಮ್ಮ ವೈಯಕ್ತಿಕ ಜೀವನದ ಅನನ್ಯ ಗಾನವು ಶಾಶ್ವತ ದಿವ್ಯ ಗೀತೆಯಲ್ಲಿ ವಿಲೀನಗೊಳ್ಳುವವರೆಗೆ ಯೋಗ ಪ್ರಭು ಶ್ರೀ ಕೃಷ್ಣ ಮತ್ತು ಇತರ ಗುರುಗಳೆಲ್ಲರ ಜ್ಞಾನ ಮತ್ತು ಧ್ಯಾನದ ಬೋಧನೆಗಳನ್ನು ನೀವು ಅನುಸರಿಸುವಂತಾಗಲಿ.

ಜೈ ಶ್ರೀ ಕೃಷ್ಣ! ಜೈ ಗುರು!

ಸ್ವಾಮಿ ಚಿದಾನಂದ ಗಿರಿ

ಇದನ್ನು ಹಂಚಿಕೊಳ್ಳಿ