ಶ್ರೀ ಸ್ವಾಮಿ ಚಿದಾನಂದಗಿರಿಯವರ ಹೊಸ ವರ್ಷದ ಸಂದೇಶ

1 ಜನವರಿ, 2018

“ಈ ಹೊಸ ವರ್ಷದಲ್ಲಿ ನಾನು ಒಬ್ಬ ಹೊಸ ವ್ಯಕ್ತಿಯಾಗುತ್ತೇನೆ. ಅಜ್ಞಾನದ ಎಲ್ಲಾ ಕತ್ತಲೆಗಳನ್ನು ಓಡಿಸುವವರೆಗೆ ಮತ್ತು ಭಗವಂತನ ಯಾವ ಹೊಳೆಯುವ ಬೆಳಕಿನಿಂದ ನಾನು ಮಾಡಲ್ಪಟ್ಟಿದ್ದೇನೋ ಆ ಬೆಳಕು ಪ್ರಕಟವಾಗುವವರೆಗೆ ನಾನು ನನ್ನ ಪ್ರಜ್ಞೆಯನ್ನು ಮತ್ತೆ ಮತ್ತೆ ಬದಲಾಯಿಸುತ್ತೇನೆ.”

— ಪರಮಹಂಸ ಯೋಗಾನಂದ

ನಾವು ಹೊಸ ವರ್ಷವನ್ನು ಪ್ರವೇಶಿಸುತ್ತಿರುವಾಗ, ರಜಾದಿನಗಳು ಸಂತೋಷ ಮತ್ತು ಉನ್ನತಿಯಿಂದ ತುಂಬಿರುವಾಗ ಪ್ರಪಂಚದಾದ್ಯಂತದ ನಿಮ್ಮ ಪ್ರೀತಿಯ ಶುಭಾಶಯಗಳೊಂದಿಗೆ ಗುರುದೇವ ಪರಮಹಂಸ ಯೋಗಾನಂದರ ಆಶ್ರಮಗಳಲ್ಲಿ ಕ್ರಿಸ್ಮಸ್ ಸಂತೋಷವನ್ನು ಹೆಚ್ಚಿಸಿದ್ದಕ್ಕಾಗಿ ನಾನು ನಮ್ಮಆಧ್ಯಾತ್ಮಿಕ ಕುಟುಂಬ ಮತ್ತು ಸ್ನೇಹಿತರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ರಜಾದಿನಗಳಲ್ಲಿ ಮತ್ತು ವರ್ಷವಿಡೀ ನಿಮ್ಮ ದಯೆಯ ಅನೇಕ ಅಭಿವ್ಯಕ್ತಿಗಳಿಂದ ನಾವು ಆಳವಾಗಿ ಸ್ಪರ್ಶಿಸಲ್ಪಟ್ಟಿದ್ದೇವೆ ಮತ್ತು ದೇವರು ಮತ್ತು ಗುರುಗಳ ಪ್ರೀತಿಯಲ್ಲಿ ನಾವು ಹಂಚಿಕೊಳ್ಳುವ ಆಧ್ಯಾತ್ಮಿಕ ಬಂಧದ ಈ ಹೃದಯಸ್ಪರ್ಶಿ ನೆನಪುಗಳನ್ನು ನಾವು ಸವಿಯುತ್ತೇವೆ. ನನ್ನ ಪ್ರಾರ್ಥನೆಗಳು ನಿಮ್ಮೆಲ್ಲರಿಗೂ ತಲುಪುತ್ತವೆ ಎಂದು ತಿಳಿಯಿರಿ. ನಿಮ್ಮ ಹೃದಯಕ್ಕೆ ಹತ್ತಿರವಿರುವ ಉದಾತ್ತ ಗುರಿಗಳನ್ನು ಸಾಧಿಸಲು ಮತ್ತು ಹೆಚ್ಚುತ್ತಿರುವ ನಿಮ್ಮೊಳಗಿನ ದೈವೀ ಪ್ರಜ್ಞೆಯನ್ನು ಹೆಚ್ಚು ಪ್ರಕಟಿಸುವ ನಿಮ್ಮ ಪ್ರಯತ್ನಗಳನ್ನು ದೇವರು ಆಶೀರ್ವದಿಸಲಿ.

ಪ್ರತಿ ವರ್ಷವು ನಮ್ಮ ಗುರಿಯ ಸ್ವಂತ ಯಜಮಾನರಾಗಲು ದೇವರು ಕೊಟ್ಟಿರುವ ಸ್ವಾತಂತ್ರ್ಯವನ್ನು ನಮ್ಮೊಳಗೆ ಬಿಡುಗಡೆ ಮಾಡಲು ನಮಗೆ ಹೊಸ ಅದ್ಭುತ ಅವಕಾಶವನ್ನು ತರುತ್ತದೆ. ನಮ್ಮಲ್ಲಿ ಬೇರೂರಿರುವ ಅನುತ್ಪಾದಕ ಅಭ್ಯಾಸಗಳು ಮತ್ತು ಚಿಂತನೆಯ ಪ್ರವೃತ್ತಿಗಳ ಸುಸಜ್ಜಿತ ಮಾರ್ಗಗಳನ್ನು ಸ್ವಯಂಚಾಲಿತವಾಗಿ ಅನುಸರಿಸಬೇಕಾಗಿಲ್ಲ ಮತ್ತು ಇಂದ್ರಿಯಗಳ ಪ್ರಚೋದನೆಗಳು, ಅಹಂಕಾರ ಮತ್ತು ಲೌಕಿಕ ಪರಿಸರದ ಪ್ರಚೋದನೆಗಳಿಂದ ನಮ್ಮ ಆಧ್ಯಾತ್ಮಿಕ ಆದರ್ಶಗಳಿಂದ ನಾವು ವಿಮುಖರಾಗಬಾರದು. ವಿವೇಚನಾ ಶಕ್ತಿಯ ಮೂಲಕ ಮತ್ತು ಈ ಹೊಸ ವರ್ಷದಲ್ಲಿ ಹೊಸ ಆರಂಭದ ಉತ್ತೇಜಕ ಚಿಂತನೆಯಿಂದ ಪುನರ್‌ನವೀಕರಣ ಆಗುವ ಮೂಲಕ, ನಾವು ನಮ್ಮ ಗಮನವನ್ನು ಮರುಹೊಂದಿಸಬಹುದು ಮತ್ತು ನಮ್ಮ ಆತ್ಮದ ಗುಪ್ತ ಸಾಮರ್ಥ್ಯವನ್ನು ಬಹಿರಂಗಪಡಿಸುವ ಹೊಸ ಹಾದಿಗಳನ್ನು ಬೆಳಗಿಸಬಹುದು. ಭೂತಕಾಲವು ನಿಮ್ಮನ್ನು ತಡೆಹಿಡಿಯುವುದಿಲ್ಲ ಅಥವಾ ಭವಿಷ್ಯವು ನಿಮ್ಮನ್ನು ಬೆದರಿಸುವುದಿಲ್ಲ ಎಂದು ತಿಳಿಯಿರಿ. ವರ್ತಮಾನದಲ್ಲಿ ಪ್ರಜ್ಞಾಪೂರ್ವಕವಾಗಿ ಬದುಕಲು ಮತ್ತು ಅನಂತ ಸಂಪನ್ಮೂಲಗಳು ನಿಮ್ಮ ವಶದಲ್ಲಿವೆ ಎಂಬ ನಂಬಿಕೆಯೊಂದಿಗೆ ಮುಂದುವರಿಯಲು ನೀವು ಆಯ್ಕೆ ಮಾಡಬಹುದು.

ಹೊಸ ವರ್ಷದಲ್ಲಿ ಆತ್ಮಾವಲೋಕನ ಮತ್ತು ಧ್ಯಾನದಿಂದ ಭಗವಂತನ ವಿಶಾಲ ಸಂರಕ್ಷಣಾ ಪ್ರಜ್ಞೆಯೊಂದಿಗೆ ನಮ್ಮ ಪ್ರಜ್ಞೆಯನ್ನು ಶೃತಿಗೊಳಿಸಿಕೊಳ್ಳಲು ಮತ್ತು ಅವನ ಕೊಡುಗೆಗಳಾದ ಆಲೋಚನಾ ಶಕ್ತಿ ಮತ್ತು ಇಚ್ಛೆಯ ಮೂಲಕ ನಮ್ಮ ಜೀವನದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಮತ್ತು ನಮ್ಮ ಮಾರ್ಗವನ್ನು ಸರಿಹೊಂದಿಸಿಕೊಳ್ಳಲು ಗುರುದೇವರು ನಮ್ಮನ್ನು ಪ್ರೋತ್ಸಾಹಿಸಿದರು. ಸ್ವಯಂ-ಅನುಮಾನ, ಹಿಂದಿನ ತಪ್ಪುಗಳ ಬಗ್ಗೆ ದುಃಖ ಮತ್ತು ಯಾವುದೇ ರೀತಿಯ ನಕಾರಾತ್ಮಕ ಚಿಂತನೆಯಿಂದ ಮನಸ್ಸನ್ನು ತೆರವುಗೊಳಿಸುವುದು ಮೊದಲ ಪ್ರಮುಖ ಹೆಜ್ಜೆಯಾಗಿದೆ. ಆ ಅಡೆತಡೆಗಳನ್ನು ಹೊರಹಾಕಿದ ನಂತರ, ನಿಮ್ಮ ಅಸ್ತವ್ಯಸ್ತಗೊಂಡ ಪ್ರಜ್ಞೆಯ ಮೇಲೆ ನೀವು ಪ್ರಕಟಿಸಲು ಇಚ್ಛಿಸುವ ಅಥವಾ ಸಾಧಿಸಲು ಬಯಸುವ ಸಕಾರಾತ್ಮಕತೆಯನ್ನು ದೃಢೀಕರಿಸಿ ಮತ್ತು ಅದರ ಮುದ್ರೆಯೊತ್ತಿ. ಗುರುದೇವರು ನಮಗೆ ಹೇಳಿದರು, “ನೀವು ನಿಮ್ಮ ಮನಸ್ಸಿನಲ್ಲಿ ಬಲವಾದ ಆಲೋಚನೆಯನ್ನು ತುಂಬಬಹುದಾದರೆ, ಶಕ್ತಿಶಾಲಿಯಾದ ಆಲೋಚನೆಗಳನ್ನು ನಿಮ್ಮ ಮನಸ್ಸಿನಲ್ಲಿ ತುಂಬಬಹುದಾದರೆ, ನೀವು ನಿಮ್ಮ ಪ್ರಜ್ಞೆಯಲ್ಲಿ ಯಾವುದೇ ಪ್ರವೃತ್ತಿಯನ್ನು ಈಗಲೇ ಹುಟ್ಟುಹಾಕಬಹುದು. ಆಗ ನಿಮ್ಮ ಕಾರ್ಯಗಳು ಮತ್ತು ಇಡೀ ದೇಹ ಆ ಆಲೋಚನೆಯನ್ನು ಪಾಲಿಸುತ್ತದೆ.” ಶಾಂತ, ಅವಿರತ ಸಹನೆಯಿಂದ ಇಚ್ಛಾಶಕ್ತಿಯನ್ನು ಸಕ್ರಿಯಗೊಳಿಸುವುದರಿಂದ, ನೀವು ಸಾಧಿಸಲು ಪ್ರಯತ್ನಿಸುತ್ತಿರುವ ಗುರಿಯನ್ನು ನಿಮಗೆ ನೀವೇ ನೆನಪಿಸಿಕೊಳ್ಳಲು ಪ್ರತಿದಿನ ಹಲವು ದಾರಿಗಳನ್ನು ಹುಡುಕುವುದರಿಂದ, ನೀವು ದೃಢೀಕರಿಸಿದ್ದು ವಾಸ್ತವವಾಗುತ್ತದೆ ಎನ್ನುವುದನ್ನು ನೀವು ಕಾಣುವಿರಿ.

ನಿಮ್ಮ ಪ್ರಯತ್ನಗಳಲ್ಲಿ ನೀವು ಒಬ್ಬಂಟಿಯಾಗಿಲ್ಲ ಎಂಬುದನ್ನು ಸಹ ನೆನಪಿಡಿ. ನೀವು ದೈನಂದಿನ ಧ್ಯಾನದ ನಿಶ್ಚಲತೆಯಲ್ಲಿದ್ದಾಗ ಸಾಧಿಸಲು ಬೇಕಾದ ಎಲ್ಲಾ ಶಕ್ತಿಯ ಮೂಲವಾಗಿರುವ ಅವನನ್ನು ಸಂಪರ್ಕಿಸಿ. ಆಗ ನಿಮ್ಮ ಆಲೋಚನೆಗಳ ತಳದಲ್ಲಿ ನೀವು ಅವನ ಶಕ್ತಿಯನ್ನು ಹೆಚ್ಚು ಅನುಭವಿಸುವಿರಿ, ಅವನ ಶಕ್ತಿಶಾಲಿ ಇಚ್ಛೆ ನಿಮ್ಮ ಆಲೋಚನೆಗಳನ್ನು ಬಲಪಡಿಸುತ್ತದೆ, ಅವನ ಜ್ಞಾನ ನಿಮಗೆ ಮಾರ್ಗದರ್ಶನ ನೀಡುತ್ತದೆ. “ಪ್ರತಿ ನಿಮಿಷವೂ, ನಿಮ್ಮ ಮತ್ತು ದೇವರ ನಡುವಿನ ಕೊಂಡಿಯಾಗಿದೆ” ಎಂದು ಗುರೂಜಿ ನಮಗೆ ಹೇಳಿದ್ದಾರೆ. ಆ ಅರಿವಿನಲ್ಲಿ ವಾಸಿಸುವ ಮೂಲಕ ನಿಮ್ಮ ಸಂಪೂರ್ಣ ಅಸ್ತಿತ್ವ ಮತ್ತು ನಿಮ್ಮ ಉದಾತ್ತ ಆಕಾಂಕ್ಷೆಗಳು ಪೋಷಿಸುವುದನ್ನು ಮತ್ತು ನಿಮ್ಮ ಪ್ರಜ್ಞೆಯ ಅಡಿಯಲ್ಲಿ ನಿಶ್ಯಬ್ದ ಶಾಂತಿಯ ನದಿ ಹರಿಯುವುದನ್ನು ನೀವು ಕಾಣಬಹುದು. ನಿಮ್ಮದೇ ಆದ ಸ್ವಂತ ಆಂತರಿಕ ರೂಪಾಂತರದ ಮೂಲಕ ಮತ್ತು ನಿಮ್ಮ ಆತ್ಮದ ಗುಣಗಳನ್ನು ಅನಾವರಣಗೊಳಿಸುವುದರ ಮೂಲಕ, ನೀವು ಇತರರಲ್ಲಿರುವ ಒಳ್ಳೆಯದನ್ನು ಹೊರತರುತ್ತೀರಿ ಮತ್ತು ಅವರ ನಿಜವಾದ ದೈವಿಕ ಆತ್ಮವನ್ನು ಅನ್ವೇಷಿಸಲು ಮತ್ತು ಪ್ರಕಟಿಸಲು ಪ್ರೋತ್ಸಾಹಿಸುತ್ತೀರಿ.

ನಿಮಗೆ ಮತ್ತು ನಿಮ್ಮ ಆತ್ಮೀಯರಿಗೆ ದೇವರ ಪ್ರೀತಿ ಮತ್ತು ನಿರಂತರ ಆಶೀರ್ವಾದದಿಂದ ತುಂಬಿದ ಹೊಸ ವರ್ಷದ ಶುಭಾಶಯಗಳು.
ಶ್ರೀ ಸ್ವಾಮಿ ಚಿದಾನಂದ ಗಿರಿ

ಇದನ್ನು ಹಂಚಿಕೊಳ್ಳಿ