ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್‌ನ ಅಂತಾರಾಷ್ಟ್ರೀಯ ಮುಖ್ಯಕೇಂದ್ರವನ್ನು (ಎಸ್‌ಆರ್‌ಎಫ್ ಮಾತೃ ಕೇಂದ್ರ) ಪರಮಹಂಸ ಯೋಗಾನಂದರು 1925 ರಲ್ಲಿ ಸ್ವಾಧೀನಪಡಿಸಿಕೊಂಡರು ಮತ್ತು ಅದೇ ವರ್ಷದ ಅಕ್ಟೋಬರ್ 25 ರಂದು ಅದನ್ನು ಅಧಿಕೃತವಾಗಿ ಸಮರ್ಪಿಸಿದರು. ಈ ಮಾತೃ ಕೇಂದ್ರದ 100 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ, ಶ್ರೀ ದಯಾ ಮಾತಾರವರು ಕೆಲವು ವರ್ಷಗಳ ಹಿಂದೆ ಮಾತೃ ಕೇಂದ್ರದ ಚಾಪೆಲ್‌ನಲ್ಲಿ ನೀಡಿದ ಪ್ರವಚನದ ಆಯ್ದ ಭಾಗಗಳನ್ನು ಇಲ್ಲಿ ನೀಡಲಾಗಿದೆ. ಅವರು ತಮ್ಮ ಮಾತುಗಳಲ್ಲಿ ಪರಮಹಂಸ ಯೋಗಾನಂದರ ಬೋಧನೆಗಳು ಪ್ರಪಂಚದಾದ್ಯಂತ ಹರಡಿದ ಈ ಕೇಂದ್ರದ ಆರಂಭಿಕ ಇತಿಹಾಸವನ್ನು ನೆನಪಿಸಿಕೊಂಡಿದ್ದಾರೆ. ಈ ಆಯ್ದ ಭಾಗಗಳನ್ನು ಯೋಗದಾ ಸತ್ಸಂಗ ಪತ್ರಿಕೆಯ 2025 ರ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.
ಈ ಪಠ್ಯದಲ್ಲಿ, ಶ್ರೀ ದಯಾ ಮಾತಾರವರು ವೈಎಸ್ಎಸ್/ಎಸ್‌ಆರ್‌ಎಫ್‌ನ ಗುರು ಮತ್ತು ಸಂಸ್ಥಾಪಕರಾದ ಪರಮಹಂಸ ಯೋಗಾನಂದರನ್ನು ಕೆಲವೊಮ್ಮೆ “ಮಾಸ್ಟರ್” ಎಂದು ಉಲ್ಲೇಖಿಸಿದ್ದಾರೆ, ಇದು ಒಬ್ಬರ ಗುರುವಿಗೆ ಮತ್ತು ಆತ್ಮ-ವಿಜಯವನ್ನು ಸಾಧಿಸಿದ ಮಹಾತ್ಮರಿಗೆ ಬಳಸುವ ಒಂದು ಗೌರವದ ಪದವಾಗಿದೆ; ಅಥವಾ ಕೆಲವೊಮ್ಮೆ “ಗುರೂಜಿ” ಎಂದೂ ಉಲ್ಲೇಖಿಸಿದ್ದಾರೆ.
ಗುರುದೇವ ಪರಮಹಂಸ ಯೋಗಾನಂದರ ವಿಶ್ವವ್ಯಾಪಿ ಧರ್ಮಪ್ರಚಾರದ ಕಾರ್ಯದ ಕಥೆ — ಮತ್ತು ನಿಶ್ಚಯವಾಗಿ ಮೌಂಟ್ ವಾಷಿಂಗ್‌ಟನ್‌ನಲ್ಲಿ ನಮ್ಮ ಮುಖ್ಯಕೇಂದ್ರವನ್ನು ಸ್ಥಾಪಿಸಿದ ಅವರ ಕಾರ್ಯವು — ಪ್ರೇಮಪೂರ್ವಕ ತ್ಯಾಗ ಮತ್ತು ದೇವರಲ್ಲಿನ ಅಚಲ ನಂಬಿಕೆಯ ಕಥೆಯಾಗಿದೆ.
ತಮ್ಮ ಆತ್ಮಕಥೆಯಲ್ಲಿ ನೀವು ಓದಿದಂತೆ, 1920 ರಲ್ಲಿ ಯಾವ ದಿನದಂದು ಭಗವಂತನು ಅವರಿಗೆ ಸಮಾಧಿಯಲ್ಲಿ ಅಮೆರಿಕಾಗೆ ಬರಬೇಕೆಂದು ತೋರಿಸಿದನೋ, ಅದೇ ದಿನ ಅವರು ತಮ್ಮ ಪ್ರೀತಿಯ ರಾಂಚಿ ಶಾಲೆ ಮತ್ತು ಆಶ್ರಮವನ್ನು ಬಿಟ್ಟು ಹೊರಟರು — ಯಾವುದೇ ಪೂರ್ವಸಿದ್ಧತೆ ಇರಲಿಲ್ಲ, ದೇವರ ಇಚ್ಛೆಯನ್ನು ಹೇಗೆ ಈಡೇರಿಸುವುದೆಂಬ ಯೋಜನೆಗಳೂ ಇರಲಿಲ್ಲ; ಅವರು ಸುಮ್ಮನೆ ಹೊರಟುಬಿಟ್ಟರು. ಅದವರ ದಾರಿ: ದೇವರಲ್ಲಿ ಸಂಪೂರ್ಣ ಶರಣಾಗತಿ. ಗುರೂಜಿಯವರು ಮೊದಲು ಈ ದೇಶಕ್ಕೆ ಬಂದಾಗ ಇಲ್ಲಿ ಯಾರೂ ಅವರಿಗೆ ಪರಿಚಯವಿರಲಿಲ್ಲ. ಆದರೆ ಅವರಲ್ಲಿ ದೈವೀ ಉತ್ಸಾಹವಿತ್ತು, ಮತ್ತು ದೇವರ ಮೇಲೆ ಎಷ್ಟು ಸಂಪೂರ್ಣ ಹಾಗೂ ಶುದ್ಧವಾದ ಮಗುವಿನಂತಹ ವಿಶ್ವಾಸವಿತ್ತೆಂದರೆ — ಅದರ ಜೊತೆಗೆ ಅವರು ಎಲ್ಲಿಗೆ ಹೋದರೂ ಆತ್ಮಗಳನ್ನು ತಮ್ಮತ್ತ ಸೆಳೆಯುವಂತಹ ಒಂದು ಮಹಾನ್ ಆಧ್ಯಾತ್ಮಿಕ ಆಕರ್ಷಣೆ ಇತ್ತು.
ದೇವದೂತರ ನಗರಕ್ಕೆ ಆಗಮನ
1924 ರಲ್ಲಿ, ಬೋಸ್ಟನ್ ಮತ್ತು ಇತರ ಪೂರ್ವ ಕರಾವಳಿಯ ನಗರಗಳಲ್ಲಿ ಉಪನ್ಯಾಸದ ಯಶಸ್ವಿ ವರ್ಷಗಳನ್ನು ಕಳೆದ ನಂತರ, ಅವರು ಅನೇಕ ಖಂಡಾಂತರ ಉಪನ್ಯಾಸ ಪ್ರವಾಸಗಳಲ್ಲಿ ಮೊದಲನೆಯದನ್ನು ಪ್ರಾರಂಭಿಸಿದರು. ಈ ಪ್ರವಾಸದ ಅಂತಿಮ ತಾಣವೇ ಲಾಸ್ ಏಂಜಲೀಸ್; ಅವರು ಇಲ್ಲಿಗೆ 1925 ರ ಜನವರಿಯಲ್ಲಿ ಆಗಮಿಸಿದರು.
ಆ ಉಪನ್ಯಾಸ ಸರಣಿಯ ಕೊನೆಯಲ್ಲಿ, ಗುರೂಜಿಯು ತಮಗೆ ಸಹಾಯ ಮಾಡುತ್ತಿದ್ದ ಕೆಲವು ಶಿಷ್ಯರಿಗೆ: “ದೇವದೂತರ ನಗರವಾದ ಲಾಸ್ ಏಂಜಲೀಸ್‌ನಲ್ಲಿ ಒಂದು ಕೇಂದ್ರವನ್ನು ಸ್ಥಾಪಿಸಲು ಸ್ಥಳವನ್ನು ಹುಡುಕೋಣ. ಇಲ್ಲಿ ನನಗೆ ಒಂದು ಅತ್ಯದ್ಭುತ ಆಧ್ಯಾತ್ಮಿಕ ಕಂಪನ ಸಿಗುತ್ತಿದೆ” ಎಂದು ಹೇಳಿದರು. ಅವರು ವರ್ಷದುದ್ದಕ್ಕೂ, ಲಾಸ್ ಏಂಜಲೀಸ್ ಅನ್ನು ಆಧ್ಯಾತ್ಮಿಕ ಸಾಮರ್ಥ್ಯದಲ್ಲಿ ಅಮೆರಿಕಾದ ಬನಾರಸ್ ಎಂದು ಆಗಾಗ್ಗೆ ಹೇಳುತ್ತಿದ್ದರು — ಭಾರತದ ಆ ಪವಿತ್ರ ನಗರಕ್ಕೆ ಹೋಲಿಸಿರುವುದು ಈ ನಗರಕ್ಕೆ ಸಂದ ದೊಡ್ಡ ಪ್ರಶಂಸೆಯಾಗಿದೆ.
ಕೇಂದ್ರಕ್ಕಾಗಿ ಸೂಕ್ತವಾದ ಸ್ಥಳವನ್ನು ಹುಡುಕಲು ಕೆಲವು ಪ್ರಯತ್ನಗಳನ್ನು ಮಾಡಲಾಯಿತು. ಒಂದು ದಿನ, ಗುರೂಜಿ ಮತ್ತು ಅವರ ಕೆಲವು ವಿದ್ಯಾರ್ಥಿಗಳು ಮಾರಾಟಕ್ಕಿದ್ದ ಒಂದು ಆಸ್ತಿಯನ್ನು ನೋಡಲು ಮೌಂಟ್ ವಾಷಿಂಗ್‌ಟನ್‌ನ ಮೇಲ್ಭಾಗಕ್ಕೆ ಹೋಗುವ ಅಂಕುಡೊಂಕಾದ ರಸ್ತೆಯಲ್ಲಿ ಕಾರಿನಲ್ಲಿ ಹೋದರು. ಅದು ಸ್ಯಾನ್ ರಾಫೆಲ್ ಅವೆನ್ಯೂದಲ್ಲಿನ ಒಂದು ಸಣ್ಣ ಮರದ ಚೌಕಟ್ಟಿನ ಕಟ್ಟಡವಾಗಿತ್ತು (ನಂತರ ಇದನ್ನು ಸ್ಥಳೀಯ ಗ್ರಂಥಾಲಯದ ಶಾಖೆಯಾಗಿ ಬಳಸಲಾಯಿತು). ಆ ಸಣ್ಣ ಮನೆಯತ್ತ ಮಾಸ್ಟರ್ ಒಂದು ಅನಾಸಕ್ತಿಯ ನೋಟ ಬೀರಿ, ಅದು ಸಾಧ್ಯವೇ ಇಲ್ಲ ಎಂದು ತಕ್ಷಣವೇ ತಿರಸ್ಕರಿಸಿದರು. ಅವರ ಸಹವರ್ತಿಗಳು ಅದು ಆದರ್ಶಪ್ರಾಯವಾದ ಸ್ಥಳವೆಂದು ವಾದಿಸಿದರು, ಆದರೆ ಗುರೂಜಿಯವರಿಗೆ ಅವರ ದೃಷ್ಟಿಕೋನವು ಬಹಳ ಸೀಮಿತವಾಗಿತ್ತು. ಅವರ ಯೋಚನೆಗಳು ವಿಸ್ತಾರವಾದವು ಮತ್ತು ದೂರಗಾಮಿಯಾಗಿದ್ದವು; ಅಲ್ಲದೆ, ಆ ಕಾರ್ಯಕ್ಕಾಗಿ ದೇವರು ಇನ್ನೂ ಉತ್ತಮವಾದದ್ದನ್ನು ಮನಸ್ಸಿನಲ್ಲಿ ಇರಿಸಿದ್ದಾನೆ ಎಂದು ಅವರಿಗೆ ತಿಳಿದಿತ್ತು!
“ಈ ಸ್ಥಳವು ನಮ್ಮದೇ ಎಂಬಂತೆ ಭಾಸವಾಗುತ್ತಿದೆ!”
ಅವರು ಹಿಂದಿರುಗುವಾಗ, ಹಾದಿಯಲ್ಲಿ ಮಾಸ್ಟರ್ ರವರ ಕಣ್ಣು ಸೆಳೆದಿದ್ದ ಈ ಆವರಣವನ್ನು ಹಾದುಹೋದರು. ಅವರು ತಕ್ಷಣವೇ ಕಾರನ್ನು ನಿಲ್ಲಿಸಿ ಆ ಆಸ್ತಿಯನ್ನು ನೋಡಬೇಕೆಂದು ಒತ್ತಾಯಿಸಿದರು — ಅದು ಒಂದು ದೊಡ್ಡ ಹಳೆಯ ಕಟ್ಟಡವಾಗಿದ್ದು, ಹಿಂದೆ ಆಕರ್ಷಕವಾಗಿದ್ದ ಮೌಂಟ್ ವಾಷಿಂಗ್‌ಟನ್ ಹೋಟೆಲ್ ಆಗಿತ್ತು. (ಲಾಸ್ ಏಂಜಲೀಸ್‌ನ ಹಿಂದಿನ ಯುಗದಲ್ಲಿ ಅದು ಪ್ರಸಿದ್ಧವಾಗಿತ್ತು, ಜನರು ಗಡಿಬಿಡಿಯ ನಗರದ ಜಂಜಾಟದಿಂದ ದೂರವಿರಲು ಬರುವ ಒಂದು ರೆಸಾರ್ಟ್ ಆಗಿತ್ತು. ಆಗ ಮೌಂಟ್ ವಾಷಿಂಗ್‌ಟನ್ ಬಹುತೇಕ ನಿರ್ಜನ ಅರಣ್ಯ ಪ್ರದೇಶವಾಗಿತ್ತು. ಜನರು ಈಗ ಮರುಭೂಮಿಗೋ ಅಥವಾ ಇತರ ರಮಣೀಯ ಸ್ಥಳಗಳಿಗೋ ಹೋಗುವಂತೆ, ಆಗ ಇಲ್ಲಿಗೆ ರಜೆಯಲ್ಲಿ ಬರುತ್ತಿದ್ದರು. ಆ ಕಾಲದ ಕೆಲವು ಚಾಂಪಿಯನ್ ಟೆನ್ನಿಸ್ ಆಟಗಾರರು ಮುಖ್ಯ ರಸ್ತೆಯ ಕೆಳಗಿನ ಟೆನ್ನಿಸ್ ಕೋರ್ಟ್‌ನಲ್ಲಿ ಪ್ರದರ್ಶನ ಟೆನ್ನಿಸ್ ಪಂದ್ಯಗಳನ್ನು ಆಡುತ್ತಿದ್ದರು.)
“ಒಳಗೆ ಹೋಗೋಣ,” ಗುರೂಜಿ ಹೇಳಿದರು. ಅವರ ಜೊತೆಗಿದ್ದ ಭಕ್ತರಲ್ಲಿ ಒಬ್ಬರು, ತುಂಬಾ ವ್ಯಾವಹಾರಿಕ ಮನೋಭಾವದ ಶಿಷ್ಯರಾಗಿದ್ದವರು, “ಓಹ್, ಮಾಸ್ಟರ್, ನಿಮಗೆ ಅಷ್ಟು ದೊಡ್ಡ ಕಟ್ಟಡ ಬೇಕಾಗಿಲ್ಲ!” ಎಂದರು.
ಅವರು ಯಾವುದೇ ಗಮನ ಕೊಡಲಿಲ್ಲ. ಅವರು ಟೆನ್ನಿಸ್ ಕೋರ್ಟ್‌ನ ಮೇಲೆ ನಿಂತು, ಕಟ್ಟಡದ ಮೇಲೆ ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿ, “ಈ ಸ್ಥಳವು ನಮ್ಮದೇ ಎಂಬಂತೆ ಭಾಸವಾಗುತ್ತಿದೆ!” ಎಂದು ಹೇಳಿದರು.
ಆ ಶಿಷ್ಯರು ನಿರುತ್ತೇಜನಗೊಳಿಸುವ ವಾದಗಳನ್ನು ಮುಂದಿಟ್ಟರು — ಇಷ್ಟು ದೊಡ್ಡ ಕೇಂದ್ರದ ನಿರ್ವಹಣೆಗೆ ತಗಲುವ ವೆಚ್ಚಗಳು; ಹಾಗೂ ಪ್ರತಿಯೊಬ್ಬರೂ ತಮ್ಮದೇ ದಾರಿ ಹಿಡಿಯಲು ಬಯಸುವ, ಅಷ್ಟೊಂದು ಜನರು ಒಟ್ಟಿಗೆ ವಾಸಿಸುವುದರಿಂದ ಉಂಟಾಗುವ ಸಮಸ್ಯೆಗಳು. ಆದರೆ ಮಾಸ್ಟರ್‌ರವರ ಮನಸ್ಸನ್ನು ತುಂಬಿದ್ದು ಸಮಸ್ಯೆಗಳಲ್ಲ, ಅವರ ಯೋಚನೆಗಳಲ್ಲಿ ಸಂಕಲ್ಪ ಮತ್ತು ಧೈರ್ಯವನ್ನು ತುಂಬಿದ ಶಕ್ತಿ — ಮತ್ತು ಈ ಕೆಲಸವನ್ನು ಕೈಗೊಳ್ಳಲು ದೇವರ ಆಜ್ಞೆಯನ್ನು ಅನುಸರಿಸಲು ಅವರಿಗೆ ಧೈರ್ಯ ಬೇಕಿತ್ತು.
ಯಾವುದೇ ಹಿಂಜರಿಕೆಯಿಲ್ಲದೆ ಅವರು ಆ ವಿಶಾಲವಾದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ತೀರ್ಮಾನಿಸಿದರು. ತಮ್ಮ ಉದಾರ ಶಿಷ್ಯರ ಸಹಕಾರದಿಂದ ಮತ್ತು ಗುರುಗಳೇ ಎರಡು ಸಾಲಗಳನ್ನು ಹೊತ್ತುಕೊಂಡು, 1925ರಲ್ಲಿ ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್ ಮಾತೃಕೇಂದ್ರವು ಜನ್ಮ ತಳೆದಿತು….
ಆರಂಭಿಕ ವರ್ಷಗಳಲ್ಲಿ ಹೋರಾಟಗಳು
ಗುರೂಜಿಯವರು ಈ ಪ್ರವರ್ತಕ ಕಾರ್ಯವನ್ನು ಸ್ಥಾಪಿಸುವಲ್ಲಿ ಅನೇಕ ಕಷ್ಟಗಳನ್ನು ಸಹಿಸಿಕೊಂಡರು. ಮೌಂಟ್ ವಾಷಿಂಗ್‌ಟನ್ ಆಸ್ತಿಯ ಸಾಲದ ಕಂತು ಬಾಕಿ ಇದ್ದು, ಅದನ್ನು ಕಟ್ಟಲು ನಮ್ಮ ಬಳಿ ಹಣವಿಲ್ಲದಿದ್ದ ಸಮಯವೊಂದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಆ ಸಮಯದಲ್ಲಿ ಮಿಲ್ವಾಕೀ ಊರಿನ ಒಬ್ಬ ಬಹು ಶ್ರೀಮಂತ ವ್ಯಕ್ತಿ ಇಲ್ಲಿ ತಂಗಿದ್ದರು. ಅವರು ಲೌಕಿಕ ಮನಸ್ಥಿತಿಯವರಾಗಿದ್ದರೂ ಯೋಗದಲ್ಲಿ ಆಸಕ್ತಿ ಹೊಂದಿದ್ದು, ಉಪದೇಶ ಪಡೆಯಲು ಇಲ್ಲಿಗೆ ಬಂದಿದ್ದರು. ಮಾಸ್ಟರ್‌ರವರ ಈ ಸಾಲದ ತೊಂದರೆಯ ಬಗ್ಗೆ ಅವರಿಗೆ ತಿಳಿದಿತ್ತು ಮತ್ತು ಅವರು ಗುರೂಜಿಯವರ ಬಳಿ ಒಂದು ಪ್ರಸ್ತಾವನೆಯೊಂದಿಗೆ ಬಂದರು: ಈ ಪೂರ್ವದ ವಿಶಿಷ್ಟ ಬೋಧನೆಯನ್ನು ವ್ಯಾಪಾರೀ ದೃಷ್ಟಿಯಿಂದ ಹೆಚ್ಚು ಲಾಭದಾಯಕವಾಗಿಸಲು ತಮಗೆ ಅವಕಾಶ ನೀಡಿದರೆ, ಅವರು ಸಾಲವನ್ನು ತೀರಿಸಲು ಹಣವನ್ನು ನೀಡುವುದಾಗಿ ಹೇಳಿದರು.
ಆ ಆರಂಭಿಕ ವರ್ಷಗಳಲ್ಲಿ ನಮ್ಮ ಬಳಿ ಒಂದು ಪೈಸೆಯೂ ಉಳಿತಾಯವಿರಲಿಲ್ಲ. ನಮ್ಮ ರಾತ್ರಿಯ ಊಟವು ಕೇವಲ ಲೆಟಿಸ್ ಸೂಪ್ ಅನ್ನು ಒಳಗೊಂಡಿದ್ದ ಅನೇಕ ಸಂದರ್ಭಗಳಿದ್ದವು. ಕಡಿಮೆ ಮಟ್ಟದ ಗುರುವಾಗಿದ್ದರೆ, ಅತೀ ಅಗತ್ಯವಿದ್ದ ಹಣವನ್ನು ಪಡೆಯಲು ಆ ಪ್ರಸ್ತಾವನೆಯನ್ನು ಒಪ್ಪಿಕೊಂಡು, ನಂತರ ಒಪ್ಪಂದದಿಂದ ಹಿಂದೆ ಸರಿಯಲು ಪ್ರಯತ್ನಿಸುತ್ತಿದ್ದರು. ಆದರೆ ಮಾಸ್ಟರ್ ಹಾಗೆ ಇರಲಿಲ್ಲ. ಆ ವ್ಯಕ್ತಿಯ ಪ್ರಸ್ತಾವನೆಯ ಬಗ್ಗೆ ಅವರು ನಮ್ಮೊಂದಿಗೆ ಮಾತನಾಡಿದ ಆ ಸಂಜೆಯನ್ನು ನಾನು ಎಂದಿಗೂ ಮರೆಯಲಾರೆ. “ಇದು ದಿವ್ಯ ಮಾತೆಯ ಪ್ರಲೋಭನೆ,” ಎಂದು ಅವರು ಹೇಳಿದರು. “ಸಾಲದ ಹೊರೆಯಿಂದ ಮತ್ತು ಈ ಕಟ್ಟಡ ಹಾಗೂ ಇಲ್ಲಿ ವಾಸಿಸುವ ಎಲ್ಲ ಜನರ ಕಾಳಜಿಯ ಚಿಂತೆಯಿಂದ ನನ್ನನ್ನು ಮುಕ್ತಗೊಳಿಸಲು ಯಾರೋ ಒಬ್ಬರು ಮುಂದೆ ಬಂದಿದ್ದಾರೆ; ‘ಹೌದು’ ಎಂದು ಹೇಳುವುದು ಸುಲಭ. ಆದರೆ ನಾನು ನನ್ನ ಆದರ್ಶಗಳೊಂದಿಗೆ ರಾಜಿ ಮಾಡಿಕೊಳ್ಳಲಾರೆ. ಹಣದ ಕಾರಣಕ್ಕಾಗಿ ನನ್ನ ಆದರ್ಶಗಳನ್ನು ಕೆಳಗಿಳಿಸುವುದಕ್ಕಿಂತ, ಈ ಕಾರ್ಯವೇ ನಿಂತುಹೋಗುವುದು ಉತ್ತಮ.” ಮತ್ತು ಅವರು ಆ ಪ್ರಸ್ತಾವನೆಯನ್ನು ನಿರಾಕರಿಸಿದರು.
ಜೇಮ್ಸ್ ಜೆ. ಲಿನ್ ಅವರನ್ನು ಭೇಟಿ ಮಾಡಿದ್ದು ಮತ್ತು ಸಾಲ ತೀರಿಸಿದ ಸಂಭ್ರಮ
ಈ ಅನುಭವದ ಸ್ವಲ್ಪ ಸಮಯದ ನಂತರ, 1932ರ ಫೆಬ್ರವರಿಯಲ್ಲಿ ಗುರುದೇವರು ಕಾನ್ಸಾಸ್ ನಗರದಲ್ಲಿ ತರಗತಿಗಳ ಸರಣಿಯನ್ನು ನಡೆಸಿದರು. ಆ ತರಗತಿಗಳಿಗೆ ಹಾಜರಾದವರಲ್ಲಿ ಶ್ರೀ ಜೇಮ್ಸ್ ಜೆ. ಲಿನ್ ಸಹ ಒಬ್ಬರಾಗಿದ್ದರು — ಅವರು ಸತ್ಯದ ಆಳವಾದ ಅನ್ವೇಷಕರಾಗಿದ್ದ ಶ್ರೀಮಂತ ಉದ್ಯಮಿಯಾಗಿದ್ದರು. ಗುರುಜಿಯವರು ಅವರನ್ನು ನೋಡಿದ ತಕ್ಷಣ, ಈ ಭಕ್ತರು ಹಿಂದಿನ ಅನೇಕ ಜನ್ಮಗಳಲ್ಲಿ ತಮ್ಮೊಂದಿಗಿದ್ದವರು ಎಂದು ಗುರುತಿಸಿದರು. ಇವರೇ ನಂತರ ರಾಜರ್ಶಿ ಜನಕಾನಂದ ಎಂದು ಪ್ರಸಿದ್ಧರಾದ ಅವರ ಪ್ರೀತಿಯ ಶಿಷ್ಯರಾಗಿದ್ದರು.
ಈ ಸಮಯಕ್ಕೆ, ಸಾಲ ನೀಡಿದವರು ಕಂತಿನ ದಿನಾಂಕವನ್ನು ಉದಾರವಾಗಿ ವಿಸ್ತರಿಸಿದ್ದರೂ, ಗುರೂಜಿಯವರು ಇನ್ನೂ ಸಾಲದ ಪಾವತಿಗೆ ದಾರಿ ಕಂಡುಕೊಂಡಿರಲಿಲ್ಲ. ತಮ್ಮ ಔದಾರ್ಯ ಮತ್ತು ಭಕ್ತಿಯಿಂದ, ರಾಜರ್ಶಿ ಜನಕಾನಂದರು ಮಾಸ್ಟರ್‌ರವರಿಗೆ ಕೇವಲ ಆ ಒಂದು ಕಂತಿನ ಹಣವನ್ನು ಮಾತ್ರ ನೀಡಲಿಲ್ಲ, ಆದರೆ ಮೌಂಟ್ ವಾಷಿಂಗ್‌ಟನ್ ಆಸ್ತಿಯ ಇಡೀ ಸಾಲವನ್ನೇ ತೀರಿಸಿಬಿಟ್ಟರು. ಮಾಸ್ಟರ್‌ರವರು ಹಿಂದಿನ ಆ ಪ್ರಲೋಭನೆಯನ್ನು ವಿರೋಧಿಸಿ, ತನ್ನ ಸಿದ್ಧಾಂತಗಳನ್ನು ಕಡಿಮೆ ಮಾಡದ ಕಾರಣ, ಕ್ರಿಸ್ತನು ಅರಣ್ಯದಲ್ಲಿ ತನ್ನ ಪ್ರಲೋಭನೆಯನ್ನು ವಿರೋಧಿಸಿದಂತೆಯೇ, ದಿವ್ಯ ಮಾತೆಯು ಅವರಿಗೆ ಬೇಕಾದ ಎಲ್ಲವನ್ನೂ ಒದಗಿಸಿಕೊಟ್ಟಳು. ಅದೂ ಸಹ ಇನ್ನೂ ಹೆಚ್ಚಿನ ರೀತಿಯಲ್ಲಿ ಅವರಿಗೆ ದಯಪಾಲಿಸಿದಳು.
ಸಾಲಪತ್ರವು ಮಾಸ್ಟರ್‌ರವರ ಕೈಗೆ ಬಂದಾಗ ನಮಗೆ ಎಷ್ಟು ಸಂತೋಷವಾಯಿತು! ನಾವು ‘ಟೆಂಪಲ್ ಆಫ್ ಲೀವ್ಸ್’ ಬಳಿಯಲ್ಲಿ ಬೆಂಕಿ ಹಚ್ಚಿ, ಆ ಪತ್ರವನ್ನು ಜ್ವಾಲೆಗೆ ಅರ್ಪಿಸಿದೆವು. ಅತ್ಯಂತ ಕ್ರಿಯಾಶೀಲ ಮನೋಭಾವದವರಾದ ಮಾಸ್ಟರ್‌ರವರು ಅಡುಗೆಮನೆಯಿಂದ ಸಾಕಷ್ಟು ಆಲೂಗಡ್ಡೆಗಳನ್ನು ತಂದು, ಅವುಗಳನ್ನು ಬೆಂಕಿಯ ಕೆಂಡಗಳ ಅಡಿಯಲ್ಲಿ ಇಟ್ಟರು. ನಂತರ ನಾವು ಬೆಂಕಿಯ ಸುತ್ತ ಕುಳಿತು, ರುಚಿಯಾದ ಬೇಯಿಸಿದ ಆಲೂಗಡ್ಡೆಗಳನ್ನು ಆಸ್ವಾದಿಸಿದೆವು.
ಅಸಂಖ್ಯಾತ ಅನ್ವೇಷಕರಿಗೆ ಒಂದು ಮಂದಿರ ಮತ್ತು ಆಧ್ಯಾತ್ಮಿಕ ನೆಲೆಯಾಗಿದೆ
ನಾನು ಗುರೂಜಿಯವರ ಪ್ರೀತಿಯ ಮೌಂಟ್ ವಾಷಿಂಗ್‌ಟನ್ ಕೇಂದ್ರದತ್ತ ಹಿಂತಿರುಗಿ ನೋಡಿದಾಗ, ನನ್ನ ಹೃದಯದಲ್ಲಿ ಎಷ್ಟೊಂದು ನೆನಪುಗಳು ತುಂಬಿಬರುತ್ತವೆ! ಈ ಕೇಂದ್ರವನ್ನು ಸ್ಥಾಪಿಸಲು ಅವರು ತಮ್ಮ ಜೀವನದ ಬಹುಪಾಲನ್ನು ಅರ್ಪಿಸಿದರು. ಪ್ರಪಂಚದಾದ್ಯಂತ ಇರುವ ಅವರ ಅಸಂಖ್ಯಾತ ಅನುಯಾಯಿಗಳಿಗೆ ಇದು ಒಂದು ಪವಿತ್ರ ಕ್ಷೇತ್ರವಾಗಿ — ಒಂದು ಆಧ್ಯಾತ್ಮಿಕ ನೆಲೆಯಾಗಿ — ನಾವು ಇದನ್ನು ಸಂರಕ್ಷಿಸುವುದು ನಮ್ಮ ಪವಿತ್ರ ಸೌಭಾಗ್ಯವಾಗಿದೆ.
ಈ ಆವರಣಗಳಲ್ಲೆಲ್ಲಾ ಗುರೂಜಿಯವರು ಪರಮಾನಂದದಲ್ಲಿ ಧ್ಯಾನ ಮಾಡುತ್ತಿದ್ದರು, ಆಗಾಗ ದೈವೀ ಮಾತೆ, ಅಥವಾ ನಮ್ಮ ಮಹಾನ್ ಗುರುಗಳು, ಅಥವಾ ಇತರ ಸಂತರು ಅವರಿಗೆ ದರ್ಶನ ನೀಡಿ ಆಶೀರ್ವದಿಸುತ್ತಿದ್ದರು. ಮೌಂಟ್ ವಾಷಿಂಗ್ಟನ್ ಚಾಪೆಲ್‌ನಲ್ಲಿ, ಅಸ್ಸಿಸಿಯ ಸಂತ ಫ್ರಾನ್ಸಿಸ್ ಅವರ ದರ್ಶನವು ಅವರಿಗೆ “ದೇವರೇ! ದೇವರೇ! ದೇವರೇ!” ಎಂಬ ಕವಿತೆಯನ್ನು ರಚಿಸಲು ಸ್ಫೂರ್ತಿ ನೀಡಿತು.
ಇದೇ ಸ್ಥಳದಲ್ಲಿ, ಪ್ರತಿ ವರ್ಷ ಕ್ರಿಸ್‌ಮಸ್ ಸಮಯದಲ್ಲಿ ಒಂದು ಪೂರ್ಣ ದಿನವನ್ನು ಕ್ರಿಸ್ತರೊಂದಿಗೆ ಆಳವಾದ ಮತ್ತು ದೀರ್ಘವಾದ ಸಂಸರ್ಗಕ್ಕಾಗಿ ಮೀಸಲಿಡುವ ಕಲ್ಪನೆಯನ್ನು ಸಹ ಅವರು ಪರಿಚಯಿಸಿದರು — ಇದು ಆಶ್ರಮದಲ್ಲಿ ನನ್ನ ಮೊದಲ ಕ್ರಿಸ್‌ಮಸ್ ಆದ 1931 ರಲ್ಲಿ ಪ್ರಾರಂಭವಾಯಿತು — ಈ ಆಚರಣೆಯು ಮೌಂಟ್ ವಾಷಿಂಗ್ಟನ್‌ನಿಂದ ಪ್ರಪಂಚದಾದ್ಯಂತ ಹರಡುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದರು, ಮತ್ತು ವಾಸ್ತವವಾಗಿ ಹಾಗೆಯೇ ಆಗಿದೆ.
ಇತರ ಸಮಯದಲ್ಲಿ, ಅವರು ನಮ್ಮನ್ನು ದೀರ್ಘವಾದ ಆನಂದಮಯ ಭಕ್ತಿಗೀತೆಗಳ ಪಠಣದಲ್ಲಿ ಮುನ್ನಡೆಸುತ್ತಿದ್ದರು, ಈ ಸಮಯದಲ್ಲಿ ಅವರು ದೇವರಿಗಾಗಿ ರಚಿಸಿದ ಕೆಲವು ಹೊಸ ಹಾಡುಗಳನ್ನು ಮೊದಲು ಕೇಳುವ ಸೌಭಾಗ್ಯ ನಮಗೆ ಕೆಲವೊಮ್ಮೆ ಸಿಗುತ್ತಿತ್ತು.
ಪೂರ್ವ ಮತ್ತು ಪಶ್ಚಿಮದಲ್ಲಿ ನಾನು ಭೇಟಿ ನೀಡಿರುವ ಎಲ್ಲಾ ತೀರ್ಥಯಾತ್ರಾ ಸ್ಥಳಗಳಲ್ಲಿಯೂ, ಅವರು ಇಲ್ಲಿ ಬಿಟ್ಟುಹೋದ ದೈವೀ ಸ್ಪಂದನೆಗಳು ನಿಜವಾಗಿಯೂ ಅಪರೂಪದವು. ನಾನು ಈ ಆವರಣದೊಳಗೆ ಮೊದಲ ಬಾರಿಗೆ ಕಾಲಿಟ್ಟ ದಿನದಿಂದ ಇಂದಿನವರೆಗೆ, ಪ್ರತಿ ಸಲ ದ್ವಾರಗಳ ಮೂಲಕ ಪ್ರವೇಶಿಸುವಾಗಲೂ ಮಹತ್ತರವಾದ ಆನಂದದ ರೋಮಾಂಚನವನ್ನು ಅನುಭವಿಸದೆ ಇರುವುದಿಲ್ಲ.
ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್ ಅಂತರರಾಷ್ಟ್ರೀಯ ಮುಖ್ಯ ಕಚೇರಿಯ ವಾಸ್ತವ ಪ್ರವಾಸವನ್ನು ಎಸ್‌ಆರ್‌ಎಫ್ ಜಾಲತಾಣದಲ್ಲಿ ವೀಕ್ಷಿಸಲು ನಾವು ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ. ಪರಮಹಂಸ ಯೋಗಾನಂದರು ಕ್ರಿಯಾ ಯೋಗದ ಬೋಧನೆಗಳನ್ನು ವಿಶ್ವದಾದ್ಯಂತ ಪ್ರಸಾರ ಮಾಡಲು ಸ್ಥಾಪಿಸಿದ ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್‌ನ ಶತಮಾನೋತ್ಸವದ ಸಂದರ್ಭದಲ್ಲಿ, ಈ “ವಾಸ್ತವ ತೀರ್ಥಯಾತ್ರೆ” ಯನ್ನು 2020ರಲ್ಲಿ ಸೃಷ್ಟಿಸಲಾಯಿತು.



















