ಕೆಳಗಿನದು, 1955ರಿಂದ ಅವರು ಸ್ವರ್ಗಸ್ಥರಾಗುವವರೆಗೂ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್ಪಿನ ಮೂರನೇ ಅಧ್ಯಕ್ಷರು ಹಾಗೂ ಸಂಘಮಾತಾ ಆಗಿದ್ದ ಶ್ರೀ ದಯಾ ಮಾತಾರವರ ಸಂದೇಶ. ದಯಾ ಮಾತಾರವರು 17 ವಯಸ್ಸಿನವರಾಗಿದ್ದಾಗ, 1931ರಲ್ಲಿ ಪರಮಹಂಸ ಯೋಗಾನಂದರ ಆಶ್ರಮವನ್ನು ಪ್ರವೇಶಿಸಿದರು. ಈ ಸಂದೇಶವು 1984ರ ಯೋಗದಾ ಸತ್ಸಂಗದ ನಿಯತಕಾಲಿಕೆಯಲ್ಲಿ ಮೊದಲು “ಎ ಲೆಟರ್ ಫ್ರಮ್ ಶ್ರೀ ದಯಾ ಮಾತಾ” ಎಂದು ಪ್ರಕಟವಾಯಿತು; ಇಂತಹ ಸಂದೇಶಗಳು ತಮ್ಮ ಪ್ರೋತ್ಸಾಹ ಮತ್ತು ಯುಕ್ತಾಯುಕ್ತ ಸಲಹೆಗಳಿಂದಾಗಿ ದಶಕಗಳಿಂದ ನಿಯತಕಾಲಿಕೆಯ ಓದುಗರ ಪ್ರೀತಿಗೆ ಪಾತ್ರವಾಗಿವೆ.
ಬಹಳ ಹಿಂದೆ, ಪರಮಹಂಸ ಯೋಗಾನಂದರು ನನ್ನ ಪ್ರಜ್ಞೆಯ ಮೇಲೆ ಈ ಬುದ್ಧಿವಾದದ ಛಾಪನ್ನು ಒತ್ತಿದರು: “ಎಂದೂ ಎದೆಗುಂದದಿರು.” ಕಾಲಾಂತರದಿಂದ ಇದು ಮಹಾನ್ ಶಕ್ತಿಯ ಮೂಲವಾಗಿದೆ. ಇದು ಆಧ್ಯಾತ್ಮಿಕ ಯಶಸ್ಸಿನ ಬಹಳ ಮುಖ್ಯವಾದ ರಹಸ್ಯವಾಗಿದೆ.
ಎದೆಗುಂದಿಸುವಿಕೆಯು, ಮಾಯೆಯು ಭಕ್ತನ ಮುಂದುವರಿಕೆಯನ್ನು ಪ್ರತಿಬಂಧಿಸುವ ಬಹಳ ನೆಚ್ಚಿನ ಸಾಧನಗಳಲ್ಲೊಂದಾಗಿದೆ. ಇದು ನಾವು ಯಶಸ್ವಿಯಾಗುವವರೆಗೂ ಪಟ್ಟು ಹಿಡಿದು ಮುಂದುವರಿಯುವುದನ್ನು ದುರ್ಬಲಗೊಳಿಸಿ ಒಂದು ಮಹತ್ತರ ಶ್ರಮ ಹಾಕುವ ನಮ್ಮ ಇಚ್ಛೆಯನ್ನು ಕುಂಠಿತಗೊಳಿಸುತ್ತದೆ. ನಮ್ಮ ಗುರಿಯೇ ಅತ್ಯಂತ ಹೆಚ್ಚಿನದಾದ್ದರಿಂದ – ಭಗವಂತನೊಡನೆಯ ಸಂಸರ್ಗ – ನಾವು ತಿಳಿಯಬೇಕಾದದ್ದೇನೆಂದರೆ, ಇತಿಮಿತಿಗಳನ್ನು ನಾವು ಜಯಿಸಬೇಕು. ನಮ್ಮ ನ್ಯೂನತೆಗಳ ಪುನರಾವರ್ತಿತ ಅಭಿವ್ಯಕ್ತಿಗಳು ಕೂಡ ನಮ್ಮ ಉತ್ಸಾಹವನ್ನು ನಿರುತ್ಸಾಹಗೊಳಿಸಲು ನಾವು ಬಿಡಬಾರದು.
ಎದೆಗುಂದಿಸುವಿಕೆಯ ಭಾವನೆಗಳು ಮತ್ತು ದುರ್ಬಲತೆಯ ಚಿಂತೆಗಳು, ನಮ್ಮ ಅಭಿವೃದ್ಧಿಯನ್ನು ಕುಂಠಿತಗೊಳಿಸುವ ಮಾಯೆಯ ಭ್ರಮಾತ್ಮಕ ಸೂಚನೆಗಳು. ನಾವು ಅವನ್ನು ಕಡೆಗಣಿಸಿ ಧೈರ್ಯ ಮತ್ತು ವಿಶ್ವಾಸದಿಂದ ಮುಂದುವರಿದರೆ, ಆಧ್ಯಾತ್ಮಿಕವಾಗಿ ನಾವು ಯಶಸ್ವಿಯಾಗೇ ಆಗುತ್ತೇವೆ. ಅದೇ ಪರಮಹಂಸಜಿಯವರ ಆದರ್ಶ. ನಂತರ, ಅವರು ಹೇಳಿದ ಹಾಗೆ, “ಅಂಧಕಾರವು ಅದು ಎಂದೂ ಇರಲಿಲ್ಲವೇನೋ ಎಂಬಂತೆ ಮರೆಯಾಗುತ್ತದೆ.”
ಒಬ್ಬ ಯುವ ಭಕ್ತಳಾಗಿ, ಗುರುದೇವರು ಇಲ್ಲದಿದ್ದಾಗ ಒಮ್ಮೆ ನಾನು ಸ್ವಲ್ಪ ಸಮಯದ ವರೆಗೆ ಗಾಢವಾದ ನಿರುತ್ಸಾಹದಲ್ಲಿದ್ದೆ. ಅವರು ಬಂದ ಮೇಲೆ, ಧ್ಯಾನ ಮಾಡುವಾಗ, ಅವರಿಗೆ ಒಂದು ದರ್ಶನವಾಯಿತು: ಮೊದಲು ಅವರು ನನ್ನ ಹೆಣಗಾಟದ ಹಿಂದಿರುವ ನಕಾರಾತ್ಮಕ ಶಕ್ತಿಗಳನ್ನು ಕಂಡರು, ನಂತರ ಸ್ವಯಂ ದಿವ್ಯ ಮಾತೆಯೇ ನನ್ನನ್ನು ಬೆಳಕಿನ ಒಂದು ಪ್ರಭಾವಲಯದಿಂದ ಸುತ್ತುವರಿದಿರುವುದನ್ನು ಕಂಡರು.
ಪ್ರತಿಯೊಂದು ಕಷ್ಟದಲ್ಲೂ, ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದು ಆಯ್ಕೆಯಿರುತ್ತದೆ; ಉತ್ಸಾಹ ಕಳೆದುಕೊಂಡು ಮಾಯೆಗೆ ಶರಣಾಗುವುದು; ಅಥವಾ ಅವಳ ಶಕ್ತಿ ಮತ್ತು ಅನುಗ್ರಹವನ್ನು ನಮಗೆ ಕರುಣಿಸಿ, ನಮ್ಮ ಭ್ರಮೆಯನ್ನು ದೂರಮಾಡಲು ನಮಗೆ ಸಹಾಯ ಮಾಡಲು ದಿವ್ಯ ಮಾತೆಯು ಸದಾ ನಮ್ಮ ಬಳಿಯೇ ಇದ್ದಾಳೆ ಎಂದು ತಿಳಿದು ತುಂಬು ವಿಶ್ವಾಸದಿಂದ ಮುಂದುವರೆಯುವುದು.
ಆಧ್ಯಾತ್ಮಿಕ ಪಥದಲ್ಲಿ ಸಾಮಾನ್ಯವಾಗಿ ನಾವು ಮೂರು ಹೆಜ್ಜೆಗಳನ್ನು ಮುಂದಿಟ್ಟು, ಎರಡು ಹೆಜ್ಜೆ ಹಿಂದಕ್ಕೆ ಬರುತ್ತಿದ್ದೇವೆ ಎಂಬಂತೆ ಕಾಣಬಹುದು. ಆದರೆ ನಾವು ವಾಸ್ತವಿಕ ಮನೋವೃತ್ತಿಯವರಾಗಿದ್ದಲ್ಲಿ, ಇದು ನಮ್ಮನ್ನು ನಿರುತ್ಸಾಹಗೊಳಿಸಲು ಬಿಡುವುದಿಲ್ಲ, ಅಥವಾ ನಮ್ಮ ಹಿಂದಿನ ತಪ್ಪುಗಳ ಮೇಲೆ ಕೊರಗುತ್ತಾ ಕಾಲ ಕಳೆಯುವುದಿಲ್ಲ.
ಪರಮಹಂಸಜಿ ನಮ್ಮ ತಪ್ಪುಗಳಿಂದ ಕಲಿತುಕೊಳ್ಳಲು ನಮಗೆ ಕಲಿಸಿದರು, ಬದಲಾಗಲು ದೃಢನಿರ್ಧಾರ ಮಾಡಿದ ನಂತರ ಅವುಗಳನ್ನು ಮರೆಯುವಂತೆ. ನಾವು ಮುಗ್ಗರಿಸಿದಾಗ ಭಗವಂತ ನಮ್ಮನ್ನು ನಿಂದಿಸುವುದಿಲ್ಲ. ಆದ್ದರಿಂದ ಅನಗತ್ಯವಾಗಿ ನಮ್ಮನ್ನು ನಾವು ಬಯ್ದುಕೊಳ್ಳಬಾರದು.
ಬದಲಾಗಿ, ಭಗವಂತನನ್ನು ಹೆಚ್ಚು ಪ್ರೀತಿಸಿ. ಅವನಲ್ಲಿ ಎಷ್ಟು ಪ್ರೀತಿಯಿಂದಿರಬೇಕೆಂದರೆ, ನಿಮ್ಮ ತಪ್ಪುಗಳು ನಿಮ್ಮನ್ನು ಬೆದರಿಸದಂತೆ, ಅವನ ಬಳಿಗೆ ಓಡುವುದರಿಂದ ಅವು ನಿಮ್ಮನ್ನು ತಡೆಹಿಡಿಯದಂತೆ.
ಅವನು ಸಂಪೂರ್ಣ ದಯಾಮಯನಾಗಿದ್ದಾನೆ; ಮತ್ತು ಅವನ ಪ್ರೀತಿಯಲ್ಲಿ ನಿತ್ಯ ಸಂತೃಪ್ತಿಯನ್ನು ನೀವು ಪಡೆಯುವಂತೆ ನೋಡಲು ಅವನಿಗಿಂತ ಹೆಚ್ಚಾಗಿ ತವಕಿಸುತ್ತಿರುವಂಥವರು ಬೇರೆ ಯಾರೂ ಇಲ್ಲ. ಧ್ಯಾನ ಮಾಡುತ್ತಾ ಮತ್ತು ಎಡೆಬಿಡದ ಭಕ್ತಿಯಿಂದ ಅವನನ್ನು ಅರಸುತ್ತಾ ದೃಢ ವಿಶ್ವಾಸದಿಂದ ಅವನ ಬಳಿ ಹೋಗಿ, ಆಗ ನೀವು ಅವನನ್ನು ಅರಿಯುತ್ತೀರಿ.