ಯೋಗಿಯ ಆತ್ಮಕಥೆಯ 75ನೇ ವರ್ಷದ ಸಂಭ್ರಮಾಚರಣೆಯನ್ನು ಆಚರಿಸಲಾಗುತ್ತಿದೆ

29 ಅಕ್ಟೋಬರ್, 2021

ಲಕ್ಷಾಂತರ ಜನರ ಬದುಕನ್ನು ಬದಲಿಸಿದ ಪುಸ್ತಕ

AY-English-new-with-75y-logo-Kannada

ನಾನು ಮನೆಯಲ್ಲಿ ಯಾವಾಗಲೂ ಯೋಗಿಯ ಆತ್ಮಕಥೆಯನ್ನು ದೊಡ್ಡ ಪ್ರಮಾಣದಲ್ಲಿ ಇಟ್ಟುಕೊಂಡಿರುತ್ತೇನೆ ಮತ್ತು ಅದನ್ನು ನಿರಂತರವಾಗಿ ಜನರಿಗೆ ನೀಡುತ್ತಿರುತ್ತೇನೆ. ಜನರಿಗೆ ‘ಮರುಪೂರಣ’ ಬೇಕಾದಾಗ, ಇದನ್ನು ಓದಿ ಎಂದು ನಾನು ಹೇಳುತ್ತೇನೆ, ಏಕೆಂದರೆ ಇದು ಪ್ರತಿಯೊಂದು ಧರ್ಮದ ಹೃದಯವನ್ನು ಸ್ಪರ್ಶಿಸುತ್ತದೆ.

— ಜಾರ್ಜ್ ಹ್ಯಾರಿಸನ್ (ಬೀಟಲ್ಸ್ ನ ದಿವಂಗತ ಮಾಜಿ ಸದಸ್ಯ)

ಯೋಗಿಯ ಆತ್ಮಕಥೆಯು ನಿಮ್ಮ ಜೀವನವನ್ನು ಹೇಗೆ ಬದಲಾಯಿಸಿತು?

ನಿಮ್ಮ ಕಥೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ!

ಒಂದು ದಿನ, ಪರಮಹಂಸ ಯೋಗಾನಂದರು ತಮ್ಮ ಆತ್ಮಕಥೆಯನ್ನು ಬರೆಯುತ್ತಿದ್ದಾಗ, “ನಾನು ಈ ಜಗತ್ತನ್ನು ತೊರೆದಾಗ, ಈ ಪುಸ್ತಕವು ಲಕ್ಷಾಂತರ ಜನರ ಜೀವನವನ್ನು ಬದಲಾಯಿಸುತ್ತದೆ” ಎಂದು ಸೌಮ್ಯವಾಗಿ ತಮ್ಮೊಂದಿಗಿದ್ದವರಿಗೆ ಹೇಳಿದರು. ಆಧ್ಯಾತ್ಮಿಕ ಶ್ರೇಷ್ಠ ಗ್ರಂಥ ಎಂದು ವ್ಯಾಪಕವಾಗಿ ಹೆಗ್ಗಳಿಕೆಗೆ ಪಾತ್ರವಾದ ಯೋಗಿಯ ಆತ್ಮಕಥೆ ಯ ಪ್ರಭಾವವು ಎಪ್ಪತ್ತೈದು ವರ್ಷಗಳ ಹಿಂದೆ ಪ್ರಕಟವಾದಾಗಿನಿಂದ ನಿರಂತರವಾಗಿ ಹರಡುತ್ತಿದೆ, ಇದು ವಿಶ್ವಾದ್ಯಂತ ಓದುಗರ ಜೀವನವನ್ನು ಪ್ರೇರೇಪಿಸುತ್ತಿದೆ ಮತ್ತು ಪರಿವರ್ತಿಸುತ್ತಿದೆ.

ಯೋಗಾನಂದಜಿ ಅವರ ಆತ್ಮಕಥೆಯು ಓದುಗರನ್ನು ಬಹುಮುಖಿ ಪ್ರಯಾಣಕ್ಕೆ ಕರೆದೊಯ್ಯುತ್ತದೆ. ಲೇಖಕರ ವೈಯಕ್ತಿಕ ಜೀವನ ಮತ್ತು ಆಧ್ಯಾತ್ಮಿಕ ಅನ್ವೇಷಣೆಯ ಆಳವಾದ ಹೃದಯಸ್ಪರ್ಶಿ ಒಳನೋಟಗಳಿಂದ ಹಿಡಿದು, ಅನೇಕ ಸಂತರು ಮತ್ತು ಯೋಗಿಗಳ (ಪ್ರಸಿದ್ಧ ಮತ್ತು ಅಜ್ಞಾತ) ಆಕರ್ಷಕ ಭಾವಚಿತ್ರಗಳಿಂದ ಹಿಡಿದು ಭಾರತದ ಆಧ್ಯಾತ್ಮಿಕತೆಯ ರಹಸ್ಯ ಅಂಶಗಳ ಆಳವಾದ ವಿವರಣೆಗಳಿಂದ ಯೋಗಿಯ ಆತ್ಮಕಥೆ ಯು ಅನೇಕರಲ್ಲಿ ತಮ್ಮೊಳಗಿರುವ ದೈವಿಕತೆಯನ್ನು ಅನುಭವಿಸುವ ಆಳವಾದ ಬಯಕೆಯನ್ನು ಹುಟ್ಟುಹಾಕಿದೆ.

ಸ್ಫೂರ್ತಿಯ ನಿರಂತರ ಮೂಲ

1946ರ ಚಳಿಗಾಲದಲ್ಲಿ ಯೋಗಿಯ ಆತ್ಮಕಥೆ ಯು ಮೊದಲ ಬಾರಿಗೆ ಪ್ರಕಟವಾದಾಗ, ಅದು ಓದುಗರು ಮತ್ತು ವಿಶ್ವಾದ್ಯಂತ ಪತ್ರಿಕೆಗಳಿಂದ ಪ್ರಶಂಸೆಯ ಸುರಿಮಳೆಯನ್ನು ಪಡೆಯಿತು.

ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್ ಹೀಗೆ ಬರೆದಿದೆ, “ಇಂಗ್ಲಿಷಿನಲ್ಲಿ ಅಥವಾ ಬೇರಿನ್ನಾವುದೇ ಭಾಷೆಯಲ್ಲಿ ಯೋಗವನ್ನು ಕುರಿತು ಇಂತಹ ನಿರೂಪಣೆಯನ್ನು ಇದುವರೆಗೆ ಬರೆಯಲಾಗಿಲ್ಲ,” ನ್ಯೂಸ್ ವೀಕ್ ವರದಿ ಮಾಡಿದೆ, “ಯೋಗಾನಂದರ ಪುಸ್ತಕವನ್ನು ಒಬ್ಬ ವ್ಯಕ್ತಿಯ ಆತ್ಮಕಥೆ ಎನ್ನುವುದಕ್ಕಿಂತ ಒಂದು ಆತ್ಮದ ಕಥೆ ಎಂದು ಹೇಳಬಹುದು….ಮನಸೂರೆಗೊಳ್ಳುವ ಹಾಗೂ ಸ್ಪಷ್ಟ ವ್ಯಾಖ್ಯಾನಗಳಿಂದ ಕೂಡಿದ ಅಧ್ಯಯನ.” ಮತ್ತು ದಿ ನ್ಯೂಯಾರ್ಕ್ ಟೈಮ್ಸ್ ಇದನ್ನು “ಅಪೂರ್ವ ಕಥನ” ಎಂದು ಬಣ್ಣಿಸಿದೆ.

ಅಂದಿನಿಂದಲೂ, ಈ ಗ್ರಂಥದ ವ್ಯಾಪಕ ಆಕರ್ಷಣೆ ಮತ್ತು ಜನಪ್ರಿಯತೆಯು ಹಾಗೇ ಉಳಿದುಕೊಂಡಿದೆ. 1999 ರಲ್ಲಿ, ಇದನ್ನು “ಶತಮಾನದ 100 ಅತ್ಯುತ್ತಮ ಆಧ್ಯಾತ್ಮಿಕ ಗ್ರಂಥಗಳಲ್ಲಿ” ಒಂದೆಂದು ಹೆಸರಿಸಲಾಯಿತು.

ಮತ್ತು ಇತ್ತೀಚೆಗೆ ಹಣಕಾಸು ಸುದ್ದಿವಾಹಿನಿ 24/7 ವಾಲ್ ಸ್ಟ್ರೀಟ್ ಒಂದು ವಿಶೇಷ ವರದಿಯಲ್ಲಿ ಯೋಗಿಯ ಆತ್ಮಕಥೆಯನ್ನು “20 ಸಾರ್ವಕಾಲಿಕ ಅತ್ಯಂತ ಜನಪ್ರಿಯ ಆತ್ಮಚರಿತ್ರೆ” ಗಳಲ್ಲಿ ಒಂದು ಎಂದು ಉಲ್ಲೇಖಿಸಿದೆ. ಹೆಲೆನ್ ಕೆಲ್ಲರ್ ಅವರ ದಿ ಸ್ಟೋರಿ ಆಫ್ ಮೈ ಲೈಫ್ ಮತ್ತು ನೆಲ್ಸನ್ ಮಂಡೇಲಾ ಅವರ ಲಾಂಗ್ ವಾಕ್ ಟು ಫ್ರೀಡಂನಂತಹ ಕೃತಿಗಳ ಜೊತೆಗೆ ಪ್ರದರ್ಶಿಸಲಾದ ಯೋಗಿಯ ಆತ್ಮಕಥೆ ಹಾಗೂ ಇತರ ಶೀರ್ಷಿಕೆಗಳ ಪಟ್ಟಿಯನ್ನು ಸುಮಾರು 900 ಆಯ್ದ ಸಂಗ್ರಹದಿಂದ ಆಯ್ಕೆ ಮಾಡಲಾಗಿತ್ತು.

“ಮಾನವ ಆತ್ಮದ ಶಕ್ತಿಯ ಆನಂದಕರ ದೃಢೀಕರಣ” ಎಂದು ಪರಿಗಣಿಸಲ್ಪಟ್ಟ (ವೆಸ್ಟ್ ಕೋಸ್ಟ್ ರಿವ್ಯೂ ಆಫ್ ಬುಕ್ಸ್) – ಧ್ಯಾನದ ಹೆಚ್ಚುತ್ತಿರುವ ಆಕರ್ಷಣೆ ಮತ್ತು ಬಾಹ್ಯ ಬದಲಾವಣೆಯ — ಹೆಚ್ಚಾಗಿ ಪ್ರಕ್ಷುಬ್ಧ ಬದಲಾವಣೆಯ ಹೊರತಾಗಿಯೂ ಆಧ್ಯಾತ್ಮಿಕ ಸಮತೋಲನ ಮತ್ತು ಆಂತರಿಕ ಶಾಂತಿಯನ್ನು ಕಂಡುಕೊಳ್ಳುವ ಆಸಕ್ತಿ ಇರುವವರಿಗೆ ಪರಮಹಂಸಜಿಯವರ ಜೀವನವನ್ನು ಪರಿವರ್ತಿಸುವ ಬೋಧನೆಗಳ ಸಾರ್ವಕಾಲಿಕ ಪ್ರಸ್ತುತತೆಯಿಂದಾಗಿ ಯೋಗಿಯ ಆತ್ಮಕಥೆಯ ಮೇಲಿನ ಆಸಕ್ತಿಯು ಇತ್ತೀಚಿನ ವರ್ಷಗಳಲ್ಲಿ ಸ್ಥಿರ ಏರಿಕೆಯನ್ನು ಅನುಭವಿಸಿದೆ.

ಹಲವು ವರ್ಷಗಳಿಂದ, ನೊಬೆಲ್ ಪ್ರಶಸ್ತಿ ವಿಜೇತ ಥಾಮಸ್ ಮಾನ್, ಆಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ (ಅವರ ಸ್ಮರಣಾರ್ಥ ಸೇವೆಗೆ ಹಾಜರಾಗುವ ಎಲ್ಲರಿಗೂ ಪುಸ್ತಕವನ್ನು ನೀಡಲು ವ್ಯವಸ್ಥೆ ಮಾಡಿದವರು), ಜನಪ್ರಿಯ ಸಂಗೀತಗಾರರಾದ ಜಾನ್ ಕೋಲ್ಟ್ರೇನ್ ಮತ್ತು ರವಿಶಂಕರ್, ಬೀಟಲ್ ಜಾರ್ಜ್ ಹ್ಯಾರಿಸನ್ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ವರ್ಗದ ಓದುಗರನ್ನು ಈ ಪುಸ್ತಕವು ಆಕರ್ಷಿಸಿದೆ.

ನಿನ್ನ ಜೀವನದಲ್ಲಿ ಯೋಗಿಯ ಆತ್ಮಕಥೆಯ ಮಹತ್ವವೇನು ಎಂಬುದನ್ನು ಹಂಚಿಕೊಳ್ಳುವುದು

ಶ್ರೀ ಪರಮಹಂಸ ಯೋಗಾನಂದರ ಆತ್ಮಚರಿತ್ರೆಯು ನನ್ನನ್ನು ಹಲವಾರು ರೀತಿಯಲ್ಲಿ ಆಶೀರ್ವದಿಸಿದೆ. ಅವರ ಜೀವನದ ಕಥೆಯು ನನಗೆ ಹೆಚ್ಚು ಹೆಚ್ಚು ಧ್ಯಾನ ಮಾಡಲು ಮತ್ತು ಸಮತೋಲಿತ ಆಧ್ಯಾತ್ಮಿಕ ಮತ್ತು ಭೌತಿಕ ಜೀವನವನ್ನು ನಡೆಸುವತ್ತ ಗಮನ ಹರಿಸಲು ಸ್ಫೂರ್ತಿ ನೀಡಿದೆ. ಅಲ್ಲದೆ, ದೇವರು ಎಂದರೇನು ಎಂಬುದರ ಬಗ್ಗೆಯೂ ನಾನು ಉತ್ತಮ ಒಳನೋಟವನ್ನು ಪಡೆದಿದ್ದೇನೆ …

– ಸಿ.ಎಂ., ಪುಣೆ

ಪರಮಹಂಸ ಯೋಗಾನಂದರ ಯೋಗಿಯ ಆತ್ಮಕಥೆಯ 75 ನೇ ವಾರ್ಷಿಕೋತ್ಸವದ ಸಂಸ್ಮರಣೆಯ ಅಂಗವಾಗಿ, ನಿಮ್ಮ ಜೀವನದ ಮೇಲೆ ಪುಸ್ತಕದ ಪ್ರಭಾವದ ಬಗ್ಗೆ ನಿಮ್ಮ ವೈಯಕ್ತಿಕ ನೆನಪುಗಳನ್ನು ಹಂಚಿಕೊಳ್ಳುವ ಮೂಲಕ ಪುಸ್ತಕದ ಶಾಶ್ವತ ಆಕರ್ಷಣೆಯನ್ನು ಆಚರಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.

ನಮ್ಮ ಜಾಲತಾಣಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಿಮ್ಮ ಕಥೆಗಳನ್ನು ಹಂಚಿಕೊಳ್ಳಲು ಮತ್ತು ಲಕ್ಷಾಂತರ ಇತರರಂತೆ ಯೋಗಿಯ ಆತ್ಮಕಥೆ ನಿಮ್ಮ ಜೀವನವನ್ನು ಹೇಗೆ ಬದಲಾಯಿಸಿತು ಎಂಬುದನ್ನು ತಿಳಿದುಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ! ಈ ಪುಸ್ತಕದೊಂದಿಗೆ ಸಂಬಂಧಪಟ್ಟ ನಿಮ್ಮ ಕಥೆಗಳನ್ನು ನೇರವಾಗಿ ನಿಮ್ಮ ಸ್ವಂತ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಹಂಚಿಕೊಳ್ಳಲು ನೀವು ಬಯಸಿದರೆ, ದಯವಿಟ್ಟು ಹಾಗೇ ಮಾಡಿ ಮತ್ತು ಫೇಸ್‌ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ ನಲ್ಲಿ @ಯೋಗಾನಂದವೈಎಸ್ಎಸ್ (@yoganandayss) ನಲ್ಲಿ ನಮ್ಮನ್ನು ಟ್ಯಾಗ್ ಮಾಡಿ.

ನಮ್ಮ ಜಾಲತಾಣದಲ್ಲಿರುವ ಯೋಗಿಯ ಆತ್ಮಕಥೆ ಪುಟಕ್ಕೆ ಭೇಟಿ ನೀಡಲೂ ಕೂಡ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

ಇದನ್ನು ಹಂಚಿಕೊಳ್ಳಿ