
ಸ್ಮೃತಿ ಮಂದಿರ ಸಮರ್ಪಣೆಯ ವಿಡಿಯೋ
ಈ ವರ್ಷವು ರಾಂಚಿಯ ಯೋಗದಾ ಸತ್ಸಂಗ ಶಾಖಾ ಆಶ್ರಮದಲ್ಲಿರುವ ಯೋಗಾನಂದ ಸ್ಮೃತಿ ಮಂದಿರದ ಸಮರ್ಪಣೆಯ 25ನೇ ವಾರ್ಷಿಕೋತ್ಸವದ ವರ್ಷವಾಗಿದೆ. ಈ ಮಂದಿರವು ಆಶ್ರಮದ ಪವಿತ್ರ ಸ್ಥಳದಲ್ಲಿ ನಿರ್ಮಿತವಾಗಿದೆ, ಅಲ್ಲಿ ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರಿಗೆ, ಸರಿಯಾಗಿ 100 ವರ್ಷಗಳ ಹಿಂದೆ, 1920ಲ್ಲಿ ಅಮೇರಿಕೆಗೆ ಹೋಗುವ ದಿವ್ಯ ದರ್ಶನವಾಯಿತು. ಯೋಗಿಯ ಆತ್ಮಕಥೆ ಪುಸ್ತಕದಲ್ಲಿ ಈ ದಿವ್ಯ ದರ್ಶನವನ್ನು ವಿವರಿಸುತ್ತ ಪರಮಹಂಸರು ಹೀಗೆ ಬರೆದಿದ್ದಾರೆ:
“ಅಮೆರಿಕ! ನಿಜವಾಗಿಯೂ ಈ ಜನರು ಅಮೆರಿಕನ್ನರು!” ನನ್ನ ಅಂತರ್ದೃಷ್ಟಿಗೆ ಗೋಚರವಾದ ಪಾಶ್ಚಾತ್ಯ ಮುಖಗಳ ದೃಶ್ಯಾವಳಿಯನ್ನು ಕಂಡಾಗ ನನ್ನಲ್ಲುದಿಸಿದ ಭಾವನೆ ಇದು.
ರಾಂಚೀ ಶಾಲೆಯ ಉಗ್ರಾಣದಲ್ಲಿ ಧೂಳು ಹಿಡಿದ ಪೆಟ್ಟಿಗೆಗಳ ಹಿಂದೆ ಧ್ಯಾನಮಗ್ನನಾಗಿ ಕುಳಿತಿದ್ದೆ. ಚಿಕ್ಕ ಮಕ್ಕಳೊಡನೆ ಸದಾ ಕಾರ್ಯನಿರತವಾಗಿರುತ್ತಿದ್ದ ಆ ವರ್ಷಗಳಲ್ಲಿ ನನಗಾಗಿ ಪ್ರತ್ಯೇಕ ಸ್ಥಳವನ್ನು ಹುಡುಕಿಕೊಳ್ಳವುದೇ ಕಷ್ಟವಾಗಿತ್ತು!
ಅಂತರ್ದೃಷ್ಟಿಯ ದರ್ಶನ ಮುಂದುವರೆಯಿತು; ವಿಶಾಲ ಸಮೂಹ, ನನ್ನನ್ನೇ ಆಸಕ್ತಿಯಿಂದ ದಿಟ್ಟಿಸಿ ನೋಡುತ್ತಾ ನನ್ನ ಅಂತಃಪ್ರಜ್ಞೆಯ ರಂಗಭೂಮಿಯ ಮೇಲೆ ಪಾತ್ರಧಾರಿಗಳಂತೆ ಹಾದುಹೋದರು.
ಪರಮಹಂಸರು ಅಮೆರಿಕಕ್ಕೆ ನಿರ್ಗಮಿಸಿ, ತರುವಾಯ ಭಾರತದ ಪ್ರಾಚೀನ ವಿಜ್ಞಾನವಾದ ಕ್ರಿಯಾಯೋಗದ ವಿಶ್ವಾದ್ಯಂತ ಪ್ರಸರಣಕ್ಕಾಗಿ ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ಅನ್ನು ಸ್ಥಾಪಿಸಲು ಕಾರಣವಾದ ಒಂದು ಯುಗ ಪ್ರವರ್ತಕ ಘಳಿಗೆ ಅದಾಗಿತ್ತು. ಈ ದಿವ್ಯ ದರ್ಶನದ ವಿವರಗಳು ಮತ್ತು ನಂತರದ ಘಟನೆಗಳನ್ನು ಯೋಗಿಯ ಆತ್ಮಕಥೆ ಪುಸ್ತಕದಲ್ಲಿ ವಿವರಿಸಲಾಗಿದೆ. ಸ್ಮೃತಿ ಮಂದಿರದ ಸಮರ್ಪಣಾ ಕಾರ್ಯಕ್ರಮದಲ್ಲಿ ವೈಎಸ್‌ಎಸ್/ಎಸ್‌ಆರ್‌ಎಫ್‌ನ ಮೂರನೇ ಅಧ್ಯಕ್ಷರು ಮತ್ತು ಸಂಘಮಾತೆಯಾದ ಶ್ರೀ ಶ್ರೀ ದಯಮಾತಾ ಅವರು “ತನ್ನ ಸತ್ಯದ ಸಂದೇಶವಾಹಕನಾಗಿ ಗುರುದೇವರನ್ನು ಕಳುಹಿಸಿದ್ದಕ್ಕಾಗಿ ಆ ಭಗವಂತನಿಗೆ ಧನ್ಯವಾದಗಳು. ಗುರುದೇವರಿಗಿದ್ದ ಭಗವಂತನೆಡೆಗಿನ ಆಳವಾದ ಪ್ರೀತಿ ಮತ್ತು ಸಂಪೂರ್ಣವಾಗಿ ಪರರ ಒಳಿತಿಗಾಗಿ ಬದುಕಿದ ಅವರ ನಿಸ್ವಾರ್ಥ ಜೀವನದ ಸ್ಮರಣೆಯೊಂದಿಗೆ ಶ್ರೀ ಶ್ರೀ ಪರಮಹಂಸ ಯೋಗಾನಂದ ಸ್ಮೃತಿ ಮಂದಿರವನ್ನು ಸಮರ್ಪಿಸುತ್ತಿದ್ದೇವೆ,” ಎಂದು ಹೇಳಿದರು.
ವರ್ಷಗಳ ಹಿಂದೆ ಪರಮಹಂಸರಿಗೆ ದಿವ್ಯ ದರ್ಶನವಾದ ಸ್ಥಳವು ಒಂದು ಸಣ್ಣ ಉಗ್ರಾಣವಾಗಿತ್ತು. ಅದೇ ಸ್ಥಳದಲ್ಲಿ ನಿರ್ಮಿಸಲಾಗಿದ್ದ ಧ್ಯಾನಮಂದಿರವು ದೀರ್ಘಕಾಲದವರೆಗೆ ದೈನಂದಿನ ಧ್ಯಾನಗಳಿಗೆ ಪವಿತ್ರ ಸ್ಥಳವಾಗಿತ್ತು. ಹಲವಾರು ವರ್ಷಗಳ ಯೋಜನೆಯ ನಂತರ ಈ ಅಮೃತ ಶಿಲೆಯ ಕಟ್ಟಡವನ್ನು ನಿರ್ಮಿಸಲಾಯಿತು.

ದೀಪಾವಳಿಯ ಸಮಯದಲ್ಲಿ ನೂರಾರು ಮೇಣದ ಬತ್ತಿಗಳಿಂದ ಬೆಳಗುತ್ತಿರುವ ಸ್ಮೃತಿ ಮಂದಿರ.
ಈ ಮಂದಿರವು ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವುದು ಮಾತ್ರವಲ್ಲದೆ, ಭವ್ಯವಾದ ವಾಸ್ತುಶಿಲ್ಪದ ಸೌಂದರ್ಯವನ್ನು ಸಹ ಹೊಂದಿದೆ. ಆಶ್ರಮದ ಮಧ್ಯದಲ್ಲಿ ಒಂದು ಅನರ್ಘ್ಯ ರತ್ನದಂತೆ ನಿರ್ಮಿಸಲಾದ ದೋಷರಹಿತ ಶ್ವೇತವರ್ಣದ ಮೇರುಕೃತಿ ಮತ್ತು ಅದರ ಸಹಜ ಸರಳತೆಯಿಂದ ಪ್ರತಿಯೊಬ್ಬರೂ ಪ್ರಭಾವಿತರಾಗುತ್ತಾರೆ — ನೀಲಾಕಾಶದ ಹಿನ್ನೆಲೆಯಲ್ಲಿ ಅಮೃತ ಶಿಲೆಯ ಗುಮ್ಮಟ, ಹಸಿರು ಹುಲ್ಲುಹಾಸುಗಳಿಂದ ಮತ್ತು ಬಹು ವರ್ಣದ ಹೂವುಗಳಿಂದ ಸುತ್ತುವರೆದ ಮಂದಿರ. ದೀಪಾವಳಿಯ ಸಮಯದಲ್ಲಿ ಮಂದಿರವನ್ನು ನೂರಾರು ಮೇಣದ ಬತ್ತಿಗಳಿಂದ ಅಲಂಕರಿಸಿದಾಗ ಅದು ವಿಶಿಷ್ಟ ಭವ್ಯತೆಯನ್ನು ಪಡೆಯುತ್ತದೆ. ಪ್ರತಿಯೊಬ್ಬ ಸಂದರ್ಶಕನೂ ಈ ಮಂದಿರದ ಸೌಂದರ್ಯದ ವೈಭವವನ್ನು ನೋಡಿ ಆಶ್ಚರ್ಯಚಕಿತನಾಗುತ್ತಾನೆ ಮತ್ತು ಸುಲಭವಾಗಿ ಗ್ರಹಿಸಬಹುದಾದ ಶಾಂತಿಯನ್ನು ಅನುಭವಿಸುತ್ತಾನೆ; ಯಾರೂ ಅದರ ಹೃದಯಂಗಮ ಸೌಂದರ್ಯವನ್ನು ಗಮನಿಸದಿರುವುದಿಲ್ಲ. ಪೂಜಾಪೀಠದ ಮೇಲೆ ಇರುವ ಗುರೂಜಿಯ ಭವ್ಯವಾದ ನೈಜ ಗಾತ್ರದ ಚಿತ್ರವು ಜೀವಂತವಾಗಿ ಮತ್ತು ಪ್ರೀತಿಯಿಂದ ತುಂಬಿರುವಂತೆ ತೋರುತ್ತದೆ. ಅದು, “ಕೇವಲ ಪ್ರೀತಿ ಮಾತ್ರ ನನ್ನ ಸ್ಥಾನವನ್ನು ತುಂಬಲು ಸಾಧ್ಯ” ಎಂದು ಪ್ರವೇಶ ದ್ವಾರದ ಮೇಲೆ ಕೆತ್ತಲಾದ ಪದಗಳಿಗೆ ಜೀವಂತ ಸಾಕ್ಷಿಯಾಗಿ ಮಂದಿರವನ್ನು ಪ್ರವೇಶಿಸುವ ಭಕ್ತರ ಮೇಲೆ ನಿರಂತರವಾದ ಪ್ರೀತಿಯ ಸೆಲೆಯನ್ನು ವರ್ಷಿಸುತ್ತದೆ. ಈ ಮಾತುಗಳು ಪ್ರೇಮಾವತಾರರಿಂದ ಸಾಕಾರಗೊಂಡ ಆ ದಿವ್ಯ ಜೀವನವನ್ನು ನೆನಪಿಸುವ ಕೆಲಸ ಮಾಡುತ್ತವೆ, ಹಾಗೂ ನಾವೂ ನಮ್ಮ ಜೀವನದಲ್ಲಿ ಈ ಪ್ರೀತಿಯನ್ನು ವ್ಯಕ್ತಪಡಿಸಲು ಪ್ರೇರೇಪಿಸುತ್ತವೆ.
ಸಂಪೂರ್ಣ ಅಮೃತಶಿಲೆಯ ಅಷ್ಟಭುಜಾಕೃತಿಯ, ಈ ಸಾಂಪ್ರದಾಯಿಕ ಮಂದಿರವನ್ನು ಮಾರ್ಚ್ 22, 1995 ರಂದು ವೈಎಸ್‌ಎಸ್/ಎಸ್‌ಆರ್‌ಎಫ್‌ನ ಬಹು ಗೌರವಾನ್ವಿತ ಸನ್ಯಾಸಿಯಾದ ಮತ್ತು ಪರಮಹಂಸ ಯೋಗಾನಂದರ ನೇರ ಶಿಷ್ಯರಾದ ಸ್ವಾಮಿ ಆನಂದಮೊಯಿ ಗಿರಿಯವರು 1995 ರಲ್ಲಿ ಮಾರ್ಚ್ 20 ರಿಂದ 26 ರ ವರೆಗೆ ಒಂದು ವಾರ ನಡೆದ ಸ್ಮೃತಿ ಮಂದಿರದ ಸಮರ್ಪಣಾ ಸಂಗಮದಲ್ಲಿ ಲೋಕಾರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಸುಮಾರು 1,200 ಭಕ್ತರು ಭಾಗವಹಿಸಿದ್ದರು.


ಸಮರ್ಪಣೆಯ ದಿನದಂದು ಶ್ರೀ ದಯಾ ಮಾತಾಜಿಯವರು, “ನಮ್ಮ ಗುರುದೇವರ ಗೌರವಾರ್ಥವಾಗಿ ಮತ್ತು 75 ವರ್ಷಗಳ ಹಿಂದೆ ಈ ಸ್ಥಳದಲ್ಲಿ ಅವರ ದಿವ್ಯ ದರ್ಶನದಿಂದ ಚಾಲನೆಗೊಂಡ ವಿಶ್ವವ್ಯಾಪಿ ಧ್ಯೇಯವನ್ನು ಗೌರವಿಸುವ ಒಂದು ಸೂಕ್ತವಾದ ಸ್ಮಾರಕವನ್ನು ರಾಂಚಿಯಲ್ಲಿ ನಿರ್ಮಿಸುವುದು ನಮ್ಮ ಆಶಯವಾಗಿತ್ತು. ಇಂದು ಆ ಅಸೆ ಈಡೇರಿದೆ. ಇಂದು ನಾವು ಆ ಶ್ರೇಷ್ಠ ಗುರು, ಭಗವಂತನ ಮತ್ತು ಮನುಕುಲದ ಮಹಾನ್ ಪ್ರೇಮಿ ಶ್ರೀ ಶ್ರೀ ಪರಮಹಂಸ ಯೋಗಾನಂದರನ್ನು ಗೌರವಿಸುತ್ತಿದ್ದೇವೆ….ಈ ಸುಂದರವಾದ ಅಮೃತಶಿಲೆಯ ಮಂದಿರವು ಗುರುದೇವರು ಈ ಭೂಮಿಯ ಮೇಲೆ ನೆಲೆಸಿದ್ದರ ಮತ್ತು ಸಂಚರಿಸಿದ್ದರ ಸ್ಮರಣೆಯ ಗೋಚರ ಸ್ಮೃತಿಯಾಗಿ ಕಾರ್ಯನಿರ್ವಹಿಸಲಿ, ಅದರಿಂದ ಮಾನವ ಕುಲವು ಜೀವನದ ನಿಜವಾದ ಅರ್ಥವನ್ನು ಅರಿಯಲಿ, ಇದರಿಂದ ನಾವೂ ಕೂಡ ಭಗವಂತನನ್ನು ಪ್ರೀತಿಸುವಂತಾಗಲಿ, ಭಗವಂತನೊಂದಿಗೆ ಸಂಸರ್ಗ ನಡೆಸುವಂತಾಗಲಿ ಮತ್ತು ಅವರ ನಿತ್ಯ ನೂತನ ಪ್ರೀತಿ ಮತ್ತು ಆನಂದದ ಪ್ರಜ್ಞಾಪೂರ್ವಕ ಅರಿವಿನಲ್ಲಿ ಬಾಳುವಂತಾಗಲಿ. ಭಕ್ತರು ಪ್ರತ್ಯೇಕ ಪ್ರತ್ಯೇಕವಾಗಿ ಧ್ಯಾನದಲ್ಲಿ ಕುಳಿತು ಭಗವಂತ ಮತ್ತು ಗುರುದೇವರೊಂದಿಗೆ ಸಂಸರ್ಗ ನಡೆಸಲು ಈ ಶ್ರೀ ಶ್ರೀ ಪರಮಹಂಸ ಯೋಗಾನಂದ ಸ್ಮೃತಿಮಂದಿರವನ್ನು ಅರ್ಪಿಸುತ್ತಿದ್ದೇವೆ,” ಎಂದರು.
ಪವಿತ್ರ ಕ್ಷೇತ್ರಗಳು ಬಹಳ ಮಹತ್ವದ್ದಾಗಿರುತ್ತವೆ, ಅಂದರೆ ಆ ಸ್ಥಳಗಳು ಅಲ್ಲಿ ಧ್ಯಾನಾಸಕ್ತರಾಗಿ ವಾಸಿಸುತ್ತಿದ್ದ ಸಂತರ ಸ್ಪಂದನಗಳನ್ನು ಯುಗ-ಯುಗಗಳವರೆಗೆ ಉಳಿಸಿಕೊಂಡಿರುತ್ತವೆ. ಗುರೂಜಿ ಹೇಳಿದ್ದಾರೆ, “ನೀವು ತುಂಬಾ ಆಧ್ಯಾತ್ಮಿಕವಾದ ಸ್ಥಳಕ್ಕೆ ಭೇಟಿ ನೀಡಿದಾಗ, ಅಲ್ಲಿ ಉನ್ನತ ಆಧ್ಯಾತ್ಮಿಕ ಸ್ಪಂದನಗಳ ಪ್ರಭಾವಕ್ಕೆ ಒಳಗಾಗುತ್ತೀರಿ ಮತ್ತು ಅವು ನಿಮ್ಮನ್ನು ಉತ್ತಮರನ್ನಾಗಿ ಬದಲಾಯಿಸುತ್ತವೆ. ಮಹಾನ್ ಸಂತರು ವಾಸಿಸುತ್ತಿದ್ದ ಸ್ಥಳಗಳಿಗೆ ತೀರ್ಥಯಾತ್ರೆ ಮಾಡುವುದರ ಮಹತ್ವ ಅದು.” ಈ ಪವಿತ್ರ ಸ್ಥಳದಲ್ಲಿ ಗುರೂಜಿಯವರೊಂದಿಗೆ ವಿಶೇಷ ಸಂಸರ್ಗ ಸಾಧಿಸಿದ ದಿವ್ಯ ಅನುಭವಕ್ಕೆ ವರ್ಷಾನುಗಟ್ಟಲೆಯಿಂದ ಬರುತ್ತಿರುವ ಅಸಂಖ್ಯಾತ ಭಕ್ತರು ಸಾಕ್ಷಿಯಾಗಿದ್ದಾರೆ. ಒಬ್ಬರ ಗ್ರಹಣಶಕ್ತಿಯ ಮಟ್ಟಕ್ಕೆ ತಕ್ಕಂತೆ ಸ್ಮೃತಿ ಮಂದಿರವು ಪ್ರತಿ ಆತ್ಮವೂ ಬಯಸುವ ಮಾರ್ಗದರ್ಶನ ಮತ್ತು ಪ್ರೀತಿಯನ್ನು ನೀಡುತ್ತದೆ.

1995 ರಲ್ಲಿ ಮೊದಲ ಬಾರಿಗೆ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿದ ಭಕ್ತರ ಅಭಿಪ್ರಾಯ ಈ ಕೆಳಕಂಡಂತಿದೆ:
“ಹಲವು ವಷಗಳಿಂದ ತುಂಬಾ ಪರಿಚಿತವಾಗಿರುವ ಆಶ್ರಮವನ್ನು ಪ್ರವೇಶಿಸಿದ ನಮಗೆ, ಸುಂದರವಾದ ಅಮೃತಶಿಲೆಯ ಮಂದಿರವನ್ನು ನೋಡಿ ರೋಮಾಂಚನವಾಯಿತು. ಸ್ಮೃತಿಮಂದಿರವು ಒಂದು ವಾಸ್ತುಶಿಲ್ಪದ ಸುಂದರ ನಮೂನೆ. ಮಂದಿರದಲ್ಲಿರುವ ನಮ್ಮ ಗುರುದೇವರ ಸುಂದರ ಚಿತ್ರವು ಜೀವಂತವಾಗಿರುವಂತೆ ತೋರುತ್ತದೆ, ಅವರ ಪ್ರೀತಿಯ ನೋಟವು ಪವಿತ್ರ ಮಂದಿರವನ್ನು ಪ್ರವೇಶಿಸುವ ಭಕ್ತರ ಮೇಲೆ ನಿರಂತರ ಆಶೀರ್ವಾದವನ್ನು ವರ್ಷಿಸುತ್ತಿದೆ.”

“ಗುರೂಜಿ ನನ್ನ ಮುಂದೆ ಕುಳಿತು ನಾನು ಹೇಗೆ ಧ್ಯಾನ ಮಾಡುತ್ತಿದ್ದೇನೆಂದು ನೋಡುತ್ತಿರುವಂತಿದೆ.”

“ನಾವು ರಾಂಚಿಯನ್ನು ಮುಂಚೆಯೂ ನೋಡಿದ್ದೇವೆ, ಆದರೆ ಈ ಬಾರಿ ಅದು ವಿಭಿನ್ನವಾಗಿದೆ. ಮಧ್ಯಭಾಗದಲ್ಲಿ ಸುಂದರವಾದ ಅಮೃತಶಿಲೆಯ ನಿರ್ಮಾಣವಿದ್ದು, ಎಲ್ಲ ಕಡೆಗಳಲ್ಲಿ ಜಾಲರಿಯಂತಹ ಪರದೆಯಿದೆ; ನೀವು ಮೊದಲು ದೃಷ್ಟಿ ಹರಿಸಿದಾಗ ಒಂದು ದೊಡ್ಡ ಗುಮ್ಮಟ ಮತ್ತು ಸುತ್ತಮುತ್ತಲಿನ ಕಂಬಗಳು ಬಹಳ ಎದ್ದು ಕಾಣುತ್ತವೆ. ನಂತರ ಒಂದು ದೊಡ್ಡ ಭಾವಚಿತ್ರವಿದೆ — ಗುರೂಜಿ ನಿಮ್ಮನ್ನು ಸ್ವಾಗತಿಸಲು ಅದರಿಂದ ಹೊರಬರುತ್ತಿರುವಂತೆ ತೋರುತ್ತಿದೆ. ಮತ್ತು ಮಂದಿರದಲ್ಲಿನ ಸ್ಪಂದನಗಳು! ನಾನೇನು ಹೇಳಲಿ! ಗುರುದೇವರು ಸ್ವತಃ ಇಳಿದುಬಂದು ಅಲ್ಲಿ ನೆಲೆಸಿದಂತಿದೆ.”
ಹಲವು ವರ್ಷಗಳಿಂದ ರಾಂಚಿ ಆಶ್ರಮಕ್ಕೆ ಭೇಟಿ ನೀಡುತ್ತಿರುವ ಭಕ್ತರ ಅಭಿಪ್ರಾಯಗಳು:
“ನಾನು ಆಶ್ರಮದ ಆವರಣಕ್ಕೆ ಕಾಲಿಟ್ಟಕೂಡಲೇ, ನಾನು ಇಲ್ಲಿಗೇ ಸೇರಿದವನು ಎಂಬ ಭಾವನೆ ಮೂಡುತ್ತದೆ. ಸ್ಮೃತಿ ಮಂದಿರದ ಶಾಂತ ಸ್ಥಳದಲ್ಲಿ ನಾನು ಕುಳಿತಾಗ, ನನ್ನ ಗುರುಗಳು ತಮ್ಮ ತಾಯ್ನಾಡಿನ ಸೌಕರ್ಯವನ್ನು ತೊರೆದು, ಪಾಶ್ಚಿಮಾತ್ಯ ಜಗತ್ತನ್ನು ಎದುರಿಸಿ, ಈ ಬೋಧನೆಗಳನ್ನು ಜಗತ್ತಿಗೆ ಮತ್ತು ನನಗೆ ತಲುಪಿಸಿದ್ದಕ್ಕಾಗಿ ನಾನು ಕೃತಜ್ಞತಾ ಭಾವದಿಂದ ತುಂಬಿಹೋಗುತ್ತೇನೆ.”

“ಗುರುಗಳು ತಮ್ಮ ಅಭಿವೃದ್ಧಿ ಹೊಂದುತ್ತಿದ್ದ ಬಾಲಕರ ಶಾಲೆಯಿಂದಷ್ಟೇ ತೃಪ್ತರಾಗಿದ್ದರೆ ಹಾಗೂ ಆ ಉಗ್ರಾಣದಲ್ಲಿ ಆ ದಿವ್ಯ ದರ್ಶನವನ್ನು ಹೊಂದಿರದಿದ್ದರೆ, ಸಾವಿರಾರು ಭಕ್ತರು ಕ್ರಿಯಾ ಯೋಗದ ಪ್ರಯೋಜನಗಳನ್ನು ಆನಂದಿಸುತ್ತಿರುವ ಈ ದಿನವನ್ನು ನಾವು ನೋಡುತ್ತಿರಲಿಲ್ಲ.”

“ನಾನು ಸ್ಮೃತಿ ಮಂದಿರವನ್ನು ಪ್ರವೇಶಿಸಿದಾಗಲೆಲ್ಲಾ, ನನ್ನ ಎಲ್ಲಾ ಚಿಂತೆಗಳು ಮತ್ತು ಆತಂಕಗಳು ನನ್ನ ಅಸ್ತಿತ್ವದಿಂದ ನಿರ್ಗಮಿಸುತ್ತವೆ.”

“ಇಂತಹ ದೊಡ್ಡ ಸ್ಮರಣೀಯ ಸಂಸ್ಥೆಯನ್ನು ನಿರ್ಮಿಸಲು ಎಂತಹ ವಿನಮ್ರ ಸ್ಥಳ.”
