ಈ ಬ್ಲಾಗ್ 2015ರ ಯೋಗದಾ ಸತ್ಸಂಗ ಮ್ಯಾಗಜಿನ್‌ನಲ್ಲಿ ಪ್ರಕಟವಾದ ಸ್ವಾಮಿ ಚಿದಾನಂದ ಗಿರಿಯವರ “ಯಮ ಮತ್ತು ನಿಯಮ: ಆಂತರಿಕ ದೃಢತೆ ಮತ್ತು ಮುಕ್ತತೆಗಾಗಿ ʼಬದುಕುವುದು-ಹೇಗೆ’ ಕೌಶಲ್ಯಗಳು” ಉಪನ್ಯಾಸದಿಂದ ಆಯ್ದ ಭಾಗಗಳು. ಈ ಮ್ಯಾಗಜಿನ್‌ಗೆ ಚಂದಾದಾರರಾದವರು ಸಂಪೂರ್ಣ ಲಿಖಿತ ನಿರೂಪಣೆಯನ್ನು ಹಿಂದಿನ ಲೇಖನಗಳ ವಿಸ್ತೃತ ಆನ್‌ಲೈನ್ ಗ್ರಂಥಭಂಡಾರದಲ್ಲಿ ನೋಡಬಹುದು. ಸ್ವಾಮಿ ಚಿದಾನಂದಜಿ 2017ರಲ್ಲಿ ವೈಎಸ್‌ಎಸ್/ಎಸ್‌ಆರ್‌ಎಫ್‌ನ ಅಧ್ಯಕ್ಷರಾದರು.
ಯೋಗ ಸೂತ್ರಗಳಿಂದ ಯಮ ಮತ್ತು ನಿಯಮಗಳಿಗೆ ಆತ್ಮದ ಸ್ವಾಗತಾರ್ಹ ಪ್ರತಿಕ್ರಿಯೆ
ಮಹಾನ್ ಋಷಿ ಪತಂಜಲಿಯ ಯೋಗ ಸೂತ್ರಗಳಲ್ಲಿ, ಯಮ ಮತ್ತು ನಿಯಮದ ತತ್ತ್ವಗಳನ್ನು ಯೋಗದ ಆ ಪುರಾತನ ಗ್ರಂಥದಲ್ಲಿ ನಮೂದಿಸಲಾಗಿದೆ; ಅವು ನಮಗೆ ಭಾರತದ ಆಧ್ಯಾತ್ಮಿಕ ನಾಗರಿಕತೆಯ ಉನ್ನತ ಯುಗದಿಂದ ಬಂದಿವೆ.
ಯಮಗಳು ಹೀಗಿವೆ:
- ಅಹಿಂಸೆ (ನಿರುಪದ್ರವತೆ);
- ಸತ್ಯ (ಸತ್ಯಪರತೆ);
- ಅಸ್ತೇಯ (ಕಳ್ಳತನ ಮಾಡದಿರುವುದು);
- ಅಪರಿಗ್ರಹ (ಲೋಭರಾಹಿತ್ಯ, ಸಿರಿಸಂಪತ್ತಿನಿಂದ ಆವೇಶಗೊಳ್ಳದಿರುವುದು);
- ಮತ್ತು ಬ್ರಹ್ಮಚರ್ಯೆ (ಶರೀರದ ಸೃಷ್ಟಿಕಾರಕ ಶಕ್ತಿಯ ಮೇಲೆ ಪ್ರಭುತ್ವ).
- ಶೌಚ (ಶರೀರ ಮತ್ತು ಮನಸ್ಸಿನ ಪರಿಶುದ್ಧತೆ);
- ಸಂತೋಷ (ಎಲ್ಲ ಪರಿಸ್ಥಿತಿಗಳಲ್ಲೂ ಸಂತೃಪ್ತಿ, ಪ್ರಶಾಂತತೆ, ಸಮಚಿತ್ತತೆ);
- ತಪಸ್ (ಸ್ವ-ಶಿಸ್ತಿನ ಸಾಮರ್ಥ್ಯ);
- ಸ್ವಾಧ್ಯಾಯ (ಪವಿತ್ರ ಗ್ರಂಥಗಳ ಅಂತರಾರ್ಥದ ಅಧ್ಯಯನ);
- ಮತ್ತು ಕೊನೆಯದಾಗಿ, ಈಶ್ವರ-ಪ್ರಣಿಧಾನ (ಭಗವಂತ ಮತ್ತು ಗುರುವಿನೆಡೆಗೆ ಭಕ್ತಿ).
ಕೇವಲ ಆ ಗುಣಗಳನ್ನು ಆಲಿಸುವುದರಿಂದಲೇ ನಿಮ್ಮೊಳಗಾಗುವ ಪ್ರತಿಸ್ಪಂದನವನ್ನು ಗಮನಿಸಿ. ಆತ್ಮವು ನಮ್ಮಲ್ಲಿ ಜಾಗೃತವಾಗಿದ್ದುದೇ ಆದರೆ, ಪಿಸು ನುಡಿಯುವುದಿಲ್ಲವೇ: “ಹೌದು! ಅದೇ ನನಗೆ ಬೇಕಾಗಿರುವುದು. ಅದೇ ನಾನಾಗಿದ್ದೇನೆ!” ಆತ್ಮದ ಈ ಪ್ರತಿಸ್ಪಂದನದಿಂದಾಗಿಯೇ ನಾವು ಅಂತರ್ಬೋಧೆಯಿಂದ ಈ ನಿಯಮಗಳಲ್ಲಿ ಮಹತ್ತರ ಸಕಾರಾತ್ಮಕ ಮೌಲ್ಯವಿದೆ ಎಂಬುದನ್ನು ಅರಿಯುತ್ತೇವೆ.
ನಾವು ಅಸೀಮ ಶಕ್ತಿ, ಉದಾತ್ತ ಗುಣ ಮತ್ತು ಘನತೆ ಗಾಂಭೀರ್ಯದ ಜೀವಿಗಳಾಗಿದ್ದೇವೆ. ಈ ಪ್ರತಿಯೊಂದು ಆಧ್ಯಾತ್ಮಿಕ ನಿಯಮವೂ, ಆ ದಿವ್ಯ ಪ್ರಕೃತಿಯ ಒಂದು ನಿರ್ದಿಷ್ಟ ಅಂಶವನ್ನು ತೆರಯುವ ಒಂದು ದ್ವಾರವಾಗುತ್ತದೆ, ಭೌತ ಶರೀರ, ಅಹಂಕಾರ ಮತ್ತು ಲೌಕಿಕ ಪ್ರಪಂಚಕ್ಕೆ ನಾವು ಅಂಟಿಕೊಂಡಿರುವವರೆಗೂ ಆ ದಿವ್ಯ ಪ್ರಕೃತಿಯು ಮರೆಗುಳಿತನದ ರೂಪದಲ್ಲಿರುವ ಭ್ರಮೆಯಿಂದಾಗಿ ಸಾಮಾನ್ಯವಾಗಿ ಮರೆಯಾಗಿರುತ್ತದೆ.
ಆಧ್ಯಾತ್ಮಿಕ ನಿಯಮಗಳು ಸೀಮಿತಿಗೊಳಿಸುವುದಕ್ಕಾಗಿ ಇಲ್ಲ, ಬದಲಾಗಿ ಸಶಕ್ತಗೊಳಿಸಲು
ನಮ್ಮ ಗುರು ಪರಮಹಂಸ ಯೋಗಾನಂದರು ಇದನ್ನು ದಶಾನುಶಾಸನಗಳ ಕುರಿತು ಹೇಳಿದ್ದಾರೆ — ಅದು, ಮತ್ತೆ, ಈ ಸಾರ್ವತ್ರಿಕ ನಿಯಮಗಳನ್ನು ವ್ಯವಸ್ಥಿತವಾಗಿ ನಿರೂಪಿಸುವ ಇನ್ನೊಂದು ವಿಧಾನವಷ್ಟೆ:
“ದಶಾನುಶಾಸನಗಳನ್ನು ಹೆಚ್ಚು ಯೋಗ್ಯವಾಗಿ ಸಂತೋಷದ ಹತ್ತು ನಿತ್ಯ ನಿಯಮಗಳು ಎಂದು ಹೆಸರಿಸಬಹುದಾಗಿತ್ತು. ‘ದೈವಾನುಶಾಸನ’ ವೆಂಬ ಶಬ್ದ ಒಂದು ವಿಷಾದಕರ ಆಯ್ಕೆ, ಏಕೆಂದರೆ ಯಾರೂ ಆದೇಶಿಸಲ್ಪಡಲು ಇಷ್ಟಪಡುವುದಿಲ್ಲ. ನೀವು ಒಂದು ಮಗುವಿಗೆ ಒಂದು ಕೆಲಸವನ್ನು ಮಾಡಬೇಡ ಎಂದು ಹೇಳಿದಾಕ್ಷಣ, ಅದು ತಕ್ಷಣ ಅದನ್ನು ಮಾಡಲು ಬಯಸುತ್ತದೆ….ಆದರೂ ದಶಾನುಶಾಸನದ ಉಲ್ಲಂಘನೆ ಈ ಭೂಮಿಯ ಮೇಲಿನ ಎಲ್ಲ ಕಡುಸಂಕಷ್ಟದ ಮೂಲ ಕಾರಣವಾಗಿದೆ.”
ಆಧುನಿಕ, ಸಮೂಹ-ಮಾಧ್ಯಮ-ಪ್ರೇರಿತವಾದ ಪ್ರಪಂಚ ನಮ್ಮ ಮೇಲೆ ಹೇರುವ ಪರಿಸ್ಥಿತಿಯಿಂದಾಗಿ, ಬಹಳಷ್ಟು ಜನರು, ಅವರು ಪರಿಗಣಿಸುವ “ಹಳೆಯ-ಕಾಲದ” ನೈತಿಕತೆಯ ಬಗ್ಗೆ ಒಂದು ನಕಾರಾತ್ಮಕ ಮನೋಭಾವವನ್ನು ಹೊಂದಿದ್ದಾರೆ.
ಆದರೂ, ಆಧ್ಯಾತ್ಮಿಕ ಮಾರ್ಗದ ಅನೇಕ ವಿಷಯಗಳಲ್ಲಿ ನಿಜವಾಗಿರುವ ಹಾಗೆ, ನಮ್ಮ ಗುರುಗಳು ನೈತಿಕತೆ ಎಂದರೆ ಯಾವುದೆಲ್ಲದರ ಬಗ್ಗೆ ಎಂಬ ಅರಿವನ್ನು ಆಮೂಲಾಗ್ರವಾಗಿ ಬದಲಾಯಿಸಿದರು. ಅವರು ಹೇಳಿದರು, ಸಾರಭೂತವಾಗಿ, ನಮ್ಮ ದಿವ್ಯ ಸಂಪರ್ಕವನ್ನು ಉಳಿಸಿಕೊಂಡು, ನಾವು ನಿಜವಾಗಿಯೂ ಯಾರು — ದಿವ್ಯ ಜೀವಿಗಳು — ಎಂಬ ಆ ಸಂಪರ್ಕವನ್ನು ಉಳಿಸಿಕೊಂಡು ಭೂಮಿಯ ಮೇಲೆ ಜೀವಿಸುವ ರೀತಿಯೇ ನೈತಿಕತೆ.