ಯೋಗದಾ ಸತ್ಸಂಗ ಸಾಧನಾಲಯದ ಉದ್ಘಾಟನೆ – ರಾಜಮಂಡ್ರಿ

27 ಸೆಪ್ಟೆಂಬರ್‌, 2024

ಹೊಸ ಯೋಗದಾ ಸತ್ಸಂಗ ಸಾಧನಾಲಯದ ಉದ್ಘಾಟನೆಯು ಆಗಸ್ಟ್‌ 24, 2024ರಂದು ರಾಜಮಂಡ್ರಿ, ಆಂಧ್ರ ಪ್ರದೇಶದಲ್ಲಿ ನೆರವೇರಿತು. 1.35 ಎಕರೆ ವಿಸ್ತೀರ್ಣದ ಸಾಧನಾಲಯವು ಪವಿತ್ರ ಗೋದಾವರಿ ನದಿ ಒಂದು ಕಡೆ ಮತ್ತು ಅದರ ನೀರಾವರಿ ಕಾಲುವೆ ಇನ್ನೊಂದು ಕಡೆ ಇರುವ ಹರಿದ್ವರ್ಣ ನಡುಗಡ್ಡೆಯಲ್ಲಿ ಸ್ಥಿತವಾಗಿದೆ. (ಕೆಳಗೆ: ಡ್ರೋನ್‌ನಿಂದ ತೆಗೆದ ಚಿತ್ರದಲ್ಲಿ ನೀಲಿ ಬಣ್ಣದಲ್ಲಿ ಗುರುತು ಮಾಡಲಾದ ಆವರಣ, ಎರಡೂ ಬದಿಯಲ್ಲಿ ನದಿಯೊಂದಿಗೆ)  

ಉದ್ಘಾಟನೆಯ ದಿನ, ಆಗಸ್ಟ್‌ 24, 2024ರಂದು ಸ್ವಾಮಿ ಸ್ಮರಣಾನಂದ, ಸ್ವಾಮಿ ಪ್ರಜ್ಞಾನಂದ ಮತ್ತು ಸ್ವಾಮಿ ಶಂಕರಾನಂದರು ಪವಿತ್ರ ನೆಲವನ್ನು, ಭಕ್ತಾದಿಗಳ “ಜೈ ಗುರು” ಘೋಷಣೆಯೊಂದಿಗೆ ಹೂವಿನ ಹಾರ ಹಾಕಿದ ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರ ಫೋಟೋದೊಂದಿಗೆ ಪ್ರವೇಶಿಸಿದರು. 

ಗೋದಾವರಿ ನದಿ ಮತ್ತು ಗೋದಾವರಿ ನೀರಾವರಿ ಕಾಲುವೆಯ ಪಕ್ಕದಲ್ಲಿರುವ ನಡುಗಡ್ಡೆಯಲ್ಲಿ ಗಿಡ ಮರಗಳಿಂದ ತುಂಬಿರುವ 1.35 ಎಕರೆಯ ಜಾಗ
(ಎಡಕ್ಕೆ) 32 ಕೋಣೆಗಳುಳ್ಳು ಪುನರ್‌ನವೀಕರಣಗೊಂಡ ನಿವಾಸದ ಕಟ್ಟಡ, (ಮಧ್ಯದಲ್ಲಿ) ಪ್ರತ್ಯೇಕ ಕುಟೀರಗಳು ಮತ್ತು (ಬಲಕ್ಕೆ) ಮಲಗುವ ಪಡಸಾಲೆ

ಇದು ಮೂರು-ದಿನಗಳ ಕಾರ್ಯಕ್ರಮಕ್ಕೆ ನಾಂದಿಯಾಯಿತು. ಇದರಲ್ಲಿ ಸ್ಫೂರ್ತಿದಾಯಕ ಸತ್ಸಂಗಗಳು, ಪ್ರತಿದಿನ ಚೈತನ್ಯದಾಯಕ ವ್ಯಾಯಾಮಗಳು ಮತ್ತು ಧ್ಯಾನ, ವೈಎಸ್‌ಎಸ್‌ ಧ್ಯಾನ ತಂತ್ರಗಳ ಪುನರವಲೋಕನದ ತರಗತಿಗಳು, ಭಕ್ತಾದಿಗಳಿಗೆ ವೈಯಕ್ತಿಕ ಸಲಹೆ ಮತ್ತು ಭಾನುವಾರ ದಿವ್ಯ ಗೀತೆಗಳ ಗಾಯನದೊಂದಿಗಿನ ಆರು ಘಂಟೆಗಳ ಕಾಲದ ದೀರ್ಘಾವಧಿಯ ಧ್ಯಾನವೂ ಸೇರಿತ್ತು. ಜನ್ಮಾಷ್ಟಮಿಯ ಸಂಭ್ರಮಾಚರಣೆಯ ಕಾರ್ಯಕ್ರಮದೊಂದಿಗೆ ಆಗಸ್ಟ್‌ 26, 2024, ಸೋಮವಾರದಂದು ಕಾರ್ಯಕ್ರಮವು ಮುಕ್ತಾಯವಾಯಿತು. ಸುಮಾರು 450 ಭಕ್ತಾದಿಗಳು ನೋಂದಾಯಿಸಿಕೊಂಡಿದ್ದರು. ಒಟ್ಟು, ಸುಮಾರು 550 ಜನರು ಈ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. 

ಉದ್ಘಾಟನೆ: “ಜೈ ಗುರು” ಘೋಷಣೆಯೊಂದಿಗೆ ಗುರೂಜಿಯವರ ಚಿತ್ರ ಸಹಿತ ಆವರಣವನ್ನು ಪ್ರವೇಶಿಸುತ್ತಿರುವುದು.
ಸ್ವಾಮಿ ಸ್ಮರಣಾನಂದರು ಒಂದು ಸ್ಫೂರ್ತಿದಾಯಕ ಉಪನ್ಯಾಸವನ್ನು ನೀಡುತ್ತಿದ್ದಾರೆ

ಸಾಧಕರ ಸಮುದಾಯ

ರಾಜಮಂಡ್ರಿ ಸಾಧನಾಲಯದಲ್ಲಿ ಒಂದು ಸಾಧಕರ ಸಮುದಾಯವನ್ನು ರಚಿಸಲಾಗುತ್ತಿದೆ. ಸಮಯ ಸಮಯಕ್ಕೆ ಭೇಟಿ ನೀಡುವ ವೈಎಸ್‌ಎಸ್‌ ಸನ್ಯಾಸಿಗಳ ಮಾರ್ಗದರ್ಶನದಲ್ಲಿ ಸಾಧಕರು ಧ್ಯಾನ ಮಾಡುತ್ತಾರೆ ಮತ್ತು ಒಟ್ಟುಗೂಡಿ ಸೇವೆ ಸಲ್ಲಿಸುತ್ತಾರೆ ಮತ್ತು ಸ್ಥೂಲವಾಗಿ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಾರೆ. ದಿನನಿತ್ಯದ ನಿಯತ ಕಾರ್ಯಕ್ರಮವು ವಿಶ್ರಾಂತಿಧಾಮದ ನಿವಾಸಿಗಳನ್ನು ಪ್ರತಿದಿನ ಎರಡು ಬಾರಿ ಚೈತನ್ಯದಾಯಕ ವಾಯಾಮಗಳ ಅಭ್ಯಾಸಕ್ಕಾಗಿ ಮತ್ತು ಸಮೂಹ ಧ್ಯಾನಕ್ಕಾಗಿ, ಮಧ್ಯಾಹ್ನದ ಧ್ಯಾನದ ಮುನ್ನ ವೈಎಸ್‌ಎಸ್‌ ಪಾಠಗಳನ್ನು ಓದಲು ಮತ್ತು ಪ್ರತಿ ದಿನ ಮೂರು ಬಾರಿ ಮೌನವಾಗಿ ಭೋಜನವನ್ನು ಸ್ವೀಕರಿಸುವಾಗ ಒಟ್ಟುಗೂಡಿಸುತ್ತದೆ.  

ವ್ಯಾಯಾಮಕ್ಕಾಗಿ ಹತ್ತಿರದಲ್ಲಿ ನಡೆದಾಡುವ ಜಾಗಗಳಿವೆ. ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡಲು ಸ್ನಾನದ ಕೊಠಡಿಗಳಿರುವ 32 ಕೋಣೆಗಳನ್ನು ಹೊಂದಿರುವ ಒಂದು ವಾಸದ ಕಟ್ಟಡವನ್ನು ಸಿದ್ಧಪಡಿಸಲಾಗಿದೆ. ಇದು ವೈಯಕ್ತಿಕ ಸಾಧಕರು ಮತ್ತು ದಂಪತಿಗಳು ಇರಬಹುದಾದ ಒಬ್ಬರು ಮತ್ತು ಇಬ್ಬರು ತಂಗಬಹುದಾದ ಕೋಣೆಗಳನ್ನು ಹೊಂದಿದೆ. ಕಟ್ಟಡವನ್ನು ಇತ್ತೀಚೆಗೆ ಪುನರ್‌ನವೀಕರಿಸಲಾಯಿತು ಮತ್ತು ಹೊಸ ಹಾಸಿಗೆಗಳು, ಸುಪ್ಪತ್ತಿಗೆಗಳು, ಬಾಗಿಲುಗಳು, ಕಿಟಕಿಗಳು ಮತ್ತು ಸ್ನಾನದ ಕೊಠಡಿಯ ವಸ್ತುಗಳನ್ನು ಅಳವಡಿಸಲಾಯಿತು. ನೀರು ಪೂರೈಕೆಯ ಸಲಕರಣೆ ಮತ್ತು ವಿದ್ಯುಚ್ಛಕ್ತಿಯ ಸರಬರಾಜನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಲಾಯಿತು. ಆವರಣದಲ್ಲಿ ವಿದ್ಯುತ್ ಪೂರೈಕೆಗಾಗಿ ಬ್ಯಾಕಪ್ ಜನರೇಟರ್ ಇದೆ. ವಿಶ್ರಾಂತಿಧಾಮದ ಅವರಣದಲ್ಲಿ ಅನೇಕ ಮರಗಳಿವೆ — ಮಾವು, ತೆಂಗು, ಇತ್ಯಾದಿ — ಅವುಗಳಲ್ಲಿ ಕೆಲವು 40 ವರ್ಷಗಳಿಗಿಂತಲೂ ಹಳೆಯದಾಗಿವೆ. 

ಸಾಧನಾಲಯದಿಂದ ಮೂರು ಕಿಲೋಮೀಟರ್‌ ದೂರದೊಳಗೆ ವೈಎಸ್‌ಎಸ್‌ ಭಕ್ತಾದಿಗಳು ನಿರ್ವಹಿಸುತ್ತಿರುವ ಪರಮಹಂಸ ಯೋಗಾನಂದ ನೇತ್ರಾಲಯವಿದೆ (ಕಣ್ಣಿನ ಆಸ್ಪತ್ರೆ). ಇದು ನಿಯತ ಕಣ್ಣಿನ ಶಿಬಿರಗಳು, ಶಸ್ತ್ರಚಿಕಿತ್ಸೆಗಳು ಮತ್ತು ಇತರ ಸೇವೆಗಳ ಮೂಲಕ ಗ್ರಾಮದ ಬಡಜನರಿಗೆ ನಿಷ್ಠಾವಂತ ಸೇವೆಯನ್ನು ನೀಡುತ್ತಿದೆ. ವರ್ಷಾನು ಕಾಲದಿಂದ ಸಾವಿರಾರು ಜನರು ಈ ಸೇವೆಯ ಪ್ರಯೋಜನ ಪಡೆದಿದ್ದಾರೆ. 

ಪುನರ್‌ನವೀಕರಣಗೊಂಡ ಕಟ್ಟಡ.

ಕಾಯ್ದಿರಿಸುವಿಕೆ

ಸಮಾನ ಮನಸ್ಕ ಸಾಧಕರೊಂದಿಗೆ ಆಶ್ರಮದ ಪರಿಸರದಲ್ಲಿ ಇರಬಯಸುವವರು ಸಾಧನಲಾಯದಲ್ಲಿ ಸ್ಥಳವನ್ನು ಕಾಯ್ದಿರಿಸಿಕೊಳ್ಳಲು ಸ್ವಾಗತಿಸುತ್ತೇವೆ. ನೀವು ವಾರಾಂತ್ಯದ ಅಥವಾ ಒಂದು ವಾರದ ಅಲ್ಪಾವಧಿಯವರೆಗೆ ಇರಲು ಬರಬಹುದು; ಅಥವಾ ಒಟ್ಟಿಗೇ ಒಂದು ತಿಂಗಳ ಕಾಲ ಅಥವಾ ಹಲವಾರು ತಿಂಗಳುಗಳ ಕಾಲವೂ ಇರಬಹುದು.  

ಕಾಯ್ದಿರಿಸಲು ದಯವಿಟ್ಟು ಸಂಪರ್ಕಿಸಿ: 
ದೂರವಾಣಿ: 93922 85867 
ಇಮೇಲ್: [email protected] 

ವಿಳಾಸ 
ಯೋಗದಾ ಸತ್ಸಂಗ ಸಾಧನಾಲಯ — ರಾಜಮಂಡ್ರಿ 
ಫ್ಲೋರಿಕಲ್ಚರ್‌ ರೀಸರ್ಚ್‌ ಡೈರಕ್ಟರೇಟ್‌ ಪಕ್ಕದಲ್ಲಿ 
ಕಾಟನ್‌ ಗೆಸ್ಟ್‌ ಹೌಸ್‌ ಹತ್ತಿರ, ದೌಲೇಶ್ವರಮ್‌ 
ವೇಮಗಿರಿ ಗಟ್ಟು, ವೇಮಗಿರಿ  
ರಾಜಮಂಡ್ರಿ 533125 
ಜಿಲ್ಲೆ ಈಸ್ಟ್‌ ಗೋದಾವರಿ, ಆಂಧ್ರ ಪ್ರದೇಶ್‌ 

ರಾಜಮಂಡ್ರಿ ರೈಲ್ವೆ ನಿಲ್ದಾಣ 4 ಕಿಮಿ ದೂರದಲ್ಲಿದೆ ಮತ್ತು ವಿಮಾನ ನಿಲ್ದಾಣ 15 ಕಿಮಿ ದೂರದಲ್ಲಿದೆ. ಆಟೋ ರಿಕ್ಷಾಗಳು ಮತ್ತು ಟ್ಯಾಕ್ಸಿಗಳು ಸಿಗುತ್ತವೆ. 

ದೇಣಿಗೆಗಳು

ಸಾಧನಾಲಯವು ಇನ್ನೂ ಪ್ರಾರಂಭಾವಸ್ಥೆಯಲ್ಲಿದೆ ಮತ್ತು ಕಾಲಾನುಕಾಲಕ್ಕೆ ಹಲವು ಸುಧಾರಣೆಗಳ ಅವಶ್ಯಕತೆಯಿರುತ್ತದೆ. ದಿನನಿತ್ಯದ ಖರ್ಚುಗಳಿಗೆ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿಗೆ ನಿಮ್ಮ ಆರ್ಥಿಕ ಬೆಂಬಲಕ್ಕೆ ನಾವು ಬಹಳ ಮಹತ್ವ ಕೊಡುತ್ತೇವೆ. ದೇಣಿಗೆಗಳನ್ನು (‘ಕೇಂದ್ರ ಫಂಡ್‌’ ನಂತರ ‘ರಾಜಮಂಡ್ರಿ ರಿಟ್ರೀಟ್‌’ ಆಯ್ಕೆ ಮಾಡಿ) ಆನ್‌ಲೈನ್‌ನಲ್ಲಿ ಪಾವತಿಸಬಹುದು ಅಥವಾ “ಫಾರ್‌ ರಾಜಮಂಡ್ರಿ ರಿಟ್ರೀಟ್‌” ಎಂದು ಬರೆದು ಚೆಕ್‌ ಮುಖಾಂತರವೂ ಪಾವತಿಸಬಹುದು. 

ಇದನ್ನು ಹಂಚಿಕೊಳ್ಳಿ