“ಹೊಸ ವರ್ಷದಲ್ಲಿ ನಿಮಗಾಗಿ ನನ್ನ ಪ್ರಾರ್ಥನೆ” ಶ್ರೀ ದಯಾ ಮಾತಾ ಅವರಿಂದ

3 ಜನವರಿ, 2025

ಕೆಳಗಿನದು ಶ್ರೀ ದಯಾ ಮಾತಾರವರ ಓನ್ಲಿ ಲವ್‌: ಲಿವಿಂಗ್‌ ದಿ ಸ್ಪಿರಿಚ್ಯುವಲ್‌ ಲೈಫ್‌ ಇನ್‌ ಎ ಚೇಂಜಿಗ್‌ ವರ್ಲ್ಡ್‌ ಪುಸ್ತಕದ “ಸ್ಪಿರಿಚ್ಯುವಲ್‌ ಆಪರ್ಚ್ಯುನಿಟಿ ಇನ್‌ ದಿ ನ್ಯೂ ಇಯರ್‌” ಅಧ್ಯಾಯದ ಆಯ್ದ ಭಾಗ. ಪರಮಹಂಸ ಯೋಗಾನಂದರ ಬಹಳ ಆಪ್ತ ಶಿಷ್ಯರಲೊಬ್ಬರಾಗಿದ್ದ ಶ್ರೀ ದಯಾ ಮಾತಾ, 1955ರಿಂದ 2010ರಲ್ಲಿ ಅವರು ಸ್ವರ್ಗಸ್ಥರಾಗುವವರೆಗೂ ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಈ ಹೊಸ ವರ್ಷದಲ್ಲಿ ನಿಮ್ಮ ಪ್ರತಿಯೊಬ್ಬರಿಗೂ ನನ್ನ ಪ್ರಾರ್ಥನೆಯೇನೆಂದರೆ, ಆಧ್ಯಾತ್ಮಿಕ ಪಥದಲ್ಲಿ ನಿಮ್ಮ ಅತ್ಯುನ್ನತ ಮತ್ತು ಉದಾತ್ತ ಗುರಿಗಳು ಈಡೇರಲಿ.

ದಿವ್ಯ ಪ್ರೇಮವನ್ನು ಅರಸುತ್ತಿರುವ ನೀವು, ಅದನ್ನು ಕಂಡುಕೊಳ್ಳುವಂತಾಗಲಿ; ನಿಮ್ಮಲ್ಲಿ ಯಾರು ತಿಳುವಳಿಕೆಯನ್ನು ಅರಸುತ್ತಿದ್ದೀರೋ, ಅದನ್ನು ಮಾನವ ಸಂಬಂಧಗಳಲ್ಲಿ ಹುಡುಕಬೇಡಿ, ಬದಲಾಗಿ ಸೂಕ್ಷ್ಮ ವಿವೇಚನೆಯ ಚಿಲುಮೆಯಾಗಿರುವ ಅವನಿಂದ; ನಿಮ್ಮಲ್ಲಿ ಯಾರು ಶಕ್ತಿ, ಧೈರ್ಯ ಅಥವಾ ವಿನಯವನ್ನು ಅರಸುತ್ತಿದ್ದೀರೋ, ಅವರು ಭಗವಂತನ ನೈಜ ಮಕ್ಕಳೆಂದು ನಿಮ್ಮನ್ನು ನೀವು ತಿಳಿಯಲು, ಈ ಗುಣಗಳನ್ನು ಹೊಂದಲು ಸಹಾಯ ಮಾಡುವ ಮಹಾನ್‌ ಗುರುವಿನ ಬಳಿಗೆ, ನಿಮ್ಮಲ್ಲಿ ಸುಪ್ತವಾಗಿರುವ ದಿವ್ಯತೆಯನ್ನು ಜಾಗೃತಗೊಳಿಸುವವನ ಬಳಿಗೆ ಹೋಗಿ.

ಹೊಸ ವರ್ಷದಲ್ಲಿ ನಮ್ಮ ಅನುಗ್ರಹಿತ ಗುರುಗಳು ಒತ್ತಾಯಿಸುತ್ತಿದ್ದುದು ನನ್ನ ನೆನಪಿನಲ್ಲಿ ನನಗೆ ಕೇಳುತ್ತಿದೆ: “ಎದ್ದೇಳು, ಇನ್ನು ಹೆಚ್ಚು ನಿದ್ರಿಸಬೇಡ! ಎದ್ದೇಳು, ಇನ್ನು ಇನ್ನು ಹೆಚ್ಚು ನಿದ್ರಿಸಬೇಡ! ಎದ್ದೇಳು, ಇನ್ನು ಇನ್ನು ಹೆಚ್ಚು ನಿದ್ರಿಸಬೇಡ!”

ಶಾಂತಿ, ಆನಂದ, ಸಂತೋಷ ಮತ್ತು ದಿವ್ಯ ಪ್ರೇಮಕ್ಕೆ ಮಾರ್ಗವೆಂದರೆ, ನಿಮ್ಮ ಅರಿವನ್ನು ಕೇಂದ್ರೀಕರಿಸಿ ಭಗವಂತನಲ್ಲಿ ಇರಿಸುವುದು. ಒಂದು ವಿಷಯದ ಮೇಲೆ ಏಕಾಗ್ರರಾಗಿ: ಭಗವಂತ ಮಾತ್ರ. “ನೀನೇ ನನ್ನ ಧ್ರುವತಾರೆ; ನಿನ್ನೊಳಗೇ ನಾನು ಜೀವಿಸುತ್ತೇನೆ, ಚಲಿಸುತ್ತೇನೆ, ಉಸಿರಾಡುತ್ತೇನೆ ಮತ್ತು ನನ್ನ ಅಸ್ತಿತ್ವವಿದೆ. ನಾನು ನಿನ್ನನ್ನು ಪ್ರೇಮಿಸುವುದಲ್ಲದೆ ಮತ್ತು ನಿನ್ನ ಸೇವೆ ಮಾಡುವುದಲ್ಲದೇ ಬೇರೇನನ್ನು ಬೇಡುವುದಿಲ್ಲ.” ಹೊಸ ವರ್ಷದಲ್ಲಿ ಇದನ್ನು ನಿಮ್ಮ ನಿರಂತರ ಪ್ರಾರ್ಥನೆಯನ್ನಾಗಿ ಮಾಡಿಕೊಳ್ಳಿ.

ರಾತ್ರಿ ಮತ್ತು ಹಗಲು ಭಗವಂತನಲ್ಲಿ ಏಕಾಗ್ರರಾಗಿ ಮತ್ತು ಅವನ ಪ್ರೇಮದಿಂದ ಮತ್ತರಾಗಿರಿ. ಅವನೊಬ್ಬನೇ ಸತ್ಯ. ಅವನ ಪ್ರೇಮದಲ್ಲೇ ಜ್ಞಾನ, ವಿನಯ, ಆನಂದ, ದಯೆ, ತಿಳುವಳಿಕೆ ಮತ್ತು ಸಂತೃಪ್ತಿ ಅಡಗಿದೆ. ನಾವು ಪ್ರತಿಯೊಬ್ಬರೂ ಆ ಪ್ರೇಮವನ್ನು ಹೆಚ್ಚು ಮನಃಪೂರ್ವಕವಾಗಿ ಅರಸುವಂತಾಗಲಿ.

ಹೆಚ್ಚು ಗಾಢವಾಗಿ ಧ್ಯಾನ ಮಾಡಿ ಮತ್ತು ಹೆಚ್ಚಿನ ಸ್ವಸಂತೋಷದಿಂದ, ಹೆಚ್ಚಿನ ಆತ್ಮಸಾಕ್ಷಿಯಿಂದ ಮತ್ತು ಏಕಾಗ್ರತೆಯಿಂದ ಭಗವಂತನಿಗೆ ಸೇವೆ ಸಲ್ಲಿಸಲು ಪ್ರಯತ್ನಿಸಿ.

ಕೇವಲ ಸೇವೆ ಮಾಡಿದರಷ್ಟೇ ಸಾಲದು; ಅದನ್ನು ಒಂದು ದೊಡ್ಡ ಪುಣ್ಯ ಎಂದು ಪರಿಗಣಿಸಿ, ಅಂತರಾಳದಲ್ಲಿ ಉತ್ಸಾಹದಿಂದ, ಆನಂದದಿಂದ ಮತ್ತು ಪ್ರೇಮದಿಂದ ಸೇವೆ ಮಾಡಿ.

ಭಗವಂತನಿಗೆ ಭಕ್ತಿಪೂರ್ಣ ಗೀತೆಗಳನ್ನು ಹಾಡುತ್ತಾ, ಕೇವಲ ಅವನನ್ನು ಮಾತ್ರ ಸ್ಮರಿಸುತ್ತಾ, ಈ ಹೊಸ ವರ್ಷವನ್ನು ಹೇಗೆ ಆರಂಭಿಸಿದೆವೋ ಹಾಗೆಯೇ ಮುಕ್ತಾಯಗೊಳಿಸಲು ಆ ಆನಂದಮಯ ಪ್ರಜ್ಞೆಯನ್ನು ಹೊಸ ವರ್ಷದ ಎಲ್ಲ ದಿನಗಳಲ್ಲೂ ನಾವು ಕೊಂಡೊಯ್ಯುವಂತಾಗಲಿ.

ಇದನ್ನು ಹಂಚಿಕೊಳ್ಳಿ