ಹೊಸ ವರ್ಷದ ಸಂದೇಶ 2022

31 ಡಿಸೆಂಬರ್‌, 2021

ಆತ್ಮೀಯರೇ,

ಗುರುದೇವ ಪರಮಹಂಸ ಯೋಗಾನಂದರ ಆಶ್ರಮಗಳಲ್ಲಿರುವ ನಮ್ಮೆಲ್ಲರಿಂದ ನಿಮಗೆ ಹೊಸ ವರ್ಷದ ಶುಭಾಶಯಗಳು! ಹಾಗೂ ಕ್ರಿಸ್‌ಮಸ್ ಋತುವಿನಲ್ಲಿ ಪ್ರಪಂಚದಾದ್ಯಂತ ನಮಗೆ ಬಂದ ಶುಭ ಹಾರೈಕೆಗಳು ಮತ್ತು ಶುಭ ಸಂದೇಶಗಳಿಗಾಗಿ ಹಾಗೂ ಕಳೆದ ವರ್ಷದುದ್ದಕ್ಕೂ ನೀವು ನಮಗೆ ಹಲವಾರು ರೀತಿಯಿಂದ ನೀಡಿದ ನೆರವಿಗಾಗಿ ಪ್ರೀತಿಯ ಧನ್ಯವಾದಗಳು.

ನಾವು 2022 ಅನ್ನು ಪ್ರವೇಶಿಸುತ್ತಿರುವಾಗ, ಈ ಸಂಕ್ರಮಣ ಕಾಲದಲ್ಲಿ ಜೀವನದ ವಾಸ್ತವವಾಗಿರುವ ಸವಾಲುಗಳು ಮತ್ತು ಬದಲಾವಣೆಗಳ ಮೂಲಕ ನಿಮ್ಮ ಮಾರ್ಗವನ್ನು ಯೋಜಿಸಲು ಭಗವಂತನು ನಿಮಗೆ ಸಕಾರಾತ್ಮಕ ದಿಗ್ದರ್ಶನದಿಂದ ಗ್ರಾಹ್ಯವಾಗಿ ಆಶೀರ್ವದಿಸಲಿ ಎಂದು ನಾನು ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತೇನೆ. ನಮ್ಮ ಗುರುಗಳು ಈ ಸುಂದರವಾದ ಮಾತುಗಳಲ್ಲಿ ವಿವರಿಸಿದ ಮತ್ತು ಆಂತರಿಕವಾಗಿ ಅನುಭವಿಸಿದ ಜ್ಞಾನ ಮತ್ತು ಭರವಸೆಯನ್ನು ನೀವು ಅರಿತುಕೊಳ್ಳುವಂತಾಗಲಿ: “ಅರ್ಥಮಾಡಿಕೊಳ್ಳುವುದು ಪ್ರತಿಯೊಂದು ಆತ್ಮದ ಅತ್ಯಮೂಲ್ಯ ಆಸ್ತಿಯಾಗಿದೆ. ಇದು ನಿಮ್ಮ ಆಂತರಿಕ ದೃಷ್ಟಿ ಅಂದರೆ ಅಂತರ್ಬೋಧಿತ ಸಾಮರ್ಥ್ಯ, ಇದರಿಂದ ನೀವು, ನಿಮ್ಮ ಬಗ್ಗೆ, ಇತರರ ಬಗ್ಗೆ ಹಾಗೂ ನಿಮ್ಮ ಹಾದಿಯಲ್ಲಿ ಉದ್ಭವಿಸುವ ಎಲ್ಲಾ ಪರಿಸ್ಥಿತಿಗಳ ಬಗ್ಗೆ ಸತ್ಯವನ್ನು ಸ್ಪಷ್ಟವಾಗಿ ಗ್ರಹಿಸಬಹುದು ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ವರ್ತನೆಗಳು ಮತ್ತು ಕ್ರಿಯೆಗಳನ್ನು ಸರಿಯಾಗಿ ಹೊಂದಿಸಿಕೊಳ್ಳಬಹುದು.”

ಯಾವುದು ಸರಿ ಎಂಬುದನ್ನು ವಿವೇಚಿಸುವ ಬಗ್ಗೆ ಮತ್ತು ಅದರಂತೆ ನಡೆಯುವ ಬಗ್ಗೆ ಸ್ಪಷ್ಟತೆ ಮತ್ತು ವಿಶ್ವಾಸವನ್ನು ನಾವು ಹೇಗೆ ಕಂಡುಕೊಳ್ಳಬಹುದು? ವ್ಯಾಪಕವಾದ ಸಾಮಾಜಿಕ, ಆರ್ಥಿಕ, ಮತ್ತು ಪರಿಸರದ ಏರುಪೇರುಗಳ ಈ ಯುಗದಲ್ಲಿ ನೀವು, ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನೀಡಬಹುದಾದ ಅತ್ಯಂತ ದೊಡ್ಡ ಕೊಡುಗೆಯೆಂದರೆ, ದೈನಂದಿನ, ಏಕಾಗ್ರಚಿತ್ತದ ದೇವರ ಧ್ಯಾನಕ್ಕೆ ನವೀಕೃತ ಬದ್ಧತೆ. ಭದ್ರತೆ ಮತ್ತು ಚೇತರಿಕೆಯ ಶಾಶ್ವತ ಮೂಲದೊಂದಿಗೆ (ಭಗವಂತನೊಂದಿಗೆ) ದೈನಂದಿನ ಭಕ್ತಿಪೂರ್ವಕ ಸಂಪರ್ಕವೇ “ಒಡೆದು ಹೋಳಾಗಿ ಅಪ್ಪಳಿಸುತ್ತಿರುವ ಪ್ರಪಂಚಗಳ ಮಧ್ಯೆ ಅಲುಗಾಡದೆ ನಿಲ್ಲಲು” ನಮ್ಮ ಆತ್ಮಗಳ ಶಕ್ತಿಯ ನಿರಂತರ, ಜೀವಂತ ದೃಢೀಕರಣಕ್ಕೆ ನಮ್ಮನ್ನು ತರಬೇತಿ ಮಾಡುವ ಮಾರ್ಗವಾಗಿದೆ.

ನಾವು ಜೀವನದ ಸವಾಲುಗಳನ್ನು ಒಂಟಿಯಾಗಿ, ಏಕಾಂಗಿ ಭಕ್ತರಾಗಿ ಎದುರಿಸುವಾಗ ನಮ್ಮ ಪ್ರಜ್ಞೆಯನ್ನು ಭಗವಂತನಲ್ಲಿ ಸ್ಥಿರೀಕರಿಸುವ ಸಾಮರ್ಥ್ಯವನ್ನು ಇಚ್ಛಾನುಸಾರ ನಿಯೋಜಿಸುವುದು ಕಷ್ಟಕರವೆಂದು ತೋರಬಹುದು. ಆದರೆ ನಾವು ಭಗವಂತ ಮತ್ತು ಗುರುಗಳೊಂದಿಗೆ ಹಾಗೂ ನಾವು ಈ ಅನುಗ್ರಹಿತ ಮಾರ್ಗವನ್ನು ಹಂಚಿಕೊಳ್ಳುವ ಸಾವಿರಾರು ದೈವಿಕ ಸ್ನೇಹಿತರೊಂದಿಗೆ ನಮ್ಮ ಕೈ ಮತ್ತು ಹೃದಯಗಳನ್ನು ಜೋಡಿಸಿದಾಗ — ಅಡ್ಡಿಪಡಿಸುವ ಘಟನೆಗಳ ಯಾವುದೇ ಅಡ್ಡಸೆಳವುಗಳು ನಮ್ಮನ್ನು ಹಾದಿ ತಪ್ಪಿಸಲು ಪ್ರಯತ್ನಿಸುವ ಹೊರತಾಗಿಯೂ, ನಮ್ಮ ಆಧ್ಯಾತ್ಮಿಕ ಪ್ರಗತಿಯಲ್ಲಿ ಏಕಪ್ರಕಾರವಾಗಿ ಮುನ್ನುಗ್ಗಲು ನಾವು ಸ್ಥಿರತೆ ಮತ್ತು ಸ್ಥೈರ್ಯವನ್ನು ಕಂಡುಕೊಳ್ಳಬಹುದು. ವೈಯಕ್ತಿಕ ಮಟ್ಟದಲ್ಲಿ ನಾವು, ಪರಿಸರವು ಇಚ್ಛಾಶಕ್ತಿಗಿಂತ ಪ್ರಬಲವಾಗಿದೆ ಎಂಬ ನಿಯಮಕ್ಕೆ ಒಳಪಟ್ಟಿರಬಹುದು, ಆದರೆ ಅನೇಕ ಇಚ್ಛೆಗಳು ಒಗ್ಗೂಡಿದಾಗ ಪರಿಸರವನ್ನು ಬದಲಾಯಿಸಬಹುದು — ಅಥವಾ ಹೊಸದೊಂದನ್ನು ಸೃಷ್ಟಿಸಬಹುದು. ಸಮೂಹ ಧ್ಯಾನ ಮತ್ತು ದಿವ್ಯ ಸಹಭಾಗಿತ್ವದ ಮೂಲಕ, ವಿಶ್ವಾದ್ಯಂತ ಕ್ರಿಯಾ ಯೋಗ ಧ್ಯಾನಿಗಳಿಂದ ಸಾಮೂಹಿಕವಾಗಿ ಉತ್ಪತ್ತಿಯಾಗುವ ಆಧ್ಯಾತ್ಮಿಕ ಸ್ಪಂದನಗಳೊಂದಿಗೆ ನಾವು ನಮ್ಮ ವೈಯಕ್ತಿಕ ಪ್ರಯತ್ನಗಳನ್ನು ಬಲಪಡಿಸುತ್ತೇವೆ.

ಕಳೆದೆರಡು ವರ್ಷಗಳಲ್ಲಿ ನಿಮ್ಮ ಸಾಧನೆಯನ್ನು ಗಾಢವಾಗಿಸಿರುವ, ಹೊಸದಾಗಿ ರೂಪಿಸಲಾದ ವಾಸ್ತವಪ್ರಾಯವಾದ (ವರ್ಚುವಲ್) ಪರಿಸರದಲ್ಲಿರುವ ಅನೇಕ ಭಾಷೆಗಳ ಆನ್‌ಲೈನ್ ಧ್ಯಾನಗಳು, ಭಕ್ತಿ ಕೂಟಗಳು ಮತ್ತು ತರಗತಿಗಳ ಕಾರಣಕ್ಕಾಗಿ ಮತ್ತು ವಿಶೇಷವಾಗಿ, ನೀವು ಭಾಗವಹಿಸಿದಾಗ ನಮ್ಮ ಪೂಜ್ಯ ಗುರುಗಳೊಂದಿಗೆ ನೀವು ಅನುಭವಿಸುವ ಉನ್ನತೀಕರಿಸುವ ಶ್ರುತಿಗೂಡುವಿಕೆಗಾಗಿ ನಿಮ್ಮಲ್ಲಿ ಅನೇಕರು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಆನ್‌ಲೈನ್ ಘಟಿಕೋತ್ಸವ ಸೇರಿದಂತೆ ಈ ಎಲ್ಲಾ ಕಾರ್ಯಕ್ರಮಗಳನ್ನು ನಮ್ಮ ಅಂತರರಾಷ್ಟ್ರೀಯ “ಗೋಡೆರಹಿತ ಮಂದಿರ”ದಲ್ಲಿ ಮುಂದುವರಿಸಲು ಮತ್ತು ನಮಗೆ ಸಾಧ್ಯವಾದಾಗಲೆಲ್ಲ ಅವುಗಳನ್ನು ವಿಸ್ತರಿಸಲು ನಾವು ಯೋಜಿಸಿದ್ದೇವೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ.

ನಿಜವಾದ ವಿಶ್ವಾದ್ಯಂತ ಕುಟುಂಬವಾಗಿ ನಮ್ಮನ್ನು ಒಂದುಗೂಡಿಸುವ ಸತ್ಸಂಗದ ಬಂಧವು ನಮ್ಮ ವೈಯಕ್ತಿಕ ಜೀವನದಲ್ಲಿ ಧೈರ್ಯ ಮತ್ತು ಶಕ್ತಿಯನ್ನು ತುಂಬುವುದನ್ನು ಹಾಗೂ ಭಗವಂತನ ಬೆಳಕು ಮತ್ತು ಆನಂದಗಳು ಬಾಹ್ಯ ಪ್ರಪಂಚದ ಯಾವುದೇ ಕ್ಷಣಿಕ ಅನುಭವಕ್ಕಿಂತ ಹೆಚ್ಚು ಸ್ಪಷ್ಟವಾಗಿ ನೈಜವಾಗಿದೆ ಎಂಬ ದೃಢವಿಶ್ವಾಸವನ್ನು ನೀಡುವುದನ್ನು ಮುಂದುವರಿಸಲಿ. ಹಾಗೂ ಆ ಬೆಳಕು, ಸತ್ಯ ಮತ್ತು ಸಂತೋಷಗಳು ನಿಮ್ಮ ಅತ್ಯುನ್ನತ ಮತ್ತು ಉದಾತ್ತ ಗುರಿಗಳ ಸಾಧನೆಯತ್ತ ನಿಮಗೆ ಹೊಸ ವರ್ಷದಲ್ಲಿ ಮತ್ತು ಸದಾ ಮಾರ್ಗದರ್ಶನ ನೀಡುತ್ತಿರಲಿ.

ದಿವ್ಯ ಪ್ರೀತಿ ಮತ್ತು ಸ್ನೇಹದಲ್ಲಿ,

ಸ್ವಾಮಿ ಚಿದಾನಂದ ಗಿರಿ

ಇದನ್ನು ಹಂಚಿಕೊಳ್ಳಿ