
ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರಹಗಳಿಂದ…
ವಿಶ್ವಾಸ ಎಂದರೆ ಸಂಪೂರ್ಣ ನಂಬಿಕೆ — ಅಂತರ್ಬೋಧಿತ ಗಾಢನಂಬಿಕೆ, ಭಗವಂತನಿರುವುದು ನಿಜ ಮತ್ತು ಅವನ ಸಹಾಯ ಮಾನವನ ಬದುಕಿನಲ್ಲಿ ಪ್ರವಹಿಸಲು ಸದಾ ಸಿದ್ಧವಾಗಿದೆ ಎಂಬ ಆತ್ಮದಿಂದ ಬಂದ ಅರಿವು.
ವಿಶ್ವಾಸ ಬಹಳ ಮುಖ್ಯವಾದದ್ದು, ಏಕೆಂದರೆ, ನಕಾರಾತ್ಮಕ ಆಲೋಚನೆಗಳು ಮತ್ತು ಸಂದೇಹಗಳಿಂದ ದಿವ್ಯ ಶಕ್ತಿಯ ಗ್ರಹಿಕೆಯು ಮುಚ್ಚಲ್ಪಟ್ಟಿರುತ್ತದೆ; ನೀವು ಬಳಸಿದಷ್ಟೂ ವಿಶ್ವಾಸವು ಬೆಳೆಯುತ್ತದೆ; ಮತ್ತು ನಿಮ್ಮಲ್ಲಿ ವಿಶ್ವಾಸವಿದ್ದಾಗ, ನೀವು ಎಲ್ಲವನ್ನೂ ಮಾಡಬಹುದು. ನೀವು ಒಂದು ವಿಷಯವನ್ನು ದೀರ್ಘಕಾಲ ನಿಮ್ಮಲ್ಲಿಟ್ಟುಕೊಂಡು ಮತ್ತು ವಿರೋಧಾತ್ಮಕ ಸಾಕ್ಷ್ಯಗಳು ತಡೆಯೊಡ್ಡಿದಾಗಲೂ ಬಿಟ್ಟುಕೊಡದೇ ಇದ್ದಲ್ಲಿ, ಇಡೀ ಪ್ರಪಂಚವೇ ಅದು ಅಸಾಧ್ಯವಾದದ್ದು ಎಂದು ಹೇಳಿದರೂ; ನಿಮ್ಮ ಗುರಿಯೆಡೆಗೆ ಕೆಲಸ ಮಾಡುವಾಗ ನೀವು ಜನರ ನಕಾರಾತ್ಮಕ ಚಿಂತನೆಗಳನ್ನು ಎದುರಿಸಿ ನಿಮ್ಮ ಸ್ವಂತ ಆಲೋಚನೆಗಳನ್ನು ದೃಢವಾಗಿಟ್ಟುಕೊಂಡಾಗ ಅದು ನೆರವೇರುವುದು ಖಂಡಿತ.
ವಿಶ್ವಾಸದ ಶಕ್ತಿಯೊಂದಿಗೆ ಮುಂದೆ ಸಾಗಿರಿ, ಮುಂದೆ ಸಾಗಿರಿ! ದಿನನಿತ್ಯದ ಧ್ಯಾನ ಮಾಡುತ್ತಾ, ಅವನನ್ನು ಎಂದೂ ಮರೆಯದಿರಿ. ಪ್ರತಿ ದಿನ ಅವನ ಉಪಸ್ಥಿತಿಯ ಹೊಸ ಮುನ್ನೋಟಗಳು, ಹೊಸ ದಿವ್ಯಜ್ಞಾನಗಳು ನಿಮ್ಮೆಡೆ ಬರುತ್ತವೆ. ಶಕ್ತಿಯು ಬರುತ್ತದೆ; ಏಕೆಂದರೆ ಅಲ್ಲಿ ಅವನ ಶಕ್ತಿಯಿದೆ. ಅದನ್ನು ದೃಢವಾಗಿ ಸ್ವೀಕರಿಸಿ; ಅದು ಶಾಂತವಾಗಿ ನಿಮ್ಮ ಅಸ್ತಿತ್ವದ ಆಳಗಳೊಳಗೆ ಇಳಿಯಲಿ. ಅವನು ಯಾವ ಸೂಕ್ಷ್ಮ ಪ್ರವಾಹಗಳ ಮೂಲಕ ಎಲ್ಲ ವಸ್ತು ವಿಷಯಗಳನ್ನು ಸೃಷ್ಟಿಸಿ ಪೋಷಿಸುವನೋ ಅವುಗಳ ಮೇಲೆ ನೀವು ಪ್ರಾಣ ಶಕ್ತಿಯ ನಿಯಂತ್ರಣದ ವಿಜ್ಞಾನದಿಂದ [ಕ್ರಿಯಾ ಯೋಗ] ಪ್ರಭುತ್ವ ಸಾಧಿಸಿದರೆ, ಇಡೀ ಸೃಷ್ಟಿಯ ಮೇಲಿರುವ ಅವನ ಆಧಿಪತ್ಯವನ್ನು ನೀವು ಹಂಚಿಕೊಳ್ಳುತ್ತೀರಿ.
ವಿಶ್ವಾಸದ ಚುಕ್ಕಾಣಿಯನ್ನು ಹಿಡಿದುಕೊಳ್ಳಿ ಮತ್ತು ದುರದೃಷ್ಟಕರ ಪರಿಸ್ಥಿತಿಗಳ ಬಡಿತವನ್ನು ತಲೆಗೆ ಹಚ್ಚಿಕೊಳ್ಳಬೇಡಿ. ದುರದೃಷ್ಟದ ಆವೇಶಕ್ಕಿಂತ ಹೆಚ್ಚು ಆವೇಶಭರಿತರಾಗಿರಿ, ನಿಮ್ಮ ಅಪಾಯಗಳಿಗಿಂತ ಹೆಚ್ಚು ಕೆಚ್ಚೆದೆಯುಳ್ಳವರಾಗಿರಿ. ಈ ಹೊಸದಾಗಿ ಕಂಡುಕೊಂಡ ವಿಶ್ವಾಸ ಎಷ್ಟು ಹೆಚ್ಚು ಅದರ ಕ್ರಿಯಾತ್ಮಕ ಪ್ರಭಾವವನ್ನು ನಿಮ್ಮ ಮೇಲೆ ಬೀರುತ್ತದೆಯೋ, ನಿಮ್ಮ ದುರ್ಬಲತೆಯ ಗುಲಾಮಗಿರಿಯು ಅಷ್ಟೇ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.
ನಮ್ಮ ವಾರದ ಆನ್‌ಲೈನ್ ಸ್ಫೂರ್ತಿದಾಯಕ ಉಪನ್ಯಾಸದ ಸರಣಿಯಲ್ಲಿ ಮೇನಲ್ಲಿ ಹೊರಬಂದ “ಅಟ್ಯೂನಿಂಗ್ ಅವರ್ ಲೈವ್ಸ್ ವಿತ್ ಗಾಡ್ಸ್ ಪ್ಲಾನ್” ಪ್ರವಚನದ ಸಮಯದಲ್ಲಿ, ವೈಎಸ್‌ಎಸ್/ಎಸ್‌ಆರ್‌ಎಫ್‌ನ ಅಧ್ಯಕ್ಷರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರು, ಜಗತ್ತಿನ ಭವಿಷ್ಯಕ್ಕೆ ಸಂಬಂಧಪಟ್ಟಂತೆ ಹಾಗೂ ಒಂದು ಸಕಾರಾತ್ಮಕ ದೃಷ್ಟಿಕೋನದಿಂದ ವಿಶ್ವಾಸವನ್ನು ಹಿಡಿದಿಟ್ಟುಕೊಳ್ಳುವುದರಿಂದ ಬರುವ ಅಜೇಯ ಶಕ್ತಿಯ ಬಗ್ಗೆ ಪರಮಹಂಸ ಯೋಗಾನಂದರ ಸಲಹೆಯನ್ನು ಹಂಚಿಕೊಂಡರು. ಇದೀಗ ಹೊರಬಂದಿರುವ ಸ್ವಾಮಿ ಚಿದಾನಂದಜಿಯವರ ಉಪನ್ಯಾಸದ ಚಿಕ್ಕ ವೀಡಿಯೋದಲ್ಲಿ ಪರಮಹಂಸಜಿ ಜಗತ್ತಿನ ಭವಿಷ್ಯದ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ನೋಡಿ – ಅದರಿಂದ ನೀವು ಸ್ಫೂರ್ತಿ ಮತ್ತು ಒಳನೋಟವನ್ನು ಪಡೆಯಬಹುದು ಎಂದು ನಾವು ಆಶಿಸುತ್ತೇವೆ.