ಬದುಕಿನ ಸರಳ ಹಾಗೂ ಕೊನೆಯಿಲ್ಲದ ಆನಂದದ ಬಗ್ಗೆ ಪರಮಹಂಸ ಯೋಗಾನಂದರು

16 ನವೆಂಬರ್‌, 2022

ಪಿವೈ-ನವೆಂಬರ್‌-2022-ವಾರ್ತಾಪತ್ರ

ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರಹಗಳಿಂದ:

ಸಂತೋಷವು ಬಾಹ್ಯ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿಲ್ಲ; ಬದಲಾಗಿ ಅದನ್ನು ಬದುಕಿನ ಸರಳ ಆನಂದದಲ್ಲಿ ಕಾಣಬಹುದಾಗಿದೆ, ಎಲ್ಲಕ್ಕಿಂತ ಮಿಗಿಲಾಗಿ ಗಾಢವಾದ ಧ್ಯಾನದ ನಿತ್ಯ ನೂತನ ಆನಂದದಲ್ಲಿ…ಸರಳ, ನೈಜ ಮತ್ತು ಕೊನೆಯಿಲ್ಲದ ಆತ್ಮಾನಂದಕ್ಕೆ ಅಂಟಿಕೊಂಡು ಸಂತೋಷವಾಗಿರಿ. ಅವು ಆಳವಾದ ಚಿಂತನೆಯಿಂದ, ಆತ್ಮಾವಲೋಕನದಿಂದ, ಆಧ್ಯಾತ್ಮಿಕ ಪ್ರೇರಣೆಯಿಂದ ಮತ್ತು ಧ್ಯಾನದಿಂದ ಲಭಿಸುತ್ತವೆ.

ಧ್ಯಾನವು ನಿಮ್ಮೊಳಗಿರುವ ಭಗವಂತನ ಪ್ರತಿಫಲನ ಅಥವಾ ಪ್ರತಿಬಿಂಬವಾದ ಆ ಪರಿಪೂರ್ಣ ಪ್ರಜ್ಞೆಯನ್ನು ತಿಳಿದು ಪ್ರಕಟಪಡಿಸುವ ಪ್ರಯತ್ನವಾಗಿದೆ. ಶರೀರ ಪ್ರಜ್ಞೆಯ ಭ್ರಮೆ ಮತ್ತು ಅದರಿಂದುಂಟಾಗುವ ಶರೀರ ಮತ್ತು ಮನಸ್ಸಿನ “ಅನಾವಶ್ಯಕ ಅವಶ್ಯಕತೆಗಳನ್ನು” ಪರಿತ್ಯಜಿಸಿ. ನೀವೆಷ್ಟು ಸರಳವಾಗಿರಬಲ್ಲಿರೋ ಅಷ್ಟು ಸರಳವಾಗಿರಿ; ಆಗ ನಿಮ್ಮ ಜೀವನ ಎಷ್ಟು ಸರಳ ಮತ್ತು ಆನಂದಮಯವಾಗಿರುತ್ತದೆ ಎಂಬುದನ್ನು ಕಂಡು ನೀವು ಆಶ್ಚರ್ಯಚಕಿತರಾಗುವಿರಿ.

ನಿಮ್ಮ ಮನಸ್ಸು ವಿಪರೀತ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಬೇಡಿ. ಅವುಗಳಿಂದ ನಿಮಗೆ ಏನು ಸಿಗುತ್ತದೆ ಎಂಬುದನ್ನು ವಿಶ್ಲೇಷಿಸಿ. ಮತ್ತು ಅವು ನಿಮಗೆ ಬಹಳ ಮುಖ್ಯವಾದಂತವುಗಳೇ ಎಂಬುದನ್ನು ನೋಡಿ. ನಿಮ್ಮ ಸಮಯವನ್ನು ಪೋಲು ಮಾಡಬೇಡಿ…ನಾನು ಪದೇ ಪದೇ ಹೇಳುತ್ತೇನೆ, “ನೀವು ಒಂದು ಗಂಟೆ ಓದಿದರೆ, ನಿಮ್ಮ ಆಧ್ಯಾತ್ಮಿಕ ದಿನಚರಿಯಲ್ಲಿ ಎರಡು ಗಂಟೆಗಳ ಕಾಲ ಬರೆಯಿರಿ, ಎರಡು ಗಂಟೆಗಳ ಕಾಲ ಬರೆದರೆ, ಮೂರು ಗಂಟೆಗಳ ಕಾಲ ಆಲೋಚಿಸಿ, ಮೂರು ಗಂಟೆಗಳ ಕಾಲ ಆಲೋಚಿಸಿದರೆ ಎಲ್ಲ ಸಮಯದಲ್ಲೂ ಧ್ಯಾನ ಮಾಡಿ.” ನಾನು ಎಲ್ಲೇ ಹೋದರೂ ಸಹ, ನನ್ನ ಮನಸ್ಸನ್ನು ನಿರಂತರವಾಗಿ ನನ್ನ ಆತ್ಮ-ಶಾಂತಿಯ ಮೇಲೆ ಇರಿಸುತ್ತೇನೆ. ನೀವೂ ನಿಮ್ಮ ಗಮನದ ದಿಕ್ಸೂಚಿಯನ್ನು ಸದಾ ಆಧ್ಯಾತ್ಮಿಕ ಆನಂದದ ಉತ್ತರ ಧ್ರುವದ ಕಡೆಗೆ ತಿರುಗಿಸಿರಬೇಕು. ಆಗ ಯಾರೂ ಕೂಡ ನಿಮ್ಮ ಸಮತೋಲನವನ್ನು ಎಂದೂ ಭಂಗಮಾಡಲಾರರು.

ಭಗವಂತನು ಸದಾ ನನ್ನೊಡನಿದ್ದಾಗ “ಜೀವನದ ಅವಶ್ಯಕತೆಗಳು” ಅನಾವಶ್ಯಕವೆನಿಸುತ್ತದೆ ಎಂಬುದನ್ನು ಅವನು ರುಜುವಾತುಪಡಿಸಿದ್ದಾನೆ. ಆ ಪ್ರಜ್ಞೆಯಲ್ಲಿ ನೀವು ಒಬ್ಬ ಸಾಧಾರಣ ವ್ಯಕ್ತಿಗಿಂತ ಹೆಚ್ಚು ಆರೋಗ್ಯವಂತರಾಗುತ್ತೀರಿ, ಹೆಚ್ಚು ಸಂತೋಷಭರಿತರಾಗುತ್ತೀರಿ, ಮತ್ತು ಎಲ್ಲ ವಿಧದಲ್ಲೂ ಹೆಚ್ಚು ಸಮೃದ್ಧರಾಗುತ್ತೀರಿ. ಸಣ್ಣ ಸಣ್ಣದನ್ನು ಬಯಸಬೇಡಿ; ಅವು ನಿಮ್ಮನ್ನು ಭಗವಂತನಿಂದ ದೂರ ಮಾಡುತ್ತವೆ. ನಿಮ್ಮ ಪ್ರಯೋಗವನ್ನು ಈಗಲೇ ಆರಂಭಿಸಿ: ನಿಮ್ಮ ಜೀವನವನ್ನು ಸರಳಗೊಳಿಸಿಕೊಂಡು ಒಬ್ಬ ರಾಜನಾಗಿರಿ.

 

ಪರಮಹಂಸ ಯೋಗಾನಂದರ, ಸರಳತೆಯಲ್ಲಿ ಆನಂದವನ್ನು ಕಂಡುಕೊಳ್ಳುವುದರ ಬಗ್ಗೆ ನೀವು ಹೆಚ್ಚಿನ ಜ್ಞಾನವನ್ನು ಅಂತರ್ಗತ ಮಾಡಿಕೊಳ್ಳಲು ಬಯಸುವಿರೆ? ದಯಮಾಡಿ ವೈಎಸ್‌ಎಸ್‌ ವೆಬ್‌ಸೈಟಿನಲ್ಲಿರುವ “ಸರಳತೆಯನ್ನು ಹೃದಯಕ್ಕೆ ತೆಗೆದುಕೊಳ್ಳುವುದು” ಪುಟಕ್ಕೆ ಭೇಟಿ ನೀಡಿ.

ಇದನ್ನು ಹಂಚಿಕೊಳ್ಳಿ