ಒಂದು ಪರಿಚಯ:
ಭರವಸೆಯಿಂದ ಬಿರಿಯುತ್ತಿರುವ ಒಂದು ಹೊಸ ವರ್ಷದೆಡೆಗೆ ನೀವು ಮುನ್ನಡೆಯುತ್ತಿರುವಾಗ — ಅದರ ಸಂಭಾವ್ಯತೆಗಳಿಗೆ ಮತ್ತು ಭರವಸೆಯ ಜೀವಂತಿಕೆಯ ಭಾವನೆಗೆ ಗ್ರಹಣಾಕಾಂಕ್ಷಿಗಳಾಗಿ — ನಿಮ್ಮ ಎಲ್ಲ ಯುಕ್ತ ಆಧ್ಯಾತ್ಮಿಕ ಹಾಗೂ ಭೌತಿಕ ಗುರಿಗಳನ್ನು ದೃಢಚಿತ್ತದಿಂದ ಮುಂದುವರೆಸುವ ರಹಸ್ಯದ ಬಗ್ಗೆ ಪರಮಹಂಸ ಯೋಗಾನಂದರ ಜ್ಞಾನಪೂರ್ಣ ದೃಷ್ಟಿಕೋನವನ್ನು ನೀಡಲು ನಾವು ಬಯಸುತ್ತೇವೆ.
ಅವರ ಲೇಖನ “ಪ್ರವರ್ತನ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು” (ಮಾನವನ ನಿತ್ಯಾನ್ವೇಷಣೆ ಪುಸ್ತಕದಲ್ಲಿದೆ) ಇದರಲ್ಲಿ, ಅವರು ಬರೆಯುತ್ತಾರೆ: “ಈ ಜಗತ್ತಿನ ವಿಶಾಲ ದೃಶ್ಯಾವಳಿಯನ್ನು, ಜನಸ್ತೋಮ ಅವರವರ ಜೀವನದುದ್ದಕ್ಕೂ ತೀವ್ರ ಆತುರದಿಂದ ಮುನ್ನುಗ್ಗುತ್ತಿರುವುದನ್ನು ನೋಡುತ್ತಿದ್ದರೆ, ಯಾರಿಗಾದರೂ ಇದೆಲ್ಲಾ ಏನೆಂದು ಅಚ್ಚರಿಯಾಗದಿರದು. ನಾವೆತ್ತ ಹೋಗುತ್ತಿದ್ದೇವೆ? ಉದ್ದೇಶವೇನು? ನಮ್ಮ ಗಮ್ಯವನ್ನು ತಲುಪಲು ಅತ್ಯುತ್ತಮ ಹಾಗೂ ಖಚಿತವಾದ ಮಾರ್ಗವೇನು?”
ಆ ಲೇಖನದಲ್ಲಿ ಪರಮಹಂಸಜಿ, ಪ್ರವರ್ತನಶಕ್ತಿ ಮಾನವನಲ್ಲಿರುವ ಅತ್ಯಂತ ಮಹತ್ವದ ಗುಣಗಳಲ್ಲೊಂದು ಎಂದು ಹೇಳುತ್ತಾರೆ. ಪ್ರತಿಯೊಂದು ಆತ್ಮದೊಳಗಿರುವ ಅನಂತ ಸಾಮರ್ಥ್ಯಗಳ ಆಳವಾದ ತಿಳಿವಿನಿಂದ ಅವರು ತಮ್ಮ ಓದುಗರನ್ನು ಕೇಳುತ್ತಾರೆ: “ಈ ದಿವ್ಯ ವರದಾನವನ್ನಿಟ್ಟುಕೊಂಡು ನೀವು ಜೀವನದಲ್ಲಿ ಏನು ಮಾಡಿರುವಿರಿ? ಎಷ್ಟು ಜನರು ನಿಜವಾಗಿಯೂ ತಮ್ಮ ಸೃಜನಾತ್ಮಕ ಸಾಮರ್ಥ್ಯವನ್ನು ಉಪಯೋಗಿಸಲು ಪ್ರಯತ್ನಿಸುತ್ತಾರೆ?”
2024ರ ಈ ಮೊದಲ ವಾರ್ತಾಪತ್ರವನ್ನು ಉಪಯೋಗಿಸಿಕೊಂಡು ಪ್ರವರ್ತನಶಕ್ತಿಯ ಈ ಅತಿಮುಖ್ಯವಾದ ಆತ್ಮದ ಗುಣವನ್ನು ಅನ್ವಯಿಸಲು — ಮತ್ತು ನೀವು ನಿಮ್ಮ ಧ್ಯಾನಗಳನ್ನು ಗಾಢಗೊಳಿಸಿ ನಿಮ್ಮ ಕನಸುಗಳನ್ನು ಅಭಿವ್ಯಕ್ತಿಗೊಳಿಸಲು ಶ್ರಮಪಡುವಾಗ, ಈ ಹೊಸ ವರ್ಷದಲ್ಲಿ ಪ್ರತ್ಯಕ್ಷವಾಗಿ ಭಗವಂತನ ಪ್ರೋತ್ಸಾಹ ಮತ್ತು ಬೆಂಬಲವನ್ನು ಅನುಭವಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.
ಪರಮಹಂಸಜಿಯವರು ಚಿಂತಿಸಿದಂತೆ ಪ್ರವರ್ತನಶಾಲಿ ವ್ಯಕ್ತಿಯಾಗುವುದು ನಿಮ್ಮ ಸ್ವಂತ ಸಾಮರ್ಥ್ಯದಲ್ಲೇ ಇದೆ ಎಂದು ನಂಬಿ: “… ಒಂದು ಉಲ್ಕೆಯಂತೆ ತೇಜಸ್ವಿಯಾಗಿರುತ್ತಾನೆ — ಪರಮಾತ್ಮನ ಮಹಾನ್ ಆವಿಷ್ಕಾರಕ ಬಲದಿಂದ, ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತ ಶೂನ್ಯದಿಂದಲೂ ಏನೋ ಒಂದನ್ನು ಸೃಷ್ಟಿಸುತ್ತಾನೆ.”
ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರಹಗಳಿಂದ:
ನಿಮಗೆ ನೀವು ಈ ಪ್ರಶ್ನೆಯನ್ನು ಕೇಳಿಕೊಳ್ಳಿ: “ಬೇರಾರೂ ಮಾಡಿರದ ಏನನ್ನಾದರೂ ನಾನು ಮಾಡಿರುವೆನೆ?” ಪ್ರವರ್ತನಶಕ್ತಿಯನ್ನು ಬಳಸುವಲ್ಲಿ ಇದೇ ಪ್ರಾರಂಭಿಕ ಹಂತ.
ಪ್ರವರ್ತನಶಕ್ತಿ ಎಂದರೆ ಸೃಷ್ಟಿಸುವ ಶಕ್ತಿ… ಕೆಲಸಗಳನ್ನು ಹೊಸ ರೀತಿಯಲ್ಲಿ ಮಾಡಲು ಪ್ರಯತ್ನಿಸುವುದು ಹಾಗೂ ಹೊಸ ವಸ್ತುಗಳನ್ನು ಸೃಷ್ಟಿಸಲು ಪ್ರಯತ್ನಿಸುವುದು. ಪ್ರವರ್ತನ ಶಕ್ತಿ ಎಂದರೆ ನಿಮ್ಮ ಸೃಷ್ಟಿಕರ್ತನಿಂದ ನೇರವಾಗಿ ಪಡೆದಂತಹ ಸೃಜನಾತ್ಮಕ ಸಾಮರ್ಥ್ಯ.
ನಿಮಗೆ ಏನೋ ಒಂದು ಅದ್ಭುತವಾದುದನ್ನು ಸೃಷ್ಟಿಸಬೇಕೆಂದಿದ್ದಾಗ, ನಿಮ್ಮೊಳಗಿರುವ ಆ ಅನಂತ, ಸೃಜನಶೀಲ, ಸೃಷ್ಟಿಶೀಲ ಶಕ್ತಿಯನ್ನು ಸಂಪರ್ಕಿಸುವವರೆಗೆ ಮೌನವಾಗಿ ಕುಳಿತು ಧ್ಯಾನದಲ್ಲಿ ಆಳಕ್ಕೆ ಹೋಗಿ. ಹೊಸತನ್ನೇನಾದರೂ ಪ್ರಯತ್ನಿಸಿ. ಆದರೆ ನೀವೇನೇ ಮಾಡಿದರೂ ಅದರ ಹಿಂದೆ ಆ ಮಹಾನ್ ಸೃಷ್ಟಿಶೀಲ ತತ್ವವಿದೆ ಎಂದು ಖಚಿತ ಪಡಿಸಿಕೊಳ್ಳಿ; ಆ ಸೃಷ್ಟಿಶೀಲ ತತ್ವ ನಿಮಗೆ ಯಶಸ್ಸನ್ನು ಕೊಡುತ್ತದೆ.
ವಿಶ್ವಶಕ್ತಿಯೊಂದಿಗೆ ಶ್ರುತಿಗೂಡಿಕೊಳ್ಳಿ, ನೀವು ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರಲಿ ಅಥವಾ ಉದ್ಯಮ ಪ್ರಪಂಚದಲ್ಲಿ ಜನರೊಡನೆ ಬೆರೆಯುತ್ತಿರಲಿ, ಸದಾ ಹೀಗೆ ದೃಢೀಕರಿಸಿ: “ನನ್ನೊಳಗೆ ಅನಂತ ಸೃಷ್ಟಿಶೀಲ ಶಕ್ತಿಯಿದೆ…. ನಾನು, ನನ್ನ ಆತ್ಮದ ಚಾಲಕಶಕ್ತಿಗೆ ಮೂಲವಾದ, ಪರಮಾತ್ಮನ ಶಕ್ತಿ. ನಾನು ವ್ಯಾವಹಾರಿಕ ಜಗತ್ತಿನಲ್ಲಿ, ಚಿಂತನಾ ಜಗತ್ತಿನಲ್ಲಿ ಹಾಗೂ ಜ್ಞಾನ ಜಗತ್ತಿನಲ್ಲಿ ಹೊಸ ಅರಿವನ್ನು ಸೃಷ್ಟಿಸುತ್ತೇನೆ. ನಾನು ಮತ್ತು ನನ್ನ ತಂದೆ ಒಂದೇ ಆಗಿದ್ದೇವೆ. ನನ್ನ ಸೃಷ್ಟಿಶೀಲ ತಂದೆಯಂತೆಯೇ ನಾನೂ ಕೂಡ ಇಚ್ಛಿಸಿದ ಏನನ್ನು ಬೇಕಾದರೂ ಸೃಷ್ಟಿಸಬಲ್ಲೆ.”
ಈ ಅಸಾಧಾರಣ ಪ್ರವರ್ತನಶಕ್ತಿಯನ್ನು ಪಡೆದುಕೊಳ್ಳಲು ಒಂದು ಮಾರ್ಗವಿದೆ. ಜ್ಞಾನದಿಂದ, ಸೂಕ್ತವಾದ ತರಬೇತಿಯಿಂದ ಹಾಗೂ ಸೆಲ್ಫ್-ರಿಯಲೈಝೇಷನ್ (ಯೋಗದಾ ಸತ್ಸಂಗ)ನ ಬೋಧನೆಗಳನ್ನು ಅನುಷ್ಠಾನ ಮಾಡುವುದರಿಂದ ನೀವು ಪ್ರವರ್ತನಶಕ್ತಿಯನ್ನು ಬೆಳೆಸಿಕೊಳ್ಳಬಹುದು ಹಾಗೂ ಅದನ್ನು ಸಂಪೂರ್ಣವಾಗಿ ಪ್ರಯೋಗಿಸಬಹುದು.
ನನ್ನ ಗುರು ಶ್ರೀ ಯುಕ್ತೇಶ್ವರರು ಹೀಗೆ ಹೇಳುತ್ತಿದ್ದರು, “ಇದನ್ನು ನೆನಪಿನಲ್ಲಿಡಿ: ನಿಮ್ಮಲ್ಲಿ ನಿಜವಾಗಿಯೂ ದಿವ್ಯವಾದ ಆ ವಿಶ್ವಾಸ ಇದ್ದರೆ ಹಾಗೂ ಈ ವಿಶ್ವದಲ್ಲಿಲ್ಲದಿರುವ ಏನಾದರೂ ಒಂದನ್ನು ನೀವು ಬಯಸಿದ್ದೇ ಆದರೆ, ಅದನ್ನು ನಿಮಗಾಗಿ ಸೃಷ್ಟಿಸಲಾಗುತ್ತದೆ.” ನನಗೆ ಅಂತಃಸ್ಸತ್ವದಲ್ಲಿ ಹಾಗೂ ನನ್ನ ಇಚ್ಛೆಯಲ್ಲಿನ ಆಧ್ಯಾತ್ಮ ಶಕ್ತಿಯಲ್ಲಿ ಆ ಅದಮ್ಯ ನಂಬಿಕೆ ಇತ್ತು, ಹಾಗೂ ನಾನು ಬಯಸಿದ್ದನ್ನು ನನಗೆ ದೊರೆಯುವಂತೆ ಮಾಡಲು ಕೆಲವು ಹೊಸ ಅವಕಾಶಗಳು ಸದಾ ಸೃಷ್ಟಿಸಲ್ಪಡುತ್ತಿದ್ದವು.
ನೀವು ನಿಮ್ಮ ಇಚ್ಛಾ ಶಕ್ತಿಯನ್ನು ಪ್ರಯೋಗಿಸಬೇಕು. ನೀವು ಮನಸ್ಸು ಮಾಡಿ ಒಂದು ಜ್ವಾಲೆಯ ತರಹ ಮುಂದುವರಿದರೆ, ನಿಮ್ಮ ದಾರಿಯಲ್ಲಿರುವ ಎಲ್ಲ ಅಡೆತಡೆಗಳೂ ದಹಿಸಲ್ಪಡುತ್ತವೆ.
ಈ ರೀತಿಯ ಇಚ್ಛಾಶಕ್ತಿಯನ್ನು ನೀವು ಬೆಳೆಸಿಕೊಳ್ಳಬೇಕು — ಯಾವುದು ಉಚಿತವೋ ಅದನ್ನು ಸಾಧಿಸಲು, ಅಗತ್ಯವಾದಲ್ಲಿ ಸಾಗರವನ್ನೇ ಬರಿದು ಮಾಡುವಂತಹ ಇಚ್ಛಾಶಕ್ತಿ. ಧ್ಯಾನ ಮಾಡಲು ಅತ್ಯುಚ್ಚ ಇಚ್ಛಾಶಕ್ತಿಯನ್ನು ಉಪಯೋಗಿಸಬೇಕು. ಭಗವಂತ, ನಾವು ನಮ್ಮ ದಿವ್ಯ ಇಚ್ಛಾಶಕ್ತಿಯನ್ನು ಕಂಡುಕೊಂಡು ಅದನ್ನು ಅವನನ್ನು ಕಂಡುಕೊಳ್ಳಲು ಉಪಯೋಗಿಸಬೇಕು ಎಂದು ಬಯಸುತ್ತಾನೆ. ಭಗವಂತನನ್ನು ಅರಸುವ ಈ ಕ್ರಿಯಾತ್ಮಕ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಿ. ಪ್ರಬುದ್ಧ ನುಡಿಗಳು ನಿಮಗೆ ಮುಕ್ತಿಯನ್ನು ನೀಡುವುದಿಲ್ಲ, ಬದಲಾಗಿ ಧ್ಯಾನದ ಮೂಲಕ ನೀವು ಮಾಡುವ ಸ್ವ-ಪರಿಶ್ರಮಗಳು ಮುಕ್ತಿಯನ್ನು ನೀಡುತ್ತವೆ.
ವೈಎಸ್‌ಎಸ್ ಬ್ಲಾಗಿನಲ್ಲಿ, ಪರಮಹಂಸ ಯೋಗಾನಂದರ ಗುರುಗಳು ಅವರಿಗೆ ಈ ಜನ್ಮದಲ್ಲಿ ನೀನು ಒಬ್ಬ ಜ್ಞಾನವಂತ ಬೋಧಕನಾಗುವ ಅವಶ್ಯಕತೆಯಿದೆ ಎಂದು ಅವರಿಗೆ ಹೇಳಿದಾಗ ಅವರು ಭಗವಂತನ ಪ್ರವರ್ತನ ಶಕ್ತಿಯನ್ನು ಹೇಗೆ ಉಪಯೋಗಿಸಿದರು ಎಂಬ ಪರಮಹಂಸ ಯೋಗಾನಂದರ ಒಂದು ಕಥೆಯನ್ನು ಓದಬಹುದು. ಪರಮಹಂಸಜಿಯವರ ವೈಯಕ್ತಿಕ ಜೀವನ ನಿಜವಾಗಲೂ ಸ್ಫೂರ್ತಿದಾಯಕವಾಗಿದೆ, ಅಂತೆಯೇ, ಈ ಲೇಖನದಲ್ಲಿ, ನಿಮ್ಮ ಅನ್ವೇಷಣೆಗಳಲ್ಲಿ – ಈಗ ಅಥವಾ ಬೇರೆ ಯಾವುದೇ ಸಮಯದಲ್ಲಿ – ನೀವು ಜಯಶಾಲಿಯಾಗಲು ಎಂತಹ ಮನೋಭಾವವನ್ನು ನೀವು ಅಪ್ಪಿಕೊಳ್ಳಬೇಕು ಎಂಬ ಅವರ ಸಲಹೆಯೂ ಸ್ಫೂರ್ತಿದಾಯಕವಾಗಿದೆ.