ಪರಮಹಂಸ ಯೋಗಾನಂದರಿಂದ “ಕ್ರಿಸ್ಮಸ್ ಅನ್ನು ನೈಜ ರೀತಿಯಲ್ಲಿ ಆಚರಿಸಲು ಈಗಲೇ ಸಿದ್ಧ ಪಡಿಸಿಕೊಳ್ಳಿ”

ಡಿಸೆಂಬರ್‌ 16, 2022

ಈ ಕೆಳಗಿನದು ಪರಮಹಂಸ ಯೋಗಾನಂದರ ಒಂದು ಕ್ರಿಸ್ಮಸ್ ಸಂದೇಶದಿಂದ ಆಯ್ದ ಭಾಗವಾಗಿದೆ, ಇದನ್ನು ದಿ ಸೆಕೆಂಡ್‌ ಕಮಿಂಗ್‌ ಆಫ್‌ ಕ್ರೈಸ್ಟ್:‌ ದಿ ರಿಸರೆಕ್ಷನ್‌ ಆಫ್‌ ದಿ ಕ್ರೈಸ್ಟ್ ವಿದಿನ್‌ ಯು — ನಲ್ಲಿ ಪ್ರಕಟಿಸಲಾಗಿದೆ — ಯೇಸುವಿನ ಮೂಲ ಬೋಧನೆಗಳ ಕುರಿತು ಪರಮಹಂಸಜಿಯವರ ದಿವ್ಯ ಜ್ಞಾನದ ವ್ಯಾಖ್ಯಾನ. “ಕ್ರಿಸ್ಮಸ್‌ನ ನಿಜವಾದ ಆಚರಣೆ ಎಂದರೆ ನಮ್ಮ ಪ್ರಜ್ಞೆಯಲ್ಲಿ ಕ್ರಿಸ್ತ ಪ್ರಜ್ಞೆಯ ಜನನದ ಸಾಕ್ಷಾತ್ಕಾರ,” ಎಂದು ಅವರು ಹೇಳಿದ್ದಾರೆ. ರಜೆಗಳು ಬರುತ್ತಿದ್ದಂತೆ, ಕ್ರಿಸ್‌ಮಸ್‌ ಸಮಯವನ್ನು ಹೇಗೆ ಆಚರಿಸಲು ಉದ್ದೇಶಿಸಲಾಗಿದೆಯೋ ಹಾಗೆಯೇ ಆಚರಿಸಲು – ನಮ್ಮ ಅಂತರಂಗದಲ್ಲಿ ಹುಟ್ಟಿದ ನಿಜವಾದ ಶಾಂತಿ ಮತ್ತು ಆನಂದವನ್ನು ಆಚರಿಸಲು ಪರಮಹಂಸಜಿ ನಮಗೆ “ಬದುಕುವುದು-ಹೇಗೆ” ಎಂಬುದರ ಜ್ಞಾನವನ್ನು ಈಗ ಅನ್ವಯಿಸಲು ಪ್ರಾರಂಭಿಸುವ ಅವಕಾಶವನ್ನು ನೀಡುತ್ತಿದ್ದಾರೆ.

ನಿಮ್ಮ ಹೃದಯವನ್ನು ಕ್ರಿಸ್ತ-ಪ್ರೇಮದ ಪೂಜಾಪೀಠವನ್ನಾಗಿ ಮಾಡಿಕೊಳ್ಳಿ — ಅದು ಎಲ್ಲಾ ಜನಾಂಗಗಳಲ್ಲಿ ನೆಲೆಸಿದ್ದು ಎಲ್ಲರನ್ನೂ ಸಮಾನವಾಗಿ ಪ್ರೀತಿಸುತ್ತದೆ — ಆಗ ಸರ್ವವ್ಯಾಪಿಯಾದ ಕ್ರಿಸ್ತನ ವಾಸಸ್ಥಾನವನ್ನು ಅವರ ದೇಹ-ದೇವಾಲಯಗಳಲ್ಲಿ ಕಂಡ ನೀವು ಎಲ್ಲ ಜನರನ್ನು ಪ್ರೀತಿಸಬಹುದು.

ಯೇಸು ತನ್ನ ವಿರೋಧಿಗಳನ್ನು ಕ್ಷಮಿಸಿದಂತೆ ನಿಮ್ಮ ಎಲ್ಲ ಶತ್ರುಗಳನ್ನೂ ಕ್ಷಮಿಸಿ — ನಿಜವಾದ ಮತ್ತು ಕಾಲ್ಪನಿಕ. ನೀವು ಮಾಡುವ ಒಳ್ಳೆಯದಕ್ಕೆ ಬದಲಾಗಿ ನಿರ್ದಯ ಕಾರ್ಯಗಳು ಮತ್ತು ಮಾತುಗಳಿಂದ ಅಥವಾ ಕೃತಘ್ನತೆಯಿಂದ ನಿಮ್ಮನ್ನು ಶೂಲಕ್ಕೇರಿಸುವವರೆಡೆಗೆ ಸಹಾನುಭೂತಿಯ ತಿಳುವಳಿಕೆಯಿಂದ ನಿಮ್ಮ ಹೃದಯವನ್ನು ತುಂಬಿಸಿಕೊಳ್ಳಿ. ನಿಮ್ಮ ಪ್ರಾರ್ಥನೆ ಹೀಗಿರಲಿ: “ತಂದೆಯೇ, ತಾವೇನು ಮಾಡುತ್ತಿರುವೆವೆಂದು ತಿಳಿಯದ ನನ್ನ ತಪ್ಪಿತಸ್ಥ ಸಹೋದರರನ್ನು ಪ್ರೀತಿಸಲು ನನಗೆ ಕಲಿಸು. ನಾನು ನನ್ನ ನಿರ್ದಯತೆಯಿಂದ ಅವರನ್ನು ಮತ್ತೂ ದುಷ್ಟತೆಯೆಡೆಗೆ ದೂಡದಿರಲಿ, ಬದಲಿಗೆ ನನ್ನ ಪ್ರೀತಿಯು ಅವರನ್ನು ಉತ್ತಮ ಜೀವನ ವಿಧಾನಗಳೆಡೆಗೆ ಮನವೊಲಿಸಲಿ.”

ಯೇಸುಕ್ರಿಸ್ತನ ಪ್ರಾಮಾಣಿಕತೆ ಮತ್ತು ನಿರ್ಭಯತೆಯೊಂದಿಗೆ ನಿಮ್ಮ ಜೀವನದ ಎಲ್ಲಾ ಕ್ರಿಯೆಗಳನ್ನು ನಿಯಂತ್ರಿಸಿ.

ಯೇಸುವು ಸೈತಾನನ [ಶಬ್ದಾರ್ಥ ಸಂಗ್ರಹದಲ್ಲಿ ಮಾಯಾ ನೋಡಿ] ಪ್ರಲೋಭನೆಗಳನ್ನು ಜಯಿಸಿದಂತೆಯೇ, ದುಃಖವನ್ನು ಉಂಟುಮಾಡುವ ಪ್ರಲೋಭನೆಗಳನ್ನು ಆತ್ಮ-ನಿಯಂತ್ರಣದಿಂದ ಜಯಿಸಿ. ಎಲ್ಲ ಒಳ್ಳೆಯ ವಿಷಯಗಳೆಡೆಗೆ ಆದ್ಯತೆಯನ್ನು ಬೆಳೆಸಿಕೊಳ್ಳಿ. ಇಂದ್ರಿಯಗಳ ದುರುಪಯೋಗದಿಂದ ಉಂಟಾಗುವ ತಾತ್ಕಾಲಿಕ ಸಂತೋಷಗಳನ್ನು ತ್ಯಜಿಸಿ ಮತ್ತು ಆತ್ಮದ ಶಾಶ್ವತ, ನೈಜ ಸಂತೋಷಕ್ಕೆ ಅನುಸಾರವಾಗಿ ಮುಂದುವರಿಯಿರಿ.

ಇತರರ ದುಷ್ಟತನಕ್ಕೆ ಬದಲಾಗಿ ಒಳ್ಳೆಯತನವನ್ನು, ತಪ್ಪು ತಿಳುವಳಿಕೆಗೆ ಬದಲಾಗಿ ತಿಳುವಳಿಕೆಯನ್ನು, ನಿರ್ದಯತೆಗೆ ಬದಲಾಗಿ ದಯೆಯನ್ನು ನೀಡಿ. ನಿಮ್ಮೊಳಗೆ, ಆತಂಕಕ್ಕೆ ಬದಲಾಗಿ ಶಾಂತಿಯನ್ನು, ಚಡಪಡಿಕೆಗೆ ಬದಲಾಗಿ ಶಾಂತತೆಯನ್ನು ಮತ್ತು ಭೌತಿಕ ಆನಂದಕ್ಕೆ ಬದಲಾಗಿ ಶಾಶ್ವತ ಆನಂದವನ್ನು ಆಯ್ದುಕೊಳ್ಳಿ.

ನಿಮ್ಮ ಅತ್ಯುತ್ತಮ ಗುಣಗಳ ಆಧ್ಯಾತ್ಮಿಕ ಉಡುಗೊರೆಗಳನ್ನು ಅಗತ್ಯವಿರುವವರಿಗೆ ನೀಡಿ ಮತ್ತು ನಿಮ್ಮ ಒಳ್ಳೆಯದಕ್ಕಾಗಿಯೇ ನಿಮ್ಮನ್ನು ಪ್ರೀತಿಸುವ ಮಹಾನ್ ವ್ಯಕ್ತಿಗಳಿಂದ ಆತ್ಮದ ಉದಾತ್ತ ಗುಣಗಳನ್ನು ಪಡೆದುಕೊಳ್ಳಿ.

ನಿಮ್ಮ ಧ್ಯಾನ-ಜಾಗೃತ ಪ್ರಜ್ಞೆಯಲ್ಲಿ ಕ್ರಿಸ್ತನು ಪ್ರತಿ ಕ್ರಿಸ್‌ಮಸ್‌ನಲ್ಲಿ ಅಥವಾ ಇನ್ನಾವುದೇ ಸಮಯದಲ್ಲಿ ಮತ್ತೆ ಹುಟ್ಟಬಹುದು ಎಂಬುದನ್ನು ನೆನಪಿಡಿ. ನಿಮ್ಮ ಶ್ರದ್ಧಾಪೂರ್ವಕ ಗಮನದಲ್ಲಿ ಮತ್ತೊಮ್ಮೆ ಜನಿಸಿದ ಸರ್ವವ್ಯಾಪಿ, ನಿತ್ಯ ಜೀವಂತ ಕ್ರಿಸ್ತನನ್ನು ನೋಡಿ. ನಿಮ್ಮ ದೈನಂದಿನ ಆಳವಾದ ಧ್ಯಾನದಲ್ಲಿ ಅಪರಿಚಿತ ಕ್ರಿಸ್ತನೊಂದಿಗೆ ನಿತ್ಯ-ನೂತನ, ನಿತ್ಯ-ವೃದ್ಧಿಸುತ್ತಿರುವ ಆನಂದವೆಂಬ ರೂಪದಲ್ಲಿ ಸಂಸರ್ಗ ನಡೆಸುವ ಮೂಲಕ ಅವನನ್ನು ಪರಿಚಿತನನ್ನಾಗಿ ಮಾಡಿಕೊಳ್ಳಿ. ಧ್ಯಾನದ ಈ ಆನಂದದ ರೂಪದಲ್ಲಿ ಕ್ರಿಸ್ತನನ್ನು ಪ್ರೀತಿಸಿ, ಮತ್ತು ಈ ರೀತಿಯಲ್ಲಿ ಪ್ರತಿದಿನ ಆಧ್ಯಾತ್ಮಿಕ ಕ್ರಿಸ್ಮಸ್ ಅನ್ನು ಆಚರಿಸಿ: ನಿಮ್ಮೊಳಗೆ ಅವನ ಪುನರಾಗಮನವನ್ನು.

ಇಡೀ ಪ್ರಕೃತಿಯ ವೈಭವದಲ್ಲಿ, ನಿಮ್ಮ ಜಾಗೃತ ಜ್ಞಾನದಲ್ಲಿ, ನಿಜವಾದ ಸೌಂದರ್ಯವನ್ನು ಧರಿಸಿರುವ ಎಲ್ಲದರಲ್ಲೂ ಮತ್ತು ಕ್ರಿಸ್ತನ ಗುಣಗಳ ಸುಗಂಧದಿಂದ ತುಂಬಿರುವ ಪ್ರತಿಯೊಬ್ಬರಲ್ಲೂ ಕ್ರಿಸ್ತನ ಪುನರ್ಜನ್ಮವನ್ನು ನೋಡಿ.

ಕ್ರಿಸ್‌ಮಸ್‌ನಲ್ಲಿ ನೀವು ಏನು ಮಾಡಿದರೂ ಕ್ರಿಸ್ತನ ಚಿಂತನೆಯೊಂದಿಗೆ, ಕ್ರಿಸ್ತನ ಶಾಂತಿಯಲ್ಲಿ ಆನಂದಿಸಿ.

ಉಡುಗೊರೆಗಳನ್ನು ಎಲ್ಲರಲ್ಲಿಯೂ ಇರುವ ಕ್ರಿಸ್ತನಿಗಾಗಿ ಎಂಬಂತೆ ವಿನಿಮಯ ಮಾಡಿಕೊಳ್ಳಿ; ಮತ್ತು ಸಮೃದ್ಧವಾಗಿ ಅಲಂಕರಿಸಲ್ಪಟ್ಟ ಮತ್ತು ದಿವ್ಯ ಆತ್ಮದ ಗುಣಗಳಿಂದ ಮಿನುಗುತ್ತಿರುವ, ನಿಮ್ಮ ಶಾಂತ ಪ್ರಜ್ಞೆಯ ಕ್ರಿಸ್ಮಸ್ ಗಿಡದ ಮೇಲೆ, ನಿಮ್ಮ ಹೃದಯದ ಉಡುಗೊರೆಯನ್ನು ಅವನಿಗಾಗಿ ಇರಿಸಿ. ಅಲ್ಲಿ ಕ್ರಿಸ್ತನಿಂದ ಅವನನ್ನೇ ಉಡುಗೊರೆಯಾಗಿ ಸ್ವೀಕರಿಸಿ.

ಧ್ಯಾನದ ದ್ವಾರದ ಮೂಲಕ, ಸೆರೆಯಲ್ಲಿರುವ ನಿಮ್ಮ ಆನಂದವು ಪಾರಾಗಿ, ಎಲ್ಲದರಲ್ಲೂ ಇರುವ ಕ್ರಿಸ್ತನ ಹೃದಯದಲ್ಲಿ ವಿಶ್ರಮಿಸಲಿ. ನಿಮ್ಮ ಆನಂದವು ಅತ್ಯಂತ ದೂರದ ಗ್ರಹಗಳಲ್ಲಿ, ಆಕಾಶದ ವಿಶಾಲತೆಯ ಮೇಲೆ ಹಾಗೂ ನೀವು ಭೇಟಿಯಾಗಿ ಪ್ರೀತಿಸಿದ ಮತ್ತು ನಿಮಗೆ ಅತ್ಯಂತ ಹತ್ತಿರವಾದವರ ಆತ್ಮಗಳ ಕಿರುದೆರೆಗಳಲ್ಲಿ ನೃತ್ಯ ಮಾಡಲಿ. ಆಗ ನೀವು ಸೃಷ್ಟಿಯ ಪ್ರತಿಯೊಂದು ಅಭಿವ್ಯಕ್ತಿಯಲ್ಲಿ ಕ್ರಿಸ್ತನು ಜನಿಸಿರುವುದನ್ನು ನೋಡುತ್ತೀರಿ. ಎಲ್ಲ ಸಂತರಲ್ಲಿ, ಎಲ್ಲ ಮನುಷ್ಯರಲ್ಲಿ, ಎಲ್ಲ ಜೀವಿಗಳಲ್ಲಿ, ನಕ್ಷತ್ರಗಳಿಂದ ಕೂಡಿದ ಬ್ರಹ್ಮಾಂಡದಲ್ಲಿ ಮತ್ತು ನಿಮ್ಮ ಆಲೋಚನೆಗಳ ತೊಟ್ಟಿಲಿನಲ್ಲಿ ಮತ್ತು ನಿಮ್ಮ ಆತ್ಮದ ಮಂದಿರದಲ್ಲಿ ನೀವು ಕ್ರಿಸ್ತನ ಸರ್ವವ್ಯಾಪಿ ಆನಂದವನ್ನು ಕಂಡುಕೊಳ್ಳುವಿರಿ.

ನೀವು ಕ್ರಿಸ್ಮಸ್ ಸಮಯದಲ್ಲಿ ವೈಎಸ್ಎಸ್ ಆಶ್ರಮ ಅಥವಾ ಕೇಂದ್ರದಲ್ಲಿ ವೈಯಕ್ತಿಕವಾಗಿ ಅಥವಾ ಆನ್‌ಲೈನ್‌ನಲ್ಲಿ ನಮ್ಮೊಂದಿಗೆ ಸೇರಿಕೊಳ್ಳುವಿರಿ ಎಂದು ನಾವು ಭಾವಿಸುತ್ತೇವೆ. ಕೆಳಗೆ ಎರಡು ಲಿಂಕ್‌ಗಳಿವೆ, ಒಂದು, ನಿಮ್ಮ ಸಮೀಪವಿರುವ ವೈಎಸ್‌ಎಸ್‌ ಕೇಂದ್ರವನ್ನು ಹುಡುಕಲು ನಿಮ್ಮನ್ನು ಕರೆದೊಯ್ಯುತ್ತದೆ ಮತ್ತು ಇನ್ನೊಂದು, ಸಂಪನ್ಮೂಲ ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ, ಅದು ಮತ್ತಷ್ಟು ಸ್ಫೂರ್ತಿ ಮತ್ತು ಮಾರ್ಗದರ್ಶನದೊಂದಿಗೆ ಈ ಋತುವಿನ ನಿಜವಾದ ಚೈತನ್ಯದ ಆಳಕ್ಕೆ ಧುಮುಕಲು ನಿಮಗೆ ನೆರವಾಗುತ್ತದೆ!

ಇದನ್ನು ಹಂಚಿಕೊಳ್ಳಿ