ಸ್ಮರಣೆಯಲ್ಲಿ — ಸ್ವಾಮಿ ಶಿವಾನಂದ ಗಿರಿ (1936-2022)

22 ಜನವರಿ, 2022

ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ ಒಬ್ಬ ಹಿರಿಯ ಸನ್ಯಾಸಿಯಾದ ಸ್ವಾಮಿ ಶಿವಾನಂದ ಗಿರಿಯವರು ಜನವರಿ 18, 2022ರಂದು ಬೆಳಿಗ್ಗೆ 6 ಘಂಟೆಗೆ ತಮ್ಮ ನಿದ್ರೆಯಲ್ಲಿ ಶಾಂತವಾಗಿ ಸ್ವರ್ಗಾರೋಹಣ ಮಾಡಿದರು.

ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಅಭುಕ್ತ ಮೂಲೆಯಲ್ಲಿರುವ ಹುಲ್ಲುಂಗ್‌ ಗ್ರಾಮದಲ್ಲಿ ಸೆಪ್ಟಂಬರ್‌ 20, 1936ರಂದು ಜನಿಸಿದ, ಶ್ರೀ ದುರ್ಗಾ ಚರಣ್‌ ಮಹತೋ ಎಂಬ ಪೂರ್ವಾಶ್ರಮದ ಹೆಸರಿನ ಸ್ವಾಮಿ ಶಿವಾನಂದಜಿ ಒಂದು ಸಾಧಾರಣ ಹಿನ್ನೆಲೆಯಿಂದ ಬಂದವರು.

ಅಂತರ್ನಿಹಿತ ಆಧ್ಯಾತ್ಮಿಕ ಮನೋಧರ್ಮದಿಂದ ಕೂಡಿದ ಸ್ವಾಮೀಜಿಯವರನ್ನು ಬಹಳ ಸಣ್ಣ ವಯಸ್ಸಿನಲ್ಲೇ ಲಖನ್‌ಪುರದ ಯೋಗದಾ ಸತ್ಸಂಗ ಕ್ಷೀರೋದಾಮೊಯೀ ವಿದ್ಯಾಪೀಠಕ್ಕೆ ಪರಿಚಯಿಸಲಾಯಿತು. ನಮ್ಮ ಪೂಜ್ಯ ಶ್ರೀ ಶ್ರೀ ಪರಮಹಂಸ ಯೋಗಾನಂದರ ಉತ್ಕೃಷ್ಟ ಬದುಕು-ಪರಿವರ್ತಿಸುವ ಕ್ರಿಯಾ ಯೋಗದ ಬೋಧನೆಗಳಲ್ಲಿ ಅವರು ತಮ್ಮನ್ನು ತಾವು ಸಂಪೂರ್ಣವಾಗಿ ತಲ್ಲೀನಗೊಳಿಸಿಕೊಂಡರು.

1962ರಲ್ಲಿ, ಅವರು ತಮ್ಮ 26ನೇ ವಯಸ್ಸಿನಲ್ಲಿ ವೈಎಸ್‌ಎಸ್‌ ಸನ್ಯಾಸದ ಆಧ್ಯಾತ್ಮಿಕ ಪಥಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಲು ನಿರ್ಧರಿಸಿದರು. ಅವರು ತಮ್ಮ ಬ್ರಹ್ಮಚರ್ಯ ದೀಕ್ಷೆಯನ್ನು ಫೆಬ್ರವರಿ 3, 1968ರಂದೂ ಮತ್ತು ಸನ್ಯಾಸ ದೀಕ್ಷೆಯನ್ನು ಡಿಸೆಂಬರ್‌ 14, 1972ರಂದೂ ಸ್ವೀಕರಿಸಿದರು. ಎರಡೂ ದೀಕ್ಷೆಯನ್ನು ನೀಡಿದವರು ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಮೂರನೆಯ ಅಧ್ಯಕ್ಷರು ಹಾಗೂ ಸಂಘಮಾತಾರವರಾದ ಶ್ರೀ ಶ್ರೀ ದಯಾ ಮಾತಾರವರು.

ಅವರು ಸದಾ ಆದರ್ಶಪ್ರಾಯವಾದ ನಮ್ರತೆ ಮತ್ತು ಸರಳತೆಯನ್ನು ಅಭಿವ್ಯಕ್ತಿಸಿದರು, ಮತ್ತು ಕಷ್ಟಗಳನ್ನು ಅವಿಚಲಿತ ಸಮಚಿತ್ತತೆಯಿಂದ ಎದುರಿಸಿದರು. ಅವರ ಜೀವಿತದ ನಂತರದ ವರ್ಷಗಳಲ್ಲಿ, ಅವರಿಗೆ ಆರೋಗ್ಯದ ಸಮಸ್ಯೆಗಳಿದ್ದರೂ ಸಹ, ಅಸಾಧಾರಣವಾದ ಸ್ಥೈರ್ಯ ಮತ್ತು ಕಷ್ಟಸಹಿಷ್ಣುತೆಯನ್ನು ತೋರಿದರು.

ಸ್ವಾಮಿ ಶಿವಾನಂದ ಗಿರಿಯವರು ಯೋಗದಾ ಸತ್ಸಂಗ ಶೈಕ್ಷಣಿಕ ಸಂಸ್ಥೆಗಳ (ವೈಎಸ್‌ಇಐ) – 37 ವರ್ಷಗಳಿಂದಲೂ ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ (ವೈಎಸ್‌ಎಸ್‌)ದ ಆಶ್ರಯದಲ್ಲಿ ನಡೆಯುತ್ತಿರುವ ಶೈಕ್ಷಣಿಕ ಸಂಸ್ಥೆಗಳ ಒಂದು ಗುಂಪು – ಭಾಗವಾದ ಕುಲಾಬಹಾಲ್‌ ಮತ್ತು ನಂತರ ಲಖನ್‌ಪುರ್‌ನ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಅವರ ಕೆಲವು ಹಳೆಯ ಸಹೋದ್ಯೋಗಿಗಳು ನೆನಪಿಸಿಕೊಂಡ ಹಾಗೆ, ಸ್ವಾಮಿ ಶಿವಾನಂದರು ತಮ್ಮ ವಿದ್ಯಾರ್ಥಿಗಳು ಶಿಸ್ತಿನ ಮಾರ್ಗದಿಂದ ಆಚೀಚೆಗೆ ಹೋಗದ ಹಾಗೆ ಬಹಳ ಶಿಸ್ತಿನ ಶಿಕ್ಷಕರಾಗಿದ್ದರು. ಅವರು ಅಟೋಟಗಳಲ್ಲಿಯೂ ಬಹಳ ಆಸಕ್ತಿಯುಳ್ಳವರಾಗಿದ್ದರು.

ಅಭುಕ್ತ ಮೂಲೆಯಲ್ಲಿರುವ ಕುಲಾಬಹಾಲ್‌ನ ಪ್ರದೇಶಗಳಲ್ಲಿ ಬಡತನದಲ್ಲಿ ಬಳಲುತ್ತಿರುವ ವಿದ್ಯಾರ್ಥಿಗಳು ಹಂತ ಹಂತವಾಗಿ ಮೇಲೇರಿ ರಾಷ್ಟ್ರೀಯ ಮುಖ್ಯವಾಹಿನಿಯನ್ನು ಸೇರುವಂತಾಗಲು, ಸಮಾಜದ ಹಿಂದುಳಿದ ವರ್ಗಗಳ ನಡುವೆ ಮೂಲಭೂತ ಶಿಕ್ಷಣವನ್ನು ಪ್ರಸರಿಸಲು ಸ್ವಾಮಿ ಶಿವಾನಂದಜಿ ಬಹು ಮುಖ್ಯ ಪಾತ್ರವನ್ನು ವಹಿಸಿದರು. ಉತ್ಕೃಷ್ಟವಾದ ತಾಳ್ಮೆ ಮತ್ತು ದೂರದೃಷ್ಟಿಯಿಂದ, ಸ್ವಾಮೀಜಿಯವರು ಹುಲ್ಲುಂಗ್‌, ಹಾತಿಬಾರಿ, ಕುಲಾಬಹಾಲ್‌ ಮತ್ತು ಲಖನ್‌ಪುರ್‌ ಗ್ರಾಮಗಳಲ್ಲಿರುವ ಕೆಳ ಮತ್ತು ಮಧ್ಯಮ ವರ್ಗದವರು ಮೂಲಭೂತ ಶಿಕ್ಷಣದಿಂದ ವಂಚಿತರಾಗದ ಹಾಗೆ ನೋಡಿಕೊಂಡರು.

ತಮ್ಮ ಜೀವನದ ಬಹಳ ಮುಂಚಿನ ದಿನಗಳಲ್ಲೇ, ಸ್ವಾಮೀಜಿ ಹಠ ಯೋಗದ ಅಭ್ಯಾಸಕ್ಕೆ ಸೆಳೆಯಲ್ಪಟ್ಟರು. ಅವರು ಅನೇಕ ಅತ್ಯಂತ ಕಷ್ಟಕರ ಆಸನಗಳನ್ನು ಮಾಡಬಲ್ಲವರಾಗಿದ್ದರು. ಅವರು ಪ್ರಕೃತಿ ಪ್ರೇಮಿಯಾಗಿದ್ದರು ಮತ್ತು ಅತ್ಯಾಸಕ್ತಿಯಿಂದ ತೋಟವನ್ನು ನೋಡಿಕೊಳ್ಳುವವರಾಗಿದ್ದರು. ತಮ್ಮ ಮಧ್ಯಾಹ್ನದ ತೋಟದ ಕೆಲಸ ಮುಗಿದ ಮೇಲೆ, ಒಮ್ಮೊಮ್ಮೆ ಸ್ವಾಮೀಜಿ ಆಶ್ರಮದ ಸಿಬ್ಬಂದಿ ಮತ್ತು ಕೆಲಸಗಾರರನ್ನು ಲಖನ್‌ಪುರ್‌ನಲ್ಲಿದ್ದ ಧ್ಯಾನ ಮಂದಿರದಲ್ಲಿ ಸೇರಿಸಿ ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಅವರಿಗೆ ಹಠ ಯೋಗದ ಪ್ರಾಥಮಿಕ ಭಂಗಿಗಳನ್ನು ಕಲಿಸುತ್ತಿದ್ದರು.

ತಮ್ಮ ಕಡೆಯ ದಿನದವರೆಗೂ ಸ್ವಾಮೀಜಿ, ಗುರುದೇವ ಪರಮಹಂಸ ಯೋಗಾನಂದರು ಕಲಿಸಿದ ತಮ್ಮ ಕ್ರಿಯಾ ಯೋಗದ ಸಾಧನೆಯಲ್ಲಿ ನಿಷ್ಠಾವಂತರಾಗಿದ್ದರು, ಶ್ರದ್ಧಾವಂತರಾಗಿದ್ದರು ಮತ್ತು ನಿಯತವಾಗಿ ಅಭ್ಯಾಸ ಮಾಡುತ್ತಿದ್ದರು. ಅವರು ಒಂದು ಮಹಾನ್‌ ಸನ್ಯಾಸಿ ಜೀವನವನ್ನು ಬದುಕಿದರು ಮತ್ತು ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಕುಲಾಬಹಾಲ್‌ನ ವೈಎಸ್‌ಎಸ್‌ ಶಾಖಾ ಕೇಂದ್ರ ಮತ್ತು ಲಖನ್‌ಪುರ್‌ನ ವೈಎಸ್‌ಎಸ್‌ ಶಾಖಾ ಆಶ್ರಮದಲ್ಲಿ ವಿಭಿನ್ನ ಹುದ್ದೆಗಳಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾಗೆ ಸೇವೆ ಸಲ್ಲಿಸಿದರು.

ಅವರ ಪ್ರಫುಲ್ಲ ಮತ್ತು ವಿನಮ್ರ ಸ್ವಭಾವಕ್ಕಾಗಿ ಸ್ವಾಮಿ ಶಿವಾನಂದರನ್ನು ಸದಾ ಸ್ಮರಿಸಿಕೊಳ್ಳಲಾಗುತ್ತದೆ. ಅವರು ಸಂಪೂರ್ಣ ಸಾಕ್ಷಾತ್ಕಾರದ ಅಂತಿಮ ಗುರಿಯತ್ತ ತಮ್ಮ ಪಯಣವನ್ನು ಮಾಡುತ್ತಿರುವಾಗ ನಾವೆಲ್ಲರೂ ಅವರಿಗೆ ನಮ್ಮ ಪ್ರೀತಿ ಮತ್ತು ಪ್ರಾರ್ಥನೆಗಳನ್ನು ಕಳಿಸೋಣ.

ಇದನ್ನು ಹಂಚಿಕೊಳ್ಳಿ