ಶಾಶ್ವತ ಸುರಕ್ಷತೆ ಎಲ್ಲಿ ಪಡೆಯಬಹುದು? ಪರಮಹಂಸ ಯೋಗಾನಂದರಿಂದ

17 ಮೇ, 2025

ಈ ಕೆಳಗಿನ ಪೋಸ್ಟ್ “ದೇವರೊಂದಿಗೆ ಸಂವಹನ: ಮನುಷ್ಯನ ಅತಿ ದೊಡ್ಡ ಅವಶ್ಯಕತೆ” ಎಂಬ ಉಪನ್ಯಾಸದ ಒಂದು ಭಾಗವಾಗಿದೆ, ಇದನ್ನು ಶೀಘ್ರದಲ್ಲೇ ಸೆಲ್ಫ್-ರಿಯಲೈಸೇಶನ್ ಫೆಲೋಷಿಪ್ ಮತ್ತು ನಂತರ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದಿಂದ ಬಿಡುಗಡೆಯಾಗಲಿರುವ ಪರಮಹಂಸ ಯೋಗಾನಂದರ ಸಂಗ್ರಹಿತ ಉಪನ್ಯಾಸಗಳು ಮತ್ತು ಪ್ರಬಂಧಗಳ ಸಂಪುಟ IV ಸಾಲ್ವಿಂಗ್ ದಿ ಮಿಸ್ಟರಿ ಆಫ್ ಲೈಫ್ ನಲ್ಲಿ ಪೂರ್ಣವಾಗಿ ಓದಬಹುದು. ಈ ಪೂರ್ಣ ಉಪನ್ಯಾಸವನ್ನು ಜನವರಿ 7, 1940 ರಂದು ಎನ್ಸಿನಿಟಾಸ್, ಕ್ಯಾಲಿಫೋರ್ನಿಯಾದ ಸೆಲ್ಫ್-ರಿಯಲೈಸೇಶನ್ ಫೆಲೋಷಿಪ್ ಗೋಲ್ಡನ್ ಲೋಟಸ್ ದೇವಾಲಯದ ಎರಡನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ನೀಡಲಾಯಿತು.

ಈ ಜಗತ್ತಿನಲ್ಲಿ ಯಾವಾಗಲೂ ಕೆಲವು ದೋಷಗಳಿರುತ್ತವೆ. ಮಾನವ ಕುಲಕ್ಕೆ ಪ್ರಯೋಜನವಾಗುವಂತಹ ಎಂತಹ ಅದ್ಭುತ ವಿಧಾನಗಳನ್ನು ಕಂಡುಹಿಡಿದರೂ, ಈ ಭೌತಿಕ ಜಗತ್ತು ಎಂದಿಗೂ ಮಾನವನಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿರುವುದಿಲ್ಲ. ಯೇಸು ಕೆಲವೇ ಮೀನು ಮತ್ತು ರೊಟ್ಟಿ ತುಂಡುಗಳಿಂದ ಐದು ಸಾವಿರ ಜನರಿಗೆ ಆಹಾರ ನೀಡುವ ಮತ್ತು ಸತ್ತವರನ್ನು ಸಹ ಎಬ್ಬಿಸುವ ಪವಾಡಗಳನ್ನು ಮಾಡಲು ಸಾಧ್ಯವಾದರೂ, ಒಳ್ಳೆಯದನ್ನು ಮಾಡಿದ್ದಕ್ಕಾಗಿ ಅವನು ಸಹ ಕಷ್ಟಪಡಬೇಕಾಯಿತು. ಎಲ್ಲವೂ ದೇವರದ್ದೇ ಎಂದು ತನ್ನ ಶಕ್ತಿಗಳ ಮೂಲಕ ಅವನು ತೋರಿಸಿದನು, ಮತ್ತು ನಾವು ಆ ಆಧ್ಯಾತ್ಮಿಕವಾದ ಅತೀಂದ್ರಿಯ ಪ್ರಜ್ಞೆಯನ್ನು ಬೆಳೆಸಿಕೊಂಡಾಗ, ನಾವು ಕ್ರಮೇಣ ಎಲ್ಲಾ ಬಾಹ್ಯ ವಿಷಯಗಳನ್ನು ಮೀರಿ ಎಲ್ಲ ಬಾಹ್ಯ ಅಭಿವ್ಯಕ್ತಿಗಳ ಆಧಾರವಾಗಿರುವ ಏಕೈಕ ಸತ್ಯವನ್ನು ಅರಿತುಕೊಳ್ಳುತ್ತೇವೆ.


ಅದೇ ನಾವು ಸಂತೋಷವಾಗಿರಲು ಇರುವ ಏಕೈಕ ಮಾರ್ಗ, ನಾವು ನಿಜವಾಗಿಯೂ ಸುರಕ್ಷಿತ ಮತ್ತು ಭದ್ರ ಎಂದು ಪರಿಗಣಿಸಬಹುದಾದ ಏಕೈಕ ಸಮಯ – ದುಃಖದಲ್ಲಿ ಅಥವಾ ಸಂತೋಷದಲ್ಲಿ, ಆರೋಗ್ಯದಲ್ಲಿ ಅಥವಾ ಅನಾರೋಗ್ಯದಲ್ಲಿ, ಜೀವನದಲ್ಲಿ ಅಥವಾ ಮರಣದಲ್ಲಿ, ಅಸ್ತಿತ್ವದ ಎಲ್ಲಾ ದ್ವಂದ್ವಗಳಲ್ಲಿ. ಸದಾ ಬದಲಾಗುವ ಭೌತಿಕ ಪರಿಸ್ಥಿತಿಗಳಿಂದ ನಾವು ಪರಿಪೂರ್ಣತೆಯನ್ನು ನಿರೀಕ್ಷಿಸಬಾರದು, ಆದರೆ ಶಾಶ್ವತವಾದ ಸಂತೋಷವನ್ನು ನೀಡಬಲ್ಲವನು ತಂದೆ ಒಬ್ಬನೇ ಎಂದು ಅರಿತುಕೊಳ್ಳಬೇಕು.


ನೀವು ಒಂದು ಭಯಾನಕ ಕಾಯಿಲೆಯನ್ನು ಹೊಂದಿರುವ ಕನಸು ಕಾಣುತ್ತಿದ್ದೀರಿ ಎಂದು ಭಾವಿಸೋಣ ಮತ್ತು ನಿಮ್ಮ ಕನಸಿನಲ್ಲಿ ಬಲಶಾಲಿ ಮತ್ತು ಆರೋಗ್ಯವಂತ ವ್ಯಕ್ತಿಯನ್ನು ನೀವು ನೋಡುತ್ತೀರಿ. ನಂತರ ನೀವು ಬಡವರು ಮತ್ತು ಹಸಿದಿರುವಿರಿ ಎಂದು ನೋಡುತ್ತೀರಿ, ಆದರೆ ಇನ್ನೊಬ್ಬ ವ್ಯಕ್ತಿಯು ಹೇರಳವಾಗಿ ಹೊಂದಿರುತ್ತಾನೆ. ನೀವು ಕನಸು ಕಾಣುತ್ತಿರುವಾಗ, ನಿಮ್ಮ ನೋವು ಮತ್ತು ಹಸಿವು ನಿಜ; ಆದರೆ ನೀವು ಎಚ್ಚರವಾದಾಗ ನೀವು ನಿರಾಳತೆಯಿಂದ ನಗುತ್ತೀರಿ.


ಆದ್ದರಿಂದ ನಾವು ವಾಸಿಸುತ್ತಿರುವ ಈ ಕನಸಿನ ಪ್ರಪಂಚ ಹೀಗೆಯೇ ಇರುತ್ತದೆ. ನಾನು ಇದನ್ನು ಸದಾ ನೋಡುತ್ತಿದ್ದೇನೆ. ಹೊರನೋಟಕ್ಕೆ ಮಾಯೆಯ ಈ ಕನಸಿನ ಜಗತ್ತಿನಲ್ಲಿ ತಂದೆಗಾಗಿ ಕೆಲಸ ಮಾಡಲು ದೇಹ ಮತ್ತು ಭೌತಿಕ ಅಸ್ತಿತ್ವದ ಮಿತಿಗಳೊಂದಿಗೆ ನಾನು ಹೋರಾಡಬೇಕಾಗಿದೆ; ಆದರೆ ದೇವರ ಅರಿವಿನ ಆಂತರಿಕ ಜಾಗೃತಾವಸ್ಥೆಯಲ್ಲಿ ನಾನು ಆತ್ಮದ ಆನಂದ ಮತ್ತು ಬೇಷರತ್ತಾದ ಸ್ವಾತಂತ್ರ್ಯವನ್ನು ಸತತವಾಗಿ ಆನಂದಿಸುತ್ತಿದ್ದೇನೆ.


ಈ ಜಗತ್ತಿನ ಎಲ್ಲಾ ದ್ವಂದ್ವಗಳೂ ದೇವರ ಪರೀಕ್ಷೆಗಳಾಗಿವೆ. ಮರ್ತ್ಯ ಜೀವನದ ಭ್ರಮೆಯಿಂದ ನಾವು ಎಚ್ಚರಗೊಳ್ಳಬೇಕು, ನಮ್ಮ ಅಮರತ್ವದ ಪ್ರಜ್ಞೆಗೆ ಏರಬೇಕು ಎಂದು ಆತನು ಬಯಸುತ್ತಾನೆ. ಸಂತರು ಸಹ ಪರೀಕ್ಷಿಸಲ್ಪಡುತ್ತಾರೆ; ಅವರು ಅನೇಕ ಸಂಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಸಂತ ಫ್ರಾನ್ಸಿಸ್ ಅವರ ಜೀವನವನ್ನು ಓದಿ — ಅವರು ಇತರರನ್ನು ಗುಣಪಡಿಸುತ್ತಿದ್ದಾಗಲೂ ಹೇಗೆ ಕಷ್ಟಪಟ್ಟರು, ಆದರೆ ಅವರು ತಮ್ಮ ಸ್ವಂತ ಗುಣಪಡಿಸುವಿಕೆಗಾಗಿ ಎಂದಿಗೂ ದೇವರಿಗೆ ಪ್ರಾರ್ಥಿಸಲಿಲ್ಲ. ಪ್ರತಿದಿನ ರಾತ್ರಿ ಅವರು ಯೇಸು ಕ್ರಿಸ್ತನನ್ನು ನೋಡುತ್ತಿದ್ದರು. ಅವರು ಇಂದ್ರಿಯ ಪ್ರಚೋದಕ ಅಭ್ಯಾಸಗಳೊಂದಿಗೆ ಜನಿಸಿದರು, ಆದರೆ ದೇವರಲ್ಲಿ ಸಂಪೂರ್ಣ ಶರಣಾಗತಿಯಿಂದ ಅವರು ಉನ್ನತ ಶಿಖರಗಳನ್ನು ಏರಿದರು.

ದೇವರು ನಮ್ಮ ಸ್ತುತಿಯಿಂದಲ್ಲ, ನಮ್ಮ ಪ್ರೀತಿಯಿಂದ ಪ್ರಭಾವಿತನಾಗುತ್ತಾನೆ

ಒಬ್ಬ ಸಂತನನ್ನು ಪವಾಡಗಳನ್ನು ಮಾಡುವ ಸಾಮರ್ಥ್ಯದಿಂದ ಗುರುತಿಸಲಾಗುವುದಿಲ್ಲ. ಅಂತಹ ಸಾಧನೆಗಳು ದೇವರನ್ನು ಮೆಚ್ಚಿಸುವುದಿಲ್ಲ; ಈ ಸಂಕೀರ್ಣ ಮತ್ತು ಅದ್ಭುತ ಸೃಷ್ಟಿಯಲ್ಲಿ ಎಲ್ಲದರಲ್ಲೂ ಆತನು ಸದಾ ಪವಾಡಗಳನ್ನು ಮಾಡುತ್ತಿದ್ದಾನೆ. ಆತನು ತನ್ನನ್ನು ಪ್ರೀತಿಸುವವರ ಪ್ರೀತಿಯಲ್ಲಿ ಮಾತ್ರ ಆಸಕ್ತಿ ಹೊಂದಿದ್ದಾನೆ. ದೇವರ ಮೇಲಿನ ಪ್ರೀತಿಯಿಂದ ನಿಮ್ಮ ಹೃದಯವನ್ನು ಶುದ್ಧಗೊಳಿಸುವುದು ಅತಿ ದೊಡ್ಡ ಪವಾಡ; ಮತ್ತು ಬೇರೇನೂ ನಿಮ್ಮ ಆತ್ಮವನ್ನು ಸಂಪೂರ್ಣವಾಗಿ ತೃಪ್ತಿಪಡಿಸುವುದಿಲ್ಲ.

ದೇವರು ಸ್ತುತಿಯಿಂದಲೂ ಪ್ರಭಾವಿತನಾಗುವುದಿಲ್ಲ, ಏಕೆಂದರೆ ಅವನಲ್ಲಿ ಅಹಂಕಾರವೇ ಇಲ್ಲ. ನಿಮ್ಮನ್ನು ಪ್ರೀತಿಸುವ ನಿಜವಾದ ಆತ್ಮಗಳ ಬಗ್ಗೆ ಮಾತ್ರ ನೀವು ಆಸಕ್ತಿ ಹೊಂದಿರುವಾಗ ಮತ್ತು ಯಾರಿಂದಲೂ ಗಮನವನ್ನು ಬಯಸದಿದ್ದಾಗ, ನಿಜವಾದ ಸ್ನೇಹದ ಅರ್ಥವನ್ನು ನೀವು ಅರ್ಥಮಾಡಿಕೊಂಡಾಗ, ಹೊಗಳಿಕೆಯ ಮಾತುಗಳಿಂದ ನೀವು ಪ್ರಭಾವಿತರಾಗಲು ಸಾಧ್ಯವಾಗದಿದ್ದಾಗ ಆದರೆ ನಿಜವಾದ ಹೃದಯಗಳ ಪ್ರೀತಿಯಿಂದ ಮಾತ್ರ ಪ್ರಭಾವಿತರಾದಾಗ – ಆಗ ದೇವರು ನಿಮ್ಮಿಂದ ಬಯಸುವ ಮತ್ತು ನಿಮಗೆ ನೀಡುವ ಪ್ರೀತಿ ಯಾವುದು ಎಂದು ನಿಮಗೆ ತಿಳಿಯುತ್ತದೆ.

ಅದಕ್ಕಾಗಿಯೇ ಈ ರೀತಿಯ ದೇವಾಲಯಗಳು ಮುಖ್ಯವಾಗಿವೆ – ನಾವೆಲ್ಲರೂ ಧರ್ಮದ ಬಾಹ್ಯ ಆಚರಣೆಗಳನ್ನು ದೇವರ ನೇರ ಅನುಭವವಾಗಿ ಬದಲಾಯಿಸಿಕೊಳ್ಳಲು ಸಾಧ್ಯವಾಗುತ್ತದೆ. ಮಹಾನ್ ಯೇಸು ಕ್ರಿಸ್ತ, ಬಾಬಾಜಿ, ಲಾಹಿರಿ ಮಹಾಶಯ ಮತ್ತು ನನ್ನ ಗುರುಗಳು ಒಟ್ಟಾಗಿ ಚರ್ಚ್ ಅನ್ನು ಕೇವಲ ಆಚರಣೆಗಳ ಚರ್ಚ್ ಆಗದಂತೆ ಉಳಿಸಲು ಮತ್ತು ನಿಜವಾದ ಕ್ರೈಸ್ತ ಧರ್ಮವನ್ನು ಮರಳಿ ತರಲು ಸಮಾಲೋಚಿಸಿದರು. ಅದಕ್ಕಾಗಿಯೇ ನಾನು ನಿಮಗೆ ಸೇವೆ ಮಾಡಲು ಇಲ್ಲಿದ್ದೇನೆ. ಈ ಬೋಧನೆಯು ಪ್ರತಿಯೊಬ್ಬ ವ್ಯಕ್ತಿಯ ಮೋಕ್ಷವಾಗಲಿದೆ. ಜಗತ್ತಿನ ಎಲ್ಲಾ ಅನುಕೂಲಕರ ಆವಿಷ್ಕಾರಗಳು ನಿಮಗೆ ಸಂತೋಷವನ್ನು ತರುವುದಿಲ್ಲ. ಪೂರ್ವದಿಂದ ಇಲ್ಲಿಗೆ ಬಂದ ನಾನು, ಮೊದಲು ಅಮೆರಿಕದ ಅದ್ಭುತ ಯಂತ್ರಗಳು ಮತ್ತು ಭೌತಿಕ ಪ್ರಗತಿಯಿಂದ ಮೋಹಿತನಾಗಿದ್ದೆ; ಆದರೆ ಈ ವಿಷಯಗಳು ನಿಮಗೆ ಶಾಂತಿ ಮತ್ತು ತೃಪ್ತಿಯನ್ನು ತಂದಿಲ್ಲ ಎಂದು ನಾನು ನೋಡುತ್ತೇನೆ. ನಿಜವಾದ ಶಾಂತಿ ಮತ್ತು ತೃಪ್ತಿ ದೇವರ ಆನಂದದಲ್ಲಿವೆ.

ಭ್ರಮೆಯ ಕನಸುಗಳನ್ನು ಮೀರಿದ ನಾಡಿನಲ್ಲಿ, ನಿಮ್ಮ ಸ್ವಂತ ಆತ್ಮ ಪ್ರಜ್ಞೆಯ ಶಾಶ್ವತ ಸುರಕ್ಷತೆಯಲ್ಲಿ, ಯಾವುದೇ ಸಾವು, ಯಾವುದೇ ರೋಗ, ಯಾವುದೇ ತೊಂದರೆ ಎಂದಿಗೂ ಪ್ರವೇಶಿಸಲಾರದು. ಆ ಆಶ್ರಯದಲ್ಲಿ ನೆಲೆಗೊಳ್ಳಿ. ಆಳವಾದ, ನಿಯಮಿತ ಧ್ಯಾನದ ಮೂಲಕ ಆ ಪ್ರಜ್ಞೆಯಲ್ಲಿ ನಿಮ್ಮನ್ನು ಸ್ಥಾಪಿಸಿಕೊಳ್ಳಿ, ಮತ್ತು ಅಲ್ಲಿ ನೀವು ಆತನನ್ನು ಕಾಣುವಿರಿ.

ಇದನ್ನು ಹಂಚಿಕೊಳ್ಳಿ