ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಸಮ್ಮೇಳನವಾದ ಕುಂಭ ಮೇಳವು ಗಂಗಾ, ಯಮುನಾ ಮತ್ತು ಅಗೋಚರವಾದ ಸರಸ್ವತಿ ನದಿಗಳ ಪವಿತ್ರ ಸಂಗಮಕ್ಕೆ ವಿಶ್ವದಾದ್ಯಂತದ ಸಾಧಕರನ್ನು ಆಕರ್ಷಿಸುತ್ತದೆ. ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್ (ವೈಎಸ್ಎಸ್/ಎಸ್ ಆರ್ ಎಫ್) ಭಕ್ತರಿಗೆ, ಈ ಮೇಳವು ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ, ಏಕೆಂದರೆ ಯೋಗಿಯ ಆತ್ಮಕಥೆಯಲ್ಲಿ ವಿವರಿಸಿದಂತೆ ಇದು ನಮ್ಮ ಪೂಜ್ಯ ಗುರು ಮತ್ತು ಪರಮಗುರುಗಳಾದ ಮಹಾವತಾರ್ ಬಾಬಾಜಿ, ಲಾಹಿರಿ ಮಹಾಶಯ, ಸ್ವಾಮಿ ಶ್ರೀ ಯುಕ್ತೇಶ್ವರಜಿ ಮತ್ತು ಪರಮಹಂಸ ಯೋಗಾನಂದಜಿ ಅವರ ಪವಿತ್ರ ಉಪಸ್ಥಿತಿಯಿಂದ ಆಶೀರ್ವದಿಸಲ್ಪಟ್ಟಿದೆ.
ತನ್ನ ದೀರ್ಘಕಾಲದ ಸಂಪ್ರದಾಯಕ್ಕೆ ತಕ್ಕಂತೆ, ವೈಎಸ್ಎಸ್ ಜನವರಿ 10 ರಿಂದ ಫೆಬ್ರವರಿ 15 ರವರೆಗೆ ಪ್ರಯಾಗ್ ರಾಜ್ ಕುಂಭ ಮೇಳ — 2025 ರಲ್ಲಿ ಶಿಬಿರವನ್ನು ಸ್ಥಾಪಿಸಿತು, ಸಾವಿರಾರು ವೈಎಸ್ಎಸ್/ಎಸ್ ಆರ್ ಎಫ್ ಭಕ್ತರಿಗೆ, ಕುಟುಂಬಗಳಿಗೆ ಮತ್ತು ಸ್ನೇಹಿತರಿಗೆ ಪ್ರಶಾಂತ ಮತ್ತು ಉದ್ಧರಿಸುವಂತ ತೀರ್ಥಯಾತ್ರೆಯನ್ನು ನೀಡಿತು.
ಪವಿತ್ರ ಆರಂಭ: ಉದ್ಘಾಟನೆ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳು
ವೈಎಸ್ಎಸ್ ಶಿಬಿರವನ್ನು ಜನವರಿ 10 ರಂದು ಸ್ವಾಮಿ ಈಶ್ವರಾನಂದ ಗಿರಿ ಅವರು ಉದ್ಘಾಟಿಸಿದರು. ಶಿಬಿರದಲ್ಲಿ ಉಳಿದುಕೊಂಡಿರುವ ಭಕ್ತರಿಗೆ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಮತ್ತು ವೈಎಸ್ಎಸ್ ಸನ್ಯಾಸಿಗಳು ನಡೆಸಿಕೊಟ್ಟ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳಾದ – ದೈನಂದಿನ ಗುಂಪು ಧ್ಯಾನಗಳು, ಕೀರ್ತನೆಗಳು, ಆಧ್ಯಾತ್ಮಿಕ ಪ್ರವಚನ ಮತ್ತು ವೀಡಿಯೊ ಪ್ರದರ್ಶನಗಳಲ್ಲಿ ಭಾಗವಹಿಸಲು ಅವಕಾಶವಿತ್ತು.
ಸನ್ಯಾಸಿಗಳೊಂದಿಗೆ ಸಮಾಲೋಚನೆಯೂ ಲಭ್ಯವಿತ್ತು, ಇದು ಭಕ್ತರಿಗೆ ಪರಮಹಂಸ ಯೋಗಾನಂದರ ಬೋಧನೆಗಳನ್ನು ಮತ್ತು ಕ್ರಿಯಾ ಯೋಗದ ಅಭ್ಯಾಸವನ್ನು ಆಳಗೊಳಿಸಿಕೊಳ್ಳಲು ಆಧ್ಯಾತ್ಮಿಕ ಮಾರ್ಗದರ್ಶನವನ್ನು ಪಡೆಯುವ ಅವಕಾಶವನ್ನು ಒದಗಿಸಿತು.
“ಪ್ರಶಾಂತ, ಆನಂದಮಯ, ದೈವಿಕ! ಸರಿ ಸಾಟಿಯಿಲ್ಲದ, ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸಿಗುವ ಆಧ್ಯಾತ್ಮಿಕ ಅನುಭವ.”
– ಎಲ್. ಎನ್., ತೆಲಂಗಾಣ
ಭಕ್ತರಿಂದ ಉತ್ಸಾಹಭರಿತ ಭಾಗವಹಿಸುವಿಕೆ
ವೈಎಸ್ಎಸ್ ಶಿಬಿರವು ಉತ್ಸಾಹಭರಿತ ಭಾಗವಹಿಸುವಿಕೆಯನ್ನು ಕಂಡಿತು, ವಿಶ್ವದ ವಿವಿಧ ಮೂಲೆಗಳಿಂದ ಸುಮಾರು 2,500 ಭಕ್ತರು ಭೇಟಿ ನೀಡಿದರು. ಪ್ರತಿದಿನ ಸುಮಾರು 300 ಭಕ್ತರು ಶಿಬಿರದ ಚಟುವಟಿಕೆಗಳಲ್ಲಿ ಭಾಗವಹಿಸಿದರು, ಇದು ದೈವಿಕ ಮೈತ್ರಿಯ ರೋಮಾಂಚಕಾರಿ ಕೇಂದ್ರವಾಯಿತು.
ನಿಸ್ವಾರ್ಥ ಸೇವಾ ಮನೋಭಾವವು ಶಿಬಿರದಲ್ಲಿ ವ್ಯಾಪಿಸಿತು, ಶಿಬಿರವು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು 100 ಕ್ಕೂ ಹೆಚ್ಚು ಭಕ್ತರು ಈ ಕಾರ್ಯಕ್ರಮದುದ್ದಕ್ಕೂ ಸ್ವಯಂಪ್ರೇರಿತರಾಗಿ ಭಾಗವಹಿಸಿದ್ದರು. ಸ್ವಯಂಸೇವಕರು ಪುಸ್ತಕಗಳು, ಸ್ವಾಗತ, ಅಡುಗೆಮನೆ, ಆತಿಥ್ಯ ಇತ್ಯಾದಿ ವಿಭಾಗಗಳಲ್ಲಿ ಭಾಗವಹಿಸಿದರು.
“ನಾನು ನಮ್ಮ ಗುರೂಜಿಯವರ ಪ್ರೀತಿ ಮತ್ತು ಆತ್ಮೀಯತೆಯಿಂದ ತುಂಬಿದ ನನ್ನ ತಾಯಿಯ ಮನೆಯಲ್ಲಿದ್ದಂತೆ ಭಾಸವಾಯಿತು. ಇಡೀ ಅನುಭವ ಅಲೌಕಿಕವಾಗಿತ್ತು…. ನಮಗೆ ತುಂಬಾ ಪ್ರೀತಿ ಮತ್ತು ಕಾಳಜಿಯಿಂದ ಸೇವೆ ಸಲ್ಲಿಸಿದ ಪ್ರತಿಯೊಬ್ಬ ಸ್ವಯಂಸೇವಕರಲ್ಲಿ ಗುರೂಜಿಯ ಉಪಸ್ಥಿತಿಯನ್ನು ನಾವು ಅನುಭವಿಸಬಹುದಿತ್ತು.”
– ಜೆ. ಎಲ್., ಆಂದ್ರ ಪ್ರದೇಶ
ಉಳಿದುಕೊಳ್ಳಲು ಆರಾಮದಾಯಕ ವ್ಯವಸ್ಥೆಗಳು
ಆರಾಮದಾಯಕ ಮತ್ತು ಆಧ್ಯಾತ್ಮಿಕತೆಯಿಂದ ಸಮೃದ್ಧವಾದ ವಾಸ್ತವ್ಯವನ್ನು ಖಚಿತಪಡಿಸಿಕೊಳ್ಳಲು, ಹಿಂದಿನ ಮೇಳಗಳಿಗೆ ಹೋಲಿಸಿದರೆ ವೈಎಸ್ಎಸ್ ಶಿಬಿರದಲ್ಲಿ ಹಲವಾರು ಸುಧಾರಣೆಗಳನ್ನು ಮಾಡಲಾಗಿತ್ತು:
- ಭಕ್ತರ ಅನುಕೂಲಕ್ಕಾಗಿ ಮಂಚಗಳು, ಕಂಬಳಿಗಳು ಮತ್ತು ಬಿಸಿ ನೀರನ್ನು ಒದಗಿಸುವುದು.
- ಚಳಿಯಿಂದ ರಕ್ಷಣೆಗಾಗಿ ಇಡೀ ಶಿಬಿರವನ್ನು ಟಾರ್ಪಾಲಿನ್ ನಿಂದ ಮುಚ್ಚಲಾಗಿತ್ತು.
- ಹೆಂಚಿನ ನೆಲಹಾಸುಗಳನ್ನು ಹೊಂದಿದ್ದ ಆರೋಗ್ಯಕರ ಶೌಚಾಲಯಗಳನ್ನು ಎಚ್ಚರಿಕೆಯಿಂದ ನಿರ್ವಹಿಸಲಾಯಿತು.
ಶಿಬಿರದ ಪ್ರಶಾಂತ ವಾತಾವರಣವನ್ನು ಭಕ್ತರು ಬಹಳವಾಗಿ ಮೆಚ್ಚಿಕೊಂಡರು, ಕುಂಭ ಮೇಳದ ಜನಸಂದಣಿಯ ನಡುವೆ ಇದು ಶಾಂತಿಯುತ ನೆಲೆಯಾಯಿತು.
ಇನ್ನೊಬ್ಬ ಭಕ್ತರು ಹೇಳಿದರು: “ಈ ಬಾರಿ, ಎಲ್ಲವೂ ತುಂಬಾ ಸುಧಾರಿಸಿತ್ತು! ಮಂಚಗಳು, ಕಂಬಳಿಗಳು, ಚಾರ್ಜಿಂಗ್ ಪಾಯಿಂಟ್ ಗಳು ಮತ್ತು ನೈರ್ಮಲ್ಯದ ವ್ಯವಸ್ಥೆಗಳು ಅತ್ಯುತ್ತಮವಾಗಿದ್ದವು. ಧ್ಯಾನ ಸಭಾಂಗಣ, ಸ್ವಾಗತ, ಸಭಾ ಕೊಠಡಿಗಳು ಎಲ್ಲವೂ ತುಂಬಾ ಸುವ್ಯವಸ್ಥಿತವಾಗಿದ್ದವು. ವಾತಾವರಣವು ಹಿತಕರವಾಗಿತ್ತು, ಮತ್ತು ಶಿಬಿರವು ವಿಶಾಲವಾಗಿತ್ತು. ಸಾತ್ವಿಕ ಆಹಾರವು ಪೋಷಕವಾಗಿತ್ತು, ಮತ್ತು ಗಂಗಾನದಿಯ ಬಳಿ ಧ್ಯಾನ ಮಾಡುವುದು ನಿಜವಾದ ಆಶೀರ್ವಾದವಾಗಿತ್ತು. ಕುಂಭಮೇಳದಲ್ಲಿ ಈ ಅದ್ಭುತ ಅನುಭವಕ್ಕಾಗಿ ನಾವು ಗುರುದೇವ, ವೈಎಸ್ಎಸ್ ಮತ್ತು ಸ್ವಯಂಸೇವಕರಿಗೆ ಕೃತಜ್ಞರಾಗಿದ್ದೇವೆ.”
ಯಾತ್ರಾರ್ಥಿಗಳಿಗೆ ವೈದ್ಯಕೀಯ ಸೇವೆ
ವೈಎಸ್ಎಸ್ ಭಕ್ತರಿಗೆ ಸೇವೆ ಸಲ್ಲಿಸುವುದರ ಜೊತೆಗೆ, ಕುಂಭ ಮೇಳದಲ್ಲಿ ಭಾಗವಹಿಸುವ ಸಾವಿರಾರು ಯಾತ್ರಾರ್ಥಿಗಳಿಗೆ ಶಿಬಿರವು ವೈದ್ಯಕೀಯ ಸಹಾಯವನ್ನು ಸಹ ನೀಡಿತು. ಪ್ರತಿದಿನವೂ ನಿಸ್ವಾರ್ಥವಾಗಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ ಸಮರ್ಪಿತ ವೈದ್ಯರ ಸಹಾಯದಿಂದ, ಶಿಬಿರವು ಸಹಾಯವನ್ನು ಕೋರಿದ ಎಲ್ಲರಿಗೂ ಸಮಯೋಚಿತ ಮತ್ತು ಸಹಾನುಭೂತಿಯ ಆರೋಗ್ಯ ರಕ್ಷಣೆಯನ್ನು ಖಾತ್ರಿಪಡಿಸಿತು. ಶಿಬಿರದ ಸ್ಥಳದಲ್ಲಿ ವೈಎಸ್ಎಸ್ ನಡೆಸುತ್ತಿರುವ ಡಿಸ್ಪೆನ್ಸರಿಯಿಂದ ಸುಮಾರು 20,000 ಜನರು ಉಚಿತ ವೈದ್ಯಕೀಯ ನೆರವು ಪಡೆದರು.
ಆಧ್ಯಾತ್ಮಿಕ ವ್ಯಾಪ್ತಿ: ಗುರೂಜಿಯವರ ಬೋಧನೆಗಳನ್ನು ಹಂಚಿಕೊಳ್ಳುವುದು
25,000 ಕ್ಕೂ ಹೆಚ್ಚು ಸಂದರ್ಶಕರು ಪುಸ್ತಕ ಮಳಿಗೆಗೆ ಭೇಟಿ ನೀಡಿದರು; ಅಲ್ಲಿ ಸ್ವಯಂಸೇವಕರು ಮತ್ತು ಸನ್ಯಾಸಿಗಳು ಗುರುದೇವರ ಬೋಧನೆಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬಯಸುವ ಉತ್ಸಾಹಿ ಸತ್ಯಾನ್ವೇಷಕರೊಂದಿಗೆ ಸಂವಹನ ನಡೆಸಲು ಲಭ್ಯವಿದ್ದರು ಮತ್ತು ಅವರಲ್ಲಿ ಕೆಲವರು ವೈಎಸ್ಎಸ್ ಪಾಠಗಳಿಗೆ ನೋಂದಾಯಿಸಿಕೊಂಡರು.
ಮುಕ್ತಾಯ
ವಾರಗಳ ಆಧ್ಯಾತ್ಮಿಕ ಉನ್ನತಿಯ ನಂತರ, ವೈಎಸ್ಎಸ್ ಕುಂಭ ಮೇಳ ಶಿಬಿರವು ಫೆಬ್ರವರಿ 15 ರಂದು ಶಿಬಿರದ ಆಡಳಿತಾಧಿಕಾರಿ ಸ್ವಾಮಿ ಧೈರ್ಯಾನಂದ ಗಿರಿ ಅವರ ಸಮಾರೋಪ ಸತ್ಸಂಗದೊಂದಿಗೆ ಕೊನೆಗೊಂಡಿತು. ಭಕ್ತರು ಕೃತಜ್ಞತೆ, ಪ್ರೀತಿ ಮತ್ತು ದೇವರು ಮತ್ತು ಗುರುಗಳ ಕೃಪೆಯಿಂದ ತುಂಬಿದ ಹೃದಯಗಳೊಂದಿಗೆ ನಿರ್ಗಮಿಸಿದರು. ಆಳವಾದ ಧ್ಯಾನ, ದೈವಿಕ ಮೈತ್ರಿ ಮತ್ತು ಗುರೂಜಿಯ ಅಪರಿಮಿತ ಪ್ರೀತಿಯ ಆಶೀರ್ವಾದಗಳನ್ನು ಅವರು ತಮ್ಮೊಂದಿಗೆ ಕೊಂಡೊಯ್ದರು.
ಶಿಬಿರದಲ್ಲಿ ಹಂಚಿಕೊಂಡ ದೈವಿಕ ಕ್ಷಣಗಳ ನೋಟಕ್ಕಾಗಿ ದಯವಿಟ್ಟು ಗುಂಡಿಯನ್ನು ಒತ್ತಿ.


















