ಸೆಪ್ಟಂಬರ್ 15, 2024 ರಂದು ಸಾಧನಾ ಸಂಗಮದ ಮುಕ್ತಾಯದ ಕಾರ್ಯಕ್ರಮದಲ್ಲಿ ನಡೆದ ನೇರ-ಪ್ರಸಾರದ ಸತ್ಸಂಗದ ಸಮಯದಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿಯವರು ವೈಎಸ್‌ಎಸ್ ಚೆನ್ನೈ ಏಕಾಂತಧಾಮವನ್ನು ಇನ್ನು ಮುಂದೆ ವೈಎಸ್‌ಎಸ್ ಆಶ್ರಮವೆಂದು ಕರೆಯಲಾಗುತ್ತದೆ ಮತ್ತು ಮುಂದಿನ ವರ್ಷಗಳಲ್ಲಿ ಅದನ್ನು ಒಂದು ಸಮೃದ್ಧ ಆಶ್ರಮವನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ವಿಧ್ಯುಕ್ತವಾಗಿ ಘೋಷಿಸಿದರು ಎಂದು ನಿಮ್ಮೊಡನೆ ಹಂಚಿಕೊಳ್ಳಲು ನಮಗೆ ಬಹಳ ಹರ್ಷವಾಗುತ್ತಿದೆ.
ಸ್ವಾಮಿ ಚಿದಾನಂದಜಿ ಮಾಡಿರುವ ವಿಶೇಷ ಪ್ರಕಟಣೆಯನ್ನು ಈ ಕೆಳಗೆ ನೋಡಿ.

ಒಂದು ಆಧ್ಯಾತ್ಮಿಕ ಓಯಸಿಸ್
ಚೆನ್ನೈ ನಗರದ ಮಧ್ಯಭಾಗದಿಂದ 40 ಕಿಲೋಮೀಟರ್ ದೂರದಲ್ಲಿರುವ 17 ಎಕರೆಯ ಈ ಆಧ್ಯಾತ್ಮಿಕ ಓಯಸಿಸ್ ಅನ್ನು ವೈಎಸ್ಎಸ್ ಭಕ್ತರಿಗೆ ಏಕಾಂತಧಾಮದ ಕೇಂದ್ರವಾಗಿ ಸೇವೆ ಸಲ್ಲಿಸಲು 2010 ರಲ್ಲಿ ಉದ್ಘಾಟಿಸಲಾಯಿತು. ಸರೋವರ ಮತ್ತು ಮೀಸಲು ಅರಣ್ಯದ ನಡುವೆ ನೆಲೆಸಿರುವ ಇದು ಮೌನ, ಏಕಾಂತ ಮತ್ತು ಪ್ರಶಾಂತತೆಯ ಆದರ್ಶ ಆಶ್ರಯಧಾಮವನ್ನು ಒದಗಿಸುತ್ತದೆ.




ವೈಎಸ್‌ಎಸ್‌ನ ಎಲ್ಲ ನಾಲ್ಕು ಆಶ್ರಮಗಳೂ ಉತ್ತರ ಮತ್ತು ಪೂರ್ವ ಭಾರತದಲ್ಲಿರುವುದರಿಂದ, ದಕ್ಷಿಣ ಭಾರತದ ಭಕ್ತರು ಅಲ್ಲಿಗೆ ಹೋಗಲು ಮತ್ತು ಸನ್ಯಾಸಿಗಳ ಸಂಪರ್ಕದಿಂದ ಪ್ರಯೋಜನ ಪಡೆಯಲು ಬಹಳ ದೂರ ಪಯಣಿಸಬೇಕಾಗಿತ್ತು. ದಕ್ಷಿಣದಲ್ಲಿ ಹೆಚ್ಚುತ್ತಿರುವ ಭಕ್ತರ ಸಂಖ್ಯೆಗೆ (ತಮಿಳು ಮತ್ತು ತೆಲುಗಿನಲ್ಲಿ ವೈಎಸ್ಎಸ್ ಪಾಠಗಳ ಬಿಡುಗಡೆಯ ಭಾಗಶಃ ಪರಿಣಾಮ), ಸೌಕರ್ಯ ಒದಗಿಸುವ ಸಲುವಾಗಿ ಫೆಬ್ರವರಿ 2024 ರಿಂದ ಪ್ರಾರಂಭವಾಗುವ ಚೆನ್ನೈ ಏಕಾಂತಧಾಮದಲ್ಲಿ ಸನ್ಯಾಸಿಗಳು ನಿರಂತರವಾಗಿ ನೆಲೆಸುವಂತೆ ಮಾಡಲು ವೈಎಸ್ಎಸ್ ನಿರ್ಧರಿಸಿತು. ಸನ್ಯಾಸಿಗಳ ನಿರಂತರ ಉಪಸ್ಥಿತಿಯು ಭಕ್ತರಿಗೆ ಗಣನೀಯವಾಗಿ ಪ್ರಯೋಜನವನ್ನು ನೀಡಿದೆ, ಇದು ಸಾಧನಾ ಸಂಗಮಗಳು, ಧ್ಯಾನ ಶಿಬಿರಗಳು ಹಾಗೂ ಇಂಗ್ಲಿಷ್, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ನಡೆಸಲಾದ ಕಾರ್ಯಕ್ರಮಗಳಲ್ಲಿ ಅತೀ ಹೆಚ್ಚಿನ ಭಾಗವಹಿಸುವಿಕೆಗೆ ಕಾರಣವಾಯಿತು. ಈ ಪ್ರಗತಿಯಿಂದ ಉತ್ತೇಜಿತರಾದ ಸ್ವಾಮಿ ಚಿದಾನಂದಜಿ ಅವರು, ಏಕಾಂತಧಾಮವನ್ನು ವೈಎಸ್‌ಎಸ್ ಆಶ್ರಮವೆಂದು ಕರೆಯಲಾಗುವುದು ಎಂದು ವಿಧ್ಯುಕ್ತವಾಗಿ ಪ್ರಕಟಿಸಿದರು.
ವೈಯಕ್ತಿಕ ಧ್ಯಾನ ಶಿಬಿರಗಳು ಮತ್ತು ಮುಂಬರುವ ಕಾರ್ಯಕ್ರಮಗಳಲ್ಲಿ ನಮ್ಮೊಂದಿಗೆ ಸೇರಿಕೊಳ್ಳಿ
ಚೆನ್ನೈನಲ್ಲಿರುವ ನಮ್ಮ ಹೊಸ ಆಶ್ರಮಕ್ಕೆ ಭೇಟಿ ನೀಡಲು ನಾವು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇವೆ, ಇಲ್ಲಿ ಪ್ರಶಾಂತವಾದ ನೈಸರ್ಗಿಕ ಪರಿಸರವು ಆಧ್ಯಾತ್ಮಿಕ ಪ್ರಗತಿಗಾಗಿ ಉನ್ನತೀಕರಿಸುವ ವಾತಾವರಣವನ್ನು ಉತ್ತೇಜಿಸುತ್ತದೆ. ಇಲ್ಲಿ, ನೀವು ಆಳವಾದ ಸಾಧನೆಯಲ್ಲಿ ಮುಳುಗಬಹುದು, ಪರಿವರ್ತನಾಶೀಲ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು ಮತ್ತು ಈ ಪವಿತ್ರ ಆಶ್ರಯಧಾಮದ ಶಾಂತಿ ಮತ್ತು ನೆಮ್ಮದಿಯನ್ನು ಅನುಭವಿಸಬಹುದು.
ಈ ಪಯಣದಲ್ಲಿ ಮುಂದಿನ ಹೆಜ್ಜೆ
ಸಂಪೂರ್ಣ ಆಶ್ರಮವಾಗಿ ಕಾರ್ಯನಿರ್ವಹಿಸಲು ಬೇಕಾಗಿರುವ ಎಲ್ಲ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿರುವ ಮಾಸ್ಟರ್ ಪ್ಲಾನ್ ಅನ್ನು ರಚಿಸಲು ನಾವು ಪ್ರಸ್ತುತ ವಾಸ್ತುಶಿಲ್ಪಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಆದರೆ, ಯೋಜನೆಯನ್ನು ಅಂತಿಮಗೊಳಿಸಲು ಮತ್ತು ಈ ಸೌಲಭ್ಯಗಳ ನಿರ್ಮಾಣವನ್ನು ಪೂರ್ಣಗೊಳಿಸಲು ಸಮಯ ಹಿಡಿಯುತ್ತದೆ ಮತ್ತು ಮುಂದಿನ ಹಲವಾರು ವರ್ಷಗಳಲ್ಲಿ ಅಭಿವೃದ್ಧಿ ನಡೆಯುತ್ತಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.
ಈ ಮಧ್ಯೆ, ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಭಕ್ತರ ಸಂಖ್ಯೆಯು ಹೆಚ್ಚಾಗುತ್ತಿರುವುದರಿಂದ, ಧ್ಯಾನ ಶಿಬಿರವು ಸ್ಥಳಾವಕಾಶದ ಕೊರತೆಯನ್ನು ಎದುರಿಸುತ್ತಿದೆ. ಅವುಗಳೆಂದರೆ ಸನ್ಯಾಸಿಗಳು ಮತ್ತು ಸೇವಕರಿಗೆ ಕೊಠಡಿಗಳು ಹಾಗೂ ಸೌಲಭ್ಯಗಳ ಕೊರತೆ, ಭಕ್ತರಿಗೆ ಸೀಮಿತ ವಸತಿಗಳು, ಮತ್ತು ಸೀಮಿತವಾಗಿರುವ ಕಚೇರಿ.
ಈ ಸವಾಲುಗಳನ್ನು ಆದಷ್ಟು ಬೇಗ ಪರಿಹರಿಸಲು, ಸಂದರ್ಶಕರು, ಭಕ್ತರು, ಸೇವಕರು ಮತ್ತು ಸನ್ಯಾಸಿಗಳ ಅವಶ್ಯಕತೆಗಳನ್ನು ಪೂರೈಸಲು ಈಗಿರುವ ಸೌಲಭ್ಯಗಳನ್ನು ನಾವು ಹೆಚ್ಚಿಸುತ್ತಿದ್ದೇವೆ. ಅವುಗಳೆಂದರೆ, ಹೆಚ್ಚಿನ ಏಕಾಂತತೆಗಾಗಿ ಈಗಿರುವ ವಸತಿ ನಿಲಯಗಳನ್ನು (ಡಾರ್ಮಿಟರಿ) ಪ್ರತ್ಯೇಕ ಸ್ನಾನಗೃಹಗಳಿರುವ ಅತಿಥಿ ಕೊಠಡಿಗಳಾಗಿ ಪರಿವರ್ತಿಸುವುದು, ಪುರುಷ ಮತ್ತು ಸ್ತ್ರೀ ಭಕ್ತರಿಗಾಗಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸುವುದು ಮತ್ತು ಸನ್ಯಾಸಿಗಳು ಮತ್ತು ಸೇವಕರಿಗೆ ಉಳಿದುಕೊಳ್ಳಲು ಮತ್ತು ಕೆಲಸ ಮಾಡಲು ಪ್ರತ್ಯೇಕ ವಿಭಾಗಗಳನ್ನು ಹಾಗೂ ಹೆಚ್ಚುವರಿ ಕಚೇರಿ ಮತ್ತು ಸ್ವಾಗತ ಕಟ್ಟಡಗಳನ್ನು ನಿರ್ಮಿಸುವುದು.
ನಿಮ್ಮ ಸಹಾಯ ಮತ್ತು ಸಹಕಾರಕ್ಕಾಗಿ ಅಭಿನಂದನೆಗಳು
ನಾವು ಈ ಆಧ್ಯಾತ್ಮಿಕ ಧಾಮವನ್ನು ಅಭಿವೃದ್ಧಿಪಡಿಸುವುದನ್ನು ಮತ್ತು ವಿಸ್ತರಿಸುವುದನ್ನು ಮುಂದುವರಿಸುತ್ತಿರುವಾಗ, ಪ್ರಾರ್ಥನೆಗಳ ರೂಪದಲ್ಲಿ, ಸ್ವಯಂ ಸೇವಕರಾಗಿ ಕೆಲಸ ಮಾಡುವುದರಲ್ಲಿ ಮತ್ತು ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ರೂಪದಲ್ಲಿ ನಿಮ್ಮ ಸಹಕಾರವನ್ನು ನಾವು ನಮ್ರತೆಯಿಂದ ಬಯಸುತ್ತೇವೆ. ನಿಮ್ಮ ಉದಾರ ಕೊಡುಗೆಗಳು ಈ ಆಶ್ರಮವನ್ನು ಪೋಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ, ಇದು ಎಲ್ಲರಿಗೂ ಆಧ್ಯಾತ್ಮಿಕ ಪುನರುಜ್ಜೀವನದ ಚೈತನ್ಯ ತುಂಬಿದ ಕೇಂದ್ರವಾಗಿ ಅರಳಲು ಸಹಾಯ ಮಾಡುತ್ತದೆ.
ವಿಚಾರಣೆಗಾಗಿ, ಅಥವಾ ನಮ್ಮನ್ನು ಸಂಪರ್ಕಿಸಲು, ದಯವಿಟ್ಟು ಇಲ್ಲಿ ಒತ್ತಿ.
ಭಗವಂತ ಮತ್ತು ಗುರುಗಳು ನಿಮ್ಮನ್ನು ಸದಾ ಆಶೀರ್ವದಿಸಲಿ ಮತ್ತು ನಿಮಗೆ ಮಾರ್ಗದರ್ಶನ ನೀಡಲಿ.