ಬಾಬಾಜಿಯ ಹೆಸರನ್ನು ಯಾರು ಭಕ್ತಿಯಿಂದ ಯಾವಾಗ ಉಚ್ಚರಿಸಿದರೂ ಅಂತಹ ಭಕ್ತರು ತತ್ ಕ್ಷಣದಲ್ಲೇ ಅವರ ಆಧ್ಯಾತ್ಮಿಕ ಕೃಪೆಗೆ ಪಾತ್ರರಾಗುತ್ತಾರೆ.
— ಲಾಹಿರಿ ಮಹಾಶಯ ಯೋಗಿಯ ಆತ್ಮಕಥೆ ಪುಸ್ತಕದಲ್ಲಿ
ಶತಮಾನಗಳಿಂದ ಜಗತ್ತಿನಲ್ಲಿ ಕಳೆದುಹೋಗಿದ್ದ ಕ್ರಿಯಾಯೋಗದ ಪ್ರಾಚೀನ ವಿಜ್ಞಾನವನ್ನು, ಪರಮಹಂಸ ಯೋಗಾನಂದರು ತಮ್ಮ ಯೋಗಿಯ ಆತ್ಮಕಥೆ ಯಲ್ಲಿ ವಿವರಿಸಿದಂತೆ, 19ನೇ ಶತಮಾನದಲ್ಲಿ ಅಮರ ಅವತಾರ ಮಹಾವತಾರ ಬಾಬಾಜಿಯವರು ಪುನರುಜ್ಜೀವನಗೊಳಿಸಿದರು. ತಮ್ಮ ಶಿಷ್ಯರಾದ ಶ್ರೀ ಶ್ರೀ ಲಾಹಿರಿ ಮಹಾಶಯರಿಗೆ ದೀಕ್ಷೆ ನೀಡುವ ಮೂಲಕ, ಬಾಬಾಜಿಯವರು ಮಾನವಕುಲವನ್ನು ಭಗವಾನ್ ಕೃಷ್ಣನ ಕಾಲದಿಂದಲೂ ನಡೆದುಕೊಂಡು ಬಂದಿರುವ ಮತ್ತು ಪತಂಜಲಿ ಹಾಗೂ ಇತರ ಆಧ್ಯಾತ್ಮಿಕ ಗುರುಗಳಿಂದಲೂ ಅಭ್ಯಾಸಿಸಲ್ಪಟ್ಟ ಆಧ್ಯಾತ್ಮಿಕ ಪರಂಪರೆಗೆ ಮರುಸಂಪರ್ಕಿಸಿದರು.
ಜುಲೈ 25, 1920 ರಂದು, ಪರಮಹಂಸ ಯೋಗಾನಂದರು ಕ್ರಿಯಾಯೋಗ ಬೋಧನೆಗಳನ್ನು ಪಶ್ಚಿಮಕ್ಕೆ ಕೊಂಡೊಯ್ಯಲು ಅಮೆರಿಕಕ್ಕೆ ತಮ್ಮ ಪ್ರಯಾಣವನ್ನು ಕೈಗೊಳ್ಳುವ ಸ್ವಲ್ಪ ಸಮಯದ ಮೊದಲು, ತಾವು ಕೈಗೊಳ್ಳಲಿದ್ದ ಉದ್ದೇಶದ ಬಗ್ಗೆ ದೈವಿಕ ಭರವಸೆಗಾಗಿ ತಮ್ಮ ಕಲ್ಕತ್ತಾ ಮನೆಯಲ್ಲಿ ಆಳವಾದ ಪ್ರಾರ್ಥನೆಯಲ್ಲಿ ಮಗ್ನರಾಗಿದ್ದರು. ಆಗ ಮಹಾವತಾರ ಬಾಬಾಜಿ ಅವರಿಗೆ ಕಾಣಿಸಿಕೊಂಡು ಹೀಗೆ ಹೇಳಿದರು: “ನಿನ್ನ ಗುರುವಿನ ಆಜ್ಞೆಯನ್ನು ಪಾಲಿಸಿ ಅಮೆರಿಕಕ್ಕೆ ಹೋಗು. ಭಯಪಡಬೇಡ; ನಿನಗೆ ರಕ್ಷಣೆ ಇರುತ್ತದೆ. ಪಶ್ಚಿಮದಲ್ಲಿ ಕ್ರಿಯಾಯೋಗದ ಸಂದೇಶವನ್ನು ಪ್ರಸಾರ ಮಾಡಲು ನಾನು ನಿನ್ನನ್ನು ಆರಿಸಿಕೊಂಡಿದ್ದೇನೆ.”
ಬಾಬಾಜಿ ಮತ್ತು ಯೋಗಾನಂದಜಿಯವರ ನಡುವಿನ ಈ ಮಹತ್ವದ ಭೇಟಿಯನ್ನು ವೈಎಸ್‌ಎಸ್/ಎಸ್‌ಆರ್‌ಎಫ್ ಭಕ್ತರು ಪ್ರತಿ ವರ್ಷ ಮಹಾವತಾರ ಬಾಬಾಜಿ ಸ್ಮೃತಿ ದಿವಸ ಎಂದು ಸ್ಮರಿಸುತ್ತಾರೆ.
ಜುಲೈ ತಿಂಗಳಲ್ಲಿ ಆಚರಿಸುವ ಈ ಪವಿತ್ರ ಸಂದರ್ಭದಲ್ಲಿ ಕೆಳಗಿನ ಕಾರ್ಯಕ್ರಮಗಳಲ್ಲಿ ನಮ್ಮೊಂದಿಗೆ ಭಾಗವಹಿಸಲು ನಾವು ನಿಮ್ಮನ್ನು ಸ್ವಾಗತಿಸುತ್ತೇವೆ:
ವಿಶೇಷ ಪ್ರವಚನಗಳು
ಕ್ರಿಯಾಯೋಗದ ಅಮರ ಗುರು: ಮಹಾವತಾರ ಬಾಬಾಜಿ
ಪರಮಹಂಸ ಯೋಗಾನಂದರು ರಚಿಸಿದ, ವಿಶ್ವವಿಖ್ಯಾತ ಆಧ್ಯಾತ್ಮಿಕ ಶ್ರೇಷ್ಠ ಕೃತಿಯಾದ ಯೋಗಿಯ ಆತ್ಮಕಥೆ, ಯಲ್ಲಿ ಉಲ್ಲೇಖಿಸಲಾದ ನಿಗೂಢ ಯೋಗಿ ಮಹಾವತಾರ ಬಾಬಾಜಿ ಯಾರು? ಬದರಿ ನಾರಾಯಣದ ಬಳಿಯ ಉತ್ತರ ಹಿಮಾಲಯದ ಕಡಿದಾದ ಪರ್ವತಗಳಲ್ಲಿ ವಾಸಿಸುವ ಅಮರ ಗುರುವಾಗಿ ಪರಿಚಯಿಸಲ್ಪಟ್ಟಿರುವ ಬಾಬಾಜಿಯವರನ್ನು ಮಹಾವತಾರ (ಮಹಾನ್ ಅವತಾರ) ಎಂದು ವರ್ಣಿಸಲಾಗಿದೆ. ಅವರು ಪುನರ್ಜನ್ಮದ ಚಕ್ರದಿಂದ ಸಂಪೂರ್ಣವಾಗಿ ಹೊರಬಂದಿರುವ ಮತ್ತು ಮಾನವಕುಲದ ಆಧ್ಯಾತ್ಮಿಕ ಉನ್ನತಿಗಾಗಿ ಸಹಸ್ರಾರು ವರ್ಷಗಳಿಂದ ಕಾಂತಿಯುತ, ಯೌವನದ ದೈಹಿಕ ರೂಪವನ್ನು ಕಾಯ್ದುಕೊಂಡಿರುವ ಒಬ್ಬ ದಿವ್ಯ ಅವತಾರ. ಬಾಬಾಜಿಯವರನ್ನು ಭೇಟಿಯಾದವರು ಅವರ ಸ್ವಭಾವವು ಶುದ್ಧ ಪ್ರೀತಿಯಿಂದ ಕೂಡಿದೆ ಮತ್ತು ವಿನಯವು ಅವರ ಪ್ರಮುಖ ಲಕ್ಷಣವಾಗಿದೆ ಎಂದು ಹೇಳುತ್ತಾರೆ. ಅವರ ಪವಿತ್ರ ಹೆಸರನ್ನು ಭಕ್ತಿಯಿಂದ ಉಚ್ಚರಿಸಿದರೆ ತಕ್ಷಣವೇ ಆಶೀರ್ವಾದ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
ಮಹಾವತಾರ್ ಬಾಬಾಜಿ ಬಗ್ಗೆ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್‌ಎಸ್) ಸನ್ಯಾಸಿಗಳು ಇಂಗ್ಲಿಷ್, ಹಿಂದಿ, ಬಂಗಾಳಿ, ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನೀಡಿದ ಪ್ರವಚನಗಳ ಮೂಲಕ ಇನ್ನಷ್ಟು ತಿಳಿದುಕೊಳ್ಳಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.
ಈ ಪ್ರವಚನಗಳ ಮೂಲಕ, ಭಗವಂತನ ಸಾಕ್ಷಾತ್ಕಾರದ ಪವಿತ್ರ, ವೈಜ್ಞಾನಿಕ ತಂತ್ರವಾದ ಕ್ರಿಯಾ ಯೋಗವು ಹೇಗೆ ಒಂದು ಅಖಂಡ ಗುರು-ಶಿಷ್ಯ ಪರಂಪರೆಯ ಮೂಲಕ ಹರಿದುಬಂತು ಎಂಬುದನ್ನು ಕಂಡುಕೊಳ್ಳಿ—ಬಾಬಾಜಿಯವರಿಂದ ಲಾಹಿರಿ ಮಹಾಶಯರಿಗೆ, ಸ್ವಾಮಿ ಶ್ರೀ ಯುಕ್ತೇಶ್ವರರಿಗೆ ಮತ್ತು ಅಂತಿಮವಾಗಿ ಪರಮಹಂಸ ಯೋಗಾನಂದರಿಗೆ. ಇವರು 1920ರಲ್ಲಿ ಈ ಬೋಧನೆಗಳನ್ನು ಪಶ್ಚಿಮಕ್ಕೆ ತರಲು ಬಾಬಾಜಿಯವರಿಂದ ವೈಯಕ್ತಿಕವಾಗಿ ನಿಯೋಜಿಸಲ್ಪಟ್ಟಿದ್ದರು.
ಈ ಪ್ರವಚನಗಳು ನಂತರ ವೀಕ್ಷಿಸಲು ಲಭ್ಯವಿರುತ್ತವೆ.
ಕ್ರಿಯಾಯೋಗದ ಅಮರ ಗುರು: ಮಹಾವತಾರ ಬಾಬಾಜಿ
1:07:34
1:14:14
58:58
1:07:20
ಮುಂಬರುವ ಭಾಷೆಗಳು
- ಬಂಗಾಳಿ ಮತ್ತು ಕನ್ನಡ: ಶುಕ್ರವಾರ, ಜುಲೈ 24 ರಂದು ಬಿಡುಗಡೆಯಾಗಲಿದೆ.
ವಿಶೇಷ ಸ್ಮರಣಾರ್ಥ ಕಾರ್ಯಕ್ರಮ
ಆನ್‌ಲೈನ್ ಸ್ಮರಣಾರ್ಥ ಧ್ಯಾನ
ಶನಿವಾರ, ಜುಲೈ 25, 2026
ಬೆಳಿಗ್ಗೆ 6:30 – ಬೆಳಿಗ್ಗೆ 8:00 (ಅಧಿಕೃತ ಭಾರತೀಯ ಕಾಲಮಾನ)
ಜುಲೈ 25 ರಂದು, ಮಹಾವತಾರ್ ಬಾಬಾಜಿಯವರ ಗೌರವಾರ್ಥವಾಗಿ ವೈ ಎಸ್ ಎಸ್ ಸನ್ಯಾಸಿಯೊಬ್ಬರು ವಿಶೇಷ ಆನ್‌ಲೈನ್ ಧ್ಯಾನವನ್ನು ನಡೆಸಲಿದ್ದಾರೆ. ಇದರಲ್ಲಿ ಕೀರ್ತನೆಗಳು, ಧ್ಯಾನ ಮತ್ತು ಸ್ಪೂರ್ತಿದಾಯಕ ವಾಚನ ಇರುತ್ತದೆ.
ದಯವಿಟ್ಟು ಗಮನಿಸಿ: ಈ ಕಾರ್ಯಕ್ರಮವು ಜುಲೈ 26, ಭಾನುವಾರ ರಾತ್ರಿ 10 ಗಂಟೆಯ (ಅಧಿಕೃತ ಭಾರತೀಯ ಕಾಲಮಾನ) ವರೆಗೆ ವೀಕ್ಷಣೆಗೆ ಲಭ್ಯವಿರುತ್ತದೆ.
ನೇರ ಕಾರ್ಯಕ್ರಮಗಳು
ಮಹಾವತಾರ ಬಾಬಾಜಿಯವರ ಗೌರವಾರ್ಥವಾಗಿ ವಿಶೇಷ ವ್ಯಕ್ತಿಗತ ಕಾರ್ಯಕ್ರಮಗಳನ್ನು ವೈಎಸ್ಎಸ್ ಆಶ್ರಮಗಳು, ಕೇಂದ್ರಗಳು ಮತ್ತು ಮಂಡಳಿಗಳಲ್ಲಿಯೂ ನಡೆಸಲಾಗುವುದು. ಈ ಕಾರ್ಯಕ್ರಮಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅದರಲ್ಲಿ ಭಾಗವಹಿಸಲು, ದಯವಿಟ್ಟು ನಿಮ್ಮ ಸಮೀಪದ ಧ್ಯಾನ ಕೇಂದ್ರವನ್ನು ಸಂಪರ್ಕಿಸಿ.
ಈ ಪವಿತ್ರ ಸಂದರ್ಭದಲ್ಲಿ, ವೈಎಸ್ಎಸ್/ಎಸ್‌ಆರ್‌ಎಫ್ ಗುರುಗಳ ಪರಂಪರೆಯಿಂದ ನಮಗೆ ದೊರೆತ ಕ್ರಿಯಾಯೋಗ ಮಾರ್ಗದ ಆಶೀರ್ವಾದಗಳಿಗಾಗಿ ಭಕ್ತರು ಪ್ರಣಾಮಿಯನ್ನು ಅರ್ಪಿಸುವ ಮೂಲಕ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಈ ಆತ್ಮವಿಮೋಚಕ ಬೋಧನೆಗಳನ್ನು ಸದ್ಭಾವನೆಯುಳ್ಳ ಸಾಧಕರಿಗೆ ತಲುಪಿಸುವ ವೈಎಸ್ಎಸ್ ಕಾರ್ಯಕ್ಕೆ ನೀವು ಕೊಡುಗೆ ನೀಡಲು ಬಯಸಿದರೆ, ಕೆಳಗೆ ಹಂಚಿಕೊಂಡಿರುವ ಕೊಂಡಿ ಮೂಲಕ ಮಾಡಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.

















