ಯೋಗದಾ ಸತ್ಸಂಗ ಮಠ — ದಕ್ಷಿಣೇಶ್ವರ

ಪಶ್ಚಿಮ ಬಂಗಾಳ

ಇತಿಹಾಸ ಮತ್ತು ಬೆಳವಣಿಗೆ

ಉತ್ತರ ಕೋಲ್ಕತ್ತಾದಲ್ಲಿ ಗಂಗಾನದಿಯ ದಡದಲ್ಲಿರುವ ಯೋಗದಾ ಸತ್ಸಂಗ ಮಠ, ದಕ್ಷಿಣೇಶ್ವರವು, 1917ರಲ್ಲಿ ಪರಮಹಂಸ ಯೋಗಾನಂದರಿಂದ ಸ್ಥಾಪಿಸಲ್ಪಟ್ಟ ಆಧ್ಯಾತ್ಮಿಕ ಸಂಸ್ಥೆಯಾದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್ಎಸ್)ದ ನೋಂದಾಯಿತ ಪ್ರಧಾನ ಕಚೇರಿಯಾಗಿದೆ. ಈ ಸುಂದರ ಆಶ್ರಮದ ಇತಿಹಾಸವು 1939ರಲ್ಲಿ ಮಠವು ಸ್ಥಾಪನೆಯಾದ ಕಾಲದಿಂದ ಹಿಂದಿನದು. ಭವ್ಯವಾದ ಕಟ್ಟಡ ಹಾಗೂ ಪ್ರಶಾಂತ ಪರಿಸರವನ್ನು ಹೊಂದಿರುವ ಈ ಆಸ್ತಿಯನ್ನು ಪರಮಹಂಸಜಿಯವರು ಬಹಳವಾಗಿ ಪ್ರೀತಿಸುತ್ತಿದ್ದರು. 1951ರಲ್ಲಿ, ಅಮೆರಿಕದಲ್ಲಿ ನಡೆದ ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್ ಸಮಾವೇಶದಲ್ಲಿ ದೊಡ್ಡ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತದ ಮತ್ತು ಪ್ರಪಂಚದ ವಿವಿಧ ಭಾಗಗಳಿಂದ ಭಕ್ತರು ದಕ್ಷಿಣೇಶ್ವರ ಆಶ್ರಮಕ್ಕೆ ಭೇಟಿ ನೀಡುವರು ಎಂದು ಅವರು ದೂರದೃಷ್ಟಿಯಿಂದ ಕಂಡಿದ್ದರು.

ವರ್ಷಗಳು ಕಳೆದಂತೆ, ನಮ್ಮ ಪ್ರೀತಿಯ ದಿವಂಗತ ವೈಎಸ್ಎಸ್/ಎಸ್‌ಆರ್‌ಎಫ್ ಅಧ್ಯಕ್ಷರಾದ ಶ್ರೀ ದಯಾ ಮಾತಾ ಮತ್ತು ಶ್ರೀ ಮೃಣಾಲಿನಿ ಮಾತಾ ಅವರ ಪವಿತ್ರ ಉಪಸ್ಥಿತಿಯಿಂದ ಈ ಆಶ್ರಮವು ಪಾವನಗೊಂಡಿದೆ. ಅವರ ಅನೇಕ ಭೇಟಿಗಳ ಸಮಯದಲ್ಲಿ, ಅವರು ಇಲ್ಲಿ ಭಕ್ತರೊಂದಿಗೆ ಹಲವಾರು ಸತ್ಸಂಗಗಳು, ಸಮೂಹ ಧ್ಯಾನಗಳು, ಕ್ರಿಯಾಯೋಗ ದೀಕ್ಷಾ ಸಮಾರಂಭಗಳು ಮತ್ತು ಸಮಾಲೋಚನಾ ಅವಧಿಗಳನ್ನು ನಡೆಸಿದರು. ವೈಎಸ್ಎಸ್/ಎಸ್‌ಆರ್‌ಎಫ್‌ನ ಪ್ರಸ್ತುತ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದಜೀಯವರು ಸಹ ಆಶ್ರಮಕ್ಕೆ ಭೇಟಿ ನೀಡಿ, ಸತ್ಯಾನ್ವೇಷಿಗಳ ಆಧ್ಯಾತ್ಮಿಕ ಹಿತಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ
(ಪ್ರಸ್ತುತ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರು)

ಆಶ್ರಮದ ಅವಲೋಕನ

ಹಣ್ಣಿನ ತೋಟ, ಹೂಬಿಡುವ ಗಿಡಗಳು ಮತ್ತು ದೊಡ್ಡ ಕೊಳವನ್ನು ಹೊಂದಿರುವ ಎರಡು ಎಕರೆ ಭೂಮಿಯಲ್ಲಿ ವ್ಯಾಪಿಸಿರುವ ದಕ್ಷಿಣೇಶ್ವರ ಆಶ್ರಮವು ಮೂಲತಃ ಒಂದು ‘ಉದ್ಯಾನಮನೆ’ಯಾಗಿತ್ತು. ಆಶ್ರಮದ ಕುರಿತು ಪರಮಹಂಸಜಿಯವರ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು, ಭಕ್ತರ ಅನುಕೂಲಕ್ಕಾಗಿ ಆವರಣದೊಳಗೆ ಒಂದು ಧ್ಯಾನ ಮಂದಿರ, ಅತಿಥಿ ಗೃಹ, ಅಡುಗೆಮನೆ, ಕೆಲಸ ಮತ್ತು ಊಟ ಮಾಡುವ ಸ್ಥಳಗಳನ್ನು ನಿರ್ಮಿಸಲಾಗಿದೆ.

1939ರಲ್ಲಿ ಇದರ ಆರಂಭದಿಂದಲೂ, ಈ ಆಶ್ರಮವು ಸತ್ಯಾನ್ವೇಷಿಗಳಿಗೆ ಒಂದು ಪ್ರಶಾಂತ ತಾಣವಾಗಿ ಬೆಳೆದುಬಂದಿದೆ. ಬೆಳಿಗ್ಗೆ ಮತ್ತು ಸಂಜೆ ನಡೆಯುವ ದೈನಂದಿನ ಸಮೂಹ ಧ್ಯಾನಗಳಲ್ಲಿ ಹಾಗೂ ಭಾನುವಾರದ ಸಾಪ್ತಾಹಿಕ ಸತ್ಸಂಗಗಳಲ್ಲಿ, ಹಾಗೆಯೇ ವೈಎಸ್ಎಸ್ ಸನ್ಯಾಸಿಗಳು ನಡೆಸುವ ವಿವಿಧ ಸ್ಮರಣಾರ್ಥ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ವೈಎಸ್ಎಸ್ ಮತ್ತು ಎಸ್‌ಆರ್‌ಎಫ್ ಭಕ್ತರು ಆಶ್ರಮದಲ್ಲಿ ವೈಯಕ್ತಿಕವಾಗಿ ಹಾಗೂ ಮಾರ್ಗದರ್ಶನದೊಂದಿಗೆ ಶಿಬಿರಗಳಲ್ಲಿ ಪಾಲ್ಗೊಳ್ಳಬಹುದು. ಅಲ್ಲದೆ, ದಿನಕ್ಕೆ ಎರಡು ಬಾರಿ ಸಮೂಹ ಧ್ಯಾನಗಳ ಅಭ್ಯಾಸ, ವೈಎಸ್ಎಸ್ ಧ್ಯಾನ ತಂತ್ರಗಳ ಪುನರವಲೋಕನ, ಇಂಗ್ಲಿಷ್, ಬಂಗಾಳಿ ಮತ್ತು ಹಿಂದಿ ಭಾಷೆಗಳಲ್ಲಿ ಪ್ರವಚನಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಒಳಗೊಂಡಿರುವ ಸಾಧನಾ ಸಂಗಮಗಳಂತಹ ಇತರ ವಿಶೇಷ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಳ್ಳಬಹುದು.

ವಿವಿಧ ಆಧ್ಯಾತ್ಮಿಕ ಚಟುವಟಿಕೆಗಳನ್ನು ನಡೆಸುವುದರ ಜೊತೆಗೆ, ವೈಎಸ್ಎಸ್ ದಕ್ಷಿಣೇಶ್ವರ ಆಶ್ರಮವು ಸೀಮಿತ ಆರ್ಥಿಕ ಸೌಲಭ್ಯ ಹೊಂದಿರುವ ಜನರಿಗೆ ಸಹಾಯ ಮಾಡಲು ಹಲವಾರು ಶೈಕ್ಷಣಿಕ, ವೈದ್ಯಕೀಯ ಮತ್ತು ಇತರ ದತ್ತಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಅವುಗಳಲ್ಲಿ ಕೋಲ್ಕತ್ತಾ ಮತ್ತು ಅದರ ಸುತ್ತಮುತ್ತ ಹಲವಾರು ಹೋಮಿಯೋಪತಿ ಮತ್ತು ಅಲೋಪತಿ ಚಿಕಿತ್ಸಾಲಯಗಳು, ಪ್ಯಾಥಾಲಜಿ ಪ್ರಯೋಗಾಲಯಗಳು, ಹಾಗೂ ಶಾಲೆಗಳು ಮತ್ತು ಕಾಲೇಜುಗಳನ್ನು ನಡೆಸುವ ಕಾರ್ಯವೂ ಸೇರಿದೆ.

ವೈಎಸ್ಎಸ್‌ಗೆ ಹೊಸಬರೇ?

ಮನೆಯಲ್ಲಿ ಅಧ್ಯಯನ ಮಾಡಬಹುದಾದ ಪಠ್ಯಕ್ರಮವಾದ ವೈಎಸ್ಎಸ್ ಪಾಠಗಳು, ನೀವು ಎಂದಿಗೂ ಊಹಿಸಿರದ ರೀತಿಯಲ್ಲಿ ನಿಮ್ಮ ಜೀವನವನ್ನು ಹೇಗೆ ಪರಿವರ್ತಿಸಬಲ್ಲವು ಮತ್ತು ಸಮತೋಲಿತ ಹಾಗೂ ಯಶಸ್ವಿ ಜೀವನವನ್ನು ನಡೆಸಲು ನಿಮಗೆ ಹೇಗೆ ಸಹಾಯ ಮಾಡಬಲ್ಲವು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

para-ornament

ಕೋಲ್ಕತ್ತಾದಲ್ಲಿ ಪರಮಹಂಸ ಯೋಗಾನಂದರ ಜೀವನಕ್ಕೆ ಸಂಬಂಧಿಸಿದ ಆಸಕ್ತಿದಾಯಕ ಸ್ಥಳಗಳು

ಸಂತರು ವಾಸಿಸುತ್ತಿದ್ದ ಸ್ಥಳಗಳಿಗೆ ಭೇಟಿ ನೀಡುವುದರಿಂದ ಮಹತ್ತರ ಮೌಲ್ಯವಿದೆ. …ಅಂತಹ ಸ್ಥಳಗಳು ಅಲ್ಲಿ ನಡೆದಾಡಿದ ದಿವ್ಯ ಚೇತನಗಳು ಬಿಟ್ಟುಹೋದ ಕಂಪನಗಳಿಂದ ಎಂದೆಂದಿಗೂ ತುಂಬಿರುತ್ತವೆ. ಈ ಭೂಮಿಯು ಲಯವಾಗುವವರೆಗೆ ಅವುಗಳ ಕಂಪನಗಳು ಉಳಿಯುತ್ತವೆ. ಎಲ್ಲಿ ಆತ್ಮಗಳು ದೇವರೊಂದಿಗೆ ಐಕ್ಯವಾಗಿವೆಯೋ, ಅಲ್ಲಿ ನೀವು ದೇವರೊಂದಿಗೆ ಹೆಚ್ಚಿನ ಐಕ್ಯತೆ ಮತ್ತು ದೇವರಿಂದ ಹೆಚ್ಚಿನ ಪ್ರತಿಸ್ಪಂದನವನ್ನು ಕಾಣುವಿರಿ. ಆಗಾಗ್ಗೆ ಇಂತಹ ತೀರ್ಥಯಾತ್ರೆಗಳು ವ್ಯಕ್ತಿಯ ಜೀವನವನ್ನು ಸಂಪೂರ್ಣವಾಗಿ ಒಳಿತಿನತ್ತ ಬದಲಾಯಿಸುತ್ತವೆ.

— ಪರಮಹಂಸ ಯೋಗಾನಂದ

ಪರಮಹಂಸ ಯೋಗಾನಂದರ ಈ ಮಾತುಗಳಿಂದ ಪ್ರೇರಿತರಾಗಿ, ಮಹಾಗುರುಗಳ ಸಾನ್ನಿಧ್ಯದಿಂದ ಪವಿತ್ರಗೊಂಡ ವಿವಿಧ ಸ್ಥಳಗಳಿಗೆ ಪವಿತ್ರ ತೀರ್ಥಯಾತ್ರೆಯನ್ನು ಕೈಗೊಳ್ಳಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ಪರಮಹಂಸಜಿಯವರು ತಮ್ಮ ಬಾಲ್ಯದ ವರ್ಷಗಳನ್ನು ಕಳೆದದ್ದು, ತಮ್ಮ ಗುರುಗಳಾದ ಶ್ರೀ ಶ್ರೀ ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿಜೀಯವರಿಂದ ಆಧ್ಯಾತ್ಮಿಕ ತರಬೇತಿ ಪಡೆದದ್ದು ಮತ್ತು ಕ್ರಿಯಾಯೋಗ ಬೋಧನೆಗಳನ್ನು ಪ್ರಪಂಚದಾದ್ಯಂತ ಪಸರಿಸುವ ಪವಿತ್ರ ಜವಾಬ್ದಾರಿಯನ್ನು ನಿರ್ವಹಿಸಲು ಅಮೆರಿಕಕ್ಕೆ ಪ್ರಯಾಣಿಸುವ ಮೊದಲು ತಮ್ಮ ಔಪಚಾರಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದು ಕೋಲ್ಕತ್ತಾ ನಗರದಲ್ಲೇ. ಈ ಪವಿತ್ರ ಜವಾಬ್ದಾರಿಯನ್ನು ಅವರ ಗುರು ಪರಂಪರೆಯಾದ ಮಹಾವತಾರ ಬಾಬಾಜಿ, ಲಾಹಿರಿ ಮಹಾಶಯ ಮತ್ತು ಶ್ರೀ ಶ್ರೀ ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿ ಅವರು ಅವರಿಗೆ ವಹಿಸಿದ್ದರು.

4 ಗಾರ್ಪರ್ ರಸ್ತೆ ಮತ್ತು ಹತ್ತಿರದ ಇತರ ಸ್ಥಳಗಳು

ಪರಮಹಂಸ ಯೋಗಾನಂದರ ಕುಟುಂಬದ ಮನೆಯಾಗಿರುವ ಕೋಲ್ಕತ್ತಾದ 4 ಗಾರ್ಪರ್ ರಸ್ತೆಯು ಪ್ರಪಂಚದಾದ್ಯಂತದ ಭಕ್ತರು ಭೇಟಿ ನೀಡುವ ಅತ್ಯಂತ ಪ್ರಿಯವಾದ ತೀರ್ಥಯಾತ್ರಾ ಸ್ಥಳವಾಗಿದೆ. ಎರಡನೇ ಮಹಡಿಯ ಅಟ್ಟದ ಕೋಣೆಯು ಅವರ ಪವಿತ್ರ ಧಾಮವಾಗಿದ್ದು, ಅಲ್ಲಿ ಅವರು ದೇವರೊಂದಿಗೆ ಐಕ್ಯರಾಗುತ್ತಿದ್ದರು ಮತ್ತು ಆನಂದಪರವಶತೆಯ ಅನೇಕ ಅನುಭವಗಳನ್ನು ಹಾಗೂ ದರ್ಶನಗಳನ್ನು ಪಡೆದಿದ್ದರು.

ಇದಕ್ಕೆ ಹತ್ತಿರದಲ್ಲೇ ಶ್ರೀ ಮಾಸ್ಟರ್ ಮಹಾಶಯರ (ಶ್ರೀ ರಾಮಕೃಷ್ಣ ಪರಮಹಂಸರ ಉದಾತ್ತ ಶಿಷ್ಯ) ನಿವಾಸವಾದ 50, ಆಮ್ಹರ್ಸ್ಟ್ ಸ್ಟ್ರೀಟ್ ಇದೆ. ಪರಮಹಂಸಜಿಯವರು ತಮ್ಮ ಬಾಲ್ಯದಲ್ಲಿ ಆಗಾಗ್ಗೆ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಯೋಗಾನಂದಜಿಯವರ ಕುಟುಂಬವು ಈ ಮನೆಯಲ್ಲಿ ವಾಸಿಸುತ್ತಿದ್ದಾಗ ಅವರ ತಾಯಿ ನಿಧನರಾದ ಸ್ಥಳವೂ ಇದೇ ಆಗಿದೆ.

ಗಾರ್ಪರ್ ರಸ್ತೆಯಲ್ಲಿರುವ ಪರಮಹಂಸ ಯೋಗಾನಂದಜಿಯವರ ಕುಟುಂಬದ ಮನೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿರುವ ರಾಮಮೋಹನ್ ರಾಯ್ ರಸ್ತೆಯಲ್ಲಿ ನಾಗೇಂದ್ರ ಮಠವಿದೆ. ಯೋಗಾನಂದಜಿಯವರು ತಮ್ಮ ಆಧ್ಯಾತ್ಮಿಕ ಗ್ರಂಥವಾದ ‘ಯೋಗಿಯ ಆತ್ಮಕಥೆ’ಯಲ್ಲಿ ಉಲ್ಲೇಖಿಸಿರುವ “ಗಾಳಿಯಲ್ಲಿ ತೇಲುವ ಸಂತ” ಭಾದುರಿ ಮಹಾಶಯರು ವಾಸಿಸುತ್ತಿದ್ದ ಸ್ಥಳವಿದು. ಶಾಲೆಯಿಂದ ಹಿಂದಿರುಗುವಾಗ, ಮಹಾಗುರುವಾದ ಅವರು ಆಗಾಗ್ಗೆ ಇಲ್ಲಿಗೆ ಭೇಟಿ ನೀಡಿ ಸಂತರೊಂದಿಗೆ ಆಧ್ಯಾತ್ಮಿಕ ಚರ್ಚೆಗಳಲ್ಲಿ ನಿರತರಾಗುತ್ತಿದ್ದರು.

ಇನ್ನೊಂದು ಸಮೀಪದ ಆಸಕ್ತಿದಾಯಕ ಸ್ಥಳವೆಂದರೆ ಯೋಗದಾ ಸತ್ಸಂಗ ಧ್ಯಾನ ಕೇಂದ್ರ, ಗಾರ್ಪಾರ್. ಯೋಗಾನಂದಜೀಯವರ ಬಾಲ್ಯದ ಗೆಳೆಯ ತುಳಸಿ ನಾರಾಯಣ ಬೋಸ್ ಅವರ ಮನೆಯ ಪಕ್ಕದಲ್ಲಿರುವ ಈ ಸ್ಥಳದಲ್ಲಿ, ಮಹಾನ್ ಗುರುಗಳು ತಮ್ಮ ಯೌವನದಲ್ಲಿ ತಮ್ಮ ಗೆಳೆಯರೊಂದಿಗೆ ಧ್ಯಾನ ಮಾಡುತ್ತಿದ್ದರು.

ಶ್ರೀ ಯುಕ್ತೇಶ್ವರಜಿಯವರ ಆಶ್ರಮ ಮತ್ತು ಸೆರಾಮ್‌ಪುರದಲ್ಲಿರುವ ಇತರ ಸಂಬಂಧಿತ ಸ್ಥಳಗಳು

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿರುವ ಸೆರಾಮ್‌ಪುರವು, ಪರಮಹಂಸ ಯೋಗಾನಂದರ ಮತ್ತು ಅವರ ಗುರುವಾದ ಸ್ವಾಮಿ ಶ್ರೀ ಯುಕ್ತೇಶ್ವರಜೀಯವರ ಜೀವನಕ್ಕೆ ಸಂಬಂಧಿಸಿದ ಅನೇಕ ಪವಿತ್ರ ಸ್ಥಳಗಳಿಂದ ಪಾವನವಾಗಿದೆ.

ಇಲ್ಲಿ ಸೆರಾಮ್‌ಪುರದಲ್ಲೇ ಅವರು ತಮ್ಮ ಕಾಲೇಜು ದಿನಗಳಲ್ಲಿ ಆಧ್ಯಾತ್ಮಿಕ ತರಬೇತಿಗಾಗಿ ತಮ್ಮ ಗುರುಗಳ ಆಶ್ರಮದಲ್ಲಿ ಹೆಚ್ಚಿನ ಸಮಯವನ್ನು ಕಳೆದರು. ಶ್ರೀ ಯುಕ್ತೇಶ್ವರಜೀಯವರ ಗೌರವಾರ್ಥವಾಗಿ, ಆಶ್ರಮದ ಆವರಣದಲ್ಲಿ ಒಂದು ಸ್ಮೃತಿ ಮಂದಿರವನ್ನು ನಿರ್ಮಿಸಲಾಗಿದೆ. ಆಶ್ರಮದ ಸಮೀಪದಲ್ಲೇ ಯೋಗಾನಂದಜೀಯವರ ಚಿಕ್ಕಪ್ಪ ಶ್ರೀ ಶಾರದ ಪ್ರಸಾದ್ ಘೋಷ್ ಅವರ ಮನೆಯಿದೆ, ಅಲ್ಲಿ ಯೋಗಾನಂದಜೀಯವರು ಸ್ವಲ್ಪ ಕಾಲ ತಂಗಿದ್ದರು. ಅವರ ಸೋದರಸಂಬಂಧಿ ಶ್ರೀ ಪ್ರಭಾಸ್ ಚಂದ್ರ ಘೋಷ್ ಅವರು, ಯೋಗಾನಂದಜೀಯವರು ತಂಗಿದ್ದ ಕೋಣೆಯನ್ನು ನಂತರ ‘ಆನಂದಲೋಕ’ (ಆನಂದದ ನೆಲೆ) ಎಂಬ ಹೆಸರಿನ ದೇವಾಲಯವನ್ನಾಗಿ ಪರಿವರ್ತಿಸಿದರು.

ಸೆರಾಮ್‌ಪುರದ ರಾಯ್ ಘಾಟ್ ಲೇನ್‌ನಲ್ಲಿರುವ ಗಂಗಾನದಿಯ ದಡದಲ್ಲಿ ದೊಡ್ಡ ಆಲದ ಮರವಿದೆ, ಇದು ಬಾಬಾಜಿಯವರ ಸೂಚನೆಯ ಮೇರೆಗೆ ‘ದಿ ಹೋಲಿ ಸೈನ್ಸ್’ (ಪವಿತ್ರ ವಿಜ್ಞಾನ) ಪುಸ್ತಕವನ್ನು ಬರೆಯುವುದನ್ನು ಪೂರ್ಣಗೊಳಿಸಿದ ನಂತರ ಅಮರರಾದ ಮಹಾವತಾರ ಬಾಬಾಜಿ ಮತ್ತು ಸ್ವಾಮಿ ಶ್ರೀ ಯುಕ್ತೇಶ್ವರರ ಭೇಟಿಗೆ ಮೂಕ ಸಾಕ್ಷಿಯಾಗಿದೆ.

ರಾಯ್ ಘಾಟ್ ಲೇನ್‌ನಿಂದ ಕೇವಲ ನೂರು ಮೀಟರ್ ದೂರದಲ್ಲಿ ಒಮ್ಮೆ ‘ಪಂಥಿ ಬೋರ್ಡಿಂಗ್ ಹೌಸ್’ ಇದ್ದ ನಿವೇಶನವಿದೆ, ಇದರಲ್ಲಿ ಯೋಗಾನಂದಜಿಯವರು ತಮ್ಮ ಕಾಲೇಜು ದಿನಗಳಲ್ಲಿ ವಾಸಿಸುತ್ತಿದ್ದರು. ಹಳೆಯ ಕಟ್ಟಡವು ಶಿಥಿಲಗೊಂಡಿರುವ ಕಾರಣ, ಈಗ ಸ್ಥಳೀಯ ಕೌನ್ಸಿಲ್‌ನಿಂದ ಕೆಡವಲ್ಪಟ್ಟಿದೆ.

ಇದರಿಂದ ಅನತಿ ದೂರದಲ್ಲಿ ಸೆರಾಮ್‌ಪುರ ಕಾಲೇಜು ಇದೆ. ಇಲ್ಲಿ ಯೋಗಾನಂದಜಿಯವರು ಕಲಾ ಪದವಿ ಪಠ್ಯಕ್ರಮಕ್ಕೆ ದಾಖಲಾದ ಮೊದಲ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದು, ಎ.ಬಿ. ಪದವಿಯನ್ನು ಪಡೆದರು.

ದಕ್ಷಿಣೇಶ್ವರ ಕಾಳಿ ದೇವಸ್ಥಾನ

ವೈಎಸ್ಎಸ್ ದಕ್ಷಿಣೇಶ್ವರ ಆಶ್ರಮದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ವಿಶ್ವವಿಖ್ಯಾತ ಕಾಳಿ ದೇವಸ್ಥಾನವಿದೆ. ಮಲಗಿರುವ ಶಿವನ ಎದೆಯ ಮೇಲೆ ನಿಂತು, ತನ್ನ ಭಕ್ತರನ್ನು ಭವಸಾಗರದ ಆಚೆಗೆ ಕರೆದೊಯ್ಯುವ ಭವತಾರಿಣಿಯಾಗಿ ಕಾಳಿ ಮಾತೆಯನ್ನು ಪ್ರತಿಷ್ಠಾಪಿಸಿರುವ ಒಂಬತ್ತು ಗುಮ್ಮಟಗಳ ದೇವಾಲಯಕ್ಕಾಗಿ ದಕ್ಷಿಣೇಶ್ವರವು ಪ್ರಸಿದ್ಧವಾಗಿದೆ. ಈ ದೇವಾಲಯದಲ್ಲಿ, ಶ್ರಮಪೂರ್ವಕವಾಗಿ ಕೆತ್ತಲಾದ ಸಾವಿರ ದಳಗಳ ಬೆಳ್ಳಿಯ ತಾವರೆಯ ಮೇಲೆ ಜಗನ್ಮಾತೆ ಮತ್ತು ಶಿವನ ಸುಂದರವಾದ ವಿಗ್ರಹಗಳಿವೆ.

ತಮ್ಮ ಆತ್ಮಕಥೆಯಲ್ಲಿ, ಯೋಗಾನಂದಜಿಯವರು ಈ ದೇವಸ್ಥಾನಕ್ಕೆ ತಾವು ಮಾಡಿದ ಅನೇಕ ತೀರ್ಥಯಾತ್ರೆಗಳನ್ನು ವಿವರಿಸುತ್ತಾರೆ. ತಮ್ಮ ತಂಗಿ ರೋಮಾ ಮತ್ತು ಅವರ ಪತಿ ಸತೀಶ್ ಅವರೊಂದಿಗೆ ಭೇಟಿ ನೀಡಿದ್ದಾಗ, ಈ ದೇವಸ್ಥಾನದ ಆವರಣದಲ್ಲೇ ಅವರಿಗೆ ಒಂದು ದಿವ್ಯ ದರ್ಶನವಾಗಿತ್ತು. ನಾಸ್ತಿಕರಾಗಿದ್ದ ಸತೀಶ್ ಅವರು, ಜಗನ್ಮಾತೆಗೆ ಯೋಗಾನಂದಜಿಯವರು ಸಲ್ಲಿಸಿದ ಭಕ್ತಿಪೂರ್ವಕ ಪ್ರಾರ್ಥನೆಗಳ ಮೂಲಕ ಮೌನ ಸಂತರಾಗಿ ಪರಿವರ್ತಿತರಾದರು. ಕರುಣಾಮಯಿ ಮಾತೆಯ ರೂಪದಲ್ಲಿ ದೇವರ ಮೇಲಿದ್ದ ಪರಮಹಂಸ ಯೋಗಾನಂದಜಿಯವರ ಪ್ರೀತಿಯು ಅವರನ್ನು ಈ ದೇವಸ್ಥಾನಕ್ಕೆ ಆಗಾಗ್ಗೆ ಆಕರ್ಷಿಸುತ್ತಿತ್ತು. ಅಲ್ಲಿ ಅವರು ಮುಖಮಂಟಪದಲ್ಲಿ, ಶ್ರೀ ರಾಮಕೃಷ್ಣ ಪರಮಹಂಸರ ಕೋಣೆಯಲ್ಲಿ, ಹಾಗೂ ಶ್ರೀ ರಾಮಕೃಷ್ಣ ಪರಮಹಂಸರಿಗೆ ಜ್ಞಾನೋದಯವಾದ ಪಂಚವಟಿಯಲ್ಲಿರುವ ಆಲದ ಮರದ ಕೆಳಗೆ ಹಲವಾರು ಗಂಟೆಗಳ ಕಾಲ ಧ್ಯಾನ ಮಾಡುತ್ತಿದ್ದರು. ದೇವಸ್ಥಾನದ ಆವರಣದಲ್ಲಿರುವ, ಶ್ರೀ ರಾಮಕೃಷ್ಣರು ತಮ್ಮ ಜೀವನದ ಕೊನೆಯ 14 ವರ್ಷಗಳನ್ನು ಕಳೆದ ಪವಿತ್ರ ಕೋಣೆಯನ್ನು ಒಂದು ಪುಣ್ಯಸ್ಥಳವಾಗಿ ಸಂರಕ್ಷಿಸಲಾಗಿದೆ. ಅಲ್ಲಿ ಭಕ್ತರು ಧ್ಯಾನ ಮಾಡಬಹುದು ಮತ್ತು ಅವರು ಬಳಸಿದ ಹಲವಾರು ವಸ್ತುಗಳನ್ನು ಪ್ರದರ್ಶನದಲ್ಲಿ ನೋಡಬಹುದು.

ಗಂಗಾ ನದಿಯ ತೀರದಲ್ಲಿರುವ ಈ ಸ್ಥಳವು ರಸ್ತೆ, ರೈಲು, ಮೆಟ್ರೋ ಮತ್ತು ದೋಣಿ ಸೇವೆಗಳ ಮೂಲಕ ನಗರದೊಂದಿಗೆ ಉತ್ತಮವಾಗಿ ಸಂಪರ್ಕ ಹೊಂದಿದೆ. ದೇವಾಲಯದ ವಾತಾವರಣವು ಭಕ್ತರು ಮತ್ತು ಯಾತ್ರಿಕರಿಗೆ ಆಳವಾದ ಧ್ಯಾನದಲ್ಲಿ ತೊಡಗಲು ಮತ್ತು ಜಗನ್ಮಾತೆಯೊಂದಿಗೆ ಆಧ್ಯಾತ್ಮಿಕವಾಗಿ ಸಂಪರ್ಕ ಸಾಧಿಸಲು ಸಹಜವಾದ ವಾತಾವರಣವನ್ನು ಒದಗಿಸುತ್ತದೆ.

ಹತ್ತಿರದ ವೈಎಸ್ಎಸ್ ಧ್ಯಾನ ಕೇಂದ್ರಗಳು

ವೈಎಸ್ಎಸ್ ದಕ್ಷಿಣೇಶ್ವರ ಆಶ್ರಮದ ಸಮೀಪದಲ್ಲಿರುವ ಮೂರು ಧ್ಯಾನ ಕೇಂದ್ರಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

 
ನಿರ್ದಿಷ್ಟ ಸ್ಥಳದ ಕಾರ್ಯಕ್ರಮದ ವೇಳಾಪಟ್ಟಿ, ತಲುಪುವುದು ಹೇಗೆ ಮತ್ತು ಇತರ ಸಂಬಂಧಿತ ಮಾಹಿತಿಯ ಕುರಿತು ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಮೇಲೆ ಹಂಚಿಕೊಳ್ಳಲಾದ ಆಯಾ ಕೊಂಡಿಗಳನ್ನು ವೀಕ್ಷಿಸಿ.

ಸಾಪ್ತಾಹಿಕ ಕಾರ್ಯಕ್ರಮಗಳು

ಸಮೂಹ ಧ್ಯಾನ

ನಾವು ಸಾರ್ವಜನಿಕರಿಗೆ ಮುಕ್ತವಾಗಿರುವ ನಿಯಮಿತ ಧ್ಯಾನ ಹಾಗೂ ಸತ್ಸಂಗಗಳನ್ನು ನೀಡುತ್ತೇವೆ. ಈ ಅವಧಿಗಳಲ್ಲಿ ಮೌನ ಧ್ಯಾನ, ಭಕ್ತಿಗೀತೆಗಳ ಪಠಣ ಮತ್ತು ಸ್ಪೂರ್ತಿದಾಯಕ ಓದುವಿಕೆ ಸೇರಿವೆ.

ಭಾನುವಾರ
ಬೆಳಿಗ್ಗೆ 10:30 – ಮಧ್ಯಾಹ್ನ 12:00
ಭಾನುವಾರ ಸತ್ಸಂಗ (ಸಂಕ್ಷಿಪ್ತ ಧ್ಯಾನವನ್ನು ಒಳಗೊಂಡಿದೆ)
ಸಂಜೆ 4:30 – ರಾತ್ರಿ 8:00
ಸಂಜೆಯ ಧ್ಯಾನ
ಗುರುವಾರ
ಬೆಳಿಗ್ಗೆ 7:00 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಸಂಜೆ 5:30 – ರಾತ್ರಿ 9:00
ಸಂಜೆಯ ಧ್ಯಾನ
ಇತರೆ ದಿನಗಳು
ಬೆಳಿಗ್ಗೆ 7:00 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಬೆಳಿಗ್ಗೆ 10:00 – ಸಂಜೆ 4:00
ದೀರ್ಘಾವಧಿ ಧ್ಯಾನ
ಸಂಜೆ 5:30 – ಸಂಜೆ 7:00
ಸಂಜೆಯ ಧ್ಯಾನ
ಮಕ್ಕಳ ಸತ್ಸಂಗ

ಈ ಅವಧಿಗಳಲ್ಲಿ 6 ರಿಂದ 12 ವರ್ಷ ವಯಸ್ಸಿನ ಮಕ್ಕಳು ವೈಎಸ್‌ಎಸ್‌ನ ಬೋಧನೆಗಳು ಹಾಗೂ ಜೀವನಶೈಲಿ ಕುರಿತು ಕಥೆ ಹೇಳುವುದು, ಸಂಕ್ಷಿಪ್ತ ಮಾರ್ಗದರ್ಶಿ ಧ್ಯಾನಗಳು ಮತ್ತು ಜೀವನ ವಿಧಾನದ ಬಗ್ಗೆ ಕಲಿಯುತ್ತಾರೆ. ಇನ್ನಷ್ಟು ತಿಳಿಯಿರಿ.

ಭಾನುವಾರ
ಬೆಳಿಗ್ಗೆ 10:30 – ಬೆಳಿಗ್ಗೆ 11:30

ವೈಎಸ್‌ಎಸ್‌ ಸಾಧನ ಸಂಗಮಗಳು

ವೈಎಸ್‌ಎಸ್-ಸಾಧನಾ-ಸಂಗಮ-ಚೆನ್ನೈ-ಆಶ್ರಮ-2024-ಸನ್ಯಾಸಿಗಳು-ಮತ್ತು-ಭಕ್ತರ-ಸಮೂಹ-ಭಾವಚಿತ್ರ

ಐದು ದಿನಗಳ ಈ ಕಾರ್ಯಕ್ರಮವು ಯೋಗದಾ ಸತ್ಸಂಗ ಬೋಧನೆಗಳ ವಿದ್ಯಾರ್ಥಿಗಳಿಗೆ ಪರಮಹಂಸ ಯೋಗಾನಂದರ ಬೋಧನೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಒಂದು ಅನನ್ಯ ಅವಕಾಶವನ್ನು ನೀಡುತ್ತದೆ. ಇದರಲ್ಲಿ ವೈಎಸ್ಎಸ್ ಧ್ಯಾನ ತಂತ್ರಗಳ ಕುರಿತ ತರಗತಿಗಳು, ಸಮೂಹ ಧ್ಯಾನಗಳು, ಕೀರ್ತನ ಅವಧಿಗಳು ಮತ್ತು ಸನ್ಯಾಸಿಗಳಿಂದ ಸ್ಫೂರ್ತಿದಾಯಕ ಪ್ರವಚನಗಳು ಸೇರಿರುತ್ತವೆ. ಈ ಕೆಲವು ಕಾರ್ಯಕ್ರಮಗಳಲ್ಲಿ ಕ್ರಿಯಾಯೋಗ ದೀಕ್ಷಾ ಸಮಾರಂಭಗಳೂ ಒಳಗೊಂಡಿರುತ್ತವೆ.

ಮಾಹಿತಿ ಮತ್ತು ಕಾರ್ಯಕ್ರಮಗಳ ಪ್ರಕಟಣೆಗಳನ್ನು ಪಡೆಯಲು ವೈಎಸ್ಎಸ್ ಇ-ಸುದ್ದಿಪತ್ರಕ್ಕಾಗಿ ನೋಂದಾಯಿಸಿಕೊಳ್ಳಿ

ಮುಂಬರುವ ವಿಶೇಷ ಕಾರ್ಯಕ್ರಮಗಳು ಮತ್ತು ದೀರ್ಘಾವಧಿಯ ಧ್ಯಾನಗಳು

ತಿಂಗಳ ದೀರ್ಘಾವಧಿ ಧ್ಯಾನ
ಅಕ್ಟೋಬರ್ 24, 2026, ಶನಿವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ತಿಂಗಳ ದೀರ್ಘಾವಧಿ ಧ್ಯಾನ
ನವೆಂಬರ್ 14, 2026, ಶನಿವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಸಾಧನಾ ಸಂಗಮ್‌ (ಹಿಂದಿ)

ಹೆಚ್ಚಿನದನ್ನು ತಿಳಿಯಿರಿ

ನವೆಂಬರ್ 18, 2026, ಬುಧವಾರ – ನವೆಂಬರ್ 22, 2026, ಭಾನುವಾರ

ಸಮಾಚಾರ ಮತ್ತು ಫೋಟೋ ಗ್ಯಾಲರಿ

ನಿಮ್ಮ ಭೇಟಿಯನ್ನು ಯೋಜಿಸಿ

ನೀವು ಹಗಲಿನಲ್ಲಿ ಆಶ್ರಮಕ್ಕೆ ಭೇಟಿ ನೀಡಲು ಬಯಸುವಿರಾ?

ಸಾಮೂಹಿಕ ಧ್ಯಾನಗಳಲ್ಲಿ ಪಾಲ್ಗೊಳ್ಳಲು, ಆಶ್ರಮದ ಉದ್ಯಾನಗಳ ಪ್ರಶಾಂತತೆಯನ್ನು ಆನಂದಿಸಲು ಅಥವಾ ದಕ್ಷಿಣೇಶ್ವರದ ಸುತ್ತಮುತ್ತಲಿನ ಪರಮಹಂಸ ಯೋಗಾನಂದರ ಜೀವನಕ್ಕೆ ಸಂಬಂಧಿಸಿದ ಪವಿತ್ರ ಸ್ಥಳಗಳಿಗೆ ತೀರ್ಥಯಾತ್ರೆ ಕೈಗೊಳ್ಳಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ನಿಮಗೆ ಆಶ್ರಮದ ಮಾರ್ಗದರ್ಶಿತ ಪ್ರವಾಸದಲ್ಲಿ ಆಸಕ್ತಿ ಇದ್ದರೆ, ಅಥವಾ ಮಹಾಗುರುಗಳ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲು ಬಯಸಿದರೆ, ದಯವಿಟ್ಟು ಸಮಯ ನಿಗದಿಪಡಿಸಿಕೊಳ್ಳಲು ಸ್ವಾಗತ ವಿಭಾಗವನ್ನು ಸಂಪರ್ಕಿಸಿ.

ಸಮಯ:

  • ಆಶ್ರಮದ ಆವರಣ – ಪ್ರತಿದಿನ ಬೆಳಿಗ್ಗೆ 6:00 ರಿಂದ ರಾತ್ರಿ 9:00 ರವರೆಗೆ ಎಲ್ಲಾ ಸಂದರ್ಶಕರಿಗಾಗಿ ತೆರೆದಿರುತ್ತದೆ.
  • ಸ್ವಾಗತ ಮತ್ತು ಪುಸ್ತಕ ಕೊಠಡಿ:
    • ಸೋಮವಾರದಿಂದ ಶನಿವಾರದವರೆಗೆ – ಬೆಳಿಗ್ಗೆ 9:00 ರಿಂದ ಸಂಜೆ 4:00 ರವರೆಗೆ.
    • ಭಾನುವಾರ – ಬೆಳಿಗ್ಗೆ 11:30 ರಿಂದ ಸಂಜೆ 4:00 ರವರೆಗೆ.

 
ವೈಯಕ್ತಿಕ ಶಿಬಿರವನ್ನು ಯೋಜಿಸಿ ಅಥವಾ ಆಶ್ರಮದಲ್ಲಿ ನಡೆಯುವ ಶಿಬಿರದಲ್ಲಿ ಪಾಲ್ಗೊಳ್ಳಿ.

ವೈಎಸ್ಎಸ್ ಮತ್ತು ಎಸ್‌ಆರ್‌ಎಫ್ ಪಾಠಗಳ ವಿದ್ಯಾರ್ಥಿಗಳು ಆಶ್ರಮದಲ್ಲಿ ಐದು ದಿನಗಳವರೆಗೆ ತಂಗಲು ಸ್ವಾಗತಾರ್ಹರು. ಭಕ್ತರು ನವಚೈತನ್ಯ ಪಡೆದು ಪುನಶ್ಚೇತನಗೊಳ್ಳಲು ವೈಯಕ್ತಿಕ ಶಿಬಿರವನ್ನು ಕೈಗೊಳ್ಳುವಂತೆ ಅಥವಾ ನಮ್ಮ ಆಶ್ರಮದಲ್ಲಿ ಆಯೋಜಿಸಲಾಗುವ ಶಿಬಿರಗಳಲ್ಲಿ ಪಾಲ್ಗೊಳ್ಳುವಂತೆ ನಾವು ಪ್ರೋತ್ಸಾಹಿಸುತ್ತೇವೆ. ಈ ಶಿಬಿರಗಳ ಸಮಯದಲ್ಲಿ, ವೈಎಸ್ಎಸ್ ಸಂನ್ಯಾಸಿಗಳು ದಿನಕ್ಕೆ ಎರಡು ಬಾರಿ ನಡೆಸುವ ಸಾಮೂಹಿಕ ಧ್ಯಾನಗಳಲ್ಲಿ ಪಾಲ್ಗೊಳ್ಳಬಹುದು, ವೈಎಸ್ಎಸ್ ಧ್ಯಾನ ತಂತ್ರಗಳ ಪುನರವಲೋಕನ ತರಗತಿಗಳಿಗೆ ಹಾಜರಾಗಬಹುದು, ಯೋಗದಾ ಸತ್ಸಂಗ ಬೋಧನೆಗಳ ಅಧ್ಯಯನ ಮತ್ತು ಅಭ್ಯಾಸದಲ್ಲಿ ಆಧ್ಯಾತ್ಮಿಕ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯಬಹುದು ಹಾಗೂ ಪ್ರಶಾಂತವಾದ ಆಶ್ರಮ ಆವರಣದ ನೈಸರ್ಗಿಕ ವಾತಾವರಣವನ್ನು ಆನಂದಿಸಬಹುದು. ಈ ಶಿಬಿರಗಳು ಎಲ್ಲ ಚಿಂತೆಗಳು ಮತ್ತು ಲೌಕಿಕ ಕಾಳಜಿಗಳನ್ನು ಬದಿಗೊತ್ತಿ, ದೇಹ, ಮನಸ್ಸು ಮತ್ತು ಆತ್ಮದಲ್ಲಿ ವಿಶ್ರಾಂತಿ ಪಡೆಯಲು ಅದ್ಭುತವಾದ ಅವಕಾಶವನ್ನು ಒದಗಿಸುತ್ತವೆ.

ನಮ್ಮನ್ನು ಸಂಪರ್ಕಿಸಿ

Yogoda Satsanga Math — Dakshineswar
21, U. N. Mukherjee Road
Dakshineswar
Kolkata - 700076
North 24 Parganas
West Bengal
India

ಇದನ್ನು ಹಂಚಿಕೊಳ್ಳಿ