ಸ್ಮೃತಿ ಮಂದಿರ — ಯೋಗದಾ ಸತ್ಸಂಗ ಶಾಖಾ ಮಠ, ರಾಂಚಿ

ಸ್ಮೃತಿ ಮಂದಿರವನ್ನು ಪರಮಹಂಸ ಯೋಗಾನಂದಜಿಯವರು 1920 ರಲ್ಲಿ, ತಮ್ಮ ಅಮೇರಿಕನ್ ಶಿಷ್ಯರ ದಿವ್ಯ ದರ್ಶನ ಪಡೆದ ಪವಿತ್ರ ಸ್ಥಳದಲ್ಲಿ ನಿರ್ಮಿಸಲಾಗಿದೆ. ಇದು ಕ್ರಿಯಾ ಯೋಗದ ಸಾರ್ವತ್ರಿಕ ಬೋಧನೆಗಳನ್ನು ಎಲ್ಲಾ ಧರ್ಮಗಳು, ಪಂಥಗಳು ಮತ್ತು ರಾಷ್ಟ್ರೀಯತೆಗಳ ಜನರಿಗೆ ಹರಡುವ ಅವರ ವಿಶ್ವಾದ್ಯಂತ ಪ್ರಚಾರ ಕಾರ್ಯಕ್ಕೆ ಚಾಲಕ ಶಕ್ತಿಯಾಗಿ ಕಾರ್ಯನಿರ್ವಹಿಸಿತು. ಪರಮಹಂಸ ಯೋಗಾನಂದರು ಬರೆದ ಸರ್ವಕಾಲಿಕ ಜನಪ್ರಿಯ ಆಧ್ಯಾತ್ಮಿಕ ಮೇರುಕೃತಿಯಾದ ಯೋಗಿಯ ಆತ್ಮಕಥೆಯಲ್ಲಿ, ಅವರು ರಾಂಚಿಯಲ್ಲಿ ಹೊಸದಾಗಿ ಪ್ರಾರಂಭಿಸಿದ ಬ್ರಹ್ಮಚರ್ಯ ವಿದ್ಯಾಲಯದ ಉಗ್ರಾಣದಲ್ಲಿ ಅನುಭವಿಸಿದ ಅಲೌಕಿಕ ದರ್ಶನವನ್ನು ನೆನಪಿಸಿಕೊಳ್ಳುತ್ತಾರೆ:

“ಅಮೆರಿಕ! ನಿಜವಾಗಿಯೂ ಈ ಜನರು ಅಮೆರಿಕನ್ನರು!” ನನ್ನ ಅಂತರ್ದೃಷ್ಟಿಗೆ ಗೋಚರವಾದ ಪಾಶ್ಚಾತ್ಯ ಮುಖಗಳ ದೃಶ್ಯಾವಳಿಯನ್ನು ಕಂಡಾಗ ನನ್ನಲ್ಲುದಿಸಿದ ಭಾವನೆ ಇದು.

ರಾಂಚೀ ಶಾಲೆಯ ಉಗ್ರಾಣದಲ್ಲಿ ಧೂಳು ಹಿಡಿದ ಪೆಟ್ಟಿಗೆಗಳ ಹಿಂದೆ ಧ್ಯಾನಮಗ್ನನಾಗಿ ಕುಳಿತಿದ್ದೆ. ಚಿಕ್ಕ ಮಕ್ಕಳೊಡನೆ ಸದಾ ಕಾರ್ಯನಿರತವಾಗಿರುತ್ತಿದ್ದ ಆ ವರ್ಷಗಳಲ್ಲಿ ನನಗಾಗಿ ಪ್ರತ್ಯೇಕ ಸ್ಥಳವನ್ನು ಹುಡುಕಿಕೊಳ್ಳವುದೇ ಕಷ್ಟವಾಗಿತ್ತು!

ಅಂತರ್ದೃಷ್ಟಿಯ ದರ್ಶನ ಮುಂದುವರೆಯಿತು; ದೊಡ್ಡ ಸಮೂಹದ ಜನರು, ನನ್ನನ್ನೇ ಆಸಕ್ತಿಯಿಂದ ದಿಟ್ಟಿಸಿ ನೋಡುತ್ತಾ ನನ್ನ ಅಂತಃಪ್ರಜ್ಞೆಯ ರಂಗಭೂಮಿಯ ಮೇಲೆ ಪಾತ್ರಧಾರಿಗಳಂತೆ ಹಾದುಹೋದರು.

ಉಗ್ರಾಣದ ಬಾಗಿಲು ತೆರೆಯಿತು; ಮಾಮೂಲಿನಂತೆ ಬಾಲಕನೊಬ್ಬನು ನಾನು ಬಚ್ಚಿಟ್ಟುಕೊಂಡಿದ್ದ ಸ್ಥಳವನ್ನು ಕಂಡುಕೊಂಡ.

“ವಿಮಲ, ಬಾ ಇಲ್ಲಿ, ನಿನಗೊಂದು ಸುದ್ದಿ ಹೇಳಬೇಕು; ಭಗವಂತ ನನ್ನನ್ನು ಅಮೆರಿಕಕ್ಕೆ ಬಾ ಎಂದು ಕರೆಯುತ್ತಿದ್ದಾನೆ!” ಎಂದು ಖುಷಿಯಿಂದ ಹೇಳಿದೆ.

ಯೋಗಾನಂದಜಿಯವರು ವಿಶ್ವಾದ್ಯಂತ ಪ್ರಚಾರಕಾರ್ಯಕ್ಕಾಗಿ ಪಶ್ಚಿಮಕ್ಕೆ ತೆರಳುವುದಕ್ಕೆ ಕಾರಣವಾದ ಈ ದರ್ಶನದ ಸ್ಮರಣಾರ್ಥ ಅದೇ ಸ್ಥಳದಲ್ಲಿ 1950ರಲ್ಲಿ, ಒಂದು ಸಣ್ಣ ಧ್ಯಾನ ಮಂದಿರವನ್ನು ನಿರ್ಮಿಸಲಾಯಿತು. ಈ ಮಂದಿರವನ್ನು 1960ರ ದಶಕದಲ್ಲಿ ಒಮ್ಮೆ ಮತ್ತು 1980ರ ದಶಕದಲ್ಲಿ ಮತ್ತೊಮ್ಮೆ ಮಾರ್ಪಾಡು ಮಾಡಲಾಯಿತು.

ಶ್ರೀ ದಯಾ ಮಾತಾಜಿಯವರು ಯೋಗಾನಂದಜಿಯವರ 100 ನೇ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಸೂಕ್ತ ಕಾಣಿಕೆಯಾಗಿ ಈ ಪವಿತ್ರ ಸ್ಥಳದಲ್ಲಿ ಒಂದು ವಿಶೇಷ ಮಂದಿರವನ್ನು ನಿರ್ಮಿಸಲು ಬಯಸಿದ್ದರು.

1993 ರಲ್ಲಿ ಯೋಗಾನಂದಜಿಯವರ ಜನ್ಮದಿನದಂದು ವೈಎಸ್‌ಎಸ್‌ನ ಮಾಜಿ ಧರ್ಮಾಚಾರ್ಯರಾದ ಸ್ವಾಮಿ ಭಾವಾನಂದ ಗಿರಿಯವರು, ಸ್ಮೃತಿ ಮಂದಿರದ ಅಡಿಗಲ್ಲನ್ನು ಹಾಕಿದರು. ಈ ಸ್ಮಾರಕದ ಯೋಜನೆಗಾಗಿ ರಾಜಸ್ಥಾನದಿಂದ ಅನುಭವಿ ಕಾರ್ಮಿಕರ ತಂಡವನ್ನು ಕರೆಸಲಾಯಿತು; ಅಮೃತಶಿಲೆಯ ಕಲ್ಲುಗಳಿಂದ ಗುಮ್ಮಟ ಮತ್ತು ಕಂಬಗಳನ್ನು ಕೆತ್ತುವುದು ಅವರ ಕೆಲಸವಾಗಿತ್ತು. ಕೆತ್ತನೆಯ ಕೆಲಸದಲ್ಲಿ ಪರಿಣತಿ ಹೊಂದಿರುವ ಮತ್ತೊಂದು ತಂಡಕ್ಕೆ ಪೂಜಾಪೀಠ ಮತ್ತು ಕಮಲದ ಹೂವುಗಳನ್ನು ಕೆತ್ತುವ ಜವಾಬ್ದಾರಿಯನ್ನು ವಹಿಸಲಾಯಿತು.

ಮಾರ್ಚ್ 22, 1995 ರಂದು, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್‌ಎಸ್) ದ ಸ್ಥಾಪನೆಯ 78 ನೇ ವಾರ್ಷಿಕೋತ್ಸವದಂದು, ಮಹಾನ್ ಗುರುಗಳ ಸ್ಮರಣಾರ್ಥ ರಾಂಚಿಯ ಯೋಗದಾ ಸತ್ಸಂಗ ಶಾಖಾ ಮಠದಲ್ಲಿ ಬಿಳಿ ಅಮೃತಶಿಲೆಯ ಸುಂದರವಾದ ಸ್ಮೃತಿ ಮಂದಿರವನ್ನು ಸಮರ್ಪಿಸಲಾಯಿತು. ಗುರುದೇವರ ನೇರ ಶಿಷ್ಯರಲ್ಲಿ ಒಬ್ಬರಾದ ಸ್ವಾಮಿ ಆನಂದಮೊಯಿ ಗಿರಿಯವರು ಎಲ್ಲರ ವೈಯಕ್ತಿಕ ಧ್ಯಾನಕ್ಕಾಗಿ ಸ್ಮೃತಿ ಮಂದಿರವನ್ನು ಉದ್ಘಾಟಿಸುವುದನ್ನು 1,200 ಕ್ಕೂ ಹೆಚ್ಚು ಭಕ್ತರು ಮತ್ತು ಅತಿಥಿಗಳು ವೀಕ್ಷಿಸಿದರು. ಈ ವಿಶೇಷ ಘಟನೆಯ ಗುರುತಿಗಾಗಿ, ಸ್ಮೃತಿ ಮಂದಿರ ಸಮರ್ಪಣ ಸಂಗಮ ಎಂಬ ಒಂದು ವಾರದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸ್ಮೃತಿ ಮಂದಿರವು 1995 ರಲ್ಲಿ ಸಮರ್ಪಿತವಾದಾಗಿನಿಂದ ರಾಂಚಿಯ ಯೋಗದಾ ಸತ್ಸಂಗ ಶಾಖಾ ಮಠಕ್ಕೆ ಭೇಟಿ ನೀಡುವ ಭಕ್ತರ ಗಮನವನ್ನು ತನ್ನ ಆಳವಾದ ಆಧ್ಯಾತ್ಮಿಕ ಮಹತ್ವ ಮತ್ತು ವಾಸ್ತುಶಿಲ್ಪದ ಸೌಂದರ್ಯಕ್ಕಾಗಿ ಆಕರ್ಷಿಸುತ್ತಿದೆ.

ಈ ಮಂದಿರವು ದಿನವಿಡೀ ತೆರೆದಿರುತ್ತದೆ ಹಾಗೂ ಭಕ್ತರು ಮತ್ತು ಸಂದರ್ಶಕರು ಇದನ್ನು ವೈಯಕ್ತಿಕ ಧ್ಯಾನಕ್ಕಾಗಿ ಬಳಸುತ್ತಾರೆ.