“ನಿಮ್ಮೊಳಗೆ ನೀವು ಎಲ್ಲ ಜೀವಿಗಳಿಗೂ ಒಂದು ಹೊಸ ವಿಶ್ವ ಭ್ರಾತೃತ್ವದ ಪ್ರಜ್ಞೆ ಮತ್ತು ಪ್ರೇಮದ ಜನನವನ್ನು ಮನಗಾಣುತ್ತಾ, ಕ್ರಿಸ್ಮಸ್‌ನ ಪವಿತ್ರ ಸಂದರ್ಭದಲ್ಲಿ ನಿಮ್ಮ ಮನಸ್ಸನ್ನು ಧ್ಯಾನಕ್ಕಾಗಿ ಸಿದ್ಧಪಡಿಸುವುದೇ ನಿಜವಾದ ಕ್ರಿಸ್ಮಸ್‌ನ ಆಚರಣೆ.”
—Paramahansa Yogananda
ಕ್ರಿಸ್ಮಸ್ 2012
ಕ್ರಿಸ್ಮಸ್ ಸಮಯದ ಆಶೀರ್ವಾದಗಳು, ನಿತ್ಯ ಕ್ರಿಸ್ತನ, ಸೃಷ್ಟಿಯಲ್ಲಿ ಭಗವಂತನ ಸರ್ವವ್ಯಾಪಿತ್ವ ಮೈವೆತ್ತಂತ ಪ್ರಭು ಏಸುವಿನ ಒಂದು ಪುಟ್ಟ ಮಗುವಿನ ರೂಪದಲ್ಲಿನ ಜನನವನ್ನು ಭಕ್ತಿಯಿಂದ ಆಚರಿಸುತ್ತಾ, ನಿಮ್ಮ ಹೃದಯದೊಳಗೆ ಮತ್ತು ಆತ್ಮದಲ್ಲಿ ಏಸುವಿನಲ್ಲಿ ಅಭಿವ್ಯಕ್ತಿಗೊಂಡಿದ್ದ ಸಾರ್ವತ್ರಿಕ ಕ್ರಿಸ್ತ-ಪ್ರೇಮ, ಶಾಂತಿ ಮತ್ತು ಆನಂದವನ್ನು ನೀವು ಮನಗಾಣಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಪ್ರಜ್ಞೆಯನ್ನು-ವಿಕಾಸಗೊಳಿಸುವ ಭಗವಂತನ ಪ್ರೇಮ ಮತ್ತು ಬೆಳಕಿನ ಆಂತರಿಕ ಆಧ್ಯಾತ್ಮಿಕ ಪ್ರಜ್ಞೆಯೊಂದಿಗೆ–ಯುಗ ಯುಗಾಂತರಗಳಿಂದ ಭಗವಂತನು ಅವನ ಅವತಾರಗಳ ಮೂಲಕ ನೀಡಿರುವ ಕಾಣದ ಆದರೆ ನಿರಂತರ ಸಹಾಯ ಮತ್ತು ಪ್ರೋತ್ಸಾಹದೊಂದಿಗೆ ಕ್ರಿಸ್ಮಸ್ ಅನ್ನು ಆಚರಿಸಿ. ಈ ಪವಿತ್ರ ಸಮಯದಲ್ಲಿ ವಿಶೇಷ ಪ್ರೀತಿ ಮತ್ತು ಆದರದಿಂದ ಭಗವಂತನು ನಿಮಗೆ ನೀಡಿದ ಆಧ್ಯಾತ್ಮಿಕ ಉನ್ನತಿಯ ಉಡುಗೊರೆಗಳನ್ನು ಸಂಪೂರ್ಣವಾಗಿ ಸ್ವೀಕರಿಸಲು ನಿಮ್ಮ ಆಲೋಚನೆಗಳನ್ನು ಮತ್ತು ಭಾವನೆಗಳನ್ನು ಆ ಅನುಗ್ರಹದಲ್ಲಿ ವಿಶ್ವಾಸಪೂರ್ಣವಾಗಿ ಶ್ರುತಿಗೂಡಿಸಿಕೊಳ್ಳಿ. ನಿಮ್ಮ ಉತ್ಸವಾಚರಣೆಯಲ್ಲಿನ ಸ್ಪಂದನಗಳು ಮತ್ತು ಆನಂದವು ನಿಮ್ಮ ಅಸ್ತಿತ್ವದ ಶಾಂತ ಕೇಂದ್ರದಲ್ಲಿ, ಅವು ನಮ್ಮ ಜನ್ಮಸಿದ್ಧ ಹಕ್ಕು ಎಂದು ಏಸುವು ಖಾತರಿಪಡಿಸಿದ್ದ ಭಗವಂತನ-ಪ್ರತಿಫಲಿಸುವ ಗುಣಗಳ ಮತ್ತು ಮಿತಿಯನ್ನು-ಅತಿಶಯಿಸುವ ಸಂಭಾವ್ಯತೆಗಳ ಅಂತರ್ಬೋಧೆಯುಳ್ಳ ಆಶ್ವಾಸನೆಯನ್ನು ನೀಡುತ್ತಾ ದಿನನಿತ್ಯದ ಜವಾಬ್ದಾರಿಗಳನ್ನು ಮತ್ತು ಅನಿಶ್ಚಿತತೆಗಳ ಭಾರವನ್ನು ಕೊನೆಗೊಳಿಸುತ್ತವೆ. ಅವನು ಆ ಅರಿವಿನೆಡೆಗೆ ನಮಗೆ ದಾರಿ ತೋರಿದನು: “ನಿಮ್ಮೆಲ್ಲ ಅಂತರಾಳದಿಂದ, ಆತ್ಮದಿಂದ, ದೃಢತೆಯಿಂದ ಮತ್ತು ಮನಸ್ಸಿನಿಂದ” ಮೊದಲು ಮತ್ತು ಅತಿಮುಖ್ಯವಾಗಿ ಭಗವಂತನನ್ನು ಪ್ರೀತಿಸಿ; ಮತ್ತು ಎರಡನೆಯದಾಗಿ, “ನಿಮ್ಮನ್ನು ನೀವು ಪ್ರೀತಿಸುವ ಹಾಗೆ ನಿಮ್ಮ ನೆರೆಹೊರೆಯವರನ್ನೂ ಪ್ರೀತಿಸಿ” — ಭಗವಂತನಲ್ಲಿ ಲೀನವಾದ ಭಕ್ತಿಪುರಸ್ಸರ ಧ್ಯಾನ ಮತ್ತು ಆತ್ಮದ ಸದ್ಗುಣಗಳಿಂದ ಮಾರ್ಗದರ್ಶಿತವಾದ ದಯೆ, ಸೇವೆ ಮತ್ತು ನಡವಳಿಕೆಯಿಂದ ಪೂರಿತವಾದ ಚಟುವಟಿಕೆಯುಳ್ಳ ಜೀವನವನ್ನು ಜೀವಿಸಿ.
“ಮನುಷ್ಯನ ದೃಷ್ಟಿಯಲ್ಲಿ ಅವನು ಬೆತ್ಲೆಹೆಮ್‌ನಲ್ಲಿ ಜನಿಸಿದ ಒಂದು ಪುಟ್ಟ ಮಗು ಮತ್ತು ಅಸ್ವಸ್ಥರನ್ನು ಗುಣಪಡಿಸಿದ ಮತ್ತು ಮರಣಿಸಿದವರನ್ನು ಎಚ್ಚರಗೊಳಿಸಿದ ಸಂರಕ್ಷಕ. ದಿವ್ಯ ದೃಷ್ಟಿಗೆ ಅವನು ಇಡೀ ಆಕಾಶದಲ್ಲಿ ಮತ್ತು ಪ್ರತಿಯೊಂದು ಅಣುವಿನಲಿರುವ ಕ್ರಿಸ್ತ-ಅರಿವು. ಅಂತಹ ಕ್ರಿಸ್ತನನ್ನು ನಿಮ್ಮೊಳಗೆ ತಿಳಿಯಲು ನೀವು ಇಚ್ಛಿಸಬೇಕು.” ಎಂದು ಏಸುವಿನ ಬಗ್ಗೆ ನಮ್ಮ ಗುರುದೇವ ಪರಮಹಂಸ ಯೋಗಾನಂದರು ಹೇಳಿದ್ದಾರೆ. ಗುರೂಜಿ ಪ್ರತಿವರ್ಷ ಕ್ರಿಸ್ಮಸ್‌ಗಿಂತ ಮುಂಚೆ ಒಂದು ದಿನ ವಿಶೇಷ ಧ್ಯಾನವನ್ನು ಮಾಡುವ ರೂಢಿಯನ್ನು ಆರಂಭಿಸಿದರು. ಪ್ರಭು ಏಸುವಿನಲ್ಲಡಗಿದ್ದ ಕ್ರಿಸ್ತನ ನೈಜ ಅರ್ಥವನ್ನು ತಿಳಿಯಲು, ಭಕ್ತಿಯಿಂದ ಮತ್ತು ಆತ್ಮ-ಕರೆಯ ದೀರ್ಘ ಹಾಗೂ ಗಾಢವಾದ ಧ್ಯಾನದಿಂದ “ಆಧ್ಯಾತ್ಮಿಕ ಕ್ರಿಸ್ಮಸ್” ಅನ್ನು ಆಚರಿಸುವುದರಿಂದ, ನಾವು ಮಾನವನ ತಿಳಿವನ್ನು ಅತಿಶಯಿಸುವ ಕ್ರಿಸ್ತ-ಶಾಂತಿಯ ಸಾಮ್ರಾಜ್ಯದ ಮಿನುಗು ನೋಟವನ್ನು ಕಾಣುತ್ತೇವೆ. ಭ್ರಮಾತ್ಮಕ ಬಯಕೆಗಳ ಮತ್ತು ಮಮಕಾರಗಳ ಅಹಂಕಾರದ ವ್ಯಾಮೋಹ ಅಥವಾ ಪರಿಸ್ಥಿತಿಗಳಿಗೆ ಒಳಪಡದೇ ಕ್ರಿಸ್ತನು ಬದುಕಿದ ಪ್ರಜ್ಞೆಯಲ್ಲಿ — ಭಯವಿಲ್ಲದೇ, ಆನಂದದಿಂದ — ನಾವೂ ಕೂಡ ಜೀವನ ನಡೆಸಬಹುದು ಎಂಬ ನಂಬಿಕೆಯಿಂದ ನಾವು ತುಂಬಿತುಳುಕುತ್ತಿದ್ದೇವೆ. ಈ ಭೂಮಿಯ ಮೇಲೆ ಜೀವಿಸುತ್ತಿದ್ದಾಗಲೂ ನಮ್ಮ ಜೀವನವನ್ನು ಸ್ವಾರ್ಥರಹಿತ ಪ್ರೇಮ ಮತ್ತು ಸತ್ಯದಲ್ಲಿ ನೆಲೆಯೂರಿಸುವುದೆಂದರೆ, ಭಗವಂತನೊಂದಿಗಿನ ನಮ್ಮ ನಿತ್ಯ ಬಾಂಧವ್ಯದ ಅರಿವನ್ನು ಜಾಗೃತಗೊಳಿಸುವುದಾಗಿದೆ.
ಈ ಪವಿತ್ರ ಸಮಯದಲ್ಲಿ ನೀವು ಭಗವಂತನ, ಕ್ರಿಸ್ತನ ಮತ್ತು ಗುರುಗಳ ಪ್ರೇಮದ ಕ್ರಿಸ್ಮಸ್ ಉಡುಗೊರೆಗಳನ್ನು ಯಥೇಷ್ಟ ಆಶೀರ್ವಾದಗಳ ರೂಪದಲ್ಲಿ ಪಡೆಯುವಂತಾಗಲಿ.
ಸದಾ ಅವರ ನಿರಂತರ ಪ್ರೇಮ ಮತ್ತು ಅನುಗ್ರಹಗಳಲ್ಲಿ,
ಶ್ರೀ ಮೃಣಾಲಿನಿ ಮಾತಾ
ಕೃತಿಸ್ವಾಮ್ಯ © 2012 ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್. ಎಲ್ಲ ಹಕ್ಕುಗಳನ್ನು ಕಾದಿರಿಸಲಾಗಿದೆ.

















