ಪ್ರಿಯ ಬಂಧುಗಳೇ,
ಭಗವಾನ್ ಶ್ರೀ ಕೃಷ್ಣನ ಜನನದ ವಾರ್ಷಿಕೋತ್ಸವ – ಜನ್ಮಾಷ್ಟಮಿಯ ಸಂಭ್ರಮಾಚರಣೆಯ ಸಂದರ್ಭದಲ್ಲಿ, ನಾವೆಲ್ಲರೂ ವಿಶ್ವದಾದ್ಯಂತ ಇರುವ, ಆತನ ದಿವ್ಯ ಪ್ರೇಮದಿಂದ ಯಾರು ಮೇಲಕ್ಕೆತ್ತಲ್ಪಟ್ಟಿರುವರೋ, ಆ ಎಲ್ಲಾ ಚೇತನಗಳ ಜೊತೆ ಒಂದುಗೂಡಿದ್ದೇವೆ. ತನ್ನ ಜೀವನದಲ್ಲಿ ಆದರ್ಶಪ್ರಾಯನಾಗಿ ಬದುಕಿದ್ದ ಶ್ರೀಕೃಷ್ಣನು, ತನ್ನ ಶಿಷ್ಯನಾದ ಅರ್ಜುನನಿಗೆ ಬೋಧಿಸಿದ ಆ ಸನಾತನ ಜ್ಞಾನವು, ಪವಿತ್ರ ಗ್ರಂಥವಾದ ಭಗವದ್ಗೀತೆಯ ಮೂಲಕ ಯುಗ-ಯುಗಗಳಿಂದ ಹರಿದು ಬರುತ್ತಿದೆ. ಧರ್ಮ ಸಂಸ್ಥಾಪಕನೂ ಮತ್ತು ಶಿಷ್ಟ ರಕ್ಷಕನೂ ಆದ ಕೃಷ್ಣನು, ದೇವರ ಮಾಯೆಯಿಂದ ಆವರಿಸಲ್ಪಟ್ಟ ಮಕ್ಕಳಿಗೆ, ಅವರು ತನ್ನ ಆರೈಕೆಯಲ್ಲಿಯೇ ಇರುವರೆಂಬ ಭರವಸೆಯನ್ನು ಕೊಡುತ್ತಾನೆ. ಆತನ ಸಹಾಯ ಮತ್ತು ನಮ್ಮ ಸಹಕಾರದಿಂದ, ನಾವು ಪ್ರತಿಯೊಬ್ಬರೂ ಆತ್ಮ-ವಿಮೋಚನೆಯನ್ನು ಪಡೆಯಬಹುದು.
ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ಮಾರ್ಗದರ್ಶಕನಾಗಿದ್ದಂತೆ, ದೇವರು ನಮಗೆ ಉತ್ತಮ ಪುರುಷರ ಮೂಲಕ ದಾರಿ ತೋರಿಸುತ್ತಾನೆ. ಆದರೆ, ನಮ್ಮೊಳಗೆ ಇರುವ ಆ ದಿವ್ಯ ಶಕ್ತಿಯನ್ನು ಕಂಡುಕೊಳ್ಳಲು ಮತ್ತು ವಿಜಯಶಾಲಿಗಳಾಗಲು, ನಾವೂ ಕೂಡ ಸ್ವಪ್ರಯತ್ನದಿಂದ ನಮ್ಮ ಇಂದ್ರಿಯಗಳನ್ನು ನಿಗ್ರಹಿಸಿ, ಲೌಕಿಕ ಜಗತ್ತಿಗೆ ನಮ್ಮನ್ನು ಬಂಧಿಸುವ ಅಭ್ಯಾಸ ಮತ್ತು ಪ್ರವೃತ್ತಿಗಳಿಂದ ಬಿಡುಗಡೆ ಪಡೆಯಬೇಕು. ಆ ಅಡೆತಡೆಗಳನ್ನು ಗುರುತಿಸುವುದೇ ನಮ್ಮ ಮೊದಲ ಹೆಜ್ಜೆ. ಗುರುದೇವರು ತಮ್ಮ ಸುತ್ತಲೂ ಇರುವ ಸಾಮಾನ್ಯ ಪರಿಸ್ಥಿತಿಗಳನ್ನೇ ನಮಗೆ ತೋರಿಸಿ, ನಮ್ಮ ಪ್ರಗತಿಗೆ ಅಡಚಣೆಯಾಗಿರುವುದರ ಲಕ್ಷಣಗಳನ್ನು ವಿವರಿಸುತ್ತಿದ್ದರು. ಆತ ನಿಮ್ಮ ಮುಂದೆ ಹಿಡಿದಿರುವ ಕನ್ನಡಿಯಲ್ಲಿ ನೀವು ನಿರ್ಭೀತಿಯಿಂದ ನೋಡಬಲ್ಲವರಾದರೆ ನಿಮಗೂ ಸಹ ಅದನ್ನೇ ತೋರಿಸಬಲ್ಲರು. ಆದರೆ ನಮ್ಮ ನ್ಯೂನತೆಗಳನ್ನು ಒಪ್ಪಿಕೊಳ್ಳುವುದು ಕೀಳರಿಮೆಯಲ್ಲ. ಸತ್ಯವೇನೆಂದರೆ, ನಾವು ಬ್ರಹ್ಮಾಂಡದ ಮಾಯೆಯ ಸ್ಥಿತಿಯಲ್ಲಿ ಬದುಕುತ್ತಿದ್ದೇವೆಂದು ಅರಿತುಕೊಳ್ಳುವುದೇ “ಸತ್ಯವನ್ನು ಅರಿಯುವುದರ ಮೊದಲ ಅತ್ಯಮೂಲ್ಯ ಕ್ಷಣ”. ನಾವು ಏನನ್ನು ಬದಲಾಯಿಸಿಕೊಳ್ಳಬೇಕು ಎಂಬುದನ್ನು ಗುರುತಿಸುವುದೇ ನಮ್ಮ ಆತ್ಮ-ವಿಮೋಚನೆಯ ಪ್ರಾರಂಭವಾಗಿದೆ. ಇದು ನಮ್ಮ ಆಂತರಿಕ ಸಂಪನ್ಮೂಲಗಳನ್ನು, ಒಂದು ಖಚಿತವಾದ ಗುರಿಯ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಮಾಡುತ್ತದೆ ಮತ್ತು ಚಿಂತನಾಶಕ್ತಿಯನ್ನು ಉಪಯೋಗಿಸುವ ಮತ್ತು ಆ ಬದಲಾವಣೆಗಳನ್ನು ಮಾಡಿಕೊಳ್ಳುವ ಇಚ್ಚೆಯನ್ನು ತರುತ್ತದೆ.
ನಮ್ಮ ಆತ್ಮದ ಉದಾತ್ತ ಗುಣಗಳನ್ನು ಹೊರತರುವಲ್ಲಿ ಯೋಗ ವಿಜ್ಞಾನವು ಒಂದು ಅಮೂಲ್ಯವಾದ ಕೊಡುಗೆಯಾಗಿದೆ. ಗುರುದೇವರು ಹೇಳಿದಂತೆ “ಯೋಗವನ್ನು ಕಲಿಯುವುದು ಮತ್ತು ಅಭ್ಯಾಸ ಮಾಡುವುದು – ಮಾಯೆಯಿಂದ ಬಿಡುಗಡೆಗೊಳ್ಳುವ ವಿಧಾನ – ಒಂದು ಅಮೂಲ್ಯವಾದ ನಿಧಿಯನ್ನು ಹೊಂದಿದಂತೆ. ಗುರೂಜಿಯವರು ಉಪದೇಶಿಸಿರುವ ಯುಕ್ತ ನಡವಳಿಕೆಗಳ ನಿಯಮಗಳನ್ನು ನಿಷ್ಠೆಯಿಂದ ಅನುಸರಿಸಿದಾಗ, ಅವು ನಮ್ಮ ಮತ್ತು ಬೇರೆಯವರ ಉನ್ನತ ಕಲ್ಯಾಣಕ್ಕೆ ಬೇಕಾದುದನ್ನು ಮಾಡಲು ಮಾರ್ಗದರ್ಶನ ನೀಡುತ್ತವೆ. ಅವರು ನೀಡಿರುವ ಧ್ಯಾನದ ತಂತ್ರಗಳನ್ನು ನಿಷ್ಠೆಯಿಂದ ಅಭ್ಯಾಸ ಮಾಡಿದಾಗ, ಅದು ನಮ್ಮ ಪ್ರಜ್ಞೆಯನ್ನು ಆಳವಾದ ಸ್ತರದಲ್ಲಿ ಸತ್ಯದ ಮೂಲದೊಂದಿಗೆ ಸಂಪರ್ಕವನ್ನು ಸಾಧಿಸಿ, ಬದಲಾಯಿಸುತ್ತದೆ.
ಸ್ವಯಂ-ಶಿಸ್ತು ಮತ್ತು ಮಾಯೆಯ ಜೊತೆಗೆ ಇಚ್ಚೆಯಿಂದಲೇ ಹೋರಾಟ ಮಾಡುವುದು ಯೋಗ ಮಾರ್ಗದ ಒಂದು ಭಾಗವಾಗಿದೆ. ಆದರೆ, ಪ್ರೀತಿಯು ಮತ್ತೊಂದು ಅವಶ್ಯಕ ಅಂಶವಾಗಿದೆ. ಶ್ರೀಕೃಷ್ಣನ ಪರಿಶುದ್ಧವಾದ, ಸುಂದರ ಮತ್ತು ಸಮ್ಮೋಹಕ ಸ್ವರೂಪವನ್ನು, ಬೃಂದಾವನದಲ್ಲಿ ಗೋಪಿಯರ ಜೊತೆ , ಆತನ ಸನ್ನಿಧಿಯಲ್ಲಿ ಅವರು ಅನುಭವಿಸಿದ ಸಂತೋಷವನ್ನು ನೆನಪಿಸಿಕೊಂಡಾಗ, ನಮ್ಮ ಹೃದಯದಲ್ಲಿ ಹೊಸತೊಂದು ಸಡಗರವು ತುಂಬುತ್ತದೆ. ಅವನನ್ನು ಅರಸುವಂತೆ ಮಾಡಿದ ಆ ದೈವದ ಆಯಸ್ಕಾಂತೀಯ ಸೆಳೆತವೇ ಅದು. ಇದು ನಮ್ಮ ಆಧ್ಯಾತ್ಮಿಕ ಅಭ್ಯಾಸಗಳಿಗೆ ಜೀವವನ್ನು ಮತ್ತು ನಮ್ಮ ಪ್ರಯತ್ನಗಳಿಗೆ ಶಕ್ತಿಯನ್ನು ತುಂಬುತ್ತದೆ. ಕೃಷ್ಣನ ಸಹಚರರು ಎಲ್ಲವನ್ನೂ ತೊರೆದು ಆತನ ಕೊಳಲಿನ ಕರೆಗೆ ಮನಸೋತು ಬಂದಂತೆ, ನಿಮ್ಮ ಧ್ಯಾನವನ್ನು ನಿತ್ಯವೂ ಇದೇ ರೀತಿಯ ಉತ್ಸಾಹದಿಂದ ಮಾಡಿದಾಗ, ನಿಮ್ಮ ಹೃದಯ ಮತ್ತು ಮನಸ್ಸುಗಳು ಆ ದೇವನ ಸವಿಯಾದ ಸಾನಿಧ್ಯದ ಅನುಭವಕ್ಕೆ ತೆರೆದುಕೊಳ್ಳುತ್ತದೆ. ಇದನ್ನು ಪ್ರತಿಯೊಬ್ಬರೂ ಅನುಭವಿಸಬಹುದಾಗಿದೆ.
ದೇವರ ಆಶೀರ್ವಾದವು ಸದಾ ನಿಮ್ಮ ಮೇಲಿರಲಿ ಮತ್ತು ಆತನನ್ನು ಅರಿಯುವ ಮತ್ತು ಪ್ರೀತಿಸುವ ಆಶಯವು ಹೆಚ್ಚುತ್ತಿರಲಿ,
ಶ್ರೀ ಶ್ರೀ ಮೃಣಾಲಿನಿ ಮಾತಾ
ಕೃತಿಸ್ವಾಮ್ಯ © 2016 ಸೆಲ್ಫ್-ರಿಯಲೈಝೇಷನ್ ಫಲೋಷಿಪ್. ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ.

















