ರಾಜಯೋಗ. ಭಗವತ್ಸಂಯೋಗಕ್ಕೆ ಇರುವ “ರಾಜೋಚಿತ” ಅಥವಾ ಅತ್ಯುನ್ನತ ಮಾರ್ಗ. ಇದು, ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು ಇರುವ ಅಂತಿಮ ಸಾಧನವಾದ ವೈಜ್ಞಾನಿಕ ಧ್ಯಾನವನ್ನು (ಧ್ಯಾನ ನೋಡಿ) ಕಲಿಸುತ್ತದೆ ಹಾಗೂ ಯೋಗದ ಇತರ ಎಲ್ಲ ಪ್ರಕಾರಗಳ ಅತ್ಯುತ್ತಮವಾದ ಅಂಶಗಳನ್ನು ಒಳಗೊಂಡಿರುತ್ತದೆ. ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ರಾಜಯೋಗ ಬೋಧನೆಗಳು, ಕ್ರಿಯಾ ಯೋಗ (ಕ್ರಿಯಾ ಯೋಗ ನೋಡಿ) ಧ್ಯಾನದ ತಳಹದಿಯನ್ನು ಆಧರಿಸಿದ್ದು, ಶರೀರ, ಮನಸ್ಸು ಮತ್ತು ಆತ್ಮದ ಪರಿಪೂರ್ಣ ಅನಾವರಣಕ್ಕೆ ಕಾರಣವಾಗುವ ಜೀವನ ವಿಧಾನಗಳನ್ನು ತಿಳಿಸಿಕೊಡುತ್ತದೆ. ಯೋಗ ನೋಡಿ.
ರಾಜರ್ಷಿ ಜನಕಾನಂದ (ಜೇಮ್ಸ್ ಜೆ. ಲಿನ್). ಪರಮಹಂಸ ಯೋಗಾನಂದರ ಶ್ರೇಷ್ಠ ಶಿಷ್ಯರು, ಮತ್ತು ಫೆಬ್ರವರಿ 20, 1955ರಂದು ಅವರು ಸ್ವರ್ಗಸ್ಥರಾಗುವುದಕ್ಕೆ ಮುನ್ನ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ಅಧ್ಯಕ್ಷ ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಪರಮಹಂಸ ಯೋಗಾನಂದರ ನಂತರದ ಮೊದಲನೇ ಉತ್ತರಾಧಿಕಾರಿಗಳು. ಮಿ. ಲಿನ್ ಪರಮಹಂಸ ಯೋಗಾನಂದರಿಂದ 1932ರಲ್ಲಿ ಕ್ರಿಯಾ ಯೋಗ ದೀಕ್ಷೆಯನ್ನು ಪಡೆದರು; ಅವರು ಅಧ್ಯಾತ್ಮಿಕ ಪ್ರಗತಿ ಎಷ್ಟು ತ್ವರಿತವಾಗಿದ್ದೆಂದರೆ 1951ರಲ್ಲಿ ಅವರಿಗೆ ರಾಜರ್ಷಿ ಜನಕಾನಂದ ಎಂಬ ಸನ್ಯಾಸತ್ವದ ಉಪಾಧಿಯನ್ನು ಅನುಗ್ರಹಿಸುವ ಮುನ್ನವೇ ಗುರುಗಳು ಪ್ರೀತಿಯಿಂದ ಅವರನ್ನು “ಸಂತ ಲಿನ್” ಎಂದು ಸಂಬೋಧಿಸುತ್ತಿದ್ದರು.
ಲಾಹಿರಿ ಮಹಾಶಯ. ಲಾಹಿರಿ ಎಂದರೆ ಶ್ಯಾಮ ಚರಣ ಲಾಹಿರಿ (1828-1895) ಯವರ ಮನೆತನದ ಹೆಸರು. ಮಹಾಶಯ ಎಂಬುದು ಸಂಸ್ಕೃತದ ಒಂದು ಧಾರ್ಮಿಕ ಉಪಾಧಿ. ಇದರರ್ಥ “ದೊಡ್ಡ ಮನಸ್ಸಿನವನು.” ಲಾಹಿರಿ ಮಹಾಶಯರು ಮಹಾವತಾರ ಬಾಬಾಜಿಯವರ ಶಿಷ್ಯರು ಹಾಗೂ ಸ್ವಾಮಿ ಶ್ರೀ ಯುಕ್ತೇಶ್ವರರ (ಪರಮಹಂಸ ಯೋಗಾನಂದರ ಗುರುಗಳು) ಗುರುಗಳು. ಬಾಬಾಜಿಯವರು ಪುರಾತನವಾದ ಹೆಚ್ಚೂ ಕಡಿಮೆ ಕಳೆದೇ ಹೋಗಿದ್ದ ಕ್ರಿಯಾಯೋಗ (ಇದನ್ನು ನೋಡಿ) ವಿಜ್ಞಾನವನ್ನು ಹೇಳಿಕೊಟ್ಟಿದ್ದು ತಮ್ಮ ಶಿಷ್ಯರಾದ ಲಾಹಿರಿ ಮಹಾಶಯರಿಗೇ. ಒಬ್ಬ ಯೋಗಾವತಾರರಾಗಿದ್ದ ಅವರು ಆಧುನಿಕ ಭಾರತದಲ್ಲಿ ಯೋಗದ ಪುನರುಜ್ಜೀವನದ ವಿಷಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು, ಜಾತಿ ಅಥವಾ ಧರ್ಮವನ್ನು ಪರಿಗಣಿಸದೆ ತಮ್ಮ ಬಳಿಗೆ ಬಂದ ಅಸಂಖ್ಯಾತ ಸಾಧಕರಿಗೆ ಬೋಧನೆ ಮತ್ತು ಆಶೀರ್ವಾದವನ್ನು ನೀಡಿದರು. ಕ್ರಿಸ್ತನಂತಹ ಬೋಧಕರಾದ ಅವರು ಅಲೌಕಿಕ ಶಕ್ತಿಗಳನ್ನು ಹೊಂದಿದ್ದರು; ಆದರೆ ಅವರು ವ್ಯವಹಾರಗಳ ಹೊಣೆ ಹೊತ್ತಿದ್ದ ಗೃಹಸ್ಥರೂ ಆಗಿದ್ದು, ಧ್ಯಾನವನ್ನು ಬಾಹ್ಯ ಕರ್ತವ್ಯಗಳೊಂದಿಗೆ ಸರಿದೂಗಿಸಿಕೊಂಡು ಹೋಗುವ ಮೂಲಕ ಆದರ್ಶಪ್ರಾಯ ಸಮತೋಲಿತ ಜೀವನವನ್ನು ಹೇಗೆ ಸಾಧಿಸಬಹುದು ಎಂಬುದನ್ನು ಆಧುನಿಕ ಜಗತ್ತಿಗೆ ತೋರಿಸಿಕೊಟ್ಟರು. ಲಾಹಿರಿ ಮಹಾಶಯರ ಬದುಕನ್ನು ಯೋಗಿಯ ಆತ್ಮಕಥೆ ಯಲ್ಲಿ ವಿವರಿಸಲಾಗಿದೆ.
ಲೈಫ್ಟ್ರಾನ್ಸ್. ಪ್ರಾಣ ನೋಡಿ.
ವೇದಗಳು. ಹಿಂದೂಗಳ ನಾಲ್ಕು ಧರ್ಮಗ್ರಂಥಗಳು: ಋಗ್ವೇದ, ಸಾಮವೇದ, ಯಜುರ್ವೇದ ಹಾಗೂ ಅಥರ್ವ ವೇದ. ಇವು ಮೂಲಭೂತವಾಗಿ ಮನುಷ್ಯನ ಜೀವನ ಹಾಗೂ ಚಟುವಟಿಕೆಯ ಎಲ್ಲ ಹಂತಗಳನ್ನು ಸಚೇತನಗೊಳಿಸಲು ಹಾಗೂ ಆಧ್ಯಾತ್ಮಿಕಗೊಳಿಸಲು ಇರುವ ಮಂತ್ರ, ಧಾರ್ಮಿಕ ವಿಧಿಗಳು ಹಾಗೂ ಪಠಣಗಳಿಂದ ಕೂಡಿದ ಕೃತಿಗಳಾಗಿವೆ. ಭಾರತದ ಅಪಾರ ಕೃತಿಗಳಲ್ಲಿ ವೇದಗಳಿಗೆ (ಸಂಸ್ಕೃತದಲ್ಲಿ ವಿದ್ ಎಂದರೆ ತಿಳಿದುಕೊಳ್ಳುವುದು ಎಂದರ್ಥ) ಮಾತ್ರ ಯಾವ ಕರ್ತೃವಿನ ಹೆಸರನ್ನೂ ತಳುಕು ಹಾಕಲಾಗಿಲ್ಲ. ಹೊಸ ಭಾಷೆಯ ಉಡುಪನ್ನು ಮತ್ತೆ ತೊಡಿಸಿಕೊಂಡು “ಆದಿ ಕಾಲದಿಂದ” ಬಂದಿವೆ ಎಂದು ಋಗ್ವೇದವು ಸ್ತೋತ್ರಗಳಿಗೆ ಸ್ವರ್ಗೀಯ ಮೂಲವನ್ನು ನಿಯೋಜಿಸುತ್ತದೆ. ಕಾಲದಿಂದ ಕಾಲಕ್ಕೆ ಋಷಿಗಳಿಗೆ ದೈವಾನುಗ್ರಹದಿಂದ ಪ್ರಕಟಗೊಂಡ ನಾಲ್ಕು ವೇದಗಳು ನಿತ್ಯತ್ವವನ್ನು ಹೊಂದಿವೆ ಎಂದು ಹೇಳಲಾಗುತ್ತದೆ.
ವೇದಾಂತ. ಅಕ್ಷರಶಃ “ವೇದಗಳ ಅಂತಿಮ ಭಾಗ”; ಉಪನಿಷತ್ತುಗಳು ಅಥವಾ ವೇದಗಳ ನಂತರದ ಭಾಗದಿಂದ ಉದ್ಭವಿಸಿದ ತತ್ವಶಾಸ್ತ್ರ. ಶಂಕರರು (ಎಂಟನೇ ಅಥವಾ ಒಂಬತ್ತನೇ ಶತಮಾನದ ಆರಂಭದಲ್ಲಿ) ವೇದಾಂತದ ಮುಖ್ಯ ಪ್ರತಿಪಾದಕರಾಗಿದ್ದರು, ಅದು, ಭಗವಂತನೊಬ್ಬನೇ ಏಕೈಕ ವಾಸ್ತವ ಹಾಗೂ ಸೃಷ್ಟಿಯು ಸಾರಭೂತವಾಗಿ ಒಂದು ಮಾಯೆ ಎಂದು ಹೇಳುತ್ತದೆ. ಮನುಷ್ಯನು ಭಗವಂತನನ್ನು ಕಲ್ಪಿಸಿಕೊಳ್ಳಲು ಸಮರ್ಥನಾಗಿರುವ ಏಕೈಕ ಜೀವಿಯಾಗಿರುವುದರಿಂದ, ಅವನು ತಾನೇ ಸ್ವತಃ ದೈವಿಕನಾಗಿರಬೇಕಾಗುತ್ತದೆ, ಆದ್ದರಿಂದ ತನ್ನ ನೈಜ ಸ್ವರೂಪವನ್ನು ಅರಿತುಕೊಳ್ಳುವುದೇ ಅವನ ಕರ್ತವ್ಯವಾಗಿರುತ್ತದೆ.
ಶಿಷ್ಯ: ಭಗವಂತನ ಪರಿಚಯಕ್ಕಾಗಿ ಅರಸುತ್ತ ಒಬ್ಬ ಗುರುವಿನ ಬಳಿ ಬರುವ ಆಧ್ಯಾತ್ಮಿಕ ಆಕಾಂಕ್ಷಿ, ಇದಕ್ಕಾಗಿ ಗುರುವಿನೊಂದಿಗೆ ಶಾಶ್ವತ ಆಧ್ಯಾತ್ಮಿಕ ಸಂಬಂಧವನ್ನು ಸ್ಥಾಪಿಸಿಕೊಳ್ಳುತ್ತಾನೆ. ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನಲ್ಲಿ, ಕ್ರಿಯಾ ಯೋಗದಲ್ಲಿ ದೀಕ್ಷೆಯನ್ನು ನೀಡುವ ಮೂಲಕ ಗುರು-ಶಿಷ್ಯ ಸಂಬಂಧವನ್ನು ಸ್ಥಾಪಿಸಲಾಗುತ್ತದೆ. ಶಬ್ದಾರ್ಥ ಸಂಗ್ರಹದಲ್ಲಿ ಗುರು ಹಾಗೂ ಕ್ರಿಯಾ ಯೋಗವನ್ನೂ ನೋಡಿ.
ಶ್ರೀ ಯುಕ್ತೇಶ್ವರ, ಸ್ವಾಮಿ. ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿ (1855-1936), ಭಾರತದ ಜ್ಞಾನಾವತಾರ; ಪರಮಹಂಸ ಯೋಗಾನಂದರ ಗುರುಗಳು ಮತ್ತು ಯೋಗದಾ ಸತ್ಸಂಗ ಸೊಸೈಟಿಯ ಕ್ರಿಯಾಬಾನ್ ಸದಸ್ಯರಿಗೆ ಪರಮಗುರು. ಶ್ರೀ ಯುಕ್ತೇಶ್ವರರು ಲಾಹಿರಿ ಮಹಾಶಯರ ಶಿಷ್ಯರಾಗಿದ್ದರು. ಲಾಹಿರಿ ಮಹಾಶಯರ ಗುರುಗಳಾದ ಮಹಾವತಾರ್ ಬಾಬಾಜಿಯವರ ಆಣತಿಯ ಮೇರೆಗೆ, ಹಿಂದೂ ಮತ್ತು ಕ್ರೈಸ್ತ ಧರ್ಮಗ್ರಂಥಗಳ ಅಂತರ್ನಿಹಿತ ಏಕತೆಯನ್ನು ಕುರಿತ ಪ್ರಕರಣ ಗ್ರಂಥ, ದಿ ಹೋಲಿ ಸೈನ್ಸ್ ಅನ್ನು ಬರೆದರು ಮತ್ತು ಅವರ ಜಾಗತಿಕ ಆಧ್ಯಾತ್ಮಿಕ ಗುರಿಯಾದ ಕ್ರಿಯಾ ಯೋಗ(ಕ್ರಿಯಾ ಯೋಗ ನೋಡಿ)ದ ಪ್ರಚಾರಕ್ಕಾಗಿ ಪರಮಹಂಸ ಯೋಗಾನಂದರಿಗೆ ತರಬೇತಿ ನೀಡಿದರು. ಪರಮಹಂಸರು ಯೋಗಿಯ ಆತ್ಮಕಥೆ ಯಲ್ಲಿ ಶ್ರೀ ಯುಕ್ತೇಶ್ವರರ ಜೀವನವನ್ನು ಬಹಳ ಪ್ರೀತಿಯಿಂದ ವರ್ಣಿಸಿದ್ದಾರೆ.
ಸತ್-ಚಿತ್-ಆನಂದ. ಚೇತನದ ಮೂಲಭೂತ ಗುಣವನ್ನು ನಿತ್ಯ ಪ್ರಸ್ತುತ ಅಥವಾ ಸತ್ಯ (ಸತ್), ನಿತ್ಯ ಪ್ರಜ್ಞ (ಚಿತ್) ಮತ್ತು ನಿತ್ಯ ನೂತನ ಆನಂದ (ಆನಂದ) ಎಂದು ಭಗವಂತನನ್ನು ಸಂಬೋಧಿಸುವ ಸಂಸ್ಕೃತ ಪದ.
ಸತ್-ತತ್-ಓಂ. ಸತ್ ಎಂದರೆ ಸತ್ಯ, ಬ್ರಹ್ಮನ್, ಆನಂದ; ತತ್ ಎಂದರೆ ವಿಶ್ವವ್ಯಾಪಿ ಪ್ರಜ್ಞಾನ ಅಥವಾ ಪ್ರಜ್ಞೆ; ಓಂ ಎಂದರೆ ಬ್ರಹ್ಮಾಂಡೀಯ ಪ್ರಜ್ಞೆಯ ಸೃಜನಾತ್ಮಕ ಸ್ಪಂದನ, ಭಗವಂತನನ್ನು ಸಂಕೇತಿಸುವ ಪದ. ಓಂ ಹಾಗೂ ತ್ರಿಮೂರ್ತಿತ್ವ ನೋಡಿ.
ಸನಾತನ ಧರ್ಮ. ಅಕ್ಷರಶಃ “ಎಂದೆಂದಿಗೂ ಇರುವ ಧರ್ಮ.” ವೈದಿಕ ಬೋಧನೆಗಳ ಕೂಟಕ್ಕೆ ಕೊಟ್ಟ ಹೆಸರು, ಗ್ರೀಕರು ಸಿಂಧೂ ನದಿಯ ದಡದಲ್ಲಿರುವ ಜನರನ್ನು ಇಂಡೋಸ್ ಅಥವಾ ಹಿಂದೂಸ್ ಎಂದು ಕರೆದ ನಂತರ ಇದನ್ನು ಹಿಂದೂ ಧರ್ಮ ಎಂದು ಕರೆಯಲಾಯಿತು. ಧರ್ಮ ನೋಡಿ.
ಸಮಾಧಿ.ಋಷಿ ಪತಂಜಲಿ (ಪತಂಜಲಿ ನೋಡಿ) ವಿವರಿಸಿರುವಂತೆ ಯೋಗದ ಅಷ್ಟಾಂಗ ಮಾರ್ಗದಲ್ಲಿ ಅತ್ಯುನ್ನತವಾದದ್ದು. ಧ್ಯಾನಿ, ಧ್ಯಾನದ ಪ್ರಕ್ರಿಯೆ (ಆಂತರೀಕರಣದ ಮೂಲಕ ಇಂದ್ರಿಯಗಳಿಂದ ಮನಸ್ಸನ್ನು ಹಿಂತೆಗೆದುಕೊಳ್ಳುವುದು) ಮತ್ತು ಧ್ಯಾನದ ವಸ್ತು (ಭಗವಂತ), ಇವೆಲ್ಲವೂ ಒಂದಾದಾಗ ಸಮಾಧಿಯ ಪ್ರಾಪ್ತಿಯಾಗುತ್ತದೆ. “ಭಗವಂತನ ಸಂಸರ್ಗದ ಆರಂಭಿಕ ಸ್ಥಿತಿಗಳಲ್ಲಿ (ಸವಿಕಲ್ಪ ಸಮಾಧಿ) ಭಕ್ತನ ಪ್ರಜ್ಞೆಯು ಬ್ರಹ್ಮಾಂಡೀಯ ಚೈತನ್ಯದೊಂದಿಗೆ ಒಂದಾಗಿರುತ್ತದೆ; ಅವನ ಪ್ರಾಣಶಕ್ತಿಯು ಶರೀರದಿಂದ ಹಿಂತೆಗೆದುಕೊಳ್ಳಲ್ಪಟ್ಟಿರುತ್ತದೆ, ಆಗ ಅದು ‘ಮೃತʼ ಅಥವಾ ನಿಶ್ಚಲ ಹಾಗೂ ಸೆಡೆತುಕೊಂಡಂತೆ ಕಾಣುತ್ತದೆ. ಯೋಗಿಗೆ ತನ್ನ ಶರೀರದ ನಿಷ್ಕ್ರಿಯ-ಜೀವಂತಿಕೆಯ ಬಗ್ಗೆ ಸಂಪೂರ್ಣ ಅರಿವಿರುತ್ತದೆ. ಹಾಗಿದ್ದರೂ, ಅವನು ಉನ್ನತ ಆಧ್ಯಾತ್ಮಿಕ ಸ್ತರಗಳತ್ತ (ನಿರ್ವಿಕಲ್ಪ ಸಮಾಧಿ) ಪ್ರಗತಿ ಹೊಂದಿದಾಗ, ಶಾರೀರಿಕ ಸೆಟೆದುಕೊಳ್ಳುವಿಕೆಯಿಲ್ಲದೆಯೇ; ಹಾಗೂ ಅವನ ಸಾಮಾನ್ಯ ಜಾಗೃತ ಪ್ರಜ್ಞೆಯಲ್ಲಿ, ಲೌಕಿಕ ಕರ್ತವ್ಯಗಳ ನಡುವೆಯೂ ಭಗವಂತನೊಂದಿಗೆ ಸಂಸರ್ಗ ನಡೆಸುತ್ತಾನೆ,” ಎಂದು ಪರಮಹಂಸ ಯೋಗಾನಂದರು ವಿವರಿಸಿದ್ದಾರೆ. ಎರಡೂ ಸ್ಥಿತಿಗಳ ಮುಖ್ಯ ಲಕ್ಷಣವೆಂದರೆ ಪರಮಾತ್ಮನ ನಿತ್ಯ ನೂತನ ಆನಂದದ ಅನುಭವದೊಂದಿಗಿನ ಏಕತೆ, ಆದರೆ ನಿರ್ವಿಕಲ್ಪ ಸ್ಥಿತಿಯನ್ನು ಅತ್ಯಂತ ಮುಂದುವರಿದ ಮಹಾತ್ಮರು ಮಾತ್ರ ಅನುಭವಿಸುತ್ತಾರೆ.
ಸಾಧನೆ. ಆಧ್ಯಾತ್ಮಿಕ ಶಿಷ್ಟಾಚಾರದ ಮಾರ್ಗ. ಗುರುಗಳು ತಮ್ಮ ಶಿಷ್ಯರಿಗೆ ನಿಗದಿ ಪಡಿಸಿರುವ ನಿರ್ದಿಷ್ಟ ಸೂಚನೆಗಳು ಹಾಗೂ ಧ್ಯಾನದ ಅಭ್ಯಾಸಗಳು, ಅವರು ಅವುಗಳನ್ನು ನಿಷ್ಠೆಯಿಂದ ಅನುಸರಿಸುವ ಮೂಲಕ ಭಗವಂತನನ್ನು ಅರಿತುಕೊಳ್ಳುತ್ತಾರೆ.
ಸಿದ್ಧ. ಅಕ್ಷರಶಃ, “ಯಾರು ಗುರಿ ಸಾಧಿಸಿದ್ದಾನೋ ಅವನು”, ಆತ್ಮ-ಸಾಕ್ಷಾತ್ಕಾರವನ್ನು ಹೊಂದಿದವನು.
ಸೂಕ್ಷ್ಮ ಶರೀರ. ಮನುಷ್ಯನ ಸೂಕ್ಷ್ಮ ಶರೀರವು ಬೆಳಕು, ಪ್ರಾಣ ಅಥವಾ ಲೈಫ್‌ಟ್ರಾನ್ಸ್‌ಗಳಿಂದಾದುದು; ಆತ್ಮವನ್ನು ಅನುಕ್ರಮವಾಗಿ ಆವರಿಸಿರುವ ಮೂರು ಕವಚಗಳಾದ ಕಾರಣ ಶರೀರ (ಶಬ್ದಾರ್ಥ ಸಂಗ್ರಹದಲ್ಲಿ ಇದನ್ನು ನೋಡಿ), ಸೂಕ್ಷ್ಮ ಶರೀರ ಮತ್ತು ಸ್ಥೂಲ ಶರೀರಗಳಲ್ಲಿ ಎರಡನೆಯದು. ವಿದ್ಯುಚ್ಛಕ್ತಿಯು ಬಲ್ಬ್ ಅನ್ನು ಬೆಳಗಿಸುವಂತೆಯೇ ಸೂಕ್ಷ್ಮ ಶರೀರದ ಶಕ್ತಿಗಳು ಸ್ಥೂಲ ಶರೀರವನ್ನು ಸಚೇತನಗೊಳಿಸುತ್ತವೆ. ಸೂಕ್ಷ್ಮ ಶರೀರವು ಹತ್ತೊಂಬತ್ತು ತತ್ವಗಳನ್ನು ಹೊಂದಿರುತ್ತದೆ: ಬುದ್ಧಿ, ಅಹಂ, ಚಿತ್ತ, ಮನಸ್ಸು (ಇಂದ್ರಿಯ-ಪ್ರಜ್ಞೆ); ಐದು ಜ್ಞಾನೇಂದ್ರಿಯಗಳು (ದೃಷ್ಟಿ, ಶ್ರವಣ, ವಾಸನೆ, ರುಚಿ ಹಾಗೂ ಸ್ಪರ್ಶದ ಭೌತಿಕ ಅಂಗಗಳಲ್ಲಿರುವ ಸಂವೇದನಾ ಶಕ್ತಿಗಳು); ಐದು ಕರ್ಮೇಂದ್ರಿಯಗಳು (ಸಂತಾನೋತ್ಪತ್ತಿ, ವಿಸರ್ಜನೆ, ವಾಕ್ ಶಕ್ತಿ, ಚಲನ ಶಕ್ತಿ ಹಾಗೂ ಕರಕುಶಲತೆಯ ಭೌತಿಕ ಸಾಧನಗಳಲ್ಲಿ ಕಾರ್ಯನಿರ್ವಹಿಸುವ ಶಕ್ತಿಗಳು); ಮತ್ತು ಪರಿಚಲನೆ, ಚಯಾಪಚಯ, ಜೀರ್ಣಕ್ರಿಯೆ, ಸ್ಫಟಿಕೀಕರಣ ಹಾಗೂ ವಿಸರ್ಜನೆಯ ಕಾರ್ಯಗಳನ್ನು ನಿರ್ವಹಿಸುವ ಪ್ರಾಣಶಕ್ತಿಯ ಐದು ಉಪಕರಣಗಳು.
ಸೆಲ್ಫ್-ರಿಯಲೈಝೇಷನ್. ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ (ಎಸ್‌ಆರ್‌ಎಫ್) ಅನ್ನು ಸೂಚಿಸುವ ಸಂಕ್ಷಿಪ್ತ ಪದ, ಪರಮಹಂಸ ಯೋಗಾನಂದರು ಸ್ಥಾಪಿಸಿದ ಈ ಸಂಸ್ಥೆಯನ್ನು ಕುರಿತು ಹೇಳುವಾಗ, ಅವರು ಅನೌಪಚಾರಿಕ ಮಾತುಕತೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ; ಉದಾ. “ಸೆಲ್ಫ್-ರಿಯಲೈಝೇಷನ್ ಬೋಧನೆಗಳು”; “ಸೆಲ್ಫ್-ರಿಯಲೈಝೇಷನ್ ಮಾರ್ಗ”; “ಲಾಸ್ ಏಂಜಲೀಸ್‌ನಲ್ಲಿರುವ ಸೆಲ್ಫ್-ರಿಯಲೈಝೇಷನ್ ಪ್ರಧಾನ ಕಛೇರಿ”; ಇತ್ಯಾದಿ.
ಸೆಲ್ಫ್-ರಿಯಲೈಝೇಷನ್-ಫೆಲೋಶಿಪ್. ಜಗದಾದ್ಯಂತ ಆಧ್ಯಾತ್ಮಿಕ ತತ್ವಗಳನ್ನು ಮತ್ತು ಕ್ರಿಯಾ ಯೋಗದ (ಕ್ರಿಯಾ ಯೋಗ ನೋಡಿ) ಧ್ಯಾನ ತಂತ್ರಗಳನ್ನು ಪ್ರಸಾರ ಮಾಡಲು ಮತ್ತು ಎಲ್ಲ ಜಾತಿಗಳ, ಸಂಸ್ಕೃತಿಗಳ ಮತ್ತು ವರ್ಗಗಳ ಜನರಲ್ಲೂ ಎಲ್ಲ ಧಾರ್ಮಿಕ ಪಂಥಗಳಲ್ಲಿ ಹಾಸುಹೊಕ್ಕಾಗಿರುವ ಒಂದೇ ಸತ್ಯದ ಬಗ್ಗೆ ಅರಿವನ್ನು ಮೂಡಿಸಲು ಪರಮಹಂಸ ಯೋಗಾನಂದರು 1920 ರಲ್ಲಿ ಅಮೆರಿಕದಲ್ಲಿ ಸ್ಥಾಪಿಸಿದ ಸಂಸ್ಥೆ (ಹಾಗೂ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಎಂದು 1917 ರಲ್ಲಿ ಭಾರತದಲ್ಲಿ) ಸ್ಥಾಪಿಸಿದ ಯಾವುದೇ ಪಂಥಕ್ಕೆ ಸೇರದ ಅಂತರರಾಷ್ಟ್ರೀಯ ಸಂಸ್ಥೆ. ಪರಮಹಂಸ ಯೋಗಾನಂದರ ಸಂಸ್ಥೆಯ ಉದ್ದೇಶವನ್ನು “ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ಧ್ಯೇಯಗಳು ಮತ್ತು ಆದರ್ಶಗಳಲ್ಲಿ” ವಿವರಿಸಲಾಗಿದೆ. ಸೆಲ್ಫ್-ರಿಯಲೈಝೇಷನ್-ಫೆಲೋಶಿಪ್ ಹೆಸರಿನ ಅರ್ಥ, “ಆತ್ಮ-ಸಾಕ್ಷಾತ್ಕಾರದ ಮೂಲಕ ಭಗವಂತನೊಂದಿಗೆ ಸಾಹಚರ್ಯ ಹಾಗೂ ಸತ್ಯವನ್ನು ಅರಸುವ ಎಲ್ಲ ಆತ್ಮಗಳೊಂದಿಗೆ ಗೆಳೆತನ,” ಎಂದು ಪರಮಹಂಸ ಯೋಗಾನಂದರು ವಿವರಿಸಿದ್ದಾರೆ.
ಸೈತಾನ. ಹೀಬ್ರೂನಲ್ಲಿ, ಅಕ್ಷರಶಃ “ವಿರೋಧಿ.” ಪ್ರಜ್ಞಾಪೂರ್ವಕ ಹಾಗೂ ಸ್ವತಂತ್ರ ವಿಶ್ವವ್ಯಾಪಿ ಶಕ್ತಿಯಾದ ಸೈತಾನನು ಭಗವಂತನಿಂದ ಸೀಮಿತತೆ ಹಾಗೂ ಪ್ರತ್ಯೇಕತೆಯೆಂಬ ಆಧ್ಯಾತ್ಮಿಕವಲ್ಲದ ಪ್ರಜ್ಞೆಯಿಂದ ಎಲ್ಲವನ್ನೂ ಎಲ್ಲರನ್ನೂ ಭ್ರಾಂತಿಗೊಳಿಸುತ್ತಾನೆ. ಇದನ್ನು ಸಾಧಿಸಲು, ಸೈತಾನನು ಮಾಯೆ (ಬ್ರಹ್ಮಾಂಡೀಯ ಭ್ರಮೆ) ಹಾಗೂ ಅವಿದ್ಯೆ (ವೈಯಕ್ತಿಕ ಭ್ರಮೆ, ಅಜ್ಞಾನ) ಎಂಬ ಆಯುಧಗಳನ್ನು ಬಳಸುತ್ತಾನೆ. ಮಾಯೆ ನೋಡಿ.
ಸ್ವಾಮಿ ಶಂಕರ. ಕೆಲವೊಮ್ಮೆ ಆದಿ (“ಮೊದಲ”) ಶಂಕರಾಚಾರ್ಯ (ಶಂಕರ + ಆಚಾರ್ಯ, “ಗುರು”) ಎಂದು ಸಂಬೋಧಿಸಲಾಗುತ್ತದೆ. ಭಾರತದ ಬಹಳ ಹೆಸರುವಾಸಿಯಾದ ಗುರು. ಅನೇಕ ವಿದ್ವಾಂಸರು ಇವರು ೮ನೇ ಅಥವಾ ೯ನೇ ಶತಮಾನದವರು ಎಂದು ಹೇಳುತ್ತಾರೆ. ಅವರು ಭಗವಂತನನ್ನು ಒಂದು ನಕಾರಾತ್ಮಕ ಮೂರ್ತೀಕರಣ ಎಂದು ಪ್ರತಿಪಾದಿಸಲಿಲ್ಲ, ಬದಲಾಗಿ ಒಂದು ಸಕಾರಾತ್ಮಕ, ಅನಂತ, ಸರ್ವವ್ಯಾಪಿಯಾದ ನಿತ್ಯ-ನೂತನ-ಪರಮಾನಂದ ಎಂದು ಹೇಳಿದರು. ಶಂಕರರು ಪುರಾತನ ಸ್ವಾಮಿ ಪರಂಪರೆಯನ್ನು ಪುನರ್ವ್ಯವಸ್ಥಾಪಿಸಿದರು. ಹಾಗೂ ನಾಲ್ಕು ಮಹಾನ್ ಮಠಗಳನ್ನು (ಆಧ್ಯಾತ್ಮಿಕ ಶಿಕ್ಷಣದ ಮಠೀಯ ಕೇಂದ್ರಗಳು). ಅವರ ತರುವಾಯದ ಮುಖ್ಯಸ್ಥರು ಜಗದ್ಗುರು ಶ್ರೀ ಶಂಕರಾಚಾರ್ಯ ಎಂಬ ಉಪಾಧಿಯನ್ನು ಧರಿಸುತ್ತಾರೆ. ಜಗದ್ಗುರುವಿನ ಅರ್ಥ “ವಿಶ್ವ ಗುರು”.
ಸ್ವಾಮಿ. ಸ್ವಾಮಿ ಶಂಕರ (ಶಬ್ದಾರ್ಥ ಸಂಗ್ರಹದಲ್ಲಿ ಇದನ್ನು ನೋಡಿ)ರಿಂದ ಎಂಟನೇ ಅಥವಾ ಒಂಬತ್ತನೇ ಶತಮಾನದ ಆರಂಭದಲ್ಲಿ ಮರುಸಂಘಟಿಸಲ್ಪಟ್ಟ ಭಾರತದ ಅತ್ಯಂತ ಪ್ರಾಚೀನ ಸಂನ್ಯಾಸ ಪಂಥದ ಒಬ್ಬ ಸದಸ್ಯ. ಒಬ್ಬ ಸ್ವಾಮಿಯು ಬ್ರಹ್ಮಚರ್ಯದ ಪಾಲನೆಯ ಹಾಗೂ ಲೌಕಿಕ ಸಂಬಂಧಗಳು ಮತ್ತು ಆಕಾಂಕ್ಷೆಗಳನ್ನು ಪರಿತ್ಯಾಗ ಮಾಡುವ ವಿಧ್ಯುಕ್ತ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾನೆ; ಅವನು ಧ್ಯಾನ ಮತ್ತು ಇತರ ಆಧ್ಯಾತ್ಮಿಕ ಅಭ್ಯಾಸಗಳಿಗೆ ಹಾಗೂ ಮನುಕುಲದ ಸೇವೆಗೆ ತನ್ನನ್ನು ಮುಡುಪಾಗಿಡುತ್ತಾನೆ. ಪೂಜ್ಯ ಸ್ವಾಮಿ ಪಂಥದಲ್ಲಿ ವರ್ಗೀಕರಿಸಲಾದ ಹತ್ತು ಉಪಾಧಿಗಳಿವೆ: ಗಿರಿ, ಪುರಿ, ಭಾರತಿ, ತೀರ್ಥ, ಸರಸ್ವತಿ, ಇತ್ಯಾದಿ. ಸ್ವಾಮಿ ಶ್ರೀ ಯುಕ್ತೇಶ್ವರ್ (ಸ್ವಾಮಿ ಶ್ರೀ ಯುಕ್ತೇಶ್ವರ್ ನೋಡಿ) ಹಾಗೂ ಪರಮಹಂಸ ಯೋಗಾನಂದರು ಗಿರಿ (ಪರ್ವತ) ಶಾಖೆಗೆ ಸೇರಿದವರು. ಸಂಸ್ಕೃತದ ಪದ ಸ್ವಾಮಿ ಎಂದರೆ “ಆತ್ಮ (ಸ್ವ) ದೊಂದಿಗೆ ಒಂದಾಗಿರುವವನು.”
ಹಿಂದೂ ಧರ್ಮ. ಸನಾತನ ಧರ್ಮ ನೋಡಿ.
ಹೋಲಿ ಘೋಸ್ಟ್. ಪವಿತ್ರಾತ್ಮ. ತನ್ನದೇ ಸ್ಪಂದನೆಯ ಸಾರದಿಂದ ಸೃಷ್ಟಿಯನ್ನು ರೂಪಿಸಲು ಮತ್ತು ಪೋಷಿಸಲು ಭಗವಂತನಿಂದ ಹೊರಹೊಮ್ಮುವ ಬ್ರಹ್ಮಾಂಡೀಯ ಬುದ್ಧಿಶೀಲ ಸ್ಪಂದನ. ಹೀಗೆ ಇದು ಭಗವಂತನ, ಅವನ ನುಡಿಯ, ವಿಶ್ವದಲ್ಲಿ ಮತ್ತು ಪ್ರತಿಯೊಂದು ಆಕಾರದಲ್ಲಿ ಭಗವಂತನ ದೈವೀ ಉಪಸ್ಥಿತಿ, ಭಗವಂತನ ಪರಿಪೂರ್ಣ ವಿಶ್ವಾತ್ಮಕ ಪ್ರತಿಫಲನದ ವಾಹನ, ಕ್ರಿಸ್ತ ಪ್ರಜ್ಞೆ (ಕ್ರಿಸ್ತ ಪ್ರಜ್ಞೆ ನೋಡಿ). ಸಮಾಧಾನಪಡಿಸುವವನು, ಬ್ರಹ್ಮಾಂಡ ಮಾತಾ ಪ್ರಕೃತಿ, ಪ್ರಕೃತಿ (ಪ್ರಕೃತಿ ನೋಡಿ). ಓಂ ಮತ್ತು ತ್ರಿಮೂರ್ತಿತ್ವವನ್ನು ನೋಡಿ.