ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ ಅಧ್ಯಕ್ಷರಿಂದ ಒಂದು ವಿಶೇಷ ಸಂದೇಶ

ಡಿಸೆಂಬರ್‌ 5, 2018

ಪ್ರೀತಿಪಾತ್ರರೇ,

ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ (ವೈಎಸ್‌ಎಸ್‌)ದ ನಿರ್ದೇಶಕರ ಮಂಡಳಿಯಲ್ಲಾಗಿರುವ ಎರಡು ಮುಖ್ಯ ಬದಲಾವಣೆಗಳನ್ನು ನಾನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತೇನೆ.

Swami Smaranananda — Vice President of YSS.2002ರಿಂದ ವೈಎಸ್‌ಎಸ್‌ ನಿರ್ದೇಶಕರ ಮಂಡಳಿಯಲ್ಲಿ ಸದಸ್ಯರಾಗಿ ಮತ್ತು 2007ರಿಂದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಸ್ವಾಮಿ ಸ್ಮರಣಾನಂದರು ದೀರ್ಘ ಕಾಲದಿಂದ ಖಾಲಿ ಇರುವ ಉಪಾಧ್ಯಕ್ಷ ಸ್ಥಾನವನ್ನು ಸ್ವೀಕರಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿಯ ಸ್ಥಾನದಲ್ಲಿ ಸ್ವಾಮಿ ಸ್ಮರಣಾನಂದಜಿಯವರು ಗುರುದೇವರ ಅತ್ಯಂತ ಪ್ರೀತಿಯ ವೈಎಸ್‌ಎಸ್‌ಗೆ ಸಲ್ಲಿಸಿದ ಭಕ್ತಿಪೂರ್ಣ ಮತ್ತು ಶ್ರದ್ಧಾಪೂರ್ಣ ಸೇವೆಗೆ ನಾನು ವಿಶೇಷ ಶ್ಲಾಘನೆಯನ್ನು ವ್ಯಕ್ತಪಡಿಸಲು ಇಚ್ಛಿಸುತ್ತೇನೆ. ಅವರ ಮಾರ್ಗದರ್ಶನ ಮತ್ತು ಮುಂದಾಳತ್ವದಲ್ಲಿ ವೈಎಸ್‌ಎಸ್‌ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ ಮತ್ತು ಗುರುದೇವರ ಪವಿತ್ರ ಕ್ರಿಯಾ ಯೋಗ ಬೋಧನೆಗಳು ವ್ಯಾಪಕವಾಗಿ ಪಸರಿಸಿವೆ. ನಿರ್ದೇಶಕ ಮಂಡಳಿಯಿಂದ, ಸನ್ಯಾಸಿಗಳಿಂದ ಮತ್ತು ಶ್ರದ್ಧಾವಂತ ಭಕ್ತಾದಿಗಳ ಬೆಂಬಲದಿಂದ, ಅವರು ಪ್ರಧಾನ ಕಾರ್ಯದರ್ಶಿಯಾಗಿರುವ ಅವಧಿಯಲ್ಲಿ ವೈಎಸ್‌ಎಸ್‌ ಅನೇಕ ಮಹತ್ವದ ಗುರಿಗಳನ್ನು ಸಾಧಿಸಿದೆ.

Swami Ishwarananda — General Secretary of YSS.2011ರಿಂದ ವೈಎಸ್‌ಎಸ್‌ ನಿರ್ದೇಶಕ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಸ್ವಾಮಿ ಈಶ್ವರಾನಂದರು, ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ ಪ್ರಧಾನ ಕಾರ್ಯದರ್ಶಿಯಾಗಿ ಸ್ವಾಮಿ ಸ್ಮರಣಾನಂದರ ಸ್ಥಾನವನ್ನು ಅಲಂಕರಿಸುತ್ತಾರೆ. ಸ್ವಾಮಿ ಈಶ್ವರಾನಂದಜಿಯವರು ಹಲವು ವರ್ಷಗಳಿಂದ ಅನೇಕ ಸ್ಥಾನಗಳಲ್ಲಿ ಸಮರ್ಥವಾಗಿ ಗುರುದೇವರ ಕಾರ್ಯಗಳಿಗಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಲಾಸ್‌ ಎಂಜಲೀಸಿನಲ್ಲಿ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌/ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ ಅಂತರರಾಷ್ಟ್ರೀಯ ಕೇಂದ್ರ ಕಾರ್ಯಾಲಯದಲ್ಲಿ ಐದು ವರ್ಷಗಳ ಕಾಲ ನಮ್ಮ ಹಿಂದಿನ ಪ್ರೀತಿಯ ಅಧ್ಯಕ್ಷೆ ಶ್ರೀ ಶ್ರೀ ದಯಾ ಮಾತಾರವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮತ್ತು ಅನೇಕ ಆಡಳಿತಕ್ಕೆ ಸಂಬಂಧಪಟ್ಟ ಜವಾಬ್ದಾರಿಗಳಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದಾಗ ಅತ್ಯಂತ ಮೌಲಿಕವಾದ ತರಬೇತಿಯನ್ನು ಪಡೆದರು.

ಸ್ವಾಮಿ ಸ್ಮರಣಾನಂದರು ಮತ್ತು ಸ್ವಾಮಿ ಈಶ್ವರಾನಂದರು ಅವರ ಹೊಸ ಜವಾಬ್ದಾರಿಗಳನ್ನು ನಿರ್ವಹಿಸುವಾಗ ನಾವು ಭಗವಂತ ಮತ್ತು ಗುರುಗಳ ಆಶೀರ್ವಾದನ್ನು ಬೇಡುತ್ತೇವೆ, ಮತ್ತು ಸತ್ಯವನ್ನು ಅರಸುವ ಆತ್ಮಗಳಿಗೆ ಗುರುದೇವರ ಕ್ರಿಯಾ ಯೋಗದ ಆತ್ಮ-ವಿಮೋಚನೆಯ ಬೋಧನೆಗಳ ಪ್ರಸರಣವು ನಿರಂತರವಾಗಿ ಬೆಳವಣಿಗೆ ಹೊಂದಲಿ ಮತ್ತು ಪ್ರಸಾರವಾಗಲಿ ಎಂದು ಎದುರು ನೋಡುತ್ತಿದ್ದೇವೆ.

ಗುರುದೇವರ ಪ್ರೇಮ ಮತ್ತು ಸೇವೆಯಲ್ಲಿ.
ಸ್ವಾಮಿ ಚಿದಾನಂದ ಗಿರಿ
ಅಧ್ಯಕ್ಷರು, ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌

ಇದನ್ನು ಹಂಚಿಕೊಳ್ಳಿ