ಈ ಪ್ರಸ್ತುತ ಲೇಖನವು, “ಆತ್ಮ ಸಾಕ್ಷಾತ್ಕಾರ: ನಿಮ್ಮ ಅನಂತ ಸ್ವರೂಪವನ್ನು ಅರಿಯುವುದು” ಎಂಬ ಭಾಷಣದಿಂದ ಆಯ್ದ ಭಾಗವಾಗಿದೆ. ಈ ಭಾಷಣವನ್ನು ಸಂಪೂರ್ಣವಾಗಿ, ಪರಮಹಂಸ ಯೋಗಾನಂದರ ಸಂಗ್ರಹಿಸಿದ ಭಾಷಣಗಳು ಮತ್ತು ಪ್ರಬಂಧಗಳು ಮಾಲಿಕೆಯ ಸಂಪುಟ IV ರ, ಸಾಲ್ವಿಂಗ್ ದ ಮಿಸ್ಟ್ರಿ ಅಪ್ ಲೈಪ್ ಎಂಬ ಪುಸ್ತಕದಲ್ಲಿ ಓದಬಹುದಾಗಿದೆ. ಈ ಪುಸ್ತಕವು ಜೂನ್ 22ರಂದು ಸೆಲ್ಫ್-ರಿಯಲೈಝೇಶನ್ ಫೆಲೋಶಿಪ್‌ನಿಂದ ಮತ್ತು ತದನಂತರ ಯೋಗದಾ ಸತ್ಸಂಗ ಸೊಸೈಟಿಯಿಂದ ಪ್ರಕಟಗೊಳ್ಳಲಿದೆ.

ಶಾಂತಿಯು ನಿಮ್ಮನ್ನು ಆವರಿಸಲಿ, ಶಾಂತಿಯು ನಿಮ್ಮಲ್ಲಿ ಸದಾ ನೆಲೆಗೊಂಡಿರಲಿ, ಆನಂದವು ನಿಮ್ಮ ಅಸ್ತಿತ್ವದ ಒಳಹೊರಗೂ ವ್ಯಾಪಿಸಲಿ!
ಅನಂತ ಶಕ್ತಿಯ ಮಹಾಸಾಗರವು ನಿಮ್ಮೊಳಗೂ ಮತ್ತು ನಿಮ್ಮ ಸುತ್ತಮುತ್ತಲೂ ಆವರಿಸಿದೆ. ಒಂದು ಮುಚ್ಚಳ ಹಾಕಿದ ಬಾಟಲಿಯು ಹೇಗೆ ಸಾಗರದಲ್ಲಿ ತೇಲುತ್ತಿರುವುದೋ ಹಾಗೆ ನೀವೂ ಕೂಡ ದೇವರು ಮತ್ತು ಶಾಂತಿಯಿಂದ ಆವೃತವಾಗಿದ್ದೀರಿ. ಜೀವನದ ಸಾಗರದಲ್ಲಿ ನೀವು ಎಲ್ಲಿ ತೇಲಿದರೂ, ನೀವು ಸದಾ ಆ ಮಹಾ ಶಕ್ತಿಯಲ್ಲಿಯೇ ಮುಳುಗಿದ್ದಿರುತ್ತೀರಿ. ಅದನ್ನು ಅರಿತುಕೊಳ್ಳಿ!
ನೀವು ದೇವರು ಮತ್ತು ನಿಮ್ಮೊಳಗಿನ ಅನಂತ ಶಕ್ತಿಯ ಬಗ್ಗೆ ಹೆಚ್ಚು ಹೆಚ್ಚು ಅರಿತುಕೊಂಡಷ್ಟೂ, ಜೀವನದ ಲಕ್ಷ್ಯವು ಬದಲಾಗುತ್ತಾ ಹೋಗುತ್ತದೆ. ದೇಹದ ಪ್ರಕ್ರಿಯೆಗಳನ್ನು ನಿರಂತರವಾಗಿ ಅನುಭವಿಸುವ ಬದಲು, ನೀವು ದೇಹದ ಅಂತರಾಳದಲ್ಲಿರುವ ನಿತ್ಯ ಮೌನವನ್ನು ಅನುಭವಿಸುತ್ತೀರಿ….
ಈ ಜೀವನವು ಒಂದು ಪ್ರತ್ಯೇಕ ಅಲೆಯ ಹಾಗೆ ಅಲ್ಪಾಯುಷಿಯಾಗಿದೆಯೆಂದು ತಿಳಿದು ಅದರ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿರುವುದರಿಂದ ನೀವು ದೇವರ ಅನಂತ ಸರ್ವವ್ಯಾಪಕತ್ವವನ್ನು ಮರೆತಿರುವಿರಿ. ಆದರೆ, ಎಲ್ಲಾ ದೇಹಗಳಲ್ಲಿನ ಜೀವವೂ,ಮತ್ತು ಪ್ರಕೃತಿಯಲ್ಲಿನ ಎಲ್ಲಾ ಅಭಿವ್ಯಕ್ತಿಗಳೂ ದೇವರ ಮಾನಸ ಪ್ರಜ್ಞೆಯಲ್ಲಿ ಮೂಡಿರುವ ಸ್ಫುಟ ಚಿತ್ರಣಗಳಲ್ಲದೆ ಬೇರೇನಲ್ಲ ಎಂದು ನೀವು ಅರಿತುಕೊಂಡಾಗ, ಆಗ ನೀವು ಆತನ ಶಾಶ್ವತ ಸನ್ನಿಧಿಯಲ್ಲಿರುವೆವು ಎಂದು ತಿಳಿಯುವಿರಿ.
ದೇವರು ನಕ್ಷತ್ರಗಳಲ್ಲಿ, ಭೂಮಿಯ ಮಣ್ಣಿನ ಉಂಡೆಗಳಲ್ಲಿ, ಮತ್ತು ನಮ್ಮ ಆಲೋಚನೆಗಳು, ಭಾವನೆಗಳು ಹಾಗೂ ಸಂಕಲ್ಪಗಳಲ್ಲಿ ಸದಾ ಇರುತ್ತಾನೆ; ಇದನ್ನು ನೀವು ಗ್ರಹಿಸಿದಾಗ, ಆಗ ನೀವು ಅನಂತತೆಯೊಂದಿಗೆ ನಿಮ್ಮ ಸಂಬಂಧವನ್ನು ಅರಿತುಕೊಳ್ಳುತ್ತೀರಿ. ಇದೇ ಆತ್ಮ ಸಾಕ್ಷಾತ್ಕಾರ: ಇನ್ನು ಮುಂದೆ ನೀವು ನಿಮ್ಮನ್ನು ಜೀವನದ ಒಂದು ಸಣ್ಣ ಅಲೆಯಂತೆ ಭಾವಿಸುವುದಿಲ್ಲ, ಆದರೆ ಸಾಗರವೇ ನೀವೆಂದು ಭಾವಿಸುತ್ತೀರಿ.
ದಿನವಿಡೀ, ನೀವು ನಿರಂತರವಾಗಿ ದೇಹದ ಮೂಲಕ ಕಾರ್ಯನಿರ್ವಹಿಸುತ್ತಿರುವುದರಿಂದ ನೀವು ದೇಹದ ಮೂಲಕವೇ ಗುರುತಿಸಿಕೊಳ್ಳುವಿರಿ. ಆದರೆ ಪ್ರತಿ ರಾತ್ರಿ ದೇವರು ನಿಮ್ಮಆ ಬಂಧನದ ಭ್ರಮೆಯನ್ನು ಕಳಚುತ್ತಾನೆ. ಕಳೆದ ರಾತ್ರಿ ಕನಸಿಲ್ಲದ ಗಾಢವಾದ ನಿದ್ರೆಯಲ್ಲಿ, ನೀವು ಸ್ತ್ರೀಯಾಗಿದ್ದಿರೇ ಅಥವಾ ಪುರುಷರಾಗಿದ್ದಿರೇ, ಅಮೆರಿಕನ್ ಆಗಿದ್ದಿರೇ ಅಥವಾ ಹಿಂದೂ ಆಗಿದ್ದಿರೇ, ಶ್ರೀಮಂತರಾಗಿದ್ದಿರೇ ಅಥವಾ ಬಡವರಾಗಿದ್ದಿರೇ? ಇಲ್ಲ. ನೀವು ಕೇವಲ ಶುದ್ಧ ಆತ್ಮವಾಗಿದ್ದಿರಿ.
ಹಗಲಿನಲ್ಲಿ ನೀವು ನಿಮ್ಮನ್ನು ಒಂದಷ್ಟು ತೂಕದ ಮಾಂಸ ಮತ್ತು ಮೂಳೆಗಳು, ನರಗಳು ಮತ್ತು ಸ್ನಾಯುಗಳ ಒಂದು ಕಟ್ಟು ಎಂದು ಅರಿತುಕೊಂಡಿರುವಿರಿ; ಆದರೆ ಗಾಢ ನಿದ್ರೆಯ ಅರೆ-ಪರಾಚೇತನ ಸ್ವಾತಂತ್ರ್ಯದಲ್ಲಿ ದೇವರು ನಿಮ್ಮ ಎಲ್ಲಾ ಮರ್ತ್ಯ ನಾಮಾಂಕಿತಗಳನ್ನು ತೆಗೆದುಹಾಕಿ, ದೇಹ ಮತ್ತು ಅದರ ಎಲ್ಲಾ ಮಿತಿಗಳಿಂದ ನೀವು ಬೇರೆಯಾಗಿದ್ದೀರಿ—ಶುದ್ಧ ಚೈತನ್ಯವಾಗಿ, ಆಕಾಶದಲ್ಲಿ ವಿರಮಿಸುತ್ತಿದ್ದೀರಿ—ಎಂಬ ಅರಿವನ್ನು ಮೂಡಿಸುತ್ತಾನೆ.
ಆ ವಿಶಾಲತೆಯೇ ನಿಮ್ಮ ನಿಜವಾದ ಸ್ವರೂಪ. ಆ ಮರೆತುಹೋದ ಸ್ವರೂಪದ ಸ್ವಾತಂತ್ರ್ಯವನ್ನು ನೀವು ಸಂಪೂರ್ಣವಾಗಿ ಅರಿತುಕೊಳ್ಳುವ ಪ್ರಕ್ರಿಯೆಯೇ ಧ್ಯಾನ.
ನಾನು ನಿಮ್ಮನ್ನು ಮೌನವಾಗಿರಲು, ಧ್ಯಾನ ಮಾಡಲು ಏಕೆ ಹೇಳುತ್ತೇನೆ? ಆ ವಿಶಾಲತೆ ಮತ್ತು ಸ್ವಾತಂತ್ರ್ಯವನ್ನು ದೇಹಕ್ಕೆ ಬಂಧಿತವಾಗಿರುವ ಸೀಮಿತ ಪ್ರಜ್ಞೆಯೊಂದಿಗೆ ಹೋಲಿಸಲು. ಧ್ಯಾನದಲ್ಲಿ ಕಣ್ಣು ಮುಚ್ಚಿದಾಗ, ನೀವು ನಿಮ್ಮ ದೇಹವನ್ನು ನೋಡುವುದಿಲ್ಲ; ಮುಚ್ಚಿದ ಕಣ್ಣುಗಳ ಹಿಂದೆ ಇರುವ ಕತ್ತಲೆಯ ಗೋಳದೊಳಗೆ ನೀವು ನೋಡುತ್ತೀರಿ. ನೀವು ಶಾಂತವಾದಂತೆ ಮತ್ತು ನಿಮ್ಮ ಧ್ಯಾನವು ಗಾಢವಾದಂತೆ, ದೇಹದ ಸಂವೇದನೆಗಳು ಮತ್ತು ಅರಿವು ದೂರ ಸರಿಯುತ್ತವೆ. ಮರ್ತ್ಯ ರೂಪದ ಮಿತಿಗಳನ್ನು ಮೀರಿ ನಿಮ್ಮ ಅಸ್ತಿತ್ವದ ವಿಸ್ತರಣೆಯನ್ನು ನೀವು ಅನುಭವಿಸುವಿರಿ.
ವಿಶಾಲವಾದ ಅಂತಃಪ್ರಜ್ಞೆಯು ಕ್ರಮೇಣ ವಿಸ್ತರಿಸುತ್ತಾ ಹೋಗುತ್ತದೆ; ನೀವೇ ಆ ವಿಶಾಲತೆಯೆಂದು, ಅಂದರೆ ಸದಾ ಹೆಚ್ಚುತ್ತಿರುವ ಆನಂದ ಮತ್ತು ಶಾಂತಿಯಿಂದ ವ್ಯಾಪಿಸಲ್ಪಟ್ಟಿರುವ ಅನಂತ ಪ್ರಜ್ಞೆ ಎಂದು ಭಾವಿಸಲು ಪ್ರಾರಂಭಿಸುವಿರಿ. ಆಗ ನೀವು ನಿಮ್ಮ ಶರೀರಕ್ಕಿಂತಲೂ ಅತಿ ಶ್ರೇಷ್ಠವಾಗಿರುವಿರೆಂಬುದನ್ನು ಅರಿಯುವಿರಿ.
ನೀವು ಈ ಆನಂದಮಯ ವಿಶಾಲತೆಯ ಪ್ರಜ್ಞೆಯನ್ನು, ಅದನ್ನು ಮತ್ತೆ ಶರೀರದ ಭ್ರಮೆಯಲ್ಲಿ ಕಳೆದುಕೊಳ್ಳುವ ಬದಲು, ಕಾಯ್ದುಕೊಳ್ಳಲು ಸಾಧ್ಯವಾದರೆ, ನಿಮ್ಮ ನಿಜವಾದ ಆತ್ಮಸ್ವರೂಪವನ್ನು ಅರಿತುಕೊಳ್ಳುವಿರಿ.
ನೀವು ಯಾರೆಂದು ನಿಮಗೆ ತಿಳಿದಿಲ್ಲದಿರುವುದು ವಿಚಿತ್ರವಲ್ಲವೇ? ನಿಮ್ಮ ಸ್ವಂತ ಆತ್ಮಸ್ವರೂಪವನ್ನು ನೀವು ಅರಿಯದಿರುವುದು? ನಿಮ್ಮ ಶರೀರಕ್ಕೆ ಮತ್ತು ನಶ್ವರ ಪಾತ್ರಗಳಿಗೆ ಅನ್ವಯವಾಗುವ ಹಲವಾರು ವಿಭಿನ್ನ ಬಿರುದುಗಳಿಂದ ನಿಮ್ಮನ್ನು ನೀವು ವ್ಯಾಖ್ಯಾನಿಸಿಕೊಳ್ಳುತ್ತೀರಿ. ಆದರೆ ನೀವು ದೇಹವೇ? ಅಲ್ಲ, ಏಕೆಂದರೆ ನೀವು ದೇಹವಿಲ್ಲದೆ ಅಸ್ತಿತ್ವದಲ್ಲಿರಲು ಸಾಧ್ಯ. ಪ್ರತಿ ರಾತ್ರಿ ನೀವು ಇದನ್ನು ಅನುಭವಿಸುತ್ತೀರಿ. ಗಾಢ ನಿದ್ರೆಯಲ್ಲಿ ನಿಮಗೆ ದೇಹದ ಅರಿವಿಲ್ಲದಿದ್ದರೂ, ನೀವು ಅಸ್ತಿತ್ವದಲ್ಲಿರುವಿರಿ ಎಂದು ನಿಮಗೆ ತಿಳಿದಿದೆ.
‘ನಾನು’ ಎಂಬ ಪ್ರಜ್ಞೆಯನ್ನು ಕಳೆದುಕೊಳ್ಳದೆ, ನಿಮ್ಮ ಪ್ರಜ್ಞೆಯಿಂದ ನೀವು ಏನನ್ನು ತೆಗೆದುಹಾಕಲು ಸಾಧ್ಯವೋ, ಅದು ನೀವು ಅಲ್ಲ. ನೀವು ಈ ಬಿರುದುಗಳನ್ನು ಆತ್ಮದಿಂದ ತೆಗೆದುಹಾಕಬೇಕು. “ನಾನು ಯೋಚಿಸುತ್ತೇನೆ, ಆದರೆ ನಾನು ಆ ಆಲೋಚನೆಯಲ್ಲ. ನಾನು ಅನುಭವಿಸುತ್ತೇನೆ, ಆದರೆ ನಾನು ಆ ಅನುಭವವಲ್ಲ. ನಾನು ಸಂಕಲ್ಪಿಸುತ್ತೇನೆ, ಆದರೆ ನಾನು ಆ ಸಂಕಲ್ಪವಲ್ಲ.” ಏನು ಉಳಿಯುತ್ತದೆ? ನೀವು ಅಸ್ತಿತ್ವದಲ್ಲಿರುವಿರಿ ಎಂದು ತಿಳಿದಿರುವ ನೀವು; ನೀವು ಅಸ್ತಿತ್ವದಲ್ಲಿರುವಿರಿ ಎಂದು ಭಾವಿಸುವ ನೀವು — ಇದು ಅಂತಃಪ್ರಜ್ಞೆಯಿಂದ ಸಿಗುವ ಪುರಾವೆಯಿಂದ, ಅಂದರೆ ಆತ್ಮದ ತನ್ನದೇ ಅಸ್ತಿತ್ವದ ಬಗ್ಗೆ ಇರುವ ನಿರ್ಬಂಧರಹಿತ ಜ್ಞಾನದಿಂದ ದೊರೆಯುತ್ತದೆ.
ಭಾರತದಲ್ಲಿ ನಾನು ಕಲಿತದ್ದು ಇದನ್ನೇ: ಆತ್ಮದಲ್ಲಿ ಕೇಂದ್ರಿತನಾಗಿರುವುದು ಮತ್ತು ನಿರಂತರವಾಗಿ ಆ ಅಪರಿಮಿತ ಮನೋಭಾವದಲ್ಲಿ ಉಳಿಯುವುದು. ನಾನು ಕಂಡ ಅಲ್ಲಿನ ಮಹಾ ಗುರುಗಳು ಎಂದಿಗೂ ತಮ್ಮನ್ನು ದೇಹದೊಂದಿಗೆ ಗುರುತಿಸಿಕೊಂಡಿರಲಿಲ್ಲ.
ದಿವ್ಯ ಪುರುಷನಲ್ಲಿ, ದೇಹವು ಅವರ ಅನಂತ ಅಸ್ತಿತ್ವದ ಕೇವಲ ವ್ಯಕ್ತವಾದ ಸೀಮಿತ ಭಾಗವಾಗಿದೆ. ಸಾಮಾನ್ಯ ವ್ಯಕ್ತಿಗಳು ಭಾವಿಸುವಂತೆ ಅವರು ದೇಹದ ಬಗೆಗೆ ಭಾವಿಸುವುದಿಲ್ಲ. ನೀವು ನಡೆಯುತ್ತಿರುವಾಗ, ನಿಮ್ಮ ಕೂದಲು, ನಿಮ್ಮ ಬೆರಳುಗಳು — ಯಾವುದೇ ನಿರ್ದಿಷ್ಟ ಭಾಗದೊಂದಿಗೆ ನೀವು ಗುರುತಿಸಿಕೊಂಡಿದ್ದೀರಿ ಎಂದು ಭಾವಿಸುವುದಿಲ್ಲ. ನೀವು ದೇಹವನ್ನು ಹೊತ್ತಿದ್ದೀರಿ ಎಂಬ ಸಾಮಾನ್ಯ ಭಾವನೆ ನಿಮಗೆ ಇರುತ್ತದೆ. ನನ್ನ ವಿಚಾರದಲ್ಲಿಯೂ ಅಷ್ಟೇ. ನನಗೆ ದೇಹವಿದೆ ಎಂದು ಅರಿವಿದೆ, ಆದರೆ ನಾನು ಆತ್ಮ ಎಂದು ನನಗೆ ತಿಳಿದಿದೆ.
ಮಹಾ ಗುರುಗಳು ನನ್ನಲ್ಲಿ ಉಂಟುಮಾಡಿದ ಬದಲಾವಣೆ ಇದು. ಈಗ ಕೇವಲ ಒಂದೇ ಪ್ರಜ್ಞೆ ಇದೆ: ನಾನು ನನ್ನ ನಿಜವಾದ ಆತ್ಮದ ಅರಿವನ್ನು ಹೊಂದಿದ್ದೇನೆ. ನನ್ನ ಆತ್ಮದ ವಿಸ್ತಾರವು ಎಲ್ಲದರಲ್ಲೂ ವ್ಯಾಪಿಸಿದೆ ಮತ್ತು ನಾನು ಎಲ್ಲದರ ಅರಿವನ್ನು ಹೊಂದಿದ್ದೇನೆ….
ನಾನು ಕಾಣುವಂತಹದನ್ನು ನೀವೂ ಕಾಣಲು ಸಾಧ್ಯವಾಗುವಂತಿದ್ದರೆ, ಮತ್ತು ನಾನು ಅನುಭವಿಸುವ ಆನಂದವನ್ನು ನೀವೂ ಅನುಭವಿಸಲು ಸಾಧ್ಯವಾಗುವಂತಿದ್ದರೆ! ಅದು ನಿಮಗೆ ಸಾಧ್ಯ, ನೀವು ಧ್ಯಾನಾಸಕ್ತರಾದರೆ ಮಾತ್ರ.