2025 ರ ಜೂನ್ 8 ರಂದು, ವೈಎಸ್‌ಎಸ್ ಚೆನ್ನೈ ಆಶ್ರಮವು ಪೆರಂಬಕ್ಕಂ ಹೆದ್ದಾರಿಯಲ್ಲಿ, ಆಶ್ರಮಕ್ಕೆ ಸಮೀಪದಲ್ಲಿರುವ ಮನ್ನೂರ್ ಗ್ರಾಮದಲ್ಲಿ “ಯೋಗದ ಸತ್ಸಂಗ ದತ್ತಿ ವೈದ್ಯಕೀಯ ಚಿಕಿತ್ಸಾಲಯ” ವನ್ನು ಉದ್ಘಾಟಿಸಿತು. ಮನ್ನೂರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಉಚಿತ ವೈದ್ಯಕೀಯ ಆರೈಕೆಯನ್ನು ಒದಗಿಸುವ ಮೂಲಕ, ಈ ಚಿಕಿತ್ಸಾಲಯವು ಸಮುದಾಯಕ್ಕೆ ಸೇವೆ ಸಲ್ಲಿಸುವ ಆಶ್ರಮದ ನಿರಂತರ ಬದ್ಧತೆಯನ್ನು ಬಿಂಬಿಸುತ್ತದೆ.
ವೈಎಸ್‌ಎಸ್ ಸನ್ಯಾಸಿಗಳ ನೇತೃತ್ವದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ಅಧಿಕಾರಿಗಳು, ಗ್ರಾಮಸ್ಥರು, ಭಕ್ತರು ಮತ್ತು ವೈದ್ಯರು ಸೇರಿದಂತೆ ಸುಮಾರು 70 ಜನರು ಭಾಗವಹಿಸಿದ್ದರು. ಸನ್ಯಾಸಿಗಳು, ವೈದ್ಯರು ಮತ್ತು ಅಧಿಕಾರಿಗಳೊಂದಿಗೆ ಸೇರಿ ದೀಪ ಬೆಳಗಿಸಿದರು. ಸ್ವಾಮಿ ಶುದ್ಧಾನಂದರು, ಮಾನವೀಯ ಸೇವಾ ಮಹತ್ವವನ್ನು ಒತ್ತಿಹೇಳುವ ವೈಎಸ್‌ಎಸ್‌ನ ಗುರಿ ಮತ್ತು ಆದರ್ಶಗಳನ್ನು ಎತ್ತಿಹಿಡಿಯುವ ಸಂಕ್ಷಿಪ್ತ ಸ್ಫೂರ್ತಿದಾಯಕ ಭಾಷಣ ಮಾಡಿದರು. ಭಾಗವಹಿಸಿದವರೆಲ್ಲರೂ ಪ್ರಸಾದವನ್ನು ಸೇವಿಸಿದರು.
ಉದ್ಘಾಟನೆಯ ನಂತರ ಸುಮಾರು 50 ಸ್ಥಳೀಯ ನಿವಾಸಿಗಳು ಉಚಿತ ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ತಪಾಸಣೆ ಹಾಗೂ ಸಾಮಾನ್ಯ ಆರೋಗ್ಯ ಸಮಾಲೋಚನೆಯ ಸೌಲಭ್ಯವನ್ನು ಪಡೆದುಕೊಂಡರು.
ಮುಖ್ಯ ರಸ್ತೆಯಲ್ಲಿ ಸುಲಭವಾಗಿ ತಲುಪಲು ಸಾಧ್ಯವಿರುವ ಈ ಚಿಕಿತ್ಸಾಲಯವು ರೋಗಿಗಳಿಗೆ ಆರಾಮದಾಯಕವಾದ ಕಾಯುವ ಪ್ರದೇಶ, ವೈದ್ಯರ ಕೊಠಡಿ ಮತ್ತು ಔಷಧಿ ವಿತರಣಾ ಘಟಕವನ್ನು ಒದಗಿಸುತ್ತದೆ. ಪ್ರಸ್ತುತ, ಒಬ್ಬ ಸಾಮಾನ್ಯ ವೈದ್ಯರು ವಾರದಲ್ಲಿ ಐದು ದಿನಗಳು ಕೆಲ ಗಂಟೆಗಳ ಕಾಲ ಸಮಾಲೋಚನೆಗೆ ಲಭ್ಯವಿರುತ್ತಾರೆ, ಹಾಗೂ ಕಿವಿ, ಮೂಗು ಮತ್ತು ಗಂಟಲು ವೈದ್ಯರು ಮತ್ತು ದಂತ ವೈದ್ಯರಂತಹ ತಜ್ಞರು ತಿಂಗಳಿಗೊಮ್ಮೆ ಉಚಿತ ಸಮಾಲೋಚನೆಗಳನ್ನು ನೀಡುತ್ತಾರೆ.


















