ಪರಮಹಂಸ ಯೋಗಾನಂದರು ನಮ್ಮ ಸಂಬಂಧಗಳಲ್ಲಿ ಸಮರಸ್ಯವನ್ನು ಬೆಳೆಸುವ ಕುರಿತು

17 ಮೇ, 2025

ಪರಿಚಯ:

ಸಂಬಂಧಗಳಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಒಂದು ನಿಜವಾದ ಕಲೆ ಎಂದು ನಿಮಗೆ ಯಾವಾಗಲಾದರೂ ಅನಿಸಿದೆಯೇ – ಇದು ಅಭಿವೃದ್ಧಿಪಡಿಸಿ, ಮತ್ತು ಅಭ್ಯಾಸ ಮಾಡಬೇಕಾದಂತಹದ್ದು?

ಪರಮಹಂಸ ಯೋಗಾನಂದರು ತಮ್ಮ ಮಾತಿನಲ್ಲಿ ಹೀಗೆ ಸೂಚಿಸಿದ್ದಾರೆ “ಇತರರೊಂದಿಗೆ ಹೊಂದಿಕೊಳ್ಳುವ ಕಲೆ ಜೀವನದಲ್ಲಿನ ವಿಶೇಷ ಕಲೆಗಳಲ್ಲಿ ಒಂದು. ಅದು ಕೇವಲ ಯಶಸ್ವಿ ಬದುಕಿಗಾಗಿ ಪ್ರಾಯೋಗಿಕ ಅಗತ್ಯವಷ್ಟೇ ಅಲ್ಲ, ಆತ್ಮಜಾಗೃತಿಗೆ ಮತ್ತು ಅದರ ಮುಂದಿನ ಪ್ರಗತಿಗೆ ಅತೀ ಅವಶ್ಯಕವಾದ ಅಂಗವೂ ಹೌದು.”

ಈ ಸುದ್ದಿಪತ್ರದಲ್ಲಿ, ನಾವು ನಮ್ಮ ಸಂಬಂಧಗಳಲ್ಲಿ ಹೆಚ್ಚಿನ ಸಾಮರಸ್ಯವನ್ನು ಬೆಳೆಸುವ ಮಾರ್ಗಗಳ ಕುರಿತು ಪರಮಹಂಸಜೀಯವರಿಂದ ದೊರಕಿದ ಜ್ಞಾನಮಯ ಮಾರ್ಗದರ್ಶನವನ್ನು ಹಂಚಿಕೊಳ್ಳುತ್ತೇವೆ — ದಿವ್ಯ ಪ್ರೇಮ, ವಿವೇಚನೆ ಮತ್ತು ನಮ್ಮ ಆತ್ಮಗಳ ಉನ್ನತ ಸಾಮರ್ಥ್ಯವನ್ನು ಅನುಭವಿಸುವ ಮತ್ತು ಅಭಿವ್ಯಕ್ತಗೊಳಿಸುವ ಮೂಲಕ.

ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರವಣಿಗೆಗಳಿಂದ:

ಇತರರೊಡನೆ ಸಂಬಂಧ ಇರಿಸಿಕೊಳ್ಳುವಲ್ಲಿ ಅವರು ಬೆಳೆಸಿಕೊಂಡ ಗುಣಗಳನ್ನು ಗುರುತಿಸಿ ಮೆಚ್ಚಿಗೆ ಸೂಚಿಸುವುದು ಅತಿ ಅವಶ್ಯ. ನೀವು ಮುಕ್ತ ಮನಸ್ಸಿನಿಂದ ಜನರನ್ನು ಅಭ್ಯಸಿಸಿದರೆ, ಅವರನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಮತ್ತು ಅವರೊಂದಿಗೆ ಚೆನ್ನಾಗಿ ಹೊಂದಿಕೊಂಡು ಹೋಗಬಹುದು.

ವಿಚಾರಶೀಲತೆ ಮತ್ತು ಒಳ್ಳೆಯತನವನ್ನು ಅಭ್ಯಾಸಮಾಡಿ, ಪ್ರತಿಯೊಬ್ಬರೂ ನೋಡಲು ಇಷ್ಟಪಡುವ ಸುಂದರ ಹೂವಿನಂತೆ ನೀವೂ ಆಗಿ. ಹೂವಿನಲ್ಲಿರುವ ಸೌಂದರ್ಯದಂತಿರಿ, ಪರಿಶುದ್ಧ ಮನಸ್ಸಿನಲ್ಲಿರುವ ಆಕರ್ಷಣೆಯಂತಿರಿ. ಹೀಗೆ ನೀವು ಆಕರ್ಷಕರಾಗಿದ್ದಾಗ, ನಿಮಗೆ ಸದಾ ನಿಜವಾದ ಸ್ನೇಹಿತರು ದೊರಕುತ್ತಾರೆ.

ಧ್ಯಾನದಲ್ಲಿ ನೀವು ಅನುಭವಿಸುವ ಶಾಂತತೆಯನ್ನು ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿಯೂ ತಂದುಕೊಳ್ಳಿ; ಇದು ನಿಮ್ಮ ಜೀವನದ ಪ್ರತಿಯೊಂದು ಅಂಶದಲ್ಲಿಯೂ ಸಾಮರಸ್ಯ ಮತ್ತು ಸಂತೋಷವನ್ನು ತರುವಲ್ಲಿ ಸಹಾಯಕವಾಗುತ್ತದೆ.

ನಿಮಗೆ ಸಹಾನುಭೂತಿ ಬೇಕೆಂದಿದ್ದರೆ, ನಿಮ್ಮ ಸುತ್ತಲಿನವರಿಗೆ ಸಹಾನುಭೂತಿ ತೋರಿಸಲು ಆರಂಭಿಸಿ. ನಿಮಗೆ ಬೇರೆಯವರು ಗೌರವ ಸೂಚಿಸಬೇಕೆಂದಿದ್ದರೆ ನೀವು ಎಲ್ಲರೊಂದಿಗೆ ಅಂದರೆ ಚಿಕ್ಕವರೊಂದಿಗೂ ಮತ್ತು ದೊಡ್ಡವರೊಂದಿಗೂ, ಗೌರವದಿಂದ ನಡೆದುಕೊಳ್ಳಲು ಕಲಿಯಬೇಕು. ಬೇರೆಯವರು ನಿಮ್ಮೊಂದಿಗೆ ಶಾಂತಿಯಿಂದಿರಬೇಕೆಂದು ಬಯಸಿದರೆ, ಮೊದಲು ನಿಮ್ಮೊಳಗೆ ನೀವು ಶಾಂತಿಯಿಂದಿರಬೇಕು. ನೀವು ಇತರರು ಧಾರ್ಮಿಕರಾಗಬೇಕೆಂದು ಇಚ್ಛಿಸುತ್ತಿದ್ದರೆ, ನೀವು ಆಧ್ಯಾತ್ಮಿಕವಾಗಿರಲು ಆರಂಭಿಸಿ. ನೆನಪಿಡಿ, ನೀವು ಬೇರೆಯವರು ಏನಾಗಬೇಕೆಂದು ಬಯಸುತ್ತಿರೋ, ಮೊದಲು ನೀವೇ ಅದಾಗಿ, ಆಗ ಬೇರೆಯವರು ಸಹ ಅದೇ ರೀತಿ ನಿಮಗೆ ಪ್ರತಿಕ್ರಿಯಿಸುವುದನ್ನು ಕಾಣುವಿರಿ.

[ದೃಢೀಕರಣ:] “ಇತರರೆಡೆಗೆ ಪ್ರೀತಿ ಮತ್ತು ಸದ್ಭಾವನೆಗಳನ್ನು ಹೊರಸೂಸುತ್ತಾ, ಭಗವಂತನ ಪ್ರೀತಿಯು ನನ್ನೆಡೆಗೆ ಬರುವ ಕಾಲುವೆಯನ್ನು ತೆರೆಯುತ್ತೇನೆ. ಎಲ್ಲಾ ಒಳಿತನ್ನು ನನ್ನೆಡೆಗೆ ಆಕರ್ಷಿಸುವ ಆಯಸ್ಕಾಂತವೇ ಭಗವಂತನ ಪ್ರೀತಿ.”

2019ರಲ್ಲಿ ಮುಂಬೈನಲ್ಲಿ ಸ್ವಾಮಿ ಚಿದಾನಂದ ಗಿರಿ ಅವರು ನೀಡಿದ ಉಪನ್ಯಾಸದಿಂದ ಒಂದು ಅಂಶವನ್ನು ಓದುವುದರ ಮೂಲಕ ಈ ವಿಷಯವನ್ನು ಮತ್ತಷ್ಟು ಅನ್ವೇಷಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ, ಆ ಉಪನ್ಯಾಸದಲ್ಲಿ ವೈಎಸ್ಎಸ್/ಎಸ್ ಆರ್ ಎಫ್ ಅಧ್ಯಕ್ಷರು, ಧ್ಯಾನವು ಹೇಗೆ ನಮಗೆ ಇತರರೊಂದಿಗೆ ಆಧ್ಯಾತ್ಮಿಕವಾಗಿ ಆಳವಾದ ಸಂಬಂಧಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂಬುದನ್ನು ಚರ್ಚಿಸುತ್ತಾರೆ — ಇದು ಹೆಚ್ಚು ಶಾಂತಮಯ ಮತ್ತು ಏಕತೆಯುಳ್ಳ ಜಗತ್ತಿಗಾಗಿ ನಿಜವಾದ ಆಶೆಯ ಮೂಲವನ್ನೇ ಸೃಷ್ಟಿಸುವುದು.

ಇದನ್ನು ಹಂಚಿಕೊಳ್ಳಿ