“ಸತ್ಯದ ಚೇತನವು ಎಲ್ಲಿ ಆಳುವುದೋ” — 1925ರಲ್ಲಿ ಮಾತೃ ಕೇಂದ್ರದ ಲೋಕಾರ್ಪಣೆಯ ಸಂದರ್ಭದಲ್ಲಿ ಪರಮಹಂಸ ಯೋಗಾನಂದರ ಸ್ಫೂರ್ತಿಯ ನುಡಿಗಳು

3 ಅಕ್ಟೋಬರ್‌, 2025

2025ನೇ ವರ್ಷವು ಪರಮಹಂಸ ಯೋಗಾನಂದರು ಸೆಲ್ಫ್-ರಿಯಲೈಸೇಷನ್ ಫೆಲೋಶಿಪ್‌ನ ಅಂತರರಾಷ್ಟ್ರೀಯ ಪ್ರಧಾನ ಕಛೇರಿಯನ್ನು ಸ್ಥಾಪಿಸಿದ 100ನೇ ವಾರ್ಷಿಕೋತ್ಸವದ ಸಂದರ್ಭವಾಗಿದೆ. 1925ರ ಅಕ್ಟೋಬರ್‌ನಲ್ಲಿ ಲೋಕಾರ್ಪಣೆ ಮಾಡಿದ್ದ ಆ ಕೇಂದ್ರದಲ್ಲಿ 25 ವರ್ಷಗಳಿಗೂ ಹೆಚ್ಚು ಕಾಲ ನೆಲೆಸಿ, ಭಗವಂತನೊಂದಿಗೆ ಸಮ್ಮಿಲನಗೊಂಡು ಬೋಧನೆಗಳನ್ನು ಮಾಡಿದರು.

ಲಾಸ್ ಏಂಜಲೀಸ್‌ನಲ್ಲಿರುವ ಮೌಂಟ್ ವಾಷಿಂಗ್ಟನ್‌ನ ಶಿಖರದ ಮೇಲೆ ನೆಲೆಗೊಂಡಿರುವ, ಸೆಲ್ಫ್-ರಿಯಲೈಸೇಷನ್ ಫೆಲೋಶಿಪ್‌ನ ಐತಿಹಾಸಿಕ ಅಂತರರಾಷ್ಟ್ರೀಯ ಪ್ರಧಾನ ಕಾರ್ಯಾಲಯವು ಯಾವಾಗಲೂ ಒಂದು ದೊಡ್ಡ ಸಂಸ್ಥೆಯ ಆಡಳಿತ ಕೇಂದ್ರಕ್ಕಿಂತ ಹೆಚ್ಚಿನದಾಗಿದೆ. ನೂರು ವರ್ಷಗಳ ಹಿಂದೆ ಪರಮಹಂಸ ಯೋಗಾನಂದರು ಇದನ್ನು ಸ್ಥಾಪಿಸಿದ ಸಮಯದಿಂದ, ಮಾತೃ ಕೇಂದ್ರ (ಪರಮಹಂಸಜೀ ಅವರು ಪ್ರೀತಿಯಿಂದ ಕರೆಯುತ್ತಿದ್ದಂತೆ) ಒಂದು ಆಶ್ರಮ, ಒಂದು “ಜೀವನದ ಶಾಲೆ,” ಪ್ರಪಂಚದಾದ್ಯಂತದ ಸಾವಿರಾರು ಅಸಂಖ್ಯಾತ ಜನರಿಗೆ ಒಂದು ತೀರ್ಥಯಾತ್ರಾ ಸ್ಥಳ — ಮತ್ತು ಅವರ ಕ್ರಿಯಾ ಯೋಗ ಬೋಧನೆಗಳು ಮತ್ತು ಸತ್ಯಾನ್ವೇಷಕರು ಮತ್ತು ಜ್ಞಾನೋದಯ ಪಡೆದ ಗುರುಗಳು ಹಾಗೂ ಅವರ ನಿಷ್ಠಾವಂತ ಶಿಷ್ಯರ ವೈವಿಧ್ಯಮಯ ಆಧ್ಯಾತ್ಮಿಕ ಕುಟುಂಬಕ್ಕೆ ನೆಲೆಯಾಗಿದೆ.

1925ರಲ್ಲಿ ಮೌಂಟ್ ವಾಷಿಂಗ್ಟನ್ ಕೇಂದ್ರದ ಸಮರ್ಪಣೆಯ ಸಮಯದಲ್ಲಿ ಪರಮಹಂಸಜಿಯವರು ನೀಡಿದ ಪ್ರೇರಣಾದಾಯಕ ಮಾತುಗಳು ಮತ್ತು ದೈವೀ ಅನುಗ್ರಹದ ಆವಾಹನೆಯ ಆಯ್ದ ಭಾಗಗಳನ್ನು ಈ ಕೆಳಗೆ ನೀಡಲಾಗಿದೆ. ಈ ಮಾತುಗಳು ಮೊಟ್ಟ ಮೊದಲು “ಗುರುಗಳು ಮತ್ತು ಅವರ ಶಿಷ್ಯರೊಂದಿಗೆ ಮೌಂಟ್ ವಾಷಿಂಗ್ಟನ್‌ನಲ್ಲಿ” ಎಂಬ ಲೇಖನದಲ್ಲಿ, “ದೇಹ, ಮನಸ್ಸು ಮತ್ತು ಆತ್ಮದ ಉಪಶಮನಕ್ಕಾಗಿ ಸಮರ್ಪಿತವಾದ” ವೈಎಸ್‌ಎಸ್‌ನ ಪತ್ರಿಕೆಯಾದ ಯೋಗದಾ ಸತ್ಸಂಗದ 2024ರ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟವಾದವು.

ಎಸ್‌ಆರ್‌ಎಫ್‌ನ ಅಂತರರಾಷ್ಟ್ರೀಯ ಪ್ರಧಾನ ಕಾರ್ಯಾಲಯದ ಕಟ್ಟಡದ ಮುಂದೆ ನಿಂತಿರುವ ಪರಮಹಂಸ ಯೋಗಾನಂದರ ಬಣ್ಣ ನೀಡಿದ ಡಿಜಿಟಲ್ ಛಾಯಾಚಿತ್ರ 1934 ರಲ್ಲಿ (ಮೂಲ ಕಪ್ಪು-ಬಿಳುಪಿನ ಛಾಯಾಚಿತ್ರದಿಂದ ಎಸ್‌ಆರ್‌ಎಫ್‌ 2023 ರಲ್ಲಿ ಸಿದ್ಧಪಡಿಸಲಾಗಿದೆ)

ಮಾತೃ ಕೇಂದ್ರದ ಸಮರ್ಪಣೆಯ ಸಂದರ್ಭದಲ್ಲಿ ಪರಮಹಂಸಜಿಯವರು ಮಾತನಾಡುತ್ತಿರುವುದು:

ಸತ್ಯದ ಚೇತನದ ಆಳ್ವಿಕೆಯ ನಮ್ಮ ಧಾಮಕ್ಕೆ ನಾನು ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ. ಇಲ್ಲಿ ನೀವು ಯಾವುದೇ ಮತೀಯ ಕಟ್ಟುಪಾಡುಗಳಿಗೆ ಹೆದರಬೇಕಾಗಿಲ್ಲ. ಇಲ್ಲಿ ಯಾವುದೇ ಮತಾಂಧ ಸಿದ್ಧಾಂತವು ನೆಲೆಸುವುದಿಲ್ಲ. ಸತ್ಯವು ಎಲ್ಲಾ ಅಂಧಕಾರಮಯ ಮತ್ತು ಮತೀಯ ಭೇದದ ಕಟ್ಟುಪಾಡುಗಳನ್ನು ನಿವಾರಿಸುತ್ತದೆ. ಸತ್ಯದ ಬೆಳಕಿನಲ್ಲಿ, ಸಹಿಷ್ಣುತೆಯ ಬೆಳಕಿನಲ್ಲಿ, ಮತ್ತು ಪರಸ್ಪರ ಅರಿವಿನ ಬೆಳಕಿನಲ್ಲಿ ನಾನು ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ.

ಈ ಸಂಸ್ಥೆಯನ್ನು ನಿರ್ಮಿಸಲು ನನಗೆ ನೆರವಾದವರೆಲ್ಲರನ್ನೂ, ಹಾಗೆಯೇ ಕಾರ್ಯದಲ್ಲಿ, ಸದ್ಭಾವನೆಯಲ್ಲಿ ಮತ್ತು ಆಲೋಚನೆಯಲ್ಲಿಯೂ ಸಹ ನಮ್ಮೊಂದಿಗೆ ಸಹಕರಿಸಿದ ನಿಮ್ಮೆಲ್ಲರನ್ನೂ ನಾನು ವಿಶೇಷವಾಗಿ ಸ್ವಾಗತಿಸುತ್ತೇನೆ. ನಾನು ನಿಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ನಾನು ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ; ನಿಮ್ಮ ಕರ್ತವ್ಯವನ್ನು ನೀವು ನಿರ್ವಹಿಸುವುದು ನಿಮಗೆ ಬಿಟ್ಟದ್ದು.

ಇಲ್ಲಿ, ಜಗತ್ತನ್ನು ಪ್ರಬುದ್ಧಗೊಳಿಸುವ — ಭೂಮಿಯ ಸಕಲ ರಾಷ್ಟ್ರಗಳಿಂದ ಅಂಧಕಾರವನ್ನು (ಅಜ್ಞಾನವನ್ನು) ದೂರ ಮಾಡುವ ಮತ್ತು ತೊಡೆದು ಹಾಕುವ — ಅಂತಹ ವಿವೇಕಯುತ ಪ್ರಜ್ಞೆಯ ಚೈತನ್ಯವನ್ನು ಪೋಷಿಸಲು ನಾವು ಸಹಕರಿಸೋಣ. ಅದೇ ಚೈತನ್ಯದಲ್ಲಿ ನಾವು ಒಂದಾಗೋಣ, ಕೈಜೋಡಿಸೋಣ, ಸಹಕರಿಸೋಣ — ಕೇವಲ ಭೌತಿಕವಾಗಿ ಮಾತ್ರವಲ್ಲದೆ, ಆತ್ಮಗಳ ಸಂಘವಾಗಿ; ಮತ್ತು ಆ ಅಡಿಪಾಯದ ಮೇಲೆ ನಿಜವಾದ ರಾಷ್ಟ್ರಗಳ ಒಕ್ಕೂಟವನ್ನು ನಿರ್ಮಿಸಲಾಗುವುದು.

ನಾನು ಈಗ ಪ್ರಾರ್ಥಿಸುತ್ತೇನೆ — ಇದು ಔಪಚಾರಿಕ ಪ್ರಾರ್ಥನೆಯಲ್ಲ, ಬದಲಾಗಿ ನನ್ನ ಅಂತರಾತ್ಮದಿಂದ ಹೊರಹೊಮ್ಮುವಂತಹುದು. ದಯವಿಟ್ಟು ನೇರವಾಗಿ ಕುಳಿತುಕೊಳ್ಳಿ, ನಿಮ್ಮ ದೇಹ ಮತ್ತು ಮನಸ್ಸುಗಳನ್ನು ವಿಶ್ರಾಂತಗೊಳಿಸಿ, ಮತ್ತು ನಾವು ಒಂದಾದ ಹೃದಯ ಹಾಗೂ ಆತ್ಮಗಳೊಂದಿಗೆ ಪ್ರಾರ್ಥಿಸೋಣ. ನಾನು ಪ್ರಾರ್ಥಿಸುವಾಗ, ಅನುಪಮ ಭಕ್ತಿಯಿಂದ ಮಾನಸಿಕವಾಗಿ ನನ್ನೊಂದಿಗೆ ಸೇರಿಕೊಳ್ಳಿ.

“ಓ ಆತ್ಮನೇ! ದಿವ್ಯ ಪ್ರಕಾಶಮಾನ ಜ್ಯೋತಿಯೇ, ಇಲ್ಲಿ ನಿನ್ನ ಪ್ರಾಬಲ್ಯವಿರಲಿ! ನಿನ್ನ ಸತ್ಯದ ಬೆಳಕಿನಿಂದ ನಮ್ಮನ್ನು ಪರಿಪೂರ್ಣಗೊಳಿಸು; ನಿನ್ನ ಶಾಶ್ವತ ಜ್ಯೋತಿಯಿಂದ ನಮ್ಮೊಳಗಿನ ಎಲ್ಲಾ ಅಂಧಕಾರವನ್ನು ನಿವಾರಿಸು!

“ಓ ಅಗೋಚರ ಜ್ಯೋತಿಯೇ, ತಮ್ಮ ಅಂತರಾಳದಲ್ಲಿ ಆಳವಾಗಿ ಅನ್ವೇಷಿಸುವವರಿಗೆ ನೀನು ಗೋಚರಿಸು! ಈ ಪವಿತ್ರ ಸಂದರ್ಭದಲ್ಲಿ ನಮ್ಮ ನೆರವಿಗೆ ಬಾ. ನಮ್ಮೊಳಗೆ ನಿನ್ನ ಶಾಶ್ವತ ಕಾಂತಿಯನ್ನು ಹೊತ್ತಿಸು. ಸತ್ಯದ ಜ್ಯೋತಿಯನ್ನು ಎತ್ತಿ ಹಿಡಿಯಲು ನಮಗೆ ಕಲಿಸು, ಅದು ಎಲ್ಲಾ ಕತ್ತಲೆಯನ್ನು ಕಣ್ಮರೆಯಾಗಿಸಲಿ! ನಿನ್ನ ಪ್ರಕಾಶವಿರುವಡೆಯಲ್ಲಿ ಅಂಧಕಾರವು ನೆಲೆಸಲಾರದು.

“ಬಾ ಚೇತನವೇ ಬಾ! ನಿನ್ನ ಸತ್ಯದ ಜ್ಯೋತಿಯಿಂದ ಪ್ರತಿಯೊಂದು ಆತ್ಮವನ್ನೂ ಬೆಳಗುವಂತೆ ಮಾಡು. ಇದರಿಂದ ಪ್ರತಿಯೊಬ್ಬರೂ ಕ್ರಿಸ್ತನ ಚೇತನದಿಂದ ಪ್ರೇರೇಪಿತರಾಗಲಿ, ಮತ್ತು ಕ್ರಿಸ್ತನು ದೇವರ ಮಗನಾಗಿರುವಂತೆ, ನಾವೆಲ್ಲರೂ ಸಮಾನವಾಗಿ ದೇವರ ಮಕ್ಕಳೇ ಎಂಬ ಭಾವವನ್ನು ಪ್ರತಿಯೊಬ್ಬರೂ ಅನುಭವಿಸಲಿ! ಜೀಸಸ್‌, ಕೃಷ್ಣ, ಬುದ್ಧರಂತೆಯೇ, ನಿನ್ನ ನಿಜವಾದ ಮಕ್ಕಳಾಗಿ ನಮ್ಮ ಜೀವನಗಳನ್ನು ಮರುರೂಪಿಸಿಕೊಳ್ಳಲು ನಮಗೆ ಕಲಿಸು! ಅವರು ನಿನ್ನ ಒಂದೇ ಸಾರ್ವತ್ರಿಕ ಸತ್ಯದ ಆದರ್ಶ ಮಾದರಿಗಳಾಗಿದ್ದಾರೆ.

“ಬಾ ಚೇತನವೇ ಬಾ! ನಮ್ಮ ಪ್ರತಿಯೊಂದು ಜೀವಕೋಶದ ಪವಿತ್ರ ಪೀಠದ ಮೇಲೆ ಇಳಿದು ಬಾ. ನಿನ್ನ ಶಕ್ತಿಯು ನಮ್ಮ ರಕ್ತದಲ್ಲಿ ಸಂಪೂರ್ಣವಾಗಿ ವ್ಯಾಪಿಸಲಿ! ನಾವು ನಿನ್ನ ಆಜೀವ ಉಪಸ್ಥಿತಿಯನ್ನು ಅನುಭವಿಸುವಂತಾಗಲಿ!

“ಓ ಚೈತನ್ಯವೇ, ಅಮರತ್ವದ ಶಕ್ತಿಯಿಂದ ನಮ್ಮನ್ನು ಅಲಂಕರಿಸು! ಸೇವೆಯ ಮನೋಭಾವದಿಂದ ನಮ್ಮನ್ನು ತುಂಬಿಸು! ಸಹಿಷ್ಣುತೆ ಮತ್ತು ಸಕಲರಲ್ಲೂ ಪ್ರೀತಿಯ ಮನೋಭಾವವು ನೆಲೆಸುವಂತೆ ಮಾಡು! ಮತ್ತು ನಮ್ಮನ್ನು ವಿರೋಧಿಸುವವರನ್ನೂ, ನಿನ್ನ ಸರ್ವಶಕ್ತ ಪ್ರೀತಿಯಿಂದ ಆ ದುರ್ಭಾವನೆಯನ್ನು ಭಸ್ಮಗೊಳಿಸಲು ನಮಗೆ ಕಲಿಸು! ನಾವು ಅಂಧಕಾರದ ಮೇಲೆ ಗಮನ ಹರಿಸದೆ, ಓ ಚೈತನ್ಯವೇ, ನಿನ್ನ ಅರಿವಿನ ಮೇಲೆ ಮತ್ತು ನಿನ್ನ ಸರ್ವವ್ಯಾಪಿ ಪ್ರೀತಿಯ ಮೇಲೆ ಗಮನ ಹರಿಸುವಂತಾಗಲಿ!

“ನಿನ್ನ ಪ್ರೀತಿಯ ಅಧಿಪತ್ಯವು ನನ್ನೊಳಗಿದೆ. ನನ್ನ ಆತ್ಮವು ನಿನ್ನ ಪ್ರೇಮದಿಂದ ಕಂಪಿಸುತ್ತಿದೆ! ನನ್ನ ಆತ್ಮವು ನಿನ್ನ ಪ್ರೇಮದಲ್ಲಿ ಪೂರ್ಣವಾಗಿ ಮಿಂದಿದೆ! ಆನಂದದ ನಿತ್ಯ ಚಿಲುಮೆಯಾದ ನಿನ್ನ ಅಮರ ಸ್ವರೂಪದಿಂದ ನನ್ನ ಆತ್ಮವು ಅರಳುತ್ತದೆ!

“ನಮಗೆ ನಿನ್ನ ಪ್ರಕಾಶವನ್ನು ನೀಡು; ನಮಗೆ ಸದಾ ನವೋತ್ಸಾಹವನ್ನು ನೀಡು. ಪ್ರತಿ ದಿನವೂ ನಿನ್ನ ಚೈತನ್ಯದಲ್ಲಿ ನವೋದಯವಾಗಲಿ! ಪ್ರತಿ ದಿನವೂ ನಿನ್ನ ಸಾನ್ನಿಧ್ಯವನ್ನು ಸದಾ ನವೀನ ಮತ್ತು ವೈಭವಯುತವಾಗಿ ಅನುಭವಿಸಲು ನಮಗೆ ಕಲಿಸು — ಸದಾ ಹೊಸ ಆನಂದವನ್ನು! ನಮ್ಮಲ್ಲಿ ನಿನ್ನ ಜೀವಂತ ಚಿಲುಮೆಯನ್ನು ಅನಾವರಣಗೊಳಿಸು, ಅದನ್ನು ಯಾರು ಪಾನ ಮಾಡುತ್ತಾರೋ ಅವರು ಜೀವಾಮೃತವನ್ನು ಸವಿಯಲಿ!

“ಓ ಚೈತನ್ಯವೇ, ನಮ್ಮನ್ನು ಹರಸು! ಲಾಸ್‌ ಏಂಜಲೀಸ್‌ನನ್ನು ಹರಸು! ನನ್ನ ಅಮೇರಿಕಾ, ನನ್ನ ಭಾರತ, ನನ್ನ ವಿಶ್ವವನ್ನು ಹರಸು!

“ನಮ್ಮನ್ನು ಹರಸಿ! ನಮ್ಮನ್ನು ಹರಸಿ! ನಮ್ಮನ್ನು ಹರಸಿ!”

[ನಂತರದ ಕಾರ್ಯಕ್ರಮದಲ್ಲಿ, ಪರಮಹಂಸಜಿಯವರು, ಮೌಂಟ್‌ ವಾಷಿಂಗ್ಟನ್‌ ಕೇಂದ್ರದ ಬಗ್ಗೆ ಅವರಿಗಿರುವ ದೃಷ್ಟಿಕೋನವನ್ನು ವಿವರಿಸುತ್ತಾ ಹೀಗೆ ಹೇಳಿದರು:]

ಇದರ ಉದ್ದೇಶವು ಸರಿಯಾದ ಶಿಕ್ಷಣವನ್ನು, ಅಂದರೆ ಆಧ್ಯಾತ್ಮಿಕ ಶಿಕ್ಷಣವನ್ನು ನೀಡುವುದಾಗಿದೆ. ಸರಿಯಾದ ಶಿಕ್ಷಣವು ಕೇವಲ ಬುದ್ಧಿಯನ್ನು ಬೆಳೆಸುವುದಲ್ಲದೇ, ಕೇವಲ ದೇಹದಲ್ಲಿ ಶಕ್ತಿಯನ್ನು ವೃದ್ಧಿಸುವುದಲ್ಲದೇ, ನಿಮ್ಮ ಆತ್ಮವನ್ನು ಸತ್ಯದ ಸುಗಂಧದಿಂದ ತುಂಬುತ್ತದೆ. ಇದು ನಿಮ್ಮ ಆತ್ಮವನ್ನು ಪ್ರಬುದ್ಧಗೊಳಿಸುತ್ತದೆ. ಈ ಕೇಂದ್ರವು ನಿಮಗೆ ವೈಜ್ಞಾನಿಕ ವಿಧಾನಗಳಲ್ಲಿ ಶಿಕ್ಷಣ ನೀಡಲಿದ್ದು, ಇದರಿಂದಾಗಿ ದೇಹವನ್ನು ಸಶಕ್ತಗೊಳಿಸಬಹುದು, ಮನಸ್ಸನ್ನು ಹೆಚ್ಚು ದಕ್ಷವನ್ನಾಗಿ ಮಾಡಬಹುದು, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಪ್ರಸ್ತುತ ನಾಗರಿಕತೆಗೆ ನಿಮ್ಮನ್ನು — ನಿಮ್ಮ ಆತ್ಮವನ್ನು — ಹೊಂದಿಸಿಕೊಳ್ಳಲು ಬೇಕಾದ ತತ್ವಗಳನ್ನು ನಿಮಗೆ ಬೋಧಿಸಲಾಗುವುದು.

1926ರಲ್ಲಿ ಮಾತೃಕೇಂದ್ರದ ಪ್ರವೇಶ ದ್ವಾರ

ಈ ಸಂಸ್ಥೆಯು ನಿಮ್ಮ ಅಂತರಾಳದಲ್ಲಿರುವ ಭಗವಂತನನ್ನು ಕಾಣುವುದು ಹೇಗೆಂದು ಕಲಿಸುತ್ತದೆ. ಅನೇಕರು, ಭಗವಂತನನ್ನು ಕಾಣಲು ಕಾಡಿನಲ್ಲಿಯೋ ಅಥವಾ ಪರ್ವತಗಳ ಬೀಡಿನಲ್ಲಿಯೋ ಅರಸಬೇಕೆಂದು ಯೋಚಿಸುತ್ತಾರೆ. ಆದರೆ, ಈ ಅನ್ವೇಷಕರು ನಗರಗಳನ್ನು ತೊರೆದು ಕಾಡಿಗೆ ಹೋದರೆ, ನಾವು ಕಾಡಿನಲ್ಲಿಯೇ ನಗರಗಳನ್ನು ಕಟ್ಟಬೇಕಾಗಬಹುದೆಂದು ನಾನು ಹೇಳುತ್ತೇನೆ! ನಾವು ಇಲ್ಲಿ ನೀಡುವ ಆಧ್ಯಾತ್ಮಿಕ ಶಿಕ್ಷಣವು ನಿಮಗೆ, ನಾನು ಹೇಳುವಂತೆಯೇ ನಿಮಗೂ ಸಹ ಹೇಳಲು ಸಾಧ್ಯವಾಗುವಂತೆ ಮಾಡುತ್ತದೆ:

“ನಾನು ನಿನ್ನ ಸಾನಿಧ್ಯವು ತೊರೆಯ ಬಳಿಯೋ,
ಅಥವಾ ದೂರದ ಕಣಿವೆಯಲ್ಲೋ, ಇಲ್ಲವೇ ಪರ್ವತದ ಮೂಲೆಗಳಲ್ಲೆಲ್ಲೋ ಇದೆಯೆಂದು ಭಾವಿಸಿದ್ದೆ;
ಆದರೆ ಈಗ ನಾನು ನಿನ್ನನ್ನು ಪ್ರತಿ ತಂಗಾಳಿಯಲ್ಲಿ ಕಾಣುತ್ತೇನೆ,
ಮತ್ತು ನಿನ್ನ ಸನ್ನಿಧಿಯನ್ನು ಶಾಂತ ಚಂದ್ರಕಿರಣಗಳಲ್ಲಿ ಅನುಭವಿಸುತ್ತೇನೆ.

“ಎಲ್ಲೆಲ್ಲೂ ನೀನಿರುವೆ!
ಮತ್ತು ಹೆಚ್ಚಾಗಿ ನಿನ್ನನ್ನು ನನ್ನೊಳಗೆಯೇ ಕಾಣುತ್ತೇನೆ.
ನೀನು ಬಹಳ ದೂರವಿರುವೆ ಎಂದು ನಾನು ಭಾವಿಸಿದ್ದೆ,
ಆದರೆ ಯೋಗದಾದ* ಅರುಣೋದಯದೊಂದಿಗೆ ಪ್ರತಿದಿನವೂ ನನಗೆ ಅರಿವಾಗುತ್ತಿದೆ,
ನಿನ್ನ ಶಕ್ತಿ ನನ್ನ ಭಾವನೆಗಳ ಮೂಲಕ ಪ್ರವಹಿಸುತ್ತದೆ, ನನ್ನ ಆಲೋಚನೆಗಳಲ್ಲಿ ನೀನಿರುವೆ, ನನ್ನೊಳಗೆ ನೀನಿರುವೆ.
ಮತ್ತು, ಅಲ್ಲಿಯೇ, ನನ್ನೊಳಗೇ ನಾನು ನಿನ್ನನ್ನು ಅರಸುವೆ, ನಿನ್ನನ್ನು ಅನುಭವಿಸುವೆ, ನಿನ್ನೊಂದಿಗೆ ಸಂವಾದಿಸುವೆ!”

ಎಲ್ಲಕ್ಕಿಂತ ಹೆಚ್ಚಾಗಿ, ಈ ಸಂಸ್ಥೆಯು ಅತ್ಯುನ್ನತ ಆಧ್ಯಾತ್ಮಿಕ ಮಾನದಂಡಗಳಿಗನುಗುಣವಾಗಿ ಜೀವನವನ್ನು ನಡೆಸುವ ಮಾರ್ಗಗಳನ್ನು ನಿಮಗೆ ತೋರಿಸಿಕೊಡಲಿದೆ. ಪ್ರತಿಯೊಬ್ಬರಿಗೂ “ಜೀವಿಸುವುದು ಹೇಗೆ” ಎಂಬ ತತ್ವಗಳನ್ನು ಕಲಿಸುವುದರಿಂದ ಅವರು ತಾವಾಗಿಯೇ ಸುಖಿಗಳಾಗುವರು. ಆಧ್ಯಾತ್ಮಿಕವಾಗಿರುವುದೇ ಸುಖವಾಗಿರುವುದು; ಮತ್ತು ಆಧ್ಯಾತ್ಮಿಕರಲ್ಲದವರು ಎಂದಿಗೂ ಶಾಶ್ವತವಾಗಿ ಸುಖಿಗಳಾಗಿರುವುದಿಲ್ಲ. ಅದಕ್ಕಾಗಿಯೇ ಈ ಸಂಸ್ಥೆಯು ಈ ಚಿಂತನೆಯನ್ನು ಅನುರಣಿಸುವಂತೆ ಮಾಡುತ್ತದೆ. ನನ್ನ ದೇಹವು ಹೋಗಬಹುದು, ಆದರೆ ನನ್ನ ಈ ಆಶಯವು ಇಲ್ಲಿ ಸದಾ ಅನುರಣಿಸುತ್ತಲೇ ಇರುತ್ತದೆ — ಒಂದು ಅಗೋಚರ ಕಂಪನವು ನಿರಂತರವಾಗಿ ಘೋಷಿಸುತ್ತದೆ: “ಬನ್ನಿ! ಬನ್ನಿ! ಎಲ್ಲರೂ ಬನ್ನಿ! ದುಃಖಿತರಾದವರೇ, ರೋಗಿಗಳಾದವರೇ, ಅಂಧಕಾರದಲ್ಲಿ ಕಳೆದುಹೋದವರೇ, ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ರೋಗಗಳಿಂದ ಗುಣಮುಖರಾಗಿ!”

* ಅಮೇರಿಕಾದಲ್ಲಿ ತಮ್ಮ ಉದ್ದೇಶ ಸಾಧನೆಯ ಆರಂಭಿಕ ವರ್ಷಗಳಲ್ಲಿ, ಪರಮಹಂಸ ಯೋಗಾನಂದರು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭಿವೃದ್ಧಿಯ ತಮ್ಮ ಬೋಧನೆಗಳಿಗೆ ಸಾಮಾನ್ಯ ಪದವಾಗಿ “ಯೋಗದಾ” ಎಂಬ ಪದವನ್ನು ಬಳಸುತ್ತಿದ್ದರು; ಮತ್ತು ಅವರ ಸಂಸ್ಥೆಯನ್ನು ಯೋಗದಾ ಸತ್ಸಂಗ ಸೊಸೈಟಿ ಆಫ್ ಅಮೇರಿಕಾ ಎಂದು ಕರೆಯಲಾಗುತ್ತಿತ್ತು. 1930 ರ ದಶಕದ ಆರಂಭದಲ್ಲಿ, ಅವರು ಈ ಸಂಸ್ಥೆಯ ಹೆಸರನ್ನು ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ಎಂದು ಭಾಷಾಂತರಿಸಿದರು. (ಭಾರತದಲ್ಲಿ ಇಂದಿಗೂ ಹಿಂದಿನ ಹೆಸರಾದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಎಂಬ ಹೆಸರನ್ನೇ ಅವರ ಕಾರ್ಯಗಳಿಗಾಗಿ ಬಳಸಲಾಗುತ್ತಿದೆ.) ಅಂದಿನಿಂದ, ಅವರು “ಯೋಗದಾ ಬೋಧನೆಗಳು” (ಅಥವಾ ಕೇವಲ “ಯೋಗದಾ”) ಎಂದು ಕರೆಯಲ್ಪಡುತ್ತಿದ್ದುದ್ದನ್ನು “ಎಸ್ಆರ್‌ಎಫ್ ಬೋಧನೆಗಳು” ಅಥವಾ “ಆತ್ಮಸಾಕ್ಷಾತ್ಕಾರದ ಬೋಧನೆಗಳು” ಎಂದು ಉಲ್ಲೇಖಿಸಿದರು.

ಯೋಗದಾ ಸತ್ಸಂಗ ಪತ್ರಿಕೆಯ 2025ರ ವಾರ್ಷಿಕ ಸಂಚಿಕೆಯು, ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್ ಮಾತೃ ಕೇಂದ್ರದ ಸ್ಥಾಪನೆಯ 100 ವರ್ಷಗಳನ್ನು ಆಚರಿಸುವ ಲೇಖನಗಳ ವಿಭಾಗವನ್ನು ಒಳಗೊಂಡಿದೆ.

ಇದನ್ನು ಹಂಚಿಕೊಳ್ಳಿ