ಶಾಂತಿಯನ್ನು ಪ್ರತಿಷ್ಠಾಪಿಸುವ ಮಾರ್ಗ ಯಾವುದು? ಪ್ರತಿ ಸೆಪ್ಟೆಂಬರ್‌ನಲ್ಲಿ, ಸಂಯುಕ್ತ ರಾಷ್ಟ್ರಗಳ ಅಂತರರಾಷ್ಟ್ರೀಯ ಶಾಂತಿ ದಿವಸವು ಶಾಂತಿಯ ಆದರ್ಶವನ್ನು, ಪರಸ್ಪರ ಅರಿತುಕೊಳ್ಳುವಿಕೆ ಗೌರವ, ಹಾಗೂ ಸಮುದಾಯಗಳ ಹಾಗೂ ರಾಷ್ಟ್ರಗಳ ಮಧ್ಯೆ ಮುಕ್ತ ಸಂವಾದವನ್ನು ಮನ್ನಣೆ ಮಾಡುತ್ತದೆ.
ಪರಮಹಂಸ ಯೋಗಾನಂದ ಹಾಗೂ ಎಲ್ಲಾ ಮಹಾತ್ಮರುಗಳು ನಮ್ಮ ಗುರಿಯನ್ನು ತಲುಪಬೇಕೆಂದರೆ ನಮ್ಮಿಂದಲೇ ಆರಂಭಿಸಬೇಕೆಂದು ಬೋಧಿಸಿದ್ದಾರೆ – ಶಾಂತಿ ಹಾಗೂ ಸಾಮರಸ್ಯದ ದಿವ್ಯ ಮೂಲವನ್ನು ನಮ್ಮೊಳಗೆ ಅನುಭವಿಸುವ ಮೂಲಕ.
“ಪ್ರಪಂಚದಲ್ಲಿನ ಪ್ರತಿಯೊಬ್ಬ ಪ್ರಜೆಗೂ ಭಗವಂತನೊಡನೆ ಸಂವಹನ ಮಾಡಲು ಬೋಧಿಸಿದರೆ (ಕೇವಲ ಬೌದ್ಧಿಕವಾಗಿ ಅವನನ್ನು ಅರಿಯುವುದಲ್ಲ), ಆಗ ಶಾಂತಿಯು ನೆಲೆಸಲು ಸಾಧ್ಯ; ಅದಕ್ಕೂ ಮೊದಲಲ್ಲ ಎಂದು ನಾನು ನಂಬುತ್ತೇನೆ,” ಎಂದು ಪರಮಹಂಸ ಯೋಗಾನಂದರು ವಿವರಿಸಿದರು. “ಧ್ಯಾನದಲ್ಲಿ ಸತತ ಪ್ರಯತ್ನದಿಂದ ಯಾವಾಗ ಭಗವಂತನೊಡನೆ ಸಂವಹನದಿಂದ ಅವನನ್ನು ಅರಿಯುವಿರೋ, ಆಗ ನಿಮ್ಮ ಹೃದಯವು ಎಲ್ಲಾ ಮಾನವತೆಯನ್ನು ಅಪ್ಪಿಕೊಳ್ಳಲು ತಯಾರಾಗುತ್ತದೆ.”
ಹಾಗೂ ವೈಎಸ್‌ಎಸ್/ಎಸ್‌ಆರ್‌ಎಫ್ ನ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿ, 2024 ರ ಘಟಿಕೋತ್ಸವದಲ್ಲಿ ಅವರ ಇತ್ತೀಚಿನ ಭಾಷಣದಲ್ಲಿ ಭರವಸೆ ಕೊಟ್ಟಿರುವಂತೆ: ನಾವು ದೈನಂದಿನ ಧ್ಯಾನದ ಪವಿತ್ರ ವಿಜ್ಞಾನವನ್ನು ಸಾಮುದಾಯಿಕವಾಗಿ ಅನ್ವಯಿಸುವುದನ್ನು ಕಲಿತು, ಜಾಗೃತಗೊಳ್ಳುತ್ತಿರುವ ನಮ್ಮ ಜಾಗತಿಕ ನಾಗರಿಕತೆಯ ಆವಿಷ್ಕಾರಗಳನ್ನು ಮತ್ತು ಬೆಳವಣಿಗೆಗಳನ್ನು ರಚನಾತ್ಮಕವಾಗಿ ಬಳಸಿಕೊಂಡಾಗ, “ಸಮೃದ್ಧಿ, ಸಾಮರಸ್ಯ, ಆಧ್ಯಾತ್ಮಿಕ ತಿಳುವಳಿಕೆ ಮತ್ತು ಶಾಂತಿಯಿಂದ ಕೂಡಿದ ಒಂದು ಹೊಸ ಯುಗವು ಭೂಮಿಯ ಮೇಲೆ ಬರುತ್ತದೆ.”
ಈ ವಾರ್ತಾಪತ್ರವು ನೀವು ಧ್ಯಾನದ ಅಭ್ಯಾಸದಲ್ಲಿ ತೊಡಗಿಕೊಳ್ಳಲು ಉತ್ತೇಜಿಸುತ್ತದೆಂದು ನಂಬುತ್ತೇವೆ – ಅಲ್ಲಿ ಕಾಯುತ್ತಿರುವ ಆತ್ಮಶಾಂತಿಯ ಅನ್ವೇಷಣೆಗೆ, ಹಾಗೂ ಎಲ್ಲಾ ಮಾನವತೆಯ ಜೊತೆ ಬೇರ್ಪಡಿಸಲಾಗದ ಸಂಬಂಧವನ್ನು ಆಳವಾಗಿ ಅನುಭವಿಸಲು.
ಪರಮಹಂಸ ಯೋಗಾನಂದರ ಉಪನ್ಯಾಸಗಳು ಹಾಗೂ ಬರಹಗಳಿಂದ:
ನೀವು ನಿಮ್ಮಂತರಂಗದಲ್ಲಿ ಸಮಾಧಾನ ಹಾಗೂ ಶಾಂತಿಯಿಂದಿದ್ದಾಗ, ನೀವು ಎಲ್ಲರನ್ನೂ ಪ್ರೀತಿಸುವಿರಿ ಹಾಗೂ ಎಲ್ಲರೊಂದಿಗೆ ಸ್ನೇಹಪರರಾಗಿರುವಿರಿ. ಈ ಸಾಮರಸ್ಯವನ್ನೇ ಭಗವಂತನು ತನ್ನ ಸೃಷ್ಟಿಯಲ್ಲಿ ಬಯಸುವುದು.
ಧ್ಯಾನದಲ್ಲಿನ ಶಾಂತಿಯು ಭಗವಂತನ ಭಾಷೆ ಹಾಗೂ ಭಗವಂತನ ಹಿತಕರವಾದ ಅಪ್ಪುಗೆ. ಅವನು ನಿಮ್ಮೊಳಗಿರುವ ಶಾಂತಿಯ ಸಿಂಹಾಸನದ ಮೇಲೆ ಉಪಸ್ಥಿತನಾಗಿರುವನು. ಮೊದಲು ಅವನನ್ನು ಅಲ್ಲಿ ಕಾಣಿರಿ, ಹಾಗೂ ನಂತರ ನೀವು ಅವನನ್ನು ಎಲ್ಲಾ ಒಳಿತಿನಲ್ಲಿ ಹಾಗೂ ಜೀವನದಲ್ಲಿ ಅರ್ಥಪೂರ್ಣವಾದುದರಲ್ಲಿ ಕಾಣುವಿರಿ: ನಿಜವಾದ ಸ್ನೇಹಿತರಲ್ಲಿ, ಪ್ರಕೃತಿಯ ಸೌಂದರ್ಯದಲ್ಲಿ, ಒಳ್ಳೆಯ ಪುಸ್ತಕಗಳಲ್ಲಿ, ಆಳವಾದ ಚಿಂತನೆಗಳಲ್ಲಿ ಹಾಗೂ ಉದಾತ್ತ ಆಕಾಂಕ್ಷೆಗಳಲ್ಲಿ ಕಾಣುವಿರಿ.
ಪ್ರತಿ ರಾತ್ರಿ ನಿದ್ದೆಯಲ್ಲಿ ನೀವು ಶಾಂತಿ ಹಾಗೂ ಆನಂದದ ರುಚಿ ನೋಡುವಿರಿ. ನೀವು ಗಾಢ ನಿದ್ರೆಯಲ್ಲಿದ್ದಾಗ, ಭಗವಂತನು ನಿಮ್ಮನ್ನು ಅತೀತ ಪ್ರಜ್ಞಾವಸ್ಥೆಯಲ್ಲಿ ಪ್ರಶಾಂತತೆಯಲ್ಲಿರುವಂತೆ ಮಾಡುವನು, ಅಲ್ಲಿ ಈ ಅಸ್ತಿತ್ವದ ಎಲ್ಲಾ ಭಯ ಹಾಗೂ ಚಿಂತೆಗಳು ಮರೆತುಹೋಗುತ್ತವೆ. ಧ್ಯಾನ ಮಾಡುವುದರಿಂದ ಮನಸ್ಸಿನ ಆ ಪವಿತ್ರ ಸ್ಥಿತಿಯ ಅನುಭವವನ್ನು ನಿಮ್ಮ ಜಾಗೃತಾವಸ್ಥೆಯಲ್ಲಿಯೇ ಪಡೆಯಬಹುದು, ಹಾಗೂ ನಿರಂತರವಾಗಿ ಉಪಶಮನಕಾರಿ ಶಾಂತಿಯಲ್ಲಿ ಮುಳಗಬಹುದು.
ಯೋಗಿಯು ಎಲ್ಲಾ ಸಮಯದಲ್ಲಿ ಮನಸ್ಸಿನ ಸಿಂಹಾಸನದಲ್ಲಿ ಧ್ಯಾನ-ಜನ್ಯ ಶಾಂತಿಯನ್ನು ಇರಿಸಲು ಪ್ರಯತ್ನಿಸುತ್ತಾನೆ, ಪ್ರತಿ ಚಟುವಟಿಕೆಯಲ್ಲಿ, ಹಾಗೂ ಇತರರೊಂದಿಗಿನ ಎಲ್ಲ ವ್ಯವಹಾರಗಳಲ್ಲಿ.
ತಮ್ಮ ದೈನಂದಿನ ಧ್ಯಾನದಿಂದ ಶಾಂತಿಯನ್ನು ಉತ್ಪತ್ತಿ ಮಾಡುವವರೇ ನಿಜವಾದ ಶಾಂತಿದೂತರು….ಆಂತರಿಕ ಶಾಂತಿಯೇ ಭಗವಂತನ ಪ್ರಕೃತಿಯೆಂದು ಅರಿತಿರುವ ಭಕ್ತರು ಶಾಂತಿಯೆಂಬ – ಭಗವಂತನನ್ನು ಸದಾ ತಮ್ಮ ಮನೆಯಲ್ಲಿ, ತಮ್ಮ ನೆರೆಯವರಲ್ಲಿ, ರಾಷ್ಟ್ರದಲ್ಲಿ, ಎಲ್ಲಾ ರಾಷ್ಟ್ರೀಯರಲ್ಲಿ ಹಾಗೂ ಜನಾಂಗಗಳಲ್ಲಿ ಇರಬೇಕೆಂದು ಬಯಸುವರು.
ನಮ್ಮಲ್ಲಿ ಪ್ರತಿಯೊಬ್ಬರೂ ಒಬ್ಬ ಕ್ರಿಸ್ತ, ಒಬ್ಬ ಕೃಷ್ಣ, ಒಬ್ಬ ಬುದ್ಧನ ಜ್ಞಾನ ಮತ್ತು ಮಾದರಿಯ ಪ್ರಕಾರ ನಮ್ಮ ಜೀವನವನ್ನು ರೂಪಿಸಿಕೊಂಡಾಗ, ನಮಗೆ ಇಲ್ಲಿಯೇ ಶಾಂತಿ ಸಿಗುತ್ತದೆ; ಅದಕ್ಕೆ ಮೊದಲಲ್ಲ. ನಾವು ಈಗಲೇ ನಮ್ಮಿಂದಲೇ ಆರಂಭಿಸಬೇಕು. ಭೂಮಿಯ ಮೇಲೆ ನಮಗೆ ಮಾರ್ಗದರ್ಶಿಸಲು ಮತ್ತೆ ಮತ್ತೆ ಅವತರಿಸುವ ದಿವ್ಯ ಜೀವಿಗಳಂತೆ ಇರುವುದಕ್ಕೆ ಪ್ರಯತ್ನಿಸಬೇಕು. ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ಹಾಗೂ ನಮ್ಮ ಅರಿವನ್ನು ಸ್ಪಷ್ಟವಾಗಿಟ್ಟುಕೊಂಡು ಅವರು ಬೋಧಿಸಿದಂತೆ ಹಾಗೂ ಮಾದರಿಯಾದಂತೆ ನಡೆದುಕೊಂಡರೆ, ಶಾಂತಿಯು ಬರಲು ಸಾಧ್ಯ.
ಈ ಜ್ಞಾನವನ್ನು ತಕ್ಷಣವೇ ಅನುಷ್ಠಾನಕ್ಕೆ ತರಲು, ನಾವು ನಿಮ್ಮನ್ನು, ಎಸ್‌ಆರ್‌ಎಫ್ ಸನ್ಯಾಸಿ ಸ್ವಾಮಿ ಸೇವಾನಂದ ಗಿರಿಯವರು ನಡೆಸಿಕೊಟ್ಟ “ಗೈಡೆಡ್ ಮೆಡಿಟೇಷನ್ ಆನ್ ಇನ್ನರ್ ಪೀಸ್ ಫ್ರಂ ಪರಮಹಂಸ ಯೋಗಾನಂದ” ಇದರಲ್ಲಿ ಭಾಗವಹಿಸಲು ಆಹ್ವಾನಿಸುತ್ತೇವೆ. ಈ ವೀಡಿಯೋ ಧ್ಯಾನದ ಮೊದಲು ಮಾಡಬೇಕಾದ ಪರಮಹಂಸ ಯೋಗಾನಂದರು ಬೋಧಿಸಿದ ಧ್ಯಾನದ ಭಂಗಿ ಅಲ್ಲದೇ ಆರಂಭಿಕ ಉಸಿರಾಟದ ವ್ಯಾಯಾಮದ ಅದ್ಭುತ ಪುನರವಲೋಕನವನ್ನು ಒಳಗೊಂಡಿದೆ.