ಪರಿಚಯ:
ಒಂದು ಯೋಗ್ಯ ಆಧ್ಯಾತ್ಮಿಕ ಅಥವಾ ಭೌತಿಕ ಉದ್ದೇಶವನ್ನು ಸಾಧಿಸಲು ಹೋಗಿ, ನಂತರ ಸ್ವಾಭಾವಿಕವಾಗಿ ಎದುರಾಗುವ ಅಡೆತಡೆಗಳು ಎದುರಾಗಿ, ನಿರುತ್ಸಾಹ ಅಥವಾ ಎದೆಗುಂದುವಂಥ ಯಾವುದಾದರೂ ಒಂದು ಕೆಲಸವನ್ನು ಮಾಡಲು ಎಂದಾದರೂ ನೀವು ಪ್ರಯತ್ನ ಮಾಡಿದ್ದೀರಾ?
ಸರಿ, ಅದು ಮನುಷ್ಯನಾಗಿರುವುದರ ಒಂದು ಅಂಶ, ಆದರೆ ಪರಮಹಂಸ ಯೋಗಾನಂದರ ಬೋಧನೆಗಳು ಯಾವುದೇ ಅಥವಾ ಎಲ್ಲ ತಡೆಯೊಡ್ಡುವಂಥದ್ದನ್ನು ನಮ್ಮ ಇಚ್ಛಾ ಶಕ್ತಿಯಿಂದ ಪರ್ಯಾಪ್ತವಾದ ಒಂದು ಅಸಾಧಾರಣ ಮತ್ತು ನಿರ್ಭೀತ ದೃಢನಿರ್ಧಾರದಿಂದ ಬದಲಾಯಿಸಲು ನಮಗೆ ಅನುವು ಮಾಡಿಕೊಡುತ್ತವೆ.
“ಒಂದು ಒಳ್ಳೆಯ, ಯುಕ್ತಾಯುಕ್ತವಾದ, ಸೃಜನಶೀಲ ಉದ್ದೇಶವನ್ನು ಆಯ್ಕೆ ಮಾಡಿಕೊಳ್ಳಿ. ನಂತರ ನೀವು ಅದನ್ನು ಸಾಧಿಸಿಯೇ ಸಾಧಿಸುತ್ತೀರಿ,” ಎಂಬ ದೃಢನಿರ್ಧಾರವನ್ನು ಮಾಡಿ. “ನೀವು ಎಷ್ಟೇ ಬಾರಿ ವಿಫಲರಾದರೂ ಪರವಾಗಿಲ್ಲ, ಪ್ರಯತ್ನವನ್ನು ಮುಂದುರಿಸುತ್ತಲೇ ಇರಿ. ಏನೇ ಅಗಲಿ, ‘ಭೂಮಿಯು ಚೂರು ಚೂರಾಗಬಹುದು, ಆದರೆ ನನ್ನ ಶಕ್ತಿ ಮೀರಿ ಮಾಡಬಲ್ಲದ್ದನ್ನು ನಾನು ಮಾಡುತ್ತಲೇ ಇರುತ್ತೇನೆ’ ಎಂದು ನೀವು ಬದಲಾಯಿಸಲಾಗದಂತೆ ಸ್ಥಿರಸಂಕಲ್ಪ ಮಾಡಿದ್ದಾಗ, ನೀವು ಜಯಶಾಲಿಯಾಗುತ್ತೀರಿ” ಎಂದು ಪರಮಹಂಸಜಿ ಹೇಳಿದ್ದಾರೆ.
ವಸ್ತುತಃ, ಯಾವುದೇ ಸುಳಿದಾಡುವ ಸಂದೇಹಗಳು ಅಥವಾ ತಾತ್ಕಾಲಿಕ ಉತ್ಸಾಹದ ಕೊರತೆಯಿದ್ದರೂ ಸಹ “ಆಗುವುದಿಲ್ಲ”ವನ್ನು “ಆಗುತ್ತದೆ” ಎಂದು ಬದಲಾಯಿಸಲು ಮತ್ತು ನಮ್ಮ ಪ್ರಜ್ಞೆ ಮತ್ತು ಪರಿಸ್ಥಿತಿಗಳನ್ನು ಮರುರೂಪಿಸಲು ನಮ್ಮಲ್ಲಿ ಶಕ್ತಿಯಿದೆ.
ನಿಮ್ಮ ಜೀವನದಲ್ಲಿಯ ಒಂದು ಉದಾತ್ತ ಮಹತ್ತ್ವಾಕಾಂಕ್ಷೆಗಾಗಿ ನಿಮ್ಮ ಉತ್ಸಾಹದ ಜ್ವಾಲೆಯನ್ನು ಬೆಳಗಲು — ವಿಶೇಷವಾಗಿ ಆತ್ಮದ ಸರ್ವಾಭೀಷ್ಟಪೂರೈಕೆಯ ದಿವ್ಯತೆಯನ್ನು ನಿಮ್ಮೊಳಗೆ ನೀವು ಅರಿಯುವ ಅತ್ಯುನ್ನತ ಗುರಿಗಾಗಿ — ಈ ತಿಂಗಳ ವಾರ್ತಾಪತ್ರಿಕೆಯನ್ನು ನೀವು ಉಪಯೋಗಿಸಬಹುದು ಎಂದು ನಾವು ಭಾವಿಸುತ್ತೇವೆ.
ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರಹಗಳಿಂದ:
“ಆಗದು ಪ್ರಜ್ಞೆಗೆ” ಒಂದು ಪ್ರತ್ಯುಪಾಯವಿದೆ: “ನಾನು ಮಾಡಬಲ್ಲೆ!” ದೃಢೀಕರಣದಿಂದ ಆ ಪ್ರತ್ಯುಪಾಯವನ್ನು ನಿಮ್ಮ ಮನಸ್ಸಿನಿಂದ ಸೃಜಿಸಿ ಅದನ್ನು ನಿಮ್ಮ ಇಚ್ಛಾಶಕ್ತಿಯಿಂದ ಲೇಪಿಸಿ.
ಪ್ರತಿ ಮುಂಜಾನೆ, ನೀವು ಭಗವಂತನ ಮಗುವಾಗಿದ್ದೀರಿ ಮತ್ತು ಯಾವುದೇ ಸಮಸ್ಯೆಗಳು ಎದುರಾಗಲಿ, ಅವನ್ನು ಜಯಿಸಲು ನಿಮಗೆ ಶಕ್ತಿಯಿದೆ ಎಂದು ನಿಮಗೆ ನೀವು ನೆನಪು ಮಾಡಿಕೊಳ್ಳಿ. ಚೇತನದ ಬ್ರಹ್ಮಾಂಡ ಶಕ್ತಿಗೆ ವಾರಸುದಾರರಾಗಿ, ನೀವು ಅಪಾಯಕ್ಕಿಂತ ಹೆಚ್ಚು ಅಪಾಯಕಾರಿಯಾಗಿದ್ದೀರಿ!
ನೀವು ಮಾಡಲಾಗುವುದಿಲ್ಲ ಎಂಬಂಥ ಒಂದು ಕೆಲಸವನ್ನು ಸುಮ್ಮನೆ ಮಾಡುವುದಕ್ಕೆ ಆರಂಭಿಸಿ ಆ ಯೋಚನೆಯನ್ನು ದೂರಮಾಡಿ. ನಂತರ ನಿರಂತರವಾಗಿ ಅದನ್ನು ಮಾಡುತ್ತಲೇ ಇರಿ. ನಿಮ್ಮನ್ನು ಮತ್ತೆ ಎದೆಗುಂದುವಂತೆ ಮಾಡಲು ಮತ್ತು “ನನಗೆ ಅದನ್ನು ಮಾಡಲಾಗುವುದಿಲ್ಲ” ಎಂದು ಹೇಳುವಂತೆ ಪರಿಸ್ಥಿತಿಗಳು ನಿಮ್ಮನ್ನು ಕೆಳಕ್ಕೆ ಬೀಳಿಸಲು ಪ್ರಯತ್ನಿಸಬಹುದು. ಒಂದು ಪಿಶಾಚಿ ಇದೆ ಎಂದಾದರೆ, “ನನಗೆ ಅದನ್ನು ಮಾಡಲಾಗುವುದಿಲ್ಲ” ಎನ್ನುವುದೇ ಆ ಪಿಶಾಚಿ…“ನಾನು ಅದನ್ನು ಮಾಡಬಲ್ಲೆ” ಎಂಬ ನಿಮ್ಮ ಅದಮ್ಯ ಗಾಢನಂಬಿಕೆಯಿಂದ ಆ ಪಿಶಾಚಿಯನ್ನು ನಿಮ್ಮ ಪ್ರಜ್ಞೆಯಿಂದ ಹೊರದೂಡಿರಿ.
ಏನು ಹೇಳುತ್ತಿದ್ದೀರೆಂದು ತಿಳಿದಿರಲಿ ಮತ್ತು ಅದನ್ನು ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ದೃಢೀಕರಿಸಿ. ಅದನ್ನು ಮಾನಸಿಕವಾಗಿ ನಂಬಿರಿ, ಅದರ ಮೇಲೆ ಇಚ್ಛಾ ಶಕ್ತಿಯಿಂದ ಕ್ರಿಯಾಶೀಲರಾಗಿ ಆ ನಂಬಿಕೆಯನ್ನು ಶಕ್ತಿಯುತಗೊಳಿಸಿ. ಕ್ರಿಯಾಶೀಲರಾಗಿ! ಮತ್ತು ನೀವು ಕ್ರಿಯಾಶೀಲರಾಗಿದ್ದಾಗ ಆ ಆಲೋಚನೆಯನ್ನು ಅಂದರೆ “ನಾನು ಅದನ್ನು ಮಾಡಬಲ್ಲೆ” ಎಂಬುದನ್ನು ಎಂದೂ ಬಿಟ್ಟುಕೊಡಬೇಡಿ. ಸಾವಿರ ಅಡೆತಡೆಗಳು ಎದುರಾದರೂ ಪಟ್ಟು ಸಡಿಲಿಸಬೇಡಿ. ಆ ದೃಢನಿರ್ಧಾರವು ನಿಮ್ಮಲ್ಲಿದ್ದಾಗ, ನೀವು ಏನು ಮಾಡಬಯಸುತ್ತೀರೋ ಅದು ಖಂಡಿತವಾಗಿ ಆಗೇ ಆಗುತ್ತದೆ; ಮತ್ತು ಅದು ಆದಾಗ, “ಸರಿ, ಅದು ಬಹಳ ಸುಲಭವಾಗಿತ್ತು!” ಎಂದು ನೀವೇ ಹೇಳುತ್ತೀರಿ.
ನಾನು ನಿಮಗೆ ನಿರೂಪಿಸುತ್ತಿರುವುದು ಎಷ್ಟು ಅದ್ಭುತವಾದ ವಿಕಸನೆಯ ಮಾರ್ಗ ನೋಡಿ. “ನಾನು ಮಾಡಬಲ್ಲೆ, ನಾನು ಮಾಡಲೇಬೇಕು ಮತ್ತು ನಾನು ಮಾಡುತ್ತೇನೆ” ಎಂಬ ನುಡಿಗಳು — ನಿಮ್ಮನ್ನು ನೀವು ಬದಲಾಯಿಸಿಕೊಳ್ಳಲು ಮತ್ತು ಪರಿಪೂರ್ಣ ಯಶಸ್ಸನ್ನು ಸಾಧಿಸಲು ಸರಿಯಾದ ಮಾರ್ಗ.
ನಿಮ್ಮಲ್ಲಿ ಈಗಾಗಲೇ ಇರುವ ಶಕ್ತಿಯನ್ನು ಸೃಜನಶೀಲ ಉದ್ದೇಶಗಳಿಗಾಗಿ ಬಿಡುಗಡೆ ಮಾಡಿ, ಆಗ ಇನ್ನಷ್ಟು ಬರುತ್ತದೆ. ಯಶಸ್ಸಿನ ಎಲ್ಲ ಗುಣಗಳನ್ನೂ ಉಪಯೋಗಿಸುತ್ತ, ಅಳುಕದ ದೃಢನಿರ್ಧಾರದಿಂದ ನಿಮ್ಮ ದಾರಿಯಲ್ಲಿ ಮುನ್ನಡೆಯಿರಿ. ಚೇತನದ ಸೃಜನಶೀಲ ಶಕ್ತಿಯೊಂದಿಗೆ ನಿಮ್ಮನ್ನು ನೀವು ಶ್ರುತಿಗೂಡಿಸಿಕೊಳ್ಳಿ. ಆಗ ನೀವು ನಿಮ್ಮ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸುವ ಮತ್ತು ಮಾರ್ಗದರ್ಶಿಸುವ ಅಸೀಮ ಬುದ್ಧಿಶಕ್ತಿಯ (ಭಗವಂತನ) ಸಂಪರ್ಕದಲ್ಲಿರುತ್ತೀರಿ. ನಿಮ್ಮ ಅಸ್ತಿತ್ವದ ಶಕ್ತಿಯುತ ಮೂಲದಿಂದ ಶಕ್ತಿಯು ಅವಿಚ್ಛಿನ್ನವಾಗಿ ಪ್ರವಹಿಸುತ್ತದೆ ಮತ್ತು ಆಗ ಯಾವುದೇ ಚಟುವಟಿಕೆಯ ಕ್ಷೇತ್ರದಲ್ಲಾದರೂ ನೀವು ಸೃಜನಶೀಲರಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.
ನಿಮ್ಮ ಎಲ್ಲ ಯೋಗ್ಯವಾದ ಉದ್ದೇಶಗಳನ್ನು ಯಶಸ್ವಿಯಾಗಿಸಿ ಸಾಧಿಸಲು, ಜೀವನದ ಬಗ್ಗೆ ನಿಮ್ಮ ದೃಷ್ಟಿಕೋನ ಮತ್ತು ಇಚ್ಛಾ ಶಕ್ತಿಯನ್ನು ಅಗಾಧವಾದ ಸಕಾರಾತ್ಮಕತೆಯಿಂದ ಹೇಗೆ ತುಂಬುವುದು — ಎಂಬುದರ ಕುರಿತು ಪರಮಹಂಸ ಯೋಗಾನಂದರಿಂದ ಹೆಚ್ಚಿನ ಜ್ಞಾನವನ್ನು ಪಡೆಯಲು “ನೈಜ ಯಶಸ್ಸು ಮತ್ತು ಅಭ್ಯುದಯವನ್ನು ಸಾಧಿಸುವುದು” ವೆಬ್‌ಪುಟಕ್ಕೆ ಭೇಟಿ ನೀಡಲು ನಿಮ್ಮನ್ನು ನಾವು ಸ್ವಾಗತಿಸುತ್ತಿದ್ದೇವೆ.
ಪರಮಹಂಸ ಯೋಗಾನಂದರ ಇಂತಹ ಒಳನೋಟ ಮತ್ತು ಸ್ಫೂರ್ತಿಯನ್ನು ನಿಮ್ಮ ಇನ್‌ಬಾಕ್ಸಿನಲ್ಲಿ ನೇರವಾಗಿ ಪಡೆಯಲು ಸೈನ್ ಅಪ್ ಮಾಡಿರಿ.