ಒಂದು ಪರಿಚಯ:
ಪ್ರೀತಿಯ ವಿಶ್ವ ಶಿಕ್ಷಕ ಮತ್ತು ಯೋಗೋದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್ ನ ಗುರು-ಸಂಸ್ಥಾಪಕ ಪರಮಹಂಸ ಯೋಗಾನಂದರು ತಮ್ಮ ಯೋಗಿಯ ಆತ್ಮಕಥೆಯಲ್ಲಿ ದೈವಿಕ ಸಾಧನೆಯ ಆಧುನಿಕ ಉದಾಹರಣೆಗಳನ್ನು ಪ್ರಸ್ತುತಪಡಿಸಿದ್ದಾರೆ. ಅದರಲ್ಲಿನ ಸಂತರ ಚಿತ್ರಣದಿಂದ ಲಕ್ಷಾಂತರ ಓದುಗರು ರೋಮಾಂಚನಗೊಂಡಿದ್ದಾರೆ – ವಿಶೇಷವಾಗಿ ಆತ್ಮಸಾಕ್ಷಾತ್ಕಾರವನ್ನು ಪೂರ್ಣವಾಗಿ ಸಾಕಾರಗೊಳಿಸಿದ ಅವರ ಸ್ವಂತ ಪ್ರಬುದ್ಧ ಗುರುಗಳ ಪರಂಪರೆ.
ಪರಮಹಂಸಜೀಯವರ ಜೀವನವು ಪ್ರತಿಯೊಬ್ಬ ಮನುಷ್ಯನೊಳಗಡೆ ಇರುವ ಮತ್ತು ಮಹಾನ್ ವ್ಯಕ್ತಿಗಳ ಜೀವನದಲ್ಲಿ ಅಪಾರವಾಗಿ ವ್ಯಕ್ತವಾಗುವ ಶಾಂತಿ, ಪ್ರೀತಿ ಮತ್ತು ಸಂತೋಷದ ಅನಂತ ಸಂಪನ್ಮೂಲಗಳ ಸಾಕ್ಷಾತ್ಕಾರವನ್ನು ಪಡೆಯಲು ಸಾಧಕರಿಗೆ ಸಹಾಯ ಮಾಡಲು ಸಮರ್ಪಿತವಾಗಿತ್ತು. ಆನಂದಭರಿತ “ದೇವರ ದರ್ಶನ”ವನ್ನು ನಮಗೆ ನೀಡುವುದು, ತಾನು ಸ್ವತಃ ಅರಿತುಕೊಂಡಿದ್ದನ್ನು ಮತ್ತು ಸಾಕಾರಗೊಳಿಸಿದ್ದನ್ನು ನಾವು ಅರ್ಥಮಾಡಿಕೊಳ್ಳುವಂತೆ ನಮ್ಮನ್ನು ಪ್ರೋತ್ಸಾಹಿಸುವುದು ಅವರ ಬಯಕೆಯಾಗಿತ್ತು.
ವೈಎಸ್ಎಸ್/ಎಸ್ಆರ್‌ಎಫ್ ನ ಮೂರನೇ ಅಧ್ಯಕ್ಷೆ ಮತ್ತು ಸಂಘಮಾತಾರಾಗಿದ್ದ ಶ್ರೀ ದಯಾ ಮಾತಾರವರು ಪರಮಹಂಸಜಿಯವರ ಬಗ್ಗೆ ಹೇಳಿದಂತೆ: “ಅವರು ಮಾನವಕುಲದ ಮಾರ್ಗಗಳನ್ನು ಬೆಳಗಿಸಲು ಸತ್ಯದ ಬೆಳಕಿನ ಅವತಾರಗಳಾಗಿ ಭೂಮಿಯ ಮೇಲೆ ವಾಸವಾಗಿದ್ದ ದೈವಿಕ ಆತ್ಮಗಳ ಗುಪ್ತ ಸಮಾವೇಶಕ್ಕೆ ಸೇರಿದವರಾಗಿದ್ದಾರೆ.”
ಈ ಪೋಸ್ಟ್ ನಲ್ಲಿ, ವೈಎಸ್ಎಸ್/ಎಸ್ ಆರ್ ಎಫ್ ನ ಅಧ್ಯಕ್ಷರಿಂದ ಪರಮಹಂಸ ಯೋಗಾನಂದರ ಸ್ವಂತ ಮಾತುಗಳು ಮತ್ತು ಒಳನೋಟಗಳಲ್ಲಿ (ಕೆಳಗೆ ಲಿಂಕ್ ಮಾಡಲಾಗಿದೆ), ದೈವಿಕತೆಯ ಬೌದ್ಧಿಕ ಜ್ಞಾನವನ್ನು ವೈಯಕ್ತಿಕ ಮತ್ತು ಸರ್ವತೃಪ್ತಿಕರ ಅನುಭವವಾಗಿ ಪರಿವರ್ತಿಸುವ ಮಹತ್ವವನ್ನು ನಾವು ಹಂಚಿಕೊಳ್ಳುತ್ತಿದ್ದೇವೆ.
ಪರಮಹಂಸ ಯೋಗಾನಂದರ ಭಾಷಣಗಳು ಮತ್ತು ಬರಹಗಳಿಂದ:
ಈ ಆಂದೋಲನದ ಹಿಂದಿನ ದೊಡ್ಡ ಉದ್ದೇಶವೇನೆಂದರೆ ಜನರಿಗೆ ತಮ್ಮದೇ ಆದ ಆತ್ಮಸಾಕ್ಷಾತ್ಕಾರವನ್ನು ನೀಡುವುದಾಗಿದೆ. ಯಾವಾಗ ಜನರು ದೇವರನ್ನು ತಿಳಿದುಕೊಳ್ಳುವುದು ತಮ್ಮ ಕರ್ತವ್ಯ ಮತ್ತು ಸುಯೋಗ ಎಂದು ಅರಿತುಕೊಳ್ಳುತ್ತಾರೋ, ಆಗ ಭೂಮಿಯ ಮೇಲೆ ಹೊಸ ಯುಗದ ಆರಂಭವಾಗುತ್ತದೆ.
ನಾನು ನಿಮಗೆ ಧರ್ಮೋಪದೇಶ ನೀಡಲು ಇಲ್ಲಿಗೆ ಬಂದಿಲ್ಲ, ಆದರೆ ನನ್ನ ಅನುಭವದ ತೋಟದಿಂದ ನಾನು ಶೇಖರಿಸಿದ ಸತ್ಯಗಳನ್ನು ನಿಮಗೆ ನೀಡಲು ಬಂದಿದ್ದೇನೆ…. ನಾನು ನಿಮಗೆ ಏನನ್ನು ನೀಡುತ್ತೇನೆಯೋ ಅದನ್ನು ದೇವರೊಂದಿಗಿನ ನಿಮ್ಮ ಸ್ವಂತ ವೈಯಕ್ತಿಕ ಸಂಸರ್ಗದ ಮೂಲಕ ನೀವೇ ಅರಿತುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಆ ತಿಳುವಳಿಕೆಗೆ ಯಾವುದೂ ಸರಿಸಾಟಿಯಾಗಲು ಸಾಧ್ಯವಿಲ್ಲ.
ದೇವರ ಕೊರತೆ ನಿಮಗೆ ಎಷ್ಟು ಕಾಡುತ್ತಿರುತ್ತದೆ ಎಂದು ನಿಮಗೆ ತಿಳಿದಿರುವುದಿಲ್ಲ, ಏಕೆಂದರೆ ನೀವು ಅವನನ್ನು ಎಂದಿಗೂ ತಿಳಿದಿಲ್ಲ. ನೀವು ಒಮ್ಮೆ ಆತನನ್ನು ಸಂಪರ್ಕಿಸಿದರೆ, ಭೂಮಿಯ ಮೇಲಿನ ಯಾವುದೇ ಶಕ್ತಿಯು ನಿಮ್ಮನ್ನು ಆತನಿಂದ ದೂರವಿಡಲು ಸಾಧ್ಯವಾಗುವುದಿಲ್ಲ. ನನ್ನ ಏಕೈಕ ಆಸೆ ನಿಮಗೆ ದೇವರ ಒಂದು ನೋಟವನ್ನು ನೀಡುವುದು, ಏಕೆಂದರೆ ಆತನನ್ನು ಪಡೆಯುವುದಕ್ಕಿಂತ ದೊಡ್ಡದಾದ ಬೇರೆ ಯಾವುದೇ ಸಂಪಾದನೆ ಇಲ್ಲ.
ನಾನು ಕಂಡುಕೊಂಡ ಅದ್ಭುತವಾದ ಹಣ್ಣಿನ ಬಗ್ಗೆ ನಿಮಗೆ ಹೇಳಿದರೆ, ಮತ್ತು ಅದರ ರುಚಿಯನ್ನು ನಿಮಗೆ ಎಂದಿಗೂ ನೀಡದೆ, ಅದರ ಬಗ್ಗೆ ಪ್ರತಿದಿನ ಒಂದು ವರ್ಷದವರೆಗೆ ವಿವರವಾಗಿ ವಿವರಿಸಿದರೆ, ನೀವು ತೃಪ್ತರಾಗುವುದಿಲ್ಲ. ಸತ್ಯದ ಬಗ್ಗೆ ಬರೇ ಕೇಳುವುದರಿಂದ ಆತ್ಮದ ಹಸಿವನ್ನು ನೀಗಿಸಲು ಸಾಧ್ಯವಿಲ್ಲ…. ನೀವು ದೇವರಿಗಾಗಿ ಎಷ್ಟು ಆಳವಾಗಿ ಹಸಿದಿರಬೇಕೆಂದರೆ ಆಗ ಮಾತ್ರ ನೀವು ಆತನನ್ನು ಶ್ರದ್ಧೆಯಿಂದ ಹುಡುಕುವಿರಿ.
ಧ್ಯಾನ ಯೋಗದ ವಿಜ್ಞಾನದಲ್ಲಿ ಭಾರತವು ಅವನನ್ನು ಹೇಗೆ ಹುಡುಕುವುದು ಎಂಬುದಕ್ಕೆ ಉತ್ತರವನ್ನು ನೀಡಿದೆ. ನಾನು ಆ ನೆಲದ ಮೇಲೆ ಪ್ರಯಾಣಿಸಿದ್ದೇನೆ. ನಾನು ನಿಜವಾದ ಗುರುವಿನ ಪಾದಗಳ ಬಳಿ ಕುಳಿತಿದ್ದೆ. ದೇವರು ಇದ್ದಾನೆ ಎಂದು ನನಗೆ ಮನವರಿಕೆಯಾಗಿರುವುದು ಮಾತ್ರವಲ್ಲದೆ, ಅವನ ಅಸ್ತಿತ್ವದ ಬಗ್ಗೆ ನನ್ನ ಸಾಕ್ಷ್ಯವನ್ನೂ ಸಹ ನಿಮಗೆ ನೀಡುತ್ತೇನೆ. ನೀವು ನನ್ನ ಮಾತುಗಳನ್ನು ಲಕ್ಷ್ಯವಿಟ್ಟು ಗಮನಿಸಿದರೆ, ನಿಮ್ಮ ಸ್ವಂತ ಸಾಕ್ಷಾತ್ಕಾರದಿಂದ ನೀವು ಸಹ ಒಂದು ದಿನ ದೇವರು ಇದ್ದಾನೆ ಎಂದು ಹೇಳುತ್ತೀರಿ. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ ಎಂದು ನಿಮಗೆ ಆಗ ತಿಳಿಯುತ್ತದೆ.
ಧ್ಯಾನದ ಮೂಲಕ ನಿಮ್ಮ ಜೀವನದ ಅತ್ಯುನ್ನತ ಉದ್ದೇಶ ಮತ್ತು ಅರ್ಥವನ್ನು ಮತ್ತು ದೈವಿಕತೆಯೊಂದಿಗಿನ ನಿಮ್ಮ ಸಂಬಂಧವನ್ನು ಕಂಡುಕೊಳ್ಳುವ ಬಗ್ಗೆ ಪರಮಹಂಸ ಯೋಗಾನಂದರಿಂದ ಹೆಚ್ಚಿನ ಜ್ಞಾನವನ್ನು ಹೀರಿಕೊಳ್ಳಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ — ಇದು ನಿಮ್ಮ ಎಲ್ಲಾ ಅನ್ವೇಷಣೆಗಳನ್ನು ಶುದ್ಧ ಸಂತೋಷದಿಂದ ತುಂಬಿಸುವ ಆತ್ಮ ತೃಪ್ತಿಯನ್ನು ತರುತ್ತದೆ.
“ಪರಮಹಂಸ ಯೋಗಾನಂದರು ಜಗತ್ತಿಗೆ ತಂದ 6 ಆಧ್ಯಾತ್ಮಿಕ ಕ್ರಾಂತಿಕಾರಿ ವಿಚಾರಗಳು” ಎಂಬ ಬ್ಲಾಗ್ ಪೋಸ್ಟ್‌ನಲ್ಲಿ ಸ್ವಾಮಿ ಚಿದಾನಂದಜಿ ಅವರು ಪರಮಹಂಸ ಯೋಗಾನಂದರು ಜಗತ್ತಿಗೆ ತಂದ ಪ್ರಮುಖ ಅಂಶಗಳ ಬಗ್ಗೆ – ಆಧುನಿಕ ನಾಗರಿಕತೆಯ ಹಾದಿಯನ್ನು ಮತ್ತು ದೈನಂದಿನ ಜೀವನದಲ್ಲಿ ಯೋಗ ವಿಜ್ಞಾನವನ್ನು ಅಳವಡಿಸಿಕೊಂಡಿರುವವರ ಜೀವನವನ್ನು ಬದಲಾಯಿಸುವ ಸಾಮರ್ಥ್ಯವಿರುವ ಈ ಆಧ್ಯಾತ್ಮಿಕ ನಿಧಿಯ ಬಗ್ಗೆ ಅವಲೋಕನ ಮಾಡುತ್ತಾರೆ.