ಮಾರ್ಚ್ 22, 2017 ರಂದು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ 100 ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.
ಶತಮಾನೋತ್ಸವ ಸಮಾರಂಭವನ್ನು ಆಚರಿಸಲು ರಾಂಚಿಯಲ್ಲಿ ಮಾರ್ಚ್ 19—23 ರಂದು ನಡೆದ ಐದು ದಿನಗಳ ಕಾರ್ಯಕ್ರಮದಲ್ಲಿ ಸುಮಾರು 1,500 ಭಕ್ತರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಪರಮಹಂಸಜಿಯವರು ಕಲಿಸಿದ ಧ್ಯಾನದ ವಿಜ್ಞಾನ ಮತ್ತು ಆಧ್ಯಾತ್ಮಿಕ ಜೀವನದ “ಬದುಕುವುದು-ಹೇಗೆ” ತತ್ವಗಳ ಮೇಲಿನ ತರಗತಿಗಳು, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆಯ ಸಮೂಹ ಧ್ಯಾನಗಳು, ದೀರ್ಘ ಅವಧಿಗಳ ಕೀರ್ತನೆಗಳು ಮತ್ತು ಪ್ರಾಚೀನ ವಿಜ್ಞಾನವಾದ ಕ್ರಿಯಾ ಯೋಗದ ದೀಕ್ಷಾ ಸಮಾರಂಭಗಳು ಇದ್ದವು.
ಮಾರ್ಚ್ 19 ರಂದು ವೈಎಸ್‌ಎಸ್ ಶತಮಾನೋತ್ಸವದ ಉದ್ಘಾಟನೆಯ ಸಂದರ್ಭದಲ್ಲಿ ವೈಎಸ್‌ಎಸ್ ಮತ್ತು ಎಸ್‌ಆರ್‌ಎಫ್‌ನ ಹಿರಿಯ ಸನ್ಯಾಸಿಗಳ ನೇತೃತ್ವದಲ್ಲಿ ನೆರೆದ ಭಕ್ತರು ಪ್ರಾರ್ಥನೆ ಮಾಡಿದರು.
1917 ರಲ್ಲಿ ಪಶ್ಚಿಮ ಬಂಗಾಳದ ದಿಹಿಕಾ ಗ್ರಾಮದಲ್ಲಿ ವೈಎಸ್‌ಎಸ್ ಸಂಸ್ಥೆಯು ಚಿಕ್ಕ ಆಶ್ರಮ ಮತ್ತು ಬಾಲಕರ ಶಾಲೆಯೊಂದಿಗೆ ಪ್ರಾರಂಭವಾಯಿತು. ಒಂದು ವರ್ಷದ ನಂತರ ಪರಮಹಂಸಜಿ ಮತ್ತು ಅವರ ವಿದ್ಯಾರ್ಥಿಗಳು ರಾಂಚಿಗೆ (ಈಗ ಜಾರ್ಖಂಡ್ ರಾಜ್ಯದ ರಾಜಧಾನಿ) ತೆರಳಿದರು, ಅಲ್ಲಿ ಅವರು ಆಶ್ರಮವನ್ನು ಸ್ಥಾಪಿಸಿದರು, ಅದು ಇಂದು, ಅಭಿವೃದ್ಧಿ ಹೊಂದುತ್ತಿರುವ ಆಧ್ಯಾತ್ಮಿಕ ಸಮಾಜದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಪರಮಹಂಸಜಿ ಸ್ಥಾಪಿಸಿದ ಸನ್ಯಾಸಿ ಶ್ರೇಣಿಯ ನೇತೃತ್ವದಲ್ಲಿ ವೈಎಸ್ಎಸ್ ಇಂದು ಭಾರತದಾದ್ಯಂತ ಸಾವಿರಾರು ಸಾಮಾನ್ಯ ಸದಸ್ಯರನ್ನು ಮತ್ತು ನೂರಾರು ಧ್ಯಾನ ತಂಡಗಳನ್ನು ಹೊಂದಿದೆ.
ತಮ್ಮ ಗುರು ಪರಂಪರೆಯ ಆದೇಶದಂತೆ, ಪರಮಹಂಸಜಿಯವರು 1920 ರಲ್ಲಿ ಯೋಗದ ವಿಜ್ಞಾನವನ್ನು ಅಮೆರಿಕಾಗೆ ತಂದರು, ಅಲ್ಲಿ ಅವರು ತಮ್ಮ ಬೋಧನೆಗಳ ವಿಶ್ವಾದ್ಯಂತ ಪ್ರಸಾರಕ್ಕಾಗಿ ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ (ಎಸ್‌ಆರ್‌ಎಫ್) ಅನ್ನು ಸ್ಥಾಪಿಸಿದರು.
ಮಾರ್ಚ್ 7, 2017 ರಂದು ವೈಎಸ್ಎಸ್‌ನ ಶತಮಾನೋತ್ಸವದ ನೆನಪಿಗಾಗಿ ಭಾರತ ಸರ್ಕಾರವು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಅಂಚೆಚೀಟಿ ಬಿಡುಗಡೆಯನ್ನು ವೈಯಕ್ತಿಕವಾಗಿ ನಡೆಸುವ ಮೂಲಕ ಪರಮಹಂಸಜಿ ಮತ್ತು ಅವರ ಸಂಸ್ಥೆಯನ್ನು ಗೌರವಿಸಿದರು.
ವೈಎಸ್ಎಸ್/ಎಸ್ಆರ್‌ಎಫ್ ನ ಸಂಘಮಾತಾರಿಂದ ಆಶೀರ್ವಾದ
ಸ್ವಾಮಿ ವಿಶ್ವಾನಂದರು ಮಾರ್ಚ್ 19 ರಂದು ರಾಂಚಿಯ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಅವರು ಎಸ್‌ಆರ್‌ಎಫ್/ವೈಎಸ್‌ಎಸ್ ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದು, ಲಾಸ್ ಏಂಜಲೀಸ್‌ನಲ್ಲಿರುವ ಅಂತರರಾಷ್ಟ್ರೀಯ ಪ್ರಧಾನ ಕಛೇರಿಯಿಂದ ಆಗಮಿಸಿದ್ದರು. ಅವರು ವೈಎಸ್‌ಎಸ್/ಎಸ್‌ಆರ್‌ಎಫ್‌ನ ನಾಲ್ಕನೇ ಅಧ್ಯಕ್ಷರು ಮತ್ತು ಸಂಘಮಾತಾ ಶ್ರೀ ಮೃಣಾಲಿನಿ ಮಾತಾ ಅವರ ಕೆಲವು ಮಾತುಗಳನ್ನು ಹಂಚಿಕೊಂಡರು, ಮಾತಾರವರು ಆ ದಿನ ದೂರವಾಣಿ ಕರೆ ಮಾಡಿ ಭಾಗವಹಿಸಿದ ಎಲ್ಲರಿಗೂ ತಮ್ಮ ಪ್ರೀತಿ ಮತ್ತು ಆಶೀರ್ವಾದವನ್ನು ತಿಳಿಸಿದ್ದರು. ನಂತರ, ವೈಎಸ್‌ಎಸ್‌ನ ಶತಮಾನೋತ್ಸವದ ಉದ್ಘಾಟನೆಗಾಗಿ ಅವರು ಕಳುಹಿಸಿದ ಲಿಖಿತ ಸಂದೇಶವನ್ನು ಸಭೆಗೆ ಓದಲಾಯಿತು (ಸಂಪೂರ್ಣ ಸಂದೇಶವನ್ನು ಕೆಳಗೆ ನೋಡಿ), ನಂತರ ವೈಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ಸ್ವಾಮಿ ಸ್ಮರಣಾನಂದರು ಸ್ಫೂರ್ತಿದಾಯಕ ಭಾಷಣ ಮಾಡಿದರು.
ವೈಎಸ್ಎಸ್‌ನ ಜನ್ಮಸ್ಥಳಕ್ಕೆ ತೀರ್ಥಯಾತ್ರೆ
ಮಾರ್ಚ್ 21 ರಂದು ರಾಂಚಿಯಿಂದ ದಿಹಿಕಾಗೆ ಕೈಗೊಂಡ ತೀರ್ಥಯಾತ್ರೆಯು ವಿಶೇಷವಾಗಿತ್ತು. ವೈಎಸ್ಎಸ್ ಸಂಸ್ಥೆಯು ಭಾರತದ ಸರ್ಕಾರಿ ಸ್ವಾಮ್ಯದ ರೈಲ್ವೇ ಕಂಪನಿಯ ಸಹಯೋಗದಲ್ಲಿ ಏರ್ಪಡಿಸಿದ ವಿಶೇಷ ರೈಲಿನಲ್ಲಿ ಸುಮಾರು 1,200 ಭಕ್ತರು ನಾಲ್ಕು ಗಂಟೆಗಳ ಪ್ರಯಾಣವನ್ನು ಮಾಡಿದರು. ಇನ್ನೂ 500 ಭಕ್ತರು ದಿಹಿಕಾದಲ್ಲಿ ಅವರೊಂದಿಗೆ ಸೇರಿಕೊಂಡರು. ಅಲ್ಲಿ ಪರಮಹಂಸಜಿಯವರ ಮೊದಲ ಶಾಲೆ ಇದ್ದ ಜಾಗದಲ್ಲಿ ವೈಎಸ್ಎಸ್ ಸಂಸ್ಥೆಯು ಈಗ ಧ್ಯಾನ ಕೇಂದ್ರ ಮತ್ತು ಶಿಬಿರವನ್ನು ಹೊಂದಿದೆ. ಹಬ್ಬದ ದಿನದ ಕಾರ್ಯಕ್ರಮವು ರೈಲು ನಿಲ್ದಾಣ ಮತ್ತು ಅಲ್ಲಿಂದ ಹೊರಡುವ ಮೆರವಣಿಗೆಗಳು, ಗುಂಪಿನ ಧ್ಯಾನಗಳು ಮತ್ತು ರೈಲಿನಲ್ಲಿ ಮತ್ತು ದಿಹಿಕಾ ಕೇಂದ್ರದಲ್ಲಿ ಭಕ್ತಿ ಪಠಣ, ಸ್ವಾಮಿ ಸ್ಮರಣಾನಂದ ಮತ್ತು ಸ್ವಾಮಿ ವಿಶ್ವಾನಂದರಿಂದ ಸ್ಪೂರ್ತಿದಾಯಕ ಭಾಷಣಗಳು, ಭಕ್ತರಿಗೆ ರುಚಿಕರವಾದ ಭೋಜನ, ಮತ್ತು ವಿಶ್ರಾಂತಿಗಾಗಿ ಸಮಯವನ್ನು ಒಳಗೊಂಡಿತ್ತು. ಮತ್ತು ಕೇಂದ್ರದ ರಮಣೀಯವಾದ ಒಂದು ಎಕರೆ ಮೈದಾನವನ್ನು ಆನಂದಿಸಿ. ನೆನಪಿನ ಕಾಣಿಕೆಯಾಗಿ, ಪ್ರತಿಯೊಬ್ಬರೂ ವೈಎಸ್‌ಎಸ್ ಶತಮಾನೋತ್ಸವದ ಸ್ಮರಣಾರ್ಥ ಅಂಚೆಚೀಟಿಯ ಮೊದಲ ದಿನದ ಮುಖಪುಟವನ್ನು ಪಡೆದರು.
ಜಾರ್ಖಂಡ್‌ನ ಅತ್ಯುನ್ನತ ಅಧಿಕಾರಿಯ ಉಪಸ್ಥಿತಿ
ವೈಎಸ್‌ಎಸ್‌ನ ರಾಂಚಿ ಆಶ್ರಮದಲ್ಲಿರುವ ಆಡಳಿತ ಕಟ್ಟಡ-ಪರಮಹಂಸಜಿಯವರು ವಾಸಿಸುತ್ತಿದ್ದ ಮತ್ತು ಕಲಿಸುತ್ತಿದ್ದ ಅದೇ ಕಟ್ಟಡವನ್ನು ವೈಎಸ್‌ಎಸ್ ಶತಮಾನೋತ್ಸವದ ಆಚರಣೆಗಾಗಿ ಮಾರ್ಚ್ 22, 2017 ರಂದು ವಿಶೇಷ ರೀತಿಯಲ್ಲಿ ದೀಪಗಳಿಂದ ಬೆಳಗಿಸಲಾಯಿತು.
ವೈಎಸ್‌ಎಸ್ ಪ್ರತಿ ಮಾರ್ಚ್ 22 ಅನ್ನು ತನ್ನ “ಸ್ಥಾಪಕರ ದಿನ” ಎಂದು ಆಚರಿಸುತ್ತದೆ ಮತ್ತು ಈ ವರ್ಷದ ವಿಶೇಷ ಶತಮಾನೋತ್ಸವದ ಆಚರಣೆಯು ಸಂಜೆ ಕಾರ್ಯಕ್ರಮವನ್ನು ಒಳಗೊಂಡಿತ್ತು, ಇದರಲ್ಲಿ ಜಾರ್ಖಂಡ್‌ನ ಮುಖ್ಯಮಂತ್ರಿ ಶ್ರೀ ರಘುಬರ್ ದಾಸ್ ಅವರು ಗೌರವಾನ್ವಿತ ಅತಿಥಿಯಾಗಿದ್ದರು. ವೈಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಸ್ವಾಮಿ ಸ್ಮರಣಾನಂದರ ಭಾಷಣ ಮತ್ತು ಸಮೂಹ ಧ್ಯಾನದ ನಂತರ ಮುಖ್ಯಮಂತ್ರಿಗಳು ಭೌತಿಕ ಪ್ರಗತಿ ಮತ್ತು ಆಧ್ಯಾತ್ಮಿಕತೆಯ ನಡುವೆ ಹೆಚ್ಚು ಅಗತ್ಯವಾದ ಸಮತೋಲನವನ್ನು ಸಾಧಿಸಲು ಸಹಾಯ ಮಾಡುವಲ್ಲಿ ಪರಮಹಂಸಜಿಯವರ ಭಾರತದ ಮತ್ತು ವಿದೇಶಗಳಲ್ಲಿನ ಸಾಂಸ್ಥಿಕ ಕಾರ್ಯದ ಮಹತ್ವವನ್ನು ಕುರಿತು ಮಾತನಾಡಿದರು.
ಸಮಾರಂಭದ ಅಂತಿಮ ದಿನವು ಪರಮಹಂಸ ಯೋಗಾನಂದರ ಬೋಧನೆಗಳ ಅತ್ಯುನ್ನತ ಅಂಶವನ್ನು ಕೇಂದ್ರೀಕರಿಸಿತು, ಏಕೆಂದರೆ ಹೆಚ್ಚಿನ ಸಂಖ್ಯೆಯ ಭಕ್ತರು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ನಡೆಸಿದ ಸಮಾರಂಭಗಳಲ್ಲಿ ಕ್ರಿಯಾ ಯೋಗಕ್ಕೆ ದೀಕ್ಷೆಯನ್ನು ಪಡೆದರು. ದಿನವು ಹತ್ತಿರವಾಗುತ್ತಿದ್ದಂತೆ, ವೈಎಸ್ಎಸ್ ಸನ್ಯಾಸಿಗಳು ಅಗಲಿದ ಭಕ್ತರಿಗೆ ವಿದಾಯ ಹೇಳಿದರು, ಅವರು ಆಧ್ಯಾತ್ಮಿಕವಾಗಿ ನವೀಕೃತವಾಗಿ ತಮ್ಮ ಮನೆಗೆ ಮರಳಿದರು ಮತ್ತು ಪರಮಹಂಸಜಿ ಅವರ ಆಧ್ಯಾತ್ಮಿಕ ಕಾರ್ಯದ ಇತಿಹಾಸದಲ್ಲಿ ಒಂದು ಮಹತ್ವದ ಘಟನೆಯಲ್ಲಿ ಭಾಗವಹಿಸಲು ಅವಕಾಶವನ್ನು ಪಡೆದಿದ್ದಕ್ಕಾಗಿ ಕೃತಜ್ಞರಾಗಿದ್ದರು.
ದಿಹಿಕಾ ಯಾತ್ರೆ ಮತ್ತು ರಾಂಚಿಯಲ್ಲಿ ನಡೆದ ಶತಮಾನೋತ್ಸವ ಆಚರಣೆಯ ಫೋಟೋ ಆಲ್ಬಮ್‌ಗಳನ್ನು ವೀಕ್ಷಿಸಲು ವೈಎಸ್‌ಎಸ್ ಜಾಲತಾಣಕ್ಕೆ ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಶತಮಾನೋತ್ಸವದ ಸಂದರ್ಭದಲ್ಲಿ ಶ್ರೀ ಮೃಣಾಲಿನಿ ಮಾತಾ ಅವರಿಂದ ಒಂದು ಸಂದೇಶ
ಆತ್ಮೀಯರೇ,
ನಮ್ಮ ಪ್ರೀತಿಯ ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಸ್ಥಾಪನೆಯ ಈ ಮಂಗಳಕರ ಶತಮಾನೋತ್ಸವವನ್ನು ನಾವೆಲ್ಲರೂ ಸೇರಿ ಆಚರಿಸುತ್ತಿರುವ ಈ ಶುಭ ಸಂದರ್ಭವು ನನ್ನ ಹೃದಯದಲ್ಲಿ ಹರ್ಷವನ್ನುಂಟುಮಾಡುತ್ತಿದೆ. ಈ ಶುಭ ಸಂದರ್ಭದಲ್ಲಿ ನಾನು ನಿಮಗೆಲ್ಲರಿಗೂ ನನ್ನ ಪ್ರೀತಿಯ ಶುಭಕಾಮನೆಗಳನ್ನು ಮತ್ತು ಭಗವಂತನ ಆಶೀರ್ವಾದವನ್ನು ತಿಳಿಸುತ್ತಿದ್ದೇನೆ ಅಲ್ಲದೆ ನಿಮ್ಮೊಂದಿಗೆ ಭಾವನಾತ್ಮಕವಾಗಿ ಒಂದಾಗುತ್ತ ಗುರುದೇವರ ಗೌರವಾರ್ಥ ಹಾಗೂ ಭಾರತ ಮತ್ತು ಇಡೀ ಜಗತ್ತಿಗಾಗಿ ಅವರು ಮಾಡಿದ ಕೆಲಸದ ಗೌರವಾರ್ಥ ನೀವು ಪ್ರೀತ್ಯಾದರಗಳಿಂದ ಯೋಜಿಸಿಕೊಂಡು ರೂಪಿಸಿರುವ ಹಲವಾರು ಆಕರ್ಷಕ ಕಾರ್ಯಕ್ರಮಗಳನ್ನು ನಾನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇನೆ. ಗುರುದೇವರ ಯೋಗದಾ ಸತ್ಸಂಗ ಸೊಸೈಟಿಯು ದಿಹಿಕಾದಲ್ಲಿ ಒಂದು ಸಣ್ಣ “ಬದುಕುವುದು-ಹೇಗೆ” ತತ್ವಾಧಾರಿತ ಬಾಲಕರ ಶಾಲೆಯಿಂದ ಆರಂಭವಾಗಿ ಮುಂದೆ ದೊಡ್ಡ, ದೊಡ್ಡ ಆಶ್ರಮಗಳು, ಸ್ಪಂದನಶೀಲ ಹಾಗೂ ನಿರಂತರವಾಗಿ ಬೆಳೆಯುತ್ತಿರುವ ಸನ್ಯಾಸಿ ಸಂಪ್ರದಾಯ, ಭಾರತದೆಲ್ಲೆಡೆ ಇರುವ ಇನ್ನೂರಕ್ಕೂ ಹೆಚ್ಚು ಧ್ಯಾನ ಕೇಂದ್ರಗಳು, ಅಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳು ಮತ್ತು ಧರ್ಮಾರ್ಥ ಸೇವೆಗಳನ್ನು ಹೊಂದಿರುವ ಸಂಸ್ಥೆಯಾಗಿ ಬೆಳೆದುದನ್ನು ನೋಡಿ ಗುರುದೇವನಿಗೆ ಆಗಬಹುದಾದ ಅಪಾರ ಆನಂದವನ್ನು ನಾನು ಅನುಭವಿಸುತ್ತಿದ್ದೇನೆ. ಈ ಉಲ್ಲಾಸದಾಯಕ ಶತಾಬ್ದಿ ವರ್ಷದ ಸಂದರ್ಭದಲ್ಲಿ ಎಲ್ಲ ಭಕ್ತರ ಮೇಲೆ – ವಾಸ್ತವದಲ್ಲಿ ಇಡೀ ಭಾರತದ ಮೇಲೆ ಅವರು ತಮ್ಮ ದಿವ್ಯಪ್ರೇಮದ ಮತ್ತು ಆಶೀರ್ವಾದದ ಮಳೆಗರೆಯುತ್ತಿದ್ದಾರೆ ಹಾಗೂ ಇದರ ಬೆಳವಣಿಗೆಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಅವರು ತಮ್ಮ ಅಂತರಂಗದ ಅಸೀಮ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ, ನಿಮಗೆಲ್ಲರಿಗೂ ತಿಳಿದಿರಲಿ.
ಸಣ್ಣದಾಗಿ ಆರಂಭವಾದ ವೈಎಸ್‌ಎಸ್‌ನ ನೂರು ವರ್ಷಗಳಲ್ಲಿ ಭಾರತದಲ್ಲಿ ಹಾಗೂ ಪಾಶ್ಚಾತ್ಯ ದೇಶಗಳಲ್ಲಿ ಗುರುದೇವನನ್ನು ದಿವ್ಯಪ್ರೇಮದ ಒಂದು ಪರಿಪೂರ್ಣ ಅವತಾರ, ಜಗತ್ತನ್ನು ಬದಲಿಸುವ ಉದ್ದೇಶದಿಂದಲೇ ಹುಟ್ಟಿಬಂದ ನವಯುಗದ ಹರಿಕಾರರಾದ ಜಗದ್ಗುರು ಎಂದು ಪರಿಗಣಿಸಲಾಗುತ್ತಿದೆ. ನಮ್ಮ ತ್ವರಿತ ಆತ್ಮೋನ್ನತಿಗಾಗಿ ಮತ್ತು ಮಾನವತೆಯ ಊರ್ಧ್ವ ವಿಕಸನಕ್ಕಾಗಿ ಆಧುನಿಕ ಯುಗಕ್ಕೆ ಒಂದು ವಿಶೇಷ ಅನುಗ್ರಹವಾದ, ಕ್ರಿಯಾಯೋಗ ವಿಜ್ಞಾನದ ಪ್ರಚಾರಕಾರ್ಯವು ಭಗವಂತನು ಅವರಿಗೆ ವಿಧಿಸಿದ ಜವಾಬ್ದಾರಿಯಾಗಿತ್ತು. ತಮ್ಮ “ಬದುಕುವುದು-ಹೇಗೆ” ಶಾಲೆಯ ಸ್ಥಾಪನೆಯಾದ ಮೂರೇ ವರ್ಷಗಳಲ್ಲಿ ಗುರುದೇವರಿಗೆ ರಾಂಚಿಯಲ್ಲಿ ಒಂದು ದಿವ್ಯದರ್ಶನವಾಯಿತು, ಅದರಲ್ಲಿ ಈ ಬೃಹತ್ ಕಾರ್ಯವನ್ನು ಆರಂಭಿಸುವುದಕ್ಕಾಗಿ ಅವರು ಅಮೆರಿಕೆಗೆ ಹೋಗಬೇಕಾದ ಸಮಯ ನಿಕಟವಾಗುತ್ತಿದೆ ಎಂಬುದು ಸ್ಪಷ್ಟವಾಯಿತು. ತಮ್ಮ ಮೈ ಇಂಡಿಯಾ ಕವನದಲ್ಲಿ ಅವರು ಹೀಗೆ ಬರೆದಿದ್ದಾರೆ: “ನಾನು ಭಾರತವನ್ನು ಏಕೆ ಪ್ರೀತಿಸುತ್ತೇನೆಂದರೆ ಅಲ್ಲಿಯೇ ನಾನು ಭಗವಂತನನ್ನು ಮತ್ತು ಎಲ್ಲ ಸುಂದರ ವಸ್ತುಗಳನ್ನು ಪ್ರೀತಿಸಲು ಕಲಿತದ್ದು.” ಭಾರತದಲ್ಲಿ ಅವರು ತಮ್ಮ ಕಾರ್ಯವನ್ನು ಆರಂಭಿಸಿದರು, ಹಾಗೂ ತಮ್ಮ ಪ್ರೀತಿಯ ಮಾತೃಭೂಮಿಗೆ ಶ್ರದ್ಧಾಪೂರ್ವಕ ನುಡಿನಮನವನ್ನು ಅರ್ಪಿಸುತ್ತ ದೇಹತ್ಯಾಗ ಮಾಡಿದರು-ಅವರ ಚೈತನ್ಯ ಹಾಗೂ ಭಾರತದಿಂದ ಸ್ಫೂರ್ತಿ ಪಡೆದ ಅವರ ಕೆಲಸವು ನಿರಂತರವಾಗಿರುತ್ತದೆ.
ಪಶ್ಚಿಮದಲ್ಲಿ ತಮ್ಮ ಕೆಲಸವನ್ನು ಸ್ಥಾಪಿಸುವ ವಿಷಯದಲ್ಲಿ ಅವರಿಗೆ ಅಸಂಖ್ಯಾತ ಜವಾಬ್ದಾರಿಗಳಿದ್ದರೂ ಭಾರತದಲ್ಲಿರುವ ಯೋಗದಾ ಸತ್ಸಂಗ ಸೊಸೈಟಿ ಹಾಗೂ ತಮ್ಮ ಶಿಷ್ಯರ ಕಲ್ಯಾಣಕ್ಕಾಗಿ ಅವರಿಗಿದ್ದ ಪ್ರೇಮಪೂರ್ವಕ ಕಳಕಳಿ ಬದಲಾಗಲಿಲ್ಲ. 1935-36 ರಲ್ಲಿ ಭಗವಂತನು ಅವರಿಗೆ ಭಾರತಕ್ಕೆ ಹಿಂದಿರುಗುವ ಅವಕಾಶವನ್ನು ಅನುಗ್ರಹಿಸಿದಾಗ, ಅವರು ದೇಶದೆಲ್ಲೆಡೆ ಉಪನ್ಯಾಸಗಳನ್ನು ನೀಡಿದರು, ಹಾಗೂ ವೈಎಸ್‌ಎಸ್‌ನ ಪೋಷಣೆಗಾಗಿ ಮತ್ತು ಅದರ ಭವಿಷ್ಯವನ್ನು ಸುರಕ್ಷಿತಗೊಳಿಸಲು ಮಾಡಬಹುದಾದುದೆಲ್ಲವನ್ನೂ ಮಾಡಿದರು. ಅವರು ಹಲವಾರು ಬಾರಿ ಭಾರತಕ್ಕೆ ಮತ್ತೆ ಮರಳುವ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದುದನ್ನು ನಾನು ಕೇಳಿಸಿಕೊಂಡಿದ್ದೇನೆ. ಆದರೆ ಅಂತಿಮ ದಿನಗಳು ಸಮೀಪಿಸುವ ಮುನ್ನವೇ, ಅದು ಜಗನ್ಮಾತೆಯ ಇಚ್ಛೆಯಲ್ಲ ಎಂದು ಕಂಡುಕೊಂಡು, ಭಾರತದಲ್ಲಿ ತಾವು ಮಾಡುತ್ತಿದ್ದ ಕೆಲಸವನ್ನು ಅದೇ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಶ್ರೀ ಶ್ರೀ ದಯಾಮಾತಾರಿಗೆ ವಹಿಸಿದರು. ಶ್ರೀ ಶ್ರೀ ದಯಾ ಮಾತಾರವರು ಹೃತ್ಪೂರ್ವಕವಾಗಿ ಆ ಪವಿತ್ರ ವಿಶ್ವಾಸವನ್ನು ಪೂರ್ಣಗೊಳಿಸಿದರು, ಹಾಗೂ ಪ್ರೇಮಮಯಿ ಜಗನ್ಮಾತೆಯ ಪ್ರತಿಮೂರ್ತಿಯಾಗಿ, ಗುರುದೇವರೊಂದಿಗೆ ತಮ್ಮ ಚೇತನವನ್ನು ಸಂಪೂರ್ಣವಾಗಿ ಶ್ರುತಿಗೂಡಿಸಿಕೊಂಡು ಭಕ್ತರಿಗೆ ಪ್ರೇರಣೆ ನೀಡಿದರು. ಆ ಉನ್ನತಾವಸ್ಥೆಯ ಮಟ್ಟದಿಂದ ಅವರು ಐವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಗುರುಗಳ ಆದರ್ಶಗಳು ಹಾಗೂ ಇಚ್ಛೆಯ ಮೇರೆಗೆ ವೈಎಸ್‌ಎಸ್ ಅನ್ನು ಮಾರ್ಗದರ್ಶನ ಮಾಡಿದರು ಹಾಗೂ ಅದರ ಪೋಷಣೆ ಮಾಡುತ್ತ ಅದನ್ನು ಈಗಿರುವ ಸ್ವರೂಪಕ್ಕೆ ತಂದರು. ಅವರಿಗೆ ಹಂಸ ಸ್ವಾಮಿಯವರು ಕೊಟ್ಟ ಅಮೂಲ್ಯ ಸಹಾಯ ಹಾಗೂ ಬೆಂಬಲಕ್ಕೂ ನಾವು ಕೃತಜ್ಞರಾಗಿದ್ದೇವೆ. ಆಕೆಯ ಪ್ರಯತ್ನದಲ್ಲಿ ಅವರ ಬದ್ಧತೆಯು ಅತಿ ಮುಖ್ಯ ಪಾತ್ರ ವಹಿಸಿತು. ಅಷ್ಟೇ ಅಲ್ಲದೆ ಆಕೆಗೆ ಬೆಂಬಲ ನೀಡಿದ ವೈಎಸ್‌ಎಸ್‌ನ ಹಲವಾರು ನಿಷ್ಠಾವಂತ ಭಕ್ತರೆಲ್ಲರನ್ನು ಇಲ್ಲಿ ಹೆಸರಿಸುವುದು ಅಸಾಧ್ಯವಾದರೂ ಅವರೆಲ್ಲರಿಗೆ ನಮ್ಮ ಹೃದಯಗಳಲ್ಲಿ ವಿಶೇಷ ಸ್ಥಾನವಿದೆ.
ನನಗೆ ದಯಾಮಾತಾರೊಂದಿಗೆ ಅನೇಕ ಬಾರಿ ಭಾರತ ಯಾತ್ರೆ ಮಾಡುವ ಸೌಭಾಗ್ಯ ಒದಗಿತ್ತು. ನಾವು ಭೇಟಿ ಮಾಡಿದ ಎಲ್ಲಾ ಅತ್ಯಂತ ಉತ್ಕೃಷ್ಟ ವೈಎಸ್‌ಎಸ್ ಭಕ್ತರಲ್ಲಿ ಕಂಡ, ಭಾರತದ ವಿಶೇಷ ಬಳುವಳಿಯಾದ, ಭಗವಂತನೆಡೆಗಿರುವ ಶುದ್ಧ ಹಾಗೂ ನೈಜ ಭಕ್ತಿಯನ್ನು, ದಯಾಮಾತಾರಂತೆ ನಾನೂ ಕೂಡ ನೆನಪಿನಲ್ಲಿಟ್ಟುಕೊಂಡಿದ್ದೇನೆ. ಆ ಭೇಟಿಗಳು ಹಾಗೂ ನಂತರದಲ್ಲಿ ಗುರುದೇವನ ಮಾತೃಭೂಮಿಗೆ ಮಾಡಿದ ಎಲ್ಲ ಯಾತ್ರೆಗಳು ನನ್ನ ಅತ್ಯಮೂಲ್ಯ ನೆನಪುಗಳೆಂದು ಭಾವಿಸುತ್ತೇನೆ. ಹಾಗೂ ಅವು ನನ್ನ ಹೃದಯದಲ್ಲಿ ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚೊತ್ತಿವೆ. ಅವುಗಳನ್ನು ನಾನು ಆಗಾಗ ನೆನಪಿಸಿಕೊಳ್ಳುತ್ತಿರುತ್ತೇನೆ, ಹಾಗೂ ಗುರುದೇವನ ಅಲ್ಲಿರುವ ಭಕ್ತರಿಗೆ, ಯೋಗದಾ ಸತ್ಸಂಗ ಸೊಸೈಟಿಯ ಕೆಲಸಕ್ಕೆ ಹಾಗೂ ಅವರ ಈ ವಿಶಿಷ್ಟ ಉದ್ದೇಶವನ್ನು ಮುಂದುವರಿಸಿಕೊಂಡು ಹೋಗಲು ಎಲ್ಲರೂ ಮಾಡುತ್ತಿರುವ ಇಷ್ಟೊಂದು ಕೆಲಸಗಳಿಗೆ ನಾನು ನನ್ನ ಆಳವಾದ ಪ್ರಾರ್ಥನೆಗಳನ್ನು ಕಳುಹಿಸದ ದಿನವಿಲ್ಲ. ವೈಎಸ್‌ಎಸ್‌ನ ಚಟುವಟಿಕೆಗಳಿಗೆ ಸಂಬಂಧಿಸಿದ ಫೋಟೋಗಳನ್ನು ನೋಡಿದಾಗ, ಉತ್ಕೃಷ್ಟ ಆತ್ಮಗಳು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಒಂದುಗೂಡಿ ಗುರುದೇವನ ಬೋಧನೆಗಳನ್ನು ಆಳವಾಗಿ ಅಭ್ಯಾಸ ಮಾಡುವಲ್ಲಿ ಅವರು ತೋರುವ ಉತ್ಸಾಹವನ್ನು ನೋಡಿ, ಧ್ಯಾನ ಮಾಡಲು ಮತ್ತು ಗುರುವಿನ ಜ್ಞಾನವನ್ನು ಗ್ರಹಿಸಲು ನಿಯತವಾಗಿ ಒಂದೆಡೆ ಸೇರುವುದನ್ನು ನೋಡಿ ಹಾಗೂ ಅಸಂಖ್ಯಾತ ವಿಧಗಳಲ್ಲಿ ಗುರುವಿನ ಕೆಲಸದಲ್ಲಿ ಆನಂದದಿಂದ ತೊಡಗುವುದನ್ನು ನೋಡಿ ರೋಮಾಂಚನಗೊಳ್ಳುತ್ತೇನೆ. ಬೆರಳೆಣಿಕೆಯಷ್ಟಿದ್ದ ಭಕ್ತರು ಈಗ ಭಗವಂತ ಹಾಗೂ ಗುರುವಿನ ಪ್ರೇಮದಲ್ಲಿ ಒಂದಾಗಿ ಒಂದು ದೊಡ್ಡ ಪರಿವಾರದಷ್ಟಾಗಿದ್ದಾರೆ.
ಗುರುದೇವನಿಗೆ ತಮ್ಮ ಶಿಷ್ಯರ ಕಲ್ಯಾಣ ಮತ್ತು ಅಭಿವೃದ್ಧಿಯಲ್ಲಿ ಅವರು ನಮ್ಮ ನಡುವೆ ನಡೆದಾಡುತ್ತಿದ್ದಾಗ ಎಷ್ಟು ಆಸಕ್ತಿ ಇತ್ತೋ ಅಷ್ಟೇ ಈಗಲೂ ಇದೆ, ನಿಮ್ಮಲ್ಲಿ ಪ್ರತಿಯೊಬ್ಬರೂ ಶ್ರದ್ಧೆಯಿಂದ ಅವರು ಕಲಿಸಿದ ಧ್ಯಾನ ತಂತ್ರಗಳನ್ನು ಅಭ್ಯಾಸ ಮಾಡಿ ಅಭಿವೃದ್ಧಿ ಹೊಂದುತ್ತ ಜಗನ್ಮಾತೆಯನ್ನು ಪ್ರಸನ್ನಗೊಳಿಸುವಂತಹ ಜೀವನ ನಡೆಸಿದರೆ ಅವರಿಗೆ ಅತ್ಯಂತ ಆನಂದವಾಗುತ್ತದೆ. ನೀವು ಆಧ್ಯಾತ್ಮಿಕ ಅರಿವಿನಲ್ಲಿ ಪರಿಪಕ್ವರಾಗುತ್ತಿರುವುದನ್ನು ಕಂಡು, ಭಗವಂತನೊಂದಿಗೆ ಆಳವಾದ ಮತ್ತು ಮಧುರವಾದ ಆಂತರಿಕ ಸಂಬಂಧವನ್ನು ಬೆಳೆಸಿಕೊಳ್ಳುತ್ತಿರುವುದನ್ನು ಕಂಡು ಅವರು ಹರ್ಷಿತರಾಗುತ್ತಾರೆ, ಏಕೆಂದರೆ ಅವರು ನಿಮಗೆ ಅತ್ಯುನ್ನತವಾದುದನ್ನೇ ಬಯಸುತ್ತಾರೆ. ನೀವು ಅವರಿಗೆ ಸಲ್ಲಿಸಬಹುದಾದ ಅತ್ಯುನ್ನತ ಕಾಣಿಕೆಯೆಂದರೆ, ನೂರು ವರ್ಷಗಳ ಹಿಂದೆ ಅವರು ಭಗವತ್ಪ್ರೇಮ ಮತ್ತು ಭಗವತ್ಸೇವೆಯಂತಹ ದಿವ್ಯ ಆದರ್ಶಗಳಡಿಯಲ್ಲಿ ಸ್ಥಾಪಿಸಿದ ಈ ಕೆಲಸಕ್ಕೆ ತಕ್ಕಂತಹ ಭಕ್ತರಾಗಿರುವುದು.
ಪರಮಹಂಸರ ಸಂದೇಶವು ಇಷ್ಟೊಂದು ಜನಗಳನ್ನು ಪ್ರಭಾವಿತರನ್ನಾಗಿಸಿರುವುದು ಏಕೆಂದರೆ ಅವರು, ಏಕೀಕರಿಸುವಂತಹ ಆತ್ಮದ ಭಾಷೆಯಾದ ಭಗವತ್ಪ್ರೇಮ ಹಾಗೂ ನಿತ್ಯ ಸತ್ಯದ ಭಾಷೆಯಲ್ಲಿ ಮಾತನಾಡುತ್ತಾರೆ. ಅವರ ಬೋಧನೆಗಳು ಹಾಗೂ ಅವರಿದ್ದ ಭಗವತ್ಪ್ರೇಮದ ಸೆಳೆತವು ಸಾಂಸ್ಕೃತಿಕ, ಜನಾಂಗೀಯ, ರಾಷ್ಟ್ರೀಯ ಹಾಗೂ ಧಾರ‍್ಮಿಕ ಅಸಮಾನತೆಗಳ ಅಡೆತಡೆಯನ್ನು ಮೀರಿದುದಾಗಿದ್ದವು. ವೈಎಸ್‌ಎಸ್/ಎಸ್‌ಆರ್‌ಎಫ್‌ನ ಪ್ರಭಾವವು ಒಂದು ಮಂದ ಮಾರುತದಂತೆ ಆರಂಭವಾಗಿ ಕ್ರಮೇಣವಾಗಿ ಬಿರುಗಾಳಿಯಾಗಿ ಮಾರ್ಪಟ್ಟು ಭಗವಂತನ ಸಂತತಿಯ ಜೀವನದಿಂದ ಅಂಧಕಾರವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಎಂದು ಗುರುದೇವ ನಮಗೆ ಹೇಳಿದ್ದರು. ಈ ಶತಾಬ್ದಿಯ ವರ್ಷದಲ್ಲಿ ನಾವು ಅದರ ಆರಂಭವನ್ನಷ್ಟೇ ಅಲ್ಲದೆ ಒಳ್ಳೆಯದನ್ನುಂಟು ಮಾಡುವ ಆ ಶಕ್ತಿಯ ಹೆಚ್ಚಳವನ್ನೂ ಆಚರಿಸುತ್ತಿದ್ದೇವೆ; ಹಾಗೂ ಮುಂಬರುವ ಶತಮಾನದಲ್ಲಿ ಅದರ ಅಧ್ಯಾತ್ಮಿಕ ಸ್ವರೂಪದ ಪರಿಣಾಮಗಳು ಖಂಡಿತವಾಗಿ ಇನ್ನೂ ಹೆಚ್ಚಿನ ವೇಗವನ್ನು ಪಡೆದುಕೊಳ್ಳುತ್ತವೆ. ಪೂರ್ವ ಮತ್ತು ಪಶ್ಚಿಮಗಳ ಏಕತೆಯ ಅವರ ಆದರ್ಶವನ್ನು ಸಾಕಾರಗೊಳಿಸಲು ಮತ್ತು ಅವರ ಪ್ರೀತಿ ಮತ್ತು ಜ್ಞಾನಕ್ಕೆ ಶಾಶ್ವತ, ಶುದ್ಧ ಮಾರ್ಗವಾಗಲು ಗುರೂಜಿ ತಮ್ಮ ವೈಎಸ್‌ಎಸ್/ಎಸ್‌ಆರ್‌ಎಫ್ ಸಂಸ್ಥೆಯನ್ನು ಸ್ಥಾಪಿಸಿದರು ಮತ್ತು ಆ ಪವಿತ್ರ ಪರಂಪರೆಯ ಸುತ್ತ ಬದುಕನ್ನು ಕಟ್ಟಿಕೊಳ್ಳುತ್ತಿರುವ ನಿಮ್ಮೆಲ್ಲರ ಪ್ರಯತ್ನಗಳನ್ನು ಅವರು ಆಶೀರ್ವದಿಸಲೆಂದು ನಾನು ಪ್ರಾರ್ಥಿಸುತ್ತೇನೆ. ಆ ಪ್ರಯತ್ನಗಳು ತರುವ ಆಂತರಿಕ ಬದಲಾವಣೆಗಳು ಹಾಗೂ ನಿಮ್ಮ ಮುಖಗಳಲ್ಲಿ ಕಾಣುವ ಆನಂದಭರಿತ ಉತ್ಸಾಹಗಳು ಈ ದಿವ್ಯ ಬೋಧನೆಗಳ ಚಿರಂತನ ಶಕ್ತಿಗೆ ಅತ್ಯಂತ ದೊಡ್ಡ ಪುರಾವೆ; ಅಲ್ಲದೆ ಅವು ಮುಂಬರುವ ವರ್ಷಗಳಲ್ಲಿ ಅವರ ಕಾರ್ಯಗಳಿಗೆ ಚೈತನ್ಯ ತುಂಬುತ್ತಲೇ ಇರುತ್ತವೆ. ಜೈ ಗುರು!
ಭಗವಂತ ಮತ್ತು ಗುರುದೇವರ ಅನವರತ ಆಶೀರ್ವಚನಗಳೊಂದಿಗೆ,
ಶ್ರೀ ಮೃಣಾಲಿನಿ ಮಾತಾ