ವೈಎಸ್ಎಸ್ ಶತಮಾನೋತ್ಸವದ ಸ್ಮರಣಾರ್ಥ ಭಾರತದ ಪ್ರಧಾನಿ ಅಂಚೆಚೀಟಿ ಬಿಡುಗಡೆ ಮಾಡಿದರು

7 ಮಾರ್ಚ್‌, 2017

Postage stamp commemorating the 100th anniversary of Yogoda Satsanga Society.

ಮಾರ್ಚ್ 7, 2017 ರಂದು ನವದೆಹಲಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಭಾರತದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಶ್ರೀ ಶ್ರೀ ಪರಮಹಂಸ ಯೋಗಾನಂದರ ಜೀವನಸಾಧನೆಗೆ ಗೌರವ ಸಲ್ಲಿಸಿದರು.

ಯೋಗದಾ ಸತ್ಸಂಗ ಸೊಸೈಟಿಯ 100 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಭಾರತ ಸರ್ಕಾರವು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ ಸಂದರ್ಭ ಅದಾಗಿತ್ತು. ಪರಮಹಂಸಜಿಯವರು ಮಾರ್ಚ್ 7, 1952 ರಂದು ಮಹಾಸಮಾಧಿಯಾದುದರ ವಾರ್ಷಿಕೋತ್ಸವವನ್ನು ಗೌರವಿಸಲು ಈ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಆರಂಭ, 1917 ರ ಮಾರ್ಚ್‌ನಲ್ಲಿ ಭಾರತದ ದಿಹಿಕಾದಲ್ಲಿ ಪರಮಹಂಸ ಯೋಗಾನಂದರು ಸ್ಥಾಪಿಸಿದ ಒಂದು ಸಣ್ಣ ಆಶ್ರಮ ಮತ್ತು ಬಾಲಕರ ಶಾಲೆಯಲ್ಲಿ ಆಯಿತು. ಇಂದು ವೈಎಸ್ಎಸ್ ಭಾರತ, ನೇಪಾಳ ಮತ್ತು ಶ್ರೀಲಂಕಾದಾದ್ಯಂತ ಸುಮಾರು 200 ಧ್ಯಾನ ಕೇಂದ್ರಗಳು ಮತ್ತು ಮಂಡಳಿಗಳನ್ನು ಹೊಂದಿದೆ.

(ಗಮನಿಸಿ: ವೀಡಿಯೊದಲ್ಲಿ 15:56 ರಿಂದ 18:18 ರವರೆಗೆ ಆಗಿರುವ ಪ್ರಸರಣ ದೋಷವನ್ನು ದಯವಿಟ್ಟು ಕ್ಷಮಿಸಿ.)

ಅಧಿಕೃತ ಕಾರ್ಯಕ್ರಮಗಳಿಗಾಗಿರುವ ಸರ್ಕಾರಿ ಸಮಾವೇಶ ಕೇಂದ್ರವಾದ ವಿಜ್ಞಾನ ಭವನದ ವಿಶಾಲವಾದ ಮುಖ್ಯ ಸಭಾಂಗಣದಲ್ಲಿ 1,500 ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳು ಹಾಗೂ ವೈಎಸ್ಎಸ್ ಸದಸ್ಯರು ಮತ್ತು ಅಭಿಮಾನಿಗಳ ಎದುರಿನಲ್ಲಿ ಪ್ರಧಾನಿ ಹೊಸ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು. ನಂತರ ಅವರು ಸ್ಫೂರ್ತಿಯಿಂದ ಕೂಡಿದ ಭಾಷಣ ಮಾಡಿದರು, ಅದರಲ್ಲಿ ಅವರು ಪರಮಹಂಸಜಿಯನ್ನು ಭಾರತದ ಶ್ರೇಷ್ಠ ಯೋಗಿಗಳು ಮತ್ತು ಗುರುಗಳಲ್ಲಿ ಒಬ್ಬರು ಎಂದು ಬಣ್ಣಿಸಿದರು — ಅವರ ಜೀವನ ಮತ್ತು ಕಾರ್ಯವು ಭಾರತದ ಆಧ್ಯಾತ್ಮಿಕತೆಯ ಅಗಾಧ ಮೌಲ್ಯವನ್ನು ಜಗತ್ತಿಗೆ ಪ್ರದರ್ಶಿಸಿತು — ಹಾಗೂ ಭಾರತದ ಪ್ರಾಚೀನ ಪರಂಪರೆಯನ್ನು ಆಧುನಿಕ ಜಗತ್ತಿನೊಂದಿಗೆ ಹಂಚಿಕೊಳ್ಳುವಲ್ಲಿ ಅದರ ಸಂಸ್ಥಾಪಕರ ಕೊಡುಗೆಯನ್ನು ಮತ್ತು ಚೈತನ್ಯವನ್ನು ಯಶಸ್ವಿಯಾಗಿ ಕಾಪಾಡಿಕೊಂಡು ಬರುತ್ತಿರುವುದಕ್ಕಾಗಿ ವೈಎಸ್‌ಎಸ್ ಅನ್ನು ಶ್ಲಾಘಿಸಿದರು.”

ಪೂರ್ಣ ಪಠ್ಯ ಇಂಗ್ಲಿಷ್‌ನಲ್ಲಿ | ಹಿಂದಿಯಲ್ಲಿ

ಪ್ರಧಾನ ಮಂತ್ರಿಯವರ ಭಾಷಣದ ಆಯ್ದ ಭಾಗಗಳು

Prime Minister of India, Narendra Modi speaking about Paramahansa Yogananda and Kriya Yoga. “ಒಂದು ವಿಶೇಷ ಸಂದರ್ಭವನ್ನು ಸ್ಮರಿಸಲು ನಾವು ಇಂದು, ಮಾರ್ಚ್ 7 ರಂದು ಇಲ್ಲಿ ಸೇರಿದ್ದೇವೆ,” ಎಂದು ಪ್ರಧಾನ ಮಂತ್ರಿ ಹೇಳಿದರು. “ಮತ್ತು ಶ್ರೀ ಶ್ರೀ [ಮೃಣಾಲಿನಿ] ಮಾತಾಜಿ ಅವರು ಲಾಸ್ ಏಂಜಲೀಸ್‌ನಿಂದ ಈ ಕಾರ್ಯಕ್ರಮದ ನೇರಪ್ರಸಾರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಕೇಳಿ ನಾನು ಅವರಿಗೆ ವಿನಯಪೂರ್ವಕವಾಗಿ ನಮಸ್ಕರಿಸುತ್ತೇನೆ….

“ಅಂತರಂಗದೆಡೆಗೆ ತಿರುಗಿ [ಆಂತರಿಕ] ಪಯಣವನ್ನು ಕೈಗೊಳ್ಳಲು ಸಾಕಷ್ಟು ಧೈರ್ಯ ಮತ್ತು ದೃಢಸಂಕಲ್ಪ ಬೇಕಾಗುತ್ತದೆ. ಕೆಲವು ಯೋಗ ಪದ್ಧತಿಗಳಿಗೆ ಬಾಹ್ಯ ಶಕ್ತಿ ಮತ್ತು ನಮ್ಯತೆ ಬೇಕಾಗುತ್ತದೆ, ಆದರೆ ಕ್ರಿಯಾ ಯೋಗವು [ಮಾರ್ಗ] ಆಂತರಿಕ ಬದ್ಧತೆಯನ್ನು ಕೇಳುತ್ತದೆ ಮತ್ತು ಆ ಧೈರ್ಯವನ್ನು ನೀಡುವ ಮೂಲಕ, ಅದು ನಿಮ್ಮನ್ನು ಜೀವನದ ರಹಸ್ಯಗಳನ್ನು ಅರ್ಥಮಾಡಿಕೊಳ್ಳುವ ಪಯಣಕ್ಕೆ ಕರೆದೊಯ್ಯುತ್ತದೆ….

“[ಪರಮಹಂಸ ಯೋಗಾನಂದರು] ಆಗಾಗ್ಗೆ ಹೇಳುತ್ತಿದ್ದರು, ‘ನಾನು ಆಸ್ಪತ್ರೆಯಲ್ಲಿ ಹಾಸಿಗೆಯ ಮೇಲೆ ಸಾಯಲು ಬಯಸುವುದಿಲ್ಲ. ನಾನು ನನ್ನ ಬೂಟುಗಳನ್ನು ಧರಿಸಿಕೊಂಡು ನನ್ನ ಭಾರತ ಮಾತೆಯ ಬಗ್ಗೆ ಮಾತನಾಡುತ್ತಾ ಸಾಯಲು ಬಯಸುತ್ತೇನೆ.’ ಇದರರ್ಥ, ಅವರು ಭಾರತದ ತೀರವನ್ನು ಬಿಟ್ಟು ಪಾಶ್ಚಿಮಾತ್ಯ ಜಗತ್ತಿಗೆ ಭಾರತದ ಪ್ರಾಚೀನ ಬೋಧನೆಗಳ ಸಂದೇಶವನ್ನು ಪಸರಿಸಲು ಹೊರಟಾಗಲೂ, ಅವರಿಗೆ ತಮ್ಮ ಪ್ರೀತಿಯ ಮಾತೃಭೂಮಿಯಿಂದ ಅಗಲಿದ್ದೇನೆ ಅಥವಾ ಬೇರ್ಪಟ್ಟಿದ್ದೇನೆ ಎಂಬ ಭಾವನೆಯನ್ನು ಅನುಭವಿಸಿದ ಒಂದು ಕ್ಷಣವೂ ಇರಲಾರದು….

“ಕಟ್ಟುನಿಟ್ಟಿನ ಸಿದ್ಧಾಂತವನ್ನು ತೆಗೆದುಹಾಕಿ, ಅವರು ಆಧ್ಯಾತ್ಮಿಕತೆಯನ್ನು ಎಷ್ಟು ಸುಲಭವಾಗಿ ಸಿಗುವಂತೆ ಮತ್ತು ಅರ್ಥವಾಗುವಂತೆ ಮಾಡಿದರು ಎಂದರೆ ಅವರು ಅದನ್ನು ಪ್ರಾರಂಭಿಸಿದ ಈ ನೂರು ವರ್ಷಗಳಲ್ಲಿ, ಅವರ ಕಾರ್ಯವು ವಿಶ್ವಾದ್ಯಂತದ ಆಂದೋಲನವಾಗಿ, ಆಧ್ಯಾತ್ಮಿಕ ತಿಳುವಳಿಕೆಯ ಶಾಶ್ವತ ಸಂಪನ್ಮೂಲವಾಗಿ ಮಾರ್ಪಟ್ಟಿದೆ….[ಅವರು] ತಮ್ಮ ಸಂಸ್ಥೆಯನ್ನು ಯಾವ ರೀತಿಯಲ್ಲಿ ನಿರ್ಮಿಸಿ ವ್ಯವಸ್ಥಿತಗೊಳಿಸಿದರು ಎಂದರೆ, ಅದು ಇಂದಿಗೂ ತನ್ನ ಧ್ಯೇಯವನ್ನು ಪೂರೈಸುವುದನ್ನು ಮುಂದುವರೆಸುತ್ತಿದೆ. ಮತ್ತು ಇಂದು ನಾವು ಅವರ ಸಾಕ್ಷಾತ್ಕಾರವನ್ನು, ಅವರ ಆತ್ಮಾನಂದವನ್ನು ಗ್ರಹಿಸುವಾಗ ಮತ್ತು ಅದರಲ್ಲಿ ಭಾಗವಹಿಸುವಾಗ, ಅವರ ಕಾರ್ಯವು ವೇಗವಾಗಿ ಮುನ್ನಡೆಯುತ್ತಿರುತ್ತದೆ. ಇದು ಅವರ ದೊಡ್ಡ ಕೊಡುಗೆಗಳಲ್ಲಿ ಒಂದಾಗಿದೆ ಎಂದು ನಾನು ಭಾವಿಸುತ್ತೇನೆ.”

ಶ್ರೀ ಮೃಣಾಲಿನಿ ಮಾತಾರಿಂದ ಒಂದು ಸಂದೇಶ

ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರೊಂದಿಗೆ ವೇದಿಕೆಯಲ್ಲಿ ಕುಳಿತಿದ್ದವರೆಂದರೆ, ವೈಎಸ್ಎಸ್ ಪ್ರಧಾನ ಕಾರ್ಯದರ್ಶಿ ಸ್ವಾಮಿ ಸ್ಮರಣಾನಂದ ಮತ್ತು ವೈಎಸ್ಎಸ್ ನಿರ್ದೇಶಕರ ಮಂಡಳಿಯ ಇತರ ಸದಸ್ಯರು ಹಾಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು, ಲಾಸ್ ಏಂಜಲೀಸ್‌ನಲ್ಲಿರುವ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯಿಂದ ಬಂದಿರುವ ವೈಎಸ್ಎಸ್/ಎಸ್‌ಆರ್‌ಎಫ್ ನಿರ್ದೇಶಕರ ಮಂಡಳಿಯ ಸದಸ್ಯ ಸ್ವಾಮಿ ವಿಶ್ವಾನಂದರೂ ಇದ್ದಾರೆ. ಸ್ವಾಮಿ ಸ್ಮರಣಾನಂದರು ಕಾರ್ಯಕ್ರಮದ ಉದ್ಘಾಟನಾ ಭಾಷಣ ಮಾಡಿದರು, ನಂತರ ಸ್ವಾಮಿ ವಿಶ್ವಾನಂದರು ಲಾಸ್ ಏಂಜಲೀಸ್‌ನಿಂದ ನೇರ ವೆಬ್‌ಕಾಸ್ಟ್ ವೀಕ್ಷಿಸುತ್ತಿದ್ದ ವೈಎಸ್ಎಸ್/ಎಸ್‌ಆರ್‌ಎಫ್‌ನ ಅಧ್ಯಕ್ಷರು ಮತ್ತು ಸಂಘಮಾತಾ ಶ್ರೀ ಮೃಣಾಲಿನಿ ಮಾತಾ ಅವರ ಸ್ಪೂರ್ತಿದಾಯಕ ಸಂದೇಶವನ್ನು ಓದಿ ಹೇಳಿದರು.

ಶ್ರೀ ಮೃಣಾಲಿನಿ ಮಾತಾ ತಮ್ಮ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ: “ಭಾರತದ ಸುದೀರ್ಘ ಇತಿಹಾಸದುದ್ದಕ್ಕೂ ಮತ್ತು ಇಂದಿಗೂ, ಅದರ ಅತ್ಯಂತ ದೊಡ್ಡ ಸಂಪತ್ತು ಮತ್ತು ಶಕ್ತಿ ಎಂದರೆ, ಅದರ ಋಷಿಗಳು ಗ್ರಹಿಸಿ, ಮನುಕುಲಕ್ಕೆ ನೀಡಿದ ಶಾಶ್ವತ ಆಧ್ಯಾತ್ಮಿಕ ಸತ್ಯಗಳನ್ನು ಪಾಲಿಸುತ್ತಿರುವುದು ಮತ್ತು ಸಕ್ರಿಯವಾಗಿ ಅಭಿವ್ಯಕ್ತಿಸುತ್ತಿರುವುದು….. ಅಂತಹ ಒಬ್ಬ ಅನುಕರಣೀಯ ದಿವ್ಯ ವ್ಯಕ್ತಿಯ ಜೀವನಸಾಧನೆಯನ್ನು ಗೌರವಿಸಲು ಇಂದು ಭಾರತ ಸರ್ಕಾರ ಆಯ್ಕೆ ಮಾಡಿಕೊಂಡಿರುವುದು ಭಾರತಕ್ಕೆ ಮಾತ್ರವಲ್ಲದೆ, ಈ ಕಷ್ಟಕಾಲದಲ್ಲಿ ಆಧ್ಯಾತ್ಮಿಕ ಬೆಳಕಿಗಾಗಿ ಅವಳನ್ನು ನೋಡುವ ಪ್ರಪಂಚದಾದ್ಯಂತ ಇರುವ ಲಕ್ಷಾಂತರ ಜನರಿಗೆ ಭರವಸೆ ಮತ್ತು ಸ್ಫೂರ್ತಿಯ ಆಳವಾದ ಮೂಲವಾಗಿದೆ. (ಅವರ ಸಂದೇಶದ ಇಡೀ ಪಠ್ಯವನ್ನು ಈ ಕೆಳಗೆ ಕೊಡಲಾಗಿದೆ.)

ವೈಎಸ್ಎಸ್ ಶತಮಾನೋತ್ಸವದ ಆಚರಣೆಯ ಹೆಚ್ಚುವರಿ ವರದಿಗಳು

ಮಾರ್ಚ್‌ 19ರಿಂದ 23ರ ವರೆಗೆ ವೈಎಸ್‌ಎಸ್‌ ರಾಂಚಿ ಆಶ್ರಮದಲ್ಲಿ ನಡೆಯುವ ಒಂದು ಕಾರ್ಯಕ್ರಮದೊಂದಿಗೆ ವೈಎಸ್‌ಎಸ್‌ ಶತಮಾನೋತ್ಸವದ ಆಚರಣೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಎದುರುನೋಡುತ್ತಿದ್ದೇವೆ. ಇಡೀ ವರ್ಷದ ಶತಮಾನೋತ್ಸವದ ಸಮಾರಂಭದ ಬಗ್ಗೆಯ ಹೆಚ್ಚಿನ ಮಾಹಿತಿಗಾಗಿ ಮತ್ತು ಮಾರ್ಚ್‌ 7ರಂದು ನಡೆದ ಅಂಚೆಚೀಟಿ ಬಿಡುಗಡೆ ಸಮಾರಂಭದ ಫೋಟೋ ಅಲ್ಬಮ್‌  ನೋಡಲು ವೈಎಸ್‌ಎಸ್‌ ವೆಬ್‌ಸೈಟ್‌ಗೆ ಭೇಟಿ ನೀಡಲು ನಿಮ್ಮನ್ನು ಸ್ವಾಗತಿಸುತ್ತಿದ್ದೇವೆ.

ಕಾರ್ಯಕ್ರಮದ ಮತ್ತಷ್ಟು ಫೋಟೋಗಳು

Narendra Modi lights the Diya.
ಪ್ರಧಾನಿ ಮೋದಿ ಮತ್ತು ವೈಎಸ್ಎಸ್/ಎಸ್ಆರ್‌ಎಫ್ ನಿರ್ದೇಶಕರ ಮಂಡಳಿಯ ಸನ್ಯಾಸಿಗಳು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
Smarananda speaks on Yogananda's teachings.
ಪರಮಹಂಸಜಿಯವರು ನಿರೂಪಿಸಿದ ಭಗವಂತನ ಪ್ರಜ್ಞಾನದ ಬಗ್ಗೆ ಮತ್ತು ಅವರ ಯೋಗಿಯ ಆತ್ಮಕಥೆಯ ಅನೇಕ ಅನುವಾದಗಳು ಈಗ ಹೇಗೆ ವಿಶ್ವದ ಜನಸಂಖ್ಯೆಯ ಸುಮಾರು 95% ಜನರು ಓದುವಂತೆ ಮಾಡಿವೆ ಎಂಬ ಬಗ್ಗೆ ಸ್ವಾಮಿ ಸ್ಮರಣಾನಂದರು ಮಾತನಾಡಿದರು.
Sri Narendra Modi displays the commemorative stamp.
ವೈಎಸ್‌ಎಸ್‌ನ 100ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಅಂಚೆ ಚೀಟಿಯನ್ನು, ಹಾಗೂ ಅದರೊಂದಿಗೆ ಸರ್ಕಾರ ಸಿದ್ಧಪಡಿಸಿದ ವಿಶೇಷ ಕರಪತ್ರವನ್ನು, ಪ್ರಧಾನಿ ಮೋದಿ ವಿಜ್ಞಾನ ಭವನದಲ್ಲಿ ಚಪ್ಪಾಳೆ ತಟ್ಟುತ್ತಿರುವ ಪ್ರೇಕ್ಷಕರಿಗೆ ಪ್ರದರ್ಶಿಸುತ್ತಿದ್ದಾರೆ.
Prime Minister Modi delivers his address.
ಪ್ರಧಾನ ಮಂತ್ರಿ ಮೋದಿ ಭಾಷಣ ಮಾಡುತ್ತಾ, ಭಾರತದ ಆಧ್ಯಾತ್ಮಿಕತೆಯನ್ನು ಮತ್ತು ಆಧುನಿಕ ಜಗತ್ತಿನಲ್ಲಿ ಅದರ ವಿಶಿಷ್ಟ ಪಾತ್ರವನ್ನು ಅರ್ಥಮಾಡಿಕೊಳ್ಳುವಲ್ಲಿ ಪರಮಹಂಸ ಯೋಗಾನಂದರು ಮತ್ತು ಅವರ ಕ್ರಿಯಾ ಯೋಗ ಬೋಧನೆಗಳು ನೀಡಿರುವ ವಿಶಿಷ್ಟ ಕೊಡುಗೆಗಳನ್ನು ಒತ್ತಿ ಹೇಳಿದರು.
Narendra Modi standing with YSS Board of Directors.
ತಮ್ಮ ಭಾಷಣದ ನಂತರ ಎದ್ದುನಿಂತು ಕರತಾಡನ ಮಾಡಿದ ಸಭಿಕರಿಗೆ ಶ್ರೀ ಮೋದಿ ಅವರು ಪ್ರಣಾಮಗಳನ್ನು ಸಲ್ಲಿಸಿದರು.
Swami Vishwananda gifts Prime Minister Modi a part of Paramahansa Yogananda’s poem “My India”
ಶ್ರೀ ಮೋದಿಯವರು ಪರಮಹಂಸ ಯೋಗಾನಂದರ "ಮೈ ಇಂಡಿಯಾ" ಎಂಬ ಕವಿತೆಯ ಒಂದು ಭಾಗದ ಕಲಾತ್ಮಕ ಪ್ರತಿಕೃತಿಯನ್ನು ಉಡುಗೊರೆಯಾಗಿ ಸ್ವೀಕರಿಸುತ್ತಿದ್ದಾರೆ, ಇದನ್ನು ಸ್ವಾಮಿ ವಿಶ್ವಾನಂದರು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸ್ಸೆಲ್ಫ್-ರಿಯಲೈಝೇಷನ್‌ ಫೆಲೋಶಿಪ್ ಪರವಾಗಿ ಅವರಿಗೆ ಅರ್ಪಿಸಿದರು. ಕವಿತೆಯ ಈ ಸಾಲುಗಳು ಮಾರ್ಚ್ 7, 1952 ರಂದು ತಮ್ಮ ದೇಹವನ್ನು ಬಿಡುವ ಮೊದಲು ಮಹಾನ್ ಗುರುಗಳು ಹೇಳಿದ ಕೊನೆಯ ಮಾತುಗಳಾಗಿದ್ದು, ಹೀಗೆ ಕೊನೆಗೊಳ್ಳುತ್ತವೆ:

ಎಲ್ಲಿ ಗಂಗೆ, ಕಾಡುಗಳು, ಹಿಮಾಲಯದ ಗುಹೆಗಳು ಮತ್ತು ಮನುಷ್ಯರು ಭಗವಂತನ ಕನಸು ಕಾಣುತ್ತಾರೋ ಅಲ್ಲಿ ನಾನು
ಧನ್ಯನಾದೆ — ನನ್ನ ಶರೀರವು ಆ ಮಾತೃಭೂಮಿಯನ್ನು ಸ್ಪರ್ಶಿಸಿತು.”

ಶ್ರೀ ಮೃಣಾಲಿನಿ ಮಾತಾರ ಸಂದೇಶದ ಪೂರ್ಣ ಪಠ್ಯ, ಮಾರ್ಚ್ 7, 2017

ಆತ್ಮೀಯರೆ,

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್ಎಸ್) ದ ಶತಮಾನೋತ್ಸವವನ್ನು ಗೌರವಿಸುವ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆಯ ಈ ವಿಶೇಷ ಸಂದರ್ಭದಲ್ಲಿ, ನಾನು ನಿಮಗೆ ನನ್ನ ಆತ್ಮದ ಶುಭಾಶಯ ಮತ್ತು ದಿವ್ಯ ಪ್ರೀತಿಯನ್ನು ಕಳುಹಿಸುತ್ತೇನೆ. ಈ ಕಾರ್ಯಕ್ರಮದ ಮೂಲಕ ಭಾರತ ಸರ್ಕಾರವು ವೈಎಸ್ಎಸ್ ಮತ್ತು ಅದರ ಸಂಸ್ಥಾಪಕರೂ, ಭಾರತದ ಮಹಾನ್ ಸಂತರಲ್ಲಿ ಒಬ್ಬರೂ ಆದ ಶ್ರೀ ಶ್ರೀ ಪರಮಹಂಸ ಯೋಗಾನಂದರಿಗೆ ಗೌರವ ಸಲ್ಲಿಸುತ್ತಿರುವುದು ನನ್ನಲ್ಲಿ ಅಪಾರ ಸಂತೋಷ ಮತ್ತು ಕೃತಜ್ಞತೆಯನ್ನು ತುಂಬುತ್ತಿದೆ. ಇದನ್ನು ಸಾಧಿಸುವಲ್ಲಿ ಪಾತ್ರವಹಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಭಾರತದ ಸಾರ್ವತ್ರಿಕ ಆಧ್ಯಾತ್ಮಿಕತೆ ಮತ್ತು ಪ್ರಾಚೀನ ಯೋಗ ಧ್ಯಾನ ವಿಜ್ಞಾನವನ್ನು ಹರಡಲು ಅವರು ಅಮೆರಿಕದಲ್ಲಿ ಹೆಚ್ಚಿನ ಸಮಯವನ್ನು ಕಳೆದಿದ್ದರೂ, ಪರಮಹಂಸ ಯೋಗಾನಂದಜಿ ಅವರ ಮಾತೃಭೂಮಿಯ ಮೇಲಿನ ಪ್ರೀತಿ ಮತ್ತು ಕಾಳಜಿ ಎಂದಿಗೂ ಕಡಿಮೆಯಾಗಲಿಲ್ಲ. 1952 ರಲ್ಲಿ ಇದೇ ದಿನದಂದು ಇಹಲೋಕವನ್ನು ತ್ಯಜಿಸುವ ಮೊದಲು ಅವರು ಹೇಳಿದ ಕೊನೆಯ ಮಾತುಗಳು ಪ್ರೀತಿಯ ಭಾರತಕ್ಕೆ ಅವರು ಸಲ್ಲಿಸಿದ ಹೃತ್ಪೂರ್ವಕ ಗೌರವವಾಗಿತ್ತು.

ಭಾರತದ ಸುದೀರ್ಘ ಇತಿಹಾಸದುದ್ದಕ್ಕೂ ಮತ್ತು ಇಂದಿಗೂ, ಅದರ ಅತ್ಯಂತ ದೊಡ್ಡ ಸಂಪತ್ತು ಮತ್ತು ಶಕ್ತಿ ಎಂದರೆ, ಅದರ ಋಷಿಗಳು ಗ್ರಹಿಸಿ, ಮನುಕುಲಕ್ಕೆ ನೀಡಿದ ಶಾಶ್ವತ ಆಧ್ಯಾತ್ಮಿಕ ಸತ್ಯಗಳನ್ನು ಪಾಲಿಸುತ್ತಿರುವುದು ಮತ್ತು ಸಕ್ರಿಯವಾಗಿ ಅಭಿವ್ಯಕ್ತಿಸುತ್ತಿರುವುದು. ಯುಗಯುಗಾಂತರಗಳಿಂದ, ಮಹಾನ್ ಆತ್ಮಗಳು — ಮಹಾತ್ಮರು, ಸಂತರು, ಅತ್ಯುನ್ನತ ದೈವ ಸಾಕ್ಷಾತ್ಕಾರ ಹೊಂದಿದ ಋಷಿಗಳು – ಆ ಶ್ರೇಷ್ಠ ಮತ್ತು ಅತ್ಯಂತ ಉದಾತ್ತ ಉದ್ದೇಶಕ್ಕಾಗಿ ಸೇವೆ ಸಲ್ಲಿಸಲು ಭಾರತ ಮಾತೆಯ ಮೇಲಿನ ತಮ್ಮ ಮಹಾನ್ ಪ್ರೀತಿಯಿಂದ ಪ್ರೇರಿತರಾಗಿದ್ದಾರೆ. ಅಂತಹ ಒಬ್ಬ ಅನುಕರಣೀಯ ದಿವ್ಯ ವ್ಯಕ್ತಿಯ ಜೀವನಸಾಧನೆಯನ್ನು ಗೌರವಿಸಲು ಇಂದು ಭಾರತ ಸರ್ಕಾರ ಆಯ್ಕೆ ಮಾಡಿಕೊಂಡಿರುವುದು ಭಾರತಕ್ಕೆ ಮಾತ್ರವಲ್ಲದೆ, ಈ ಕಷ್ಟಕಾಲದಲ್ಲಿ ಆಧ್ಯಾತ್ಮಿಕ ಬೆಳಕಿಗಾಗಿ ಅವಳನ್ನು ನೋಡುವ ಪ್ರಪಂಚದಾದ್ಯಂತ ಇರುವ ಲಕ್ಷಾಂತರ ಜನರಿಗೆ ಭರವಸೆ ಮತ್ತು ಸ್ಫೂರ್ತಿಯ ಆಳವಾದ ಮೂಲವಾಗಿದೆ.

ಶ್ರೀ ಶ್ರೀ ಪರಮಹಂಸ ಯೋಗಾನಂದರು ಆಗಾಗ್ಗೆ ಹೇಳುತ್ತಿದ್ದರು, “ನಿಮ್ಮನ್ನು ನೀವು ಸುಧಾರಿಸಿಕೊಂಡರೆ ನೀವು ಸಾವಿರಾರು ಜನರನ್ನು ಸುಧಾರಿಸುವಿರಿ.” ಭಾರತದ ದೈವಿಕ ಮತ್ತು ಸಾರ್ವತ್ರಿಕ ವಿಜ್ಞಾನವಾದ ಯೋಗ ಮತ್ತು ಧ್ಯಾನವು ನಮ್ಮ ನಡವಳಿಕೆ ಮತ್ತು ಆಲೋಚನಾ ಕ್ರಮಗಳಲ್ಲಿ ಶಾಶ್ವತವಾದ ಸಕಾರಾತ್ಮಕ ಪರಿವರ್ತನೆಗಳನ್ನು ತರುವ ಅತ್ಯಂತ ಪರಿಣಾಮಕಾರಿ ವಿಧಾನಗಳನ್ನು ಒಳಗೊಂಡಿದೆ. ಪರಮಹಂಸ ಯೋಗಾನಂದಜಿಯವರ ಸಂಸ್ಥೆಯ ಮುಖ್ಯ ಗುರಿ ಮತ್ತು ಆದರ್ಶಗಳಲ್ಲಿ ಒಂದೆಂದರೆ, ಭಾರತದ ಮಹಾನ್ ಋಷಿಗಳು ಸಹಸ್ರಾರು ವರ್ಷಗಳಿಂದ ಕಲಿಸಿದ ಧ್ಯಾನದ ವೈಜ್ಞಾನಿಕ ತಂತ್ರಗಳ ಜ್ಞಾನವನ್ನು ಎಲ್ಲಾ ರಾಷ್ಟ್ರಗಳಲ್ಲಿ ಪ್ರಸಾರ ಮಾಡುವುದು, ಇದರ ಮೂಲಕ ಪ್ರತಿಯೊಬ್ಬ ವ್ಯಕ್ತಿಯು – ಯಾವುದೇ ರಾಷ್ಟ್ರೀಯತೆ, ಜಾತಿ ಅಥವಾ ಧರ್ಮದವನಾಗಿದ್ದರೂ — ಅವನು ತನ್ನದೇ ದೈವತ್ವವನ್ನು ಅರಿತುಕೊಳ್ಳಬಹುದು ಹಾಗೂ ಆಂತರಿಕ ಶಾಂತಿ, ಪ್ರೀತಿ ಮತ್ತು ಆನಂದವನ್ನು ಅನುಭವಿಸಬಹುದು. ಪ್ರತಿಯೊಬ್ಬ ವ್ಯಕ್ತಿಯೂ ತನ್ನೊಳಗೆ ಶಾಂತಿಯನ್ನು ಹೊಂದಿರುವಾಗ, ವಿಶ್ವ ಶಾಂತಿಯು ತಾನಾಗಿಯೇ ಉಂಟಾಗುತ್ತದೆ.

ಈ ವಿಶೇಷ ದಿನದಂದು ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯೆ ಸಮಯ ಮಾಡಿಕೊಂಡು ವೈಯಕ್ತಿಕವಾಗಿ ಬಂದುದಕ್ಕಾಗಿ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ನನ್ನ ಆಳವಾದ ಕೃತಜ್ಞತೆಗಳು. ವೈಎಸ್ಎಸ್ ಶತಮಾನೋತ್ಸವದ ಸ್ಮರಣಾರ್ಥ ಅಂಚೆಚೀಟಿಯನ್ನು ಸ್ವತಃ ಯೋಗದ ಉತ್ಕಟ ಸಾಧಕರಾದ ಶ್ರೀ ಮೋದಿಯವರೇ ಬಿಡುಗಡೆ ಮಾಡುತ್ತಿರುವುದು ಬಹಳ ಸೂಕ್ತವಾಗಿದೆ. ಅವರು ಅಂತರರಾಷ್ಟ್ರೀಯ ಯೋಗ ದಿನವನ್ನು ಪ್ರಸ್ತಾಪಿಸಿದರು ಮತ್ತು ಇದು ವಿಶ್ವಸಂಸ್ಥೆಯಲ್ಲಿ ತೀರ್ಮಾನವಾದ ನಂತರ ದಾಖಲೆಯ ಸಂಖ್ಯೆಯ ರಾಷ್ಟ್ರಗಳು ಬಹಳ ಕಡಿಮೆ ಸಮಯದಲ್ಲಿ ಅಂಗೀಕರಿಸಿದವು — ಅಂತರರಾಷ್ಟ್ರೀಯ ಯೋಗ ದಿನವು ಪ್ರಪಂಚದಾದ್ಯಂತ ಯೋಗ ವಿಜ್ಞಾನದ ಸಾರ್ವತ್ರಿಕ ಸಂದೇಶವನ್ನು ಹರಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಮಹತ್ವದ ಉಪಕ್ರಮಕ್ಕಾಗಿ ನಾವು ಶ್ರೀ ಮೋದಿಯವರಿಗೆ ಕೃತಜ್ಞರಾಗಿರುತ್ತೇವೆ.

ಭಾರತದ ಆಧ್ಯಾತ್ಮಿಕತೆಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳ ಭೌತಿಕ ಕಾರ್ಯಪಟುತ್ವದೊಂದಿಗೆ ಒಗ್ಗೂಡಿಸುವ ಮೂಲಕ ಆದರ್ಶ ವಿಶ್ವ ನಾಗರಿಕತೆ ಹೊರಹೊಮ್ಮುತ್ತದೆ ಎಂದು ಪರಮಹಂಸ ಯೋಗಾನಂದಜಿ ಭವಿಷ್ಯ ನುಡಿದಿದ್ದಾರೆ. ಆದ್ದರಿಂದ ಮಾನವ ಪ್ರಜ್ಞೆಯನ್ನು ಅದರ ಮೇಲ್ಮುಖ ವಿಕಸನ ಚಕ್ರದಲ್ಲಿ ಉನ್ನತೀಕರಿಸುವಲ್ಲಿ ಭಾರತಕ್ಕೆ ಒಂದು ಪ್ರಮುಖ ಮತ್ತು ಅಗತ್ಯವಾದ ಪಾತ್ರವಿದೆ. ಶ್ರೀ ಶ್ರೀ ಯೋಗಾನಂದಜಿ ಮತ್ತು ಭಾರತದ ಇತರ ಮಹಾನ್ ಗುರುಗಳು ನಿರೂಪಿಸಿದ ಏಕತೆಯನ್ನು-ನೀಡುವ ಆಧ್ಯಾತ್ಮಿಕ ಬೋಧನೆಗಳ ಅಭ್ಯಾಸದ ಮೂಲಕ ನಮ್ಮ ಮಾನವ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಜಾಗತಿಕ ಶಾಂತಿ, ದಿವ್ಯ ಸಾಮರಸ್ಯ ಮತ್ತು ಸಮೃದ್ಧಿಯನ್ನು ತರುವಂತಹ ಯುಗದತ್ತ ನಾವು ಸಾಗುವಂತಾಗಲಿ ಎಂಬುದೇ ನನ್ನ ಉತ್ಕಟ ಪ್ರಾರ್ಥನೆ.

ಭಗವಂತ ಮತ್ತು ಮಹಾನ್‌ ಗುರುಗಳೆಲ್ಲರ ಬೆಳಕು ಮತ್ತು ಪ್ರೀತಿ ನಿಮ್ಮೆಲ್ಲರನ್ನು ಆಶೀರ್ವದಿಸಿ ಉನ್ನತಿಗೇರಿಸಲಿ,

ಶ್ರೀ ಮೃಣಾಲಿನಿ ಮಾತಾ

ಸಂಘಮಾತಾ ಮತ್ತು ಅಧ್ಯಕ್ಷೆ,
ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್-ರಿಯಲೈಝೇಷನ್‌ ಫೆಲೋಷಿಪ್

ಇದನ್ನು ಹಂಚಿಕೊಳ್ಳಿ