ವೈಎಸ್ಎಸ್/ಎಸ್ಆರ್‌ಎಫ್ ಅಧ್ಯಕ್ಷರಾದ ಸ್ವಾಮಿ ಚಿದಾನಂದಜಿಯವರ ಭಾರತ ಪ್ರವಾಸ ಕಥನ — 2023

April 7, 2023

ವೈಎಸ್ಎಸ್/ಎಸ್ಆರ್‌ಎಫ್‌ನ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರು, ಭಾರತಕ್ಕೆ ಆಗಮಿಸಿರುವರೆಂಬುದನ್ನು ತಿಳಿಸಲು ಅತ್ಯಂತ ಸಂತಸಗೊಂಡಿದ್ದೇವೆ. ಅವರು 2023 ಜನವರಿ 22ರಂದು ನೋಯ್ಡಾ ಆಶ್ರಮವನ್ನು ತಲುಪಿ, ಭಾರತದಲ್ಲಿನ ಒಂದು ತಿಂಗಳ ಪ್ರವಾಸವನ್ನು ಪ್ರಾರಂಭಿಸಿದರು.ಎಸ್ಆರ್‌ಎಫ್‌ನ ಸ್ವಾಮಿ ಕಮಲಾನಂದರು ಅವರ ಜೊತೆಯಲ್ಲಿದ್ದರು.

ಅವರ ವಾಸ್ತವ್ಯದ ಸಮಯದಲ್ಲಿ, ಸ್ವಾಮಿ ಚಿದಾನಂದಜಿಯವರು ಹೈದರಾಬಾದಿನಲ್ಲಿ ನಡೆದ ಐದು ದಿನಗಳ ಪ್ರವಚನಗಳ ಮತ್ತು ಧ್ಯಾನಗಳ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೈಎಸ್ಎಸ್ ಸಂಗಮ 2023 ಫೆಬ್ರವರಿ 12ರಿಂದ 16ರವರೆಗೆ ನೇರವಾಗಿ ಪ್ರಸಾರಗೊಂಡಿತು. ಮತ್ತು ಆ ಕಾರ್ಯಕ್ರಮಗಳು ವೀಕ್ಷಿಸಲು ಇಂದಿಗೂ ಲಭ್ಯ.

ಸ್ವಾಮೀಜಿಯವರು ಭಾರತದ ವಿವಿಧ ಭಾಗಗಳಿಗೆ ಭೇಟಿ ನೀಡಿದ ಫೋಟೋಗಳನ್ನು ಇಲ್ಲಿ ನಿಮ್ಮೊಡನೆ ಹಂಚಿಕೊಳ್ಳಲು ಹರ್ಷಿಸುತ್ತೇವೆ.

ಸಿರಾಂಪುರ ಯಾತ್ರೆಯ ಸ್ಥಳಗಳು

ಹೈದರಾಬಾದ್‌ನಲ್ಲಿದ್ದಾಗ ಸ್ವಾಮಿ ಚಿದಾನಂದಜಿಯವರು, ಪರಮಹಂಸ ಯೋಗಾನಂದರ ಗುರುಗಳಾದ ಸ್ವಾಮಿ ಶ್ರೀ ಯುಕ್ತೇಶ್ವರರಿಗೆ ಸಂಬಂಧಿಸಿದ ಸಿರಾಂಪುರದ ಎರಡು ಯಾತ್ರಾ ಸ್ಥಳಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಯ ಬಗ್ಗೆ ಹರ್ಷ ಭರಿತ ಘೋಷಣೆ ಮಾಡಿದರು.

ಮೊದಲನೆಯದು, ಸ್ವಾಮಿ ಶ್ರೀಯುಕ್ತೇಶ್ವರರ ಸಿರಾಂಪುರದ ಆಶ್ರಮದಿಂದ ಸ್ವಲ್ಪವೇ ದೂರದಲ್ಲಿ, ಗಂಗಾನದಿಯ ತೀರದಲ್ಲಿರುವ ಆಲದ ಮರದ ಕೆಳಗೆ ಅವರು ಮಹಾವತಾರ ಬಾಬಾಜಿಯವರನ್ನು 1894ರಲ್ಲಿ ಭೇಟಿ ಮಾಡಿದ (ಯೋಗಿಯ ಆತ್ಮಕಥ ಯಲ್ಲಿ ನಿರೂಪಿಸಲಾಗಿರುವ) ಜಾಗಕ್ಕೆ ಸಂಬಂಧಿಸಿದುದು.

ವೈಎಸ್ಎಸ್, ಸಿರಾಂಪುರದ ಪುರಸಭೆಯೊಡನೆ ಈ ಪವಿತ್ರ ಆಲದ ಮರದಿಂದ ನದಿಗೆ ಹೋಗುವ ಸ್ಥಳದ ವ್ಯವಸ್ಥೆ ಹಾಗೂ ನಿರ್ವಹಣೆಗಳನ್ನು ವಹಿಸಿಕೊಳ್ಳಲು, ಒಂದು ಒಪ್ಪಂದ ಮಾಡಿಕೊಂಡಿರುತ್ತದೆ. ಆಲದ ಮರದ ಪಕ್ಕದಲ್ಲಿ ಇದ್ದ ಎರಡು ದೊಡ್ಡ ಕಟ್ಟಡಗಳನ್ನು ಸಹ ಸ್ವಾಧೀನ ಪಡಿಸಿಕೊಂಡಿದ್ದು, ಕಾಲಕ್ರಮೇಣ ವೈಎಸ್‌ಎಸ್ ಈ ಪ್ರದೇಶವನ್ನು ಅಭಿವೃದ್ಧಿಪಡಿಸಿ, ದಿವ್ಯಗುರು ಬಾಬಾಜಿಯವರು ಅಲ್ಲಿ ಹರಡಿರುವ ಸ್ಪಂದನಗಳನ್ನು, ಭಕ್ತರು ಅನುಭವಿಸಲು ಸೂಕ್ತವಾದ ಧ್ಯಾನದ ವಾತಾವರಣವನ್ನು ಒದಗಿಸುವ ಅಭಿವೃದ್ಧಿಯ ಯೋಜನೆಗಳನ್ನು ಸಿದ್ಧಪಡಿಸಲಿದೆ.

ಎರಡನೆಯ ಸ್ಥಳ, ಸಿರಾಂಪುರದ ಸ್ವಾಮಿ ಶ್ರೀಯುಕ್ತೇಶ್ವರಜಿಯವರ ಮುಖ್ಯ ಆಶ್ರಮ. ಅಲ್ಲಿಯೇ ಪರಮಹಂಸಜಿಯವರು ಯೋಗಿಯ ಆತ್ಮಕಥೆ ಯಲ್ಲಿ “ಗುರುವಿನ ಆಶ್ರಮದಲ್ಲಿ ಕಳೆದ ವರ್ಷಗಳು” ಅಧ್ಯಾಯದಲ್ಲಿ ತಿಳಿಸಿರುವ ಜೀವನ ರೂಪಾಂತರಗೊಳಿಸಿದ ಆಧ್ಯಾತ್ಮಿಕ ತರಬೇತಿಯನ್ನು ಪಡೆದ ಜಾಗ.

ಅನೇಕ ವರ್ಷಗಳಿಂದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾವು ಒಂದು ಸ್ಮಾರಕ ಮಂದಿರ (ಮೇಲೆ ತೋರಿಸಿರುವ) ವನ್ನು, ಆಶ್ರಮದ ಆಸ್ತಿಯ ಒಂದು ಭಾಗದಲ್ಲಿ ನಿರ್ವಹಿಸುತ್ತಿದೆ. ಈ ಸ್ವಾಮಿ ಯುಕ್ತೇಶ್ವರ ಸ್ಮೃತಿ ಮಂದಿರವು 1977ರಲ್ಲಿ ಶ್ರೀ ಮೃಣಾಲಿನಿ ಮಾತಾರವರಿಂದ, ವೈಎಸ್‌ಎಸ್ ವಜ್ರ ಮಹೋತ್ಸವದ ಅಂಗವಾಗಿ ಲೋಕಾರ್ಪಣೆಗೊಂಡಿತು.

ವೈಎಸ್ಎಸ್ ಸಂಸ್ಥೆಯು ಆಶ್ರಮದ ಸಂಪೂರ್ಣ ಆಸ್ತಿಯ ಒಡೆತನವನ್ನು ಪಡೆದುಕೊಂಡಿದೆ. ಅಂತಿಮವಾಗಿ ಆಶ್ರಮದ ಮೂಲ ಕಟ್ಟಡವನ್ನು ಸಾಧ್ಯವಾದಷ್ಟು ಉಳಿಸಿ, ಆಧ್ಯಾತ್ಮಿಕ ಅನ್ವೇಷಕರಿಗೆ ಪರಮ ಶ್ರೇಷ್ಠ ಗುರುಗಳ ಸ್ಪಂದನಗಳಿಂದ ತುಂಬಿರುವ ಒಂದು ಯಾತ್ರಾ ಸ್ಥಳವು ದೊರಕುವಂತೆ ಮಾಡುವ ಯೋಜನೆಗಳು ಇವೆ.

ಮುಂಬರುವ ದಿನಗಳಲ್ಲಿ, ಸಿರಾಂಪುರದ ಈ ಎರಡು ಪವಿತ್ರ ಯಾತ್ರಾ ಸ್ಥಳಗಳ ಯೋಜನೆಗಳ ವಿವರಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಎದುರು ನೋಡುತ್ತಿದ್ದೇವೆ.

ವೈಎಸ್ಎಸ್ ನೋಯ್ಡಾ ಆಶ್ರಮದಲ್ಲಿ ಸತ್ಸಂಗ

ವೈಎಸ್ಎಸ್/ಎಸ್ಆರ್‌ಎಫ್ ಅಧ್ಯಕ್ಷರು ಹಾಗೂ ಆಧ್ಯಾತ್ಮ ಮುಖ್ಯಸ್ಡರಾದ ಸ್ವಾಮಿ ಚಿದಾನಂದ ಗಿರಿಯವರು, “ಕ್ರಿಯಾ ಯೋಗದ ಪರಿವರ್ತಕ ಶಕ್ತಿ” ಯ ಮೇಲೆ ವೈಎಸ್‌ಎಸ್ ನೋಯ್ಡಾ ಆಶ್ರಮದಲ್ಲಿ, ಫೆಬ್ರವರಿ 26ರಂದು ಪ್ರವಚನ ನೀಡಿದರು. ಈ ಕಾರ್ಯಕ್ರಮದಲ್ಲಿ ಸುಮಾರು1400 ಭಕ್ತರು ಮತ್ತು ಸ್ನೇಹಿತರು ಭಾಗವಹಿಸಿದ್ದರು.

ಸ್ವಾಮೀಜಿಯವರು ಕ್ರಿಯಾಯೋಗದ ಸಂಪೂರ್ಣ ವಿಜ್ಞಾನದ ನಿಯಮಿತ, ನಿಷ್ಠಾವಂತ, ನಿರಂತರ ಅಭ್ಯಾಸವು ಉಂಟುಮಾಡುವ ಪರಿವರ್ತನೆಯ ಬಗ್ಗೆ ಮಾತನಾಡಿದರು.

ಸ್ವಾಮೀಜಿಯವರು ಭಾರತ ಪ್ರವಾಸದ ಕೊನೆಯ ಹಂತ ನೋಯ್ಡಾದಲ್ಲಿರುವುದು.

ನೋಯ್ಡಾದಲ್ಲಿನ ಸ್ವಾಮಿ ಚಿದಾನಂದಜಿಯವರ ಸತ್ಸಂಗದಿಂದ ಆಯ್ದ ಇಣುಕು ನೋಟಗಳು ಇಲ್ಲಿವೆ:

ಯೋಗದಾ ಸತ್ಸಂಗ ಮಠ, ದಕ್ಷಿಣೇಶ್ವರದ ಭೇಟಿ

ಹೈದರಾಬಾದ್‌ನ ಸಂಗಮದಲ್ಲಿ ಭಾಗವಹಿಸಿದ ನಂತರ, ಸ್ವಾಮಿ ಚಿದಾನಂದಜಿಯವರು ದಕ್ಷಿಣೇಶ್ವರದ ಯೋಗದಾ ಸತ್ಸಂಗ ಮಠಕ್ಕೆ ಭೇಟಿ ನೀಡಿದರು. ಅವರು 2023 ಫೆಬ್ರವರಿ 19 ಭಾನುವಾರದಂದು ಒಂದು ವಿಶೇಷ ಸತ್ಸಂಗ ನಡೆಸಿಕೊಟ್ಟರು. ಆ ಕಾರ್ಯಕ್ರಮದ ಕೆಳಗಿರುವ ಫೋಟೋಗಳನ್ನು ಹಂಚಿಕೊಳ್ಳಲು ಹರ್ಷಿಸುತ್ತೇವೆ.

ವೈಎಸ್ಎಸ್ ಸಂಗಮ 2023ನಲ್ಲಿ ಭಾಗವಹಿಸಲು ಹೈದರಾಬಾದ್‌ಗೆ ಭೇಟಿ

ರಾಂಚಿಯ ಯೋಗದಾ ಸತ್ಸಂಗ ಮಠದ ಭೇಟಿಯ ನಂತರ ಸ್ವಾಮಿ ಚಿದಾನಂದಜಿಯವರು ಹೈದರಾಬಾದ್‌ಗೆ ಫೆಬ್ರವರಿ 10,2023 ರಂದು, ಕಾನ್ಹಾ ಶಾಂತಿ ವನಂನಲ್ಲಿ ನಡೆದ ವೈಎಸ್ಎಸ್ ಸಂಗಮ 2023 ರಲ್ಲಿ ಭಾಗವಹಿಸಲು ಆಗಮಿಸಿದರು. ಅವರು ‘ಬದುಕಿನ ಸವಾಲುಗಳನ್ನು ಯಾವ ರೀತಿ ಎದುರಿಸಬಹುದು’ ಎಂಬುದರ ಬಗ್ಗೆ ಗುರೂಜಿಯವರ ಬೋಧನೆಗಳಿಂದ ಆಯ್ದ ಜ್ಞಾನದ ಮುತ್ತುಗಳನ್ನು ಹಂಚಿದರು. ಹಾಗೂ ಭಾಗಿಗಳಿಗೆ ಒಂದು ವಿಶೇಷವಾದ 3 ಗಂಟೆಗಳ ಸಾಮೂಹಿಕ ಧ್ಯಾನವನ್ನು ನಡೆಸಿಕೊಟ್ಟರು. ಫೆಬ್ರವರಿ 16ರಂದು ಸ್ವಾಮೀಜಿಯವರು ಮುಕ್ತಾಯದ ಸತ್ಸಂಗವನ್ನು ನಡೆಸಿಕೊಟ್ಟರು. ಅದರಲ್ಲಿ ಅವರು ಸಂಗಮದ ಅನುಭವವನ್ನು ಯಾವ ರೀತಿ ಕೊಂಡೊಯ್ಯಬಹುದು ಎಂಬುದರ ಬಗ್ಗೆ ಭಕ್ತರಿಗೆ ಸ್ಪೂರ್ತಿ ತುಂಬಿದರು.

ದಯಮಾಡಿ ಈ ಕಾರ್ಯಕ್ರಮದ ಕೆಳಗಿನ ಕೆಲವು ಫೋಟೋಗಳನ್ನು ನೋಡಿ ಆನಂದಿಸಿ.

ಸಂಗಮದಲ್ಲಿ ನೇರ ಪ್ರಸಾರಗೊಂಡ ಎಲ್ಲ ಕಾರ್ಯಕ್ರಮಗಳನ್ನು ವೀಕ್ಷಿಸಲು ದಯಮಾಡಿ ಈ ಕೆಳಗಿರುವ ಬಟನ್ ಮೇಲೆ ಕ್ಲಿಕ್ ಮಾಡಿ.

ವೈಎಸ್‌ಎಸ್ ರಾಂಚಿ ಆಶ್ರಮದಲ್ಲಿ ಸ್ವಾಮಿ ಚಿದಾನಂದಜಿಯವರ ಸತ್ಸಂಗ

ಸ್ವಾಮಿ ಚಿದಾನಂದ ಗಿರಿ, ಅಧ್ಯಕ್ಷರು ಹಾಗೂ ವೈಎಸ್ಎಸ್/ಎಸ್ಆರ್‌ಎಫ್‌ನ ಅಧ್ಯಾತ್ಮಿಕ ಮುಖ್ಯಸ್ಥರು, ವೈಎಸ್ಎಸ್ ರಾಂಚಿ ಆಶ್ರಮದಲ್ಲಿ, ಫೆಬ್ರವರಿ 5ರಂದು ಒಂದು ಸತ್ಸಂಗವನ್ನು ನಡೆಸಿಕೊಟ್ಟರು. ಸುಮಾರು 800 ವೈಎಸ್‌ಎಸ್/ಎಸ್ಆರ್‌ಎಫ್ ಭಕ್ತರು, ಸ್ನೇಹಿತರು ಮತ್ತು ಕುಟುಂಬದವರು ಭಾಗವಹಿಸಿದ್ದರು. ಸ್ವಾಮೀಜಿಯವರು, ಸಭೆಯನ್ನೇ ಮಾರ್ಗದರ್ಶಿತ ಧ್ಯಾನದಲ್ಲಿ ಮುನ್ನಡೆಸಿದರು. ಮತ್ತು ವೈಯಕ್ತಿಕವಾಗಿ ಶುಭ ಕೋರಿದರು. ಮತ್ತು ಭಾಗವಹಿಸಿದವರು ನಿರ್ಗಮಿಸುವಾಗ ಅವರಿಗೆ ಪ್ರಸಾದ ವಿನಿಯೋಗ ಮಾಡಿದರು.

ಯೋಗದಾ ಸತ್ಸಂಗ ಶೈಕ್ಷಣಿಕ ಆವರಣದಲ್ಲಿ ಹೊಸ ಸೌಲಭ್ಯಗಳ ಲೋಕಾರ್ಪಣೆ — ಜಗನ್ನಾಥಪುರ (ರಾಂಚಿ)

ಸ್ವಾಮಿ ಚಿದಾನಂದಜಿಯವರು, ವೈಎಸ್ಎಸ್/ಎಸ್ಆರ್‌ಎಫ್ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರು, ಯೋಗದಾ ಸತ್ಸಂಗ ಶೈಕ್ಷಣಿಕ ಆವರಣ, ಜಗನ್ನಾಥಪುರ, ರಾಂಚಿಯಲ್ಲಿನ ಹೊಸ ಸೌಲಭ್ಯಗಳನ್ನು ಜನವರಿ 29ರಂದು ಲೋಕಾರ್ಪಣೆ ಮಾಡಿದರು. ರಾಂಚಿಯ ಶೈಕ್ಷಣಿಕ ಕ್ಷೇತ್ರದ ಗಣ್ಯ ವ್ಯಕ್ತಿಗಳು, ವೈಎಸ್ಎಸ್ ಸನ್ಯಾಸಿಗಳು ಮತ್ತು ಭಕ್ತರು, ವೈಎಸ್ಎಸ್ ವಿದ್ಯಾ ಸಂಸ್ಥೆಯ ಬೋಧಕ ಸಿಬ್ಬಂದಿ, ಹಾಗೂ ವಿದ್ಯಾರ್ಥಿಗಳು, ಈ ಅವಿಸ್ಮರಣೀಯ ಪ್ರಸಂಗದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ 1100 ಜನರು ಭಾಗವಹಿಸಿದ್ದರು ಮತ್ತು ಸಂಸ್ಥೆಯ ನೂರು ವರ್ಷಗಳಿಗೂ ಮಿಗಿಲಾದ ಇತಿಹಾಸವನ್ನು ಬಿಂಬಿಸುವ ಒಂದು ಸಣ್ಣ ವೀಡಿಯೋ ಪ್ರಸ್ತುತಿಯನ್ನು ಇದು ಒಳಗೊಂಡಿತ್ತು.

ಈ ಅತ್ಯಾಧುನಿಕ ಸೌಲಭ್ಯಗಳನ್ನು, ಪರಮಹಂಸ ಯೋಗಾನಂದಜಿಯವರು ತಮ್ಮ ಮೂಲ ಶಾಲೆಯಲ್ಲಿ ಅಳವಡಿಸಿದ್ದ ಸನಾತನ ಗುರುಕುಲ ತತ್ವಗಳ ಆಧಾರದ ಮೇಲೆ, ಉದಾಹರಣೆಗೆ ಪ್ರಕೃತಿಯ ಮಡಿಲಲ್ಲಿ ವಿದ್ಯಾಭ್ಯಾಸ ಮಾಡುವುದು, ಇಂಥಹುದರ ಮೇಲೆ ಆಧಾರಿತವಾಗಿ, ವಿನ್ಯಾಸಗೊಳಿಸಲಾಗಿದೆ. ಅವು ಶಾಲಾ ಕೊಠಡಿಗಳು, ಪ್ರಯೋಗ ಶಾಲೆಗಳು, ಒಂದು ಸಭಾಂಗಣ ಮತ್ತು ಒಂದು ಆಡಳಿತ ಕಟ್ಟಡ. ಈ ಆಧುನಿಕ ಶಾಲಾ ಆವರಣ, ಸಮಾಜದ ಆರ್ಥಿಕವಾಗಿ ಹಿಂದುಳಿದ ವಿಭಾಗದ ವಿದ್ಯಾರ್ಥಿಗಳಿಂದ ಉಪಯೋಗಿಸಲ್ಪಡುತ್ತದೆ.

ಉದ್ಘಾಟನಾ ಸಮಾರಂಭದ ಈ ಕೆಲವು ಫೋಟೋಗಳನ್ನು ವೀಕ್ಷಿಸಿ.

ರಾಂಚಿಯ ಭೇಟಿ

ಸ್ವಾಮಿ ಚಿದಾನಂದಜಿಯವರು ರಾಂಚಿಯ ಯೋಗದಾ ಸತ್ಸಂಗ ಶಾಖಾ ಮಠಕ್ಕೆ ಜನವರಿ 24, 2023 ರ ಸಂಜೆ ಆಗಮಿಸಿದರು. ಸ್ವಾಮೀಜಿಯವರು ರಾಂಚಿಯಲ್ಲಿ ತಂಗಿರುವ ಸಮಯದಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಅವರ ಆಗಮನದ ಕೆಲವು ಫೋಟೋಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ಭಾರತಕ್ಕೆ ಆಗಮನ

ಸ್ವಾಮೀಜಿಯವರು ದೆಹಲಿ ವಿಮಾನ ನಿಲ್ದಾಣದಲ್ಲಿ ಆಗಮಿಸಿದಾಗಿನ ಮತ್ತು ವೈ ಎಸ್ ಎಸ್ ಆಶ್ರಮದಲ್ಲಿ ಸ್ವಾಗತಿಸಿದ ಕೆಲವು ಫೋಟೋಗಳನ್ನು ನಿಮ್ಮಲ್ಲಿ ಹಂಚಿಕೊಳ್ಳಲು ಹರ್ಷಿಸುತ್ತೇವೆ.

ಇದನ್ನು ಹಂಚಿಕೊಳ್ಳಿ