ಸಕಲ ದುಃಖಗಳಿಂದ ಮುಕ್ತರಾದ ಅನಂತ ಸತ್-ಸ್ವರೂಪವಾಗಿ ನಿಮ್ಮನ್ನು ಶೀಘ್ರವಾಗಿ ಅರಿತುಕೊಳ್ಳುವ ಸಲುವಾಗಿ, ಅವಿರತವಾಗಿ ಧ್ಯಾನಿಸಿ. ದೇಹದ ಸೆರೆಯಾಳಾಗಿರುವುದನ್ನು ನಿಲ್ಲಿಸಿ; ಕ್ರಿಯಾದ ಗುಪ್ತ ಕೀಲಿಕೈಯನ್ನು ಬಳಸಿ, ಚೈತನ್ಯದಲ್ಲಿ ಲೀನವಾಗಲು ಕಲಿಯಿರಿ.
— ಶ್ರೀ ಶ್ರೀ ಲಾಹಿರಿ ಮಹಾಶಯರು ಯೋಗಿಯ ಆತ್ಮಕಥೆ ಕೃತಿಯಲ್ಲಿ ಉಲ್ಲೇಖಿಸಿದಂತೆ
ಶ್ರೀ ಶ್ರೀ ಲಾಹಿರಿ ಮಹಾಶಯರು ಆಧುನಿಕ ಕಾಲದಲ್ಲಿ ಆಧ್ಯಾತ್ಮಿಕ ಸಾಧನೆಯ ಹಾದಿಯಲ್ಲಿರುವ ಆತ್ಮಗಳಿಗೆ ಕ್ರಿಯಾ ಯೋಗ ಪ್ರವರ್ತಕರಾಗಿದ್ದಾರೆ. ಪ್ರಪಂಚದಾದ್ಯಂತ ವೈಎಸ್‌ಎಸ್/ಎಸ್‌ಆರ್‌ಎಫ್ ಭಕ್ತರು ಅವರನ್ನು “ಯೋಗದ ಅವತಾರ” ಅರ್ಥಾತ್ ಯೋಗಾವತಾರ ಎಂದು ಗೌರವಿಸುತ್ತಾರೆ. ಗೃಹಸ್ಥರಾಗಿದ್ದರೂ, ಆಧ್ಯಾತ್ಮಿಕ ಸಾಕ್ಷಾತ್ಕಾರದ ಅತ್ಯುನ್ನತ ಮಟ್ಟವನ್ನು ತಲುಪಿದ ಲಾಹಿರಿ ಮಹಾಶಯರು, ಒಬ್ಬ ವ್ಯಕ್ತಿ ತನ್ನ ಲೌಕಿಕ ಜವಾಬ್ದಾರಿಗಳನ್ನು ಪೂರೈಸುತ್ತಲೇ ಆತ್ಮ ಸಾಕ್ಷಾತ್ಕಾರದ ಮಾರ್ಗವನ್ನು ಅನುಸರಿಸಬಹುದು ಎಂಬುದನ್ನು ನಿರೂಪಿಸಿದವರಾಗಿದ್ದಾರೆ.
ಲಾಹಿರಿ ಮಹಾಶಯರು ತಮ್ಮ ಮರ್ತ್ಯ ರೂಪವನ್ನು ತ್ಯಜಿಸಿ, ಸೆಪ್ಟೆಂಬರ್ 26, 1895 ರಂದು ಮಹಾಸಮಾಧಿಯನ್ನು ಪ್ರವೇಶಿಸಿದರು – ಇದು ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ ಯೋಗಿಯು ದೇಹದಿಂದ ಹೊರಬರುವ ಅಂತಿಮ ಪ್ರಜ್ಞಾಪೂರ್ವಕ ನಿರ್ಗಮನವಾಗಿದೆ. ಈ ದಿನವನ್ನು ಸ್ಮರಿಸಲು, ವೈಎಸ್‌ಎಸ್ ಸನ್ಯಾಸಿಯೊಬ್ಬರು ಶುಕ್ರವಾರ, ಸೆಪ್ಟೆಂಬರ್ 26 ರಂದು ಆನ್‌ಲೈನ್ ಧ್ಯಾನವನ್ನು ನಡೆಸಿ ಕೊಡುತ್ತಾರೆ.
ಈ ಕಾರ್ಯಕ್ರಮವು ಪ್ರಾರ್ಥನೆ, ಸ್ಫೂರ್ತಿದಾಯಕ ವಾಚನ, ನಂತರ ಕೀರ್ತನೆಗಳ ಗಾಯನ, ಮತ್ತು ಒಂದು ಅವಧಿಯ ಧ್ಯಾನವನ್ನು ಒಳಗೊಂಡಿರುತ್ತದೆ. ಇದು ಪರಮಹಂಸ ಯೋಗಾನಂದರ ಉಪಶಮನಕಾರಿ ತಂತ್ರ ಮತ್ತು ಸಮಾಪ್ತಿ ಪ್ರಾರ್ಥನೆಯೊಂದಿಗೆ ಮುಕ್ತಾಯಗೊಳ್ಳುತ್ತದೆ.
ದಯವಿಟ್ಟು ಗಮನಿಸಿ: ಈ ಕಾರ್ಯಕ್ರಮವು ಶನಿವಾರ, ಸೆಪ್ಟೆಂಬರ್ 27, ರಾತ್ರಿ 10 ಗಂಟೆಯ (ಭಾರತೀಯ ಕಾಲಮಾನ) ವರೆಗೆ ವೀಕ್ಷಣೆಗೆ ಲಭ್ಯವಿರುತ್ತದೆ.
ಈ ಶುಭ ಸಂದರ್ಭದಲ್ಲಿ, ವಿವಿಧ ಆಶ್ರಮಗಳು, ಕೇಂದ್ರಗಳು ಮತ್ತು ಮಂಡಳಿಗಳು ಭಕ್ತರಿಗಾಗಿ ನೇರ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಈ ಕಾರ್ಯಕ್ರಮಗಳಲ್ಲಿ ನೀವೂ ಪಾಲ್ಗೊಳ್ಳಬೇಕೆಂದು ನಾವು ಕೋರುತ್ತೇವೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ವೈಎಸ್‌ಎಸ್ ಕೇಂದ್ರವನ್ನು ಸಂಪರ್ಕಿಸಿ.

ಈ ವಿಶೇಷ ದಿನದಂದು, ನೀವು ದೇಣಿಗೆ ನೀಡಲು ಇಚ್ಛಿಸಿದರೆ, ಕೆಳಗಿನ ಕೊಂಡಿಯನ್ನು ಒತ್ತುವ ಮೂಲಕ ಹಾಗೆ ಮಾಡಲು ಸ್ವಾಗತವಿದೆ. ನಿಮ್ಮ ಉದಾರ ಕೊಡುಗೆಗಳು ಕ್ರಿಯಾ ಯೋಗದ ಬೋಧನೆಗಳನ್ನು ಪ್ರಾಮಾಣಿಕ ಅನ್ವೇಷಕರಿಗೆ ಪ್ರಸಾರ ಮಾಡಲು ಸಹಾಯ ಮಾಡುತ್ತವೆ.