ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಸೇಷನ್ ಫೆಲೋಶಿಪ್‌ನ ಮೂರನೆಯ ಅಧ್ಯಕ್ಷರು ಮತ್ತು ಸಂಘಮಾತೆಯಾಗಿದ್ದ ಶ್ರೀ ದಯಾ ಮಾತಾ ಅವರನ್ನು 1992ರಲ್ಲಿ ಸಂದರ್ಶಿಸಲಾಯಿತು. 1993ರ ಜನವರಿ 5ರಂದು ಬರಲಿದ್ದ ಪರಮಹಂಸ ಯೋಗಾನಂದರ ಜನ್ಮ ಶತಮಾನೋತ್ಸವದ ನಿರೀಕ್ಷೆಯಲ್ಲಿ, ಅವರ ಜೀವನ ಮತ್ತು ಉದ್ದೇಶದ ಕುರಿತು ಅನೇಕ ಪ್ರಶ್ನೆಗಳನ್ನು ಕೇಳಲಾಯಿತು. ಅವರ ಉತ್ತರಗಳು 1993ರಲ್ಲಿ, ಆ ವಾರ್ಷಿಕೋತ್ಸವವನ್ನು ಆಚರಿಸುವ ಯೋಗದಾ ಸತ್ಸಂಗ ಪತ್ರಿಕೆಯ ವಿಶೇಷ ಸಂಚಿಕೆಗಳಲ್ಲಿ ಪ್ರಕಟವಾದವು. ಆ ಉತ್ತರಗಳ ಸಂಕಲನವನ್ನು, ಶ್ರೀ ದಯಾ ಮಾತಾ ಅವರ ಪ್ರವಚನಗಳ ಮೂರನೆಯ ಸಂಗ್ರಹವಾದ, ಮುಂಬರುವ ಜರ್ನಿ ವಿತ್ ಪರಮಹಂಸ ಯೋಗಾನಂದದಲ್ಲಿ ಒಂದು ಅಧ್ಯಾಯವಾಗಿ ಪ್ರಕಟಿಸಲಾಗುವುದು. ಇಲ್ಲಿ, ಅವರಿಗೆ ಕೇಳಿದ ಒಂದು ಪ್ರಶ್ನೆ ಮತ್ತು ಅವರು ನೀಡಿದ ಆಳವಾದ ಪ್ರೋತ್ಸಾಹದಾಯಕ ಉತ್ತರವನ್ನು ನಾವು ಪ್ರಸ್ತುತಪಡಿಸುತ್ತೇವೆ.
ಪ್ರಶ್ನೆ: ಸಮತೋಲಿತ ಜೀವನದ ಪರಿಕಲ್ಪನೆ — ಧ್ಯಾನ ಮತ್ತು ಸರಿಯಾದ ಚಟುವಟಿಕೆ — ಸೆಲ್ಫ್-ರಿಯಲೈಸೇಷನ್ ಫೆಲೋಶಿಪ್ [ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ]ನ ಒಂದು ಪ್ರಮುಖ ತತ್ತ್ವವೆಂದು ತೋರುತ್ತದೆ. ಪರಮಹಂಸ ಯೋಗಾನಂದರು ಖಂಡಿತವಾಗಿಯೂ ಆ ಆದರ್ಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಅವರು ದೇಶದಾದ್ಯಂತ ಪ್ರವಾಸ ಮಾಡಿದರು, ಅನೇಕ ನಗರಗಳಲ್ಲಿ ಉಪನ್ಯಾಸಗಳನ್ನು ನೀಡಿದರು ಹಾಗೂ ಸಾವಿರಾರು ಜನರನ್ನು ಭೇಟಿಯಾದರು. ಆದರೂ ಅವರು ದೈವಿಕ ಸಂಯೋಗದ ಆಂತರಿಕ ಜೀವನವನ್ನು ನಡೆಸಿದರು. ಇಂದಿನ ತೀವ್ರ ಒತ್ತಡಗಳ ನಡುವೆಯೂ ಸಾಮಾನ್ಯ ವ್ಯಕ್ತಿಗೆ ಇಂತಹ ಜೀವನ ನಡೆಸುವುದು ಸಾಧ್ಯವೇ?
ಪರಮಹಂಸ ಯೋಗಾನಂದರ ಸಂದೇಶದ ಒಂದು ಭಾಗವೆಂದರೆ, ಭಗವಂತನ ಅನುಭವವು ಆಶ್ರಮಗಳಲ್ಲಿ ಮತ್ತು ಮಠಗಳಲ್ಲಿ ವಾಸಿಸುವವರಿಗೆ ಮಾತ್ರ ಮೀಸಲಾಗಿಲ್ಲ. ಇದು ಇಡೀ ಮಾನವಕುಲಕ್ಕೇ ಉದ್ದೇಶಿಸಿದ್ದಾಗಿದೆ. ಹಿಮಾಲಯದ ಗುಹೆಗೆ ನೀವು ಹಾರಬೇಕಾಗಿಲ್ಲ! ನೀವು ಎಲ್ಲಿದ್ದರೂ ಆತನನ್ನು ಕಾಣಬಹುದು. ನಿಮ್ಮ ಜೀವನವು ಹೆಚ್ಚು ಅಸ್ತವ್ಯಸ್ತವಾಗಿದ್ದಷ್ಟೂ, ನೀವು ಆತನನ್ನು ಹುಡುಕುವ ಅಗತ್ಯ ಬಹಳವಾಗಿರುತ್ತದೆ.
ನೀವು ನಿಮ್ಮ ಸಕ್ರಿಯ ಜೀವನವನ್ನು ಧ್ಯಾನಕ್ಕಾಗಿ ಒಂದು ಸಮಯದೊಂದಿಗೆ ಸಮತೋಲನಗೊಳಿಸಿದರೆ, ಮಹಾನ್ ಸಂತರು ಮತ್ತು ಗುರುಗಳಂತೆ ನೀವು ದೇವರನ್ನು ನಿಮ್ಮದಾಗಿಸಿಕೊಳ್ಳಬಹುದು. ನಿಮ್ಮ ಚಟುವಟಿಕೆಗಳ ಸಮಯದಲ್ಲಿ, ಧ್ಯಾನದಲ್ಲಿ ಸಾಧಿಸಿದ ಆತನ ಉಪಸ್ಥಿತಿಯ ಅರಿವನ್ನು ಹಿಡಿದಿಟ್ಟುಕೊಳ್ಳುವುದು ಮುಖ್ಯ. ಇದರರ್ಥ ನೀವು ಏನೇ ಮಾಡುತ್ತಿದ್ದರೂ, ನೀವು ಅವನನ್ನು ಮರೆಯದಿರಲು ಪ್ರಯತ್ನಿಸುವುದು. ನೀವು ಅವನನ್ನು ನಿಮ್ಮ ಜೀವನದಲ್ಲಿ ತಂದು, ಅವನನ್ನು ನಿಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳುವುದು. ಇದರಿಂದ ಅವನು ಬದುಕಿನ ಏಕೈಕ ತತ್ವವಾಗುತ್ತಾನೆ, ನಿಮ್ಮ ಎಲ್ಲಾ ಆಲೋಚನೆಗಳು ಮತ್ತು ಕಾರ್ಯಗಳ ಮೂಲಕ ಹರಿಯುವ ಮೌನ ಪ್ರೀತಿಯಾಗುತ್ತಾನೆ.
ದೇವರನ್ನು ಅರಸಲು ಪ್ರಪಂಚವನ್ನು ತ್ಯಜಿಸುವುದು ಅಗತ್ಯವಿಲ್ಲದಿದ್ದರೂ, ಜೀವನದ ವೇಗವನ್ನು ಸ್ವಲ್ಪ ನಿಧಾನಗೊಳಿಸಬೇಕಾದ ಅಗತ್ಯವಿದೆ — ಹೆಚ್ಚು ಶಾಂತಿಯುತ ಹಾಗೂ ಅಂತರ್ಮುಖಿ ಜೀವನವನ್ನು ನಡೆಸಲು ಪ್ರಯತ್ನಿಸಬೇಕು. ಈ ಜಗತ್ತಿನಲ್ಲಿ ನಾವು ಎಷ್ಟೊಂದು ಉದ್ವಿಗ್ನ ಸ್ಥಿತಿಯಲ್ಲಿದ್ದೇವೆ ಎಂಬುದು ನಮಗೆ ಅರಿವಾಗುವುದಿಲ್ಲವೆಂದು ನನಗೆ ಅನಿಸುತ್ತದೆ. ಕೆಲಸಗಳು ಒಂದರ ಮೇಲೊಂದರಂತೆ ಸೇರುತ್ತಾ ಹೋದಾಗ — ಅತಿಯಾದ ಜವಾಬ್ದಾರಿಗಳು, ಅತಿಯಾದ ಒತ್ತಡ — ಜನರು, “ಇದು ಅಸಾಧ್ಯ!” ಎಂದು ಭಾವಿಸಲಾರಂಭಿಸುತ್ತಾರೆ. ಆಗ ನೀವು ನಿಮಗೆ ನೀವೇ, “ಶಾಂತವಾಗಿರು,” ಎಂದು ಹೇಳಿಕೊಳ್ಳಬೇಕು. ನಂತರ ಎಲ್ಲವನ್ನೂ ಬಿಟ್ಟುಬಿಡಿ. ಶಾಂತವಾಗಿರಿ. ನನ್ನ ಸ್ವಂತ ಜೀವನದಲ್ಲಿ, ಉದ್ವಿಗ್ನತೆಗೆ ಒಳಗಾಗಲು ಅವಕಾಶ ನೀಡುವುದಕ್ಕಿಂತ, ಈ ತತ್ತ್ವವನ್ನು ಆಚರಣೆಗೆ ತರಲು ಪ್ರಯತ್ನಿಸುವುದರಿಂದ ನಾನು ಇನ್ನೂ ಹೆಚ್ಚಿನದನ್ನು ಸಾಧಿಸಬಲ್ಲೆ ಎಂಬುದನ್ನು ಕಂಡಿದ್ದೇನೆ. ಉದ್ವಿಗ್ನಗೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ; ಅದು ನಿಮ್ಮನ್ನು ನರಗಳ ದೌರ್ಬಲ್ಯಕ್ಕೆ ತಳ್ಳುತ್ತದೆ.
ನೀವು ದೇವರನ್ನು ಅರಸುತ್ತಿರುವಾಗ, ಯಾವುದೇ ಆತುರ, ಆತುರ, ಆತುರದ ಭಾವನೆ ಇರಬಾರದು. ನೀವು ಧ್ಯಾನಕ್ಕೆ ಆತುರದ ಮನೋಭಾವವನ್ನು ತೆಗೆದುಕೊಂಡು ಹೋದರೆ, ದೇವರ ಉಪಸ್ಥಿತಿಯನ್ನು ಅನುಭವಿಸುವ ಬಗ್ಗೆ ಮರೆತುಬಿಡಬಹುದು. ನೀವು ಇಪ್ಪತ್ತು ವರ್ಷಗಳ ಕಾಲ ಪ್ರತಿದಿನ ಹಾಗೆ ಧ್ಯಾನ ಮಾಡಿದರೂ ಎಲ್ಲಿಯೂ ತಲುಪಲಾರಿರಿ. ನೀವು ಕೇವಲ ಧ್ಯಾನದ ಕ್ರಿಯೆಗಳನ್ನು ಮಾಡುತ್ತಿದ್ದೀರಿ. ನೀವು ನಿಧಾನವಾಗಲು ಮತ್ತು ನಿಮ್ಮ ಪ್ರೀತಿಯ ಗಮನವನ್ನು ದೇವರಿಗೆ ನೀಡಲು ಕಲಿಯಬೇಕು. ಅದು ಬಹಳ ಮುಖ್ಯ.
ಆಹಾರವಿಲ್ಲದೆ, ನಿದ್ರೆಯಿಲ್ಲದೆ ಅಥವಾ ಅನಿವಾರ್ಯವೆಂದು ನಾವು ಭಾವಿಸುವ ಇತರ ಅವಶ್ಯಕತೆಗಳಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ನಾವು ಭಾವಿಸುತ್ತೇವೆ, ಆದ್ದರಿಂದ ಅವೆಲ್ಲಕ್ಕೂ ಸಮಯವನ್ನು ಕಂಡುಕೊಳ್ಳುತ್ತೇವೆ. ಅದೇ ರೀತಿ, ಭಗವಂತನಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ ಎಂಬುದನ್ನು ನಾವು ಅರಿಯಬೇಕು — ಆತನೇ ನಮ್ಮ ಮನಸ್ಸುಗಳಿಗೆ, ನಮ್ಮ ದೇಹಗಳಿಗೆ, ನಮ್ಮೆಲ್ಲ ಚಟುವಟಿಕೆಗಳಿಗೆ ಶಕ್ತಿಯನ್ನು ಒದಗಿಸುತ್ತಿರುವವನು. ನಾವು ಆತನನ್ನು ನಿರ್ಲಕ್ಷಿಸಿದರೆ, ನಮ್ಮ ಜೀವನದ ಸೃಷ್ಟಿಕರ್ತ ಮತ್ತು ಪೋಷಕನಾಗಿರುವ ಆತನಿಂದ ನಮ್ಮನ್ನು ನಾವು ಬೇರ್ಪಡಿಸಿಕೊಂಡಂತೆ.
ಕೆಲಸಕ್ಕೆ ಒಂದು ಸಮಯವಿದೆ; ಅಂತೆಯೇ ಧ್ಯಾನಕ್ಕೆ ಒಂದು ಸಮಯವಿದೆ. ದೇವರ ಸೇವೆಗೆ ನಾವು ತುಂಬಾ ಸಕ್ರಿಯರಾಗಿರಬೇಕು ಎಂದು ಗುರೂಜಿ ನಮಗೆ ಕಲಿಸಿದರು; ಆದರೆ ಕೆಲಸ ಮಾಡುವಾಗ, ಆಗಾಗ್ಗೆ ನಿಲ್ಲಿಸಿ, “ನನ್ನ ಪ್ರಜ್ಞೆ ಎಲ್ಲಿದೆ? ನನ್ನ ಮನಸ್ಸು ಮೌನವಾಗಿ ಅಂತರಾತ್ಮನಾಗಿರುವ ದೇವರನ್ನು ನೋಡುತ್ತಿದೆಯೇ, ಅಥವಾ ಈ ಬಾಹ್ಯ ವಿಷಯಗಳಲ್ಲಿ ಕಳೆದುಹೋಗಿದೆಯೇ?” ಎಂದು ನಮ್ಮನ್ನು ನಾವೇ ಕೇಳಿಕೊಳ್ಳಬೇಕು. ನೀವು ಧ್ಯಾನ ಮಾಡಿ, ನಂತರ ಕಾರ್ಯದಲ್ಲಿ ಮನಸ್ಸನ್ನು ದೈವದಲ್ಲಿ ಕೇಂದ್ರೀಕರಿಸಲು ಪ್ರಯತ್ನಿಸಿದರೆ, ನಿಮ್ಮ ಜೀವನದಲ್ಲಿ ಸಮತೋಲನವನ್ನು ನೀವು ಸ್ವಯಂಚಾಲಿತವಾಗಿ ವ್ಯಕ್ತಪಡಿಸಲು ಪ್ರಾರಂಭಿಸುತ್ತೀರಿ. ಮತ್ತು ನೀವು ಶಾಂತಿಯುತ ಮಾನವರಾಗಿ ರೂಪುಗೊಳ್ಳುತ್ತೀರಿ — ಭಾವನೆಗಳಿಂದ ಕಾರ್ಯನಿರ್ವಹಿಸದೆ, ಆಂತರಿಕ ಶಾಂತಿಯ ಆಳವಾದ ಸ್ಥಿತಿಯಿಂದ ಕಾರ್ಯನಿರ್ವಹಿಸುತ್ತೀರಿ.
ವೈಎಸ್‌ಎಸ್/ಎಸ್‌ಆರ್‌ಎಫ್‌ನ ಮೂರನೇ ಅಧ್ಯಕ್ಷರು ಮತ್ತು ಸಂಘಮಾತೆಯಾದ ಶ್ರೀ ದಯಾ ಮಾತಾ ಅವರ ಪ್ರೇರಣಾದಾಯಕ ಜೀವನದ ಬಗ್ಗೆ ತಿಳಿದುಕೊಳ್ಳಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ — ಅದು ಪ್ರೇಮ, ವಿನಯ ಮತ್ತು ದೇವರು ಹಾಗೂ ಅವರ ಗುರು ಪರಮಹಂಸ ಯೋಗಾನಂದರಿಗೆ ಸಮರ್ಪಿತ ಸೇವೆಯ ಜೀವನ.




















