ಮಹಾವತಾರ ಬಾಬಾಜಿಯವರ ಗುಹೆ – ದ್ವಾರಾಹತ್

ಉತ್ತರಾಖಂಡ
ಮಹಾವತಾರ ಬಾಬಾಜಿಯವರ ಗುಹೆ

ತಾಳ್ಮೆಯಿಂದ ತಿಂಗಳು ತಿಂಗಳೂ ವರ್ಷ ವರ್ಷವೂ ನಿನ್ನನ್ನೇ ಕಾವಲು ಕಾಯುತ್ತಾ ಈ ನಿರ್ದಿಷ್ಟ ದಿನಕ್ಕಾಗಿ ಎದುರು ನೋಡುತ್ತಿದ್ದೆ. ಈಗ ಮತ್ತೆ ನೀನು ನನ್ನಲ್ಲಿಗೆ ಬಂದೆ! ಇದೋ ನೀನಂದು ಪ್ರೀತಿಸುತ್ತಿದ್ದ ನಿನ್ನ ಗುಹೆ. ನಿನಗಾಗಿ ಇದನ್ನು ಯಾವಾಗಲೂ ನಿರ್ಮಲವಾಗಿ ಸಿದ್ಧವಾಗಿ ಇಟ್ಟಿದ್ದೇನೆ.

— ಯೋಗಿಯ ಆತ್ಮಕಥೆ ಕೃತಿಯಲ್ಲಿ ಲಾಹಿರಿ ಮಹಾಶಯರಿಗೆ ಮಹಾವತಾರ ಬಾಬಾಜಿಯವರ ನುಡಿ

1861ರಲ್ಲಿ, ಹಿಮಾಲಯದ ಕುಮಾವೂನ್ ಪ್ರದೇಶದಲ್ಲಿರುವ ಸುಂದರವಾದ ದುನಾಗಿರಿ ಪರ್ವತಗಳ ಮಡಿಲಿನ ಒಂದು ಸಣ್ಣ ಗುಹೆಯಲ್ಲಿ, ಆಧುನಿಕ ಯುಗದ ಆಧ್ಯಾತ್ಮಿಕ ಇತಿಹಾಸದಲ್ಲಿ ಮಹತ್ವದ ತಿರುವನ್ನು ಗುರುತಿಸಿದ ಒಂದು ದಿವ್ಯ ಘಟನೆಯು ಸಂಭವಿಸಿತು. ಮಹಾನ್ ಅಮರ ಯೋಗಿ ಹಾಗೂ ಅವಿನಾಶಿ ಗುರುಗಳಾದ ಮಹಾವತಾರ ಬಾಬಾಜಿಯವರು, ತಮ್ಮ ಪರಮ ಶಿಷ್ಯರಾದ ಲಾಹಿರಿ ಮಹಾಶಯರಿಗೆ ಈ ಪವಿತ್ರ ಗುಹೆಯಲ್ಲಿ ಕ್ರಿಯಾಯೋಗದ ಪ್ರಾಚೀನ ವಿಜ್ಞಾನದಲ್ಲಿ ದೀಕ್ಷೆ ನೀಡಿದರು. ಈ ಮೂಲಕ, ಮಾನವ ಪ್ರಜ್ಞೆಯ ಉನ್ನತಿಗಾಗಿ ಆತ್ಮಸಾಕ್ಷಾತ್ಕಾರದ ಪ್ರಾಚೀನ ತಂತ್ರವನ್ನು ಪುನರುಜ್ಜೀವನಗೊಳಿಸಿದರು.

ಮಹಾವತಾರ ಬಾಬಾಜಿಯವರ ಗುಹೆ
ಮಹಾವತಾರ ಬಾಬಾಜಿಯವರ ಗುಹೆ

ಮಹಾವತಾರ್ ಬಾಬಾಜಿ ಮತ್ತು ಲಾಹಿರಿ ಮಹಾಶಯ ಅವರ ಆಶೀರ್ವಾದಗಳು ಇನ್ನೂ ಈ ಪವಿತ್ರ ಗುಹೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಿಸಿವೆ. ಎಲ್ಲಾ ಕ್ರಿಯಾಯೋಗಿಗಳ ಪರಂಪರೆಯು ಈ ಘಟನೆಯೊಂದಿಗೆ ಬೆಸೆದುಕೊಂಡಿದೆ.

ಸತ್ಯಾನ್ವೇಷಿಗಳಿಗೆ ಒಂದು ತೀರ್ಥಯಾತ್ರೆಯ ಸ್ಥಳ

ಮಹಾವತಾರ ಬಾಬಾಜಿಯವರ ಗುಹೆಯ ಪವಿತ್ರ ಸ್ಥಳವು ಪ್ರಪಂಚದಾದ್ಯಂತದ ಸತ್ಯಾನ್ವೇಷಿಗಳಿಗೆ ಒಂದು ದಾರಿದೀಪವಾಗಿದೆ.

ಗುಹೆಯ ಸಮೀಪದಲ್ಲಿಯೇ, ಮಹಾವತಾರ ಬಾಬಾಜಿಯವರ ಗೌರವಾರ್ಥ ವೈಎಸ್ಎಸ್ ‘ಸ್ಮೃತಿ ಭವನ’ ಎಂಬ ಒಂದು ಸಣ್ಣ ಮಂದಿರವನ್ನೂ ನಿರ್ಮಿಸಿದೆ. ಈ ಪವಿತ್ರ ಯಾತ್ರಾಸ್ಥಳಕ್ಕೆ ಭೇಟಿ ನೀಡುವ ಭಕ್ತರಿಗೆ ಇದು ಸ್ಮರಣೆ ಮತ್ತು ಧ್ಯಾನದಲ್ಲಿ ತೊಡಗಿಕೊಳ್ಳಲು ಇರುವ ಒಂದು ತಾಣವಾಗಿದೆ.

ಅನೇಕ ಸಂದರ್ಶಕರಿಗೆ, ಈ ತೀರ್ಥಯಾತ್ರೆಗಳು ಮಹಾವತಾರ ಬಾಬಾಜಿಯವರ ಹಾಗೂ ಕ್ರಿಯಾಯೋಗದ ಪ್ರಾಚೀನ ವಿಜ್ಞಾನದ ಕುರಿತು ಮತ್ತಷ್ಟು ತಿಳಿದುಕೊಳ್ಳಲು ಒಂದು ಅವಕಾಶವಾಗಿವೆ. ಈ ಮಹಾನ್ ಗುರುವಿನ ಮಾರ್ಗದರ್ಶನದಲ್ಲಿ, ಪರಮಹಂಸ ಯೋಗಾನಂದರ ಮೂಲಕ ಹಾಗೂ ವೈಎಸ್ಎಸ್/ಎಸ್ಆರ್‌ಎಫ್ ಗುರುಪರಂಪರೆಯ ಮೂಲಕ, ಈ ಪ್ರಾಚೀನ ವಿಜ್ಞಾನವು ಆಧುನಿಕ ಯುಗದಲ್ಲಿ ಪುನರುಜ್ಜೀವನಗೊಂಡು ವಿಶ್ವದಾದ್ಯಂತ ಪ್ರಸಾರಗೊಂಡಿತು.

ಗಣ್ಯ ವ್ಯಕ್ತಿಗಳು ಮತ್ತು ಉನ್ನತ ಅಧಿಕಾರಿಗಳ ಭೇಟಿಗಳು

ನಮ್ಮ ಪ್ರೀತಿಯ ಗುರುದೇವರ ಯೋಗಿಯ ಆತ್ಮಕಥೆ ಕೃತಿಯ ಮೂಲಕ ಹಾಗೂ ಅಂತರ್ಜಾಲ ಮತ್ತು ಆನ್‌ಲೈನ್ ಮಾಧ್ಯಮಗಳ ಮೂಲಕ ಹೆಚ್ಚು ಹೆಚ್ಚು ಜನರು ಮಹಾವತಾರ ಬಾಬಾಜಿಯವರ ಬಗ್ಗೆ ತಿಳಿದುಕೊಳ್ಳುತ್ತಿರುವಂತೆ, ಈ ಪವಿತ್ರ ಸ್ಥಳಗಳಿಗೆ ತೀರ್ಥಯಾತ್ರೆ ಕೈಗೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕೆಲವೊಮ್ಮೆ ಬಸ್ಸುಗಳಲ್ಲಿ ತಂಡೋಪತಂಡವಾಗಿ ಆಗಮಿಸುವ ಈ ಸಂದರ್ಶಕರಲ್ಲಿ ಗಣ್ಯ ವ್ಯಕ್ತಿಗಳು ಮತ್ತು ಉನ್ನತ ಅಧಿಕಾರಿಗಳೂ ಸೇರಿದ್ದಾರೆ. ಅವರೆಲ್ಲರೂ ಆ ಮಹಾನ್ ಅಮರ ಗುರುವಿನ ಆಶೀರ್ವಾದವನ್ನು ಪಡೆಯಲು ಈ ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತಾರೆ.

ಭೇಟಿ ಯೋಜಿಸಿ

ಹಿಮಾಲಯದ ಋತುಗಳು ಮತ್ತು ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಮಹಾವತಾರ ಬಾಬಾಜಿಯವರ ಗುಹೆಯು ನಿಗದಿತ ಸಮಯಗಳಲ್ಲಿ ಭಕ್ತರಿಗಾಗಿ ತೆರೆದಿರುತ್ತದೆ.

  • ಬೇಸಿಗೆಯ ಸಮಯ (ಮಾರ್ಚ್–ಸೆಪ್ಟೆಂಬರ್): ಬೆಳಿಗ್ಗೆ 9:00 ರಿಂದ ಸಂಜೆ 4:00
  • ಚಳಿಗಾಲದ ಸಮಯ (ಅಕ್ಟೋಬರ್–ಫೆಬ್ರವರಿ): ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 3:00


ಬಾಬಾಜಿಯವರ ಗುಹೆಗೆ ಭೇಟಿ ನೀಡುವುದರೊಂದಿಗೆ ವೈಎಸ್ಎಸ್ ದ್ವಾರಹಾತ್ ಆಶ್ರಮದಲ್ಲಿಯೂ ತಂಗಿರಿVisit Mahavatar Babaji's Cave - Stay at YSS Dwarahat Ashram

ವೈಎಸ್ಎಸ್/ಎಸ್ಆರ್‌ಎಫ್ ಪಾಠಗಳ ವಿದ್ಯಾರ್ಥಿಗಳು, ಮಹಾವತಾರ ಬಾಬಾಜಿಯವರ ಗುಹೆಗೆ ಕೈಗೊಳ್ಳುವ ತಮ್ಮ ತೀರ್ಥಯಾತ್ರೆಯ ಜೊತೆಗೆ ವೈಎಸ್ಎಸ್ ದ್ವಾರಹಾತ್ ಆಶ್ರಮದಲ್ಲಿ ತಂಗಬಹುದು ಅಥವಾ ಆಶ್ರಮಕ್ಕೆ ಭೇಟಿ ನೀಡಬಹುದು.

ದ್ವಾರಹಾತ್‌ನಿಂದ ಸುಮಾರು 1.5 ಕಿ.ಮೀ. ದೂರದಲ್ಲಿರುವ ಈ ಆಶ್ರಮವು ಭಕ್ತರಿಗೆ ಶಾಂತಿಯುತ ಆಧ್ಯಾತ್ಮಿಕ ನೆಲೆಯಾಗಿದೆ. ಗುಹೆಗೆ ತೆರಳುವ ಸಮಯ, ಮಾರ್ಗಯೋಜನೆ ಮತ್ತು ಪ್ರಯಾಣಕ್ಕೆ ಅಗತ್ಯವಾದ ಸಾಮಾನ್ಯ ಸಿದ್ಧತೆಗಳ ಕುರಿತು ಇದು ಮಾರ್ಗದರ್ಶನ ನೀಡುತ್ತದೆ. ಇದರಿಂದ ಭಕ್ತರು ಸುರಕ್ಷತೆ, ಭಕ್ತಿ ಮತ್ತು ಪೂರ್ಣ ಎಚ್ಚರಿಕೆಯೊಂದಿಗೆ ಈ ಪ್ರಯಾಣವನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.ಅನೇಕರಿಗೆ, ಆಶ್ರಮದಲ್ಲಿನ ಅನುಭವವು ಈ ತೀರ್ಥಯಾತ್ರೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿಸುತ್ತದೆ. ಪರ್ವತದ ಮೇಲಿರುವ ಗುಹೆಗೆ ಏರುವ ಮೊದಲು ಅಂತರಂಗವನ್ನು ಆಧ್ಯಾತ್ಮಿಕವಾಗಿ ಸಿದ್ಧಗೊಳಿಸಿಕೊಳ್ಳಲು ಹಾಗೂ ಹಿಂದಿರುಗಿದ ಬಳಿಕ ಅಲ್ಲಿನ ಆಧ್ಯಾತ್ಮಿಕ ಕಂಪನಗಳನ್ನು ಪ್ರಶಾಂತವಾಗಿ ಮನನ ಮಾಡಿಕೊಳ್ಳಲು ಆಶ್ರಮವು ಅವಕಾಶ ಕಲ್ಪಿಸುತ್ತದೆ.

ನಮ್ಮನ್ನು ಸಂಪರ್ಕಿಸಿ

ಮಹಾವತಾರ ಬಾಬಾಜಿಯವರ ಗುಹೆ – ದ್ವಾರಾಹತ್
Pandukholi Mountain
Near Kukuchina Village
Dwarahat - 263653
Almora
Uttarakhand
India

ತಲುಪುವುದು ಹೇಗೆ

ಬಾಬಾಜಿಯವರ ಗುಹೆಯು ಸಮುದ್ರ ಮಟ್ಟದಿಂದ ಸುಮಾರು 2,000 ಮೀ. (6,500 ಅಡಿ) ಎತ್ತರದಲ್ಲಿದೆ. ಉತ್ತರಾಖಂಡದಲ್ಲಿರುವ ಸಮೀಪದ ಪಟ್ಟಣವಾದ ದ್ವಾರಹಾತ್, ಈ ಪವಿತ್ರ ಸ್ಥಳಕ್ಕೆ ಪ್ರಯಾಣಿಸುವ ಹೆಚ್ಚಿನ ಯಾತ್ರಿಕರು ಮತ್ತು ಸಾಧಕರಿಗೆ ಪ್ರಮುಖ ಪ್ರವೇಶದ್ವಾರವಾಗಿದೆ. (ದ್ವಾರಹಾತ್ ತಲುಪುವುದು ಹೇಗೆ)

ದ್ವಾರಹಾತ್‌ನಿಂದ ಪಾಂಡುಕೋಲಿ ಪರ್ವತದಲ್ಲಿರುವ ಬಾಬಾಜಿಯವರ ಗುಹೆಗೆ ತೆರಳುವ ಪ್ರಯಾಣವು, ಮೊದಲು ರಸ್ತೆಯ ಮೂಲಕ ಸುಮಾರು 25 ಕಿ.ಮೀ. ದೂರದಲ್ಲಿರುವ ಕುಕುಚಿನಾ ಗ್ರಾಮವನ್ನು ತಲುಪುವುದರೊಂದಿಗೆ ಆರಂಭವಾಗುತ್ತದೆ. ಅಲ್ಲಿಂದ ಸಮೀಪದ ರತ್‌ಖಾಲ್ ಗ್ರಾಮದ ಕಡೆಗೆ ರಸ್ತೆ ಸಾಗುತ್ತದೆ. ಈ ರಸ್ತೆಯು ಬಾಬಾಜಿಯವರ ಗುಹೆಗೆ ಕಾಲ್ನಡಿಗೆಯಲ್ಲಿ ಸಾಗುವ ಹಾದಿ ಆರಂಭವಾಗುವ ಸ್ಥಳಕ್ಕೆ ಕರೆದೊಯ್ಯುತ್ತದೆ.

ಈ ಕಾಲುದಾರಿಯು ಮಣ್ಣು ಮತ್ತು ಬಂಡೆಗಳಿಂದ ಕೂಡಿದ ಸುಮಾರು 1.5 ಕಿ.ಮೀ. ಉದ್ದದ ಸುಸ್ಥಾಪಿತವಾದ ಗಿರಿಧಾಮದ ಹಾದಿಯಾಗಿದೆ. ಇದರಲ್ಲಿ ಕೆಲವು ಕಡಿದಾದ ಭಾಗಗಳಿರುವುದರಿಂದ, ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಮತ್ತು ಅಗತ್ಯವಿದ್ದಲ್ಲಿ ಆಗಾಗ್ಗೆ ವಿರಾಮಗಳನ್ನು ತೆಗೆದುಕೊಳ್ಳುತ್ತಾ ಈ ಏರಿಕೆಯನ್ನು ಕ್ರಮಿಸಬೇಕು. ಸಾಧಾರಣ ಸದೃಢತೆಯುಳ್ಳ ವ್ಯಕ್ತಿಗೆ ಈ ಚಾರಣವು ಸಾಮಾನ್ಯವಾಗಿ 45–60 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ದ್ವಾರಹಾತ್‌ನಿಂದ ಖಾಸಗಿ ಟ್ಯಾಕ್ಸಿ ಸೇವೆ ಲಭ್ಯವಿದ್ದು, ಅದು ನಿಮ್ಮನ್ನು ನೇರವಾಗಿ ಚಾರಣದ ಹಾದಿಯ ಆರಂಭದ ಸ್ಥಳದವರೆಗೆ ಕರೆದೊಯ್ಯಬಲ್ಲದು. ಪ್ರಯಾಣ, ಚಾರಣ ಮತ್ತು ಗುಹೆಯಲ್ಲಿ ಸ್ವಲ್ಪ ಸಮಯ ಕಳೆಯುವುದು ಸೇರಿದಂತೆ, ದ್ವಾರಹಾತ್‌ನಿಂದ ಬಾಬಾಜಿಯವರ ಗುಹೆಗೆ ಹೋಗಿ ಹಿಂದಿರುಗುವ ಸಂಪೂರ್ಣ ಪ್ರಯಾಣಕ್ಕೆ ಸಾಮಾನ್ಯವಾಗಿ ಸುಮಾರು ಆರು ಗಂಟೆಗಳು ಬೇಕಾಗುತ್ತವೆ. ಯಾತ್ರಿಕರು ಕುಡಿಯುವ ನೀರು ಮತ್ತು ಬುತ್ತಿಯನ್ನು ತೆಗೆದುಕೊಂಡು ಹೋಗುವಂತೆ, ಗಟ್ಟಿಮುಟ್ಟಾದ ಪಾದರಕ್ಷೆಗಳನ್ನು ಧರಿಸುವಂತೆ ಹಾಗೂ ಚಳಿಯ ವಾತಾವರಣಕ್ಕೆ ಸೂಕ್ತವಾದ ಉಡುಪುಗಳನ್ನು ಧರಿಸುವಂತೆ ಸಲಹೆ ನೀಡಲಾಗುತ್ತದೆ.

ಮತ್ತೊಂದು ಆಯ್ಕೆಯೆಂದರೆ ರಾಣಿಕೇತ್ ಪಟ್ಟಣದಿಂದ ದ್ವಾರಾಹಟದ (55 ಕಿ.ಮೀ.) ಮೂಲಕ ನೇರವಾಗಿ ಬಾಬಾಜಿಗಳ ಗುಹೆಗೆ ಪ್ರಯಾಣಿಸುವುದು. ರಸ್ತೆ ಮೂಲಕ ಪ್ರಯಾಣಿಸಲು ಒಂದು ಮಾರ್ಗಕ್ಕೆ ಸುಮಾರು 2 ಗಂಟೆಗಳು ಹಿಡಿಯುತ್ತದೆ ಮತ್ತು ಒಟ್ಟಾರೆ ಪ್ರವಾಸಕ್ಕೆ ಸುಮಾರು 8-9 ಗಂಟೆಗಳು ತೆಗೆದುಕೊಳ್ಳಬಹುದು.

ಇದನ್ನು ಹಂಚಿಕೊಳ್ಳಿ