ಪರಮಹಂಸ ಯೋಗಾನಂದರ ಸ್ವಾತಂತ್ರ್ಯದ ಪರಿಕಲ್ಪನೆ – ಸ್ವಾಮಿ ಚಿದಾನಂದ ಗಿರಿ ಅವರಿಂದ

14 ಜುಲೈ, 2026

ಸೆಪ್ಟೆಂಬರ್ 19, 2020 ರಂದು ಎಸ್‌ಆರ್‌ಎಫ್ ಮಾತೃ ಕೇಂದ್ರದಲ್ಲಿ ವೈಎಸ್‌ಎಸ್/ಎಸ್‌ಆರ್‌ಎಫ್ ಅಧ್ಯಕ್ಷರು ನೀಡಿದ, “ಪರಮಹಂಸ ಯೋಗಾನಂದ: ಐತಿಹಾಸಿಕ ಮಹತ್ವದ ಸೇತುವೆ ನಿರ್ಮಾತೃ” ಎಂಬ ವಿಷಯದ ಬಗ್ಗೆ ನೀಡಿದ ಪ್ರವಚನದ ಆಯ್ದ ಭಾಗಗಳು, ಇದು ಯೋಗದಾ ಸತ್ಸಂಗ ಪತ್ರಿಕೆಯ 2021ರ ಜನವರಿ-ಮಾರ್ಚ್ ಸಂಚಿಕೆಯಲ್ಲಿ ಪ್ರಕಟವಾಗಿದೆ. ಸ್ವಾಮಿ ಚಿದಾನಂದ ಗಿರಿ ಅವರು ಪರಮಹಂಸ ಯೋಗಾನಂದರು ಅಮೆರಿಕಾಗೆ ಆಗಮಿಸಿದ ನೂರನೇ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಪರಮಹಂಸಜಿಯವರು ಪಾಶ್ಚಿಮಾತ್ಯ ದೇಶಗಳಲ್ಲಿ ನೀಡಿದ ತಮ್ಮ ಮೊದಲ ಪ್ರವಚನದಲ್ಲಿ ಪ್ರತಿಪಾದಿಸಿದ ಆತ್ಮ ವಿಮೋಚನೆಯನ್ನು ನಿಮ್ಮ ಜೀವನದಲ್ಲಿ ಶಾಶ್ವತ ವಾಸ್ತವವನ್ನಾಗಿ ರೂಪಿಸಿಕೊಳ್ಳಲು ಧ್ಯಾನದ ಯೋಗ ವಿಜ್ಞಾನವನ್ನು ಆಚರಣೆಗೆ ತರಲು ಈ ಬ್ಲಾಗ್ ಲೇಖನವು ನಿಮಗೆ ಸ್ಫೂರ್ತಿಯಾಗಲಿ ಎಂದು ನಾವು ಆಶಿಸುತ್ತೇವೆ.

ಕಮಲ-ಆರೆಂಜ್ ರೇಖಾಚಿತ್ರ

ಹೊರ ಲೋಕಕ್ಕೆ ಪರಮಹಂಸ ಯೋಗಾನಂದರು ಒಬ್ಬ ಹಿಂದೂ, ಅಮೆರಿಕಾದಲ್ಲಿ ನೆಲೆಸಿದವರು ಮತ್ತು ವಿಶ್ವ ಮಾನವರಾಗಿದ್ದರು. ಆದರೆ ಅವರ ನಿಜವಾದ ವ್ಯಕ್ತಿತ್ವವು ಅವರು ಆಂತರ್ಯದಲ್ಲಿ ಏನಾಗಿದ್ದರು ಎಂಬುದಾಗಿತ್ತು. ಅವರ ಒಂದು ಕವಿತೆಯಲ್ಲಿ, ತಮ್ಮ ಆಂತರಿಕ ಅನುಭವ ಏನೆಂದು ಅವರು ತಿಳಿಸಿದ್ದಾರೆ:

ನಾನು ಯಾವುದೇ ದೇಶಕ್ಕೆ ಸೇರಿದವನಲ್ಲ, ಪ್ರಿಯವಾದ ಯಾವ ಮಾತೃಭೂಮಿಯೂ ಇಲ್ಲ;
ನಾನು ಹಿಂದೂವೂ ಅಲ್ಲ, ಕ್ರಿಶ್ಚಿಯನ್ ದಾರ್ಶನಿಕನೂ ಅಲ್ಲ;
ಪಾಶ್ಚಾತ್ಯನೂ ಅಲ್ಲ, ಪ್ರಾಚ್ಯನೂ ಅಲ್ಲ, ಅನುವಂಶಿಕತೆಯ ಬಂಧನದಲ್ಲಿ ಜನಾಂಗದ ಸರಳುಗಳ ಹಿಂದೆ ಸೆರೆಯಾದವನೂ ಅಲ್ಲ…
ನನ್ನ ಆತ್ಮ ಸ್ವಾತಂತ್ರ್ಯದಲ್ಲಿ ವಿಹರಿಸುತ್ತದೆ —
ಅದರ ಏಕೈಕ ಧರ್ಮ ಸ್ವಾತಂತ್ರ್ಯವೇ….

ಇತರರಿಗೆ ತಿಳಿದಿಲ್ಲ, ಆದರೆ ನನಗೆ ತಿಳಿದಿದೆ,
ನಾನು ಎಚ್ಚರಗೊಳ್ಳುತ್ತೇನೆ, ನಡೆಯುತ್ತೇನೆ ಮತ್ತು ಕನಸು ಕಾಣುತ್ತೇನೆ,
ಸವಿಯುತ್ತೇನೆ, ಕುಡಿಯುತ್ತೇನೆ ಮತ್ತು ಆನಂದದಲ್ಲಿ ತೇಲುತ್ತೇನೆ.
ನಾನು ಹುಡುಕುತ್ತಿದ್ದ ಆನಂದ ನಾನೇ —
ಎಲ್ಲರೂ ಹುಡುಕುವ ಆ ಆನಂದ.1

ಇದನ್ನು ಕುರಿತು ಯೋಚಿಸಿ: “ನನ್ನ ಚೇತನವು ಸ್ವಾತಂತ್ರ್ಯದಲ್ಲಿ ವಿಹರಿಸುತ್ತದೆ — ಅದರ ಏಕೈಕ ಧರ್ಮ, ಸ್ವಾತಂತ್ರ್ಯ.” ಇದು ಬಹಳ ಆಸಕ್ತಿದಾಯಕವಾಗಿದೆ, ಏಕೆಂದರೆ ಇದು ನಮ್ಮನ್ನು 1920ರಲ್ಲಿ ಪರಮಹಂಸಜಿಯವರು ಬೋಸ್ಟನ್‌ಗೆ ಆಗಮಿಸಿದ ಸಂದರ್ಭಕ್ಕೆ ಕರೆದೊಯ್ಯುತ್ತದೆ. ಅಲ್ಲಿ ಅವರು ಧಾರ್ಮಿಕ ಉದಾರವಾದಿಗಳ ಸಮ್ಮೇಳನದಲ್ಲಿ ಮಾತನಾಡಲು ಬಂದಿದ್ದರು. ಅಮೆರಿಕಾ ಮತ್ತು ಪ್ರಪಂಚದ ವಿವಿಧ ಭಾಗಗಳಿಂದ ಧಾರ್ಮಿಕ ಮುಖಂಡರನ್ನು ಆಕರ್ಷಿಸಿದ ಆ ಸಮ್ಮೇಳನವನ್ನು, ಇಂಗ್ಲೆಂಡ್‌ನಿಂದ ಸ್ವಾತಂತ್ರ್ಯವನ್ನು ಅರಸುತ್ತಾ ಅಮೆರಿಕಾಗೆ ಬಂದಿದ್ದ ಯಾತ್ರಿಕರ 300ನೇ ವಾರ್ಷಿಕೋತ್ಸವವನ್ನು ಆಚರಿಸಲು ನಿಗದಿಪಡಿಸಲಾಗಿತ್ತು; ಮತ್ತು ಸಂಘಟಕರು ನೀಡಿದ್ದ ವಿಷಯವಸ್ತು – “ಸ್ವಾತಂತ್ರ್ಯದ ನಿಜವಾದ ಮಹತ್ವವೇನು?”2

ನಮಗೆ ತಿಳಿದಿರುವಂತೆ, ಅಮೆರಿಕಾದ ಸಂಸ್ಥಾಪಕ ಪಿತಾಮಹರು ಸ್ವಾತಂತ್ರ್ಯ ಘೋಷಣೆಯಲ್ಲಿ ಹೀಗೆ ಬರೆದಿದ್ದಾರೆ: “ಎಲ್ಲಾ ಮನುಷ್ಯರು ಸಮಾನವಾಗಿ ಸೃಷ್ಟಿಸಲ್ಪಟ್ಟಿದ್ದಾರೆ ಮತ್ತು ಸೃಷ್ಟಿಕರ್ತನು ಅವರಿಗೆ ಕೆಲವು ಮೂಲಭೂತ ಹಕ್ಕುಗಳನ್ನು ನೀಡಿದ್ದಾನೆ, ಅವುಗಳಲ್ಲಿ ಜೀವನ, ಸ್ವಾತಂತ್ರ್ಯ ಮತ್ತು ಸಂತೋಷದ ಅನ್ವೇಷಣೆಯೂ ಸೇರಿವೆ ಎಂಬ ಸತ್ಯಗಳು ಸ್ವಯಂ ಸ್ಪಷ್ಟವಾಗಿವೆ ಎಂದು ನಾವು ನಂಬುತ್ತೇವೆ.” ಇವು ಅಮರವಾದ ಹೃದಯಸ್ಪರ್ಶಿ ಮಾತುಗಳು. ಆದರೆ ಇದು ಒಂದು ಯೋಗ ತತ್ವ ಎಂಬುದನ್ನು ಹೆಚ್ಚಿನ ಜನರು ಅರಿತಿರಲಿಕ್ಕಿಲ್ಲ. ವಾಸ್ತವವಾಗಿ, ರಾಜಕಾರಣಿಗಳು, ರಾಜನೀತಿಜ್ಞರು ಮತ್ತು ಆ ಕ್ರಾಂತಿಕಾರಿ ನಾಯಕರಿಗಿಂತಲೂ ಯೋಗವು ಇನ್ನೂ ಆಳವಾಗಿ ಬೇರೂರಿದೆ ಎಂದು ನಾವು ಹೇಳಬಹುದು ಎಂದು ನಾನು ಭಾವಿಸುತ್ತೇನೆ. ಯೋಗವು ಜೀವನ, ಸ್ವಾತಂತ್ರ್ಯ ಮತ್ತು ಸಂತೋಷದ ಅನ್ವೇಷಣೆಯು ಕೇವಲ ಮೂಲಭೂತ ಹಕ್ಕುಗಳಲ್ಲ, ಆದರೆ ಮಾನವ ಸ್ವಭಾವದ ಸ್ವರೂಪದಲ್ಲಿ ಬೆಸೆದಿರುವ ಮೂಲಭೂತ ಶಕ್ತಿಗಳು ಅಥವಾ ಪ್ರಕ್ರಿಯೆಗಳು ಎಂದು ಹೇಳುತ್ತದೆ.

ಪರಮಹಂಸಜಿ ಭೋದಿಸಿದ ರಾಜಯೋಗ ವಿಜ್ಞಾನದ ಕುರಿತು ಎಸ್‌ಆರ್‌ಎಫ್‌ [ವೈಎಸ್ಎಸ್ ] ಪಾಠಗಳಲ್ಲಿ ಮತ್ತು ನಿಮ್ಮ ಧ್ಯಾನದ ಅಭ್ಯಾಸದಲ್ಲಿ ನೀವು ಕಲಿತದ್ದನ್ನು ನೆನಪಿಸಿಕೊಳ್ಳಿ; ಮತ್ತು ಅದನ್ನು ಜೀವನ, ಸ್ವಾತಂತ್ರ್ಯ ಮತ್ತು ಆನಂದದ ಅನ್ವೇಷಣೆಯ ಪರಿಕಲ್ಪನೆಯ ದೃಷ್ಟಿಯಿಂದ ಯೋಚಿಸಿ. ಜೀವಶಕ್ತಿ (ಪ್ರಾಣ), ಸ್ವಾತಂತ್ರ್ಯ (ಅಥವಾ ಸ್ವತಂತ್ರ ಇಚ್ಛೆ) ಮತ್ತು ಆನಂದದ ಅನ್ವೇಷಣೆ (ಅಥವಾ ಪರಿಪೂರ್ಣ ಆನಂದಕ್ಕಾಗಿ ಆತ್ಮದ ಬಯಕೆ ಎಂದು ನಾವು ಹೇಳಬಹುದಾದ) — ಇವು ನಮ್ಮ ಅನುಮತಿಯೊಂದಿಗೆ ಅಥವಾ ಅನುಮತಿ ಇಲ್ಲದೆಯೇ ಆತ್ಮದ ಹತ್ತು ಸಾಧನಗಳ (ಐದು ಜ್ಞಾನೇಂದ್ರಿಯಗಳು ಮತ್ತು ಐದು ಕರ್ಮೇಂದ್ರಿಯಗಳು) ಮೂಲಕ ಕಾರ್ಯನಿರ್ವಹಿಸುವ ಶಕ್ತಿಗಳು ಎಂದು ಯೋಗ ನಮಗೆ ಹೇಳುತ್ತದೆ. ಅದಕ್ಕಾಗಿಯೇ ನಾನು ಇವು ಕೇವಲ ಮೂಲಭೂತ ಹಕ್ಕುಗಳಲ್ಲ, ಆದರೆ ಮೂಲಭೂತ ಶಕ್ತಿಗಳು ಅಥವಾ ಪ್ರಕ್ರಿಯೆಗಳು ಎಂದು ಹೇಳುತ್ತೇನೆ.

ನಾನು ಇದರ ಬಗ್ಗೆ ಇನ್ನಷ್ಟು ಆಳವಾಗಿ ಹೇಳಬಯಸುತ್ತೇನೆ, ಏಕೆಂದರೆ ಇದು 1920 ರ ಆ ಸಮ್ಮೇಳನದಲ್ಲಿ ಪರಮಹಂಸರು ನೀಡಿದ “ಧರ್ಮದ ವಿಜ್ಞಾನ” ಉಪನ್ಯಾಸವನ್ನು ನಾವು ಹೇಗೆ ಅರ್ಥೈಸುತ್ತೇವೆ ಎಂಬುದನ್ನು ತಿಳಿಸುತ್ತದೆ. ತಮ್ಮ ಬೋಧನೆಗಳಲ್ಲಿ ಅವರು ವಿವರಿಸುತ್ತಾರೆ: ಗರ್ಭಧಾರಣೆಯ ಸಮಯದಲ್ಲಿ ನಾವು ದೈವಿಕ ಆತ್ಮವಾಗಿ ದೇಹವನ್ನು ಪ್ರವೇಶಿಸುತ್ತೇವೆ. ಆಗ ನಮ್ಮ ಜೀವಶಕ್ತಿ ಮತ್ತು ಪ್ರಜ್ಞೆಯ ಸೂಕ್ಷ್ಮ ಹಾಗೂ ಕಾರಣ ಶರೀರಗಳಿಂದ ಆವೃತರಾಗಿರುತ್ತೇವೆ. ಆತ್ಮವು ತನ್ನ ಜೀವಶಕ್ತಿ ಮತ್ತು ಪ್ರಜ್ಞೆಯನ್ನು ದೇಹ-ಮನಸ್ಸಿನ ಸಾಧನಗಳೊಳಗೆ ಹರಿಸುತ್ತದೆ. ಇದೇ ಮಾನವನ ಸ್ಥಿತಿ; ಈ ವಿಷಯದಲ್ಲಿ ನಮಗೆ ಯಾವುದೇ ಆಯ್ಕೆಯಿಲ್ಲ. ಜೀವನವು ಕೆಳಮುಖವಾಗಿ ಮತ್ತು ಹೊರಮುಖವಾಗಿ — ನರಮಂಡಲದೊಳಗೆ, ಇಂದ್ರಿಯಗಳೊಳಗೆ — ಹರಿಯುತ್ತಾ ದೇಹವನ್ನು ಸೃಷ್ಟಿಸಿ ಸಜೀವಗೊಳಿಸುತ್ತದೆ; ಮತ್ತು, ಎಲ್ಲಕ್ಕಿಂತ ಮುಖ್ಯವಾಗಿ, ನಾವು ಬಯಸಿದರೂ ಬಯಸದಿದ್ದರೂ ಆತ್ಮವು ತನ್ನನ್ನು ಆ ದೇಹದೊಂದಿಗೆ ಗುರುತಿಸಿಕೊಳ್ಳುವಂತೆ ಮಾಡುತ್ತದೆ.

ಆದರೆ, ನಮ್ಮನ್ನು ಬಂಧಿಸುವ ಮತ್ತು ಗುಲಾಮರನ್ನಾಗಿಸುವ ಈ ಶರೀರ ಮತ್ತು ಇಂದ್ರಿಯಗಳ ತಣಿಯದ ಬಯಕೆಗಳು ಮತ್ತು ಹವ್ಯಾಸಗಳೊಂದಿಗೆ ಗುರುತಿಸಿಕೊಳ್ಳಲಿ ಇಲ್ಲವೇ ಬಿಡಲಿ; ಆ ಶರೀರದಲ್ಲಿ ನಾವು ಹೇಗೆ ಬದುಕುತ್ತೇವೆ ಎಂಬುದು ನಮ್ಮ ನಿಯಂತ್ರಣದಲ್ಲಿರುತ್ತದೆ. ಆತ್ಮವು ನಾವು ನಿಜವಾಗಿ ಏನಾಗಿದ್ದೇವೆ ಎಂಬುದರ ಆ ಸುಳ್ಳು ಪರಿಕಲ್ಪನೆಗೆ ಬದ್ಧರಾಗುವುದೇ ನಿಜವಾದ ಗುಲಾಮಗಿರಿ. ಕ್ರಿಯಾಯೋಗ — ನಮ್ಮ ಗುರುಗಳು 100 ವರ್ಷಗಳ ಹಿಂದೆ ಪಶ್ಚಿಮಕ್ಕೆ ಮತ್ತು ಅದರ ಮೂಲಕ ವಿಶ್ವಾದ್ಯಂತ ಹರಡಿದ ಎಸ್‌ಆರ್‌ಎಫ್/ವೈಎಸ್ಎಸ್ ಬೋಧನೆಗಳು — ಆತ್ಮದ ಗುರುತಿಸುವಿಕೆಯ ಶಕ್ತಿಯನ್ನು ನಿಯಂತ್ರಿಸುವ ವಿಜ್ಞಾನವನ್ನು ನಮಗೆ ನೀಡುತ್ತವೆ: ಇದು ನಾವು ಆತ್ಮವಾಗಿ, ಒಳ್ಳೆಯದಕ್ಕಾಗಲಿ ಅಥವಾ ಕೆಟ್ಟದ್ದಕ್ಕಾಗಲಿ, ನಮ್ಮನ್ನು ನಾವು ಗುರುತಿಸಿಕೊಳ್ಳುವ ಬಾಹ್ಯ ಪಾತ್ರಗಳು ಮತ್ತು ಗುಣಲಕ್ಷಣಗಳನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆ. ಇದು ನಮ್ಮ ಪ್ರಾಣಶಕ್ತಿ, ನಮ್ಮ ಸ್ವತಂತ್ರ ಇಚ್ಛೆಯ ಸಹಜಗುಣ, ಮತ್ತು ಅನಂತ ಆನಂದಕ್ಕಾಗಿ ನಮ್ಮ ಆತ್ಮದ ಬಯಕೆಯನ್ನು ನಾವು ಈಡೇರಿಸಿಕೊಳ್ಳುವಲ್ಲಿ ನಮ್ಮ ಜೀವನ, ಸ್ವಾತಂತ್ರ್ಯ ಮತ್ತು ಸಂತೋಷದ ಅನ್ವೇಷಣೆಯ ಆ ಶಕ್ತಿಗಳನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದರ ಬಗ್ಗೆ ಇದೆ. ಇದು ಧರ್ಮದ ವಿಜ್ಞಾನ ಮತ್ತು ನೈಜ ಸ್ವಾತಂತ್ರ್ಯದ ಅರ್ಥಕ್ಕೆ ಸಮರ್ಪಿತವಾಗಿದ್ದ ಸರ್ವ ಧರ್ಮಗಳ ಸಮ್ಮೇಳನದಲ್ಲಿ ಪರಮಹಂಸಜಿ ನೀಡಿದ ಪ್ರವಚನದ ಸಾರವಾಗಿದೆ.

ಮುಕ್ತಿಯನ್ನು ಪಡೆಯಲು ಧರ್ಮದ ವಿಜ್ಞಾನವನ್ನು ಕರಗತ ಮಾಡಿಕೊಳ್ಳುವುದು

ನಿಮಗೆ ತಿಳಿದಿರುವಂತೆ, ಅವರ ಈ ಪ್ರಸ್ತುತಿಯ ಶೀರ್ಷಿಕೆಯು “ಧರ್ಮದ ವಿಜ್ಞಾನ” ಎಂದಾಗಿತ್ತು ಮತ್ತು ಇದೇ ಹೆಸರಿನ ಒಂದು ಚಿಕ್ಕದಾದರೂ ಅತ್ಯಂತ ಪ್ರಭಾವಶಾಲಿ ಪುಸ್ತಕವೂ ಪ್ರಕಟಗೊಂಡಿತ್ತು. ಅದನ್ನು ನಾವು [ಎಸ್‌ಆರ್‌ಎಫ್‌ ] ಇದೀಗ ಎಸ್‌ಆರ್‌ಎಫ್‌ ಶತಾಬ್ಧಿ ಆವೃತ್ತಿಯಾಗಿ ಮರುಪ್ರಕಟಿಸಿದ್ದೇವೆ. ನೈಜ ಸ್ವಾತಂತ್ರ್ಯದ ಮಹತ್ವವನ್ನು ಕುರಿತು ಹೇಳುವುದಾದರೆ, ಆ ಅಧಿವೇಶನದಲ್ಲಿ ನಮ್ಮ ಗುರುಗಳು ನೀಡಿದ ಸಂದೇಶವನ್ನು ನಾವು ಮೂರು ಪ್ರಮುಖ ಅಂಶಗಳಿಗೆ ಸಂಕ್ಷಿಪ್ತಗೊಳಿಸಬಹುದು.

ಮೊದಲನೆಯದಾಗಿ, ಗುರೂಜಿ ಪುಸ್ತಕದಲ್ಲಿ ಹೇಳಿರುವಂತೆ, “ಪರಿವರ್ತನಶೀಲ ದೇಹ ಮತ್ತು ಚಂಚಲ ಮನಸ್ಸಿನೊಂದಿಗೆ ಗುರುತಿಸಿಕೊಳ್ಳುವಿಕೆಯ ಭಾವನೆಯೇ ನಮ್ಮ ಆತ್ಮದ ಆಧ್ಯಾತ್ಮಿಕ ದುಃಖದ ಮೂಲ, ಮೂಲ ಕಾರಣವಾಗಿದೆ.”

ಎರಡನೆಯ ಅಂಶವೆಂದರೆ, ಧರ್ಮವನ್ನು ಸರಿಯಾಗಿ ಅರ್ಥೈಸಿದಾಗ, ಅಂತಹ ದುಃಖವನ್ನು ಶಾಶ್ವತವಾಗಿ ನಿವಾರಿಸುವುದು ಮತ್ತು ಶುದ್ಧ ಆನಂದ ಅಥವಾ ಭಗವಂತನನ್ನು ತಲುಪುವುದು ಇದರಲ್ಲಿ ಅಡಕವಾಗಿದೆ. ಇದು ಧರ್ಮದ ಕುರಿತು ಅವರ ಸಾರ್ವತ್ರಿಕ ವ್ಯಾಖ್ಯಾನವಾಗಿತ್ತು.

ಮೂರನೆಯ ಅಂಶವೇನೆಂದರೆ, ಅವರು ಹೇಳುವ “ಅತ್ಯಂತ ಸುಲಭವಾದ, ಹೆಚ್ಚು ತರ್ಕಬದ್ಧವಾದ ಮತ್ತು ಅತ್ಯಂತ ಮೂಲಭೂತವಾದ ವಿಧಾನಗಳನ್ನು — ಎಲ್ಲರಿಗೂ ಅನ್ವಯವಾಗುವಂಥವುಗಳನ್ನು — ಬಳಸಬಹುದು. ಇವು ಶಾಶ್ವತ ಆನಂದಮಯವಾದ ಆಧ್ಯಾತ್ಮಿಕ ಆತ್ಮವನ್ನು ಅದರ ನಶ್ವರ ದೇಹ ಮತ್ತು ಮನಸ್ಸಿನೊಂದಿಗಿನ ಹಾನಿಕಾರಕ ಸಂಬಂಧ ಮತ್ತು ಗುರುತಿಸುವಿಕೆಯಿಂದ ಮುಕ್ತಗೊಳಿಸುತ್ತವೆ, ಹೀಗೆ ಅದು ಶಾಶ್ವತವಾಗಿ ದುಃಖವನ್ನು ತಪ್ಪಿಸಿ ಆನಂದವನ್ನು ಪಡೆಯುವಂತೆ ಮಾಡುತ್ತವೆ, ಇದನ್ನೇ ಧರ್ಮ ಎನ್ನುತ್ತಾರೆ.”

ಈಗ ಇದು ಬಹುಶಃ ಸ್ವಲ್ಪ ತಾತ್ವಿಕ ಅಥವಾ ಗಹನವಾಗಿರಬಹುದು, ಆದರೆ ಸ್ವಾತಂತ್ರ್ಯದ ಆ ಇಡೀ ಪರಿಕಲ್ಪನೆಯನ್ನು ಗುರುದೇವರು ಹೇಗೆ ಅದು ಧರ್ಮದ ವಿಜ್ಞಾನದ ಪಾಂಡಿತ್ಯದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ ಎಂಬುದನ್ನು ತೋರಿಸಿದರು ಎಂಬುದನ್ನು ನಾವು ಗ್ರಹಿಸಬೇಕೆಂದು ನಾನು ಬಯಸುತ್ತೇನೆ. ಅವರು ಹೇಳಿದಂತೆ: “ಸದಾ ಆನಂದಮಯವಾದ ಆಧ್ಯಾತ್ಮಿಕ ಆತ್ಮವನ್ನು ಅದರ ವಿನಾಶಕಾರಿ ಸಂಬಂಧದಿಂದ ಮತ್ತು ನಶ್ವರ ದೇಹ ಮತ್ತು ಮನಸ್ಸಿನೊಂದಿಗಿನ ಗುರುತಿಸುವಿಕೆಯಿಂದ ಮುಕ್ತಗೊಳಿಸಬೇಕು.” ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅವರು ಅಮೆರಿಕನ್ನರಿಗೆ ಮತ್ತು ವಿಶ್ವದ ಎಲ್ಲಾ ದೇಶದ ನಾಗರಿಕರಿಗೆ, ನಮ್ಮ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಮಾನತೆಯ ಆದರ್ಶಗಳು, ನಮ್ಮ ದುರ್ಬಲ ಸ್ವಭಾವದ ಹೀನ ಪ್ರಚೋದನೆಗಳಿಂದ ಸ್ವಾತಂತ್ರ್ಯ ಪಡೆದ – ಆಧ್ಯಾತ್ಮಿಕ ಸ್ವಾತಂತ್ರ್ಯದ ಆದರ್ಶಗಳಿಂದ ಬೆಂಬಲಿತವಾಗಿ ಅರಿಯಲ್ಪಟ್ಟ ಹೊರತು, ಆ ಸಾಮಾಜಿಕ ಆದರ್ಶಗಳು, ಅಮೆರಿಕಾದಲ್ಲಿರಲಿ ಅಥವಾ ಇತರ ಯಾವುದೇ ದೇಶದಲ್ಲಿರಲಿ, ಭಾಗಶಃ ಮಾತ್ರ ಸಾಕಾರಗೊಳ್ಳುತ್ತವೆ ಎಂದು ಸ್ಪಷ್ಟಪಡಿಸುತ್ತಿದ್ದರು.

ಪರಮಹಂಸ ಯೋಗಾನಂದರ ಬೋಧನೆಗಳಾದ ಎಸ್‌ಆರ್‌ಎಫ್/ವೈಎಸ್ಎಸ್ ಪಾಠಗಳಲ್ಲಿ, ಗುರುದೇವರು ನಮಗೆ ಸರಿಯಾದ ಮನೋಭಾವಗಳು, ಸರಿಯಾದ ದೃಢೀಕರಣಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಗುರುತಿಸುವಿಕೆಯ ಪ್ರಕ್ರಿಯೆಯ ಮೇಲೆ ಹಿಡಿತ ಸಾಧಿಸಲು ಸರಿಯಾದ ವೈಜ್ಞಾನಿಕ ತಂತ್ರಗಳನ್ನು ನೀಡಿದ್ದಾರೆ. ಇದು ನಮ್ಮ ಅದೃಷ್ಟವೇ ಸರಿ. ಅದೇ ಯೋಗ ವಿಜ್ಞಾನ, ಧರ್ಮದ ವಿಜ್ಞಾನ: ನಮ್ಮ ನಿಜವಾದ ಅಸ್ತಿತ್ವವು ಚೇತನದೊಂದಿಗೆ ಒಂದಾಗಿರುವುದು, ದೇವರೊಂದಿಗೆ ಒಂದಾಗಿರುವುದು; ಮತ್ತು ಇತರ ಎಲ್ಲಾ ತಾತ್ಕಾಲಿಕ ಗುರುತಿಸುವಿಕೆಗಳು ನಮಗೆ ಇತಿಮಿತಿಗಳ, ಆಸಕ್ತಿಗಳ, ಕರ್ಮ, ಹಾಗೂ ಐದು ಕ್ಲೇಶ, ಎಲ್ಲವನ್ನೂ ತರುತ್ತವೆ ಎಂದು ಅರಿತುಕೊಳ್ಳುವುದು ಪತಂಜಲಿಯವರು ತಮ್ಮ ಯೋಗ ಸೂತ್ರಗಳಲ್ಲಿ ಹೇಳಿರುವ ತಾಪಗಳು.3 “ಧರ್ಮದ ವಿಜ್ಞಾನ” — ಸ್ವಾತಂತ್ರ್ಯದ ನಿಜವಾದ ಅರ್ಥದ ಬಗ್ಗೆ ಇದಕ್ಕಿಂತ ಹೆಚ್ಚು ಸೂಕ್ತವಾದ, ಸಮಗ್ರವಾದ ಮತ್ತು ಆಳವಾದ ನಿರೂಪಣೆ ಇನ್ನೇನು ಇರಲು ಸಾಧ್ಯ?

ಅಡಿ ಟಿಪ್ಪಣಿಗಳು:

  1. ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಪ್ರಕಟಿಸಿರುವ ಸಾಂಗ್ಸ್ ಆಫ್ ದಿ ಸೋಲ್, ಕವನ ಸಂಕಲನದಲ್ಲಿನ “ಇನ್ ದಿ ಲ್ಯಾಂಡ್ ಆಫ್ ಡ್ರೀಮ್ಸ್” ಎಂಬ ಕವಿತೆಯಿಂದ ಆಯ್ದ ಭಾಗಗಳು.
  2. 1607ರಲ್ಲಿ, ಒಂದು ದಶಕಕ್ಕೂ ಹೆಚ್ಚು ಮುಂಚೆಯೇ, ಇಂಗ್ಲೆಂಡ್‌ನಿಂದ ವಲಸೆ ಬಂದವರು ವರ್ಜೀನಿಯಾದಲ್ಲಿ ಮತ್ತೊಂದು ಶಾಶ್ವತ ವಸಾಹತನ್ನು ಸ್ಥಾಪಿಸಿದ್ದರು. ಆದರೆ, ಈ ಗುಂಪಿನ ಉದ್ದೇಶವು ಧಾರ್ಮಿಕ ಸ್ವಾತಂತ್ರ್ಯದ ಅನ್ವೇಷಣೆಯಾಗಿರದೆ, ಮುಖ್ಯವಾಗಿ ವಾಣಿಜ್ಯ ಉದ್ದೇಶದ್ದಾಗಿತ್ತು.
  3. ಗಾಡ್ ಟಾಕ್ಸ್ ವಿತ್ ಅರ್ಜುನ: ದಿ ಭಗವದ್ಗೀತಾ ಕೃತಿಯಲ್ಲಿ, ಪರಮಹಂಸ ಯೋಗಾನಂದರು ಹೀಗೆ ವಿವರಿಸುತ್ತಾರೆ: “ಯೋಗಸೂತ್ರಗಳು II:3, ಕ್ಲೇಶಗಳು ಅಥವಾ ದುಃಖದ ಕಾರಣಗಳು ಐದು ವಿಧಗಳೆಂದು ವಿವರಿಸಲಾಗಿದೆ: ಅವಿದ್ಯೆ (ಅಜ್ಞಾನ), ಅಸ್ಮಿತೆ (ಅಹಂಕಾರ), ರಾಗ (ಆಸಕ್ತಿ), ದ್ವೇಷ (ವಿಕರ್ಷಣೆ), ಅಭಿನಿವೇಶ (ಶರೀರದ ವ್ಯಾಮೋಹ).”
ಕಮಲ-ಆರೆಂಜ್ ರೇಖಾಚಿತ್ರ

ಯೋಗ ಧ್ಯಾನದ ವಿಜ್ಞಾನ ಹಾಗೂ ಸಮತೋಲಿತ ಜೀವನದ ಕಲೆಯ ಕುರಿತು ಪರಮಹಂಸ ಯೋಗಾನಂದರ ಬೋಧನೆಗಳ ತಿರುಳಾಗಿರುವ ಯೋಗದಾ ಸತ್ಸಂಗ ಪಾಠಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.

ಸ್ವಾಮಿ ಚಿದಾನಂದಜಿಯವರ 2020ರ ಎಸ್‌ಆರ್‌ಎಫ್‌ ಶತಮಾನೋತ್ಸವದ ಪ್ರವಚನದ ಈ ಆಯ್ದ ಭಾಗದ ವಿಡಿಯೋವನ್ನು ಎಸ್‌ಆರ್‌ಎಫ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ವೀಕ್ಷಿಸಬಹುದು.

ಇದನ್ನು ಹಂಚಿಕೊಳ್ಳಿ