ಒಂದು ಪರಿಚಯ:
2014 ರಲ್ಲಿ ವಿಶ್ವಸಂಸ್ಥೆಯು ಪ್ರಾರಂಭಿಸಿದ ಅಂತರರಾಷ್ಟ್ರೀಯ ಯೋಗ ದಿನವನ್ನು ಪ್ರಪಂಚದಾದ್ಯಂತ ಜನರು ಪ್ರತಿ ವರ್ಷ ಜೂನ್ 21 ರಂದು ಆಚರಿಸುತ್ತಾರೆ, ಇದು ಆಧುನಿಕ ಜಗತ್ತಿಗೆ ಭಾರತದ ಪ್ರಾಚೀನ ವಿಜ್ಞಾನದ ಅನನ್ಯ ಕೊಡುಗೆಯನ್ನು ಅಂಗೀಕರಿಸುವ ಅವಕಾಶವಾಗಿದೆ.
ಅನೇಕ ಜನರು ಯೋಗವನ್ನು ಕೇವಲ ದೈಹಿಕ ವ್ಯಾಯಾಮಗಳೆಂದು ಭಾವಿಸಿದರೂ — ಹಠಯೋಗದ ಆಸನಗಳು ಅಥವಾ ಭಂಗಿಗಳು — ಯೋಗದ ನಿಜವಾದ ಮೌಲ್ಯ ಮತ್ತು ಉದ್ದೇಶವೆಂದರೆ ಮಾನವನ ಮನಸ್ಸು ಮತ್ತು ಆತ್ಮದ ಅನಂತ ಸಾಮರ್ಥ್ಯಗಳನ್ನು ಅನಾವರಣಗೊಳಿಸುವುದಾಗಿದೆ. ಯೋಗ ಎಂಬ ಪದದ ಅರ್ಥವೇ “ಸಂಯೋಗ”: ವಿಶ್ವಾತ್ಮಕ ಪ್ರಜ್ಞೆ ಅಥವಾ ಪರಮಾತ್ಮನೊಂದಿಗೆ ವೈಯಕ್ತಿಕ ಪ್ರಜ್ಞೆಯ ಅಥವಾ ಆತ್ಮದ ಸಂಯೋಗ.
“ಆತ್ಮವು ಭಗವತ್ ಚೇತನದೊಂದಿಗೆ ಸಂಯೋಗವಾಗುವುದೇ ಯೋಗ, ಪ್ರತಿಯೊಬ್ಬರೂ ಅರಸುತ್ತಿರುವ ಮಹದಾನಂದದೊಂದಿಗೆ ಪುನರ್ಮಿಲನ,” ಪರಮಹಂಸ ಯೋಗಾನಂದರು ಹೇಳಿದ್ದಾರೆ. “ಇದು ಎಷ್ಟು ಸುಂದರವಾದ ನಿರೂಪಣೆಯಲ್ಲವೆ? ಚೇತನದ ನಿತ್ಯ ನೂತನ ಆನಂದದಲ್ಲಿ ನೀವು ಕಾಣುವ ಆನಂದವು ಬೇರೆ ಯಾವುದೇ ಆನಂದಕ್ಕಿಂತ ಮಹತ್ತರವಾದದ್ದು ಮತ್ತು ಯಾವುದೂ ಕೂಡ ನಿಮ್ಮನ್ನು ನಿರುತ್ಸಾಹಗೊಳಿಸಲಾರದು ಎಂಬುದನ್ನು ನೀವು ಮನಗಾಣುತ್ತೀರಿ.”
ಪ್ರತಿಯೊಬ್ಬರೂ ಆ ಶುದ್ಧ ಆನಂದದ ಸ್ಥಿತಿಯನ್ನು ತಲುಪಬಹುದು ಎಂದು ಅವರು ವಿವರಿಸಿದರು, ಆದರೆ ಹಾಗೆ ಮಾಡಲು ಒಂದು ನಿರ್ದಿಷ್ಟ ವಿಧಾನ ಮತ್ತು ಆ ಯೋಗ ವಿಧಾನವನ್ನು ಜೀವನದ ಎಲ್ಲ ಅಂಶಗಳಿಗೂ ಅನ್ವಯಿಸುವ ಬಯಕೆಯ ಅಗತ್ಯವಿರುತ್ತದೆ — ಕೇವಲ ಒಂದು ದಿನವಲ್ಲ, ಬದಲಿಗೆ ಅದರ ನಿಜವಾದ ಪ್ರಯೋಜನಗಳನ್ನು ಆಂತರ್ಯದಲ್ಲಿ ಅರಿತುಕೊಳ್ಳುವವರೆಗೆ ನಿರಂತರವಾಗಿ ಅನ್ವಯಿಸಬೇಕಾಗುತ್ತದೆ.
ಯೋಗದ ಪ್ರಬಲ ಧ್ಯಾನ ತಂತ್ರಗಳು ಮತ್ತು ತತ್ವಗಳನ್ನು — ಉದಾಹರಣೆಗೆ ಪರಮಹಂಸಜಿ ಮತ್ತು ಅವರ ಪ್ರಸಿದ್ಧ ಗುರು ಪರಂಪರೆಯು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸ್ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ ಕ್ರಿಯಾ ಯೋಗ ಬೋಧನೆಗಳಲ್ಲಿ ಬೋಧಿಸಿದ್ದಂತಹವು-ಅವುಗಳನ್ನು ಬದುಕನ್ನು ಬದಲಿಸುವ ಫಲಿತಾಂಶಗಳಿಗಾಗಿ ಸಾರ್ವತ್ರಿಕವಾಗಿ ಅನ್ವಯಿಸಬಹುದಾದ ಕಾರಣ, ಯೋಗವನ್ನು ನಿಜವಾಗಿಯೂ ಜಾಗತಿಕವಾಗಿ ಆಚರಿಸಬಹುದು.
ಈ ಕೆಳಗೆ ಕೊಟ್ಟಿರುವ ಪರಮಹಂಸಜಿಯವರ ಸೂಕ್ಷ್ಮ ಪರಿಜ್ಞಾನವು, ಯೋಗವನ್ನು ಎಲ್ಲರಿಗಾಗಿ ಇರುವ ಅತ್ಯಂತ ಸಕಾರಾತ್ಮಕ ಶಕ್ತಿಯೆಂದು ಗೌರವಿಸುತ್ತದೆ, ಮತ್ತು ಕ್ರಿಯಾ ಯೋಗದ ಮಾರ್ಗವು ತನ್ನ ಅತ್ಯುತ್ತಮ ಪ್ರಾಯೋಗಿಕ ತಂತ್ರಗಳಿಂದಾಗಿ ಅನ್ವೇಷಕನನ್ನು ಅಂತಿಮ ಮುಕ್ತಿ ಮತ್ತು ಆನಂದಕ್ಕೆ ಹೇಗೆ ಕರೆದೊಯ್ಯುತ್ತದೆ ಎಂಬುದನ್ನು ತೋರಿಸುತ್ತದೆ. ಏನೇ ಆದರೂ, ಪರಮಹಂಸಜಿ ತಮ್ಮ ಯೋಗಿಯ ಆತ್ಮಕಥೆಯಲ್ಲಿ ಹೇಳಿದಂತೆ, “ಈ ವಿಶ್ವಕ್ಕೆ ಭಾರತದ ಕೊಡುಗೆ ಬೇರಾವುದೂ ಇಲ್ಲದಿದ್ದರೂ ಕ್ರಿಯಾ ಯೋಗವೊಂದೇ ರಾಜೋಚಿತ ಕೊಡುಗೆಯಾಗಲು ಸಾಕು.”
ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರಹಗಳಿಂದ:
ಯೋಗವು ಪ್ರಧಾನತಃ ಧ್ಯಾನದ ಒಂದು ವಿಜ್ಞಾನವಾಗಿದೆ: ಭಗವಂತನ ಮೇಲೆ ಏಕಾಗ್ರತೆ ಮತ್ತು ಅವನಲ್ಲಿ ಒಬ್ಬರ ಪ್ರಜ್ಞೆಯನ್ನು ಲೀನವಾಗಿಸಿಕೊಳ್ಳುವುದು. ಆದರೆ ಭಗವಂತನನ್ನು ಕುರಿತು ಅವಿಚ್ಛಿನ್ನವಾಗಿ ಧ್ಯಾನ ಮಾಡುವ ಸಾಮರ್ಥ್ಯಕ್ಕೆ ಸಹಜವಾದ ಪೂರ್ವಭಾವಿ ಷರತ್ತಾಗಿ, ಯೋಗವು ಮಾನವ ಸ್ವಭಾವ ಮತ್ತು ದೈನಂದಿನ ಜೀವನದ ಪ್ರತಿಯೊಂದು ಅಂಶವನ್ನೂ ಆಧ್ಯಾತ್ಮಿಕಗೊಳಿಸಲು ಶಿಸ್ತು ಹಾಗೂ ಸೂಕ್ತ ಮಾರ್ಗವನ್ನೂ ಬೋಧಿಸುತ್ತದೆ.
ಉದಾಹರಣೆಗೆ, ಯೋಗವು ಆತ್ಮದ ಮಾರ್ಗದರ್ಶನದ ಮೂಲಕ ಅಂದರೆ ಆತ್ಮಸಾಕ್ಷಾತ್ಕಾರದಿಂದ ಹುಟ್ಟಿದ ಜ್ಞಾನದ ಮೂಲಕ ಒಬ್ಬರಿಗೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಸುತ್ತದೆ. ಸಮಸ್ಯೆಗಳು ಮನಸ್ಸನ್ನು ಆಕ್ರಮಿಸಿಕೊಂಡಿರುವವರೆಗೆ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ವಾತಂತ್ರ್ಯಕ್ಕೆ ಹೆಚ್ಚು ಅವಕಾಶವಿರುವುದಿಲ್ಲ, ಏಕೆಂದರೆ ಮಾನಸಿಕ ಪ್ರಕ್ಷುಬ್ಧತೆ ಇದ್ದಾಗ ಇವು ಇರಲು ಸಾಧ್ಯವಿಲ್ಲ. ಮನಸ್ಸನ್ನು ಗೊಂದಲಮಯ ಮನಸ್ಥಿತಿಗಳು, ಚಿಂತೆಗಳು ಮತ್ತು ಭಯಗಳಿಂದ ಮುಕ್ತಗೊಳಿಸಬೇಕು ಆಗ ಮಾನಸಿಕ ಶಾಂತತೆಯ ಆಕಾಶದಲ್ಲಿ ಮುಕ್ತವಾದ ಸ್ವರ್ಗಪಕ್ಷಿಯು, ಅಂದರೆ ಆತ್ಮವು ಎತ್ತರಕ್ಕೆ ಹಾರಿ, ತನ್ನ ರೆಕ್ಕೆಗಳನ್ನು ತನ್ನ ಸಂಪೂರ್ಣ ಅಸ್ತಿತ್ವದ ಮೇಲೆ ಹರಡಬಹುದು. ಆಂತರಿಕವಾಗಿ ಮತ್ತು ಬಾಹ್ಯದಿಂದ ಒಬ್ಬರ ಜೀವನವನ್ನು ಪೀಡಿಸುವ ಗೊಂದಲಗಳು ಮತ್ತು ತೊಂದರೆಗಳನ್ನು ಕ್ರಮೇಣ ಕಡಿಮೆ ಮಾಡುವ ಮೂಲಕ, ಯೋಗವು ಸ್ವಾತಂತ್ರ್ಯಕ್ಕೆ ದಾರಿ ಮಾಡಿಕೊಡುತ್ತದೆ.
ಯೋಗದಾ ಸತ್ಸಂಗದ ಯೋಗ ಬೋಧನೆಗಳನ್ನು ಜೀವನದ ಪ್ರತಿಯೊಂದು ಹಂತಕ್ಕೂ ಬಳಸಿಕೊಳ್ಳಬಹುದು: ವ್ಯಾವಹಾರಿಕ, ಸಾಮಾಜಿಕ, ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ. ಆಧ್ಯಾತ್ಮಿಕ ಸತ್ಯಗಳ ಅಂತಹ ಸರ್ವತೋಮುಖ ಬಳಕೆಯು ಅತ್ಯುನ್ನತ ಆನಂದವನ್ನು ತರುತ್ತದೆ.
ನಮ್ಮ ಮಹಾನ್ ಗುರುಗಳೆಲ್ಲರ ಈ ಎಸ್‌ಆರ್‌ಎಫ್[ವೈಎಸ್‌ಎಸ್] ಮಾರ್ಗಕ್ಕೆ ನಾನು ನನ್ನ ಜೀವನವನ್ನು ಮುಡಿಪಾಗಿಟ್ಟೆ ಏಕೆಂದರೆ ಈ ಬೋಧನೆಗಳು ಜಗತ್ತಿಗೆ ಕಾರ್ಯೋಪಯೋಗಿ ವಿಧಾನವನ್ನು ನೀಡುತ್ತವೆ, ಅದರ ಮೂಲಕ ಎಲ್ಲಾ ಭಕ್ತರು ತಾವು ಭಗವಂತನೆಡೆಗೆ ಸಾಗುತ್ತಿದ್ದೇವೆ ಎಂದು ಸ್ಪಷ್ಟ ಅನುಭವದ ಮೂಲಕ ತಿಳಿದುಕೊಳ್ಳಬಹುದು.
ಧ್ಯಾನದ ನಿರಂತರ ಅಭ್ಯಾಸದಿಂದ, ನೀವು ನಿತ್ಯ-ನೂತನ, ನಿತ್ಯ-ವರ್ಧಿಸುತ್ತಿರುವ ಆನಂದದ- ಕೇವಲ ಅಲ್ಪಾವಧಿಯ ಮರ್ತ್ಯ ಸುಖದ, ಅಮೂರ್ತ ಮಾನಸಿಕ ಸ್ಥಿತಿಯಲ್ಲ, ಬದಲಿಗೆ ನಿಮ್ಮ ಪ್ರಾರ್ಥನೆಗಳನ್ನು ಸ್ವೀಕರಿಸಿ, ಅವುಗಳಿಗೆ ಪ್ರತಿಕ್ರಿಯಿಸುವ ಧ್ಯಾನದ ದಿವ್ಯಾನಂದದ ಪ್ರತ್ಯಕ್ಷಾನುಭವಗಳನ್ನು ಪಡೆಯುವಿರಿ ಎಂಬುದನ್ನು ಕಂಡುಕೊಳ್ಳುವಿರಿ.
ಧ್ಯಾನದಲ್ಲಿ ಅನುಭವಕ್ಕೆ ಬರುವ ಆನಂದವೇ ಭಗವಂತ. ವೈಎಸ್ಎಸ್ ಪಾಠಗಳಲ್ಲಿ ಕೊಡಲಾದ ಕ್ರಿಯಾ ಯೋಗ ವಿಜ್ಞಾನದ ತಂತ್ರಗಳನ್ನು ಅಭ್ಯಾಸ ಮಾಡುವುದರಿಂದ, ನೀವು ಆ ಆನಂದವನ್ನು ಕಂಡುಕೊಳ್ಳುವಿರಿ. ನನಗೆ ತಿಳಿದಂತೆ, ಈ ಜಗತ್ತಿನಲ್ಲಿ ಯಾವುದೂ ಅಂತಹ ಸಂತೋಷವನ್ನು ನೀಡುವುದಿಲ್ಲ. ಒಮ್ಮೆ ನೀವು ಭಗವಂತನನ್ನು ಸಂಪರ್ಕಿಸಿದರೆ, ಅವನಿಗಿಂತ ಹೆಚ್ಚಿನದನ್ನು ಬಯಸುವಂಥದ್ದು ಈ ಭೂಮಿಯ ಮೇಲೆ ಯಾವುದೂ ಇಲ್ಲ ಎಂದು ನಿಮಗೆ ತಿಳಿದುಬರುತ್ತದೆ.
ವೈಎಸ್ಎಸ್ ವೆಬ್‌ಸೈಟ್‌ನಲ್ಲಿರುವ “ಯೋಗದ ನಿಜವಾದ ಅರ್ಥ” ಇದನ್ನು ನೋಡಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ಅದರಲ್ಲಿ ನೀವು ಆತ್ಮದ ಸಹಜ ಆನಂದವನ್ನು ಹೆಚ್ಚು ಹೆಚ್ಚು ಅನುಭವಿಸಲು ಯೋಗವು ಒದಗಿಸುವ ಸಾರ್ವತ್ರಿಕ ಮತ್ತು ವೈಜ್ಞಾನಿಕ ವಿಧಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು.