7 ಜೂನ್‌, 2024

ಯೋಗ ವಿಜ್ಞಾನದ ಮತ್ತು ಜೀವನದ ಉದ್ದೇಶ

ಯೋಗದ ಹೃದಯದಲ್ಲೇನಿದೆ?

ಆತ್ಮವು ಚೇತನದೊಂದಿಗೆ ಸಂಯೋಗವಾಗುವುದೇ ಯೋಗ — ಪ್ರತಿಯೊಬ್ಬರೂ ಅರಸುತ್ತಿರುವ ಮಹದಾನಂದದೊಂದಿಗೆ ಪುನರ್ಮಿಲನ. ಇದು ಎಷ್ಟು ಸುಂದರವಾದ ನಿರೂಪಣೆಯಲ್ಲವೆ? ಚೇತನದ ನಿತ್ಯ ನೂತನ ಆನಂದದಲ್ಲಿ ನೀವು ಕಾಣುವ ಆನಂದವು ಬೇರೆ ಯಾವುದೇ ಆನಂದಕ್ಕಿಂತ ಮಹತ್ತರವಾದದ್ದು ಮತ್ತು ಯಾವುದೂ ಕೂಡ ನಿಮ್ಮನ್ನು ನಿರುತ್ಸಾಹಗೊಳಿಸಲಾರದು ಎಂಬುದನ್ನು ನೀವು ಮನಗಾಣುತ್ತೀರಿ.

— ಪರಮಹಂಸ ಯೋಗಾನಂದ

ಪುರಾತನ ಕಾಲದಿಂದಲೂ ಧ್ಯಾನವು ಭಾರತೀಯ ತತ್ವಚಿಂತನೆಯ ಅಂತರಾಳವಾಗಿದೆ. ಇದರ ಉದ್ದೇಶವನ್ನು ಯೋಗ ಪದದ ವಾಚ್ಯಾರ್ಥದಲ್ಲಿ ಕಾಣಬಹುದು: “ಸಂಯೋಗ”—ವೈಯಕ್ತಿಕ ಪ್ರಜ್ಞೆ ಅಥವಾ ಆತ್ಮವು ಅನಂತತೆಯೊಂದಿಗೆ, ನಿತ್ಯಾನಂದದೊಂದಿಗೆ ಅಥವಾ ಚೇತನದೊಂದಿಗೆ ಸಂಯೋಗಗೊಳ್ಳುವುದು.

ಚೇತನದ ಆನಂದಮಯ ಪ್ರಜ್ಞೆಯಲ್ಲಿನ ಈ ಸಂಯೋಗವನ್ನು ಸಿದ್ಧಿಸಿಕೊಳ್ಳಲು—ಮತ್ತು ಹೀಗೆ ನಮ್ಮನ್ನು ನಾವು ಎಲ್ಲ ರೀತಿಯ ಕ್ಲೇಶಗಳಿಂದ ಮುಕ್ತಗೊಳಿಸಿಕೊಳ್ಳಲು–ಒಂದು ಕಾಲ-ಪರೀಕ್ಷಿತ ಮತ್ತು ವ್ಯವಸ್ಥಿತ ಪ್ರಕ್ರಿಯೆಯನ್ನು ಅನುಸರಿಸಿ ಮಾಡುವ ಧ್ಯಾನದ ಸಹನಶೀಲ ಅಭ್ಯಾಸ ಬೇಕಾಗುತ್ತದೆ. ಅಂದರೆ, ನಾವು ಒಂದು ವಿಜ್ಞಾನವನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ.

ರಾಜ ಯೋಗವೇ ಭಗವತ್‌-ಸಾಕ್ಷಾತ್ಕಾರದ ಸಮಗ್ರವಾದ ವಿಜ್ಞಾನ — ಯೋಗ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಧ್ಯಾನ ಹಾಗೂ ಯುಕ್ತ ಕ್ರಿಯೆಯ ಹಂತ ಹಂತದ ವಿಧಾನಗಳು, ಇವನ್ನು ಭಾರತದ ಸನಾತನ ಧರ್ಮದ ಸಾರಭೂತ ಅಭ್ಯಾಸಗಳೆಂದು ಸಹಸ್ರಾರು ವರ್ಷಗಳಿಂದ ನಮಗಾಗಿ ಕೊಡಲಾಗಿದೆ. ಈ ಕಾಲಾತೀತ ಹಾಗೂ ಸಾರ್ವತ್ರಿಕ ಯೋಗ ವಿಜ್ಞಾನವೇ ಎಲ್ಲ ನೈಜ ಧರ್ಮಗಳ ಅಂತರಾಳದಲ್ಲಿರುವ ಗಹನವಾದ ಬೋಧನೆಗಳಿಗೆ ಆಧಾರವಾಗಿದೆ.

ಯೋಗದಾ ಸತ್ಸಂಗದ ರಾಜ ಯೋಗದ ಬೋಧನೆಗಳು, ಕ್ರಿಯಾ ಯೋಗದ ತಳಹದಿಯ ಮೇಲೆ ರೂಪಿತವಾಗಿರುವ ದೇಹ, ಮನಸ್ಸು ಹಾಗೂ ಆತ್ಮವು ಪರಿಪೂರ್ಣವಾಗಿ ತೆರೆದುಕೊಳ್ಳುವ ಜೀವನಶೈಲಿಯೆಡೆಗಿನ ಮಾರ್ಗದ ಸ್ಥೂಲ ವಿವರಣೆಯನ್ನು ನೀಡುತ್ತವೆ. ಇದರಲ್ಲಿ ಭಗವದ್ಗೀತೆಯಲ್ಲಿ ಭಗವಾನ್‌ ಕೃಷ್ಣ ಮತ್ತು ಯೋಗ ಸೂತ್ರಗಳಲ್ಲಿ ಋಷಿ ಪತಂಜಲಿ ಹೇಳಿರುವ ಆದರೆ ವಿಶದೀಕರಿಸದ ಪ್ರಾಣಾಯಾಮದ (ಪ್ರಾಣ-ಶಕ್ತಿಯ ನಿಯಂತ್ರಣ) ತಂತ್ರವೂ ಸೇರಿದೆ. ಹಲವು ಶತಮಾನಗಳ ಹಿಂದೆಯೇ ಮಾನವಕೋಟಿಯಿಂದ ಕಣ್ಮರೆಯಾಗಿದ್ದ ಕ್ರಿಯಾ ಯೋಗವನ್ನು ಇಂದಿನ ಪೀಳಿಗೆಗಾಗಿ ಪ್ರಖ್ಯಾತ ಯೋಗ ಪುರುಷರ ಪರಂಪರೆಯಾದ ಮಹಾವತಾರ್‌ ಬಾಬಾಜಿ, ಲಾಹಿರಿ ಮಹಾಶಯ, ಸ್ವಾಮಿ ಶ್ರೀ ಯುಕ್ತೇಶ್ವರ್‌ ಹಾಗೂ ಪರಮಹಂಸ ಯೋಗಾನಂದರಿಂದ, ಮತ್ತೆ ಬಳಕೆಗೆ ತರಲಾಗಿದೆ.

ಕ್ರಿಯಾ ಯೋಗ ವಿಜ್ಞಾನವನ್ನು ಪಶ್ಚಿಮಕ್ಕೆ ತರಲು ಮತ್ತು ಜಗದಾದ್ಯಂತ ಪ್ರಸಾರಮಾಡಲು ಪರಮಹಂಸ ಯೋಗಾನಂದರನ್ನು ಅವರ ಪೂಜ್ಯ ಗುರುಗಳ ಪರಂಪರೆಯು ಆಯ್ಕೆಮಾಡಿತು; ಮತ್ತು ಈ ಉದ್ದೇಶಕ್ಕಾಗಿಯೇ ಅವರು 1920ರಲ್ಲಿ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ ಅನ್ನು ಸ್ಥಾಪಿಸಿದರು.

ಸಮತೋಲಿತ ಕ್ರಿಯಾ ಯೋಗ ಮಾರ್ಗದಲ್ಲಿ ಮುಖ್ಯವಾದದ್ದು ಯೋಗದಾ ಸತ್ಸಂಗ ಪಾಠಗಳಲ್ಲಿ ಪರಮಹಂಸ ಯೋಗಾನಂದರು ಕಲಿಸಿರುವ ಧ್ಯಾನದ ವೈಜ್ಞಾನಿಕ ತಂತ್ರಗಳ ದಿನನಿತ್ಯದ ಅಭ್ಯಾಸ. ಧ್ಯಾನವನ್ನು ಅಭ್ಯಾಸ ಮಾಡುವುದರಿಂದ, ನಾವು ಕೊನೆಯಿಲ್ಲದ ಶಾಂತಿ, ಪ್ರೇಮ, ಪರಿಜ್ಞಾನ ಹಾಗೂ ಆನಂದವನ್ನು ನಮ್ಮ ಅಸ್ತಿತ್ವದ ಸಹಜ ಪ್ರಕೃತಿಯಂತೆ ಮನಗಾಣಲು, ಶರೀರ ಹಾಗೂ ಮನಸ್ಸಿನ ಚಂಚಲತೆಯನ್ನು ಹೇಗೆ ನಿಶ್ಚಲಗೊಳಿಸುವುದು ಎಂಬುದನ್ನು ಕಲಿಯುತ್ತೇವೆ — ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಏನೇ ಆಗುತ್ತಿದರೂ ಸಹ.

ಹೆಚ್ಚು ಹೆಚ್ಚು ಧ್ಯಾನ ಮಾಡಿ. ಅದು ಎಷ್ಟು ಅದ್ಭುತವಾದುದೆಂದು ನಿಮಗೆ ತಿಳಿದಿಲ್ಲ. ಹಣ, ಮಾನವ ಪ್ರೇಮ ಅಥವಾ ನೀವು ಯೋಚಿಸಲು ಸಾಧ್ಯವಿರುವ ಬೇರಾವುದನ್ನೋ ಅರಸುತ್ತ ಕಾಲ ಕಳೆಯುವ ಬದಲು ಧ್ಯಾನ ಮಾಡುವುದು ಹೆಚ್ಚು ಉನ್ನತವಾದದ್ದು. ನೀವು ಹೆಚ್ಚು ಧ್ಯಾನ ಮಾಡಿದಷ್ಟೂ, ಚಟುವಟಿಕೆಯ ಸಮಯದಲ್ಲಿ ನಿಮ್ಮ ಮನಸ್ಸು ಆಧ್ಯಾತ್ಮಿಕ ಸ್ತರದಲ್ಲಿ ಹೆಚ್ಚು ಕೇಂದ್ರಿತವಾದಷ್ಟೂ ನೀವು ಹೆಚ್ಚು ಮುಗುಳ್ನಗಲು ಸಾಧ್ಯವಾಗುತ್ತದೆ. ನಾನು ಆ ಸ್ಥಿತಿಯಲ್ಲಿ, ಭಗವಂತನ ಪರಮಾನಂದದ ಪ್ರಜ್ಞೆಯಲ್ಲಿ ಸದಾ ಇರುತ್ತೇನೆ. ನನ್ನ ಮೇಲೆ ಯಾವುದೂ ಪರಿಣಾಮ ಬೀರುವುದಿಲ್ಲ. ನಾನು ಏಕಾಂಗಿಯಾಗಿದ್ದೇನೆಯೋ ಅಥವಾ ಜನರೊಡನಿದ್ದೇನೆಯೋ, ಭಗವಂತನ ಆನಂದ ಸದಾ ನನ್ನೊಡನಿರುತ್ತದೆ. ನಾನು ನನ್ನ ಮುಗುಳ್ನಗೆಯನ್ನು ನನ್ನಲ್ಲಿ ಹಿಡಿದಿಟ್ಟುಕೊಂಡಿದ್ದೇನೆ; ಆದರೆ ಅದನ್ನು ಶಾಶ್ವತವಾಗಿ ಗೆಲ್ಲುವುದು ಕಠಿಣ ಪರಿಶ್ರಮವಾಗಿತ್ತು! ಅವೇ ಮುಗುಳ್ನಗೆಗಳು ನಿಮ್ಮ ಆಂತರ್ಯದಲ್ಲೂ ಇವೆ. ಆತ್ಮದ ಅದೇ ಸಂತೋಷ ಮತ್ತು ಪರಮಾನಂದ ನಿಮ್ಮಲ್ಲೇ ಇವೆ. ನೀವೇನೂ ಅವುಗಳನ್ನು ಸಂಪಾದಿಸಬೇಕಾಗಿಲ್ಲ; ಆದರೆ ಅವನ್ನು ಪುನಃ ಪುನಃ ಪಡೆಯಬೇಕಷ್ಟೆ

— ಪರಮಹಂಸ ಯೋಗಾನಂದ

ಧ್ಯಾನದ ಪ್ರಯೋಗಶಾಲೆಯ ಒಳಗೆ

ನಾನು ನಿಮಗೆ ಹೇಳಿರುವ ಎಲ್ಲ ಅನುಭವಗಳು ವೈಜ್ಞಾನಿಕವಾಗಿ ಸಾಧಿಸಬಹುದಾದವು. ನೀವು ಆಧ್ಯಾತ್ಮಿಕ ನಿಯಮಗಳನ್ನು ಅನುಸರಿಸಿದರೆ, ಫಲಿತಾಂಶವು ಖಚಿತ.

— ಪರಮಹಂಸ ಯೋಗಾನಂದ

ಒಬ್ಬ ವಿಜ್ಞಾನಿಯು ಒಂದು ನಿರ್ದಿಷ್ಟ ಪ್ರಯೋಗದ ಫಲಿತಾಂಶಗಳನ್ನು ಪರಿಶೀಲಿಸಲು ಪ್ರಯೋಗಾಲಯಕ್ಕೆ ಹೋಗುವಂತೆಯೇ, ಯೋಗಿಯು ಧ್ಯಾನದ “ಪ್ರಯೋಗಾಲಯ”ಕ್ಕೆ ಹೋಗಿ, ಭಾರತದ ಋಷಿಗಳಿಂದ ಮತ್ತು ವಾಸ್ತವತೆಯ ಹೃದಯವನ್ನು ಹೊಕ್ಕು ನೋಡಿರುವ ಯಾವುದೇ ರಾಷ್ಟ್ರದ ಅಥವಾ ಯಾವುದೇ ಕಾಲದ ಪ್ರತಿಯೊಬ್ಬ ಸತ್ಯಾನ್ವೇಷಕರಿಂದ ಸಾಬೀತಾದ ಫಲಿತಾಂಶಗಳನ್ನು ಪಡೆಯಬಹುದು.

ವಿಜ್ಞಾನವು ಯಾವುದನ್ನೂ ಕುರುಡು ನಂಬಿಕೆ ಅಥವಾ ಸಿದ್ಧಾಂತದ ರೂಪದಲ್ಲಿ ಒಪ್ಪಿಕೊಳ್ಳಲು ನಮಗೆ ಹೇಳುವುದಿಲ್ಲ. ಯೋಗಿ-ವಿಜ್ಞಾನಿಗಳು ಶತಶತಮಾನಗಳಿಂದ ಪ್ರದರ್ಶಿಸಿ ಪುನರಾವರ್ತಿಸಿರುವ ನಿರ್ದಿಷ್ಟ ಧ್ಯಾನ ವಿಧಾನಗಳನ್ನು ಬಳಸಿಕೊಂಡು, ಅವುಗಳ ಪರಿಣಾಮಕಾರಿತ್ವವನ್ನು ನಮಗೆ ನಾವೇ ಸಾಬೀತುಪಡಿಸಬಹುದು – ಮತ್ತು ನಾವು ಈ ಸೀಮಿತ ದೇಹಗಳು ಎಂಬ ಹುಸಿಯಾದರೂ ಬಿಗಿಹಿಡಿತವಿರುವ ಕಲ್ಪನೆಯನ್ನು ಕ್ರಮೇಣ ಜಯಿಸಬಹುದು. ಹೀಗೆ ನಾವು ಸತ್ಯವನ್ನು ಕಂಡುಕೊಳ್ಳಬಹುದು – ಆ ಸತ್ಯವೇನೆಂದರೆ, ಅಂತಸ್ಥವಾದ ಆತ್ಮವಾಗಿ, ನಾವು ಪ್ರಪಂಚದ ದ್ವೈತಗಳು ಮತ್ತು ಪರೀಕ್ಷೆಗಳಿಂದ ಪ್ರಭಾವಿತರಾಗಿಲ್ಲ; ನಾವು ಇಂದಿಗೂ ಎಂದೆಂದಿಗೂ ಆನಂದಮಯ ಅನಂತದೊಂದಿಗೆ ಒಂದಾಗಿರುತ್ತೇವೆ. ಪರಮಾತ್ಮನೊಂದಿಗೆ ತನ್ನ ಸ್ವಸ್ವರೂಪವನ್ನು ಸಂಪೂರ್ಣವಾಗಿ ಅರಿತುಕೊಂಡ ಒಬ್ಬ ನಿಜವಾದ ಗುರುವಿನ ಮಾರ್ಗದರ್ಶನದಲ್ಲಿ ಧ್ಯಾನದ ಸೂಕ್ತ ವಿಧಾನಗಳನ್ನು ಅಭ್ಯಾಸ ಮಾಡುವ ಪ್ರತಿಯೊಬ್ಬರಿಗೂ ಅಂತಿಮವಾಗಿ ಅಂತಹ ಗಹನವಾದ ತಿಳುವಳಿಕೆ ಬರುತ್ತದೆ.

ಈ ವೈಜ್ಞಾನಿಕ ಯುಗದಲ್ಲಿ, ಭೌತಿಕ ಬ್ರಹ್ಮಾಂಡದ ಅತ್ಯಂತ ವಿಶಾಲವಾದ ವಿಸ್ತಾರಗಳಿಂದ ಹಿಡಿದು ಸೂಕ್ಷ್ಮ ಕಣಗಳವರೆಗೆ ಪರಿಶೋಧನೆಗಳು ನಡೆಯುತ್ತಿರುವಾಗ, ಆಧ್ಯಾತ್ಮಿಕ ಲೋಕವನ್ನು ಅರ್ಥಮಾಡಿಕೊಳ್ಳಲು ಅಷ್ಟೇ ಸಾಹಸಮಯ ಮತ್ತು ವೈಜ್ಞಾನಿಕ ವಿಧಾನದ ಅಗತ್ಯವೂ ಇದೆ. ನಾವು ನಮ್ಮ ಆಧ್ಯಾತ್ಮಿಕ ಅನ್ವೇಷಣೆಗಳನ್ನು, ಕೇವಲ ಧರ್ಮದ ನಂಬಿಕೆಗಳ ಬಗ್ಗೆ ಚರ್ಚಿಸುವುದರಿಂದ ಮುಂದಕ್ಕೆ ಹೋಗಿ ನೇರ ಅನುಭವದ ಮೂಲಕ ಸತ್ಯವನ್ನು ಅರಿಯುವ ತೃಪ್ತಿಯನ್ನು ಪಡೆಯುವವರೆಗೆ ತೆಗೆದುಕೊಂಡು ಹೋಗಬೇಕಾಗಿದೆ. ಮತ್ತು ಅಂತಹ ಜ್ಞಾನವನ್ನು ನೀಡುವ ವ್ಯವಸ್ಥಿತ ಕಾರ್ಯವಿಧಾನಗಳು ಮತ್ತು ಶಿಸ್ತುಗಳನ್ನು ಅನುಸರಿಸಲು ಇಚ್ಛಿಸುವ ಯಾರೇ ಆದರೂ ಇದೇ ಸತ್ಯವನ್ನು ಸಮರ್ಥಿಸುವಂತಿರಬೇಕು.

ಒಬ್ಬ ಆಧ್ಯಾತ್ಮಿಕ ವಿಜ್ಞಾನಿಯಾಗಿ, ಯೋಗಿಯು, ಆತ್ಮ ಮತ್ತು ಪರಮಾತ್ಮನ ಚಿರಂತನ ಪ್ರಕೃತಿಯನ್ನು ಸಂಪೂರ್ಣ ಸ್ಪಷ್ಟತೆ, ನಿಖರತೆ ಮತ್ತು ಪರಿಪೂರ್ಣ ವಿಸ್ಮಯದೊಂದಿಗೆ ಅನುಭವಿಸಬಹುದಾದ ಏಕೈಕ ಪ್ರಯೋಗಾಲಯವಾದ ತನ್ನ ಪ್ರಜ್ಞೆಯಲ್ಲಿ ಸ್ಪಷ್ಟವಾದ ಶಾಂತಿ, ಪ್ರೀತಿ, ಜ್ಞಾನ ಮತ್ತು ಭಗವಂತನ ಸಂಪರ್ಕದ ಆನಂದವನ್ನು ಹೊಂದಲು ಧ್ಯಾನದ ತಂತ್ರಗಳನ್ನು ಅಭ್ಯಾಸ ಮಾಡುತ್ತಾನೆ.

ಯೋಗ ಧ್ಯಾನದಲ್ಲಿ, ಧ್ಯಾನಿಯು ಪ್ರಾಣಾಯಾಮ (ಜೀವ ಶಕ್ತಿಯ ನಿಯಂತ್ರಣ) ಎಂದು ಕರೆಯಲ್ಪಡುವ ಒಂದು ಪ್ರಕ್ರಿಯೆಯ ಮೂಲಕ ಸಂವೇದಕ ಮತ್ತು ಚಾಲಕ ನರಗಳಿಂದ ಜೀವ ಶಕ್ತಿಯನ್ನು (ಪ್ರಾಣ) ಹಿಂತೆಗೆದುಕೊಳ್ಳುತ್ತಾನೆ ಮತ್ತು ಅದನ್ನು ಬೆನ್ನುಹುರಿ ಹಾಗೂ ಮಿದುಳಿನೊಳಗಿನ ಉನ್ನತ ಅರಿವಿನ ಕೇಂದ್ರಗಳಿಗೆ ನಿರ್ದೇಶಿಸುತ್ತಾನೆ. ಆಂತರಿಕವಾಗಿ ಚಲಿಸುವ ಪ್ರಾಣವು ಪ್ರಜ್ಞೆಯನ್ನು ಬಾಹ್ಯ ಪ್ರಪಂಚದಿಂದ ಒಳಗಿನ ಅನಂತ ಲೋಕಕ್ಕೆ ತಾನಾಗಿಯೇ ಹಿಂತೆಗೆದುಕೊಳ್ಳುತ್ತದೆ. ಪ್ರಾಣಾಯಾಮ ಧ್ಯಾನವು ಆಲೋಚಿಸುವ ಅಥವಾ ತಾತ್ವಿಕ ಚಿಂತನೆಯ ಅಸ್ಪಷ್ಟ ಮಾನಸಿಕ ಪ್ರಕ್ರಿಯೆಯಾಗಿರದೆ, ಆತ್ಮದ ಅನಂತ ಸಾಮರ್ಥ್ಯವನ್ನು ಹೊರಗೆಡಹುವ ಕಾಲ-ಪರೀಕ್ಷಿತ ಮಾರ್ಗವಾಗಿದೆ.

ವಿಜ್ಞಾನಿಗಳು ಕೇವಲ ಪ್ರಾರ್ಥನೆಯಿಂದ ಆವಿಷ್ಕಾರಗಳನ್ನು ಮಾಡದೆ, ಪ್ರಕೃತಿಯ ನಿಯಮಗಳನ್ನು ಅನ್ವಯಿಸುವ ಮೂಲಕ ಮಾಡುತ್ತಾರೆ. ಅಂತೆಯೇ, ನಿಯಮವನ್ನು ಪಾಲಿಸುವವನ ಬಳಿಗೆ, ಧ್ಯಾನದ ವಿಜ್ಞಾನವನ್ನು ಅನ್ವಯಿಸುವವನ ಬಳಿಗೆ ಭಗವಂತ ಬರುತ್ತಾನೆ. ಜನರು ಧರ್ಮಶಾಸ್ತ್ರದ ಕಾಡಿನಲ್ಲಿ ಅಲೆದಾಡುತ್ತ ಕಳೆದುಹೋಗಿದ್ದಾರೆ. ಭಗವಂತನನ್ನು ಹುಡುಕುತ್ತ ನಾನು ದೇವಾಲಯದಿಂದ ದೇವಾಲಯಕ್ಕೆ ವ್ಯರ್ಥವಾಗಿ ಹೋದೆ; ಆದರೆ ಭಗವಂತನ ಮಹಾನ್ ಪ್ರೇಮಿಗಳ ಆತ್ಮ ಮಂದಿರಗಳನ್ನು ನಾನು ಕಂಡಾಗ, ಅವನು ಇದ್ದಾನೆಂದು ಅರಿತುಕೊಂಡೆ. ಸುಂದರ ಕಟ್ಟಡಗಳಿಂದ ಅವನನ್ನು ಆಮಿಷಕ್ಕೊಳಪಡಿಸಲು ಸಾಧ್ಯವಿಲ್ಲ. ತನ್ನನ್ನು ಎಡೆಬಿಡದೆ ಕರೆಯುತ್ತಿರುವ, ಕಣ್ಣೀರಿನಿಂದ ತೊಳೆದ ಹೃದಯದ ಪೂಜಾಪೀಠಕ್ಕೆ ಅವನು ಬರುತ್ತಾನೆ. ಭಗವಂತನಿರುವುದು ವಾಸ್ತವ. ವರ್ಷಗಟ್ಟಲೆ ತಮ್ಮನ್ನು ತಾವು ಧ್ಯಾನಕ್ಕೆ ಅರ್ಪಿಸಿಕೊಂಡ ಮಹಾತ್ಮರು ಅವನನ್ನು ಕಂಡುಕೊಂಡಿದ್ದಾರೆ.

— ಪರಮಹಂಸ ಯೋಗಾನಂದ

ಆನಂದವೇ ನಮ್ಮ ಪ್ರೇರಣೆಯಾಗಿ

ನೀವು ವಿವಿಧ ವಸ್ತುಗಳ ನಡುವೆ, ಪ್ರತ್ಯಕ್ಷವಾದ ಅಥವಾ ಪರೋಕ್ಷವಾದ ಹುಡುಕಾಟದಲ್ಲಿರುವಾಗ, ನೀವು ನಿಜವಾಗಿಯೂ ಹುಡುಕುತ್ತಿರುವುದು ನಿಮ್ಮ ಆಸೆಗಳ ಈಡೇರಿಕೆಯ ಮೂಲಕ ದೊರೆಯುವ ಸಂತೋಷವನ್ನು….ಹಾಗಿದ್ದಲ್ಲಿ ನೇರವಾಗಿ ಆನಂದವನ್ನೇ ಏಕೆ ಅರಸಬಾರದು?

— ಪರಮಹಂಸ ಯೋಗಾನಂದ

the-science-of-religion-english-paperback-by-sri-sri-paramahansa-yogananda-yss-front.jpg

ತಮ್ಮ ಮೊಟ್ಟಮೊದಲ ಉಪನ್ಯಾಸದಲ್ಲೇ ಮತ್ತು ತಮ್ಮ ಧರ್ಮದ ವಿಜ್ಞಾನ ಪುಸ್ತಕದಲ್ಲಿ ಪರಮಹಂಸ ಯೋಗಾನಂದರು ಅಮೆರಿಕದಲ್ಲಿ ಪಾಶ್ಚಿಮಾತ್ಯರಿಗೆ ಸತ್-ಚಿತ್-ಆನಂದ — ನಿತ್ಯ-ಸಂಭವ, ನಿತ್ಯ-ಪ್ರಜ್ಞ, ನಿತ್ಯನೂತನ ಆನಂದ – ಎಂಬ ಭಗವಂತನ ಪ್ರಾಚೀನ ವೈದಿಕ ಪರಿಕಲ್ಪನೆಯನ್ನು ಪರಿಚಯಿಸಿದರು.

ನಮ್ಮೆಲ್ಲ ವಿವಿಧ ಆಸೆಗಳನ್ನು ಪೂರೈಸುವ ನಮ್ಮ ಪ್ರಯತ್ನಗಳ ಕೆಳಗೆ, ಅದಕ್ಕಿಂತ ಹೆಚ್ಚಾಗಿ ಕೇವಲ ಸಂತೋಷಕ್ಕಾಗಿ ಮತ್ತು ಅದರ ಜೊತೆಗೆ ಕಷ್ಟದಿಂದ ಮುಕ್ತರಾಗುವ ಮೂಲಭೂತ ಹಂಬಲ ಇಲ್ಲವೇ? ಪರಮಹಂಸಜಿಯವರು ತಮ್ಮ ಸಾರ್ವಜನಿಕ ಉಪನ್ಯಾಸಗಳಿಗೆ ಬಂದವರನ್ನು ಮತ್ತು ನಂತರದಲ್ಲಿ ತಮ್ಮ ಕ್ರಿಯಾ ಯೋಗ ಬೋಧನೆಗಳ ವಿದ್ಯಾರ್ಥಿಗಳಾದವರನ್ನು ಆ ಸಂತೋಷವನ್ನು ನೇರವಾಗಿ ಕಂಡುಕೊಳ್ಳಲು — ಯೋಗ ಧ್ಯಾನದ ವೈಜ್ಞಾನಿಕ ವಿಧಾನವನ್ನು ಬಳಸಿಕೊಂಡು ತಮ್ಮೊಳಗೆ ಆಧ್ಯಾತ್ಮಿಕ ಆನಂದವನ್ನು ಅರಸಲು ಆಹ್ವಾನಿಸಿದರು.

ಧ್ಯಾನದಲ್ಲಿ ಪರಮಾನಂದವೇ ಭಗವಂತನೆಂದು ಅರಿತುಕೊಳ್ಳುವ ಅವಕಾಶದ ಬಗ್ಗೆ ಮಾತನಾಡುತ್ತಾ ಪರಮಹಂಸಜಿ ಹೇಳಿದರು: “ಅವನು ಎಲ್ಲರ ಪ್ರಶಾಂತ ಅನುಭವದೊಳಗೆ ಬರುತ್ತಾನೆ. ಪರಮಾನಂದದ ಪ್ರಜ್ಞೆಯಲ್ಲಿ ನಾವು ಅವನನ್ನು ಅರಿಯುತ್ತೇವೆ. ಅವನ ಅಸ್ತಿತ್ವದ ನೇರ ಸಾಕ್ಷ್ಯ ಇದಕ್ಕಿಂತ ಬೇರಾವುದೂ ಇರಲು ಸಾಧ್ಯವಿಲ್ಲ. ಪರಮಾನಂದ ರೂಪದ ಅವನಲ್ಲಿ ಆಧ್ಯಾತ್ಮಿಕ ನಂಬಿಕೆಗಳು ಮತ್ತು ಹಂಬಲಗಳು ಸಾರ್ಥಕತೆಯನ್ನು ಪಡೆಯುತ್ತವೆ, ನಮ್ಮ ಭಕ್ತಿ ಮತ್ತು ಪ್ರೇಮಗಳು ಒಂದು ಉದ್ದೇಶವನ್ನು ಕಂಡುಕೊಳ್ಳುತ್ತವೆ.”

ನಾವೆಲ್ಲರೂ ಹುಡುಕುತ್ತಿರುವುದು, ಲಯಬದ್ಧವಾಗಿ ಸದಾ ಬದಲಾಗುವ ಆದರೂ ತಾನು ಬದಲಾಗದೆ ಉಳಿಯುವ ಆನಂದವನ್ನು, ಒಬ್ಬ ನಟನು ವಿಭಿನ್ನ ಪಾತ್ರಗಳು ಮತ್ತು ಭಂಗಿಗಳಿಂದ ಮನರಂಜನೆ ನೀಡುವಂತೆ. ಅಂತಹ ಆನಂದವನ್ನು ನಿಯತ ಮತ್ತು ಆಳವಾದ ಧ್ಯಾನದ ಮೂಲಕ ಮಾತ್ರ ಕಂಡುಕೊಳ್ಳಬಹುದು. ಬದಲಾಗದ, ನಿತ್ಯ ನೂತನ ಆನಂದದ ಆಂತರಿಕ ಕಾರಂಜಿ ಮಾತ್ರ ನಮ್ಮ ತೃಷೆಯನ್ನು ತಣಿಸಬಲ್ಲದು. ಈ ದಿವ್ಯ ಆನಂದವು ಸ್ವಭಾವತಃ ಮನಸ್ಸಿಗೆ ಎಂದಿಗೂ ಬೇಸರ ತರಿಸದ ಅಥವಾ ನಾವು ಅದನ್ನು ಬೇರೆ ಯಾವುದರೊಂದಿಗಾದರೂ ವಿನಿಮಯ ಮಾಡಿಕೊಳ್ಳಲು ನಮ್ಮನ್ನು ಪ್ರೇರೇಪಿಸದ ಏಕೈಕ ಆಕರ್ಷಣೆಯಾಗಿದೆ.

— ಪರಮಹಂಸ ಯೋಗಾನಂದ

ಯೋಗದ ಸಾರ್ವತ್ರಿಕತೆ

ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿಯವರು 2017ರಲ್ಲಿ ಭಾರತದಲ್ಲಿ ಮಾತನಾಡುವಾಗ: “ಭಾರತವು ಶತಶತಮಾನಗಳಿಂದ ಎಲ್ಲ ಮಾನವಸಂಕುಲಕ್ಕೂ ಅತ್ಯುನ್ನತ ಆಧ್ಯಾತ್ಮಿಕ ಸತ್ಯದ ಪ್ರಧಾನಾಧಿಕಾರಿಯಾಗಿದೆ. ಅದು ಭಾರತದ ಅತ್ಯುನ್ನತವಾದುದನ್ನು ಪರಮಹಂಸಜಿಯವರು ಮೊದಲು ಪಶ್ಚಿಮಕ್ಕೆ, ನಂತರ ಇಡೀ ಜಗತ್ತಿಗೆ ಹಾಗೂ ತಮ್ಮ ಪ್ರೀತಿಪಾತ್ರ ಭಾರತಕ್ಕೆ ಹಿಂದಿರುಗಿ ನೀಡಿದ ವಿಶಿಷ್ಟ ದೈವಸಂಕಲ್ಪವಾಗಿತ್ತು. ಅವರು ಉತ್ಕೃಷ್ಟ ಕಾಲದ ಅಂದರೆ ಭಾರತದ ಉತ್ಕೃಷ್ಟ ನಾಗರಿಕತೆಯ ಸುವರ್ಣ ಯುಗದ, ಸರ್ವಾನ್ವಯ ಆಧ್ಯಾತ್ಮಿಕತೆಯ ಸಾರವನ್ನು ಅದರ ಪರಿಶುದ್ಧ ರೂಪದಲ್ಲಿ ಹೊರತಂದರು. ಅದೇ ಯೋಗ. ಅದು ಒಂದು ವಿಜ್ಞಾನವಾಗಿದೆ, ಒಂದು ವರ್ಗ ಅಥವಾ ಒಂದು ಧಾರ್ಮಿಕ ಪಂಥವಲ್ಲ; ಮತ್ತು ಅದರಿಂದಾಗಿ ಈ ಆಧ್ಯಾತ್ಮಿಕ ದೈವಸಂಕಲ್ಪವು–ಯೋಗ ಪ್ರಕಾಶವು–ನಿಜವಾಗಿಯೂ ಜಗದಾದ್ಯಂತ ಇಡೀ ಮಾನವಸಂಕುಲಕ್ಕೆ ಆಧ್ಯಾತ್ಮಿಕ ವರವಾಗಬಹುದು.”

ಯೋಗವನ್ನು ಅಭ್ಯಾಸ ಮಾಡಲು ಮತ್ತು ಅದರ ಮಹೋನ್ನತ ಲಾಭಗಳನ್ನು ಪಡೆಯಲು ಒಬ್ಬರು ಯಾವುದೇ ನಿರ್ದಿಷ್ಟ ರಾಷ್ಟ್ರ, ಪಂಗಡ ಅಥವಾ ಮತ, ಧರ್ಮಕ್ಕೆ ಸೇರಿದವರಾಗಬೇಕಿಲ್ಲ ಎಂದು ಪರಮಹಂಸ ಯೋಗಾನಂದರು ಬಹಳಷ್ಟು ಸಲ ಹೇಳಿದ್ದಾರೆ. ಒಂದು ವಿಜ್ಞಾನವಾಗಿ, ಅದರ ಫಲಗಳನ್ನು ಯಾವುದೇ ರಾಷ್ಟ್ರದ, ಪೂರ್ವದ ಅಥವಾ ಪಶ್ಚಿಮದ, ಯಾರೇ ಆದರೂ ಪಡೆದುಕೊಳ್ಳಬಹುದು ಎಂಬ ಅಂಶದ ಮೇಲೆ ಅದರ ನೈಜ ಸಾರ್ವತ್ರಿಕತೆ ಅಡಗಿದೆ.

ಯೋಗ ಧ್ಯಾನದ ಸತತ ಅಭ್ಯಾಸದ ಮೂಲಕ, ನಾವೆಲ್ಲರೂ ಆನಂದ, ಪ್ರೇಮ, ದಯೆ ಮತ್ತು ಶಾಂತಿಯ ಒಂದು ಆಳವಾದ ಮನಃಸ್ಥಿತಿಯನ್ನು ಪಡೆಯಬಹುದು. ಈ ಬದಲಾವಣೆಗಳು ನಮ್ಮ ಆಂತರ್ಯದೊಳಗೆ ಆದಾಗ, ಅವುಗಳ ಪ್ರಭಾವವು ಬಾಹ್ಯದಲ್ಲಿಯೂ ಪಸರಿಸುತ್ತವೆ, ಒಂದು ಅಗೋಚರ ನಿಯಮದ ಪ್ರಕಾರ, ಮೊಟ್ಟಮೊದಲಿಗೆ ನಮ್ಮ ಹತ್ತಿರದ ಕುಟುಂಬ ಮತ್ತು ಸಮುದಾಯಕ್ಕೆ ಮತ್ತು ನಂತರ ಇಡೀ ಜಗತ್ತಿಗೆ. ಪರಮಹಂಸಜಿ ಹೇಳಿರುವ ಹಾಗೆ, “ನಿನ್ನನ್ನು ನೀನು ಬದಲಾಯಿಸಿಕೋ, ಆಗ ನೀನು ಸಾವಿರಾರು ಜನರನ್ನು ಬದಲಾಯಿಸುತ್ತೀ.”

ಯೋಗದ ಮಹಾನ್‌ ಪ್ರಯೋಜನಗಳಲ್ಲೊಂದೆಂದರೆ, ಧ್ಯಾನಿಯಲ್ಲಿ ಎಲ್ಲ ಸಮುದಾಯಗಳೊಂದಿಗೆ ಒಂದು ಏಕತಾಭಾವವು ವೃದ್ಧಿಸುತ್ತದೆ. ಒಬ್ಬರ ಆಧ್ಯಾತ್ಮಿಕ ನಂಬಿಕೆಗಳು ಏನೇ ಇದ್ದರೂ, ಅಥವಾ ನಂಬಿಕೆ ಇಲ್ಲದಿದ್ದರೂ,ಯಾರೆಲ್ಲಾ ಯೋಗದ ವಿಜ್ಞಾನವನ್ನು ಅಭ್ಯಾಸ ಮಾಡುತ್ತಾರೋ, ಅವರೆಲ್ಲರೂ ಎಲ್ಲದರಲ್ಲೂ ಮತ್ತು ಪ್ರತಿಯೊಬ್ಬರಲ್ಲೂ ಭಗವಂತನಿದ್ದಾನೆ ಎಂಬುದನ್ನು ಅರಿಯುತ್ತಾರೆ.

ತಂತ್ರಜ್ಞಾನದ ಪ್ರಗತಿಯಿಂದಾಗಿ ನಮ್ಮೆಲ್ಲರನ್ನೂ ಅತಿ ಸಮೀಪದಲ್ಲಿರಿಸುವಂತೆ ನಮ್ಮ ಜಗತ್ತು ವಿವರಿಸಲಾಗದ ರೀತಿಯಲ್ಲಿ ಸಂಕುಚಿತವಾಗಿರುವಾಗ, ಅಂತಹ ಸಾರ್ವತ್ರಿಕತೆಯಿಂದ ವ್ಯಾಪಿತವಾದ ಹೃದಯ ಮತ್ತು ಮನಸ್ಸುಗಳು ನಿಜವಾಗಿಯೂ ನಮ್ಮ ಕಾಲದ ಅತ್ಯಂತ ಮಹತ್ವದ ಅವಶ್ಯಕತೆಯಾಗಿವೆ. 1951ರ ಒಂದು ಸಂದರ್ಶನದಲ್ಲಿ ಜಗತ್ತಿಗೆ ತಮ್ಮ ಸಂದೇಶವನ್ನು ಸಂಕ್ಷಿಪ್ತವಾಗಿ ತಿಳಿಸುವಂತೆ ಪರಮಹಂಸಜಿಯವರನ್ನು ಕೇಳಲಾಯಿತು. ಮಾನವಸಂಕುಲವು ಅದರ ಸಾರಭೂತವಾದ ಏಕತೆಯನ್ನು ಅರಿಯಬೇಕಾದ ಮೂಲಭೂತ ಅವಶ್ಯಕತೆಯ ಬಗ್ಗೆ ಅವರು ಮಾತನಾಡಿದರು–ಅವರು ಆ ಭವಿಷ್ಯಸೂಚಕ ನುಡಿಗಳನ್ನು ಮೊದಲು ಹೇಳಿದ್ದಕ್ಕಿಂತಲೂ ಅವು ಇಂದು ಬಹಳ ಮುಖ್ಯವಾಗಿವೆ ಅಥವಾ ಇನ್ನೂ ಹೆಚ್ಚಿರಬಹುದು:

“ಜಗತ್ತಿನ ನನ್ನ ಸಹೋದರ ಸಹೋದರಿಯರೇ: ಭಗವಂತನು ನಮ್ಮ ತಂದೆ ಮತ್ತು ಅವನು ಒಬ್ಬನೇ ಆಗಿದ್ದಾನೆ ಎಂಬುದನ್ನು ನೆನಪಿನಲ್ಲಿಡಿ. ನಾವೆಲ್ಲರೂ ಅವನ ಮಕ್ಕಳಾಗಿದ್ದೇವೆ. ಹಾಗಾಗಿ, ಪ್ರತಿಯೊಬ್ಬರೂ ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಜಗತ್ತಿನ ಸಂಯುಕ್ತ ರಾಷ್ಟ್ರಗಳ ಆದರ್ಶ ನಾಗರಿಕರಾಗಲು ನಾವೆಲ್ಲರೂ ಒಬ್ಬರಿಗೆ ಒಬ್ಬರು ಸಹಾಯ ಮಾಡಲು ಸೃಜನಶೀಲ ಮಾರ್ಗಗಳನ್ನು ಆರಿಸಿಕೊಳ್ಳಬೇಕು. ಒಂದು ಸಾವಿರ ವ್ಯಕ್ತಿಗಳಿರುವ ಒಂದು ಸಮುದಾಯದಲ್ಲಿ, ಪ್ರತಿಯೊಬ್ಬ ವ್ಯಕ್ತಿಯೂ ಅಕ್ರಮ ಲಾಭ, ಬಡಿದಾಟ ಮತ್ತು ವಂಚನೆಯಿಂದ ಇತರರ ವೆಚ್ಚದಲ್ಲಿ ತನ್ನನ್ನು ತಾನು ಶ್ರೀಮಂತನನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಿದರೆ, ಪ್ರತಿಯೊಬ್ಬ ವ್ಯಕ್ತಿಯೂ ಒಂಬೈನೂರ ತೊಂಬತ್ತೊಂಬತ್ತು ಶತ್ರುಗಳನ್ನು ಹೊಂದಿರುತ್ತಾನೆ; ಅದೇ, ಪ್ರತಿಯೊಬ್ಬ ವ್ಯಕ್ತಿಯೂ ಇತರರಿಗೆ ಸಹಕಾರ ತೋರಿದರೆ–ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಮತ್ತು ಆಧ್ಯಾತ್ಮಿಕವಾಗಿ-ಪ್ರತಿಯೊಬ್ಬನೂ ಒಂಬೈನೂರ ತೊಂಬತ್ತೊಂಬತ್ತು ಮಿತ್ರರನ್ನು ಹೊಂದುತ್ತಾನೆ. ಎಲ್ಲ ರಾಷ್ಟ್ರಗಳೂ ಪ್ರೇಮದಿಂದ ಒಂದಕ್ಕೊಂದು ಸಹಾಯ ಮಾಡಿದರೆ, ಇಡೀ ಜಗತ್ತು ಎಲ್ಲರ ಯೋಗಕ್ಷೇಮವನ್ನು ಪ್ರೋತ್ಸಾಹಿಸುವ ಸಾಕಷ್ಟು ಅವಕಾಶಗಳನ್ನು ಹೊಂದಿ ಶಾಂತಿಯಿಂದ ಜೀವಿಸುತ್ತದೆ…

“ರೇಡಿಯೋ, ದೂರದರ್ಶನ ಮತ್ತು ವಿಮಾನ ಪ್ರಯಾಣದಂತಹ ಮಾಧ್ಯಮಗಳು ನಮ್ಮೆಲ್ಲರನ್ನೂ ಹಿಂದೆಂದಿಗಿಂತಲೂ ಹೆಚ್ಚು ಒಗ್ಗೂಡಿಸಿವೆ. ಇದು ಇನ್ನು ಮುಂದೆ ಏಷ್ಯನ್ನರಿಗೆ ಏಷ್ಯಾವಲ್ಲ, ಯುರೋಪಿಯನ್ನರಿಗೆ ಯುರೋಪಲ್ಲ, ಅಮೆರಿಕನ್ನರಿಗೆ ಅಮೆರಿಕವಲ್ಲ, ಇತ್ಯಾದಿ, ಬದಲಾಗಿ ಭಗವಂತನ ಅಧೀನದಲ್ಲಿರುವ ಜಗತ್ತಿನ ಸಂಯುಕ್ತ ರಾಷ್ಟ್ರಗಳು, ಅದರಲ್ಲಿ ಪ್ರತಿಯೊಬ್ಬ ಪ್ರಜೆಯೂ ಶರೀರ, ಮನಸ್ಸು ಮತ್ತು ಆತ್ಮಗಳ ಸಂತೃಪ್ತಿಗೆ ಎಲ್ಲ ಅವಕಾಶವನ್ನೂ ಹೊಂದಿರುವ ವಿಶ್ವದ ಒಬ್ಬ ಆದರ್ಶ ನಾಗರಿಕನಾಗಬಹುದು ಎಂಬುದನ್ನು ನಾವು ಆವಶ್ಯವಾಗಿ ತಿಳಿದುಕೊಳ್ಳಲೇಬೇಕು.

“ಪ್ರಪಂಚಕ್ಕೆ ಇದೇ ನನ್ನ ಸಂದೇಶ ಮತ್ತು ಪ್ರಾರ್ಥನೆ.”

ಶರೀರ, ಮನಸ್ಸು ಮತ್ತು ಆತ್ಮದಲ್ಲಿ ಆದರ್ಶ ವಿಶ್ವ ಪ್ರಜೆಗಳಾಗಿ ಬೆಳೆಯಲು ಪರಸ್ಪರ ಸಹಾಯ ಮಾಡುವಂತಹ ಅತ್ಯಂತ ಆಳವಾದ “ರಚನಾತ್ಮಕ ಮಾರ್ಗಗಳು” ಯೋಗದ ಸಾರ್ವತ್ರಿಕ ವಿಜ್ಞಾನದಲ್ಲಿ ಕಂಡುಬರುತ್ತವೆ.

ರಾಜ ಯೋಗದ ಅಷ್ಟಾಂಗ ಮಾರ್ಗ

ಪರಮಹಂಸ ಯೋಗಾನಂದರು ತಮ್ಮ ಗಾಡ್‌ ಟಾಕ್ಸ್‌ ವಿತ್‌ ಅರ್ಜುನ: ದಿ ಭಗವದ್‌ ಗೀತ ಎಂಬ ಅತ್ಯಂತ ವಿಶ್ವಾಸಾರ್ಹ ಅನುವಾದ ಹಾಗೂ ಭಾಷ್ಯದಲ್ಲಿ, ಭಾರತದ ಅತ್ಯಂತ ಜನಪ್ರಿಯ ಯೋಗ ಗ್ರಂಥವಾದ ಗೀತೆಯು ಯೋಗ ವಿಜ್ಞಾನದ ಸಮಗ್ರತೆಯನ್ನು ಸಾಂಕೇತಿಕವಾಗಿ ವ್ಯಕ್ತಪಡಿಸಿದೆ ಎಂದು ತಿಳಿಯಪಡಿಸಿದ್ದಾರೆ.

ಮಹರ್ಷಿ ಪತಂಜಲಿಯು, ಗೀತೆಯಲ್ಲಿ ಅಡಕವಾಗಿರುವ ಯೋಗದ ಸಂದೇಶವನ್ನು ಸಂಪೂರ್ಣವಾಗಿ ಅರಿತಿದ್ದು, ತನ್ನ ಪುಟ್ಟ ಆದರೆ ಮಹತ್ವದ ಗ್ರಂಥವಾದ ಯೋಗ ಸೂತ್ರದಲ್ಲಿ ರಾಜ ಯೋಗದ ಸಾರವನ್ನು ಸರಳವಾಗಿ ಹಾಗೂ ಕ್ರಮಬದ್ಧವಾಗಿ ವ್ಯವಸ್ಥಿತಗೊಳಿಸಿದ್ದಾನೆ.

ಪರಮಹಂಸ ಯೋಗಾನಂದರು ಹೇಳುತ್ತಾರೆ, ಪತಂಜಲಿಯು “ಸಂಕ್ಷಿಪ್ತ ಸೂತ್ರಗಳ ಸಾಲುಗಳಲ್ಲಿ ಭಗವತ್‌-ಸಂಯೋಗದ ಅತ್ಯಂತ ವಿಸ್ತೃತ ಹಾಗೂ ಸೂಕ್ಷ್ಮ ವಿಜ್ಞಾನದ ಸಂಕ್ಷೇಪಿತ ಸಾರವನ್ನು ಪರಿಚಯಿಸಿದ್ದಾನೆ–ಅವನು ಭೇದ ಕಲ್ಪಿಸದ ಪರಮಾತ್ಮನೊಡನೆ ಆತ್ಮದ ಸಂಯೋಗದ ವಿಧಾನವನ್ನು ಎಷ್ಟು ಸುಂದರ, ಸ್ಪಷ್ಟ ಹಾಗೂ ಸಂಕ್ಷಿಪ್ತವಾಗಿ ವಿವರಿಸಿದ್ದಾನೆ ಎಂದರೆ, ವಿದ್ವಾಂಸರ ತಲೆಮಾರುಗಳು ಯೋಗ ಸೂತ್ರಗಳನ್ನು ಯೋಗದ ಅಗ್ರಗಣ್ಯ ಪುರಾತನ ಕೃತಿ ಎಂದು ಒಪ್ಪಿಕೊಂಡಿವೆ.”

ಪತಂಜಲಿಯ ಯೋಗ ಸಿದ್ಧಾಂತವು ಅಷ್ಟಾಂಗ ಮಾರ್ಗ ಎಂದು ಪ್ರಚಲಿತವಾಗಿದೆ, ಇದು ಭಗವತ್‌-ಸಾಕ್ಷಾತ್ಕಾರದ ಅಂತಿಮ ಗುರಿಯೆಡೆಗೆ ಕರೆದೊಯ್ಯುತ್ತದೆ.

ರಾಜ ಯೋಗದ ಅಷ್ಟಾಂಗ ಮಾರ್ಗ:
  • ಯಮ (ಒಬ್ಬರು ಈ ವರ್ತನೆಗಳಿಂದ ದೂರವಿರಬೇಕಾದ ನೈತಿಕ ನಿಯಮಗಳನ್ನು ತಿಳಿಸುತ್ತದೆ): ಇತರರಿಗೆ ನೋವುಂಟುಮಾಡುವುದು, ಅಸತ್ಯವನ್ನು ನುಡಿಯುವುದು, ಕಳ್ಳತನ ಮಾಡುವುದು, ಅತಿಯಾದ ಲೈಂಗಿಕ ಹವ್ಯಾಸ (ಲೈಂಗಿಕ ಪ್ರಚೋದನೆಯ ಮೇಲೆ ನಿಯಂತ್ರಣ ಇಲ್ಲದಿರುವುದು) ಮತ್ತು ಅತಿಯಾಸೆ
  • ನಿಯಮ (ಬೆಳೆಸಿಕೊಳ್ಳಬೇಕಾದ ಆಧ್ಯಾತ್ಮಿಕ ಗುಣಗಳು ಹಾಗೂ ನಡವಳಿಕೆ): ಶರೀರ ಹಾಗೂ ಮನಸ್ಸಿನ ಪರಿಶುದ್ಧತೆ, ಎಲ್ಲ ಪರಿಸ್ಥಿತಿಗಳಲ್ಲೂ ಸಂತೃಪ್ತಿ, ಸ್ವ-ಶಿಸ್ತು, ಸ್ವಾಧ್ಯಾಯ (ಅವಲೋಕನ) ಹಾಗೂ ಭಗವಂತ ಹಾಗೂ ಗುರುವಿನ ಮೇಲೆ ಭಕ್ತಿ
  • ಆಸನ: ಸೂಕ್ತ ಭಂಗಿ
  • ಪ್ರಾಣಾಯಾಮ: ಶರೀರದ ಸೂಕ್ಷ್ಮ ಜೀವ ಪ್ರವಾಹಗಳಾದ ಪ್ರಾಣದ ನಿಯಂತ್ರಣ
  • ಪ್ರತ್ಯಾಹಾರ: ಇಂದ್ರಿಯಗಳನ್ನು ಬಾಹ್ಯ ವಸ್ತು-ವಿಷಯಗಳಿಂದ ಹಿಂತೆಗೆದುಕೊಳ್ಳುವ ಮೂಲಕ ಪ್ರಜ್ಞೆಯನ್ನು ಆಂತರೀಕರಿಸುವುದು
  • ಧಾರಣ: ಕೇಂದ್ರಿತ ಏಕಾಗ್ರತೆ; ಮನಸ್ಸನ್ನು ಒಂದು ಚಿಂತನೆ ಅಥವಾ ವಸ್ತುವಿನ ಮೇಲೆ ನಿಲ್ಲಿಸುವುದು
  • ಧ್ಯಾನ: ಭಗವಂತನ ವಿಸ್ತೃತ ಗ್ರಹಿಕೆಯಲ್ಲಿ ಅವನ ಯಾವುದಾದರೂ ಒಂದು – ಇಡೀ ಬ್ರಹ್ಮಾಂಡದಲ್ಲಿ ಸಂಪೂರ್ಣವಾಗಿ ವ್ಯಾಪಿಸಿರುವಂಥ ಅಸೀಮ ಅಂಶದಲ್ಲಿ ತಲ್ಲೀನರಾಗಿರುವುದು — ಪರಮಾನಂದ, ಶಾಂತಿ, ಬ್ರಹ್ಮಾಂಡ ಬೆಳಕು, ಬ್ರಹ್ಮಾಂಡ ನಾದ, ಪ್ರೇಮ, ಪರಿಜ್ಞಾನ, ಇತ್ಯಾದಿ
  • ಸಮಾಧಿ: ವ್ಯಕ್ತಿಗತ ಆತ್ಮವು ಬ್ರಹ್ಮಾಂಡ ಚೇತನದೊಂದಿಗೆ ಐಕ್ಯವಾಗಿರುವಂಥ ಅತೀತಪ್ರಜ್ಞೆಯ ಅನುಭವ

ಪ್ರಾಣಾಯಾಮದ ಪರಮೋಚ್ಚ ಅಭ್ಯಾಸವು (ಪ್ರಾಣ-ಶಕ್ತಿಯ ನಿಯಂತ್ರಣ, ಅಷ್ಟಾಂಗ ಮಾರ್ಗದ ನಾಲ್ಕನೇ ಹೆಜ್ಜೆ), ಪ್ರಾಥಮಿಕ ಗುರಿಯಾಗಿ ಪ್ರಜ್ಞೆಯ ಆಂತರೀಕರಣವನ್ನು (ಪ್ರತ್ಯಾಹಾರ) ಮತ್ತು ಅಂತಿಮ ಗುರಿಯಾಗಿ ಪರಮಾತ್ಮನೊಂದಿಗೆ ಐಕ್ಯತೆ (ಸಮಾಧಿ)ಯನ್ನು ಸಾಧಿಸಿಕೊಳ್ಳಲು ರಾಜಯೋಗದ ವೈಜ್ಞಾನಿಕ ಧ್ಯಾನ ತಂತ್ರಗಳ ಬಳಕೆಯನ್ನು ಒಳಗೊಂಡಿರುತ್ತದೆ.

ನಮ್ಮ ಸುತ್ತಲಿರುವ ಜಗತ್ತನ್ನು ನಾವು ಗ್ರಹಿಸುವಂತಾಗಲು, ಸಾಮಾನ್ಯವಾಗಿ ಪ್ರಾಣ ಶಕ್ತಿಯು ನರವ್ಯೂಹ ವ್ಯವಸ್ಥೆ ಹಾಗೂ ಇಂದ್ರಿಯಗಳ ಮೂಲಕ ಬಹಿರ್ಮುಖವಾಗಿ ನಿರಂತರ ಪ್ರವಹಿಸುತ್ತಿರುತ್ತದೆ. ಪ್ರಾಣಾಯಾಮ ತಂತ್ರಗಳ ಮೂಲಕ ಅದೇ ಪ್ರಾಣ ಶಕ್ತಿಯನ್ನು (ಪ್ರಾಣ) ನಮ್ಮೊಳಗಿರುವ ವಿಸ್ತೃತ ಪ್ರಪಂಚವನ್ನು ಗ್ರಹಿಸಲು, ಬೆನ್ನುಹುರಿ ಹಾಗೂ ಮಿದುಳಿನಲ್ಲಿರುವ ಆಧ್ಯಾತ್ಮಿಕ ಗ್ರಹಿಕೆಯ ಉನ್ನತ ಕೇಂದ್ರಗಳಿಗೆ ಅಂತರ್ಮುಖವಾಗಿ ನಿರ್ದೇಶಿಸಲಾಗುತ್ತದೆ.

ವೈಎಸ್‌ಎಸ್‌ ಯೋಗದಾ ಸತ್ಸಂಗದ ಪಾಠಗಳಲ್ಲಿ, ಕಲಿಸುವ ಧ್ಯಾನದ ತಂತ್ರಗಳು, ಅದರಲ್ಲೂ ವಿಶೇಷವಾಗಿ ಕ್ರಿಯಾ ಯೋಗ ತಂತ್ರಗಳು, ರಾಜ ಯೋಗ ಪ್ರಾಣಾಯಾಮದ ತಂತ್ರಗಳಲ್ಲೇ ಅತ್ಯಂತ ಮೇಲ್ಮಟ್ಟದವು. ಪರಮಹಂಸ ಯೋಗಾನಂದರು ಅದನ್ನು ಆಗಾಗ್ಗೆ ಆತ್ಮವು ಭಗವಂತನ ಪರಮಾನಂದದೊಡನೆ ಮತ್ತೆ ಒಂದುಗೂಡುವುದಕ್ಕೆ ಅತ್ಯಂತ ಶೀಘ್ರವಾದ ಮಾರ್ಗ ಎಂದು ಹೇಳುತ್ತಿದ್ದರು.

ಸಾಮಾನ್ಯವಾಗಿ ನಮ್ಮ ಪ್ರಜ್ಞೆಯನ್ನು ಬಹಿರ್ಮುಖಗೊಳಿಸುವ ಶಾರೀರಿಕ ಶಕ್ತಿಯ ಪ್ರವಹನವನ್ನು ಪ್ರಾಣಾಯಾಮದ ಅಭ್ಯಾಸದಿಂದ ನೇರವಾಗಿ ನಿಯಂತ್ರಿಸುತ್ತ ನಮ್ಮ ಗಮನವನ್ನು ಜೀವನದ ಅಡೆತಡೆಗಳಿಂದ ನಾವು ಮುಕ್ತವಾಗಿಸುತ್ತೇವೆ. ಹೀಗೆ ನಾವು ಸದಾ ಪರಮಾತ್ಮನೊಂದಿಗೆ ಒಂದಾಗಿರುವ ಅಚಲ ಅಮರ ಆತ್ಮ ಎಂಬ ನಮ್ಮ ನೈಜ ಸ್ವರೂಪವನ್ನು ತಿಳಿದುಕೊಳ್ಳುವುದಕ್ಕೆ ತಡೆಯೊಡ್ಡುವ ಅವಿಶ್ರಾಂತ ಆಲೋಚನೆಗಳು ಹಾಗೂ ಪ್ರಕ್ಷುಬ್ಧ ಭಾವೋದ್ವೇಗಗಳನ್ನು ನಾವು ಶಾಂತಗೊಳಿಸುತ್ತೇವೆ.

ಮನುಕುಲದ ಅತ್ಯಂತ ಮುಂದುವರಿದ ತಂತ್ರ

ಮಾರ್ಗ-ಯೋಗ-ಸಂಯೋಗ-ಜೊತೆಗೆ-ಆನಂದ-ಮೂಲಕ-ಧ್ಯಾನ-ತಂತ್ರ

ನಮ್ಮ ಜೀವನದ ಹಲವು ವಿಷಯಗಳಲ್ಲಿ ತಂತ್ರಜ್ಞಾನವು ಬಹು ಮುಖ್ಯವಾದ ಸಾಧನವಾಗಿದೆ. ಆದರೆ ನಾವು ನಮ್ಮ ವಿವಿಧ ಡಿಜಿಟಲ್ ಸಾಧನಗಳೊಂದಿಗೆ ಹೆಚ್ಚು ಹೆಚ್ಚು ಸಮಯವನ್ನು ಕಳೆದರೆ, ಆಂತರಿಕ ಶಾಂತಿ, ಸರಳತೆ, ಸಾಮರಸ್ಯ ಮತ್ತು ಸಹಜ ವಿಸ್ಮಯವನ್ನು ಅನುಭವಿಸುವ ಭಾವದಿಂದ ಹೆಚ್ಚು ಹೆಚ್ಚು ದೂರವಾಗುತ್ತಿರುವುದನ್ನು ಅನುಭವಿಸುತ್ತೇವೆ.

ಸರಳವಾಗಿ ಹೇಳುವುದಾದರೆ, ತಂತ್ರಜ್ಞಾನ ಎಂದರೆ ಬಯಸಿದ ಗುರಿಯನ್ನು ಹೆಚ್ಚು ವೇಗವಾಗಿ ತಲುಪಲು ತಂತ್ರವನ್ನು ಬಳಸುವುದು. ಆದರ್ಶಪ್ರಾಯವಾಗಿ, ಅದರ ಬಳಕೆಯು ಸಂತೋಷ ಮತ್ತು ಭದ್ರತೆಯನ್ನು ಸಾಧಿಸುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಬೇಕು ಮತ್ತು ನಾವಿರುವ ಜಗತ್ತಿಗೆ ಸಂಬಂಧಿಸಿದಂತೆ ನಮ್ಮ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಲು ಸಾಧ್ಯವಾಗಿಸಬೇಕು.

ಮನುಕುಲದ ಅತ್ಯಂತ ಮುಂದುವರಿದ ತಂತ್ರಜ್ಞಾನವನ್ನು ರಾಜಯೋಗ ವ್ಯವಸ್ಥೆಯಲ್ಲಿ, ಯೋಗ ಧ್ಯಾನದ ತಂತ್ರಗಳ ಬಳಕೆಯಲ್ಲಿ, ನಿರ್ದಿಷ್ಟವಾಗಿ ಕ್ರಿಯಾ ಯೋಗದ ತಂತ್ರಗಳಲ್ಲಿ ಕಾಣಬಹುದು.

ಪರಮಹಂಸರು ತಮ್ಮ ಯೋಗಿಯ ಆತ್ಮಕಥೆಯಲ್ಲಿ, “ಕ್ರಿಯಾ ಯೋಗದ ವಿಜ್ಞಾನ” ಎಂಬ ಅಧ್ಯಾಯದಲ್ಲಿ ಹೀಗೆ ಹೇಳುತ್ತಾರೆ: “ಯೋಗದ ಖಚಿತವಾದ ಹಾಗೂ ವ್ಯವಸ್ಥಿತವಾದ ಸಾಮರ್ಥ್ಯವನ್ನು ಕುರಿತು ಹೇಳುತ್ತಾ ಕೃಷ್ಣನು ತಾಂತ್ರಿಕಯೋಗಿಯನ್ನು ಈ ಮಾತುಗಳಿಂದ ಪ್ರಶಂಸಿಸುತ್ತಾನೆ: ‘ದೇಹದಂಡನೆಯನ್ನು ಮಾಡುವ ವಿರಾಗಿಗಿಂತ ಯೋಗಿ ಹೆಚ್ಚಿನವನು. ಜ್ಞಾನಯೋಗ ಮಾರ್ಗದಲ್ಲಿ ನಿರತನಾಗಿರುವವನಿಗಿಂತಲೂ ಸಹ ದೊಡ್ಡವನು, ಕರ್ಮಯೋಗದಲ್ಲಿ ನಿರತನಾಗಿರುವವನಿಗಿಂತಲೂ ದೊಡ್ಡವನು; ಆದ್ದರಿಂದ, ಓ ಶಿಷ್ಯ ಅರ್ಜುನ, ನೀನು ಯೋಗಿಯಾಗು!ʼ”

“ತಾಂತ್ರಿಕ ಯೋಗಿ” — ಅಂದರೆ, ಯೋಗದ ಗುರಿಯನ್ನು ಸಾಧಿಸಲು ನಿರ್ದಿಷ್ಟ ತಂತ್ರಗಳನ್ನು ಬಳಸುವ ಸತ್ಯಾನ್ವೇಷಕ — ಅವನು ನಿಜಕ್ಕೂ ಒಂದು ಖಚಿತವಾದ ವಿಧಾನವನ್ನು ಅನುಸರಿಸುತ್ತಾನೆ, ಅದು ಜೀವನದಿಂದ ಶಕ್ತಿ ಮತ್ತು ಸಂತೋಷವನ್ನು ಕುಂದಿಸುವುದಿಲ್ಲ, ಬದಲಿಗೆ ಆನಂದದಾಯಕ ಅಮರ ಆತ್ಮದ ಸಂಪರ್ಕದಿಂದಾಗಿ ಶರೀರ ಮತ್ತು ಮನಸ್ಸಿನ ಶಾಶ್ವತ ಮರುಪೂರಣ ಮತ್ತು ಪುನರ್ಯೌವನಕ್ಕೆ ಕಾರಣವಾಗುತ್ತದೆ.

ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಆದರ್ಶ ಶಿಷ್ಯನಾದ ಅರ್ಜುನನಂತೆ, ಕ್ರಿಯಾ ಯೋಗ ತಂತ್ರಜ್ಞಾನದ ಬಳಕೆಯಿಂದ ನಾವು ಎಂತಹ ಸಮತೋಲನ ಮತ್ತು ಆಂತರಿಕ ಶಾಂತತೆಯ ಸ್ಥಿತಿಯನ್ನು ತಲುಪಬಹುದು ಎಂದರೆ, ಅದರಿಂದ, ಇಂದಿನ ತಂತ್ರಜ್ಞಾನ-ಅವಲಂಬಿತ ಜಗತ್ತಿನಲ್ಲಿ ಹೇಗೆ ಬದುಕಬೇಕೆಂದು ತಿಳಿಯಲು ನಾವು ನಮ್ಮ ಸಹಜ ಸಮಗ್ರತೆ ಮತ್ತು ಯೋಗಕ್ಷೇಮದ ಪ್ರಜ್ಞೆಯನ್ನು ಕಳೆದುಕೊಳ್ಳದೆ ಸಮಚಿತ್ತತೆ ಮತ್ತು ವಿವೇಚನೆಯನ್ನು ಪಡೆಯುತ್ತೇವೆ.

ಪರಮಹಂಸಜಿಯವರ ಮಾತಿನಲ್ಲಿ ಹೇಳುವುದಾದರೆ, “ಶಾಂತವಾಗಿ ಸಕ್ರಿಯವಾಗಿರುವುದು ಮತ್ತು ಸಕ್ರಿಯವಾಗಿ ಶಾಂತ”ವಾಗಿರುವುದು ಮುಖ್ಯ. ನಮ್ಮ ಜೀವನದಲ್ಲಿ (ಆನ್‌ಲೈನ್ ಮತ್ತು ಆಫ್‌ಲೈನ್) ಶಾಂತವಾಗಿ ಸಕ್ರಿಯರಾಗಲು, ನಾವು ಮೊದಲು ಧ್ಯಾನದಲ್ಲಿ “ಸಕ್ರಿಯವಾಗಿ ಶಾಂತ”ರಾಗಬೇಕು – ಹಾಗೂ ನಮ್ಮ ಸಮಕಾಲೀನ ಪ್ರಪಂಚದ ಅನಿರೀಕ್ಷಿತ ಸವಾಲುಗಳು ಮತ್ತು ಅತಿವೇಗದ ಓಟದಲ್ಲಿ ಮುಂದುವರಿಯಲು ಅಗತ್ಯವಾದ ಜ್ಞಾನವನ್ನು ಹೊಂದಬೇಕು.

ಯೋಗದಾ ಸತ್ಸಂಗ ಪಾಠಗಳಲ್ಲಿ ಕಲಿಸಲಾದಂತಹ ರಾಜಯೋಗ ಧ್ಯಾನ ತಂತ್ರಗಳಲ್ಲಿ, ಮನುಕುಲವು ಅತ್ಯಂತ ಮುಂದುವರಿದ ತಂತ್ರಜ್ಞಾನವನ್ನು ಹೊಂದಿದೆ, ಮತ್ತು ಇದು ನಿತ್ಯನೂತನ ಶಾಂತಿ ಮತ್ತು ಆನಂದ ಹಾಗೂ ನಮ್ಮ ಅತ್ಯುನ್ನತ ಸಾಮರ್ಥ್ಯಗಳ ಸಿದ್ಧಿಯಿಂದ ತುಂಬಿರುವಂತಹ, ನಿಜವಾದ ಅರ್ಥದಲ್ಲಿ ಜಯಶಾಲಿಯ ಜೀವನವನ್ನು ನಡೆಸುವ ಮಾರ್ಗವನ್ನು ಹೊಂದಿದೆ.

ನಿಮ್ಮ ಶಾಂತತೆಯ ಬಾಗಿಲನ್ನು ತೆರೆಯಿರಿ ಮತ್ತು ಮೌನದ ಹೆಜ್ಜೆಗಳು ನಿಮ್ಮ ಎಲ್ಲಾ ಚಟುವಟಿಕೆಗಳ ಮಂದಿರವನ್ನು ಮೆಲ್ಲನೆ ಪ್ರವೇಶಿಸಲಿ. ಎಲ್ಲ ಕರ್ತವ್ಯಗಳನ್ನು ಶಾಂತವಾಗಿ, ಶಾಂತಿಯಿಂದ ತುಂಬಿಕೊಂಡು ನಿರ್ವಹಿಸಿ. ನಿಮ್ಮ ಹೃದಯದ ಬಡಿತದ ಹಿಂದೆ, ನೀವು ಭಗವಂತನ ಶಾಂತಿಯ ಎದೆಬಡಿತವನ್ನು ಅನುಭವಿಸುವಿರಿ. ಧ್ಯಾನದ ಶಾಂತಿಯಿಂದ ನಿಮ್ಮ ಹೃದಯವನ್ನು ತುಂಬಿಕೊಳ್ಳಿ.

— ಪರಮಹಂಸ ಯೋಗಾನಂದ

ಕ್ರಿಯಾ ಯೋಗದ ಜೊತೆಗೆ ಭಕ್ತಿ

ಪರಮಹಂಸ ಯೋಗಾನಂದರು ಹೇಳಿದ್ದಾರೆ: “ಕ್ರಿಯಾ ಯೋಗದ ಜೊತೆಗೆ ಭಕ್ತಿಯೂ ಸೇರಿದರೆ ಅದು ಗಣಿತದಂತೆ ಕೆಲಸ ಮಾಡುತ್ತದೆ, ವಿಫಲವಾಗಲು ಸಾಧ್ಯವೇ ಇಲ್ಲ.”

ಕ್ರಿಯಾ ಯೋಗ ಮಾರ್ಗದಲ್ಲಿ ಕಲಿಸಲಾಗುವಂತಹ ಯೋಗ ಮತ್ತು ಅದರ ಧ್ಯಾನ ತಂತ್ರಗಳನ್ನು ಪ್ರಾರಂಭಿಸುವ ಯಾರಿಗೇ ಆದರೂ, ಅವರ ಹೃದಯಗಳಿಗೆ ಹೆಚ್ಚು ಇಷ್ಟವಾಗುವ ಭಗವಂತನ ಅಂಶದೊಂದಿಗೆ ಆಳವಾದ ಮತ್ತು ಶಾಶ್ವತವಾದ ಸಂಬಂಧವನ್ನು ಬೆಳೆಸಿಕೊಳ್ಳುವ ಅಗತ್ಯವನ್ನು ವೈಎಸ್‌ಎಸ್‌ ಎತ್ತಿ ತೋರಿಸುತ್ತದೆ. ಏನೇ ಆದರೂ, ಪರಮಹಂಸಜಿ ಸ್ಪಷ್ಟಪಡಿಸಿದಂತೆ: “ಭಗವಂತನನ್ನು ಅರಸುವ ಇಡೀ ಯೋಗ ವಿಜ್ಞಾನದ ಮೇಲಿನ ಪಾಂಡಿತ್ಯಕ್ಕಿಂತ ಹೆಚ್ಚು ಮುಖ್ಯವಾದ ಒಂದು ವೈಯಕ್ತಿಕ ಅಂಶವಿದೆ.” ಅನಂತತೆಯ ಬಾಗಿಲನ್ನು ತಲುಪಲು ನಾವು ಯೋಗ ವಿಜ್ಞಾನವನ್ನು ಅನುಸರಿಸಬೇಕು, ಆದರೆ ಆ ಬಾಗಿಲಿನ ಮೂಲಕ ಭಗವಂತ ನಮ್ಮನ್ನು ಕರೆದೊಯ್ಯಬೇಕಾದರೆ, ನಮ್ಮ ಪ್ರೇಮ, ನಮ್ಮ ವೈಯಕ್ತಿಕ ಹಂಬಲ ಬೇಕಾಗುತ್ತದೆ.

ನೀವು ಭಗವಂತನನ್ನು ಪರಮ ಪಿತ ಅಥವಾ ಜಗನ್ಮಾತೆ ಅಥವಾ ಸ್ನೇಹಿತ ಅಥವಾ ಪ್ರಿಯದೇವ ಎಂದು ಭಾವಿಸಲು ಇಷ್ಟಪಡಬಹುದು. ಕೆಲವರು ಭಗವಂತನನ್ನು ನಿಜವಾದ ಗುರು ಅಥವಾ ಕ್ರಿಸ್ತ ಅಥವಾ ಕೃಷ್ಣನಂತಹ ದಿವ್ಯ ಅವತಾರದಲ್ಲಿ ಕಾಣಲು ಇಚ್ಛಿಸುತ್ತಾರೆ, ಅಥವಾ ಅವರು ಅನಂತ ಪ್ರೀತಿ, ಆನಂದ ಅಥವಾ ಜ್ಞಾನದಂತಹ ನಿರಾಕಾರ ಅಂಶದೆಡೆಗೆ ಹೆಚ್ಚು ಆಕರ್ಷಿತರಾಗಬಹುದು. ನಿಮ್ಮ ಹೃದಯವನ್ನು ಯಾವ ದಿವ್ಯ ಸ್ವರೂಪವು ಹೆಚ್ಚು ಕದಲಿಸುವುದೋ, ಅದನ್ನು ಹೃತ್ಪೂರ್ವಕವಾಗಿ ಅರಸಿ, ಭಗವದ್ಭಕ್ತಿಯಲ್ಲಿ ಮತ್ತು ನಂತರದಲ್ಲಿ ಆಗುವ ಅವನೊಂದಿಗಿನ ಸಂಯೋಗದಿಂದ ನೀವು ಬೇರಾವುದೂ ಪೂರೈಸಲು ಸಾಧ್ಯವಾಗದ ಹಂಬಲವನ್ನು ಪೂರೈಸಿಕೊಳ್ಳುವಿರಿ ಎಂಬ ಅರಿವಿನೊಂದಿಗೆ.

ಪರಮಹಂಸಜಿಯವರು, “ಭಗವಂತ ನಿಮ್ಮ ಹೃದಯದ ಭಾಷೆಯನ್ನು, ನಿಮ್ಮ ಅಸ್ತಿತ್ವದ ಆಳದಿಂದ ಬರುವ ಭಾಷೆಯನ್ನು ಕೇಳುತ್ತಾನೆ,” ಎಂದು ಹೇಳಿದ್ದಾರೆ. ಧ್ಯಾನ ತಂತ್ರಗಳ ಅಭ್ಯಾಸದ ನಂತರ ಬರುವ ನಿಶ್ಚಲತೆಯಲ್ಲಿ ತಲ್ಲೀನರಾಗಲು ಸಮಯ ತೆಗೆದುಕೊಂಡು, ಒಬ್ಬರು ಔಪಚಾರಿಕತೆ ಮತ್ತು ಆಡಂಬರವಿಲ್ಲದೆ, ಕೇವಲ ಹೃದಯದ ಪ್ರೀತಿಯಿಂದ ಭಗವಂತನೊಂದಿಗೆ ಮಾತನಾಡಬೇಕು ಎಂದು ಅವರು ಸಲಹೆ ನೀಡಿದರು. ನೀವು ಜಗನ್ಮಾತೆಗೆ ಅವಳ ಮಗುವಾಗಿ, “ದರುಶನ ನೀಡು, ದರುಶನ ನೀಡು,” ಎಂದು ಹೇಳಬಹುದು. ಅಥವಾ ಅತ್ಯಂತ ಪೀಡಿಸುವ ನಿಮ್ಮ ಜೀವನದ ಸಮಸ್ಯೆಗಳ ಬಗ್ಗೆ ಮಾರ್ಗದರ್ಶನವನ್ನು ಪ್ರಾಮಾಣಿಕವಾಗಿ ಅರಸುತ್ತ, ದಿವ್ಯ ಪ್ರಜ್ಞಾನಕ್ಕೆ ಪ್ರಶ್ನೆಗಳನ್ನು ಕೇಳಲು ನೀವು ಬಯಸಬಹುದು.

ರಾಜಯೋಗ ಬೋಧನೆಗಳ ಅಡಿಪಾಯವಾದ ಯೋಗ ಧ್ಯಾನದ ವಿಜ್ಞಾನವು ನಮ್ಮನ್ನು ಭಗವಂತನೊಂದಿಗೆ ನೇರ ಸಂಪರ್ಕಕ್ಕೆ ತರುತ್ತದೆ. ಅತ್ಯಂತ ನಿಜವಾದ ಗ್ರಹಿಕೆಯ ಆ ಸ್ಥಿತಿಯಲ್ಲಿ ನಮ್ಮ ಅಸ್ತಿತ್ವದ ಆಳದಿಂದ ಸಂವಹನ ನಡೆಸುವ ವಿಷಯಗಳಲ್ಲಿ ಸ್ವಯಂಪ್ರೇರಿತರಾಗಿರಲು ಮತ್ತು ನಮ್ಮ ಹೃದಯ, ಮನಸ್ಸು ಮತ್ತು ಆತ್ಮಗಳಿಂದ ಸಂಪೂರ್ಣ ವೈಯಕ್ತಿಕ ರೀತಿಯಲ್ಲಿ ವ್ಯಕ್ತಪಡಿಸಲು ನಮಗೆ ನಾವು ಅವಕಾಶ ಮಾಡಿಕೊಡುತ್ತೇವೆ. ಸ್ವಾಭಾವಿಕವಾಗಿ, ಕಾಲಾನಂತರದಲ್ಲಿ, ಆ ಸಂಭಾಷಣೆಯು ಪ್ರೀತಿಯ ಅತ್ಯಂತ ಉತ್ಕೃಷ್ಟ ದ್ವಿಮುಖಿ ಅಭಿವ್ಯಕ್ತಿಯಾಗಿ ರೂಪಾಂತರಗೊಳ್ಳುತ್ತದೆ. “ನಿಜವಾದ ಭಕ್ತಿಯು ಭಗವಂತನ ಗ್ರಹಿಕೆಯ ಸಾಗರ-ತಳದಲ್ಲಿ ಮುಳುಗುವ ಒಂದು ಆಳದ ಗುಂಡಿನಂತೆ(plummet),” ಎಂದು ಪರಮಹಂಸಜಿ ಹೇಳಿದ್ದಾರೆ.

ಆಧ್ಯಾತ್ಮಿಕ ಮಾರ್ಗದ ಪಯಣಿಗನು, ಅವನಿಗೆ ಭಗವಂತನ ಯಾವುದೇ ಅಂಶವು ಅತ್ಯಂತ ಹೆಚ್ಚು ಆಸಕ್ತಿಯನ್ನು ಕೆರಳಿಸುವಂಥದ್ದಾಗಿದ್ದರೂ, ಅವನು ಪರಮಹಂಸಜಿಯವರ ಈ ಕೆಳಗಿನ ಮಾತುಗಳಲ್ಲಿ ಒಂದು ಸುಸ್ಪಷ್ಟವಾದ ಮತ್ತು ಸಾಂತ್ವನ ನೀಡುವ ಭರವಸೆಯನ್ನು ಕಾಣಬಹುದು: “ಅವನಲ್ಲಿ ನೀವು ಎಲ್ಲ ಹೃದಯಗಳ ಎಲ್ಲ ಪ್ರೇಮವನ್ನು ಕಂಡುಕೊಳ್ಳುವಿರಿ. ನಿಮಗೆ ಸಂಪೂರ್ಣತೆಯ ಅನುಭವವಾಗುತ್ತದೆ. ಜಗತ್ತು ನಿಮಗೆ ಎಲ್ಲವನ್ನೂ ಕೊಟ್ಟು, ನಂತರ ಅದನ್ನು ಕಿತ್ತುಕೊಂಡು, ನಿಮ್ಮನ್ನು ನೋವು ಅಥವಾ ಭ್ರಮನಿರಸನದಲ್ಲಿ ಉಳಿಸಿ ಹೋಗುತ್ತದೆ. ಅವೆಲ್ಲವನ್ನೂ ಭಗವಂತನಲ್ಲಿ ಇನ್ನೂ ದೊಡ್ಡ ರೀತಿಯಲ್ಲಿ ಯಾವುದೇ ದುಃಖದ ಪರಿಣಾಮವಿಲ್ಲದೆ ಪಡೆಯುವಿರಿ.”

ಇದನ್ನು ಹಂಚಿಕೊಳ್ಳಿ