ಪರಮಹಂಸ ಯೋಗಾನಂದರ ದೃಷ್ಟಿಯಲ್ಲಿ ಇತರರಿಗೆ ಸಲ್ಲಿಸುವ ಸೇವೆಯ ಪ್ರಕಾಶಮಾನವಾದ ಬೆಳಕು

18 ಫೆಬ್ರವರಿ, 2025

ಹೆಸರಿಲ್ಲದ(11)

ಒಂದು ಪರಿಚಯ:

ಜಗತ್ತಿನಾದ್ಯಂತ, ಸಾರ್ವಜನಿಕವಾಗಿ ಕಾಣುವ ಮತ್ತು ಕಾಣದಿರುವ ಸಂದರ್ಭಗಳಲ್ಲಿ, ಜನರು ಪ್ರತಿದಿನವೂ ಧೈರ್ಯಶಾಲಿಗಳಾಗಿ ನಿಸ್ವಾರ್ಥತೆ ಮತ್ತು ವಿನಯದಿಂದ ಇತರರಿಗೆ ಸೇವೆ ಸಲ್ಲಿಸುವ ಮೂಲಕ ಹೆಚ್ಚು ಅಗತ್ಯವಿರುವವರಿಗೆ ಭರವಸೆಯನ್ನು ನೀಡುತ್ತಿದ್ದಾರೆ.

ಪರಮಹಂಸ ಯೋಗಾನಂದರು ಮತ್ತು ಇತರ ಮಹಾನ್ ಸಂತರು ಹೇಳುವ ಪ್ರಕಾರ, ಈ ಸೇವಾ ಕಾರ್ಯಗಳು ನಮ್ಮ ಪ್ರಪಂಚದ ಸಾಮರಸ್ಯಕ್ಕೆ ಅತ್ಯಂತ ಅವಶ್ಯಕವಾಗಿರುವುದರ ಜೊತೆಗೆ, ಆತ್ಮದ ಶುದ್ಧ ಸ್ವಭಾವದ ಅಭಿವ್ಯಕ್ತಿಯೂ ಆಗಿರುವುದರ ಮೂಲಕ ಆತ್ಮವು ತನ್ನನ್ನು ದೈವದೊಂದಿಗೆ ಒಂದಾಗಿ ಅರಿತುಕೊಳ್ಳಲು ವಿಸ್ತರಿಸುತ್ತದೆ.

ಈ ಮಾಸದ ಸುದ್ದಿಪತ್ರದಲ್ಲಿ, ನಾವು ನಮ್ಮ ಜೀವನ ಮತ್ತು ಆಧ್ಯಾತ್ಮಿಕ ವಿಕಾಸದಲ್ಲಿ ಇತರರಿಗೆ ಸೇವೆ ಸಲ್ಲಿಸುವ ಮಹತ್ವದ ಪಾತ್ರದ ಕುರಿತು ಪರಮಹಂಸ ಯೋಗಾನಂದರ ಜ್ಞಾನದ ಮೇಲೆ ಗಮನ ಹರಿಸುತ್ತಿದ್ದೇವೆ.

ಪರಮಹಂಸ ಯೋಗಾನಂದರ ಮಾತುಗಳು ಮತ್ತು ಬರಹಗಳಿಂದ:

ಜೀವನವು ಮುಖ್ಯವಾಗಿ ಸೇವೆಯಿಂದ ಕೂಡಿರಬೇಕು. ಆ ಆದರ್ಶವಿಲ್ಲದಿದ್ದರೆ ಭಗವಂತನು ನಿಮಗೆ ಕೊಟ್ಟ ಬುದ್ಧಿಶಕ್ತಿಯು ತನ್ನ ಗುರಿಯನ್ನು ತಲುಪುವುದಿಲ್ಲ. ಸೇವೆಯಲ್ಲಿ ತೊಡಗಿಸಿಕೊಂಡು ನಿಮ್ಮ ಅಲ್ಪವ್ಯಕ್ತಿತ್ವವನ್ನು ಮರೆತಾಗ, ಪರಮಾತ್ಮನ ಮಹಾನ್ ಆತ್ಮದ ಅನುಭವ ನಿಮಗಾಗುತ್ತದೆ. ಸೂರ್ಯನ ಜೀವಧಾರಕ ಕಿರಣಗಳು ಎಲ್ಲವನ್ನು ಪೋಷಿಸುವಂತೆ, ನೀವು ಬಡವರ ಮತ್ತು ಅನಾಥರ ಹೃದಯಗಳಲ್ಲಿ ಭರವಸೆಯ ಕಿರಣಗಳನ್ನು ಪಸರಿಸಬೇಕು, ಹತಾಶರಾದವರ ಹೃದಯಗಳಲ್ಲಿ ಧೈರ್ಯವನ್ನು ಬೆಳಗಿಸಬೇಕು, ಅಂತೆಯೇ ತಾವು ವಿಫಲರು ಎಂದು ತಿಳಿದವರ ಹೃದಯಗಳಲ್ಲಿ ಹೊಸ ಶಕ್ತಿಯ ಜ್ಯೋತಿಯನ್ನು ಹೊತ್ತಿಸಬೇಕು. 

ಆತ್ಮವು ನಿರಂತರವಾಗಿ ವಿಸ್ತರಿಸಲು ಅವಕಾಶ ಕಂಡುಕೊಂಡಾಗ ಮಾತ್ರ ಸಂತೋಷವಾಗಿರುತ್ತದೆ. ಇತರರಿಗೆ ಸೇವೆ ಸಲ್ಲಿಸುವ ನಿಯಮವನ್ನು ಪೂರೈಸುವುದರಿಂದ ನಮ್ಮ ಪ್ರಜ್ಞೆಯನ್ನು ದೇವರಲ್ಲಿ ವಿಸ್ತರಿಸುವ ಮತ್ತೊಂದು ನಿಯಮವನ್ನು ಪೂರೈಸಿದಂತಾಗುತ್ತದೆ: ಸ್ನೇಹ.

ಬೇರೊಬ್ಬರ ಬಗ್ಗೆ ನೀವು ಕರುಣೆಯಿಂದ ಯೋಚಿಸಿದ ತಕ್ಷಣ, ನಿಮ್ಮ ಪ್ರಜ್ಞೆ ವಿಸ್ತಾರಗೊಳ್ಳುತ್ತದೆ. ನೀವು ನಿಮ್ಮ ನೆರೆಯವರ ಬಗ್ಗೆ ಯೋಚಿಸಿದಾಗ, ನಿಮ್ಮ ಅಸ್ತಿತ್ವದ ಒಂದು ಭಾಗವು ಆ ಆಲೋಚನೆಯೊಂದಿಗೆ ಹೊರಹೋಗುತ್ತದೆ. ಮತ್ತು ಕೇವಲ ಯೋಚಿಸುವುದು ಮಾತ್ರವಲ್ಲ, ಆ ಆಲೋಚನೆಯ ಮೇಲೆ ಕಾರ್ಯನಿರ್ವಹಿಸಲು ಸಿದ್ಧರಾಗಿರುವುದು ಸಹ ಅವಶ್ಯಕ.

ಎಲ್ಲಾ ಮಾನವರು ಮತ್ತು ಇತರ ಜೀವಿಗಳನ್ನು ವೈಯಕ್ತಿಕವಾಗಿ ಮತ್ತು ಪ್ರತ್ಯೇಕವಾಗಿ ತಿಳಿದುಕೊಳ್ಳುವುದು ಹಾಗೂ ಪ್ರೀತಿಸುವುದು ಅನಿವಾರ್ಯವಲ್ಲ. ನೀವು ಮಾಡಬೇಕಾಗಿರುವುದು ಇಷ್ಟೇ: ನಿಮಗೆ ಎದುರಾಗುವ ಎಲ್ಲಾ ಜೀವಿಗಳ ಮೇಲೆ ಸ್ನೇಹಪೂರ್ವಕ ಸೇವೆಯ ಬೆಳಕನ್ನು ಹರಿಸಲು ಸದಾ ಸಿದ್ಧರಾಗಿರುವುದು. ಈ ವರ್ತನೆಗೆ ನಿರಂತರ ಮಾನಸಿಕ ಪ್ರಯತ್ನ ಮತ್ತು ಸಿದ್ಧತೆ ಬೇಕು; ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಿಸ್ವಾರ್ಥತೆ ಬೇಕು.

ಇತರರಿಗೆ ಸೇವೆ ಸಲ್ಲಿಸುವುದು ಸ್ವಾತಂತ್ರ್ಯದ ಮಾರ್ಗ. ಧ್ಯಾನ ಮತ್ತು ದೇವರೊಂದಿಗೆ ಒಂದಾಗಿರುವುದು ಸಂತೋಷದ ಮಾರ್ಗ. ನಿಮ್ಮ ಹೃದಯವು ಇತರರ ಮೇಲಿನ ಪ್ರೀತಿಯಿಂದ ಮಿಡಿಯಲಿ, ನಿಮ್ಮ ಮನಸ್ಸು ಇತರರ ಅಗತ್ಯಗಳನ್ನು ಗ್ರಹಿಸಲಿ, ಮತ್ತು ನಿಮ್ಮ ಅಂತಃಪ್ರಜ್ಞೆಯು ಇತರರ ಆಲೋಚನೆಗಳನ್ನು ಗ್ರಹಿಸಲಿ.

ಭೌತಿಕತೆಯ ಸುಳ್ಳು ಭದ್ರತೆಗಳಿಗೆ ಅಂಟಿಕೊಳ್ಳದೆ, ದೇವರ ಉಪಸ್ಥಿತಿಯ ಆನಂದಮಯ ಪ್ರಜ್ಞೆಯಲ್ಲಿ ಬದುಕಲು ಸಾಧ್ಯವಾಗುವ ತಂತ್ರಗಳನ್ನು ನಿಮಗೆ ಕಲಿಸುವುದರ ಮೂಲಕ, ಯೋಗವು ನಿಮ್ಮನ್ನು ಭೌತಿಕ ನಿರಾಶೆಗಳ ನೋವಿನಿಂದ ಮುಕ್ತಗೊಳಿಸುತ್ತದೆ ಮತ್ತು ಹೆಚ್ಚು ಸಂತೋಷಕರ, ಫಲಪ್ರದ ಮತ್ತು ಅರ್ಥಪೂರ್ಣ ಜೀವನವನ್ನು ಆನಂದಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಇದು ಆಳವಾದ ಆಂತರಿಕ ನೆಮ್ಮದಿಯನ್ನು ನೀಡುತ್ತದೆ, ಅದನ್ನು ನೀವು ಸ್ವಯಂಪ್ರೇರಿತವಾಗಿ ಇತರರಿಗೆ ಸೇವೆ ಸಲ್ಲಿಸುವ ಮೂಲಕ ಹಂಚಿಕೊಳ್ಳಲು ಬಯಸುತ್ತೀರಿ.

ಜೀವನವು, ಕರ್ತವ್ಯದ ಆನಂದದಾಯಕ ಹೋರಾಟವೆಂದೂ ಮತ್ತು ಅದೇ ಕಾಲಕ್ಕೆ ಅದೊಂದು ಹಾದು ಹೋಗುವ ಸ್ವಪ್ನವೆಂದೂ ನೀವು ಅರಿತಾಗ ಹಾಗೂ ಇತರರಿಗೆ ದಯೆ ಮತ್ತು ಶಾಂತಿಯನ್ನು ನೀಡಿ, ಅವರನ್ನು ಸುಖಿಗಳನ್ನಾಗಿ ಮಾಡುವ ಆನಂದದಿಂದ ನೀವು ತುಂಬಿ ತುಳುಕುತ್ತಿರುವಾಗ, ಭಗವಂತನ ದೃಷ್ಟಿಯಲ್ಲಿ ನಿಮ್ಮದೊಂದು ಯಶಸ್ವೀ ಜೀವನ.

ಪರಮಹಂಸ ಯೋಗಾನಂದರ ಬೋಧನೆಗಳು ಒತ್ತಿ ಹೇಳುವಂತೆ, ನಮ್ಮ ಕುಟುಂಬಗಳು, ಸ್ನೇಹಿತರು, ನೆರೆಹೊರೆಯವರು ಮತ್ತು ಇಡೀ ಜಗತ್ತಿಗೆ ಸಹಾಯ ಮಾಡಲು ನಾವೆಲ್ಲರೂ ನಿರ್ವಹಿಸಬಹುದಾದ ಒಂದು ಅಸಾಮಾನ್ಯ ಸೇವೆಯೆಂದರೆ ಏಕಾಗ್ರತೆಯ ಪ್ರಾರ್ಥನೆ. ಪರಮಹಂಸಜಿಯವರು ಪ್ರಾರ್ಥನೆಗೆ ನೀಡಿದ ಮಹತ್ವವನ್ನು ವಿವರಿಸುವ ಮತ್ತು ನಮ್ಮ ಪ್ರಾರ್ಥನೆಗಳು ಇತರರ ಜೀವನವನ್ನು ಉನ್ನತೀಕರಿಸಲು ಹೇಗೆ ದೊಡ್ಡ ಸಕಾರಾತ್ಮಕ ಪ್ರಭಾವ ಬೀರಬಹುದು ಎಂಬುದನ್ನು ತಿಳಿಸುವ ಶ್ರೀ ದಯಾ ಮಾತಾ ಅವರ ವೀಡಿಯೊವನ್ನು ನೋಡಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ಶ್ರೀ ದಯಾ ಮಾತಾ ಅವರು ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್‌ನ ಪ್ರೀತಿಯ ಮೂರನೇ ಅಧ್ಯಕ್ಷರು ಮತ್ತು ಸಂಘಮಾತಾ ಆಗಿದ್ದರು.

ಇದನ್ನು ಹಂಚಿಕೊಳ್ಳಿ