ಕ್ರಿಸ್ಮಸ್ ದಿನದಂದು (1961) ನೀಡಲಾದ “ಸರಿಯಾದ ಮನೋಭಾವ: ಸಕಾರಾತ್ಮಕ ಸಾಧನೆಗಳಿಗಾಗಿ ಜೀವನದ ಕಷ್ಟಗಳನ್ನು ಸದುಪಯೋಗಪಡಿಸಿಕೊಳ್ಳುವುದು” ಎಂಬ ಉಪನ್ಯಾಸದ ಒಂದು ಕಿರು ಭಾಗವಿದು. ಈ ಉಪನ್ಯಾಸವು ಶ್ರೀ ದಯಾ ಮಾತಾ ಅವರ ಉಪನ್ಯಾಸಗಳ ಹೊಸ ಸಂಗ್ರಹವಾದ ‘ಜರ್ನಿ ವಿದ್ ಪರಮಹಂಸ ಯೋಗಾನಂದ’ ಎಂಬ ಪುಸ್ತಕದ ಒಂದು ಅಧ್ಯಾಯವಾಗಿದೆ. ಈ ಪುಸ್ತಕವನ್ನು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಶೀಘ್ರದಲ್ಲೇ ಪ್ರಕಟಿಸಲಿದೆ. ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಸೇಷನ್ ಫೆಲೋಶಿಪ್ನ ಗೌರವಾನ್ವಿತ ಮೂರನೇ ಅಧ್ಯಕ್ಷರು ಮತ್ತು ಸಂಘಮಾತೆಯಾದ ಶ್ರೀ ದಯಾ ಮಾತಾ ಅವರು, ಜೀವನದಲ್ಲಿ ಅನಿವಾರ್ಯವಾಗಿ ಎದುರಾಗುವ ಸವಾಲುಗಳೆಡೆಗೆ ಸರಿಯಾದ ಮನೋಭಾವವನ್ನು ಬೆಳೆಸಿಕೊಳ್ಳುವುದರಿಂದ ಭಗವಂತನಿಗೆ ಹೇಗೆ ಇನ್ನಷ್ಟು ಹತ್ತಿರವಾಗಬಹುದು ಮತ್ತು ನಿಜವಾದ ಆಂತರಿಕ ಸ್ವಾತಂತ್ರ್ಯ ಹಾಗೂ ಪರಿಪೂರ್ಣತೆಯನ್ನು ಹೇಗೆ ಕಂಡುಕೊಳ್ಳಬಹುದು ಎಂಬುದನ್ನು ಇಲ್ಲಿ ಚರ್ಚಿಸುತ್ತಾರೆ.
ಪ್ರೀತಿ ಮತ್ತು ತಿಳುವಳಿಕೆ, ವಿವೇಕ, ಆರೋಗ್ಯ, ಭದ್ರತೆ, ಶಾಶ್ವತ ಆನಂದ — ಇವುಗಳನ್ನು ಪ್ರತಿಯೊಬ್ಬರೂ ಬಯಸುತ್ತಾರೆ. ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗುತ್ತಿರುವ ನಮ್ಮೆಲ್ಲರಿಗೂ, ಭಗವಂತನೊಂದಿಗೆ ಸಂಪರ್ಕ ಸಾಧಿಸುವುದರ ಮೂಲಕ ಈ ಗುರಿಗಳನ್ನು ಸಾಧಿಸಬಹುದು ಎಂಬ ದೃಢವಿಶ್ವಾಸವಿದೆ. ಇದು ಸಾರ್ವತ್ರಿಕ ಸತ್ಯವಾಗಿದ್ದರೂ ಮತ್ತು ದೈವಿಕ ಸಂಪರ್ಕದ ಮಾರ್ಗವು ಎಲ್ಲ ಮಾನವರಿಗೂ ಅನ್ವಯಿಸುವ ಸನಾತನ ತತ್ವಗಳನ್ನು ಒಳಗೊಂಡಿದ್ದರೂ, ಒಂದು ಅರ್ಥದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ವಿಶಿಷ್ಟ ಹಾಗೂ ಏಕಾಂತದ ಮಾರ್ಗದಲ್ಲಿ ಸಾಗುತ್ತಾರೆ. ನಮ್ಮಲ್ಲಿ ಪ್ರತಿಯೊಬ್ಬರ ಅಂತರ್ಗತ ವಿವೇಕವನ್ನು ಹಾಗೂ ಭಗವಂತನೊಂದಿಗಿನ ನಮ್ಮ ಆತ್ಮದ ಪರಿಪೂರ್ಣ ಸಂಬಂಧದ ಅರಿವನ್ನು ಪುನಃ ಜಾಗೃತಗೊಳಿಸಲು ನಮಗೆ ವಿಶಿಷ್ಟವಾಗಿ ಅಗತ್ಯವಿರುವ ನಿರ್ದಿಷ್ಟ ಸನ್ನಿವೇಶಗಳು, ಪರೀಕ್ಷೆಗಳು ಮತ್ತು ಪಾಠಗಳ ಮೂಲಕ ಆ ಮಾರ್ಗವು ನಮ್ಮನ್ನು ಕರೆದೊಯ್ಯುತ್ತದೆ.
ಕಷ್ಟದ ಸಮಯಗಳು ಎದುರಾದಾಗ, ನಾವು ನಶ್ವರ ಜೀವಿಗಳು ಎಂಬ ಭಾವನೆಯನ್ನು ಹೊಂದಿರುವ ನಮ್ಮ ಕೆಟ್ಟ ಅಭ್ಯಾಸದಿಂದಾಗಿ ತಪ್ಪು ಆಲೋಚನೆಗಳಿಗೆ ಸುಲಭವಾಗಿ ಬಲಿಯಾಗುತ್ತೇವೆ — “ನನಗೇ ಏಕೆ ಹೀಗಾಗಬೇಕು? ಇದನ್ನು ಅನುಭವಿಸಲು ನಾನೇನು ಮಾಡಿದ್ದೆ?” ಎಂದು ಪ್ರಶ್ನಿಸಿಕೊಳ್ಳುತ್ತೇವೆ ಅಥವಾ ಜೀವನವು ನಮ್ಮನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಅಸಮಾಧಾನ ಅಥವಾ ಕೋಪವನ್ನು ಬೆಳೆಸಿಕೊಳ್ಳುತ್ತೇವೆ. ಸರಿಯಾದ ಮನೋಭಾವವನ್ನು ಬೆಳೆಸಿಕೊಳ್ಳುವುದರಿಂದ, ಆ ಸನ್ನಿವೇಶಗಳು ಎಷ್ಟೇ “ಅನ್ಯಾಯ”ವೆಂದು ತೋರಿದರೂ, ಅವುಗಳನ್ನು ಅವಕಾಶಗಳಾಗಿ ಕಾಣಲು ನಮಗೆ ಸಾಧ್ಯವಾಗುತ್ತದೆ. ಅವು ನಮ್ಮ ವೈಯಕ್ತಿಕ ಕರ್ಮದಿಂದಲೇ ಸೃಷ್ಟಿಯಾಗಿದ್ದರೂ, ನಮ್ಮ ಆತ್ಮದ ವಿಕಾಸವು ಶೀಘ್ರವಾಗಿ ಅನಾವರಣಗೊಳ್ಳುವಂತೆ ಮಾಡುವ ನಿರ್ದಿಷ್ಟ ಉದ್ದೇಶಕ್ಕಾಗಿ ಭಗವಂತನ ಅಂತರ್ನಿಹಿತ ಕೃಪೆಯಿಂದ ಆಶೀರ್ವದಿಸಲ್ಪಟ್ಟಿರುತ್ತವೆ.
ನಮ್ಮ ಕಷ್ಟಗಳು ಇತರರಿಂದಾಗಲಿ, ಬಾಹ್ಯ ಸನ್ನಿವೇಶಗಳಿಂದಾಗಲಿ ಅಥವಾ ಬೇರೆ ಯಾವುದೇ ಮೂಲದಿಂದಾಗಲಿ ಉಂಟಾಗುವುದಿಲ್ಲ; ಬದಲಾಗಿ, ಭಗವಂತನು ತನ್ನ ವಿಶ್ವವ್ಯಾಪಿ ನಿಯಮಗಳ ಮೂಲಕ ಅವುಗಳನ್ನು ಉಂಟುಮಾಡುತ್ತಾನೆ ಎಂಬ ತಿಳಿವಳಿಕೆಗೆ ಅನುಗುಣವಾಗಿ ನಮ್ಮ ಆಧ್ಯಾತ್ಮಿಕ ಪ್ರಗತಿ ಸಾಗುತ್ತದೆ. ನಮಗೆ ಸಂಭವಿಸುವ ಎಲ್ಲವನ್ನೂ ನಮ್ಮ ಪರಮೋಚ್ಚ ಒಳಿತಿಗಾಗಿ ಬಳಸಿಕೊಳ್ಳಬಹುದು ಎಂಬ ಸತ್ಯವನ್ನು ನಾವು ದೃಢವಾಗಿ ನಂಬಿದರೆ, ಭಗವಂತನ ಆಶೀರ್ವಾದದ ಹಸ್ತವು ಸದಾ ನಮ್ಮೊಂದಿಗಿದೆ ಎಂಬುದನ್ನು ಅನುಭವಿಸುತ್ತೇವೆ ಮತ್ತು ನಮ್ಮ ಸಂಕಷ್ಟಗಳು ನಮ್ಮ ಅಂತರಂಗವನ್ನು ಕಿಂಚಿತ್ತೂ ಬಾಧಿಸಲಾರವು ಎಂಬುದನ್ನು ಅರಿಯುತ್ತೇವೆ.
ನಾವು ಎದುರಿಸುವ ಸನ್ನಿವೇಶಗಳೆಡೆಗೆ ಸರಿಯಾದ ಮನೋಭಾವವನ್ನು ಹೊಂದಿರುವುದು ಏಕೆ ಅಷ್ಟೊಂದು ಮುಖ್ಯ ಎಂಬುದಕ್ಕೆ ಇದುವೇ ಕಾರಣ. ಆಧ್ಯಾತ್ಮಿಕ ಪಥದಲ್ಲಿ ಮನೋಭಾವವೇ ಎಲ್ಲದಕ್ಕೂ ಆಧಾರ ಎಂದು ನಾನು ನಿಸ್ಸಂದೇಹವಾಗಿ ಹೇಳಬಲ್ಲೆ. ನಾವು ಜೀವನವನ್ನು ಹೇಗೆ ಎದುರಿಸುತ್ತೇವೆ, ಕಷ್ಟಗಳಿಗೆ ಹೇಗೆ ಪ್ರತಿಕ್ರಿಯಿಸುತ್ತೇವೆ, ನಮ್ಮ ಕ್ಷೇಮ ಮತ್ತು ಸಮಚಿತ್ತತೆಗೆ ಎದುರಾಗುವ ಅನಿವಾರ್ಯ ಸವಾಲುಗಳಿಗೆ ಹೇಗೆ ಸ್ಪಂದಿಸುತ್ತೇವೆ, ನಮ್ಮ ಆಧ್ಯಾತ್ಮಿಕ ಸಾಧನೆಗಳಲ್ಲಿ ಹೇಗೆ ತೊಡಗಿಸಿಕೊಳ್ಳುತ್ತೇವೆ — ಇವೆಲ್ಲವೂ ನಾವು ದೈವಕ್ಕೆ ಎಷ್ಟು ಹತ್ತಿರವಾಗುತ್ತೇವೆ ಮತ್ತು ಎಷ್ಟು ಶೀಘ್ರವಾಗಿ ಹತ್ತಿರವಾಗುತ್ತೇವೆ ಎಂಬುದನ್ನು ನಿರ್ಧರಿಸುತ್ತವೆ.
ನಾವು ಈ ಭೌತಿಕ ಲೋಕದಲ್ಲಿ ಅಸ್ತಿತ್ವದಲ್ಲಿರುವವರೆಗೆ, ನಮ್ಮೆಲ್ಲರಿಗೂ ಖಚಿತವಾಗಿ ತಿಳಿದಿರಬಹುದಾದ ಒಂದು ಸಂಗತಿಯಿದೆ: ಅದು ಬದಲಾವಣೆಯ ಅನಿಶ್ಚಿತತೆ. ದ್ವಂದ್ವಮಯವಾದ ಈ ಜಗತ್ತಿನಲ್ಲಿ ಇದನ್ನು ನಾವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ಮಾಯೆಯ ಏರಿಳಿತಗಳನ್ನು ನಾವು ನಿರಂತರವಾಗಿ ಎದುರಿಸುತ್ತಿರುತ್ತೇವೆ: ಬೆಳಕು ಮತ್ತು ಕತ್ತಲೆ, ಆರೋಗ್ಯ ಮತ್ತು ಅನಾರೋಗ್ಯ, ಜೀವನ ಮತ್ತು ಮರಣ. ಇವುಗಳ ಅಸ್ಥಿರತೆಯು ನಮ್ಮನ್ನು ಭಯದಿಂದಾಗಲಿ, ನಿರಾಶೆಯಿಂದಾಗಲಿ ಕುಗ್ಗಿಸಬಾರದು — ಎಂದಿಗೂ ಇಲ್ಲ! ನಮ್ಮ ಅತೀಂದ್ರಿಯ, ಆನಂದಮಯ ಸ್ವರೂಪದ ಅರಿವನ್ನು ನಮಗೆ ಮೂಡಿಸುವುದೇ ಅವುಗಳ ಉದ್ದೇಶ. ಈ ನಿರಂತರ ಏಳುಬೀಳುಗಳಿಂದ ಮುಕ್ತರಾಗಲು ಪ್ರಯತ್ನಿಸುವಂತೆ ಅವು ನಮ್ಮನ್ನು ಪ್ರೇರೇಪಿಸುತ್ತವೆ. ದ್ವಂದ್ವದ ನಿಯಮವನ್ನು ಮೀರಿ ಮೇಲೇರಲು ಇರುವ ಮಾರ್ಗವೆಂದರೆ ದೇವರನ್ನು ಸಂಪರ್ಕಿಸುವುದು — ಅಂದರೆ, ಬದಲಾವಣೆಗಳ ಲೋಕವನ್ನು ಮೀರಿದ ಬದಲಾಗದ ಪರಮಸತ್ಯದೊಂದಿಗೆ ಒಂದಾಗುವುದು.
ಪರಮಹಂಸಜಿಯವರು ಹೇಳುತ್ತಿದ್ದಂತೆ, “ಜಗತ್ತುಗಳು ಕುಸಿದು ನಾಶವಾಗುವ ಭೀಕರ ಅಬ್ಬರದ ನಡುವೆಯೂ ಅಚಲವಾಗಿ ನಿಲ್ಲುವುದನ್ನು” ನಾವು ಕಲಿಯಬೇಕು. ಆಗ ನಾವು ಭಗವಂತನತ್ತ ದೃಢವಾಗಿ ಮುನ್ನಡೆಯುತ್ತಿದ್ದೇವೆ ಎಂಬುದು ನಮಗೆ ಅರಿವಾಗುತ್ತದೆ. ಅಂತಿಮವಾಗಿ, ನಮ್ಮ ಮಾರ್ಗವು ಶಾಂತಿಯ ಮಧುರ ತೊರೆಯ ಮೂಲಕ ಸಾಗುತ್ತದೆಯೇ ಅಥವಾ ಸಂಘರ್ಷದ ಒರಟಾದ ರಣರಂಗದ ಮೂಲಕ ಸಾಗುತ್ತದೆಯೇ ಎಂಬುದು ಅಷ್ಟೊಂದು ಮುಖ್ಯವಲ್ಲ. ನಾವು ಸಾಧಿಸಲು ಶ್ರಮಿಸುತ್ತಿರುವ ಗುರಿಯೆಡೆಗೆ ನಮ್ಮ ಇಚ್ಛಾಶಕ್ತಿ ಮತ್ತು ಆಕಾಂಕ್ಷೆಗಳನ್ನು ದೃಢವಾಗಿ ಕೇಂದ್ರೀಕರಿಸುವುದೇ ಮುಖ್ಯ. ಕೆಲವೊಮ್ಮೆ ನಾವು ಎಡವಬಹುದು ಮತ್ತು ಭ್ರಮೆಯಲ್ಲಿ ಸಿಲುಕಿಕೊಳ್ಳಬಹುದು. ಆದರೆ ನಮ್ಮ ಹೃದಯವು ಪ್ರಾಮಾಣಿಕವಾಗಿದ್ದು, ದೇವರನ್ನು ಪಡೆಯಬೇಕೆಂಬ ತೀವ್ರ ಹಂಬಲವನ್ನು ಹೊಂದಿದ್ದರೆ, ದೇವರು ನಮ್ಮನ್ನು ಅಲ್ಲಿಯೇ ಉಳಿಯಲು ಬಿಡುವುದಿಲ್ಲ; ದೀರ್ಘಕಾಲ ಭ್ರಮೆಯ ಬಂಧನದಲ್ಲಿ ಸಿಲುಕಿರಲು ಅವಕಾಶ ನೀಡುವುದಿಲ್ಲ. ನಾವು ಆ ಬಂಧನದಿಂದ ಮುಕ್ತರಾಗಲು ಸಹಾಯಕವಾಗುವ ಅನುಭವಗಳನ್ನು ಮತ್ತು ಕೃಪೆಯನ್ನು ಆತನು ನಮಗೆ ಕರುಣಿಸುತ್ತಾನೆ.
ನನ್ನ ಜೀವನದಲ್ಲಿ ಯಾವುದಾದರೂ ಅಹಿತಕರ ಘಟನೆ ಸಂಭವಿಸಿದಾಗ, ಅದರಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನಾಗಲಿ ಅಥವಾ ಸನ್ನಿವೇಶಗಳನ್ನಾಗಲಿ ಮೀರಿ ನೋಡಿ, ಅದರಲ್ಲಿರುವ ಅಂತರ್ನಿಹಿತ ಆಧ್ಯಾತ್ಮಿಕ ಪಾಠವನ್ನು ಅರಿತುಕೊಳ್ಳುವುದರಿಂದ ಎಂತಹ ಸ್ವಾತಂತ್ರ್ಯ ದೊರೆಯುತ್ತದೆ! ನನ್ನ ಜೀವನದಲ್ಲಿ ಎದುರಾದ ಪ್ರತಿಯೊಂದು ನೋವು, ಪ್ರತಿಯೊಂದು ನಿರಾಶೆ ಮತ್ತು ತಪ್ಪು ತಿಳುವಳಿಕೆ ಹಾಗೂ ಇಂತಹ ಪ್ರತಿಯೊಂದು ಅನುಭವಕ್ಕೂ ನಾನು ವಿನಮ್ರತೆಯಿಂದ ಕೃತಜ್ಞಳಾಗಿದ್ದೇನೆ — ಏಕೆಂದರೆ, ಅವುಗಳಿಂದ ನನಗೆ ದೊರೆತ ಒಳಿತನ್ನು ನಾನು ಕಾಣುತ್ತೇನೆ. ಇದೇ ಮನೋಭಾವದಿಂದ ತಮ್ಮ ಕಷ್ಟಗಳನ್ನು ಎದುರಿಸಿರುವ ನಿಮ್ಮೆಲ್ಲರಿಗೂ ಈ ಅನುಭವಗಳು ಒಳಿತನ್ನೇ ಮಾಡಿವೆ. ಕಷ್ಟಗಳು ನನಗೆ ಶಕ್ತಿ, ತಿಳುವಳಿಕೆ ಮತ್ತು ಪ್ರೀತಿಯನ್ನು ನೀಡುವ ಆ ಪರಮಾತ್ಮನ ಬಳಿಗೆ ಧಾವಿಸುವುದನ್ನು ಕಲಿಸಿವೆ — ಇದರಿಂದ ಆತನೊಂದಿಗಿನ ನನ್ನ ಬಾಂಧವ್ಯವು ಮತ್ತಷ್ಟು ದೃಢವಾಗಿದೆ ಮತ್ತು ನಾವು ಯಾರ ಹೆಜ್ಜೆಗುರುತುಗಳನ್ನು ಅನುಸರಿಸಿ ನಡೆಯಲು ಪ್ರಯತ್ನಿಸುತ್ತೇವೆಯೋ ಆ ಪ್ರೀತಿಯ ಗುರುವಿನೊಂದಿಗೆ ನನ್ನ ಆಂತರಿಕ ಅನುಸಂಧಾನವೂ ಗಾಢವಾಗಿದೆ.
ಒಮ್ಮೆ ಪರಮಹಂಸಜಿಯವರು ನನಗೆ ಹೇಳಿದ ಮಾತು ನೆನಪಾಗುತ್ತದೆ: “ನಿಮ್ಮ ಜೀವನದಲ್ಲಿ ಅನೇಕ ಸಂಕಷ್ಟಗಳು ಎದುರಾಗುತ್ತವೆ, ಆದರೆ ನಿಮ್ಮ ಮನಸ್ಸನ್ನು ನನ್ನೊಂದಿಗೇ ಇರಿಸಿಕೊಳ್ಳಿ.” ಗುರುವು ನಮ್ಮನ್ನು ಭಗವಂತನ ಬಳಿಗೆ ಕರೆದೊಯ್ಯುವ ನಿಷ್ಠಾವಂತ ಮಾರ್ಗದರ್ಶಿ. ಜೀವನದಲ್ಲಿ ಏನೇ ಎದುರಾದರೂ, ಅದು ನನಗೆ ಮುಖ್ಯವಾಗಿರಲಿಲ್ಲ — ಏಕೆಂದರೆ ನನ್ನ ಮನಸ್ಸು ಮಾರ್ಗದ ಮೇಲೆ ಅಷ್ಟಾಗಿ ನೆಲೆಗೊಂಡಿರದೆ, ಗುರಿಯ ಮೇಲೆಯೇ ದೃಢವಾಗಿ ನೆಲೆಗೊಂಡಿತ್ತು. ನಮ್ಮಲ್ಲಿ ಯಾರಿಗೂ ಆಧ್ಯಾತ್ಮಿಕ ಪಥವು ಯಾವಾಗಲೂ ಸುಗಮವಾಗಿರುವುದಿಲ್ಲ. ಆದರೆ, “ಪ್ರತಿಯೊಂದು ಅನುಭವವನ್ನೂ ನನ್ನ ಮನಸ್ಸನ್ನು ಇನ್ನಷ್ಟು ಭಗವಂತನ ಕಡೆಗೆ ತಿರುಗಿಸಲು ನಾನು ಹೇಗೆ ಬಳಸಿಕೊಳ್ಳಬಹುದು?” ಎಂದು ನಾವು ನಿರಂತರವಾಗಿ ನಮ್ಮನ್ನೇ ಕೇಳಿಕೊಳ್ಳುತ್ತಿದ್ದರೆ, ನಾವು ವಿಜಯಿಗಳಾಗುತ್ತೇವೆ. ಸರಿಯಾದ ಮನೋಭಾವದಿಂದ, ಜೀವನದ ನೋವುಗಳನ್ನೇ ದೈವದತ್ತ ಶೀಘ್ರವಾಗಿ ಮುನ್ನಡೆಯಲು ಸಹಾಯಕವಾಗುವ ಸಾಧನಗಳನ್ನಾಗಿ ಮಾಡಿಕೊಳ್ಳುತ್ತೇವೆ.




















