ಶ್ರೀ ದಯಾ ಮಾತಾ ಅವರಿಂದ: ಮುಕ್ತಿದಾಯಕ ಸತ್ಯಗಳನ್ನು ಹೃದಯದಲ್ಲಿ ಅಳವಡಿಸಿಕೊಳ್ಳುವುದು ಮತ್ತು ಜೀವನದಲ್ಲಿ ಅಭಿವ್ಯಕ್ತಗೊಳಿಸುವುದು

5 ಅಕ್ಟೋಬರ್, 2026

ಶ್ರೀ ದಯಾ ಮಾತಾ ಅವರ ಹೊಸ ಉಪನ್ಯಾಸಗಳ ಸಂಕಲನವಾದ ಜರ್ನಿ ವಿತ್ ಪರಮಹಂಸ ಯೋಗಾನಂದ ಎಂಬ ಕೃತಿಯಲ್ಲಿನ “ಸ್ಪಿರಿಚುಯಲ್ ಮೆಚ್ಯೂರಿಟಿ ಮೀನ್ಸ್ ಅಟ್ಯೂನ್‌ಮೆಂಟ್ ವಿತ್ ಗಾಡ್” ಎಂಬ ಅಧ್ಯಾಯದಿಂದ ಆಯ್ದ ಒಂದು ಸಣ್ಣ ಭಾಗವನ್ನು ಕೆಳಗೆ ನೀಡಲಾಗಿದೆ (ಈ ಕೃತಿಯನ್ನು ಸೆಲ್ಫ್-ರಿಯಲೈಸೇಷನ್ ಫೆಲೋಶಿಪ್ ಶೀಘ್ರದಲ್ಲೇ ಪ್ರಕಟಿಸಲಿದ್ದು, ತದನಂತರ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಪ್ರಕಟಿಸಲಿದೆ). ಈ ಆಯ್ದ ಭಾಗದಲ್ಲಿ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ / ಸೆಲ್ಫ್-ರಿಯಲೈಸೇಷನ್ ಫೆಲೋಶಿಪ್‌ನ ಗೌರವಾನ್ವಿತ ಮೂರನೇ ಅಧ್ಯಕ್ಷರು ಹಾಗೂ ಸಂಘಮಾತೆಯಾದ ಶ್ರೀ ದಯಾ ಮಾತಾ ಅವರು, ಪರಮಹಂಸ ಯೋಗಾನಂದರ ಕೆಲವು ಮುಕ್ತಿದಾಯಕ ಸತ್ಯಗಳನ್ನು ತಿಳಿಸುತ್ತಾ, ನಮ್ಮ ಜೀವನದಲ್ಲಿ ಸಾಕಾರಗೊಳಿಸಲು ಬಯಸುವ ಸತ್ಯಗಳನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವುದರ ಮಹತ್ವವನ್ನು ವಿವರಿಸಿದ್ದಾರೆ.

ಪರಮಹಂಸ ಯೋಗಾನಂದರು ಧ್ಯಾನಕ್ಕಾಗಿ ನಮ್ಮನ್ನು ಒಟ್ಟುಗೂಡಿಸಿದಾಗ, ಕೆಲವೊಮ್ಮೆ ಬಹಳ ಕಡಿಮೆ ಮಾತನಾಡುತ್ತಿದ್ದರು; ಆದರೆ ಅವರ ಆ ಕೆಲವೇ ಮಾತುಗಳಲ್ಲಿ ಅಪಾರವಾದ ಅರ್ಥವಿತ್ತು, ಅಗಾಧವಾದ ಸತ್ಯವಿತ್ತು. ಶಿಸ್ತನ್ನು ಬೋಧಿಸುವುದಾಗಿರಲಿ ಅಥವಾ ಪ್ರಶಂಸಿಸುವುದಾಗಿರಲಿ, ಅವರ ಪ್ರತಿಯೊಂದು ಮಾತೂ ನನಗಾಗಿಯೇ ಹೇಳಿದಂತಿರುತ್ತಿತ್ತು. ಅವರು ಹೇಳಿದ್ದನ್ನೆಲ್ಲ ನಾನು ವೈಯಕ್ತಿಕವಾಗಿ ಅಳವಡಿಸಿಕೊಳ್ಳಬೇಕಾದ ಮಾರ್ಗದರ್ಶನವೆಂದು ಸ್ವೀಕರಿಸುತ್ತಿದ್ದೆ. ಇತರರು ಅದನ್ನು ಪಾಲಿಸುತ್ತಿದ್ದಾರೆಯೇ ಎಂಬುದು ನನಗೆ ಮುಖ್ಯವಾಗಿರಲಿಲ್ಲ. ವಿಶೇಷವಾಗಿ, ಅವರ ಗದರಿಕೆಗಳೂ ಸೇರಿದಂತೆ, ಅವರ ಮಾತುಗಳು ಇತರರನ್ನು ಉದ್ದೇಶಿಸಿ ಹೇಳಿದವು ಎಂದು ನಾನು ಎಂದಿಗೂ ಭಾವಿಸುತ್ತಿರಲಿಲ್ಲ. ಸತ್ಯದ ಪ್ರತಿಯೊಂದು ಕಣವನ್ನೂ ನಾನು ಆರಿಸಿಕೊಂಡು ಅಮೂಲ್ಯ ನಿಧಿಯಂತೆ ಜೋಪಾನ ಮಾಡುತ್ತಿದ್ದೆ. ಅವರು ಹೇಳಿದ ಪ್ರತಿಯೊಂದು ಮಾತನ್ನೂ ನಾನು ಹೃದಯಪೂರ್ವಕವಾಗಿ ಸ್ವೀಕರಿಸದಿದ್ದರೆ, ಅವರು ಮಾತನಾಡುವುದರಿಂದ ಏನು ಪ್ರಯೋಜನ ಎಂದು ನನಗನಿಸುತ್ತಿತ್ತು. ಇದೇ ಮಾತು ಇಂದಿಗೂ ನಮ್ಮೆಲ್ಲರಿಗೂ ಅನ್ವಯಿಸುತ್ತದೆ. ನಾವು ದೇವರನ್ನು ಅರಿಯಬೇಕೆಂದರೆ, ಗುರುವಿನ ಮಾರ್ಗದರ್ಶನವನ್ನು ಅನುಸರಿಸಲು ಇಂತಹ ಪ್ರಯತ್ನವನ್ನು ಮಾಡಲೇಬೇಕು.

ಒಂದು ಸಂಜೆ ಧ್ಯಾನದ ನಂತರ, ಗುರುಜಿಯವರು ನಮಗೆ ಆಶೀರ್ವದಿಸುತ್ತಾ ಮೂರು ವಿಷಯಗಳನ್ನು ತಿಳಿಸಿದರು. ಅಂದಿನಿಂದಲೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ. ಇಂದಿನಿಂದ ನೀವೂ ಅವುಗಳನ್ನು ಅಭ್ಯಾಸದಲ್ಲಿ ಅಳವಡಿಸಿಕೊಳ್ಳಬೇಕೆಂದು ನಾನು ಪ್ರೋತ್ಸಾಹಿಸುತ್ತೇನೆ:

  1. ಸಹಾನುಭೂತಿಯಿಂದಿರಿ.
  2. ಟೀಕಿಸಬೇಡಿ.
  3. ವಿನಮ್ರರಾಗಿರಿ.

ನನ್ನ ಕೋಣೆಗೆ ಹಿಂತಿರುಗಿದಾಗ, ಆ ಮೂರು ವಿಷಯಗಳನ್ನು ಬರೆದಿಟ್ಟುಕೊಂಡು, ಅವು ಸದಾ ನೆನಪಿನಲ್ಲಿ ಉಳಿಯುವಂತೆ ಕಾಣುವ ಸ್ಥಳದಲ್ಲಿ ಇರಿಸಿದೆ.

ಸಹಾನುಭೂತಿಯಿಂದಿರಿ: ಇದರರ್ಥ ಇತರರನ್ನು ಹೆಚ್ಚು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಮತ್ತು ಅವರ ಬಗ್ಗೆ ಕರುಣೆ ಹೊಂದಿರುವುದು; ಅವರ ಕಷ್ಟಸುಖಗಳಲ್ಲಿ ಸಹಭಾಗಿಗಳಾಗುವುದು, ಅವರ ಬಗ್ಗೆ ಕಾಳಜಿ ವಹಿಸುವುದು, ಅಗತ್ಯವಿದ್ದಾಗ ಅವರಿಗೆ ನೆರವಾಗುವುದು ಮತ್ತು ಸದಾ ಇತರರ ಬಗ್ಗೆ ಒಳ್ಳೆಯ ಭಾವನೆಯಿಂದ ಯೋಚಿಸಲು ಪ್ರಯತ್ನಿಸುವುದು.

ಟೀಕಿಸಬೇಡಿ: ಟೀಕಿಸುವ ಪ್ರವೃತ್ತಿಗೆ ಒಳಗಾಗುವುದು ದೀರ್ಘಕಾಲಿಕ ಮಾನಸಿಕ ಕಾಯಿಲೆಯಾಗಿ ಪರಿಣಮಿಸಬಹುದು. ಈ ಕೆಟ್ಟ ಅಭ್ಯಾಸಕ್ಕೆ ಸುಲಭವಾಗಿ ಬಲಿಯಾಗಬಹುದು; ಏಕೆಂದರೆ ಈ ಜಗತ್ತಿನಲ್ಲಿ ಯಾವುದೂ ಪರಿಪೂರ್ಣವಲ್ಲ. ಪ್ರತಿಯೊಬ್ಬರಲ್ಲಿಯೂ ಎದ್ದುಕಾಣುವ ದೋಷಗಳಿವೆ — ಮತ್ತು ನಿಸ್ಸಂದೇಹವಾಗಿ, ನಾವೂ ಇದಕ್ಕೆ ಹೊರತಲ್ಲ. ಆದರೆ, ಇತರರನ್ನು ನಕಾರಾತ್ಮಕವಾಗಿ ಅತಿಯಾಗಿ ಟೀಕಿಸುವುದಕ್ಕೂ, ಅವರ ತಪ್ಪುಗಳನ್ನು ನಮ್ಮದೇ ವೈಯಕ್ತಿಕ ಪಾಠವಾಗಿ ಸ್ವೀಕರಿಸಿ, ನಾವೂ ಅಂತಹ ತಪ್ಪುಗಳನ್ನು ಮಾಡದಿರಲು ಅವುಗಳನ್ನು ಮನಸ್ಸಿನಲ್ಲೇ ಗುರುತಿಸಿಕೊಳ್ಳುವುದಕ್ಕೂ ನಡುವೆ ಸೂಕ್ಷ್ಮವಾದ ವ್ಯತ್ಯಾಸವಿದೆ. ಒಬ್ಬರನ್ನೊಬ್ಬರು ತೀರ್ಪುಮಾಡುವ ಹಕ್ಕು ನಮಗಿಲ್ಲ; ಆ ಹಕ್ಕು ದೇವರಿಗೆ ಮಾತ್ರ ಇದೆ. ಟೀಕಿಸುವ ಸ್ವಭಾವವುಳ್ಳವರಿಗೆ ಅದು ಆಧ್ಯಾತ್ಮಿಕ ಪ್ರಗತಿಗೆ ಬಹುದೊಡ್ಡ ಅಡ್ಡಿಯಾಗುತ್ತದೆ.

ವಿನಮ್ರರಾಗಿರಿ: ವಿನಮ್ರತೆಯು “ನಾನು ವಿನಮ್ರನು” ಎಂಬ ಟೊಳ್ಳು ಮಾತುಗಳಲ್ಲಿ ವ್ಯಕ್ತವಾಗುವುದಿಲ್ಲ; ಬದಲಾಗಿ, ನಮ್ಮ ಮನೋಭಾವದಲ್ಲಿ ಅಭಿವ್ಯಕ್ತವಾಗುತ್ತದೆ. ಅದು ದೇವರೊಂದಿಗಿನ ಮಧುರವಾದ, ಗೋಪ್ಯವಾದ, ಮೌನಮಯವಾದ ಪ್ರೇಮಸಂಬಂಧವಾಗಿದೆ. ಅಲ್ಲಿ, ಯಾವುದೇ ಮನ್ನಣೆ ಅಥವಾ ಕೀರ್ತಿಗೆ ನಾವು ಅರ್ಹರೆಂದು ಎಂದಿಗೂ ಭಾವಿಸುವುದಿಲ್ಲ. ಯಾರಾದರೂ ನಮ್ಮನ್ನು ಪ್ರಶಂಸಿಸಿದಾಗ, ದೇವರ ಆಶೀರ್ವಾದ, ಮಾರ್ಗದರ್ಶನ ಮತ್ತು ಸಹಾಯವಿಲ್ಲದಿದ್ದರೆ, ನಮಗೆ ಆ ಮನ್ನಣೆ ದೊರೆಯುತ್ತಿರಲಿಲ್ಲ ಎಂಬುದನ್ನು ನಾವು ಅರಿತಿರುತ್ತೇವೆ.

ನಿಜವಾದ ವಿನಮ್ರತೆಗಾಗಿ ಪ್ರಾರ್ಥಿಸಿ. ಅಂದರೆ, ತನ್ನ ಅಹಂ ಅನ್ನು ಮರೆತು, ಅಂತರಂಗದಲ್ಲಿ ಹೊಂದಿರಬೇಕಾದ ಮನೋಭಾವ: “ಪ್ರಭುವೇ, ಕರ್ತನು ನೀನೇ, ನಾನಲ್ಲ.” ಈ ವಾಕ್ಯವನ್ನು ಮನಸ್ಸಿನಲ್ಲೇ ಮಂತ್ರದಂತೆ ಜಪಿಸುತ್ತಾ, ಆಳವಾದ ಏಕಾಗ್ರತೆಯಿಂದ ಪ್ರಾರ್ಥಿಸಿ ಮತ್ತು ಅಹಂಕಾರದಿಂದ ನಿಮ್ಮನ್ನು ಮುಕ್ತಗೊಳಿಸುವಂತೆ ದೇವರನ್ನು ಕೇಳಿಕೊಳ್ಳಿ. ವಿನಮ್ರತೆಯಿಲ್ಲದೆ ಆಧ್ಯಾತ್ಮಿಕ ಜೀವನವನ್ನು ನಿರ್ಮಿಸಲು ಅಗತ್ಯವಾದ ದೃಢವಾದ ಅಡಿಪಾಯವೇ ಇರುವುದಿಲ್ಲ. ಮನಸ್ಸು ಮತ್ತು ಹೃದಯವು ದೇವರ ಚಿಂತನೆಗಳಿಂದ ಹಾಗೂ ಆತನ ಮೇಲಿನ ಪ್ರೇಮದಿಂದ ತುಂಬಿದಷ್ಟೂ, ಸ್ವಾರ್ಥಪರವಾದ “ನಾನು, ನಾನು, ನಾನು” ಎಂಬ ಭಾವನೆಗೆ ಅಲ್ಲಿ ಕಡಿಮೆ ಅವಕಾಶವಿರುತ್ತದೆ.

ಗುರುಜಿಯವರು ನಮಗೆ ನೀಡಿರುವ ಬಂಧನಮುಕ್ತಗೊಳಿಸುವ ಸತ್ಯಗಳನ್ನು ಸಾಧ್ಯವಾದಷ್ಟು ಜೀವಂತವಾಗಿ ನಿಮ್ಮೊಂದಿಗೆ ಹಂಚಿಕೊಳ್ಳುವುದು ನನಗೆ ದೊರೆತ ಸೌಭಾಗ್ಯವೂ ಸಂತೋಷವೂ ಆಗಿದೆ. ಇವು ಗುರುಜಿಯವರ ಉಪದೇಶಗಳಾಗಿವೆ. ದೇವರನ್ನು ಅರಿಯುವ ನಿಮ್ಮ ಪ್ರಾಮಾಣಿಕ ಪ್ರಯತ್ನದ ಭಾಗವಾಗಿ ಈ ಸತ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ಆಧ್ಯಾತ್ಮಿಕ ವಿಕಸನವು ಮೊದಲನೆಯದಾಗಿ ಅಂತರಂಗಕ್ಕೆ ಸಂಬಂಧಿಸಿದ ವಿಷಯವಾಗಿದೆ. ನೀವು ಈ ಸತ್ಯಗಳನ್ನು ಹೃದಯಪೂರ್ವಕವಾಗಿ ಸ್ವೀಕರಿಸಿ, ಅಂತರಂಗದಲ್ಲಿ ಅವುಗಳ ಬಗ್ಗೆ ಆಳವಾಗಿ ಚಿಂತಿಸಿ, ನಿಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳನ್ನು ಅವುಗಳಿಂದ ತುಂಬಿಕೊಂಡರೆ, ಅವು ನಿಮ್ಮ ಜೀವನದಲ್ಲಿ ಬಾಹ್ಯವಾಗಿ ಅಭಿವ್ಯಕ್ತಗೊಳ್ಳಲು ಪ್ರಾರಂಭಿಸುತ್ತವೆ. “ಮನುಷ್ಯನು ತನ್ನ ಹೃದಯದಲ್ಲಿ ಏನನ್ನು ಆಲೋಚಿಸುತ್ತಾನೋ, ಅವನು ಅದೇ ಆಗಿರುತ್ತಾನೆ.” *

ಅಡಿಟಿಪ್ಪಣಿ: 
* ಗಾದೆಗಳು 23:7 (ಬೈಬಲ್). 

ಇದನ್ನು ಹಂಚಿಕೊಳ್ಳಿ