ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ತಮ್ಮ ಪ್ರಾಣಗಳನ್ನು ಕಳೆದುಕೊಂಡಿರುವ ಅಥವಾ ಬಾಧಿತರಾಗಿರುವ ಎಲ್ಲರಿಗಾಗಿ ನಮ್ಮ ಹೃದಯಗಳು ಮಿಡಿಯುತ್ತವೆ. ಈ ದುರಂತದಲ್ಲಿ ನೀರಿನಲ್ಲಿ ಕೊಚ್ಚಿಹೋದ ತಮ್ಮ ಪ್ರೀತಿಪಾತ್ರರಿಗಾಗಿ ಶೋಕಿಸುತ್ತಿರುವ ಅನೇಕ ಕುಟುಂಬಗಳು ಮತ್ತು ಸಮುದಾಯಗಳು ಊಹಿಸಲೂ ಅಸಾಧ್ಯವಾದ ದುಃಖವನ್ನು ಎದುರಿಸುತ್ತಿವೆ; ಅದೇ ವೇಳೆ, ಇನ್ನೂ ಅಸಂಖ್ಯಾತ ಜನರು ನಾಪತ್ತೆಯಾಗಿರುವ ತಮ್ಮ ಪ್ರೀತಿಪಾತ್ರರ ಬಗ್ಗೆ ಯಾವುದೇ ಸುದ್ದಿಗಾಗಿ ಕಾಯುತ್ತಿದ್ದಾರೆ.ಈ ದುರಂತದ ಸುದ್ದಿ ತಿಳಿದಾಗಿನಿಂದಲೂ, ನಮ್ಮ ಅಧ್ಯಕ್ಷರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಜಿಯವರನ್ನೂ ಒಳಗೊಂಡಂತೆ, ವೈಎಸ್ಎಸ್ ಮತ್ತು ಎಸ್‌ಆರ್‌ಎಫ್ ಆಶ್ರಮಗಳ ಗುರುಜೀಯವರ ಸನ್ಯಾಸಿಗಳು ಮತ್ತು ಸನ್ಯಾಸಿನಿಯರ ಪ್ರಾರ್ಥನೆಗಳು, ಈ ದುರಂತದಿಂದ ಬಾಧಿತರಾಗಿರುವ ಎಲ್ಲರಿಗಾಗಿ ಹಾಗೂ ನೇಪಾಳ ಮತ್ತು ಈ ಇಡೀ ಪ್ರದೇಶದಲ್ಲಿರುವ ಗುರುದೇವರ ಪ್ರೀತಿಯ ಮತ್ತು ಸಮರ್ಪಿತ ಭಕ್ತರಿಗಾಗಿ ತೀವ್ರವಾಗಿ ಹರಿದುಬರುತ್ತಿವೆ.
ಪವಿತ್ರ ತಾಣದತ್ತ ಶ್ರದ್ಧೆಯಿಂದ ಯಾತ್ರೆ ಕೈಗೊಂಡಿರುವ ಯಾತ್ರಿಕರಿಗೆ ಇಂತಹ ದುರಂತ ಹೇಗೆ ಸಂಭವಿಸಬಹುದು ಎಂದು ಅನೇಕ ಭಕ್ತರು ಪ್ರಶ್ನಿಸುವುದು ಸಹಜವಾಗಿದೆ. ತೀವ್ರ ನಷ್ಟದ ಕ್ಷಣಗಳಲ್ಲಿ, ಸೀಮಿತ ಮಾನವ ಬುದ್ಧಿಶಕ್ತಿಯು ಸೃಷ್ಟಿಯನ್ನು ಹಾಗೂ ಪ್ರತಿಯೊಂದು ಆತ್ಮವೂ ಭಗವಂತನ ಬಳಿಗೆ ಹಿಂದಿರುಗುವ ಪ್ರಯಾಣವನ್ನು ನಿಯಂತ್ರಿಸುವ ವೈಯಕ್ತಿಕ ಮತ್ತು ಸಮಷ್ಟಿ ಕರ್ಮದ ದೈವಿಕ ನಿಯಮಗಳ ಕಾರ್ಯವಿಧಾನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಹೆಣಗಾಡುತ್ತದೆ. ಆದರೆ, ಶ್ರದ್ಧೆಯಿಂದ ನಾವು ತಿಳಿದುಕೊಳ್ಳಬಹುದಾದ ಸಂಗತಿಯೆಂದರೆ, ಈ ಪವಿತ್ರ ಯಾತ್ರೆಯನ್ನು ಕೈಗೊಳ್ಳುವ ಸಂದರ್ಭದಲ್ಲಿ ತಮ್ಮ ಹೃದಯಗಳನ್ನು ಭಕ್ತಿಭಾವದಲ್ಲಿ ನೆಲೆಗೊಳಿಸಿಕೊಂಡು ಅಗಲಿದ ಪ್ರತಿಯೊಂದು ಆತ್ಮವೂ ಈಗ ಸುರಕ್ಷಿತವಾಗಿ ಮತ್ತು ಭದ್ರವಾಗಿ, ಬೆಳಕು, ಸೌಂದರ್ಯ ಮತ್ತು ಸ್ವಾತಂತ್ರ್ಯದಿಂದ ಕೂಡಿದ ಲೋಕಕ್ಕೆ ಏರಿದೆ.
ದೈವದ ಮೇಲಿನ ಪ್ರೀತಿಯ ನಂಬಿಕೆಯಿಂದ ಮತ್ತು ಈ ಭೂಮಿಯು ನಮ್ಮ ನಿಜವಾದ ಮನೆಯಲ್ಲ ಎಂಬ ಅರಿವಿನಿಂದ, ಮರ್ತ್ಯ ಜೀವನದ ದುರಂತಗಳು ಮತ್ತು ದುಃಖಗಳನ್ನು ನಾವು ನೋಡಿದಾಗ, ಜೀವನದ ಅತ್ಯಂತ ಕತ್ತಲೆಯ ಕ್ಷಣಗಳಲ್ಲಿಯೂ ಭಗವಂತನ ಅನಂತ ಪ್ರೀತಿ ಮತ್ತು ಅನುಗ್ರಹವು ನಮ್ಮ ಪ್ರತಿಯೊಬ್ಬರೊಂದಿಗೂ ಸದಾ ಇರುತ್ತದೆ ಎಂಬುದು ನಮಗೆ ಹೆಚ್ಚು ಸ್ಪಷ್ಟವಾಗುತ್ತದೆ. ಅದು ಪ್ರತಿಯೊಂದು ಆತ್ಮದ ಜನ್ಮಜನ್ಮಾಂತರಗಳ ಯಾತ್ರೆಯನ್ನು ಅಂತಿಮ ವಿಮೋಚನೆ ಮತ್ತು ಪರಮಾನಂದದತ್ತ ಮಾರ್ಗದರ್ಶನ ಮಾಡುತ್ತಿರುತ್ತದೆ.
ಈ ದುರಂತದಿಂದ ಹಠಾತ್ತನೆ ದಾರುಣವಾಗಿ ಅಗಲಿದವರ ಶೋಕತಪ್ತ ಪ್ರೀತಿಪಾತ್ರರು ಮತ್ತು ಕುಟುಂಬಗಳಿಗಾಗಿ ನಮ್ಮ ಹೃದಯಗಳು ಸಹಾನುಭೂತಿ ಮತ್ತು ಪ್ರಾರ್ಥನೆಯಲ್ಲಿ ಒಂದಾಗಲಿ; ಸಂಕಷ್ಟಕ್ಕೀಡಾದ ಸಮುದಾಯಗಳಿಗೆ ಭೌತಿಕ ನೆರವು ಒದಗಿಸಲು ನಾವು ಸಾಧ್ಯವಿರುವ ಎಲ್ಲವನ್ನೂ ಮಾಡೋಣ. ನೇಪಾಳ, ಹಿಮಾಲಯ ಪ್ರದೇಶ ಮತ್ತು ಈ ದುರಂತದಿಂದ ಬಾಧಿತರಾಗಿರುವ ಎಲ್ಲರೂ ಭಗವಂತನ ಗುಣಪಡಿಸುವ ಬೆಳಕಿನಿಂದ ಸುತ್ತುವರಿದಿರುವುದನ್ನು ಮನಸ್ಸಿನಲ್ಲಿ ದೃಶ್ಯೀಕರಿಸಲು ನಾವು ಒಂದಾಗೋಣ. ಸ್ವಾಮಿ ಚಿದಾನಂದಜಿಯವರು ನಮಗೆ ನೆನಪಿಸಿದ್ದಾರೆ: “ಗುರುದೇವ ಪರಮಹಂಸ ಯೋಗಾನಂದಜಿಯವರ ಆಧ್ಯಾತ್ಮಿಕ ಕುಟುಂಬದ ಹಾಗೂ ವೈಎಸ್ಎಸ್/ಎಸ್‌ಆರ್‌ಎಫ್ ಜಾಗತಿಕ ಪ್ರಾರ್ಥನಾ ಸಮೂಹದ ಸದಸ್ಯರಾಗಿ, ಅಗತ್ಯದಲ್ಲಿರುವವರಿಗೆ ಸಾಂತ್ವನ, ಶಕ್ತಿ ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ತರುವ ಪ್ರಾರ್ಥನೆಯ ಕಂಪನಗಳನ್ನು ಹೊರಹೊಮ್ಮಿಸುವ ಪವಿತ್ರ ಸವಲತ್ತು ಮತ್ತು ಜವಾಬ್ದಾರಿ ನಮಗಿದೆ. ಆಳವಾದ ಧ್ಯಾನ, ಪ್ರಾರ್ಥನೆ ಮತ್ತು ಗುರುಜೀಯವರ ಉಪಶಮನಕಾರಿ ತಂತ್ರದ ಅಭ್ಯಾಸದ ಮೂಲಕ, ನಾವು ಸಾಂತ್ವನ, ಭರವಸೆ ಮತ್ತು ದೈವಿಕ ಗುಣಪಡಿಸುವಿಕೆಯ ವಾಹಿನಿಗಳಾಗಬಹುದು.”
ಸ್ವಾಮಿ ಚಿದಾನಂದಜಿಯವರು ಈ ಪ್ರಾರ್ಥನೆಯನ್ನು ಕಳುಹಿಸುತ್ತಾ, ನಮ್ಮೆಲ್ಲರನ್ನು ಇದರಲ್ಲಿ ಪಾಲ್ಗೊಳ್ಳುವಂತೆ ಕೇಳಿಕೊಳ್ಳುತ್ತಾರೆ: “ಗುರುದೇವ ಮತ್ತು ನಮ್ಮ ಮಹಾಗುರುಗಳ ಅನುಗ್ರಹ ಹಾಗೂ ಆಶೀರ್ವಾದಗಳು ಬಾಧಿತರಾಗಿರುವ ಎಲ್ಲರನ್ನೂ ದೈವಿಕ ರಕ್ಷಣೆ, ಸಾಂತ್ವನ ಮತ್ತು ಶಾಂತಿಯಿಂದ ಆವರಿಸಲಿ. ಇನ್ನೂ ನಾಪತ್ತೆಯಾಗಿರುವವರು ಸುರಕ್ಷಿತವಾಗಿ ರಕ್ಷಿಸಲ್ಪಡಲಿ. ಪ್ರೀತಿಪಾತ್ರರನ್ನು ಕಳೆದುಕೊಂಡವರು ತಮ್ಮ ದುಃಖವನ್ನು ಸಹಿಸಿಕೊಳ್ಳಲು ಅಗತ್ಯವಾದ ಶಕ್ತಿಯನ್ನು ಪಡೆದುಕೊಳ್ಳಲಿ; ಗಾಯಗೊಂಡವರು ಗುಣಮುಖರಾಗಲಿ ಮತ್ತು ಇನ್ನೂ ಸುದ್ದಿಗಾಗಿ ಕಾಯುತ್ತಿರುವವರು ಭರವಸೆಯಿಂದ ಬಲವನ್ನು ಪಡೆಯಲಿ. ಎಲ್ಲಕ್ಕಿಂತ ಹೆಚ್ಚಾಗಿ, ಜೀವನದ ಅನಿಶ್ಚಿತತೆಗಳ ನಡುವೆಯೂ, ನಮ್ಮಲ್ಲಿ ಪ್ರತಿಯೊಬ್ಬರ ಮೇಲಿರುವ ಭಗವಂತನ ಪ್ರೀತಿಯೇ ಅಚಲವಾದ ಏಕೈಕ ಸತ್ಯವಾಗಿ ಉಳಿದಿದೆ ಎಂಬುದನ್ನು ನಮ್ಮಲ್ಲಿ ಪ್ರತಿಯೊಬ್ಬರೂ ನೆನಪಿಸಿಕೊಳ್ಳೋಣ.”
ವೈಎಸ್ಎಸ್ /ಎಸ್‌ಆರ್‌ಎಫ್ ಜಾಗತಿಕ ಪ್ರಾರ್ಥನಾ ಸಮೂಹ
ವೈಎಸ್ಎಸ್ ಮತ್ತು ಎಸ್‌ಆರ್‌ಎಫ್ ಆಶ್ರಮಗಳ ಸನ್ಯಾಸಿಗಳು ಮತ್ತು ಸನ್ಯಾಸಿನಿಯರು ಅಗತ್ಯದಲ್ಲಿರುವ ಎಲ್ಲರಿಗಾಗಿ ಆಳವಾದ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ. ನಿಮಗಾಗಿ ಅಥವಾ ಬೇರೆಯವರಿಗಾಗಿ ನಾವು ಪ್ರಾರ್ಥಿಸಬೇಕೆಂದು ನೀವು ಬಯಸಿದರೆ, ಕೆಳಗೆ ಹಂಚಿಕೊಳ್ಳಲಾಗಿರುವ ಕೊಂಡಿಯನ್ನು ಒತ್ತಿ:
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಪ್ರಕಟಿಸಿರುವ ಕೆಳಗಿನ ವೈಎಸ್ಎಸ್ / ಎಸ್‌ಆರ್‌ಎಫ್ ಜಾಗತಿಕ ಪ್ರಾರ್ಥನಾ ಸಮೂಹ ಕಿರುಹೊತ್ತಗೆಯನ್ನು ಓದಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.




















