ಸ್ವಾಮಿ ಚಿದಾನಂದ ಗಿರಿಯವರಿಂದ ಜನ್ಮಾಷ್ಟಮಿ ಸಂದೇಶ – 2026

14 ಆಗಸ್ಟ್, 2026

ಯಾರು ಎಲ್ಲೆಡೆಯೂ ನನ್ನನ್ನು ಕಾಣುತ್ತಾನೋ ಮತ್ತು ಎಲ್ಲವನ್ನೂ ನನ್ನಲ್ಲಿ ನೋಡುತ್ತಾನೋ ಅವನ ದೃಷ್ಟಿಯಿಂದ ನಾನು ಎಂದಿಗೂ ಮರೆಯಾಗುವುದಿಲ್ಲ ಮತ್ತು ನನ್ನ ದೃಷ್ಟಿಯಿಂದಲೂ ಅವನು ಎಂದಿಗೂ ಮರೆಯಾಗುವುದಿಲ್ಲ.

— ಗಾಡ್‌ ಟಾಕ್ಸ್‌ ವಿತ್‌ ಅರ್ಜುನ: ದಿ ಭಗವದ್ಗೀತ (VI:30)

ಪ್ರೀತಿಪಾತ್ರರೇ,

ಜನ್ಮಾಷ್ಟಮಿಯ ಈ ಉದ್ಧರಿಸುವ ಸಮಯದಲ್ಲಿ, ಭಗವಾನ್‌ ಶ್ರೀ ಕೃಷ್ಣನ ಜನ್ಮಾಚರಣೆಯ ಸಂದರ್ಭದಲ್ಲಿ ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಪ್ರೇಮಪೂರ್ವಕ ಶುಭಾಶಯಗಳು. ಸಹಸ್ರಾರು ವರ್ಷಗಳ ಹಿಂದೆ ಜನಿಸಿದ್ದರೂ ಸಹ, ದಿವ್ಯ ಪ್ರೇಮದ ಈ ಶ್ರೇಷ್ಠ ಮತ್ತು ಪ್ರೇಮದ ಅವತಾರ, ಈ ಭೂಮಿಯ ಮೇಲೆ ತನ್ನ ಸುಂದರ ಮನುಷ್ಯ ರೂಪದಲ್ಲಿ ನಡೆದಾಡಿದಾಗ ಅವನು ಎಷ್ಟು ನೈಜವಾಗಿದ್ದನೋ, ಹಾಗೇ ಇಂದೂ ಕೂಡ ಯಾರೆಲ್ಲರ ಹೃದಯವು ಅವನೊಡನೆ ಶ್ರುತಿಗೂಡಿದೆಯೋ ಅವರಿಗೆ ಅಷ್ಟೇ ನೈಜವಾಗಿದ್ದಾನೆ — ಯೋಗದ ರಾಜ ಮಾರ್ಗದ ನಿಷ್ಠಾವಂತ ಅನ್ವೇಷಕರನ್ನು ಆತ್ಮಸಾಕ್ಷಾತ್ಕಾರದ ಗುರಿಯೆಡೆಗೆ ಮಾರ್ಗದರ್ಶಿಸಲು ಮತ್ತು ಮೇಲಕ್ಕೇರಿಸಲು ಸದಾ ಸಿದ್ಧ. ನಮ್ಮ ಗುರುಗಳಾದ ಪರಮಹಂಸ ಯೋಗಾನಂದಜಿಯವರು ನೀಡಿರುವ ಕ್ರಿಯಾ ಯೋಗದ ಬೋಧನೆಗಳ ಮೂಲಕ, ಭಗವಾನ್‌ ಕೃಷ್ಣನು ಅರ್ಜುನನಿಗೆ ಬೋಧಿಸಿದ ಆತ್ಮ-ವಿಮೋಚನೆಯ ಅದೇ ಪವಿತ್ರ ಸೂತ್ರವನ್ನು ಪಡೆದಂತಹ ನಾವೆಲ್ಲರೂ ಎಷ್ಟು ಧನ್ಯರು.

ಭಗವದ್ಗೀತೆಯಲ್ಲಿ ಪ್ರೀತಿಪೂರ್ಣ ಕೃಷ್ಣ, ಭಗವಂತನು, ಯಾರು ಎಲ್ಲೆಡೆಯೂ ಅವನನ್ನು ಕಾಣುತ್ತಾನೋ ಮತ್ತು ಎಲ್ಲವನ್ನೂ ಅವನಲ್ಲಿ ನೋಡುತ್ತಾನೋ ಅವನು ಭಗವಂತನ ದೃಷ್ಟಿಯಿಂದ ಎಂದಿಗೂ ಮರೆಯಾಗುವುದಿಲ್ಲ ಎಂದು ನಮಗೆ ಆಶ್ವಾಸನೆ ನೀಡುತ್ತಾನೆ. ದಿನನಿತ್ಯ ಜೀವನದ ಕರ್ತವ್ಯಗಳು ಮತ್ತು ಓಟಗಳ ಮಧ್ಯದಲ್ಲಿ ಪ್ರತಿಬಾರಿಯೂ ನಾವು ಭಗವಂತನನ್ನು ನೆನೆಸಿಕೊಂಡಾಗ, ಚಡಪಡಿಕೆಯ ಬದಲು ಧ್ಯಾನವನ್ನು ಆರಿಸಿಕೊಂಡಾಗ ಮತ್ತು ಎಲ್ಲ ಕಾರ್ಯಗಳನ್ನೂ ನಮ್ಮ ದಿವ್ಯ ಪ್ರೇಮಪೂರ್ಣನೊಂದಿಗೆ ಮತ್ತು ಅವನಿಗಾಗಿ ಮಾಡಿದಾಗ — ಪ್ರತಿ ಬಾರಿಯೂ ಒಂದು ಕ್ಷುದ್ರ ಯೋಚನೆಯನ್ನು ಒಂದು ದಯಾಪೂರ್ಣ ಚಿಂತನೆಯಿಂದ ಬದಲಾಯಿಸಿದಾಗ, ಇತರರಿಗೆ ಕರುಣೆಯನ್ನು ತೋರಿಸಿದಾಗ ಅಥವಾ ನಕಾರಾತ್ಮಕ ಅಭ್ಯಾಸದ ಸೆಳೆತವನ್ನು ನಿರೋಧಿಸಿದಾಗ — ನಾವು ಅವನ ಸರ್ವವ್ಯಾಪಿತ್ವವನ್ನು ನಮ್ಮ ಪ್ರಜ್ಞೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ನಿಷ್ಕೃಷ್ಟವಾಗಿ ಸೆಳೆಯುತ್ತೇವೆ. ಕೆಲವೊಮ್ಮೆ, ಭಕ್ತರು, ಭಗವಂತನು ಪ್ರತಿಕ್ರಿಯಿಸುವ ಮುನ್ನ, ಮೊದಲು ಉನ್ನತ ಆಧ್ಯಾತ್ಮಿಕ ಉನ್ನತಿಯನ್ನು ಸಿದ್ಧಿಸಿಕೊಳ್ಳಬೇಕು ಅಥವಾ ಸಂಪೂರ್ಣ ಸ್ವಯಂ-ಪ್ರಭುತ್ವವನ್ನು ಸಾಧಿಸಿಕೊಳ್ಳಬೇಕು ಎಂದು ಭಾವಿಸಬಹುದು. ಆದರೆ, ಭಗವಂತನ ಸದಾ ಪ್ರೀತಿಸುವ, ಎಲ್ಲವನ್ನೂ ನೋಡುವ ಕಣ್ಣುಗಳು, ಪ್ರತಿಯೊಂದು ಶ್ರದ್ಧಾಪೂರ್ಣ ಸಮರ್ಪಣೆ ಮತ್ತು ಪ್ರತಿಯೊಂದು ಪ್ರಾಮಾಣಿಕ ಪ್ರಯತ್ನವನ್ನು ಅಪಾರ ಉದಾರತೆಯ ಪ್ರೀತಿಯಿಂದ ಗಮನಿಸುತ್ತಿರುತ್ತವೆ. ಗುರುದೇವ ಪರಮಹಂಸ ಯೋಗಾನಂದಜಿ ಭಗವದ್ಗೀತೆಯ ತಮ್ಮ ಅನುವಾದ ಮತ್ತು ವ್ಯಾಖ್ಯಾನವಾದ ಗಾಡ್‌ ಟಾಕ್ಸ್‌ ವಿತ್‌ ಅರ್ಜುನ ದಲ್ಲಿ ಸ್ಪಷ್ಟಪಡಿಸಿರುವ ಹಾಗೆ, “ಅತ್ಯಂತ ಕ್ಷಣಿಕವಾದ ಯೋಚನೆ ಮತ್ತು ಅತ್ಯಂತ ಕ್ಷುಲ್ಲಕವಾದ ಕ್ರಿಯೆಯನ್ನು ಕೂಡ ಭಗವಂತನ ಉಪಸ್ಥಿತಿಯೆಡೆಯ ಮೆಟ್ಟಿಲುಗಳನ್ನಾಗಿ ಉಪಯೋಗಿಸಬಹುದು.”

ಪ್ರೀತಿಪಾತ್ರರೇ, ನೀವು ನಿಮ್ಮ ದಿನನಿತ್ಯದ ಧ್ಯಾನಗಳನ್ನು ಮತ್ತು ಜೀವನಾನುಭವಗಳನ್ನು, ಕೃಷ್ಣನ ಭಕ್ತರು ತಮ್ಮ ಲೌಕಿಕ ಆಸಕ್ತಿಗಳನ್ನು ಕಿತ್ತೊಗೆದು ಅವನ ಅಲೌಕಿಕ ಕೊಳಲಿನ ಕರೆಯನ್ನು ಹಿಂಬಾಲಿಸಲು ಪ್ರಚೋದಿತವಾದ ಅದೇ ವಿಶ್ವಾಸ ಮತ್ತು ಆಧ್ಯಾತ್ಮಿಕ ಉತ್ಸಾಹದಿಂದ ಸಮೀಪಿಸುತ್ತಿರುವಾಗ, ನಿಮ್ಮ ಹೃದಯಗಳು ಮತ್ತು ಮನಸ್ಸುಗಳು ಅವನ ನಿತ್ಯ, ಸರ್ವತೃಪ್ತಿಕರ ಪ್ರೇಮದ — ನಿಮ್ಮನ್ನು ಎಂದೂ ಮರೆಯದ ಮತ್ತು ನಿಮ್ಮ ಪ್ರತಿಯೊಂದು ಆಧ್ಯಾತ್ಮಿಕ ಯಶಸ್ಸಿನಲ್ಲೂ ಆನಂದಪಡುವ ಪ್ರೇಮ — ಪ್ರೇಮಪೂರ್ಣ ಜೀವಂತ ಉಪಸ್ಥಿತಿಗೆ ಹಿಂದೆಂದಿಗಿಂತಲೂ ಹೆಚ್ಚು ಗ್ರಹಣಶೀಲವಾಗಲಿ.

ಶ್ರೀ ಕೃಷ್ಣನ ಹುಟ್ಟುಹಬ್ಬವನ್ನು ನಾವು ಸಂತೋಷದಿಂದ ಆಚರಿಸುತ್ತಿರುವಾಗ, ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನನ್ನ ಪ್ರಾರ್ಥನೆಯೇನೆಂದರೆ, ನೀವು ನಿಮ್ಮ ಪ್ರಜ್ಞೆಯ ತೊಟ್ಟಿಲಿನಲ್ಲಿ, ಅವನ ದಿವ್ಯ ಜೀವನ ಮತ್ತು ಬೋಧನೆಗಳು ಜಗತ್ತನ್ನು ಅನವರತ ಅನುಗ್ರಹಿಸುತ್ತಿರುವ ಆತ್ಮ-ಜಾಗೃತಿಯ ಬೆಳಕು ಮತ್ತು ಆಶೀರ್ವಾದಗಳನ್ನು ನೀವು ಪಡೆಯುವಂತಾಗಲಿ.

ಜೈ ಕೃಷ್ಣ! ಜೈ ಗುರು!
ಸ್ವಾಮಿ ಚಿದಾನಂದ ಗಿರಿ

ಇದನ್ನು ಹಂಚಿಕೊಳ್ಳಿ