ಲಾಸ್ ಏಂಜಲೀಸ್‌ನಲ್ಲಿರುವ ಸೆಲ್ಫ್-ರಿಯಲೈಸೇಷನ್ ಫೆಲೋಶಿಪ್ ಅಂತರರಾಷ್ಟ್ರೀಯ ಕೇಂದ್ರ ಕಛೇರಿಯಲ್ಲಿ, ಜೂನ್ 15, 1965 ರಂದು ಸತ್ಸಂಗದ ಸಮಯದಲ್ಲಿ ನೀಡಿದ ಒಂದು ಪ್ರವಚನದ ಆಯ್ದ ಭಾಗವಿದು. “ಕರೆಜ್ ಟು ಫೇಸ್ ಅವರ್ ಫಿಯರ್ಸ್” ಎಂಬ ಶೀರ್ಷಿಕೆಯ ಈ ಪ್ರವಚನವು 2020 ರಲ್ಲಿ ಯೋಗದ ಸತ್ಸಂಗ ಪತ್ರಿಕೆಯಲ್ಲಿ ಪ್ರಕಟವಾಗಿತ್ತು ಮತ್ತು ಶ್ರೀ ದಯಾ ಮಾತಾ ಅವರ ಪ್ರವಚನಗಳ ಮೂರನೇ ಸಂಗ್ರಹವಾದ, ಮುಂಬರುವ ‘ಜರ್ನಿ ವಿತ್ ಪರಮಹಂಸ ಯೋಗಾನಂದ’ ಪುಸ್ತಕದಲ್ಲಿ ಒಂದು ಅಧ್ಯಾಯವಾಗಿ ಪ್ರಕಟಗೊಳ್ಳಲಿದೆ. ಶ್ರೀ ದಯಾ ಮಾತಾ ಅವರು 1955 ರಿಂದ 2010 ರಲ್ಲಿ ದೇಹತ್ಯಾಗ ಮಾಡುವವರೆಗೂ ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಸೇಷನ್ ಫೆಲೋಶಿಪ್‌ನ ಅಧ್ಯಕ್ಷರಾಗಿ ಮತ್ತು ಸಂಘಮಾತೆಯಾಗಿ ಸೇವೆ ಸಲ್ಲಿಸಿದರು.
ಪ್ರತಿಯೊಬ್ಬ ಮಾನವನೂ ಧೈರ್ಯವೆಂಬ ಗುಣವನ್ನು ರೂಢಿಸಿಕೊಳ್ಳಬೇಕು. ಧೈರ್ಯವೆಂದರೆ ಕಡ್ಡಾಯವಾಗಿ ಭಯವಿಲ್ಲದಿರುವುದಲ್ಲ; ಒಬ್ಬ ವ್ಯಕ್ತಿಯು ತೀವ್ರ ಭಯವನ್ನು ಅನುಭವಿಸಿಯೂ ಧೈರ್ಯಶಾಲಿಯಾಗಿರಬಹುದು. ಧೀರ ವ್ಯಕ್ತಿ ಎಂದರೆ ತನ್ನ ಭಯಗಳಿಗೆ ಶರಣಾಗದೆ, ಅವುಗಳನ್ನು ಎದುರಿಸಲು ಮತ್ತು ಜಯಿಸಲು ಮನಸ್ಸು ಮಾಡುವವನು.
ನಾವು ಏಕೆಂದು ತಿಳಿಯದೆಯೇ ಯಾವುದೋ ಒಂದಕ್ಕೆ ಹೆದರಿರಬಹುದು, ಬಹುಶಃ ಈ ಜೀವನದಲ್ಲಿ ಅಥವಾ ಪೂರ್ವ ಜನ್ಮದಲ್ಲಿ ಸಂಭವಿಸಿದ ಮರೆತುಹೋದ ಆಘಾತಕಾರಿ ಅನುಭವದಿಂದಾಗಿರಬಹುದು. ಆದರೆ, ನಮ್ಮ ಅಭದ್ರತೆಗಳನ್ನು ನಾವು ವಸ್ತುನಿಷ್ಠವಾಗಿ ನೋಡಿದರೆ, ಅವು ಸಾಮಾನ್ಯವಾಗಿ ಆಧಾರರಹಿತವಾಗಿವೆ ಎಂದು ಕಂಡುಕೊಳ್ಳುತ್ತೇವೆ. “ನಾವು ಭಯಪಡಬೇಕಾದ ಏಕೈಕ ವಿಷಯವೆಂದರೆ ಭಯವಷ್ಟೇ.”* ಆ ಹೇಳಿಕೆಯಲ್ಲಿ ಅಪಾರ ಸತ್ಯವಿದೆ. ನಮ್ಮ ಕ್ಷೇಮದ ಭಾವನೆಗೆ ಪ್ರಮುಖ ಬೆದರಿಕೆಗಳು ನಾವು ಎದುರಿಸುವ ಬಾಹ್ಯ ಪರಿಸ್ಥಿತಿಗಳಲ್ಲಿ ಇರುವುದಿಲ್ಲ, ಬದಲಿಗೆ ಆತ್ಮಕ್ಕೆ ಸಹಜವಾಗಿರುವ ಶಕ್ತಿ ಮತ್ತು ನಂಬಿಕೆಯೊಂದಿಗೆ ಆ ಪರಿಸ್ಥಿತಿಗಳನ್ನು ಎದುರಿಸಲು ನಾವು ಕಲಿತಿಲ್ಲ ಎಂಬ ಸತ್ಯದಲ್ಲಿವೆ.
ಬಾಲ್ಯದಲ್ಲಿ, ಕತ್ತಲೆ ಅಂದರೆ ನನಗೆ ತೀವ್ರ ಭಯ ಹುಟ್ಟಿಸುವಂತಹ ಒಂದು ಅನುಭವವಾಯಿತು. ನಾನು ಸುಮಾರು 8 ಅಥವಾ 9 ವರ್ಷದವಳಾಗಿದ್ದೆ. ಒಂದು ರಾತ್ರಿ ನನ್ನ ತಾಯಿ ನನ್ನ ಪುಟ್ಟ ತಮ್ಮನನ್ನು ಸ್ವಲ್ಪ ಸಮಯ ಹಿಡಿದುಕೊಳ್ಳಲು ಹೇಳಿದ್ದರು, ಮತ್ತು ನಾನು ಕಿಟಕಿಯ ಬಳಿ ಕುಳಿತುಕೊಂಡು, ಅವನನ್ನು ನಿಧಾನವಾಗಿ ತೂಗುತ್ತಿದ್ದೆ. ಆಗತಾನೇ ನಾನು ಆಲಿ ಬಾಬಾ ಮತ್ತು 40 ಕಳ್ಳರ ಕಥೆಯನ್ನು ಓದಿದ್ದೆ, ಮತ್ತು ನನ್ನ ಸೂಕ್ಷ್ಮ ಮನಸ್ಸು ಕಳ್ಳರು ತಮ್ಮ ಬಲಿಪಶುಗಳಿಗೆ ಏನು ಮಾಡಿದ್ದರು ಎಂಬುದರ ಘೋರ ಚಿತ್ರಗಳಿಂದ ತುಂಬಿತ್ತು. ನೆರೆಹೊರೆಯ ಕೆಲವು ಹುಡುಗರು ಒಂದು ತಮಾಷೆ ಮಾಡಲು ನಿರ್ಧರಿಸಿದರು. ಅವರು ಕಿಟಕಿಯ ಹೊರಗೆ ಸದ್ದಿಲ್ಲದೆ ನುಸುಳಿ ಬಂದು ಇದ್ದಕ್ಕಿದ್ದಂತೆ ಭಯಾನಕವಾದ ಹಲವಾರು ಚೀತ್ಕಾರಗಳನ್ನು ಹೊರಡಿಸಿದರು. ನಾನು ಕುರ್ಚಿಯಿಂದ ಎಗರಿಬಿದ್ದೆ, ಸಂಪೂರ್ಣವಾಗಿ ಭಯಭೀತಳಾಗಿದ್ದೆ.
ಅದರ ನಂತರ ಬಹಳ ಕಾಲ ನಾನು, ಕತ್ತಲಲ್ಲಿ ಏನಾದರೂ ಅಡಗಿರಬಹುದೆಂದು ಅಪ್ರಜ್ಞಾಪೂರ್ವಕವಾಗಿ ಹೆದರುತ್ತಿದ್ದೆ. ನನಗೆ ಯಾವುದಕ್ಕೂ ಹೆದರುವುದು ಇಷ್ಟವಿರಲಿಲ್ಲ, ಆದ್ದರಿಂದ ಒಂದು ದಿನ ನಾನು ನನ್ನನ್ನೇ ಕೇಳಿಕೊಂಡೆ, “ನನಗೆ ಏನಾಗಿದೆ? ನಾನು ಕತ್ತಲೆಗೆ ಏಕೆ ಹೆದರುತ್ತೇನೆ?” ನಾನು ಸಾಧ್ಯವಾದಷ್ಟು ಎಲ್ಲಾ ಕತ್ತಲೆ ಕೋಣೆಗಳ ಮೂಲಕ ಉದ್ದೇಶಪೂರ್ವಕವಾಗಿ ನಡೆಯುವ ಮೂಲಕ ನನ್ನ ಭಯವನ್ನು ನಿವಾರಿಸಲು ನಿರ್ಧರಿಸಿದೆ. ಮತ್ತು ನಾನು ಹಾಗೆಯೇ ಮಾಡಿದೆ.
“ಭಯವನ್ನು ಎದುರಿಸಿ ನೋಡಿ, ಅದು ನಿಮ್ಮನ್ನು ಕಾಡುವುದನ್ನು ನಿಲ್ಲಿಸುತ್ತದೆ,” ಎಂದು ಸ್ವಾಮಿ ಶ್ರೀ ಯುಕ್ತೇಶ್ವರರು ಹೇಳಿದರು. ನಿಮ್ಮ ಭಯಗಳಿಂದ ಓಡಿಹೋಗಲು ಪ್ರಯತ್ನಿಸುವುದು ನಿಷ್ಪ್ರಯೋಜಕ, ಏಕೆಂದರೆ ನೀವು ಅವುಗಳನ್ನು ತಿರುಗಿ ಎದುರಿಸುವವರೆಗೂ ಅವು ನಿಮ್ಮನ್ನು ಬೆನ್ನಟ್ಟುತ್ತವೆ. ನೀವು ಇದನ್ನು ಮೊದಲ ಬಾರಿಗೆ ಪ್ರಯತ್ನಿಸಿದಾಗ ಅದು ಬಹಳ ಕಷ್ಟವೆನಿಸಬಹುದು, ಆದರೆ ಹಾಗೆಯೇ ಮಾಡಿ. ಎರಡನೇ ಬಾರಿ ಸುಲಭವಾಗುತ್ತದೆ, ಮತ್ತು ಬೇಗನೆ ನೀವು ಆ ಭಯವನ್ನು ಜಯಿಸಿರುತ್ತೀರಿ. ಧೈರ್ಯವನ್ನು ಅಭ್ಯಾಸ ಮಾಡುವುದೇ ಧೈರ್ಯವನ್ನು ಬೆಳೆಸಿಕೊಳ್ಳುವ ಮಾರ್ಗ.
ಅಡಿಟಿಪ್ಪಣಿ:
* ಫ್ರಾಂಕ್ಲಿನ್ ಡಿ. ರೂಸ್‌ವೆಲ್ಟ್.
ವೈಎಸ್ಎಸ್/ಎಸ್ಆರ್ ಎಫ್ ನ ಪ್ರೀತಿಯ ಮೂರನೇ ಅಧ್ಯಕ್ಷರು ಮತ್ತು ಸಂಘಮಾತೆಯಾಗಿದ್ದ ಶ್ರೀ ದಯಾ ಮಾತಾ ಅವರ ಸ್ಫೂರ್ತಿದಾಯಕ ಜೀವನದ ಬಗ್ಗೆ ತಿಳಿದುಕೊಳ್ಳಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ – ದೇವರು ಮತ್ತು ಅವರ ಗುರು ಪರಮಹಂಸ ಯೋಗಾನಂದರೆಡೆಗೆ ಪ್ರೀತಿ, ನಮ್ರತೆಯಿಂದೊಡಗೂಡಿದ ಸಮರ್ಪಿತ ಸೇವೆಯ ಜೀವನ.




















