ಈ ಕೆಳಗೆ ಕೊಟ್ಟಿರುವ ಲೇಖನವು, ನಿಮ್ಮೊಳಗಿನ ಆನಂದವನ್ನು ಕಂಡುಕೊಳ್ಳುವುದು: ದೈವ-ಕೇಂದ್ರಿತ ಜೀವನಕ್ಕಾಗಿ ವೈಯಕ್ತಿಕ ಸಲಹೆ ಎಂಬ ಪುಸ್ತಕದ “ಮಾರ್ಗದರ್ಶನದ ಆಯ್ದ ಬರಹಗಳು” ಎಂಬ ಅಧ್ಯಾಯದಿಂದ ಆಯ್ದ ಭಾಗವಾಗಿದೆ. ಇದು ಶ್ರೀ ದಯಾ ಮಾತಾ ಅವರು ನೀಡಿದ ಸತ್ಸಂಗಗಳು ಮತ್ತು ಅವರು ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್ ಸದಸ್ಯರಿಗೆ ಬರೆದ ಪತ್ರಗಳಿಂದ ಆಯ್ದ ಮಾರ್ಗದರ್ಶನ ಮತ್ತು ಸ್ಫೂರ್ತಿದಾಯಕ ಮಾತುಗಳನ್ನು ಒಳಗೊಂಡಿದೆ. ಶ್ರೀ ದಯಾ ಮಾತಾ ಅವರು ಪರಮಹಂಸ ಯೋಗಾನಂದರ ಆಪ್ತ ಶಿಷ್ಯರಲ್ಲಿ ಒಬ್ಬರಾಗಿದ್ದರು ಮತ್ತು 1955 ರಿಂದ 2010 ರಲ್ಲಿ ಅವರು ನಿಧನರಾಗುವವರೆಗೂ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್‌ನ ಮೂರನೇ ಅಧ್ಯಕ್ಷರು ಹಾಗೂ ಸಂಘಮಾತಾ ಆಗಿ ಸೇವೆ ಸಲ್ಲಿಸಿದ್ದರು.
ಗುರೂಜಿಗಳು ವರ್ಷಗಳಾದ್ಯಂತ ಭಕ್ತರಿಗೆ ಬರೆದ ಅನೇಕ ಪತ್ರಗಳಲ್ಲಿ, ಅವರು “ದಿವ್ಯ ಸ್ನೇಹದಲ್ಲಿ” ಎಂಬ ಮಾತುಗಳೊಂದಿಗೆ ಮುಕ್ತಾಯಗೊಳಿಸುತ್ತಿದ್ದರು; ಮತ್ತು ಸೆಲ್ಫ್-ರಿಯಲೈಸೇಷನ್ ಫೆಲೋಶಿಪ್‌ನಿಂದ ಅದರ ಸದಸ್ಯರಿಗೆ ಬರೆಯುವ ಪತ್ರಗಳಿಗೆ ರೂಢಿಗತ ಮುಕ್ತಾಯವಾಗಿ ಈ ನುಡಿಗಟ್ಟನ್ನು ಅವರು ಆಯ್ಕೆ ಮಾಡಿದರು.
ಅವರು ಆಗಾಗ್ಗೆ ನಮಗೆ ಹೇಳುತ್ತಿದ್ದರು, ಆತ್ಮಗಳ ನಡುವೆ ಇರಲು ಸಾಧ್ಯವಿರುವ ಅತ್ಯುನ್ನತ ಮತ್ತು ಅತಿ ಶುದ್ಧವಾದ ಸಂಬಂಧವೆಂದರೆ ಸ್ನೇಹ ಭಾವ. ಅದರಲ್ಲಿ ಯಾವುದೇ ಬಲಾತ್ಕಾರವಿರುವುದಿಲ್ಲ.
ಅವರು ಸಾಮಾನ್ಯ ಮಾನವ ಸ್ನೇಹದ ಬಗ್ಗೆ ಮಾತನಾಡುತ್ತಿರಲಿಲ್ಲ; ಅವರು ಅರ್ಥೈಸಿದ್ದು ಯಾವುದೇ ಕಟ್ಟಳೆಗಳಿಲ್ಲದ ಸ್ನೇಹವನ್ನು. ಅದು ಕ್ರಿಸ್ತನು ತನ್ನ ಶಿಷ್ಯರಿಗಾಗಿ ಹೊಂದಿದ್ದಂತಹ ಮತ್ತು ಅವರು ತಮ್ಮ ಗುರುಗಳಿಗಾಗಿ ಹಾಗೂ ಪರಸ್ಪರ ಹೊಂದಿದ್ದಂತಹ ಸ್ನೇಹ. ಇದು ವೈಯಕ್ತಿಕವಲ್ಲದ್ದಾದರೂ, ಅತ್ಯಂತ ಆಪ್ತವಾದ ಸಂಬಂಧವಾಗಿದೆ. ಇದು ಮುಕ್ತವಾದದ್ದು, ಅಂದರೆ, ಒಬ್ಬ ವ್ಯಕ್ತಿಯನ್ನು ಅವರ ಎಲ್ಲಾ ನ್ಯೂನತೆಗಳೊಂದಿಗೆ, ಅವರು ಹೇಗಿದ್ದಾರೋ ಹಾಗೆಯೇ, ಬೇಷರತ್ತಾಗಿ ಒಪ್ಪಿಕೊಳ್ಳುವಂತಹದ್ದು.
ಅಭಿಪ್ರಾಯ ಭೇದಗಳು ಉಂಟಾದಾಗಲೂ, ಸ್ನೇಹಿತನನ್ನು ತಪ್ಪಾಗಿ ನಿರ್ಣಯಿಸಬಾರದು; ಸ್ನೇಹ ಸಂಬಂಧವು ಮುರಿಯದೆ ಉಳಿದು, ಸಮಯ ಕಳೆದಂತೆ ಹೆಚ್ಚು ಮಾಧುರ್ಯವನ್ನು ಪಡೆಯುತ್ತದೆ. ಗುರುಗಳು ತಮ್ಮ ಆಪ್ತ ಪ್ರಿಯ ಭಕ್ತರಿಗೆ ಹೀಗೆ ಹೇಳುತ್ತಿದ್ದರು: “ಸ್ನೇಹವು ದ್ರಾಕ್ಷಾರಸದಂತೆ; ಅದು ಕಾಲ ಕಳೆದಂತೆ ಮಧುರವಾಗುತ್ತಾ ಹೋಗುತ್ತದೆ.”
ಜಾಗತಿಕ ಒಡನಾಟ: ಮಾನವಕುಲಕ್ಕೆ ಸಂಜೀವಿನಿ
ಸಾರ್ವತ್ರಿಕ ಮೈತ್ರಿ ಹಾಗೂ ಜಾಗತಿಕ ಒಡನಾಟ ಎಂಬ ಆದರ್ಶದ ಕುರಿತು ಗುರೂಜಿಗಳ ಕೆಲವು ವಿಚಾರಗಳನ್ನು ನಾನು ಓದಲು ಇಚ್ಛಿಸುತ್ತೇನೆ:
“‘ಜಾಗತಿಕ ಒಡನಾಟ’ ಎಂಬುದು ಅತಿ ಸರಳವಾದ ಪದಗುಚ್ಛವೆಂದು ತೋರುತ್ತದೆ, ಆದರೆ ಈ ಎರಡು ಪದಗಳಲ್ಲಿ ಪ್ರಪಂಚದ ಭೌತಿಕ, ಮಾನಸಿಕ, ನೈತಿಕ ಮತ್ತು ಆಧ್ಯಾತ್ಮಿಕ ಶಾಂತಿಯನ್ನು ಕದಡುತ್ತಿರುವ ಎಲ್ಲಾ ವೈಯಕ್ತಿಕ, ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳಿಗೆ ಸರ್ವರೋಗನಿವಾರಕವೆಂದೆನಿಸಿದೆ….ಈ ಲೋಕವು ನಿನ್ನದೂ ಅಲ್ಲ, ನನ್ನದೂ ಅಲ್ಲ. ನಾವಿಲ್ಲಿ ಕೇವಲ ಅಲ್ಪಾವಧಿಗೆ ಬಂದ ಪ್ರಯಾಣಿಕರು. ಈ ಲೋಕ ಭಗವಂತನದ್ದು. ಆತನೇ ನಮ್ಮ ಅಧ್ಯಕ್ಷ. ಆತನ ನೇತೃತ್ವದಲ್ಲಿ, ಪ್ರತಿಯೊಂದು ರಾಷ್ಟ್ರವು ಸಹೋದರ ಬಾಂಧವ್ಯದಿಂದ ಬಾಳುವ ಒಂದು ಸಂಘಟಿತ ಜಗತ್ತನ್ನು ನಾವು ಸ್ಥಾಪಿಸಬೇಕು….ದೇವರನ್ನು ಅರಿಯುವುದೇ ಮಾರ್ಗ; ಮತ್ತು ಆತನನ್ನು ಅರಿಯುವ ಮಾರ್ಗವೆಂದರೆ ಆತನನ್ನು ಕುರಿತು ಧ್ಯಾನಿಸುವುದೇ ಆಗಿದೆ….ಕೇವಲ ಜಾಗತಿಕ ಒಡನಾಟವು ಮಾತ್ರ ದ್ವೇಷವನ್ನು ತೊಡೆದುಹಾಕಿ ಯುದ್ಧಗಳನ್ನು ತಡೆಯಬಲ್ಲದು. ಕೇವಲ ವಿಶ್ವ ಬಾಂಧವ್ಯ ಮಾತ್ರ ಸಮಸ್ತ ಮಾನವಕುಲಕ್ಕೆ ಸುಸ್ಥಿರ ಸಮೃದ್ಧಿಯನ್ನು ತರಬಲ್ಲದು. ಆದುದರಿಂದ ನಾನು ನಿಮಗೆ ಹೇಳುತ್ತೇನೆ, ದೇವರೊಂದಿಗೆ ಸಂವಾದಿಸುವ ಮೂಲಕ ಆ ಬಾಂಧವ್ಯವನ್ನು ನಿಮ್ಮ ಹೃದಯಗಳಲ್ಲಿ ಹರಿಸಿ. ದೇವರ ಪಿತೃತ್ವವನ್ನು ಅನುಭವಿಸಿ, ಮತ್ತು ಪ್ರತಿಯೊಬ್ಬ ಮಾನವನೂ ನಿಮಗೆ ಸೇರಿದವನು ಎಂದು ಭಾವಿಸಿ. ನಿಮ್ಮ ಹೃದಯದಲ್ಲಿ ದೇವರ ಅನುಭವವಾಗುತ್ತಿದ್ದಂತೆಯೇ, ಹಿಂದೆ ಯಾವುದೇ ರಾಜನಾಗಲಿ ಅಥವಾ ರಾಜಕಾರಣಿಯಾಗಲಿ ಮಾಡಿರದಂತಹ ಕೊಡುಗೆಯನ್ನು ನೀವು ವಿಶ್ವ ನಾಗರಿಕತೆಗೆ ನೀಡುವಿರಿ. ನಿಮ್ಮ ಸಂಪರ್ಕಕ್ಕೆ ಬರುವ ಎಲ್ಲರನ್ನೂ ಪ್ರೀತಿಸಿ. ದೃಢವಾಗಿ ನಿಮಗೆ ಹೀಗೆ ಹೇಳಲು ಸಾಧ್ಯವಾಗಲಿ, ‘ಅವನು ನನ್ನ ಸಹೋದರ, ಏಕೆಂದರೆ ನನ್ನಲ್ಲಿರುವ ದೇವರು ಅವನಲ್ಲೂ ಇದ್ದಾನೆ.’”
ನಮ್ಮ ಜಗತ್ತಿಗೆ ಇಂದು ಅತಿ ಅವಶ್ಯಕವಾಗಿರುವುದು ಏನೆಂದರೆ, ಹೆಚ್ಚು ಹೆಚ್ಚು ವ್ಯಕ್ತಿಗಳು ತಮ್ಮ ಸೀಮಿತ ಅಹಂನಿಂದ ಹೊರಬಂದು, ಎಲ್ಲರಿಗೂ ದೈವಿಕ ಪ್ರೀತಿ ಮತ್ತು ಸ್ನೇಹವನ್ನು ನೀಡುವುದರ ಮೂಲಕ ತಮ್ಮ ಪ್ರಜ್ಞೆಯನ್ನು ವಿಸ್ತರಿಸಲು ಪ್ರಯತ್ನಿಸುವುದು.
ಎಲ್ಲರಿಗೂ ಪ್ರೀತಿ ಮತ್ತು ಸ್ನೇಹವನ್ನು ನೀಡುವಂತಾಗಲಿ
ಗುರುಗಳು ಮಹಾತ್ಮ ಗಾಂಧೀಜಿಯವರ ಬಗ್ಗೆ ಹೇಳಿದುದೇನೆಂದರೆ, ಅವರು ಕೇವಲ ಭಾರತಕ್ಕೆ ಮಾತ್ರ ಸೇರಿದವರಾಗಿರಲಿಲ್ಲ. ಗುರುಗಳು ಭೇಟಿಯಾಗಿ ಕೆಲವು ದಿನಗಳ ಕಾಲ ಜೊತೆಗಿದ್ದ ಆ ಸರಳ ವ್ಯಕ್ತಿ, ಅತೀವ ಸರಳವಾಗಿ ಬದುಕಿದ, ಕೇವಲ ಲಂಗೋಟಿ ಧರಿಸುತ್ತಿದ್ದ ಒಬ್ಬ ವಿನಮ್ರ ಆತ್ಮ. ಅವರು ಈ ಆಧುನಿಕ ಯುಗದಲ್ಲಿ ಕಂಡುಬಂದ ಅತ್ಯಂತ ನಿಜವಾದ ಕ್ರೈಸ್ತರಾಗಿದ್ದರು, ಆದರೂ ಭಾರತದ ಒಬ್ಬ ಹಿಂದೂ ಆಗಿದ್ದರು. ಅವರು ಹೀಗೆ ಹೇಳಿದರು: “ಯಾರು ನನ್ನ ಭಾರತವನ್ನು ಪ್ರೀತಿಸುತ್ತಾರೋ, ಅವರು ಭಾರತೀಯರು.” ಈ ಮಾತುಗಳಲ್ಲಿ, ಅವರು ಯಾರನ್ನೂ ತಮ್ಮ ಪ್ರೀತಿಯಿಂದ ಹೊರಗಿಡಲಿಲ್ಲ. ದೇವರ ಮೇಲಿನ ತಮ್ಮ ಪ್ರೀತಿಯಲ್ಲಿ ಮತ್ತು ತಮ್ಮ ಜನರ ಮೇಲಿನ ಪ್ರೀತಿಯಲ್ಲಿ, ಅವರು ಸಮಸ್ತ ಮಾನವಕುಲವನ್ನು ಸೇರಿಸಿಕೊಂಡರು. ಅವರು ಮಾನವ ಚೇತನದ ಸಾರ್ವತ್ರಿಕತೆಯನ್ನು ಗುರುತಿಸಿ ನಿದರ್ಶಿಸಿದರು.
ಗುರುದೇವರು ತಮ್ಮ ಜೀವನದಲ್ಲಿಯೂ ವ್ಯಕ್ತಪಡಿಸಿದ್ದು ಇದೇ ಭಾವ. ಅವರಿಗೆ ಯಾರೂ ಅನ್ಯರಾಗಿರಲಿಲ್ಲ. ಅವರು ಎಲ್ಲರನ್ನೂ ಪ್ರೀತಿಯಿಂದ, ಸರಳವಾದ, ಮಕ್ಕಳಂತಹ ನಂಬಿಕೆ ಮತ್ತು ಸ್ನೇಹದಿಂದ ಸ್ವಾಗತಿಸಿದರು. ತಮ್ಮನ್ನು ಅರ್ಥಮಾಡಿಕೊಳ್ಳದವರಿಗೂ ಅವರು ತಿಳುವಳಿಕೆಯನ್ನು ನೀಡಿದರು. ಅವರು ಮೊದಲು ದೇವರನ್ನು ಪ್ರಾಮಾಣಿಕವಾಗಿ ಅರಸುವ ಆದರ್ಶವನ್ನು ಪಾಲಿಸಿದರು. ನಾವು ಆತನಿಗೆ ಸೇರಿದವರೆಂದೂ, ಮತ್ತು ನಮ್ಮ ಹೃದಯದ ಗುಪ್ತ ಕರೆಗೆ ಆತನು ಸ್ಪಂದಿಸುತ್ತಾನೆ ಎಂದು ಯಾವುದೇ ಸಂದೇಹವಿಲ್ಲದೆ ಸಂಪೂರ್ಣ ತೃಪ್ತಿ ಹೊಂದಿದ ನಂತರವೇ, ಅವರು ದೇವರಲ್ಲಿ ಕಂಡುಕೊಂಡ ಅದೇ ದೈವಿಕ ಪ್ರೀತಿ ಮತ್ತು ಸ್ನೇಹವನ್ನು ತಮ್ಮ ಹಾದಿಗೆ ಬಂದ ಪ್ರತಿಯೊಬ್ಬರಿಗೂ ನೀಡಿದರು.
ಪರಮಹಂಸ ಯೋಗಾನಂದರ ನಿಜವಾದ ಸ್ನೇಹದ ಕುರಿತಾದ ಕಾಲಾತೀತ ಜ್ಞಾನವನ್ನು ಹಾಗೂ ಅದು ನಮ್ಮ ಜೀವನ ಮತ್ತು ನಮ್ಮ ಜಗತ್ತನ್ನು ಹೇಗೆ ಪರಿವರ್ತಿಸಬಲ್ಲದು ಎಂಬುದನ್ನು ಪ್ರಸ್ತುತಪಡಿಸುವ, ದಿ ಸ್ಪಿರಿಚುವಲ್ ಎಕ್ಸ್‌ಪ್ರೆಷನ್ ಆಫ್ ಫ್ರೆಂಡ್‌ಶಿಪ್ ಎಂಬ, ಶೀಘ್ರದಲ್ಲೇ ಪ್ರಕಟವಾಗಲಿರುವ ಪುಸ್ತಕದ ಬಗ್ಗೆ ತಿಳಿದುಕೊಳ್ಳಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.


















